೧೪. ಟಾಮ್ ಮತ್ತು ಸಿದ್ ಸಾಯರ್.

೧೪. ಟಾಮ್ ಮತ್ತು ಸಿದ್ ಸಾಯರ್.

ಸಿಲಾಸ್ ಫ಼ೆಲ್ಪ್‍ನ ತೋಟದೆಡೆಗೆ ನಡೆದ ನನಗೆ, ದೊಡ್ಡದೊಂದು ಗೇಟು ಕಾಣಿಸಿತು. ಆ ತೋಪು ಸಿಲಾಸನಿಗೆ ಸೇರಿದ್ದಿರಬಹುದೆಂದು ಅನಿಸಿತು. ಹಾಗಾಗಿ ರಸ್ತೆಯನ್ನು ಬಿಟ್ಟು, ಗೇಟಿನ ಒಳಹೊಕ್ಕು ನಡೆದೆ. ಅಲ್ಲಿ ತೋಟದ ನಡುವೆ ವಿಶಾಲವಾದ ಒಂದು ಮನೆ ಕಾಣಿಸಿತು. ಆ ವಿಶಾಲವಾದ ಮನೆಯ ಹಿಂಭಾಗದ ಕಡೆಯಲ್ಲೊಂದು ಹೊಗೆಯ ಗೂಡು. ಅದೇ ಅಡಿಗೆ ಮನೆ ಇರಬೇಕೆಂದು ಊಹಿಸಿದೆ. ಅದರ ಹಿಂದಕ್ಕೆ ಮನೆಗೆ ಹೊಂದಿಕೊಂಡಂತೆಯೇ ಪ್ರತ್ಯೇಕವಾದ ಮರದಿಂದ ಮಾಡಿದ ಗೂಡುಗಳಂತಹ ಮನೆಗಳು. ಅವು ಗುಲಾಮರ ಕೊಠಡಿಗಳಿರಬೇಕೆಂದು ಊಹಿಸಿದೆ. ಒಟ್ಟಿನಲ್ಲಿ ಮನೆ ಚೊಕ್ಕಟವಾಗಿಯೂ, ಸುಂದರವಾಗಿಯೂ ಇತ್ತು. ಮನೆಯ ಬೇಲಿದಾರಿ ಹಿಡಿದು ಅಡುಗೆ ಮನೆಯ ಕಡೆ ನಡೆದೆ. ಯಾರಾದರೂ ನನ್ನನ್ನು ವಿಚಾರಿಸಿದರೆ ನಾನು ಏನು ಹೇಳಬೇಕೆಂದು ಇನ್ನೂ ನಿರ್ಧರಿಸಿರಲಿಲ್ಲ. ಈ ಬಗ್ಗೆ ನಾನು ತಲೆ ಕೆಡಿಸಿಕೊಂಡಿರಲೇ ಇಲ್ಲ. ಅರ್ಧ ದಾರಿ ಕ್ರಮಿಸುವಷ್ಟರಲ್ಲೇ ಸರಸರ ಶಬ್ದದೊಡನೆ "ಬೌ..ಬೌ' ಎನ್ನುತ್ತಾ ಬಂದೇ ಬಿಟ್ಟಿತು. ಭೀಮಾಕಾರದ ಶುನಕ. ಅದರ ಹಿಂದೆ ಇನ್ನೊಂದು, ಅದರ ಹಿಂದೆ ಮತ್ತೊಂದು. ಏನು ಮಾಡುವುದೋ ತಿಳಿಯದೇ ಅವನ್ನೇ ದಿಟ್ಟಿಸುತ್ತಾ ನಿಂತೆ. ಕೆಲವೇ ಕ್ಷಣಗಳಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚಿನ ಶ್ವಾನಸೇನೆಯ ನಡುವೆ ಬಂಧಿತನಾಗಿದ್ದೆ. ಅಷ್ಟರಲ್ಲಿ ಅಡಿಗೆಮನೆಯಿಂದ ಒಬ್ಬ ಕರಿಯ ಹೆಂಗಸು, "ಹೇ ಟೈಗರ್, ಹೋಗು, ಹೋಗು" ಎನ್ನುತ್ತಾ ಕೈ ಆಡಿಸುತ್ತಾ ಬಂದಳು. ಅವಳು ಬಂದದ್ದನ್ನು ಕಂಡು ಶುನಕ ಸೇನೆ ಒಂದರ ಹಿಂದೆ ಒಂದರಂತೆ ಕರಗಿ ಹೋಯಿತು. ಆದರೆ ಮರುನಿಮಿಷದಲ್ಲೇ ಅವೆಲ್ಲ ಬಾಲ ಅಲ್ಲಡಿಸುತ್ತಾ ಸ್ನೇಹಪ್ರದರ್ಶನ ಮಾಡುತ್ತಾ ಬಂದವು. ಆಗ ಮನೆಯಿಂದ ಬಿಳಿಯ ಹೆಂಗಸೊಬ್ಬಳು ನನ್ನೆಡೆಗೆ ಓಡುತ್ತಾ ಬಂದಳು. ಅವರ ಎರಡು ಚಿಕ್ಕಮಕ್ಕಳು ಅವಳ ಜೊತೆಯಲ್ಲಿ. ಅವಳು ಹಾಗೇ ನಗುಮುಖದಿಂದ ಓಡಿ ಬರುತ್ತಿದ್ದರೆ ನನಗೇನೋ ತಳಮಳವಾಗುತ್ತಿತ್ತು. ಹತ್ತಿರ ಬಂದವಳೇ "ನೀನು..... ನೀನು.... ನೀನೇ.... ಕಡೆಗೂ ಬಂದೆಯಲ್ಲಾ" ಎಂದಳು. ನಾನೂ ಬೇರೆ ಏನೂ ಯೋಚಿಸದೆ "ಹ್ಞೂ" ಎಂದುಬಿಟ್ಟೆ. ನನ್ನನ್ನು ಆಕೆ ಭುಜ ಹಿಡಿದು ಅಲ್ಲಾಡಿಸಿದಳು, ನೋವಾಗುವಷ್ಟು. ಅವಳ ಕಣ್ಣುಗಳಲ್ಲಿ ನೀರು ಬಂದೇಬಿಟ್ಟಿತು. ಆನಂದಬಾಷ್ಪವೋ..? "ಮಗೂ, ನಿನಗೆ ನಿಮ್ಮಮ್ಮನ ಹೋಲಿಕೆಯೇ ಇಲ್ಲ.. ಆದರೂ ಎಷ್ಟು ಮುದ್ದಾಗಿದ್ದೀಯಾ,.. ಬಾ...ಬಾ... ನಿನ್ನನ್ನು ನೋಡಿ ಎಷ್ಟು ಸಂತೋಷವಾಗುತ್ತಿದೆಯೋ ಗೊತ್ತಾ?" ಹಾಗಿದ್ದರೆ ನಾನ್ಯಾರು? ಈ ಪ್ರಶ್ನೆ ನನ್ನ ತಲೆಯಲ್ಲಿ ಸುಳಿಯುತ್ತಿರುವಂತೆಯೇ ಆಕೆ, ತನ್ನ ಮಕ್ಕಳೆಡೆಗೆ ತಿರುಗಿ "ಮಕ್ಕಳೇ, ಇವನ್ಯಾರು ಗೊತ್ತಾ, ನಿಮ್ಮ ಅಣ್ಣ, ದೊಡ್ಡಮ್ಮನ ಮಗ ಟಾಮ್" ಎಂದಳು. ಆ ಮಕ್ಕಳು ಅಮ್ಮನ ಹಿಂದೆ ಅವಿತುಕೊಂಡವು. ಆಮೇಲೆ ನನ್ನನ್ನು ಒಳಗೆ ಕರೆದುಕೊಂಡು ಹೋಗಿ ಉಪಹಾರದ ವ್ಯವಸ್ಥೆ ಮಾಡುತ್ತಾ"ದೋಣಿಯಲ್ಲಿ ಬರುವಾಗ ತಿಂಡಿ ತಿಂದೆಯಾ" ಎಂದಳು. "ಹ್ಞೂ" "ಹೌದೂ.. ಇಷ್ಟು ದಿನ ಯಾಕೆ ತಡವಾಯಿತು, ನೀನು ಬರುವುದು.? ದೋಣಿ ಏನಾದರೂ ಕೆಟ್ಟು ಹೋಗಿತ್ತಾ?" "ಹ್ಞೂ, ಇಂಜಿನ್‍ನಲ್ಲೇನೋ ತೊಂದರೆಯಿತ್ತಂತೆ" ತಿಂಡಿಯ ಮೇಜಿನ ಮುಂದೆ ಕುಳ್ಳಿರಿಸಿ ಅವಳ ಪ್ರಶ್ನಾವಳಿ ಸಾಗುತ್ತಿತ್ತು. ನನಗೆ ಹೆದರಿಕೆಯಾಗುತ್ತಿತ್ತು. ಆಕೆ ನನಗೆ ಒಂದು ಹತ್ತು ನಿಮಿಷಗಳ ಕಾಲಾವಧಿ ನೀಡಿದ್ದಿದ್ದರೆ ಆ ಮಕ್ಕಳಿಂದ ನಾನ್ಯಾರೆಂಬುದನ್ನು ಸರಿಯಾಗಿ ತಿಳಿಯಬಹುದಾಗಿತ್ತು. ಆದರೆ ಆ ಅವಕಾಶ ಇನ್ನೂ ಸಿಕ್ಕಿರಲಿಲ್ಲ. ಅಷ್ಟರಲ್ಲಿಯೇ ಇನ್ನೊಂದು ಪ್ರಶ್ನೆ. "ಅರೇ ನಿನ್ನ ಸಾಮಾನುಗಳೆಲ್ಲಿ" ಏನೆಂದು ಉತ್ತರಿಸಲಿ "ಅವನ್ನೆಲ್ಲಾ ಅಲ್ಲೇ ಪೇಟೆಯಲ್ಲೇ ಬಿಟ್ಟು ಬಂದಿದ್ದೇನೆ." "ಹೋಗ್ಲಿ ಬಿಡು, ಆಮೇಲೆ ಗಾಡಿಯಲ್ಲಿ ಹೋಗಿ ತಂದರಾಯಿತು. ಹೌದು ದಾರಿಯಲ್ಲಿ ನಿಮ್ಮ ಚಿಕ್ಕಪ್ಪ ಸಿಗಲಿಲ್ಲವಾ?" "ಇಲ್ಲ ನಾನು ತೋಪೊಳಗಿನಿಂದ ಬಂದೆನಲ್ಲಾ!" "ಇನ್ನೇನು ಬಂದುಬಿಡ್ತಾರೆ ಅನ್ನಿಸುತ್ತೆ.. ಹ್ಞೂ ಈಗ ಹೇಳು, ಮನೆಯಲ್ಲಿ ಅಕ್ಕ ಹೇಗಿದ್ದಾಳೆ. ಊರಿನ ವಿಷಯ ಹೇಳು. ಅವರನ್ನೆಲ್ಲಾ ನೋಡಿ ಎಷ್ಟು ಕಾಲ ಆಯ್ತೋ?" ಅಲ್ಲಿಗೆ ನನ್ನ ಪೂರ್ಣಕತೆ ಮುಗಿಯಿತೆಂದೇ ಭಾವಿಸಿದೆ. ಏನು ಹೇಳಬೇಕೋ ತಿಳಿಯದೆಯೇ ಒದ್ದಾಡುತ್ತಿರುವಂತೆಯೇ.. ಆಕೆ.. ನನ್ನ ಚಿಕ್ಕಮ್ಮ ! ನನ್ನ ಬಳಿ ಬಂದು, ನನ್ನನ್ನು ಅಲ್ಲೇ ಇದ್ದ ಬೀರುವಿನ ಹಿಂದೆ ನೂಕಿ "ಅವಿಸಿಕೋ.. ನಿಮ್ಮ ಚಿಕ್ಕಪ್ಪ ಬರುತ್ತಿದ್ದಾರೆ... ಅವರಿಗೆ ಆಟ ಆಡಿಸೋಣ... ಮಕ್ಕಳೇ ಯಾರೂ ಏನೂ ಮಾತನಾಡಬೇಡಿ" ಎಂದಳು. ಅವಳು ಹಾಗೆನ್ನುತ್ತಿದ್ದಂತೆಯೇ.. ಸುಂದರನೂ, ದೃಢಕಾಯನೂ ಆದ ವ್ಯಕ್ತಿಯೋರ್ವ ಮನೆ ಪ್ರವೇಶಿಸಿದ. ಚಿಕ್ಕಮ್ಮ ಕೂಡಲೇ "ಹೋಗಿದ್ದಿರಾ... ಅವನು ಬಂದನಾ.." ಎಂದಳು. "ಇಲ್ಲ" "ಅಯ್ಯೋ ದೇವರೇ... ಅವನಿಗೇನಾಯ್ತು.... ಇಲ್ಲ.. ನೀವೆಲ್ಲೋ ದಾರೀಲಿ ಅವನ್ನ ತಪ್ಪಿಸಿಕೊಂಡಿರಬಹುದು." "ಸ್ಯಾಲೀ.. ನನಗಷ್ಟೂ ಗೊತ್ತಾಗಲ್ಲವಾ... ದಾರೀಲಿ ನಾನೇನೂ ತಪ್ಪಿಸಿಕೊಂಡಿಲ್ಲ. ಆ ಹಡಗಿಗೇ ಏನೋ ಆಗಿರಬೇಕು." "ಹೇ ಅಲ್ನೋಡೀ ಅಂದ್ರೆ, ರಸ್ತೇಲಿ ನಡ್ಕೊಂಡು ಬರ್ತಾ ಇರೋದು ಯಾರು? ಅವನೇ ಅಲ್ಲವಾ?.." ಚಿಕ್ಕಪ್ಪ ಕಿಟಕಿಯಿಂದ ಹೊರಗೆ ನೋಡುವಾಗ ನನ್ನನ್ನು ಹೊರಗೆಳೆದು ನಿಲ್ಲಿಸಿದಳು. ಕಿಟಕಿಯಿಂದ ನೋಡಿದ ಚಿಕ್ಕಪ್ಪನಿಗೆ ರಸ್ತೆಯಲ್ಲಿ ಯಾರೂ ಕಾಣದಿದ್ದಾಗ, ನಿರಾಸೆಯಿಂದ ಹಿಂದೆ ತಿರುಗಿದೆ. ನಾನಲ್ಲಿದ್ದೆ. ಆಶ್ಚರ್ಯ ತುಂಬಿದ ದನಿಯಲ್ಲಿ "ಯಾರಿದು?" ಅಂದ. "ಯಾರಿರಬಹುದು?" "ಗೊತ್ತಾಗ್ತಾ ಇಲ್ಲ' "ಟಾಮ್ ಸಾಯರ್" "...!!???" ದೇವರು ದೊಡ್ಡವನು..!! ಚಿಕ್ಕಪ್ಪ ನನ್ನ ಕೈಕುಲುಕಿ ಸಂಭ್ರಮದ ಸ್ವಾಗತ ಕೋರಿದ. ಚಿಕ್ಕಮ್ಮನಂತೂ ಖುಶಿಯಲ್ಲಿ ತೇಲಾಡುತ್ತಿದ್ದಳು. ನನಗಂತೂ ಪುನರ್ಜನ್ಮ ದೊರೆತಂತಾಗಿತ್ತು. ಅವರೆಲ್ಲಾ ಸುಮಾರು ಎರಡು ಗಂಟೆ ಕಾಲ, ನನ್ನ ಅಂದರೆ ಟಾಮ್ ಸಾಯರ್‌ನ ಕುಟುಂಬದ ಬಗ್ಗೆ ನನ್ನ ವಿಚಾರಿಸಿದರು. ನಾನು ಯಾವುದೇ ಅಳುಕಿಲ್ಲದೆ ಉತ್ತರಿಸಿದೆ! ಆದರೂ ಆರನೇ ಇಂದ್ರಿಯ ಏನೋ ಎಚ್ಚರಿಕೆ ಕೊಡುತ್ತಲೇ ಇತ್ತು. ಅಷ್ಟರಲ್ಲೇ ಚಿಕ್ಕ ಉಗಿಹಡಗೊಂದು ಬರುತ್ತಿರುವ ಸದ್ದು ಕೇಳಿಸಿತು. ಅದರಲ್ಲಿ ಟಾಮ್ ಏನಾದರೂ ಬಂದರೆ,... ಇಲ್ಲಿ ಬಂದು ನನ್ನ ಹೆಸರು ಕೂಗಿದರೆ..? ಕೂಡಲೇ ನಾನು ಅಲ್ಲಿ, ಪೇಟೆಗೆ ಹೋಗಿ ನನ್ನ ಸಾಮಾನು ತರುತ್ತೇನೆಂದು ಹೇಳಿದೆ. ಚಿಕ್ಕಪ್ಪ ತಾನೂ ಬರುತ್ತೇನೆಂದರೂ, "ನಾನೇ ಗಾಡಿ ಓಡಿಸಬಲ್ಲೆ" ಎಂದು ಹೇಳಿ ಅವರನ್ನು ಬಿಟ್ಟು, ಗಾಡಿ ತೆಗೆದುಕೊಂಡು ಪೇಟೆಯ ಕಡೆ ಹೊರಟೆ. ಅರ್ಧದಾರಿ ಕ್ರಮಿಸುವಷ್ಟರಲ್ಲಿ, ಎದುರಿನಿಂದೊಂದು ಗಾಡಿ ಬರುತ್ತಿರುವುದು ಕಾಣಿಸಿತು. ಪಕ್ಕಕ್ಕೆ ಗಾಡಿ ಬಂದಾಗ ಅದರಲ್ಲಿ ಟಾಮ್ ಕಾಣಿಸಿದ. ಎದುರಿನ ಗಾಡಿಯವನಿಗೆ ಗಾಡಿ ನಿಲ್ಲಿಸಲು ಸಂಜ್ಞೆ ಮಾಡಿದೆ. ಗಾಡಿಯವ ಗಾಡಿ ನಿಲ್ಲಿಸುತ್ತಲೂ ನನ್ನನ್ನು ಕಂಡ ಟಾಮ್‍ನ ಬಾಯಿ ಅಚಾನಕವಾಗಿ ತೆರೆದುಕೊಂಡಿತು. ಅವನ ಮುಖದಲ್ಲಿ ಭಯ ಆವರಿಸಿತು. ಗಂಟಲೊಣಗಿದಂತೆ ಮೂರ್ನಾಲ್ಕು ಬಾರಿ ಉಗುಳು ನುಂಗುತ್ತಾ "ನಾನು ನಿನಗೇನೂ ಕೇಡು ಮಾಡಿಲ್ಲ. ಮತ್ಯಾಕೆ ಹೀಗೆ ತಿರುಗಿ ಬಂದು ನನ್ನನ್ನು ಕಾಡ್ತಿದೀಯಾ..?" "ಅಯ್ಯೋ ನಾನೆಲ್ಲಿಂದ ತಿರುಗಿ ಬರಲಿ... ಹೋಗಿದ್ರೆ ತಾನೆ?" 'ಅಂದರೆ ನೀನು ದೆವ್ವ ಅಲ್ಲವಾ? ದೆವ್ವಾನೇ ನೀನು." "ಅಲ್ಲ, ನಾನು ಹಕ್, ಹಕಲ್ಬೆರಿ ಫ಼ಿನ್" "ಆದರೆ ನಿನ್ನ ಕೊಲೆ ಮಾಡಿದರಲ್ಲಾ!!" "ಅದು ನಾನಾಡಿದ ನಾಟಕ್. ಎಲ್ಲಾ ಚೆನ್ನಾಗಿ ಹಳ್ಳಕ್ಕೆ ಬಿದ್ರಿ. ನಂಬಿಕೆ ಇಲ್ಲಾಂದ್ರೆ ಬಾ ಇಲ್ಲಿ ಬಂದು ನನ್ನ ಮುಟ್ಟಿ ನೋಡು" ಟಾಮ್ ಬಂದು ನನ್ನನ್ನು ಮುಟ್ಟಿದ. ಅವನಿಗೆ ಸಮಾಧಾನವಾದಂತೆ ತೋರಿತು. ಅಷ್ಟೇ ಅಲ್ಲ ತುಂಬಾ ಸಂತೋಷವೂ ಆಯಿತು. ನನ್ನ್ ಬಗ್ಗೆ ಕುತೂಹಲದಿಂದ ತುಂಬಾ ಪ್ರಶ್ನೆಗಳನ್ನು ಕೇಳಿದ. ಆದರೆ ನಾನು ಗಾಡಿಯವನ ಮುಖ ನೋಡಿದೆ. ಅರ್ಥ ಮಾಡಿಕೊಂಡ ಟಾಮ್ ಗಾಡಿಯವನಿಗೆ ಸ್ವಲ್ಪ ಕಾಯುವಂತೆ ಹೇಳಿದ. ನಾವು ಸ್ವಲ್ಪ ದೂರ ಹೋಗಿ ಮಾತನಾಡಿದೆವು. ಅವನಿಗೆ ಎಲ್ಲವನ್ನೊ ತಿಳಿಸಿ, ಅವನ ಚಿಕ್ಕಪ್ಪ ಸಿಲಾಸ್ ನನ್ನನ್ನು ಟಾಮ್ ಎಂದೇ ತಿಳಿದಿರುವುದರಿಂದ ಈಗೇನು ಮಾಡಬೇಕೆಂದು ಕೇಳಿದೆ. ಟಾಮ್ ಈ ಸಮಸ್ಯೆಯನ್ನು ಚಿಟಿಕೆ ಹೊಡೆಯುವುದರೊಳಗೆ ಬಿಡಿಸಿಬಿಟ್ಟ. ಅವನೀಗ ಹಿಂತಿರುಗಿ ಹೋಗಿ ಮತ್ತೆ ಬರುತ್ತಾನೆಂತಲೂ.. ಈಗ ನಾನು ಟಾಮ್‍ನ ಪೆಟ್ಟಿಗೆಗಳನ್ನು ತೆಗೆದುಕೊಂಡು ಹೋಗುವುದೆಂತಲೂ. ಟಾಮ್ ಬಂದಾಗ ನಾನು ಅವನ್ಯಾರೋ ಗೊತ್ತಿಲ್ಲದಂತೆ ಇರಬೇಕೆಂದು ಹೇಳಿದ. ಈ ವ್ಯೂಹಕ್ಕೆ ಒಪ್ಪಿಗೆ ಕೊಟ್ಟು, ಹಿಂತಿರುಗುವ ಮುನ್ನ "ನಮ್ಮ ಊರಿನ ನೀಗ್ರೋ ಗುಲಾಮ ಜಿಮ್ ಇದ್ದನಲ್ಲಾ ಅವನು ನಿಮ್ಮ ಚಿಕ್ಕಪ್ಪನ ಮನೆಯಲ್ಲಿ ಬಂಧಿಯಾಗಿದ್ದಾನೆ. ಅವನನ್ನು ಬಿಡಿಸಬೇಕು" ಎಂದೆ. "ಅರೇ.. ಅವನು... " ಎಂದವನು ಮಾತು ನಿಲ್ಲಿಸ್ ನನ್ನ ಮುಖ ನೋಡುತ್ತಾ ತೀಕ್ಷ್ಣವಾಗಿ "ಅವನ್ನ ಬಿಡಿಸೋಕೆ ನಾನು ಸಹಾಯ ಮಾಡ್ತೀನಿ" ಅಂದ. ಟಾಮ್‍ನಂತಹ ಸ್ನೇಹಿತರಿದ್ದರೆ, ಜೀವನದ ಸಮಸ್ಯೆಗಳೆಲ್ಲವೂ ಸರಳವೂ ರಸಪೂರ್ಣವೂ ಆಗುತ್ತವೆಯಲ್ಲೇ?. ಅಂತಹ ಸ್ನೇಹ ಸಿಗಲು ಎಷ್ಟು ಪುಣ್ಯವಿರಬೇಕೋ? ನಾನು ಮನೆಗೆ ಹಿಂತಿರುಗಿದ ಅರ್ಧ ಗಂಟೆಯಲ್ಲೇ ಟಾಮ್ ಮನೆಗೆ ಬಂದ. ಈ ಅಪರಿಚಿತನ ಆಗಮನದಿಂದ ಆಶ್ಚರ್ಯಗೊಂಡ ಮನೆಯ ಜನರೆಲ್ಲಾ ಅಂಗಳಕ್ಕೆ ಬಂದರು. ಟಾಮ್ ಶ್ರೀಮದ್ಗಾಂಭೀರ್ಯದಿಂದ "ಇದು ಆರ್ಕಿಬಾಲ್ಡ್ ನಿಕೋಲಾಸ್‍ರವರ ಮನೇನಾ?" ಅಂದ. ಸಿಲಾಸ್ ಚಿಕ್ಕಪ್ಪ"ಇಲ್ಲಪ್ಪಾ, ಗಾಡಿಯವನು ತಪ್ಪು ದಾರಿಯಲ್ಲಿ ಕರ್ಕೊಂಡು ಬಂದಿದಾನೆ. ಅದೇ ಮುಖ್ಯ ರಸ್ತೆಯಲ್ಲಿ ಮೂರು ಮೈಲಿ ಮುಂದೆ ಹೋದರೆ ಆರ್ಕಿಬಾಲ್ಡ್ ಅವರ ಮನೆಯ್ ಇರೋದು." ಟಾಮ್ ಹಿಂದೆ ತಿರುಗಿ ನೋಡಿ "ಅಯ್ಯೋ ಗಾಡಿಯವನು ಬೇರೆ ಹೊರಟುಹೋದ. ನಡ್ಕೊಂಡೇ ಹೋಗ್ಬೇಕು" ಅಂದ. "ಇರಪ್ಪಾ.. ಇರಲಿ... ಬಾ ಇಲ್ಲಿ... ಇಲ್ಲೇ ಊಟ ಮಾಡು.. ಸಾಯಂಕಾಲ ನಮ್ಮ ಗಾಡಿ ಆ ಕಡೆ ಹೋಗುತ್ತೆ. ಆಗ ನಾನೇ ನಿನಗೆ ಅಲ್ಲಿಗೆ ಬಿಟ್ಟು ಕೊಡ್ತೀನಿ." "ಇಲ್ಲ, ನಿಮಗ್ಯಾಕೆ ತೊಂದರೆ?" "ತೊಂದರೆ ಏನು ಬಂತು? ಒಳಗೆ ಬಾ ಬಿಸಿಲು.. ಎಷ್ಟು ಸುಸ್ತಾಗಿದೆಯೋ ಏನೋ?" ಟಾಮ್ ಒಳಗೆ ಬಂದ. ನನಗೆ ಈ ಹೊಸಕತೆ ಹೇಗೆ ಮುಂದುವರೆಸುತ್ತಾನೋ ನೋಡೋಣವೆಂದು ಕುತೂಹಲ ಹುಟ್ಟಿಕೊಂಡಿತು. ಊಟಕ್ಕೆ ಕುಳಿತವನೇ ಮಾತು ಶುರುವಿಟ್ಟುಕೊಂಡ. ಅದೂ-ಇದೂ ಮಾತಾಡುತ್ತಾ ಸ್ಯಾಲಿ ಚಿಕ್ಕಮ್ಮನೆಡೆಗೆ ಬಗ್ಗಿ ಅವಳ ಕೆನ್ನೆಗೆ ಮುತ್ತೊಂದನ್ನಿಟ್ಟುಬಿಟ್ಟ! ಮತ್ತು ಮೊದಲಿನಂತೆಯೇ ಆರಾಮವಾಗಿ ಕುಳಿತು ಮಾತಾಡಲು ಶುರುಮಾಡಿದ. ಆದರೆ ಚಿಕ್ಕಮ್ಮನಿಗದು ಸಹ್ಯವಾಗಲಿಲ್ಲ "ಛೀ! ನಾಯಿ ಮುಂಡೇದೇ" ಎಂದೇನೋ ಬಯ್ದಳು. ಟಾಮ್ ಮುಖ ಚಿಕ್ಕದು ಮಾಡಿಕೊಂಡು ಅವಳನ್ನೇ ನೋಡುತ್ತಾ "ನೀವು ಬೇಜಾರು ಮಾಡ್ಕೊತೀರ್‍ಆ ಅಂತ ಅನ್ಕೊಂಡಿರಲಿಲ್ಲ" ಅಂದ "ಬೇಜಾರು... ಹ್ಞುಂ.. ನೀನು ನನಗೆ ಮುತ್ತಿಡೋದಕ್ಕೆ ಕಾರಣ ಏನು?" ಚಿಕ್ಕಮ್ಮನ ಕೆಂಗಣ್ಣು ಉರಿಯುತ್ತಲೇ ಇತ್ತು. "ಅವರೆಲ್ಲಾ ಹೇಳಿದ್ರು.. ನಿನ್ನ ಕೆನ್ನೆಗೊಂದು ಹೂಮುತ್ತು ಕೊಟ್ಟರೆ ನೀನು ತುಂಬಾ ಖುಷಿಯಾಗ್ತೀಯಾಂತ.. ನೀನೀತರ ಬೇಜಾರು ಮಾಡ್ಕೊತೀಯಾಂತ ನನಗೆ ಗೊತ್ತಿರಲಿಲ್ಲ. ಹೋಗ್ಲಿಬಿಡು.. ತಿರುಗಾ ನೀನಾಗೇ ಕೇಳೋವರೆಗೂ ಮುತ್ತು ಕೊಡೋಲ್ಲ" ಅಳುಮೋರೆ ಮಾಡಿಕೊಂಡು ಹೇಳಿದ. "ನಾನಾಗೇ ಕೇಳೋವರೆಗೂ" "ಹೂ ನೀನಾಗೇ ಕೇಳೋವರೆಗೂ" ಎನ್ನುತ್ತಾ ಟಾಮ್ ನನ್ನ ಕಡೆ ತಿರುಗಿ "ಏನಂತೀಯಾ ಟಾಮ್" ಎಂದ. ಈ ಮಾತನ್ನು ಟಾಮ್ ಆಡುತ್ತಿದ್ದಂತೆಯೇ ಚಿಕ್ಕಮ್ಮನ ಮುಖ ಸೂರ್ಯಕಾಂತಿಯಂತೆ ಅರಳಿತು. ಅವಳ ಬಾಯಿಂದ ಅಪ್ರಯತ್ನವಾಗಿ "ಸಿದ್ ಸಾಯರ್" ಎಂಬ ಮಾತು ಹೊರಟಿತು. ನಂತರ ಅದೇ ಪ್ರೀತಿ ತುಂಬಿದ ನೋಟದಿಂದ "ದೆವ್ವ-ಮರಿದೆವ್ವ ನೀನು" ಎಂದಳು. ಸಿದ್ ಕೂಡಾ ಬಂದಿದ್ದರಿಂದ ಅವಳಿಗೆ ತುಂಬಾ ಖುಷಿಯಾಗಿತ್ತು!!! ಆ ಸಂಜೆ ನಾನೂ ಟಾಮ್ ಇಬ್ಬರೂ ಪೇಟೆಗೆ ನಡೆದು ಹೋದೆವು. ನನ್ನ ಪೂರ್ಣ ಕತೆಯನ್ನು ಟಾಮ್‍ನಿಗೆ ಹೇಳಿದೆ. ಆಗ ನಮ್ಮೆದುರಿಗೊಂದು ಗುಂಪು ನಡೆದು ಬಂತು. ಗುಂಪಿನ ಮಧ್ಯೆ ಇಬ್ಬರು ವ್ಯಕ್ತಿಗಳಿದ್ದರು. ಅವರ ಮುಖಕ್ಕೆ ಮಸಿ ಬಳಿದು ಕಾಗೆ ಪುಕ್ಕ ಅಂಟಿಸಲಾಗಿತ್ತು. ಅವರನ್ನು ನಾನು ಗುರುತಿಸಿದೆ. ಅವರೇ ನಮ್ಮ ರಾಜ-ಪಾಳೇಗಾರರು.!!