ಅರಿವು

ಅರಿವು



 


 


ನಮ್ಮವರೆಂಬರು ನಮ್ಮವರಲ್ಲ; ಮೋಹಕೆ ಸಿಲುಕಿ ಬಳಲಿದೆನಲ್ಲ


ದೇವ ನಿನ್ನನು ನೆನೆಯಲೆ ಇಲ್ಲ; ಹುಟ್ಟಿನ ಮಹತಿ ತಿಳಿಯಲೆ ಇಲ್ಲ ||ಪ ||




ಕಂಡದ್ದೆಲ್ಲ ಬಯಸಿದೆನಲ್ಲ: ಸಿಕ್ಕದೆ ಇರಲು ಶಪಿಸಿದೆನಲ್ಲ


ಇಲ್ಲದ ಬಯಸಿ ಕೊರಗಿದೆನಲ್ಲ; ಇದ್ದುದ ಬಿಟ್ಟು ಕೆಟ್ಟೆನಲ್ಲ ||೧||




ಚಪಲತೆ ಕಣ್ಣನು ಮುಚ್ಚಿತಲ್ಲ; ನಿಜ ಕಾಣದಾಯಿತಲ್ಲ


ಚಂಚಲ ಬುದ್ಧಿ ಆಡಿದ ಆಟಕೆ ಎಡವಿ ಬಿದ್ದೆನಲ್ಲಾ ||೨||




ಸಜ್ಜನ ಸಂಗವ ಮಾಡಲಿಲ್ಲ; ಸದ್ಗತಿ ಸಿಗಲಿಲ್ಲ


ಕೋಪವು ಮತಿಯ ತಿಂದಿತಲ್ಲ; ಮನಸೇ ಸರಿಯಿಲ್ಲ ||೩||




ಮಿಗಿಲಾರೆಂದು ಬೀಗಿದೆನಲ್ಲ; ನಗೆಪಾಟಲಾಯಿತಲ್ಲ


ರಜೋ ತಮಗಳ ಆರ್ಭಟದಲ್ಲಿ ಸತ್ವ ಸತ್ತಿತಲ್ಲಾ ||೪||




ನಾನು ಎಂಬುದು ನಿಜವಲ್ಲ; ನಾನೇ ಎಂಬುದು ತರವಲ್ಲ


ನಿನ್ನನು ಬಿಟ್ಟು ನಾನೆಲ್ಲೆಂಬುದ ಅರಿಯಲಿಲ್ಲವಲ್ಲಾ ||೫ ||


********************


ಕ.ವೆಂ.ನಾಗರಾಜ್.

Rating
No votes yet

Comments