0೪ ಸಾರಾ ಮೇರಿ ಜಾರ್ಜ್ ವಿಲಿಯಮ್ಸ್ ಪೀಟರ್.

0೪ ಸಾರಾ ಮೇರಿ ಜಾರ್ಜ್ ವಿಲಿಯಮ್ಸ್ ಪೀಟರ್.

ಬಾಗಿಲು ತಟ್ಟಿದ ಮನೆಯೊಳಗಿಂದಲೇ ಮನೆಯೊಡತಿ

"ಯಾರದು, ಒಳಗೆ ಬನ್ನಿ." ಎಂದಳು. ನಾನು ಹೋದೆ.
"ಕೂತ್ಕೋಮ್ಮಾ" ಎಂದವಳು, ತನ್ನ ಹೊಳೆಯುವ ಕಣ್ಣುಗಳಿಂದ ತೀವ್ರವಾಗಿ ನನ್ನನ್ನು ದಿಟ್ಟಿಸಿದಳು.
"ಎನು ಪುಟ್ಟೀ ನಿನ್ನ ಹೆಸರು?"
'ಸಾರಾ ವಿಲಿಯಮ್ಸ್"
"ಎಲ್ಲಿ ನಿಮ್ಮನೆ? ಪಕ್ಕದ ಮನೇನಾ?"
'ಅಲ್ಲ, ಅಲ್ಲ, ಹೂಕರ್‌ವಿಲೀ ನಮ್ಮೂರು, ಇಲ್ಲಿಂದ ಏಳು ಮೈಲಿ ಆಗುತ್ತೆ, ಅಲ್ಲಿಂದ ನಡ್ಕೊಂಡು ಬಂದೆನಲ್ಲಾ ಸ್ವಲ್ಪ ಆಯಾಸ ಆಯ್ತು."
"ಹೋ.. ಹಸಿವೂ ಆಗಿರ್‍ಬೇಕಲ್ಲಾ..? ಇರು ತಿನ್ನೋಕೇನಾದರೂ ಕೊಡ್ತೀನಿ."
"ಇಲ್ಲ .. ಇಲ್ಲ.. ಹಸಿವೇನೂ ಇಲ್ಲ. ಇಲ್ಲಿಗಿನ್ನೂ ಎರಡು ಮೈಲಿ ಇದೆ ಅನ್ನೋವಾಗ ಊಟ ಮಾಡಿದ್ದೆ, ಮನೇಲಿ ನಮ್ಮಮ್ಮನಿಗೆ ಹುಶಾರಿಲ್ಲ. ದುಡ್ಡೆಲ್ಲಾ ಖರ್ಚಾಗೋಯ್ತು. ಅದಕ್ಕೆ ಈ ಊರಲ್ಲಿ ಮೇಲ್ಗಡೆ ಬೀದೀಲಿ ಇರೋ ನಮ್ಮ ಮಾವ ಮೂರ್ ಹತ್ರ ಹೇಳೋದಕ್ಕೆ ಬಂದಿದೀನಿ. ನಿಮ್ಗೆ ಅವರು ಗೊತ್ತಾ?"
"ಇಲ್ಲಮ್ಮ, ನಾನೇನೋ ಊರಿಗೆ ಹೊಸಬಳು" ಇನ್ನೂ ಇಲ್ಲಿ ಜನ ಪರಿಚಯ ಅಷ್ಟಾಗಿಲ್ಲ. ಮೇಲ್ಗಡೆ ಬೀದಿ ಅಂದ್ರೆ, ಬಾವಿ ಕಟ್ಟೆಯಿಂದ ಆ ಕಡೆನಾ?"
"ಹೌದು"
"ಅಯ್ಯೋ, ಅಲ್ಲಿಗೆ ತುಂಬಾ ದೂರಾನೇ ಅಯ್ತಲ್ಲಮ್ಮ. ಒಂದ್ಕೆಲ್ಸ ಮಾಡು. ರಾತ್ರಿ ಇಲ್ಲಿದ್ದು, ಬೆಳಿಗ್ಗೆ ಎದ್ದು ಹೋಗು, ನಿನ್ನ ಕುಲಾವಿ ತೆಗೆದು, ಕೈ ಕಾಲು ತೊಳ್ಕೋ, ಊಟ ಮಾಡುವೆಯಂತೆ."
"ಇಲ್ಲ, ಇಲ್ಲ ಕತ್ಲೇಂದ್ರೆ ನನಗೆ ಹೆದರಿಕೆಯೇನೂ ಇಲ್ಲ. ಸ್ವಲ್ಪ ಸುಧಾರಿಸಿಕೊಂಡು ಹೋಗ್ಬಿಡ್ತೀನಿ"
ಅವಳೊಮ್ಮೆ ನನ್ನನ್ನು ನೋಡಿ "ಸರಿಯಮ್ಮ, ಆದ್ರೆ ಒಬ್ಳೇ ಹೋಗೋದೇನೂ ಬೇಡ, ನಮ್ಮೆಜಮಾನ್ರು ಬಂದ್ಮೇಲೆ ಅವರ ಜೊತೆ ಮಾಡಿ ಕಳಿಸ್ತೀನಿ' ಎಂದಳು. ಅಲ್ಲಿಂದ ಅವಳ ಮಾತು ಅವಳ ಗಂಡ, ಮಕ್ಕಳು, ಸಂಬಂಧಿಕರ ಕಡೆ ಹೊರಳಿತು. ಮಾತಾಡಿದಷ್ಟೂ ತಣಿಯದ ಉತ್ಸಾಹ ಅವಳಿಗೆ ಈ ವಿಷಯದಲ್ಲಿ. ಅವಳು ಮಾತಾಡುತ್ತಲೇ ಇದ್ದಳು, ನಾನು ಕೇಳುತ್ತಲೇ ಇದ್ದೆ. ಒಟ್ಟಿನಲ್ಲು ನನಗಂತೂ ನಾನು ಈ ಮನೆಗೆ ಬಂದು ತಪ್ಪು ಮಾಡಿದ್ದು ಖಾತ್ರಿಯಾಗಿತ್ತು. ಮಾತು ನನ್ನ ಕೊಲೆಯ ಕಡೆ ಹೊರಳಿದಾಗ ನನಗೂ ಕುತೂಹಲ ಮೂಡಿತು. ಅವಳು ನನ್ನ ಕತೆಯನ್ನೆಲ್ಲಾ ಹೇಳಿ ಕೊಲೆಯ ಭಾಗಕ್ಕೆ ಬಂದಾಗ ತಡಿಯಲಾರದ ಕುತೂಹಲದಿಂದ ಕೇಳಿಯೇಬಿಟ್ಟೆ. 'ಕೊಲೆ ಮಾಡಿದವರ್‍ಯಾರು? ನಮ್ಮೂರಲ್ಲೂ ಈ ವಿಷ್ಯ ತುಂಬಾ ಮಾತಾಡ್ತಾರೆ, ಆದ್ರೆ ಕೊಲೆ ಮಾಡಿದವರ್‍ಯಾರು ಅಂತ ಏನೂ ಗೊತ್ತಾಗ್ಲಿಲ್ಲ."
"ಇಲ್ಲೊ ಅಷ್ಟೆ, ಏನೋ ವಿಷ್ಯ ಇನ್ನೂ ಸರಿಯಾಗಿ ಗೊತ್ತಿಲ್ಲ. ಕೆಲವರು ಹೇಳ್ತಾರೆ ಆ ಹುಡುಗನ ಅಪ್ಪಾನೇ ಕೊಲೆ ಮಾಡಿರ್‍ಅಬೇಕಂತ"
"ಇಲ್ಲ.. ಹಾಗೆಲ್ಲಾದರೂ ಆಗುತ್ತೇನು"
"ಮೊದಮೊದಲು ಎಲ್ಲಾರೂ ಹಾಗೇ ಅನ್ಕೊಂಡಿದ್ದರು. ಹೆಚ್ಚು ಕಮ್ಮಿ ಅವನಿಗೆ ಅದೇ ವಿಷಯಕ್ಕೆ ನೇಣಿಗೂ ಹಾಕ್ಬಿಡ್ತಿದ್ದರು. ಆದ್ರೆ ಈಗ ಎಲ್ರೂ ಓಡಿಹೋದ್ನಲ್ಲಾ ಆ ಗುಲಾಮ ಜಿಮ್ ಅಂತ ಅವನೇ ಕೊಲೆ ಮಾಡಿರ್‍ಬೇಕು ಅಂತ ಅಂದ್ಕೊತಿದಾರೆ"
"ಅವನ್ಯಾಕೆ...." ನಾನು ಇನ್ನೂ ಏನೋ ಹೇಳುವುದರಲ್ಲಿದ್ದೆ. ಆದರೆ ಇಂತಹ ಸಮಯದಲ್ಲಿ ಮೌನವಾಗಿರುವುದೇ ಕ್ಷೇಮ ಎಂದು ವಿವೇಕ ಎಚ್ಚರಿಸಿತು. ಮಾತಿನ ಭರದಲ್ಲಿದ್ದ ಆಕೆಗೆ ನಾನೇನೋ ಹೇಳಲು ಪ್ರಯತ್ನಿಸಿದೆ ಎಂಬುದು ಆರಿವಿಗೇ ಬಂದಿರಲಿಲ್ಲ.
"ಅದೇ..... ಆಯಮ್ಮ ವಾಟ್ಸನ್, ಅವಳ ನೀಗ್ರೋ ಗುಲಾಮ ಓಡಿ ಹೋದ್ನಲ್ಲಾ, ಅವನು ಓಡಿಹೋದ ದಿನಾನೇ ಪಾಪ ಆ ಹುಡುಗನ ಕೊಲೆ ಆಗಿದ್ದು. ಆ ನೀಗ್ರೋ ತಲೆಗೆ ಮುನ್ನೂರು ಡಾಲರ್ ಬಹುಮಾನ, ಆ ಹುಡ್ಗನ ಅಪ್ಪನ ತಲೆಗೆ ಇನ್ನೂರು ಡಾಲರ್ ಬಹುಮಾನ ಇದೆ. ಕೊಲೆ ಆದ ಮೂರ್‍ನೇ ದಿನ ಇಲ್ಲಿ ಬಂದಿದ್ದ. ಎಲ್ಲಾರ ಹತ್ರಾನೂ ಹೇಳ್ಕೊಂಡು ಬಾಯ್ಬಡ್ಕೋತಿದ್ದ. ದೋಣೀಲಿ ಹೆಣ ಹುಡ್ಕೋಕೆ ಹೋದಾಗಲೂ ಜೊತೆಯಲ್ಲಿ ಇದ್ದ, ಆಮೇಲೆ ಎಲ್ಲೊ ಮಾಯ ಆಗ್ಬಿಟ್ಟ. ರಾತ್ರಿ ಹೊತ್ತಿಗೆ ಅವನೇ ಕೊಲೆ ಮಾಡಿರೋದು ಅಂತ ಜನಾ ಎಲ್ಲ ಅವನ್ನ ನೇಣು ಹತ್ತಿಸೋ ನಿರ್ಧಾರ ಮಾಡಿದ್ದರು. ಆದರೆ ಅವನು ಯಾರ ಕೈಗೂ ಸಿಗ್ಲೇ ಇಲ್ಲ;"
'ಅದಾದ ಮೇಲೆ ಅವನು ಯಾರಿಗೂ ಸಿಗ್ಲೇ ಇಲ್ಲವಾ?"
"ಅವನು ಕಾಣೆಯಾದಾಗಿನಿಂದ ಜನ ಅವನೇ ಕೊಲೆ ಮಾಡಿದ್ದು ಅಂತನ್ಕೊಂಡ್ರು. ಆದ್ರೆ ಮೂರ್‍ನೇ ದಿನ ಅವನು ವಾಪಸ್ಸು ಬಂದ. ಥ್ಯಾಚರ್ ಸಾಹೇಬ್ರ ಹತ್ತಿರ, ಓಡಿ ಹೋಗಿರೋ ನೀಗ್ರೋ ಗುಲಾಮನ್ನ ಹುಡ್ಕೋಕೆ ಹಣ ಬೇಕು ಅಂತ ಕೇಳಿ ಸ್ವಲ್ಪ ಹಣ ಈಸ್ಕೊಂಡ್ನಂತೆ. ಅವತ್ತು ರಾತ್ರಿ ಅಂತೂ ಪೂರಾ ಕುಡಿದಿದ್ನಂತೆ...... ಅದಾದ ಮೇಲೆ ಅವನನ್ನು ಕಂಡವರಿಲ್ಲ."
"ಹೋ..... ಇನ್ನೂ ಅವನ್ನ ಹುಡುಕ್ತಾ ಇದಾರಾ...?"
"ಇಲ್ಲ, ಈಗ ಜನ ಆ ಕೊಲೆ ಮಾಡಿರೋದು ಕಂಡಿತವಾಗ್ಲೂ ಆ ನೀಗ್ರೋನೆ ಅಂತ ನಂಬಿಬಿಟ್ಟಿದಾರೆ. ನಿಜ ಹೇಳ್ಬೇಕೂಂದ್ರೆ, ಇವತ್ತು ನಮ್ಮೆಜನಮಾನ್ರೂ, ಅವರ ಸ್ನೇಹಿತರೂ, ಆ ನೀಗ್ರೋನ ಹುಡ್ಕೊಂಡು ಹೋಗ್ತಿದಾರೆ."
"ನಿಜವಾಗಿ..!!! ಆದರೆ ಎಲ್ಲೀಂತ ಹುಡುಕ್ತಾರೆ... ಇವತ್ತೆಲ್ಲಿ ಹುಡುಕ್ತಾರೋ?"
"ಹೂಒ.... ಹೊರಗೆ ಹೋಗೋಕೆ ಮುಂಚೆ ಅವರು ಸ್ವಲ್ಪ ನಾಯಿಗಳನ್ನ ಹೊಂದಿಸ್ಕೊಂಡು ಬರ್ತೀನಿ ಅಂತ ಹೇಳಿ ಹೋದ್ರು. ನಾಯಿಗಳು ಸಿಗ್ತಿದ್ದ ಹಾಗೇ, ನಮ್ಮವರು ಅವರನ್ನ ಅದೇ ಆ ದ್ವೀಪ, ಜಾಕ್ಸನ್ ಐಲ್ಯಾಂಡ್ನಲ್ಲಿ ಹುಡುಕ್ತಾರಂತೆ.'
ಜಾಕ್ಸ್ನ್ ಐಲ್ಯಾಂಡ್.....!! ನಾಯಿಗಳು....!!! ಎದೆ ಗುಂಡಿಗೆ ನಿಂತು ಹೋಯಿತು, ಏನು ಮಾಡುವುದೋ ತೊಚಲಿಲ್ಲ. ಧೈರ್ಯವೆಲ್ಲಾ ಕರಗಿ ಹೋಗಿ, ಅಸಹನೆಯೂ, ಅಳುಕೂ ಕಾಣಿಸಿಕೊಂಡುಬಿಟ್ಟಿತ್ತು. ಏನೂ ಮಾಡಲು ತೋಚದೆ ಮೇಜಿನ ಮೇಲೆ ಬಿದ್ದಿದ್ದ ಸೂಜಿ, ದಾರಗಳನ್ನೆತ್ತಿಕೊಂಡು, ಸೂಜಿಗೆ ದಾರ ಪೋಣಿಸತೊಡಗಿದೆ. ಅದನ್ನು ಕಂಡ ಕೂಡಲೇ, ಆ ಹೆಂಗಸು ಮಾತು ನಿಲ್ಲಿಸಿ ಅದನ್ನೇ ದಿಟ್ಟಿಸಿ ನೋಡಿದಳೂ. ನನಗಿನ್ನೂ ಅಳುಕು ಹೆಚ್ಚಾಯಿತು. ಮೆಲ್ಲನೆ ಕೇಳಿದಳು "ಮಗೂ, ನಿನ್ನ ಹೆಸರು ಏನು ಹೇಳಿದೆ...?"
'ಮ್.... ಮೇರಿ ವಿಲಿಯಮ್ಸ್" ಏಕೋ ನನ್ನ್ ಮನಸ್ಸಿಗೆ ನಾನಿ ಮೇರಿ ಎಂದೇ ಮುಂಚೆ ಹೇಳಿದ್ದೇನೆಂದೆನ್ನಿಸಿದ್ದರಿಂದ ಹಾಗೆ ಹೇಳಿಬಿಟ್ಟೆ.
"ನೀನು ಬಂದಾಗ ಸಾರಾ ಅಂತ ಹೇಳಿದ ಹಾಗಿತ್ತಲ್ಲಾ?"
"ಓ ಹೌದು, ನನ್ನ ಪೂರ್ತಿ ಹೆಸರು, ಸಾರಾ ಮೇರಿ ವಿಲಿಯಮ್ಸ್ ಅಂತ" ಈ ಯೋಚನೆ ಮನಸ್ಸಿಗೆ ಬಂದಿದ್ದರಿಂದ ನನಗೇ ಸಂತೋಷವಾಗಿತ್ತು. ಅವಳಿದನ್ನು ನಂಬುತ್ತಾಳೆಂದೆಣಿಸಿದೆ. ಅವಳು ಮುಂದೆ ಏನೇನೋ ಮಾತಾಡುತ್ತ ಹೋದಾಗ, ಅವಳು ನಿಜವಾಗಿಯೂ ನಂಬಿಬಿಟ್ಟಳು ಎಂದು ನಾನೂ ನಂಬಿದೆ. ಮಾತು ಮನೆಯಲ್ಲಿರುವ ಹೆಗ್ಗಣಗಳ ಕಾಟದತ್ತ ಹೊರಳಿ, ಅದನ್ನು ತಪ್ಪಿಸಲು ಅವಳು ಮಾಡಿದ ಪ್ರಯತ್ನವನ್ನೆಲ್ಲಾ ಹೇಳಿದಳು. ಅಲ್ಲೊಂದು ಇಲ್ಲೊಂದು ಇಣಿಕಿ ನೋಡಿ, ಒಮ್ಮೊಮ್ಮೆ ಧೈರ್ಯವಾಗಿಯೇ ಓಡಾಡುತ್ತಿದ್ದ ಇಲಿಗಳನ್ನು ನೋಡಿದ ನನಗೆ ಅವಳ ಮಾತಿನಲ್ಲಿ ಉತ್ಪ್ರೇಕ್ಷೆ ಇಲ್ಲವೆಂದೇ ತೋರಿತು. ಅವಳು ನನ್ನ ಕೈಗೊಂದು ಸೀಸದ ಗುಂಡನ್ನು ಕೊಟ್ಟು ಇಲಿಯೇನಾದರೂ ಕಂಡರೆ ಅದನ್ನು ಗುಂಡಿನಿಂದ ಹೊಡೆದು ಕೊಲ್ಲಬೇಕೆಂದು ಹೇಳಿದಳು. ನನ್ನ ಬೇಟೆಗಾರ ಮನಸ್ಸು ಎಚ್ಚೆತ್ತಿತು, ಅವಳ ಮಾತಿನ ಮಧ್ಯೆಯೂ ಸೂಕ್ಷ್ಮವಾಗಿ ಗಮನಿಸುತ್ತಲೇ ಕುಳಿತಿದ್ದ ನನಗೆ ಮೂಲೆಯಲ್ಲೊಂದು ಮೂಷಿಕ ಮುಖ ತೋರಿಸಿದ, ಕೂಡಲೇ ಗುರಿಯಿಟ್ಟು ಗುಂಡನ್ನು ಎಸೆದು ಬಿಟ್ಟೆ. ಮೂಷಿಕರಾಯನ ಅದೃಷ್ಟ ಚೆನ್ನಾಗಿತ್ತು ಎನಿಸುತ್ತದೆ. ಏಟು ಒಂದೆರಡು ನೂಲಿನೆಳೆಯ ಅಂತರದಲ್ಲಿ ತಪ್ಪಿ, ಇಲಿ ಓಡಿ ಹೋಯಿತ್ಯ್. ಆಕೆ ಆ ಎಸೆದ ಸೀಸದ ತುಂಡಿನ ಬಳಿಗೆ ಹೋಗಿ ಅದನ್ನೆತ್ತಿಕೊಂಡು ಮತ್ತೆ ನನತ್ತ ಎಸೆದಳು. ನಾನದನ್ನು ಹಿಡಿದು ಕೈಯಿಂದ ಕೆಳಜಾರುತ್ತಿದೆ ಎನಿಸಿದಾಗ ಕಾಲುಗಳೆರಡನ್ನೂ ಜೋಡಿಸಿ ನಿಧಾನವಾಗಿ ತೊಡೆಯ ಮೇಲೆ ಜಾರಿಸಿಕೊಂಡೆ. ಅವಳಂತೂ ಹಾಗೇ ಏನೇನೋ ಮಾತಾಡುತ್ತಲೇ ಇದ್ದಳು. ,ಆತಿನ ಮಧ್ಯೆ, ಅದೇ ಓಘದಲ್ಲಿಯೇ ಇದ್ದಕ್ಕಿದ್ದಂಟೇ, ಸಂಪೂರ್ಣ ಅನಿರೀಕ್ಷಿತವಾಗಿ "ಈಗ ಹೇಳು, ನಿನ್ನ ನಿಜವಾದ ಹೆಸರೇನು?" ಎಂದಳು.
"ಹೆ,,, ಹೆ,,,, ಏನೆಂದಿರಿ?"
"ನಿನ್ನ ನಿಜವಾದ ಹೆಸರು-- ಬಿಲ್, ಟಾಮ್, ಬಾಬ್ ಅಥವಾ ಏನಾದ್ರೂ ಸರಿ, ಅದೇನೋ ಅದನ್ನು ಹೇಳು."
ನಾನು ಗಾಳಿಗೆ ಸಿಕ್ಕ ತರಗೆಲೆಯಂತೆ ಅಲ್ಲಾಡಿ ಹೋದೆ, ಏನು ಮಾಡುವುದೋ ತಿಳಿಯಲೇ ಇಲ್ಲ. ಕೆಲವು ಕ್ಷಣ ಸುಧಾರಿಸಿಕೊಂಡು, ಮತ್ತೆ ಅಮಾಯಕಳಂತೆ, "ಅಮ್ಮಾ, ನನ್ನಂತಹ ಬಡಹುಡುಗಿಯನ್ನು ಕಂಡರೆ ನಿಮಗೂ ತಮಾಷೆ ಮಾಡಬೇಕೆನ್ನಿಸುತ್ತಿದೆಯೇ? ... ನಾನೇನೋ..." ಇನ್ನೂ ಏನು ಹೇಳುತ್ತಿದ್ದೆನೋ, ಮಧ್ಯದಲ್ಲಿಯೇ ನನ್ನ ಮಾತು ತುಂಡರಿಸಿ ಅವಳೆಂದಳು "ಇಲ್ಲ ನೀನಲ್ಲಿಂದ ಎದ್ದು ಎಲ್ಲಿಗೂ ಹೋಗುವಂತಿಲ್ಲ. ನಾನು ನಿನಗೇನೂ ತೊಂದರೆ ಕೊಡುವುದಿಲ್ಲ. ಮನೆ ಬಿಟ್ಟು ಓಡಿ ಹೋಗ್ತಾ ಇದೀಯಾ, ಅಥವಾ ಇನ್ನೇನಾದ್ರೂ ವಿಷಯಾನಾ...? ಒಂದಂತೂ ನಿಜ, ಅದು ನೀನು ಹುಡ್ಗಿಯಂತೂ ಅಲ್ಲ, ಏನೇ ಇದ್ರೂ ನಾನೇನು ಯಾರಿಗೂ ಹೇಳುವುದಿಲ್ಲ. ಆದ್ರೆ ನನ್ನ ಹತ್ರ ನೀನು ನಿಜ ಹೇಳಲೇಬೇಕು" ಎಂದಳು.

ಇನ್ನು ನಾನು ನಾಟಕವಾಡುವುದರಲ್ಲಿ ಯಾವ ಪ್ರಯೋಜನವೂ ಇರಲಿಲ್ಲ. ಅವಳ ಬಳಿ ಎಲ್ಲಾ ಹೇಳಿಬಿಡಲೇಬೇಕಿತ್ತು. ಎಂತಲೇ ಹೇಳಲು ಶುರು ಮಾಡಿದೆ. "ನಾನೊಬ್ಬ ಅನಾಥ, ಸ್ವಲ್ಪ ದಿನಗಳ ಹಿಂದೆ ನನ್ನ ತಂದೆ ತಾಯಿ ತೀರಿಕೊಂಡರು. ಕಾನೂನಿನ ಪ್ರಕಾರ ನಾನೀಗ ಒಬ್ಬ ರೈತನ ಮನೆಯಲ್ಲಿರಬೇಕು. ಅವನ ಮನೆ ಇಲ್ಲಿಂದ ಮೂವತ್ತು ಮೈಲಿ ದೂರ ಅವನೋ ಹಳೆ ಕಾಲದವನು ಮತ್ತು ಸಿಡುಕ, ಮತ್ತು ಮಹಾನ್ ಕೊಳಕ, ನನಗೆ ಅಲ್ಲಿರಲು ಇಷ್ಟವಾಗಲಿಲ್ಲ. ಅದಕ್ಕೆ ಅವನು ಊರಿಗೆ ಹೋಗಿದ್ದ ಸಂದರ್ಭ ಸಾಧಿಸಿ, ಅವನ ಮಗಳ ಬಟ್ಟೆ ತೊಟ್ಟು ಗೋಷನ್ ನಗರಕ್ಕೆ ಓಡಿ ಬಂದಿದ್ದೇನೆ, ಇಲ್ಲಿ ನನ್ನ ಮಾವ ಮೂರ್ ಇದ್ದಾನೆ. ನನಗೆ ಅವನ ಬಳಿಗೆ ಹೋಗಲು ಇಷ್ಟ" ಎಂದೆ.
'ಅಯ್ಯೋ ಮಗೂ, ಇದು ಗೋಷನ್ ನಗರ ಅಲ್ಲ, ಇದು ಸೇಂಟ್ ಪೀಟರ್‍ಸ್‍ಬರ್ಗ್, ಗೋಷನ್ ನದೀ ಗುಂಟ ಮೇಲೆ ಹೋದರೆ ಇನ್ನೂ ಹತ್ತು ಮೈಲುಗಳಾಚೆ ಇದೆಯಲ್ಲೋ, ನಿನಗಾರು ಹೇಳಿದರು, ಇದು ಗೋಷನ್ ಎಂದು" ಎಂದು ಕೇಳಿದಳು.
'ಬೆಳಿಗ್ಗೆ ಸಿಕ್ಕ ಮನುಷ್ಯ ಇದೇ ಗೋಷನ್ ಎಂದು ಹೇಳಿದನಲ್ಲ"
"ಅವನೆಲ್ಲೋ ಕುಡಿದಿರಬೇಕು, ಅಷ್ಟೇ"
"ಹೋಗಲಿ ಬಿಡಿ, ಈಗ ಹೊರಟರೆ, ಇನ್ನೊಂದೆರಡು ಮೂರು ಗಂಟೆಗಳಲ್ಲಿ ಗೋಷನ್‍ನಲ್ಲಿರ್ತೀನಿ."
"ಇರಪ್ಪ ಸ್ವಲ್ಪ ಬುತ್ತಿ ಏನಾದ್ರೂ ಕೊಡ್ತೀನಿ" ಎಂದವಳೇ ಸ್ವಲ್ಪ ಬುತ್ತಿ ತಂದು ಕೊಟ್ಟಳು. "ಈಗ ಪಟ್ಟಂತ ಹೇಳು.. ಕೆಳಗೆ ಕೂತ ಹಸು ಮೇಲಕ್ಕೇಳುವಾಗ, ಮೊದಲು ಎತ್ತುವುದು ಹಿಂದೇನೋ, ಮುಂದೆನೋ..?"
"ಹಿಂದೆ"
"ಹಾಗಿದ್ದರೆ ಕುದುರೆ...?"
"ಮುಂದೆ"
"ಮರದ ಮೇಲೆ ಹಾವಸೆ ಬೆಳೆದರೆ ಯಾವ ದಿಕ್ಕಿಗೆ ಇರುತ್ತೆ?"
"ಉತ್ತರದ ದಿಕ್ಕಿಗೆ"
"ಹದಿನೈದು ದನಗಳ ಮಂದೆ ಬೆಟ್ಟದ ಕೆಳಗೆ ಹುಲ್ಲು ಮೇಯ್ತಾ ಇದ್ದರೆ, ಒಂದೇ ದಿಕ್ಕಿಗೆ ತಿರುಗಿ ಹುಲ್ಲು ಮೇಯೋ ಹಸುಗಳೆಷ್ಟು?"
"ಎಲ್ಲಾ ಹದಿನೈದು ಹಸುಗಳೂ ಒಂದೇ ದಿಕ್ಕಿಗೆ ತಿರುಗಿರ್‍ತಾವೆ."
"ಹೂ ... ಪರ್ವಾಗಿಲ್ಲ. ಈಗ್ಲಾದ್ರೂ ನಿಜ ಹೇಳಿದ್ಯಲ್ಲ, ರೈತಾಪಿ ಹುಡುಗ ಅಂತ ನಂಬಬಹುದು, ಏನು ನಿನ್ನ ನಿಜವಾದ ಹೆಸರು?"
"ಜಾರ್ಜ್ ಪೀಟರ್"
"ಇದನ್ನಾದರೂ ಸರಿಯಾಗಿ ಙ್ಞಾಪಕ ಇಟ್ಕೊ. ನೀನು ಇಲ್ಲಿಂದ ಹೋಗೋಕೆ ಮುಂಚೆ ಅಲೆಕ್ಸಾಂಡರ್ ಪೀಟರ್ ಅಂತ ಹೇಳ್ಬೇಡ." ಈ ಥರಾ ಹುಡ್ಗೀರ ಲಂಗ ಹಾಕ್ಕೊಡು ನನ್ನಂಥವರನ್ನ ಮೂರ್ಖರನ್ನಾಗಿ ಮಾಡೊಕೆ ಆಗೋಲ್ಲ. ಮಗೂ..ಹೆಂಗಸರು ಸೂಜಿಗೆ ದಾರ ಪೋಣಿಸಬೇಕಾದರೆ, ಸೊಜೀನ ಗಟ್ಟಿಯಾಗಿ ಹಿಡಿದು ದಾರ ಹಿಡ್ದಿರೋ ಕೈನ ಹತ್ರ ತರ್ತಾರೆ. ನಿನ್ನ ಹಾಗೆ ದರ ಹಿಡ್ಕೊಂಡು ಸೂಜೀನ ಹತ್ರ ತರಲ್ಲ, ಮತ್ತೆ ಸೀಸದ ತುಂಡನ್ನ ಇಲಿಗೆ ಹೊಡೆದ್ರೆ, ನೀನೆ ಯೋಚ್ನೆ ಮಾಡು, ಅಷ್ಟು ಚೆನ್ನಾಗಿ ಗುರಿ ಕಟ್ಟಿ ಯಾರದ್ರೂ ಹುಡ್ಗಿ, ಹೊಡೀತಾಳಾ? ಗೋಲಿ ಆಡುವಾಗ ಹೊಡೆಯುವ ಹಾಗೆ. ಕಡೇ ಪಕ್ಷ ಅಂದ್ರೂ ಇಲಿಯಿಂದ ಆರಡಿ ದೂರ ಬೀಳ್ಬೇಕು, ಹುಡ್ಗಿ ಎಸೆಯೋ ಗುಂಡು ಗೊತ್ತಾಯ್ತಾ, ಮತ್ತೆ ಎಸೆದ ಗುಂಡನ್ನು ಹಿಡಿಯೋಕೆ, ಹುಡುಗೀರು ಕಾಲು ಜೋಡಿಸ್ಬೇಕ್ಯಾಕೆ? ಅಗಲ ಮಾಡಿದ್ರೆ ತಾನಾಗೇ ಲಂಗಕ್ಕೆ ಬೀಳುತ್ತಲ್ವಾ? ಕಾಲು ಜೋಡಿಸೋದು ಗಂಡಸರು. ಗೊತ್ತಾಯ್ತೇನೋ, ಮೊದ್ದೆ? ಸಾರಾ ಮೇರಿ ವಿಲಿಯಮ್ಸ್ ಜಾರ್ಜ್ ಪೀಟರ್. ಇನ್ನು ಮುಂದೆ ಹುಶಾರಾಗಿರು. ಈಗ ಹೊರಡು."

ಅಷ್ಟೇ, ಅವಳಿಗೆ ಕೃತಙ್ಞತೆ ಹೇಳಿ ಹೋಗಿ ಬರುತ್ತೇನೆ ಎಂದು ಹೇಳಲು ಕೂಡಾನಾನು ಅಲ್ಲಿರಲಿಲ್ಲ. ಒಂದೇ ಕ್ಷಣದಲ್ಲಿ ಮನೆಯ ಬಾಗಿಲು ದಾಟಿ, ನನ್ನ ದೋಣಿಯವರೆಗೂ ಒಂದೇ ಸಮ ಓಡಿ, ದೋಣಿ ಹತ್ತಿ, ಜಾಕ್ಸನ್ ಐಲ್ಯಾಂಡಿಗೆ ಬಂದೆ. ನಾನು ಮೊದಲು ಶಿಬಿರ ಹಾಕಿದ್ದ ಜಾಗದಲ್ಲಿ ಬೆಂಕಿ ಹತ್ತಿಸಿ, ಈಗಿನ ಶಿಬಿರದ ಬಳಿ ಓಡಿದೆ. ಅಲ್ಲಿ ಜಿಮ್ ನಿದ್ರಾದೇವಿಯ ಆಲಿಂಗನದಲ್ಲಿ ಮೈ ಮರೆತಿದ್ದ. ಅವನನ್ನು ಏಳಿಸಿ "ಜಿಮ್ ನಮಗೆ ಸಮಯವೇ ಇಲ್ಲ. ಇಲ್ಲಿಂದ ಹೋಗಬೇಕು, ನಮ್ಮ ಹಿಂದೆ ಜನ ಬಿದ್ದಿದ್ದಾರೆ" ಎಂದೆ. ಅವನು ಏನೂ ಕೇಳಲಿಲ್ಲ. ಒಂದಕ್ಷರವನ್ನೂ ಉಸುರಲಿಲ್ಲ. ಆದರೆ ಅವನು ಕೆಲಸ ಮಾಡಿದ ರೀತಿಯೇ ಅವನು ಎಷ್ಟು ಹೆದರಿದ್ದನೆಂದು ತೋರಿಸುತ್ತಿತ್ತು. ಈ ಪ್ರಪಂಚದಲ್ಲಿ ನಮ್ಮದೆಂದಿರುವ ಸಮಸ್ತವನ್ನೂ ನಾವು ತೆಪ್ಪದೋಣಿಗೆ ತುಂಬಿಸಿದ್ದೆವು. ನನ್ನ ಚಿಕ್ಕ ಚಿಟ್ಟು ದೋಣಿಯಲ್ಲಿ ಒಂದು ಸುತ್ತು ಹೋಗಿ ಬೇರೆ ಯಾವುದಾದರೂ ದೋಣಿಗಳು ಬರುತ್ತಿವೆಯೇನೋ ನೋಡಿದೆ. ಯಾವ ದೋಣಿಯೂ ಕಾಣಲಿಲ್ಲ. ನಾವು ತೆಪ್ಪ ದೋಣಿ ಹತ್ತಿ ಅದರಲ್ಲಿ, ಅಲ್ಲಿಂದ ನದಿಯ ಹರವಿನ ಜೊತೆಗೇ ಹೊರಟುಬಿಟ್ಟೆವು. ಪ್ರಕೃತಿ ನಿಶ್ಯಬ್ದವಾಗಿತ್ತು. ನೀರ ಹರವಿನ ಸದ್ದೂ ನದಿಯ ಮಧ್ಯೆ ಇರಲಿಲ್ಲ. ಈ ನಿಶ್ಯಬ್ದ ಸೌಂದರ್ಯಕ್ಕೆ ನಾವೂ ಮೌನವಾಗಿಯೇ ಕುಳಿತು ಕಾಣಿಕೆಯರ್ಪಿಸಿದರೂ, ಅದನ್ನು ಸವಿಯುವಷ್ಟು ಮನಸ್ಸು ಸರಳವಾಗಿರಲಿಲ್ಲ.