ನೆನಪಿನ ಚಿತ್ರಕಲಾ ಶಾಲೆ-ಭಾಗ ೧: ತೆಂಗಿನಮರದಲಿ ಇಟ್ಟಿಗೆಹಣ್ಣು

ನೆನಪಿನ ಚಿತ್ರಕಲಾ ಶಾಲೆ-ಭಾಗ ೧: ತೆಂಗಿನಮರದಲಿ ಇಟ್ಟಿಗೆಹಣ್ಣು

ನನಗೆ ಸುಮ್ಮನೆ ಬರೆಯುತ್ತಲೇ ಇರಬೇಕೆಂಬ ಇರಾದೆಯಿದೆ
ಏನನ್ನು?
ಅದೇ, ಸುಮ್ಮನೆ ಬರೆಯುತ್ತಾ ಹೋಗುವುದು
ಯಾವುದರ ಬಗ್ಗೆ ಮಾರಾಯ?
ಮತ್ತೆ ನೋಡು. ಸುಮ್ಮನೆ ಬರೆಯುವುದೆಂದರೆ ನಡೆಯುತ್ತ ದಾರಿ ಮಾಡುವುದು. ಇರುವ ದಾರಿಯಲ್ಲಿ ನಡೆಯುವುದಲ್ಲ. ಯಾವುದೋ ಒಂದು ವಿಷಯವನ್ನು ’ಆಧರಿಸಿ’ ಬರೆವುದೆಂದರೆ ಬರಹವನ್ನು ವಿಷಯವೊಂದರ ದಾಸ್ಯಕ್ಕೆ ದೂಡಿದಂತೆ, ಅಲ್ಲವೆ?
 
ಎಂದು ಆ ಇಬ್ಬರೂ ಚಿತ್ರಕಲಾ ಪರಿಷತ್ತಿನ ಆವರಣದ ಗಣೇಶನ ದೇವಾಲಯದ ಸಮೀಪ ಕುಳಿತು ಮಾತನಾಡುತ್ತಿದ್ದರು. ಪ್ರಶ್ನೆ ಕೇಳುತ್ತಿದ್ದಾತ ಅದಾಗಲೇ ಇಂಗ್ಲೀಷ್ ಪತ್ರಿಕೆಗಳಲ್ಲಿ ಕಲಾವಿಮರ್ಶೆ ಎಂಬ ಹೆಸರಿನಲ್ಲಿ ಕಲಾಲೇಖನಗಳನ್ನು ಬರೆಯುತ್ತಿದ್ದ ಬಿಗ್ ಡ್ಯಾಡಿ. ೧೯೮೬ರ ಸುಮಾರಿನ ಮಾತಿದು. ಬಿಗ್ ಡ್ಯಾಡಿ ಈಗಲೂ ಆಗ ಇದ್ದ ಹಾಗೆಯೇ ಇದ್ದಾನೆ. ಸ್ವಯಂ-ಪ್ರೀತಿಯ ಪರಿಣಾಮವೋ ಏನೋ, ಆ ಪ್ರೀತಿಯನ್ನು ಮೈಮೇಲೆಲ್ಲ ನಿರಂತರವಾಗಿ ಹೊದ್ದವನಂದ ಗುಂಡಗಿದ್ದಾನೆ. ’ನೀನು ಏನೂ ಬದಲಾಗಿಲ್ಲವಲ್ಲೋ ’ಬೀಡಾ’ (ಬಿಗ್ ಡ್ಯಾಡಿ ಪದವನ್ನು ಕಲಾವಿದ್ಯಾರ್ಥಿಗಳು ಖನ್ನಡೀಕರಿಸಿದ ರೀತಿಯಿದು)!’ ಎಂದದಾರೋ ಇತ್ತೀಚೆಗೆ ಆಶ್ಚರ್ಯ ವ್ಯಕ್ತಿಪಡಿಸಿದ್ದರು ಆತನನ್ನು ಕಂಡು. ’ಎಲ್ಲರೂ ಹಾಗೇ ಹೇಳ್ತಾರೆ. ನಾನೇನೂ ದಲಾಗೇ ಇಲ್ಲವೆಂದು’ ಎಂದ ಡುಮ್ಮ ಬೀಡಾನ ಮುಖ ಇನ್ನೂ ಡುಮ್ಮಕ್ಕೆ ಹರಡಿಕೊಂಡಿತು. ’ಅದೇ ನಾನು ಹೇಳಿದ್ದು. ಇಪ್ಪತ್ತಾರು ವರ್ಷದ ಹಿಂದೆ ಮೊದಲ ಬಾರಿ ನಿನ್ನನ್ನು ನೋಡಿದಾಗಲೂ ಯುವಕನಾಗಿದ್ದ ನೀನು ಒಬ್ಬ ಅಂಕಲ್‌ನಂತೆಯೇ ಕಂಡುಬರುತ್ತಿದ್ದೆ. ಇಂದೂ ಹಾಗೇ ಇದ್ದೀಯ’ ಎಂದು ತಿದ್ದುಪಡಿ ಮಾಡಿದ್ದ iಮಾ (ಮಹಾನ್ ಮಾಂತ್ರಿಕ)!
 
ಮಮಾ ಮತ್ತು ಬೀಡಾ ೧೯೮೬ರಲ್ಲಿ ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಕ್ರಮಬದ್ಧವಾಗಿ ಎರಡನೇ ಹಾಗೂ ಒಂದನೇ ವರ್ಷದ ಫೌಂಡೇಷನ್ ವಿದ್ಯಾರ್ಥಿಗಳಾಗಿದ್ದರು ೧೯೮೬ರಲ್ಲಿ. ಬೀಡಾ ಮಧ್ಯಾಹ್ನ ಹೊರಡುತ್ತಿದ್ದ ಟ್ಯಾಬ್ಲಾಯ್ಡ್ ಒಂದಕ್ಕೆ ಕಲಾಪ್ರದರ್ಶನಗಳ ಬಗ್ಗೆ ಬರೆಯುತ್ತಿದ್ದ. ವಿದ್ಯಾರ್ಥಿಯಾಗಿದ್ದಾಗಲೇ ಕಲಾವಿಮರ್ಶಕನೆನಿಸಿಕೊಂಡಿದ್ದ ಈತ ಕ್ರಮೇಣ ಅಲ್ಲಿ ಕಲಾಇತಿಹಾಸದ ಉಪಾಧ್ಯಾಯನಾಗಿ ಸೇರಿ ಒಂದೈದಾರು ವರ್ಷದ ಬಳಿಕ ’ರೀಡರ್’ ಹುದ್ದೆಗೆ ತೇರ್ಗಡೆಯಾಗಿದ್ದ. ಅಷ್ಟರಲ್ಲಿ ಬರವಣಿಗೆಯನ್ನು ಕಡಿಮೆ ಮಾಡಿಬಿಟ್ಟಿದ್ದ. ’ಹೋಗಲಿ ಬಿಡೋ ರೈಟರ್ ಆಗಿದ್ದಾತ ಈಗ ರೀಡರ್ ಆಗಿದ್ದೀಯ’ ಎಂದು iಮಾ ಮತ್ತೆ ಬೀಡಾನ ಬೃಹತ್ ದೇಹದ ಕಾಲು ಎಳೆದಿದ್ದ. ಅಷ್ಟರಲ್ಲಾಗಲೆ ಬೀಡಾ ವಿದ್ಯಾರ್ಥಿಗಳಲ್ಲೇ ಸ್ಟಾರ್ ಆಗಿದ್ದಾತ. ಒಂದು ಸಣ್ಣ ಮೋಫಾದ ಮೇಲೆ ಬರುತ್ತಿದ್ದ ಆತ ಇಲಿಯ ಮೇಲೆ ಬರುವ ಗಣಪನಂತೆ ಕಾಣುತ್ತಿದ್ದ ದೂರದಿಂದ ನೋಡಿದವರಿಗೆ. ಹತ್ತಿರದಿಂದ ನೋಡಿದವರಿಗೂ ಹಾಗೆಯೇ ಗೋಚರವಾಗುತ್ತಿದ್ದ. ಆದ್ದರಿಂದ ಅಲ್ಲದಿದ್ದರೂ ಆತ ಹತ್ತಿರವಾದಾಗ ಎಲ್ಲರೂ ಆತನಿಗೆ ಕೈಮುಗಿಯುತ್ತಿದ್ದರು, ಅದಾಗಲೇ ಆತ ಸ್ಟಾರ್ ವಿಮರ್ಶಕನೆಂದು. ಆತ ಬರೆಯುತ್ತಿದ್ದ ಪತ್ರಿಕೆಯವರು ಸಿನೆಮವಿಮರ್ಶೆಗೆ ಸ್ಟಾರ್ ರೇಟಿಂಗ್ ಮಾಡುತ್ತಿದ್ದಂತೆ, ಆತನ ವಿಮರ್ಶೆಗೂ ನೀಡುತ್ತಿದ್ದುದ್ದರಿಂದ ಆತನನ್ನು ಎಲ್ಲರೂ ’ಸ್ಟಾರ್ ವಿಮರ್ಶಕ’ ಎಂದೇ ಕರೆಯುತ್ತಿದ್ದರು. ಲೈಸೆನ್ಸ್‌ನ ಅವಶ್ಯಕತೆ ಇಲ್ಲದ, ಮುಂದಿನಿಂದ ನೋಡಲು ಸುವೇಗದಂತೆಯೂ, ಹಿಂದಿನಿಂದ ನೋಡಲು ಲೂನಾದಂತೆಯೂ ಕಾಣುತ್ತ, ಪಕ್ಕದಿಂದ ನೋಡಿದಾಗ ಮಕ್ಕಳ ಸೈಕಲ್ಲಿನಂತೆ ಕಾಣುತ್ತಿತ್ತು ಮೋಫಾ. ಆಗಿನ್ನೂ ಸೈಕಲ್ಲಿಗೆ ಡೈನಮೋ ಇಲ್ಲದಿದ್ದಲ್ಲಿ ಬೆಳಗಿನ ಹೊತ್ತಿನಲ್ಲೂ ಪೋಲೀಸರು ಅದನ್ನು ನಿಲ್ಲಿಸಿ, ಅದರ ಮೇಲಿನ ಸವಾರನಿಗೆ ಹತ್ತು ರೂಪಾಯಿ ದಂಡವನ್ನು ಹಾಕುತ್ತಿದ್ದ ಕಾಲದಲ್ಲಿ ನಾವೆಲ್ಲ ಸೈಕಲ್ ಸವಾರರಾಗಿದ್ದರೆ, ಬೀಡಾ ಮಾತ್ರ ಅ’ಮೋಘ’ವಾಗಿ ಕಾಣುತ್ತಿದ್ದ.     
*
ನಮ್ಮಪ್ಪ ರೈತ ಆಗಿದ್ದರು. ನಾನು ರೈಟರ್ ಆಗಬೇಕು ಎಂದುಕೊಂಡಿದ್ದೇನೆ ಎಂದು ಬೀಡಾ ಜೊತೆ ಈಗ ಮಾತಿಗಿಳಿದಿದ್ದವನ ಹೆಸರು ಅನೇಖ. 
ನೀನೊಳ್ಳೆ ವಿಚಿತ್ರ ಕಣಯ್ಯ. ಮುಂದೆ ಓದೋದಕ್ಕೆ ಹಿಂದೇಟು ಹಾಕಿದವರೆಲ್ಲ ಬಂದು ತುಂಬಿರುವ ಚಿ.ಕ.ಪದಲ್ಲಿ (ಚಿತ್ರಕಲಾ ಪರಿಷತ್ತು) ನೀನು ನೋಡಿದ್ರೆ ಓದಿಬರೆಯಬೇಕು ಅನ್ತೀಯಲ್ಲ. ಇದೊಂತರ ಸಾಕ್ರಿಲಿಜ್ ಎಂದು ಕಾಲೆಳೆದಿದ್ದ ಬೀಡಾ. ಸಾಕ್ರಿಲಿಜ್ ಅಂದರೆ ಸಾಕ್ರಿನ್ ಎಂದು ಭಾವಿಸಿದ್ದ, ಕಾಂಡಿಮೆಂಟ್ ಶಾಪ್ ಎಂದರೆ ಕಾಂಡೋಮ್ ಎಂದೂ ನಾಚುತ್ತಿದ್ದ, ಮೆಲಾಂಕಲಿ ಎಂದರೆ ಸುಶ್ರಾವ್ಯ ಮೆಲೊಡಿ ಎಂದು ಭಾವಿಸುತ್ತಿದ್ದ, ಕನ್ನಿಂಗ್ಯಾಮ್ ರಸ್ತೆಯನ್ನು ಕಟ್ಟಿಂಗ್ಯಾಮ್ ರೋಡನ್ನಾಗಿಸುತ್ತಿದ್ದಂತಹ ಸೃಜನಶೀಲ ಇಂಗ್ಲೀಷ್ ಅಜ್ಞಾನವನ್ನು ಸುಗ್ರಾಸವಾಗಿ ಮೈಗೂಡಿಸಿಕೊಂಡ ಕಲಾವಿದ್ಯಾರ್ಥಿಗಳಾಗಿದ್ದೆವು ನಾವುಗಳು, ಆಗ. ಈಗಲೂ ಆ ಸಂಪ್ರದಾಯವನ್ನು ಬಹುಮಂದಿ ಉಳಿಸಿ, ಬೆಳೆಸಿ, ಪೋಷಿಸಿಕೊಂಡು ಬರುತ್ತಿದ್ದಾರೆ. ಬಹುಪಾಲು ಕಲಾಶಾಲೆಗಳು ಭಾಷಾಪ್ರೇಮವನ್ನು ಉಳಿಸಿಕೊಂಡಿರುವುದು ಹೀಗೆಯೇ. ’ಮುಂದೆ ಓದಲು ಹಿಂದೆಗೆದವರೇ ತುಂಬಿದ್ದ ಶಾಲೆಯನ್ನು ಕಲಾಶಾಲೆ ಎನ್ನುತ್ತಾರೆ’ ಎಂದು ಚಿತ್ರಕಲೆಯ ಹೆಚ್ಚಿನ ಓದು ಮುಗಿದ ಮೇಲೆ ನಾವುಗಳೆಲ್ಲ ನಮ್ಮನ್ನೇ ಗೇಲಿಮಾಡಿಕೊಳ್ಳುವುದು ಹೀಗೆಯೇ.
 
(೨)
 
ಬರವಣಿಗೆಯ ಬಗ್ಗೆ ಅನೇಖ ಮತ್ತು ಬೀಡಾ ಮಾತನಾಡುವಷ್ಟರಲ್ಲಿ  ಎದುರಿಗೆ ಮೇಷ್ಟ್ರು ಕಾಣಿಸಿಕೊಂಡಿದ್ದರು. ಅವರು ಒಬ್ಬರೇ ಎದುರಾದರೆ ಏನೂ ಮಾಡದವರೆಲ್ಲ ಏನೋ ಮಾಡಿದ್ದೇವೆ, ಮತ್ತು ಆ ಮಾಡಿರುವುದೆಲ್ಲವೂ ತಪ್ಪು ಎಂಬ ತಪ್ಪಿತಸ್ಥ ಭಾವವನ್ನು ಕೂಡಲೇ ಬೆಳೆಸಿಕೊಂಡುಬಿಡುತ್ತಿದ್ದರು. ಹಾಗಿತ್ತು ಮೇಷ್ಟರ ಹಿಡಿತ ಪರಿಷತ್ತಿನ ವಲಯದಲ್ಲಿ. ವಲಯ ಎಂದರೆ ಅಲ್ಲಿನ ವ್ಯಕ್ತಿಗಳಲ್ಲದೆ, ಅಲ್ಲಿನ ಕಟ್ಟಡ, ಗಿಡ, ಮರ, ಬಳ್ಳಿ, ಹೂ, ಗರಿ ಮತ್ತು ಗರಿಕೆಯೂ ಆಗಿತ್ತು. 
 
ಅಂತಹ ಮೇಷ್ಟ್ರು ಜುಬ್ಬ ಹಾಕಿ ಕೈಮೀರಿದ ತೋಳಿನ ವಸ್ತ್ರವನ್ನು ಹಿಂದಕ್ಕೆ ಸರಿಸಿ, ಕೈಗಳನ್ನು ಹಿಂದೆ ಮಡಿಚಿ, ತಮ್ಮ  ನೀಳಾಕಾರವನ್ನು ಮುಂದೂಡುತ್ತ ಬರುತ್ತಿದ್ದರೆ ಅವರ ಹಿಂದೆ ಅಣ್ತಮ್ಮ ಕುಣಿದಾಡುತ್ತ ಬರುತ್ತಿದ್ದ. ಅಣ್ತಮ್ಮ ಚಿ.ಕ.ಪದ ಮುಖ್ಯ ಕೆಲಸಗಾರಃ ಆತ ಏನು ಮಾಡುತ್ತಿದ್ದ ಎಂಬುದಕ್ಕಿಂತಲೂ ಏನು ಮಾಡುತ್ತಿರಲಿಲ್ಲ ಅನ್ನುವುದನ್ನು ಗುರ್ತಿಸುವುದು ಕಷ್ಟ. ಆತನ ಸಂಸಾರ ಅದೇ ಪರಿಷತ್ತಿನ ಹಿಂದಿನ ಮೂಲೆಯಲ್ಲಿ ಮನೆಮಾಡಿಕೊಂಡಿತ್ತು, ಗುಡಿಸಲಿನ ರೂಪವೊಂದರಲ್ಲಿ. ತನಗೆ ಏನೋ ಹೇಳಬೇಕಾದಾಗ ಬಾಯಿಮಾತಿನಲ್ಲಿ ಹೇಳಲಾಗದಿದ್ದಲ್ಲಿ ಅಣ್ತಮ್ಮ ಹಾಗೇ ಮೈಕೈಯೆಲ್ಲಾ ತಕ್ಕತ್ತೈಯ್ಯ ಎಂದು ಕುಣಿಸುತ್ತಿದ್ದುದ್ದರಿಂದ, ಆತ ನರ್ತಿಸುತ್ತಿರುವಂತೆ ಕಾಣುತ್ತಿದ್ದ. ಮೇಷ್ಟರ ಎದುರಿಗೆ ಮಾತ್ರ ಆತನಿಗೆ ಹಾಗಾಗುತ್ತಿದ್ದುದ್ದರಿಂದ ಆ ನರ್ತನವನ್ನು ’ಮೇಷ್ಟ್ರೋಮ್-ಸಿಂಡ್ರೋಮ್’ ಎಂದು ವರ್ಗೀಕರಿಸಿದ್ದೆವು. ಮತ್ತು ಆತ ಏನನ್ನಾದರೂ ಮೇಷ್ಟ್ರಿಗೆ ಹೇಳಬೇಕು ಅಂದುಕೊಂಡಾಗಲೆಲ್ಲ ಆತನಿಂದ ಮಾತೇ ಹೊರಡುತ್ತಿರಲಿಲ್ಲ. ಆದ್ದರಿಂದ ಅಣ್ತಮ್ಮ ಮೇಷ್ಟ್ರ ಎದುರಿಗೆ ಮಾತಾಡುತ್ತಾನೆ ಅಂತ ಸುದ್ಧಿ ತಲುಪಿದಾಗಲೆಲ್ಲ ಎಲ್ಲ ವಿದ್ಯಾರ್ಥಿಗಳೂ ಕದ್ದುಮುಚ್ಚಿ ಆತನ ಕುಣಿತವನ್ನು ನೋಡಲು ಮರಗಳ ಮರೆಯಲ್ಲೋ, ಕಂಬದ ಮರೆಯಲ್ಲೋ ತುದಿಗಾಲಲ್ಲಿ, ಬೆರಳಲ್ಲಿ, ಕೈಗಳಲ್ಲಿ ತಮ್ಮ ಮುಖಗಳನ್ನು ಮರೆಮಾಡಿಕೊಂಡು ಅವುಗಳ ಮೂಲಕ ಕಣ್ಣುಹಾಕಿ ಬಿಟ್ಟಿಮನೋರಂಜನೆಯನ್ನು ನಿರೀಕ್ಷಿಸುತ್ತಿರುತ್ತಿದ್ದರು. ಆಗ ಆತ ಕುಣಿಯುತ್ತಿದ್ದುದು ’ಮೇಷ್ಟ್ರೋಮ್-ಸಿಂಡ್ರೋಮ್’ ಆದರೆ, ಆತನಿಗೆ ಆಗೆಲ್ಲ ಮಾತುಬರಿದಾಗುತ್ತಿದ್ದುದನ್ನು ’ಸಾಲಿಲೋಕ್-ಸಿಂಡ್ರೋಮ್’ ಎಂದೂ ಕರೆಯುತ್ತಿದ್ದೆವು.
 
*
ಪ್ರಸ್ತುತದಲ್ಲಿ ಮೇಷ್ಟ್ರು ಅದಿನ್ನೂ ನಿರ್ಮಾಣವಾಗುತ್ತಿದ್ದ ಚಿ.ಕ.ಪದ ಕಟ್ಟಡದ ಹಿಂದಿನ ಭಾಗದ, ಹಿಂಭಾಗಕ್ಕೆ ಆತನನ್ನು ಕರೆಸಿದ್ದರು. ಈಗ ಮುಂದಿರುವ ಕಟ್ಟಡ ಚಿತ್ರಕಲಾ ಪರಿಷತ್ತು ಸಂಗ್ರಹಾಲಯ, ಆಫೀಸು ಹಾಗೂ ಗ್ಯಾಲರಿ ಸಮುಚ್ಚಯದ ಒಟ್ಟಾರೆ ಮೊತ್ತ. ಈಗ ಹಿಂದೆ ಇರುವ ಬಿಲ್ಡಿಂಗ್ ಆಗಿನ್ನೂ ಕಟ್ಟಲಾಗುತ್ತಿದ್ದ ಕಟ್ಟಡವು ಒಂದು ದೊಡ್ಡ ಹಳ್ಳವಾಗಿದ್ದು, ಜೋರು ಮಳೆ ಬಂದಾಗೆಲ್ಲ ಕೂಲಿಮಕ್ಕಳಿಗೆ ಸ್ವಿಮ್ಮಿಂಗ್ ಪೂಲ್ ಆಗಿತ್ತು. ಅದರಾಚೆಗಿನ ಕಾಂಪೌಂಡಿನ ಒಳಭಾಗದಲ್ಲಿ ಸುತ್ತಲೂ ತೆಂಗಿನಮರಗಳು. ಬಂಗಾರಪ್ಪ ಮೊದಲಾದ ಮಂತ್ರಿಗಳು ವಾಸಮಾಡುತ್ತಿದ್ದ ಮನೆಗಳ ಕಾಂಪೌಂಡುಗಳು ಮತ್ತು ಕುಮಾರಕೃಪ ಗೆಸ್ಟ್ ಹೌಸಿನ ಕಾಂಪೌಂಡು ಚಿ.ಕ.ಪದ ಕಾಂಪೌಂಡುಗಳೂ ಆಗಿಹೋಗಿದ್ದವು.
 
ಏನಯ್ಯ ಅದು? ಎಂದು ಮೇಷ್ಟ್ರು ಮರ ತೋರಿಸಿದ್ದರು. ದೊಡ್ಡವರೆದಿರು ತಲೆಎತ್ತಿ ಮಾತನಾಡದ ಅಣ್ತಮ್ಮ ತಲೆಬಗ್ಗಿಸಿಯೇ, ಎಲ್ಲ ಸರಿ ಇದೆ ಸಾ. ಇನ್ನೊಂದು ವಾರದಲ್ಲಿ ಎಳೆನೀರು ಕಿತ್ತುಕೊಡ್ತೀನಿ ಸಾ ನಿಮಗೆ ಎಂದ.
 
ಯೋವ್, ತಲೆ ಎತ್ತಿ ನೋಡಯ್ಯ ಅಲ್ಲಿ. ಎಲ್ಲಯ್ಯ ಇದೆ ಎಳನೀರು? ಎಂದು ಗದರಿಕೊಂಡಿದ್ದರು ಮೇಷ್ಟ್ರು. 
 
ನೀವೊಳ್ಳೆ ಏಳ್ತೀರಿ ಸಾ. ತೆಂಗಿನ್ ಮರ್ದಾಗ ಎಳ್ನೀರ್ ಇರ್ದೆ, ಇಟ್ಗೆ ಇರ್ತದ? ಎಂದಿದ್ದ ಅಣ್ತಮ್ಮ. ತಾನು ಸತ್ಯ ನುಡಿಯುತ್ತಿದ್ದೇನೆ ಅನ್ನಿಸಿದಾಗಲೆಲ್ಲ ಆತ ಎದುರಿಗೆ ಯಾರಿದ್ದಾರೆ, ಯಾರಿಲ್ಲ ಎಂದು ಕೇರು ಮಾಡದೆ ಧ್ವನಿ ಎತ್ತರಿಸಿ ಮಾತನಾಡುತ್ತಿದ್ದ. 
 
ಅದೇ ಕಾಣಯ್ಯ ನಾನು ಕೇಳ್ತಿರೋದು. ತೆಂಗಿನ ಮರದಲ್ಲಿ ಎಳ್ನೀರಿನ ಬದಲಿಗೆ ಇಟ್ಟಿಗೆ ಹೇಗೆ ಬಂತು ಅಂತ?’ 
 
ತಲೆ ಎತ್ತಿ ನೋಡಿದ ಅಣ್ತಮ್ಮನಿಗೆ ಎಳನೀರನ್ನು ಇಟ್ಟಿಗೆ ರೂಪದಲ್ಲಿ ದೇವರೇ ಪ್ಯಾಕ್‌ಅಪ್ ಮಾಡಿ ಮರವೊಂದರ ಮೇಲೆ ಇಟ್ಟಂತ್ತಿದ್ದದ್ದು ಕಂಡು ಗಾಭರಿಯಾಗಲಿಲ್ಲ. ವಿದ್ಯಾರ್ಥಿಗಳು (’ಯಾವಾಗಲೂ ಬರೆಯುತ್ತಿರಬೇಕು’ ಅನ್ನುತ್ತಿದ್ದ ಅನೇಕನನ್ನೂ ಒಳಗೊಂಡಂತೆ) ಎಂಟಡಿಯಷ್ಟೇ ಎತ್ತರದಲ್ಲಿದ್ದ ಎಳನೀರಿಗೆ ಇಟ್ಟಿಗೆ ಬೀಸಿ, ಕೆಡವಿ, ಅದರ ಮೃದುಭಾಗವನ್ನು ಪೆನ್ಸಿಲ್ ಜೀವಲು ಇದ್ದ ಕಟ್ಟರಿನಿಂದ ಸಿಪ್ಪೆ ಮುರಿದು, ತೂತು ಮಾಡಿ ಅದರ ರಸ ಕುಡಿದು, ಸೈಜುಕಲ್ಲಿನಿಂದ ಎಳನೀರನ್ನು ಇಬ್ಬಾಗ ಮಾಡಿ, ಆದರೊಳಗಿನ ಎಳೆತೆಂಗನ್ನು ಮತ್ತೆ ಕಟ್ಟರಿನಲ್ಲಿ ಸುಲಿದು, ತಿಂದು, ತೇಗಿ ಚುಪ್ಪುಗಳನ್ನು ಬಂಗಾರಪ್ಪನವರ ತೋಟಕ್ಕೆ ಎಸೆದುಬಿಡುತ್ತಿದ್ದರು. ಆದ್ದರಿಂದಲೇ ಕಾಂಪೌಂಡಿನಾಚೆಗಿನ ಅವರ ಭಾಗದಲ್ಲಿ ಗಿಡಮರಬಳ್ಳಿಗಳು ಹೆಚ್ಚು ಸೊಂಪಾಗಿ ಬೆಳೆದಿದ್ದವು. ಅದು ಅಣ್ತಮ್ಮನಿಗೂ, ಆತನ ಅಣ್ಣತಮ್ಮಂದಿರಂತಿದ್ದ ಇತರ ಕೆಲಸಗಾರರಿಗೂ ತಿಳಿದಿದ್ದ ವಿಷಯವೇ. ಇದು ಮಮಾ, ಅನೇಖ ಮುಂತಾದವರ ಕೆಲಸವೆಂತಲೂ, ಬೀಡಾ ಕೆಲಸವಲ್ಲವೆಂತಲೂ ಚೆನ್ನಾಗಿ ಗೊತ್ತಿದ್ದದ್ದು ಅಣ್ತಮ್ಮನಿಗೆ ಮತ್ತು ಆತನ ಅಣ್ಣತಮ್ಮಂದಿರಂತಿದ್ದ ಕೆಲವೇ ಕೆಲಸಗಾರರಿಗೆ.
 
(೩)
 
ಕಾಲುಗಂಟೆಯಲ್ಲಿ ಎಳನೀರು ಕದ್ದರೆಂದು ಅನುಮಾನವಿದ್ದ ಎಲ್ಲರನ್ನೂ ಮೇಷ್ಟ್ರು ಕುಳಿತುಕೊಳ್ಳುತ್ತಿದ್ದ ’ಪ್ರಿನ್ಸಿಪಾಲ್ ರೂಮಿನಲ್ಲಿ’ ಜಮಾಯಿಸಲಾಯಿತು. ಮಮಾ, ಅನೇಖ, ಪ್ರಶ್ನಾಮೂರ್ತಿ ಇತ್ಯಾದಿಗಳೆಲ್ಲ ಅಲ್ಲಿದ್ದರು. ಅನುಮಾನವೆಂಬುದು ಕೇವಲ ನೆಪಕ್ಕಷ್ಟೇ. ಕಳ್ಳತನದ ಶೈಲಿಯನ್ನು ನೋಡಿ ಸಣ್ಣಪುಟ್ಟ ಕಳ್ಳರನ್ನು ಪೋಲೀಸರು ಹೇಗೆ ಕರಾರುವಾಕ್ಕಾಗಿ ಗುರ್ತಿಸಿಬಿಡುತ್ತಾರೋ, ಹಾಗೆ ಅಲ್ಲಿದ್ದವರೆಲ್ಲ ಕ್ರೈಮ್-ಬ್ರದರ್ಸೇ ಆಗಿದ್ದರು. ಜೊತೆಗೆ ಆದರೆ ಮಾರಲ್ ಸಪೋರ್ಟಿಗೆ ಇಲ್ಲದಿದ್ದರೆ ಸ್ವಲ್ಪ ಮಜಾ ತೆಗೆದುಕೊಳ್ಳಲಿಕ್ಕೆಂದು ಬೀಡಾ ಮತ್ತು ಕಲ್ಪನಕ್ಕ ಮುಂತಾದವರೂ ಇದ್ದರು. 
 
ಸಿಗ್ನಲ್ ಜಂಪ್ ಮಾಡಿದ್ದಕ್ಕೆ ಅಥವ ಅತಿವೇಗವೆಂಬ ಸರಳ ತಪ್ಪಿಗಾಗಿ ವಾಹನವನ್ನು ನಿಲ್ಲಿಸಿದಾಗ, ಅದರಲ್ಲಿ ಅನಧೀಕೃತ ಶವವೊಂದು ದೊರಕಿದಂತೆ ಆಗಿತ್ತು ಎಳೆನೀರುಗಳ್ಳರ ಸ್ಥಿತಿ. ಇದನ್ನು ಇಂಗ್ಲೀಷಿನಲ್ಲಿ ಪಂಡೋರ-ಪೆಟ್ಟಿಗೆಯನ್ನು ತೆರೆಯುವುದು ಎನ್ನುತ್ತೇವೆ. ಅವರುಗಳು ನಡೆಸುತ್ತಿದ್ದ ಎಲ್ಲಾ ತರಹದ ಕಳ್ಳತನಗಳೂ ಒಂದೊಂದಾಗಿ ಹೊರಬರತೊಡಗಿತ್ತು. ಅಣ್ತಮ್ಮನಿಗೆ ಕುತ್ತಿಗೆಗೆ ಬಂತು. ಏಕೆಂದರೆ ಕಳ್ಳ ಯಾರು ಎಂದು ಗುರ್ತಿಸಬಲ್ಲ ಪೋಲೀಸನಲ್ಲವೆ ಆತ? ನೀವುಗಳು ಹೇಗಾದ್ರೂ ಹಾಳಾಗಿ ಹೋಗಿ. ಪಾಪ ಅಣ್ತಮ್ಮನ ಕೆಲಸಕ್ಕೆ ಕುತ್ತು ತರುತ್ತೀರಲ್ರಯ್ಯಾ ನೀವುಗಳು? ಎಂದು ಸಿಟ್ಟು ಕನಿಕರಗಳು ಸಮಪ್ರಮಾಣದಲ್ಲಿ ಬೆರೆತ ಧ್ವನಿಯಲ್ಲಿ ನುಡಿದಿದ್ದರು ಮೇಷ್ಟ್ರು. ಪ್ರೈವೇಟ್ ಸಂಸ್ಥೆಯಾದ ಚಿ.ಕ.ಪದಲ್ಲಿ ಕೆಲಸದಿಂದ ತೆಗೆವ ಅಧಿಕಾರ ಇದ್ದದ್ದು ಒಬ್ಬರಿಗೇ: ಅದು ಮೇಷ್ಟ್ರಿಗೇ! ಕೊನೆಗೆ ತಪ್ಪೊಪ್ಪಿಗೆಯಲ್ಲದೆ ಬೇರೆ ದಾರಿಯೇ ಇರಲಿಲ್ಲ ಮಮಾ ಮುಂತಾದ ವಿದ್ಯಾರ್ಥಿಗಳಿಗೆ. ಇನ್ನು ಮುಂದೆ ತಪ್ಪು ಮಾಡಿ ಸಿಕ್ಕಿಹಾಕಿಕೊಳ್ಳುವುದಿಲ್ಲ ಎಂಬ ವಾಕ್ಯವುಳ್ಳ ತಪ್ಪೊಪ್ಪಿಗೆ ಪತ್ರವನ್ನು ಎಲ್ಲರೂ ಸಹಿಮಾಡಿ ಕೊಟ್ಟ ಮೇಲೆಯೇ ಎಲ್ಲರಿಗೂ ಬಿಡುಗಡೆಯಾಗಿದ್ದು. ಈ ವಾಕ್ಯದ ಮಾರ್ಮಿಕತೆಯನ್ನು ತುಂಬಾ ಯೋಚನೆ ಮಾಡಿ ಬರೆದುಕೊಟ್ಟಿದ್ದ ಅನೇಖ, ಯಾರಾದರೂ ಆಫೀಸಿನವರಾದರೂ ಸರಿ, ಎಂದಾದರೂ ಸರಿ ಆ ವಾಕ್ಯವನ್ನು ಸರಿಯಾಗಿ ಅರ್ಥಮಾಡಿಕೊಂಡುಬಿಟ್ಟಾರು ಎಂದು ಹೆದರುತ್ತಲೇ ಚಿಕಪದ ಕಾಲೇಜು ವ್ಯಾಸಂಗ ಮುಗಿಸಿದ್ದೆ, ನಾಲ್ಕು ವರ್ಷಗಳ ನಂತರ.
 
*
’ನಾವು ಎಳನೀರನ್ನು ಕದ್ದದ್ದು ಕದಿಯಲಿಕ್ಕಾಗಿಯಲ್ಲ. ತಿನ್ನಲಿಕ್ಕಾಗಿಯೂ ಅಲ್ಲ. ಅದನ್ನು ಸ್ಟಿಲ್ ಲೈಫಿಗಾಗಿ ಇರಿಸಿಕೊಳ್ಳಲು’ ಎಂದು ಸುದ್ದಿ ಹರಡತೊಡಗಿದರು ಸಿಕ್ಕಿಹಾಕಿಕೊಂಡ ಕಳ್ಳ-ವಿದ್ಯಾರ್ಥಿಗಳೆಲ್ಲ. ಸಿಕ್ಕಿಹಾಕಿಕೊಳ್ಳದ ಕಳ್ಳರು ಹಾಗೇನೂ ಕಾರಣಗಳನ್ನು ಹುಡುಕುವ ಅವಶ್ಯಕತೆ ಇಲ್ಲದೆ, ಮತ್ಯಾವುದಾದರೂ ಎಳನೀರು ಪ್ರೌಢನೀರಾಗಬಲ್ಲದೆ ಎಂದು ಮರದ ಮರೆಗೆ ಸರಿದಿದ್ದರು. ಸ್ಟಿಲ್ ಲೈಫ್ ಚಿತ್ರಣ ಪರಿಷತ್ತಿನ ಕಾಲೇಜಿನಲ್ಲಿ ಯಾವಾಗಲೂ ಬೇಸಿಗೆ ಕಾಲದಲ್ಲಿ ಇರುತ್ತಿತ್ತು, ವಾರ್ಷಿಕ ಕೋರ್ಸ್ ಆಗ ಅದಾಗಿದ್ದರಿಂದ. ಸ್ಟಿಲ್ ಲೈಫ್ ಮತು ನಿಸರ್ಗಚಿತ್ರಣ (ಲ್ಯಾಂಡ್‌ಸ್ಕೇಪ್)ವೆರಡೂ ಆಗ ಎರಡು ವರ್ಷದ ಫೌಂಡೇಷನ್ ಕೋರ್ಸಿನಲ್ಲಿ ಅನಿವಾರ್ಯವಾಗಿ, ಮುಖ್ಯ ವಿಷಯವಾಗಿತ್ತು. ಅವುಗಳನ್ನು ಸ್ಟಡಿ ಮಾಡಲು ಸೂರ್ಯನ ಬೆಳಕಿನಷ್ಟು ಸೂಕ್ತವಾದ ಬೆಳಕು ಮತ್ತೊಂದಿರುವುದಿಲ್ಲ. ಸೂರ್ಯನ ಬೆಳಕಿನ ಮುಂದೆ ಕೃತಕ ಬೆಳಕು ಬಾರಿ ಡಲ್ಲಾಗಿ ಕಾಣುತ್ತದೆ. 
 
’ಸ್ಟಿಲ್ ಲೈಫಿನಲ್ಲಿ ಯಾರೂ ಸಾಧಾರಣವಾಗಿ ಎಳನೀರನ್ನು ಇಡುವುದಿಲ್ಲ’ ಎಂಬುದು ಒಂದು ವರ್ಗದ ವಾದ. ಆ ವರ್ಗದವರ್ಯಾರೂ ಸಹ ಎಳನೀರು ಕದ್ದು ಸಿಕ್ಕಿಹಾಕಿಕೊಂಡವರಾಗಿರಲಿಲ್ಲ. ಸ್ಟಿಲ್-ಲೈಫ್ ಅಥವ ಸ್ಥಿರಚಿತ್ರಣ ವಿಷಯದಲ್ಲಿ ಹಣ್ಣು, ಹಂಪಲುಗಳು, ದ್ರಾಕ್ಷಿ, ಹೂಜಿ, ಪ್ಲಾಸ್ಟರ್ ಆಫ್ ಪ್ಯಾರಿಸ್ಸಿನಲ್ಲಿ ಮಾಡಲಾಗಿರುವ ಖ್ಯಾತ ವ್ಯಕ್ತಿಗಳ ಭಾವಶಿಲ್ಪಗಳನ್ನೆಲ್ಲ ದಿಟ್ಟ ಟೇಬಲ್ಲಿನ ಮೇಲೊಂದು ದಟ್ಟವರ್ಣದ ಬಟ್ಟೆಯ ಮೇಲಿರಿಸಿ ಅವುಗಳನ್ನು ವಿದ್ಯಾರ್ಥಿಗಳೆಲ್ಲ ಬರೆಯಬೇಕಿತ್ತು. ಸೂರ್ಯನ ಬೆಳಕು ನಿಶ್ಚಿತವಿರುವುದಿಲ್ಲವಾದ್ದರಿಂದ, ಬೇಗ ಬದಲಾಗುವುದರಿಂದ, ಹಣ್ಣುಹಂಪಲುಗಳು ಬೇಗ ಒಣಗುವುದರಿಂದ, ಬೇಗನೆ ಅದನ್ನು ಚಿತ್ರಿಸಬೇಕಿರುವುದರಿಂದ, ತೈಲವರ್ಣದ ಬದಲಿಗೆ ಜಲವರ್ಣವನ್ನು ಬಳಸುತ್ತಿದ್ದೆವು ನಾವೆಲ್ಲ. .. //