ಸ್ಮರಣಶಕ್ತಿ ಕುಂದಿಸುವ ಕಂಪ್ಯೂಟರ್

ಸ್ಮರಣಶಕ್ತಿ ಕುಂದಿಸುವ ಕಂಪ್ಯೂಟರ್

ಸ್ಮರಣಶಕ್ತಿ ಕುಂದಿಸುವ ಕಂಪ್ಯೂಟರ್
ಕಂಪ್ಯೂಟರ್,ಅಂತರ್ಜಾಲದಲ್ಲಿ ಬೇಕಾದ ಮಾಹಿತಿ ಸುಲಭವಾಗಿ ಸಿಗುತ್ತದೆ ಎನ್ನುವ ಅಂಶ ನಮ್ಮ ಸ್ಮರಣಶಕ್ತಿ ಕುಂದಿಸುತ್ತದೆ ಎನ್ನುವುದು ಸಂಶೋಧನೆಗಳಿಂದ ದೃಡ ಪಟ್ಟಿದೆ.ಬೇಕಾದ ಮಾಹಿತಿಯನ್ನು ಗೂಗಲ್‍ನಂತಹ ‍ಸರ್ಚ್ ಇಂಜಿನ್‍ಗಳು  ‍ಕ್ಷಣಮಾತ್ರದಲ್ಲಿ ಹುಡುಕಿಕೊಡುತ್ತವೆ,ಮತ್ಯಾಕೆ ಅವುಗಳನ್ನು ನೆನಪಿನಲ್ಲಿರಿಸುವ ಕಷ್ಟ ತೆಗೆದುಕೊಳ್ಳಬೇಕು ಎನ್ನುವುದು ನಮ್ಮ ಯೋಚನಾಲಹರಿಯಲ್ಲಿ ಸೇರಿಹೋಗುತ್ತದೆ.ಇದನ್ನು ಖಚಿತ ಪಡಿಸಿಕೊಳ್ಳಲು ಹಲವಾರು ಪರೀಕ್ಷೆಗಳನ್ನೂ ನಡೆಸಿ,ಸಂಶೋಧಕರು ತಮ್ಮ ಪ್ರಬಂಧ ಮಂಡಿಸಿದ್ದಾರೆ.ಜನರನ್ನು ಎರಡು ಗುಂಪುಗಳಾಗಿಸಿ,ಹಲವು ವಿಷಯಗಳನ್ನು ಹೇಳುವಾಗ,ಒಂದು ಗುಂಪಿಗೆ ಮಾಹಿತಿಯು ಕಂಪ್ಯೂಟರಿನಲ್ಲಿ ಉಳಿಯುತ್ತದೆ ಎಂದೂ, ಇನ್ನೊಂದಕ್ಕೆ ಮಾಹಿತಿ ಎಲ್ಲೂ ಉಳಿಯದು ಎಂದೂ ಸೂಚಿಸಿಲಾಯಿತು.ನಂತರ ಹಂಚಿಕೊಂಡ ಮಾಹಿತಿಯ ಮೇಲೆ ಪ್ರಶ್ನೆಗಳನ್ನು ಕೇಳಿದಾಗ,ಮೊದಲ ಗುಂಪು ಉತ್ತರಿಸಲು ಕಂಪ್ಯೂಟರ್ ಬಳಕೆ ಮಾಡುವುದೂ ಕಂಡು ಬಂತು.ಎರಡನೆಯ ಗುಂಪು ಮಾಹಿತಿಯನ್ನು ನೆನಪಿನಲ್ಲಿರಿಸಲು ಶಕ್ತವಾಯಿತು. ಇಂತಹ ಇನ್ನೂ ಕೆಲವು ಪರೀಕ್ಷೆಗಳು ಇದೇ ತೆರನ ಫಲಿತಾಂಶ ನೀಡಿದುವು.ತರಗತಿಗಳಲ್ಲೂ ಪ್ರಶ್ನೆಗಳನ್ನು ಕೇಳಿದಾಗ,ಸ್ಮಾರ್ಟ್‌ಪೋನುಗಳ ಮೂಲಕ ಅಂತರ್ಜಾಲದಲ್ಲಿ ಹುಡುಕಾಡಿ ಉತ್ತರಿಸುವ ಯತ್ನ ಮಾಡುವ ಟ್ರೆಂಡ್ ಬೆಳೆದಿದೆ.ವಿದ್ಯಾಥಿಗಳು ಬುದ್ಧಿವಮ್ತರಾ
-------------------------------
ಗೂಗಲ್ ಸಯನ್ಸ್ ಫೇರ್:ಹುಡುಗಿಯರೇ ಮುಂದೆ
ಗೂಗಲ್ ಸಯನ್ಸ್ ಫೇರ್ ಎನ್ನುವ ವಿಜ್ಞಾನ ಸಂಶೋಧನಾ ಸ್ಪರ್ಧೆಯಲ್ಲಿ ಹೆಚ್ಚಿನ ಬಹುಮಾನಗಳನ್ನು ಹುಡುಗಿಯರೇ ಬಗಲಿಗೇರಿಸಿಕೊಂಡಿದ್ದಾರೆ.ಕಂಪ್ಯೂಟರ್ ಕಂಪೆನಿಯೊಂದು ನಡೆಸಿದ ಸ್ಪರ್ಧೆಯಲ್ಲಿ ಮೊದಲ ಮುರೂ ಬಹುಮಾನಗಳೂ ಬಯೋಸಯನ್ಸ್‌ಗೆ ಸಂಬಂಧಿಸಿದ ಸಂಶೋಧನೆಗಳ ಪಾಲಾಗಿರುವುದೂ ಇನ್ನೊಂದು ವಿಶೇಷ.ಅಂಡಾಶಯದ ಕ್ಯಾನ್ಸರಿನಿಂದ ಬಳಲುವ,ಕೇಮೋತೆರಪಿ ಚಿಕಿತ್ಸೆಗೆ ಬಗ್ಗದ ರೋಗಿಗಳಿಗೆ ಚಿಕಿತ್ಸೆ ನೀಡುವ ಕ್ರಮವನ್ನು ಸಂಶೋಧಿಸಿರುವ ಹದಿನೇಳು ವರ್ಷದ ಶ್ರೀಬೋಸ್,ಗಾಳಿಯನ್ನು ಸ್ವಚ್ಛಗೊಳಿಸಿ,ಅಸ್ತಮಾದಂತಹ ತೊಂದರೆಯಿರುವವರಿಗೆ ಕೋಣೆಯನ್ನು ಹೆಚ್ಚು ಸುಖಕರವಾಗಿಸುವ ನವೋಮಿ ಶಾ ಅವರ ಸಂಶೋಧನೆಗಳು ಬಹುಮಾನ ಗಳಿಸಿವೆ.ಗ್ರಿಲ್ ಮಾಡಿದ ಕೋಳಿಯಲ್ಲಿರುವ ಕ್ಯಾನ್ಸರ್‌ಕಾರಕ ಅಂಶಗಳನ್ನು ಕಡಿಮೆಗೊಳಿಸುವ ವಿಧಾನಗಳನ್ನು ಸಂಶೋಧಿಸಿರುವ ಲೌರೆನ್ ಹೋಜ್ ಕೂಡಾ ಬಹುಮಾನ ಗೆದ್ದಿದ್ದಾರೆ.ಇವೆಲ್ಲವೂ ಒಂದೇ ಬಗೆಯ ಸಂಶೋಧನೆಗಳು.ಸ್ಪರ್ಧೆಯಲ್ಲಿ ತೊಂಭತ್ತೊಂದು ದೇಶಗಳ ಏಳೂವರೆ ಸಾವಿರ ಪ್ರಾಜೆಕ್ಟ್‌ಗಳನ್ನು ಪರಿಶೀಲಿಸಲಾಯಿತು.ಅತ್ಯುತ್ತಮ ಹದಿನೈದು ಪ್ರಾಜೆಕ್ಟ್‌ಗಳಿಗೆ ಬಹುಮಾನ ನೀಡಲಾಯಿತು.ಪಾನೀಯದ ಕ್ಯಾನುಗಳನ್ನು ಮರುಬಳಕೆ ಮಾಡಿ,ಸೌರಶಕ್ತಿ ಉತ್ಪಾದಿಸುವ,ಅಂಗವಿಕಲರಿಗೆ ಸಹಾಯಕವಾಗಬಲ್ಲ ರೊಬೋಟಿಕ್ ಅಂಗಗಳೂ ಬಹುಮಾನಕ್ಕೆ ಪರಿಶೀಲನೆಗೊಳಗಾದ ಪ್ರಾಜೆಕ್ಟುಗಳಲ್ಲಿ ಸೇರಿವೆ.
-----------------------------------------------------------------
ಧರ್ಮಕ್ವಿಜ್:ಟ್ವಿಟರಿನಲ್ಲಿ ಕ್ವಿಜ್
http://dharmaquiz.blogspot.comನಲ್ಲಿ ನಿಯಮಿತವಾಗಿ ರಸಪ್ರಶ್ನೆಗಳನ್ನು ಕೇಳಲಾಗುತ್ತದೆ.ಈ ಪ್ರಶ್ನೆಗಳು ಟ್ವಿಟರಿನಲ್ಲಿಯೂ ಕೇಳಲ್ಪಡುತ್ತವೆ.ಕಿರಣ್ ಎಂಬ ಉತ್ಸಾಹಿ,ಈ ರಸಪ್ರಶ್ನೆಗಳನ್ನು ಕೇಳುತ್ತಾರೆ.ಟ್ವಿಟರ್ ಸಂದೇಶದಲ್ಲಿ ಪ್ರಶ್ನೆಸಂಖ್ಯೆ ನಮೂದಿಸಿ,ಆಸಕ್ತರು ಕಿರಣ್ ಅವರಿಗೆ ಉತ್ತರಿಸುತ್ತಾರೆ.ದಿನದಾಂತ್ಯದಲ್ಲಿ, ಸರಿಯುತ್ತರಗಳನ್ನು ಮತ್ತು ವಿಜೇತರ ಪಟ್ಟಿಯನ್ನು ಬ್ಲಾಗಿನಲ್ಲಿ ಪ್ರಕಟಿಸುತ್ತಾರೆ.ಟ್ವಿಟರಿನಲ್ಲಿಯೂ ವಿಜೇತರ ಪಟ್ಟಿ,ಸಂದೇಶವಾಗಿ ಕಾಣಿಸಿಕೊಳ್ಳುತ್ತದೆ.ಪ್ರಶ್ನೆಗಳು ಭಾರತದ ಸಂಸ್ಕೃತಿ,ಪುರಾಣ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ್ದು ಎನ್ನುವುದು ಬ್ಲಾಗಿನ ಹೆಸರೂ ಸೂಚಿಸುತ್ತದೆ.ಟ್ವಿಟರ್‌ನ http://twitter.com/#!/KiranKS ಎನ್ನುವ ಪುಟದಲ್ಲಿ ರಸಪ್ರಶ್ನೆ ಕಾಣಿಸಿಕೊಳ್ಳುತ್ತದೆ
---------------------------------------------------------------
ವಿಂಡೋಸ್:ಹೆಸರಿಗೆ ಗುಡ್‌ಬೈ?
ಮೈಕ್ರೋಸಾಫ್ಟ್ ತನ್ನ ಪ್ರಸಿದ್ಧ ಆಪರೇಟಿಂಗ್ ವ್ಯವಸ್ಥೆ ವಿಂಡೋಸ್ ಎಂಬ ಹೆಸರಿಗೆ ವಿದಾಯ ಹೇಳಲಿದೆಯೇ?1983ನಿಂದಾರಂಭಿಸಿ,ಈಗಲೂ ಅದೇ ಹೆಸರಿಗೆ ಜೋತು ಬಿದ್ದಿರುವ ಕಂಪೆನಿಯು,ತನ್ನ ತಂತ್ರಾಂಶದ  ಕೆಲವು ಹೊಸ ಆವೃತ್ತಿಗಳಲ್ಲಿ ಹಿನ್ನಡೆ ಕಂಡಿರುವುದೂ ಇದೆ."ಕಂಪ್ಯೂಟರ್ ಕಿಟಕಿ ತೆರೆದನವ,ಮುಚ್ಚಿದ ಕೋಣೆಯ ಕಿಟಕಿ" ಎಂಬಂತಹ ಕವನದ ಕಟಕಿ ಸಾಲು(ಕೃಪೆ:ತರಂಗ),"ವಿಂಡೋಸ್‌ಗೆ ಯಾಕಂಟಿದ್ದೀರಿ,ನಾವು ಬಾಗಿಲು(ಡೋರ್) ತೆರೆದಿರುವಾಗ?" ಎಂಬಂತಹ ಎದುರಾಳಿ ಲಿನಕ್ಸ್ ಉತ್ಸಾಹಿಗಳ ನುಡಿಗೆ ವಸ್ತುವಾಗಿರುವ,ವಿಂಡೋಸ್‌ಗೆ ಹೊಸ ಇಮೇಜ್ ಒದಗಿಸಲು ಹೆಸರು ಬದಲಾವಣೆ ಸೂಕ್ತವೆಂದು ಮೈಕ್ರೋಸಾಫ್ಟ್‌ಗೆ ಅನಿಸಿದ್ದರೆ ಆಶ್ಚರ್ಯವಿಲ್ಲ.ಆದರೂ,ಯಶಸ್ಸು ಗಳಿಸಿ,ಜನರ ಮೆಚ್ಚಿನ ಆಯ್ಕೆಯಾಗಿರುವ ಕಂಪ್ಯೂಟರ್ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶದ ಹೆಸರನ್ನು ಬಿಟ್ಟುಕೊಡುವುದು ಅಂತಹ ಸುಲಭದ ನಿರ್ಧಾರವೂ ಅಲ್ಲ.ಈಗ ಸ್ಮಾರ್ಟ್‌ಪೋನ್,ಟ್ಯಾಬ್ಲೆಟ್,ಡೆಸ್ಕ್‌ಟಾಪ್ ಮತ್ತು ನೋಟ್‌ಬುಕ್ ಹೀಗೆ ಎಲ್ಲಾ ಸಾಧನಗಳಿಗೂ ಸೂಕ್ತವಾದ ತಂತ್ರಾಂಶ ವ್ಯವಸ್ಥೆಗೆ ಸರಿ ಹೊಂದುವ ಹೆಸರಿನ ಹುಡುಕಾಟ ನಡೆದಿರಬಹುದು.ಸದ್ಯಕ್ಕಂತೂ ಇದು ಅಂತೆಕಂತೆ.
--------------------------------------------
ಗೂಗಲ್ ಟ್ರಾನ್ಸಿಟ್:ಚೆನ್ನೈ,ಹೈದರಾಬಾದ್‌ನಲ್ಲಿ ಲಭ್ಯ
ಬಸ್ ಮತ್ತು ರೈಲು ಸೇವೆಗಳ ಲಭ್ಯತೆ ಬಗ್ಗೆ ಜನರಿಗೆ ಮಾಹಿತಿ ನೀಡುವ ಗೂಗಲ್ ಟ್ರಾನ್ಸಿಟ್ maps.google.co.inನಲ್ಲಿ ಲಭ್ಯವಿದೆ.ಸದ್ಯ ಚೆನ್ನೈ ಮತ್ತು ಹೈದರಾಬಾದ್ ನಗರಗಳ ಬಳಕೆಗಷ್ಟೇ ಇದು ತೆರೆದಿದೆ.ಸಾರ್ವಜನಿಕ ಸಾರಿಗೆ ಉಪಯೋಗಿಸುವವರಿಗೆ,ನಗರದ ಎರಡು ಸ್ಥಳಗಳ ನಡುವೆ ಎಷ್ಟು ಬಸ್‌ಗಳ ಲಭ್ಯತೆ,ಅವುಗಳ ಸಮಯ,ಪ್ರಯಾಣ ಸಮಯದಂತಹ ಮಾಹಿತಿಗಳನ್ನು ಪಡೆಯಲು ಸೇವೆ ಸೂಕ್ತವಾಗಿದೆ.ಅಧಿಕೃತ ಮಾಹಿತಿಗಳನ್ನು ಇಲ್ಲಿ ಲಭ್ಯವಾಗಿಸಲಾಗಿದೆ.ಇಲ್ಲಿನ ಮಾಹಿತಿಗಳು ತಾಜಾ ಮಾಹಿತಿಗಳೇನೂ ಅಲ್ಲ.ಹಾಗಾಗಿ ಬಸ್ಸುಗಳು ಸಮಯಕ್ಕೆ ಸರಿಯಾಗಿ ಓಡಾಡದಿದ್ದರೆ,ಅಥವಾ ರದ್ದಾಗಿದ್ದರೆ ಅನನುಕೂಲವಾಗಬಹುದು.ಸ್ಮಾರ್ಟ್‌ಫೋನ್ ಬಳಸುವವರಿಗೆ,ಸಮೀಪದ  ಬಸ್‍ಸ್ಟಾ‍ಪ್ ಬಗ್ಗೆಯೂ ಮಾಹಿತಿ ಸಿಗುತ್ತದೆ.ಇಲ್ಲಿ ವ್ಯಕ್ತಿಯ ಸ್ಥಾನ ಪತ್ತೆ ಮಾದುವ ತಂತ್ರಜ್ಞಾನ ಉಪಯೋಗಕ್ಕೆ ಬರುತ್ತದೆ.  
-----------------------------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ನಿವೃತ್ತ ಬ್ಯಾಂಕ್ ಅಧಿಕಾರಿ ಎ ಎಸ್ ಕಲ್ಲೂರಾಯ,ಅಂಬಲಪಾಡಿ.
*ಜುಲೈ 24ಕ್ಕೆ ಆರು ವರ್ಷ ಪೂರೈಸುವ ಜನಪ್ರಿಯ ಕನ್ನಡ ಸಮುದಾಯ ತಾಣ ಯಾವುದು?
*ವಾರ್ಷಿಕೋತ್ಸವ ಸಂದರ್ಭ ನಡೆದ ಇನ್ನೊಂದು ವಿಶೇಷ ಕಾರ್ಯಕ್ರಮ ಏನು?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS40 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*ಗೂಗಲ್ ಬಜ್‌ನಲ್ಲಿ ತಮ್ಮ ಬಳಗದ ಜತೆ "ಉದಯವಾಣಿ"ಯ ಮಂಗಳೂರು ಬ್ಯೂರೋದ ಮುಖ್ಯಸ್ಥ ಮನೋಹರ ಪ್ರಸಾದ್ ಅವರ "ನನಗೂ ಕ್ರಿಕೆಟಿಗೂ ನಲುವತ್ತು ವರ್ಷದ ನಂಟು" ಬ್ಲಾಗನ್ನು ಹಂಚಿಕೊಂಡ ಪ್ರೇಮಲತಾ ಅವರು ಬಹುಮಾನ ಗೆದ್ದಿದ್ದಾರೆ. ಅಭಿನಂದನೆಗಳು.
UDAYAVANI
*ಅಶೋಕ್‌ಕುಮಾರ್ ಎ