ಒಂದು ಅಂಗಡಿಯ ಸುತ್ತ ...
ನಗರದ ಮಧ್ಯ ಭಾಗದ ಮಾರುಕಟ್ಟೆಯ ಬಳಿ ಇರುವವ ನೂರಾರು ಅಂಗಡಿಗಳ ನಡುವೆ ಇತ್ತೀಚೆಗೆ ಖಾಲಿಯಾದ ಜಾಗದಿ ಒಂದು ಅಂಗಡಿ ತಲೆ ಎತ್ತಿತ್ತು. ರಾಮರಾಯರ ’ಮಾರುತಿ ಜನರಲ್ ಸ್ಟೋರ್ಸ್’ ದಿನಸಿ ಅಂಗಡಿಯ ಪಕ್ಕದಲ್ಲೇ ಆದ ಈ ಅಂಗಡಿಯ ಹೆಸರೇ ವಿನೋದಪ್ರಾಯವಾಗಿತ್ತು !
’ಕಪಿಸ್’ ಎಂಬ ನಾಮಾವಳಿ ಹೊತ್ತ ಔಷದಿ ಅಂಗಡಿ ಅದು !!!
ಕಪಿ’ಸ್ ಮೆಡಿಕಲ್ ಸ್ಟೋರ್ಸ್ !!!
ಇಂದು ಅಂಗಡಿಯ ಉದ್ಘಾಟನೆಯ ದಿನ. ವ್ಯಾಪಾರ ಮಾಡಿದವರಿಗೆಲ್ಲ ಒಂದು ಲಡ್ಡು ಫ್ರೀ !!!
ತಮ್ಮ ಮಾತಲ್ಲೇ ಇನ್ನೊಬ್ಬರಿಗೆ ತಲೆ ನೋವು ಬರಿಸುವ ಮೂಲೆ ಮನೆ ಸುಂದ್ರಮ್ಮ ಸುಮ್ಸುಮ್ನೆ ೨ ಪ್ಯಾಕೆಟ್ ಅನಾಸಿನ್ ಕೊಂಡರು. ಬಾಯಲ್ಲಿರೋ ಗೇಟುಗಳೆಲ್ಲ ಉದುರಿದ್ದರೂ ಶಾಮಣ್ಣೋರು ಕೋಲ್ಗೇಟ್ ಕೊಂಡರು ... ಹೀಗೆ .. ಒಂದು ಸಾಮಾನ್ಯ ಜನವರ್ಗದವರ ನಿತ್ಯನೋಟ.
ನಮ್ಮ ’ರಾಮ’ರಾಯರ ದಿನಸಿ ಅಂಗಡಿ ’ಮಾರುತಿ ಜನರಲ್ ಸ್ಟೋರ್ಸ್’ ಪಕ್ಕ ಈಗ ’ಕಪಿಸ್’ ಆಗಿದ್ದು ನೋಡಿ, ತಮಾಷೆ ಮಾಡಿದವರಿಗೇನೂ ಕಡಿಮೆ ಇರಲಿಲ್ಲ. ಇಷ್ಟಕ್ಕೂ ’ಕಪಿ’ಸ್’ ಎಂಬ ಹೆಸರೇಕೆ ಎಂಬ ಕುತೂಹಲವೆದ್ದಿದ್ದು ಸುಳ್ಳಲ್ಲ.
ಅಕ್ಕ-ಪಕ್ಕದ ಅಂಗಡಿ ... ಭಾಯಿ-ಭಾಯಿ ಸಂಬಂಧ ಕುದುರಿಸಲು.. ರಾಮರಾಯರು ಅಂಗಡಿಯವನನ್ನು ಕೇಳಿಯೇಬಿಟ್ಟರು. ಅಂಗಡಿಯ ಯಜಮಾನನ ಹೆಸರು ಕಪಿಲ್ ಅಂತೆ. ಹಾಗಾಗಿ ಕಪಿಲ್ಸ್ ಎನ್ನುವುದರ ಬದಲು ಮಾಡರ್ನ್ ಆಗಿ ಕಪಿ’ಸ್ ಎಂದಿಟ್ಟಿದ್ದ. ಆದರೆ ಹೆಂಡತಿಗೆ ಮೈ ಹುಷಾರಿಲ್ಲದೆ ಹೋಗಿ ಈ ದಿನ ಆತ ದೆಹಲಿಯಿಂದ ಬರಲಾಗಲಿಲ್ಲವಂತೆ.
ರಾಮರಾಯರ ತಲೆ ಕೆಟ್ಟಿತು. ದೆಹಲಿಯಿಂದ ಇಲ್ಲಿಗೆ ಬಂದು ಅಂಗಡಿ ಇಡುವ ಪ್ರಮೇಯವಾದರೂ ಏನು. ಅಲ್ಲಿ ಒಂದು ಅಂಗಡಿ ಇಡುವಷ್ಟು ಜಾಗ ಗತಿ ಇಲ್ಲವೇ? ಎಲ್ಲೆಡೆಯಿಂದ ಬೆಂಗಳೂರಿಗೆ ಬಂದು ನೆಲೆಸುತ್ತಿದ್ದರೆ, ನಮಗೆ ಜಾಗವೆಲ್ಲಿ? ಇವರಿಂದಾಗಿಯೇ ಭೂಮಿಯ ಬೇಲೆ ಎಟುಕಲಾರದಷ್ಟು ಮೇಲಕ್ಕೆ ಹೋಗಿದೆ.
ಹೀಗೇಕೆಂದು ರಾಯರು ಆತನನ್ನು ಕೇಳಿಯೇಬಿಟ್ಟರು. ಅವರೆಂದರು "ಹಾಗಲ್ಲ, ಈ ನಡುವೆ ಕಪಿಲ್ ಅವರ ಹೆಂಡತಿ ಆರೋಗ್ಯ ಕೆಟ್ಟು, ದೆಹಲಿಯ ಛಳಿ ತಡೆಯಲಾಗುದೇ ಇರುವುದರಿಂದ, ಗಂಟು ಮೂಟೆ ಕಟ್ಟಿ ಇಲ್ಲಿಗೇ ಬಂದು ನೆಲೆಸುವವರಿದ್ದಾರೆ. ಅಲ್ಲಿ ನೆಡೆಸಿದ್ದ ಇದೇ ವ್ಯಾಪಾರ ಇಲ್ಲೂ ನೆಡೆಸಲಿದ್ದಾರೆ" ಎಂದು.
ರಾಯರಿಗೆ ಏಕೋ ಸಮಾಧಾನವಾಗಲಿಲ್ಲ. ದೆಹಲಿ ನಾರ್ತ್’ನಲ್ಲಿ ಇರಬಹುದು ಆದರೆ ನಾರ್ತ್ ಪೋಲ್’ನಲ್ಲಿ ಅಲ್ಲ. ಇನ್ನೊಬ್ಬರ ಜೀವನದಲ್ಲಿ ನಾನ್ಯಾಕೆ ಮೂಗು ತೂರಿಸಲಿ ಎಂದು ಮೂಗು ತುರಿಸಿಕೊಳ್ಳುತ್ತ ತಮ್ಮಂಗಡಿಯತ್ತ ಹೆಜ್ಜೆ ಹಾಕಿದರು.
ಮೆಡಿಕಲ್ ಅಂಗಡಿಯಾತ ಇವರು ಹೋದತ್ತ ನೋಡುತ್ತ ಕುಹಕವಾಗಿ ನಕ್ಕ........ ಯಾಕೋ?
ಮಾರನೆಯ ದಿನದಿಂದ ’ಹೊಸ ಅಂಗಡಿ’ ಎಂಬ ಭರಾಟೆ ಕಡಿಮೆಯಾಗಿ ಎಂದಿನಂತೆ ಜನ ಜೀವನದ ನೆಡೆದಿತ್ತು. ರಾಮರಾಯರಿಗೆ ಏನೋ ಕಸಿವಿಸಿ. ತಮ್ಮಂಗಡಿ ತೆರೆದಿರುವಷ್ಟೂ ಹೊತ್ತೂ ಅವರು ಬಿಜಿ ಇದ್ದರೂ, ಬಿಡುವು ಮಾಡಿಕೊಂಡು ತಮ್ಮ ಪಕ್ಕದ ಅಂಗಡಿಯಾದ ’ಮಂಜರಿ ಜ್ಯುವೆಲರ್ಸ್’ ಒಡೆಯ ಪಾರೇಖ್’ನನ್ನು ಸ್ವಲ್ಪ ಹೊತ್ತು ಮಾತನಾಡಿಸುತ್ತಿದ್ದರು. ಬಹಳ ವರ್ಷಗಳಿಂದ ಇಬ್ಬರೂ ಇಲ್ಲಿ ವ್ಯಾಪಾರ ಮಾಡುತ್ತಿದ್ದವರು.
ಯಾಕೋ ಇದ್ದಕ್ಕಿದಂತೆ ಊರಲ್ಲಿ ಅಪ್ಪನಿಗೆ ಮೈ ಹುಷಾರಿಲ್ಲ ಎಂದು, ತಮಗೂ ಒಂದು ಮಾತು ಹೇಳದೆ, ರಾತ್ರೋ ರಾತ್ರಿ ಊರು ಬಿಟ್ಟಿದ್ದು ಮಾತ್ರ ಇವರಿಗೆ ಹಿಂಸೆಯಾಗಿತ್ತು. ಊರು ಬಿಟ್ಟು ಇಲ್ಲಿ ಬಂದು ನೆಲೆಸಿ, ಈಗ ಇದ್ದಕ್ಕಿದಂತೆ ಜಾಗ ಖಾಲಿ ಮಾಡುವ ಪ್ರಸಂಗವೇನು ಬಂತೋ ಪಾಪ. ಈಗಿನ ಅಂಗಡಿಯವನು ಅಷ್ಟು ವಾಚಾಳಿಯೂ ಅಲ್ಲ. ಜೊತೆಗೆ ಇಲ್ಲದ-ಸಲ್ಲದ ಪ್ರಶ್ನೆ ಕೇಳುತ್ತಾರೆಂದು ರಾಯರನ್ನು ಕಂಡ ಕೂಡಲೆ ಆತ ಭಯಂಕರ ಬಿಜಿ ಇರುವಂತೆ ತೋರುತ್ತಿದ್ದ. ಸೂಕ್ಷ್ಮವಾಗಿ ಗಮನಿಸಿದ ರಾಯರೂ ಅವನಿಂದ ದೂರವೇ ಇದ್ದರು. ಅವನ ಮುಖದಲ್ಲಿ ಏನೋ ದೀರ್ಘಾಲೋಚನೆ. ಏನೋ ಕಳವಳ. ಒಟ್ಟಿನಲ್ಲಿ ಮೂಡಿ.
ಪ್ರತಿ ದಿನವೂ, ಮಧ್ಯಾನ್ನದ ಹೊತ್ತಿಗೆ, ಅಂದರೆ ರಾಯರು ಊಟಕ್ಕೆ ಹೋಗುವ ಸಮಯದಲ್ಲಿ, ಒಂದು ಗಾಡಿ ಬಂದು, ಬೂದು ಬಣ್ಣದ ಕಾರ್ಟನ್ ಡಬ್ಬಗಳಲ್ಲಿ ಔಷಧಿಗಳನ್ನು ಕೊಟ್ಟು ಹೋಗುತ್ತಿತ್ತು. ಒಂದು ವಿಧದಲ್ಲಿ ಒಳ್ಳೆಯದು. ತಮ್ಮ ಕಾರನ್ನು ಹೊರ ತೆಗೆದು ಹೋಗುವ ಹೊತ್ತಿಗೆ ಈ ಗಾಡಿ ಅಲ್ಲಿಗೆ ಬಂದು ಅಡ್ಡ ನಿಲ್ಲಿಸಿ, ರಾಯರು ವಾಪಸ್ಸು ಬರುವ ವೇಳೆಗೆ ಗಾಡಿ ಹೊರಟಿರುತ್ತಿತ್ತು. ಹಾಗಾಗಿ ಅಂಗಡಿಯ ಹುಡುಗ ತನ್ನ ಪಾರ್ಕಿಂಗ್ ಜಾಗವನ್ನೂ ನೋಡಿಕೊಳ್ಳುವ ಕೆಲಸ ತಪ್ಪಿತ್ತು !!!
ಒಂದು ದಿನವೂ ರಾಯರ ಮನಸ್ಸಲ್ಲಿ, ಒಂದೆರಡು ಬೂದು ಬಣ್ಣದ ಡಬ್ಬಗಳನ್ನು ಡೆಲಿವರ್ ಮಾಡಲು ಅರ್ಧ / ಮುಕ್ಕಾಲು ಘಂಟೆ ಬೇಕೆ ?
ಒಮ್ಮೆ ಹೀಗೆ ಊಟಕ್ಕೆ ಹೊರಡುವ ಮುನ್ನ, ಅಂಗಡಿಯ ಮುಂದೆ ಒಂದು ಪೋಲೀಸ್ ಜೀಪ್ ನಿಂತಿತು. ಅದನ್ನು ಕಂಡ ಕೂಡಲೇ ರಾಯರು, ಲಗುಬುಗೆಯಿಂದ ಎದ್ದು "ಬಾರಪ್ಪಾ, ಹೇಗಿದ್ದೀಯ? ತುಂಬಾ ದಿನ ಅಯ್ತು ನೋಡಿ" ಅಂದರು. ಇನ್ಸ್ಪೆಕ್ಟರ್ ಧನಂಜಯ "ನಾನು ಚೆನ್ನಾಗಿದ್ದೀನಿ ಅಂಕಲ್. ನೀವು ಹೇಗಿದ್ದೀರಾ" ಎಂದೆಲ್ಲ ಉಭಯಕುಶಲೋಪರಿ ಮಾತನಾಡುತ್ತ, ನಂತರ ಇಬ್ಬರೂ ಜೀಪನ್ನೇರಿ ರಾಯರ ಮನಗೆ ಊಟಕ್ಕೆ ಹೋದರು.
ಧನಂಜಯನಿಗೆ ಬೇರೆ ಕೆಲಸವಿದ್ದುದರಿಂದ, ಇವರೂ ಬೇಗ ಊಟ ಮುಗಿಸಿ, ಅಂಗಡಿಗೆ ವಾಪಸ್ಸಾದರು. ದಾರಿಯಲ್ಲಿ ಬರುತ್ತ ಧನಂಜಯ ಹೇಳಿದ, ಈ ಪ್ರಾಂತ್ಯದಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ನೆಡೆಯುತ್ತಿರುವುದಾಗಿ ತಮಗೆ ಮಾಹಿತಿ ಸಿಕ್ಕಿರುವುದರಿಂದ, ತಾತ್ಕಾಲಿಕವಾಗಿದೆ ಇಲ್ಲಿಗೆ ವರ್ಗಾವಣೆ ಆಗಿದೆಯೆಂದೂ, ಸ್ವಲ್ಪ ದಿನ ಇದೇ ಊರಿನಲ್ಲಿ ಇರ್ತೀನಿ ಎಂದು ತಿಳಿಸಿ ಹುಷಾರಾಗಿರಿ ಎಂದೂ ತಿಳಿಸಿ ಹೋದ.
ಅಂಗಡಿಯೊಳಗೆ ಕಾಲಿಡುವಾಗ ಮೆಡಿಕಲ್ ಅಂಗಡಿಯವನು ಇವರನ್ನು ಯಾಕೋ ದುರುಗುಟ್ಟಿ ನೋಡುತ್ತಿದ್ದಂತೆ ಅನ್ನಿಸಿತು. ಇರಲಿ ಎಂದು "ಏನಾಯ್ತು, ಆರೋಗ್ಯಾನೇ" ಎಂದರು ರಾಯರು. ಅದಕ್ಕವನು "ಇವತ್ತು ಡೆಲಿವರಿ ಟ್ರಕ್ ಬರಲೇ ಇಲ್ಲ ನೋಡಿ" ಅಂದ. ಅಲ್ಲಾ, ಇವನ ಅಂಗಡಿಗೆ ಟ್ರಕ್ ಬರಲಿಲ್ಲ ಅಂದರೆ ನಾನೇನು ಮಾಡಲಿ?
ತಮ್ಮ ಕೆಲಸದಲ್ಲಿ ಬಿಜಿಯಾದರು ರಾಯರು. ಹೀಗೇ ಒಂದು ವಾರ ಸಾಗಿತು. ಎಲ್ಲೆಡೆ ಪ್ರಶಾಂತವಾಗಿಯೇ ಇತ್ತು. ಕಪಿ’ಸ್ ಯಜಮಾನ ಊರಿಗೆ ಬಂದಿದ್ದಾನೆ ಎಂದು ಪಕ್ಕದಂಗಡಿಯವನು ಹೇಳಿದ. ಅವನನ್ನು ಮಾತನಾಡಿಸಬೇಕು ಎಂಬ ಹಂಬಲ ರಾಯರಿಗೆ.
ಮರುದಿನ ಇವರ ಅಂಗಡಿಗೆ ಒಬ್ಬಾತ ಬಂದ. ಕಟ್ಟುಮಸ್ತಾದ ಆಳು. ಕಣ್ಣುಗಳಲ್ಲಿ ತೀಕ್ಷ್ಣತೆ ಇತ್ತು. ನಡಿಗೆಯಲ್ಲಿ ಎಚ್ಚರಿಕೆತನ ಇತ್ತು. ಆತನೇ ಕಪಿಲ್. ಅವನನ್ನು ನೋಡುತ್ತಿದ್ದಂತೇ ರಾಯರಿಗೆ ಯಾಕೋ ಭಯವಾಯಿತು. ಮೊದಲಿಗೆ ಆತನಿಗೆ ಕನ್ನಡ ಬರುತ್ತಿರಲಿಲ್ಲ. ಇವರಿಗೆ ಅವನ ಭಾಷೆ ಅರಿವಿರಲಿಲ್ಲ. ತರ್ಜುಮೆ ಮಾಡಲು ಪಕ್ಕದ ಅಂಗಡಿಯಾತ. ಅವಏನು ಹೇಳುತ್ತಿದ್ದನೋ ಕಪಿಲ್’ಗೆ ಸರಿ ಹೋದಂತೆ ಕಾಣುತ್ತಿರಲಿಲ್ಲ. ಕೊನೆಗೆ ಆತ ನೀಡಿದ ಹಸ್ತಲಾಘವ ಪಡೆದು ಸಾಗಹಾಕಿದರು. ಬಲು ಗಟ್ಟಿಯಾದ ಹಸ್ತ.
ಅಂಗಡಿ ಹುಡುಗನೂ ಇರಲಿಲ್ಲವಾದ್ದರಿಂದ, ಯಾಕೋ ಭಯ ಮೂಡಿ ಅಂಗಡಿ ಬಾಗಿಲು ಹಾಕಿ ಮನೆಗೆ ಹೋದರು. ಅರ್ಧ ಘಂಟೆಯ ನಂತರ ಅವರ ಮನೆ ಮುಂದೆ ಪೋಲೀಸ್ ಜೀಪಿನಿಂದ ಇಳಿದ ಧನಂಜಯ ದಡ ಧಡ ಎಂದು ಒಳ ಬಂದ. ಏನಾಯ್ತು ಎಂಬಂತೆ ನೋಡಿದರು ರಾಯರು. "ಅಂಗಡೀ ಬಾಗಿಲು ಹಾಕಿತ್ತು. ನಿಮಗೇನಾಯ್ತೋ ಎಂದುಕೊಂಡು ಬಂದೆ" ಎಂದ. ಅವನ ಕಾಳಜಿಗೆ ಸಂತಸವಾಯ್ತು ರಾಯರಿಗೆ.
ಏನೂ ಮುಚ್ಚಿಡದೆ ಎಲ್ಲ ವಿಷಯ ಅರುಹಿದರು. ಆತನಲ್ಲಿ ಯಾವ ಭಾವನೆಯೂ ಕಾಣಲಿಲ್ಲ. ಆದರೆ ತೀವ್ರವಾಗಿ ಏನೋ ಯೋಚಿಸುತ್ತಿದ್ದಾನೆ ಎಂಬುದು ಅರಿವಾಯ್ತು. ಮರುದಿನ ಊಟದ ಸಮಯಕ್ಕೆ ಬರುವುದಾಗಿ ಹೇಳಿ ಹೊರಟು ಹೋದ.
ಮರುದಿನ ಊಟದ ಸಮಯಕ್ಕೆ ಧನಂಜಯ ಬೈಕಿನಲ್ಲಿ ಬಂದು ರಾಯರನ್ನು ಕರೆದುಕೊಂಡು ಹೋದ. ಅಂಗಡಿಯಲ್ಲಿ ಹುಡುಗ ಮಾತ್ರ. ಇವರುಗಳು ಅತ್ತ ಸರಿದಂತೆ ದೂರದಲ್ಲಿ ಮತ್ತೊಂದು ಬೈಕ್ ಬಂತು. ಅದರಿಂದ ಇಳಿದಾತ ಸೀದ ರಾಯರ ಅಂಗಡಿ ಹೊಕ್ಕು, ಹುಡುಗನ ಜೊತೆ ಮಾತನಾಡಿದ. ಹುಡುಗ ಭೀತನಾಗಿದ್ದ. ಬಂದಾತ ರಾಯರ ಜಾಗದಲ್ಲಿ ಪೇಪರ್ ಅಡ್ಡ ಹಿಡಿದು ಕುಳಿತ. ಅದೇ ಹೊತ್ತಿಗೆ ಪಕ್ಕದ ಅಂಗಡಿಯ ಮುಂದೆ ಸರಬರಾಜು ಮಾಡುವ ಟ್ರಕ್ ನಿಂತಿತು.
ಟ್ರಕ್ ಹೋದ ನಂತರ, ರಾಯರ ಸೀಟ್ ಬಿಟ್ಟು ಹೊರ ನೆಡೆದ ಈತ. ಸ್ವಲ್ಪ ಹೊತ್ತಿನಲ್ಲಿ, ಧನಂಜಯ ಮತ್ತು ರಾಯರು ಹಿಂದಿರುಗಿದರು. ರಾಯರ ಜೊತೆ ಒಳ ನೆಡೆದ ಧನಂಜಯ. ಇನ್ನೂ ಪಕ್ಕದ ಅಂಗಡಿಯ ಬಗ್ಗೆಯೇ ಮಾತನಾಡುತ್ತಿದ್ದರು. ವಾತಾವರಣ ತಿಳಿಯಾಗಿಸಲು ರಾಯರು ಅಂಗಡಿಯ ಹೆಸರಿನ ಬಗ್ಗೆ ಹಾಸ್ಯ ಮಾಡಿದರು.
ಕಪಿ ಎನ್ನುವ ಬದಲಿಗೆ ಪಿಕ ಎಂದಾದರೂ ಇಡಬಾರದಿತ್ತೇ ಎಂದರು. ಅದರಲ್ಲಿ ಹಾಸ್ಯವೇನೂ ಕಾಣದ ಧನಂಜಯ ನಗಲಿಲ್ಲ. ಬದಲಿಗೆ ಅಂಗಡಿಯ ಹೆಸರನ್ನು ಒಂದು ಚೀಟಿಯಲ್ಲಿ ಬರೆದು, ಏನೇನೋ ಗೆರೆಗಳನ್ನು ಎಳೆಯುತ್ತಿದ್ದ.
ಇದ್ದಕ್ಕಿದ್ದಂತೆ ಧನಂಜಯನ ಮುಖ ಬಿಗಿದುಕೊಂಡಿತು. ಮುಖ ಕೆಂಪಾಯಿತು. ಹೀಗೂ ಇರಬಹುದೇ ಎಂದು ಸೋಜಿಗವಾಯಿತು. ಚೀಟಿಯನ್ನು ಜೇಬಿನಲ್ಲಿ ತುರುಕಿಕೊಂಡವನೇ, ಸೀದ ಎದ್ದು ನೆಡೆದ.
ಸಂಜೆ ಇದ್ದಕ್ಕಿದ್ದಂತೆ ನಾಲ್ಕಾರು ಪೋಲೀಸ್ ವ್ಯಾನುಗಳು, ಕಾರುಗಳು ಸಣ್ಣ ಪುಟ್ಟ ವರ್ತಕರ ಶಾಂತಿಬೀಡಾಗಿದ್ದ ಆ ಪ್ರದೇಶದಲ್ಲಿ ಭೀತಿ ಮೂಡಿಸಿತ್ತು. ಧಡ ಧಡ ಕೆಳಗಿಳಿದ ಪೋಲೀಸರು ಕಪಿಸ್ ಅಂಗಡಿಯನ್ನು ಮುತ್ತಿದರು. ಹಲವಾರು ಜನರನ್ನು ಬಂಧಿಸಿ ಎಳೆದೊಯ್ದರು. ಇಷ್ಟು ಜನರು ಒಂದು ಸಣ್ಣ ಅಂಗಡಿಯಲ್ಲಿ ಹೇಗಿದ್ದರು ಎಂಬುದು ಎಲ್ಲರಿಗೂ ಆಶ್ಚರ್ಯವಾಗಿತ್ತು.
----
ಕುರ್ಚಿಯ ಮೇಲೆ ಕಾಲೂರಿ ಕುಳಿತು, ಹೆಗಲ ಮೇಲಿನ ಶಲ್ಯದಿಂದ ಗಾಳಿ ಹಾಕಿಕೊಳ್ಳುತ್ತ ಫ್ಯಾನಿನ ಕೆಳಗೆ ಕೂತಿದ್ದರೂ ಬೆವರುತ್ತಿದ್ದರು ರಾಮರಾಯರು. ಅವರ ಪಕ್ಕದಲ್ಲಿ, ಚಿಕ್ಕಂದಿನಿಂದಲೂ ಕಂಡಿದ್ದ ಅವರ ಸ್ನೇಹಿತನ ಮಗ, ಇನ್ಸ್ಪೆಕ್ಟರ್ ಧನಂಜಯ ಕುಳಿತಿದ್ದ.
ಎದುರಿಗೆ ಕುಳಿತವನು ಡಿಟೆಕ್ಟೀವ್ ಮೃತ್ಯುಂಜಯ. ಮಧ್ಯಾನ್ನ ಇವರಿಬ್ಬರೂ ಊಟಕ್ಕೆ ಹೋಗಿದ್ದಾಗ, ರಾಯರ ಕುರ್ಚಿಯಲ್ಲಿ ಕುಳಿತು, ಟ್ರಕ್ಕಿನಲ್ಲಿ ಬಂದ ಸಾಮಾನನ್ನು ಕಣ್ಣಳತೆಯಲ್ಲೆ ಇದೇ ಇರಬಹುದು ಎಂದು ಊಹಿಸಿದ ಮೃತ್ಯಂಜಯ. ರಾಯರ ಅಂಗಡಿಯೊಳಗೆಲ್ಲ ಒಂದು ಸುತ್ತು ಹೊಡೆದು ರಾಯರ ಗಮನಕ್ಕೆ ಬಾರದಂತೆ ನೆಡೆದಿರುವ ಕೆಲಸಗಳನ್ನೆಲ್ಲ ಅವಲೋಕಿಸಿ, ಸಂಜೆಗೇ ಮೆಡಿಕಲ್ ಅಂಗಡಿಗೆ ರೈಡ್ ಮಾಡಿ ಮುಂದಾಗಬಹುದಾದ ಭಾರೀ ಅನಾಹುತ ತಪ್ಪಿಸಿದ ಮೃತ್ಯುಂಜಯ.
ಮತ್ತೊಮ್ಮೆ ಅದೇ ಪ್ರಶ್ನೆ ಕೇಳಿದ್ದರು ರಾಯರು "ಅಂದರೆ, ನನ್ನ ಅಂಗಡಿ ಪಕ್ಕದಲ್ಲಿ ಅಂಗಡಿ ಇಟ್ಟವನು ನಿಜಕ್ಕೂ ಕಪಿಲ್ ಅನ್ನೋ ಮನುಷ್ಯ ಅಲ್ಲ. ಬದಲಿಗೆ ಅವರೆಲ್ಲ ಉಗ್ರಗಾಮಿಗಳು, ಅಲ್ಲವೇ?"
ಧನಂಜಯ ನುಡಿದಿದ್ದ "ಹೌದು ಅಂಕಲ್. ನಿಮ್ಮ ಅಂಗಡಿ ಪಕ್ಕದಲ್ಲಿದ್ದ ಜ್ಯುವೆಲರ್ಸ್’ನನ್ನು ಪ್ರಾಣ ಬೆದರಿಕೆ ಒಡ್ಡಿ ಅವನನ್ನು ಓಡಿಸಿ, ಇವರುಗಳು ಅಲ್ಲಿಗೆ ಬಂದರು. ಇಲ್ಲೇನೋ ನೆಡೆಯುತ್ತಿದೆ ಎಂಬ ಅನುಮಾನ ಮೃತ್ಯುಂಜಯನಿಗೆ ಬಂದಿತ್ತು. ತಾತ್ಕಾಲಿಕವಾಗಿ ನನ್ನನ್ನು ಇಲ್ಲಿಗೆ ವರ್ಗಾಯಿಸಿದ್ದೂ ಅದೇ ಕಾರಣಕ್ಕೆ. ಪ್ರತಿ ದಿನ ಟ್ರಕ್’ನಲ್ಲಿ ಬರುವ ವಸ್ತುಗಳು ಔಷಧಿಗಳಲ್ಲ, ಸಿಡಿಮದ್ದುಗಳು, ಗಾರೆ ಕೆಲಸದ ವಸ್ತುಗಳು ಇತ್ಯಾದಿ. ಸಿಡಿಮದ್ದುಗಳನ್ನು ನಿಮ್ಮ ಅಂಗಡಿಯಲ್ಲೆಡೆ ಹೂತು ಇನ್ನೆರಡು ದಿನಗಳಲ್ಲಿ ಸಿಡಿಸಲಿದ್ದ ಭಯೋತ್ಪಾದಕರು ಇವರು"
ರಾಯರು "ನಿಮಗೆ ಅನುಮಾನ ಬಂದಿದ್ದಾದರೂ ಹೇಗೆ" ಎಂದು ಕೇಳಿದರು.
"ಇಲ್ಲೇ, ಎಲ್ಲೋ, ಏನೋ ನೆಡೆಯುತ್ತಿದೆ ಎಂಬಷ್ಟೆ ವಿಷಯ ನಮಗೆ ತಿಳಿದಿದ್ದು. ಈ ಪ್ರದೇಶಕ್ಕೆ ಹೊಸಬರು ಯಾರು ಬಂದಿದ್ದಾರೆ, ಯಾರ ಮನೆಗೆ ಹೊಸದಾಗಿ ಯಾರು ಬಾಡಿಗೆಗೆ ಬಂದಿದ್ದಾರೆ ಎಂದೆಲ್ಲ ಬೆಂಬೆತ್ತಿದಾಗ ಹೊಸದಾಗಿ ಅಂಗಡಿ ಯಾಕೆ ಇಟ್ಟಿರಬಾರದೂ ಎಂದು ಯೋಚಿಸಿ ನೋಡಿದಾಗ ನಿಮ್ಮ ಅಂಗಡಿ ಪಕ್ಕದಲ್ಲೇ ಒಂದು ಅಂಗಡಿ ಶುರುವಾಗಿರುವುದು ಕಂಡುಬಂತು. ಜೊತೆಗೆ ನೀವು ನಿಮಗೇ ಅರಿಯದೆ ಒದಗಿಸಿದ ಮಾಹಿತಿಗಳು, ಮೃತ್ಯುಂಜಯ ಕಂಡುಹಿಡಿದ ವಿಷಯಗಳು ಮತ್ತು ...
ರಾಯರು "ಮತ್ತೆ?"
ಧನಂಜಯ ನುಡಿದ "ಕಪಿ’ಸ್ ಎಂಬ ಆ ಹೆಸರು ... KAPI ಎನ್ನುವುದರ ಬದಲಿಗೆ PIKA ಅಂತೇಕೆ ಕರೆಯಬಾರದಿತ್ತು ಎಂದು ನೀವು ನುಡಿದಾಗ, ನನ್ನ ತಲೆಯಲ್ಲಿ ಆ ಹೆಸರು ಗಿರಕಿ ಹೊಡೆಯಲಾರಂಭಿಸಿ ಒಂದು ಹೆಸರಿಗೆ ಬಂದು ಸಿಕ್ಕಿಕೊಂಡಿತು. ಅದು PAKI's ಎಂದು !!!!!
ಧನಂಜಯ ಖಿನ್ನನಾಗಿ ಮುಂದುವರೆಸಿದ "ನಾವು ಇಷ್ಟೆಲ್ಲ ಬುದ್ದಿ ಉಪಯೋಗಿಸಿ, ತೀವ್ರಗತಿಯಲ್ಲಿ ಕಾರ್ಯಾಚರಣೆ ನೆಡೆಸಿದರೂ, ಕಪಿಲ್ ಎಂಬಾತ ತಪ್ಪಿಸಿಕೊಂಡ .... ತನ್ನ ಮುಂದಿನ ಕಾರ್ಯಾಚರಣೆ ಎಲ್ಲಿ ನೆಡೆಸಲಿದ್ದಾನೋ?"
{ಇದೊಂದು ಕಾಲ್ಪನಿಕ ಕಥೆ ಮಾತ್ರ ... ನಿಜವಾಗದಿರಲಿ ಎಂಬುದೇ ಆಶಯ}
Comments
ಉ: ಒಂದು ಅಂಗಡಿಯ ಸುತ್ತ ...
In reply to ಉ: ಒಂದು ಅಂಗಡಿಯ ಸುತ್ತ ... by kavinagaraj
ಉ: ಒಂದು ಅಂಗಡಿಯ ಸುತ್ತ ...
In reply to ಉ: ಒಂದು ಅಂಗಡಿಯ ಸುತ್ತ ... by gopaljsr
ಉ: ಒಂದು ಅಂಗಡಿಯ ಸುತ್ತ ...
In reply to ಉ: ಒಂದು ಅಂಗಡಿಯ ಸುತ್ತ ... by kavinagaraj
ಉ: ಒಂದು ಅಂಗಡಿಯ ಸುತ್ತ ...
ಉ: ಒಂದು ಅಂಗಡಿಯ ಸುತ್ತ ...
In reply to ಉ: ಒಂದು ಅಂಗಡಿಯ ಸುತ್ತ ... by ಗಣೇಶ
ಉ: ಒಂದು ಅಂಗಡಿಯ ಸುತ್ತ ...