ಸೊಸೆ(ತಂದ)ಸೌಭಾಗ್ಯ - ಮುಗಿತಾ?

ಸೊಸೆ(ತಂದ)ಸೌಭಾಗ್ಯ - ಮುಗಿತಾ?

ಇಲ್ಲಿಯವರಗೆ.....
ಸುಬ್ಬರಾಯ ಭಟ್ಟರು ಮನೆಯಂಗಳದಲ್ಲಿ ಕುಳಿತು ದಿನಪತ್ರಿಕೆ ಓದುತ್ತಾ, ತಮ್ಮ ಮಗನ ಮದುವೆಯ ಮುಂಚಿನ ದಿನಗಳನ್ನು ಮೆಲುಕು ಹಾಕುತ್ತಿದ್ದಾರೆ, ಒಳಗಿನಿಂದ  ಅವರ ಹೆಂಡತಿ ಕರೆದಾಗ ಒಳಬಂದು ಮಗನ ಸ್ಥಿತಿಯನ್ನು ನೋಡಿದ ಭಟ್ಟರು ಗಾಬರಿಯಾಗಿ, ತಮ್ಮನ ಮಗ ಚಂದ್ರಶೇಖರನ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ಯುತ್ತಾರೆ, ಹೆವಿ ಸ್ಲೀಪಿಂಗ್ ಡೋಸ್ ಇಂಜೆಕ್ಟ್ ಆಗಿದೆ ಎಂದ ಡಾಕ್ಟರ್ ಬಳಿ ವಿನಂತಿಸಿಕೊಂಡು ಪೋಲೀಸ್ ಕೇಸ್ ಬೇಡ ಮನೆ ಮರ್ಯಾದೆ ಎಂದು ವಾಪಸ್ಸು ಮನೆಗೆ ಕರೆ ತರುತ್ತಾರೆ. ಭಟ್ಟರ ಹೆಂಡತಿ ಮನೆಯಲ್ಲಿದ್ದ ವಡವೆಗಳೊಂದಿಗೆ ಮನೆಯಿಂದ ಕಾಣೆಯಾಗಿರುವ ಸೊಸೆ ಸೌಭಾಗ್ಯಳಮೇಲೆ, ಅವಳಣ್ಣ ಶ್ರೀನಿವಾಸನ ಹಾಗು ಮದುವೆ ಗೊತ್ತು ಮಾಡಿ ಕೊಟ್ಟಿದ್ದ ಭ್ರೋಕರ್ ಮೇಲೂ ಅನುಮಾನ ಪಡುತ್ತಾರೆ. ಸ್ವಲ್ಪ ಹುಶಾರಾದ ನರಸಿಂಹ ಚಂದ್ರಶೇಖರನೊಡಗೂಡಿ ಸೌಭಾಗ್ಯಳ ಅಣ್ಣನನ್ನು ಹುಡುಕಿಕೊಂಡು ಬೆಂಗಳೂರಿಗೆ ಬರುತ್ತಾನೆ. ಅವಳಣ್ಣ ಮೊದಲಿದ್ದ ಮನೆಯನ್ನೂ ಖಾಲಿ ಮಾಡಿ, ಹಳೆಯ ಕೆಲಸವನ್ನೂ ಬಿಟ್ಟಿರುತ್ತಾನೆ, ಯಾವುದೇ ಸುಳಿವು ಇಲ್ಲದೇ ಓಡಾಡುತ್ತಿರುವಾಗ, ನರಸಿಂಹನಿಗೆ ಸಿ-೦೧೦೨ ಕಾರ್ ಕಾಣಿಸಿ, ಊರಿನಲ್ಲಿ ಮನೆಯ ಹಿಂದೆ ಏನಾದರೂ ಕ್ಲೂ ಸಿಗಬಹುದೆಂದು ಹುಡುಕುತ್ತಿದ್ದಾಗ ಸೌಭಾಗ್ಯಳ ಹ್ಯಾಂಡ್ ರೈಟಿಂಗ್ ನ  ಕಾಗದದ ತುಂಡು ಸಿಕ್ಕಿದೆಂದು ಅದರಲ್ಲಿಯೂ ಇದೇ ಸಿ ೦೧೦೨ ಬರೆದಿರುವ ವಿಷಯವನ್ನು ನರಸಿಂಹ ಚಂದ್ರುವಿಗೆ ತಿಳಿಸುತ್ತಾನೆ, ಈಗ ಅವರು ತಮ್ಮ ಕಾರಿನಲಿ, ಮುಂದೆ ಹೋಗುತ್ತಿರುವ ಆ ನಂಬರಿನ ಕಾರನ್ನು ಹಿಂಬಾಲಿಸಿತ್ತಿದ್ದಾರೆ.

ಮುಂದೆ ಓದಿ.....

ಆಷ್ಟರಲ್ಲಿ ಅವರು ಹಿಂಬಾಲಿಸುತ್ತಿದ್ದ ಕಾರು ಆಗಲೆ ರಾಜ್ ಕುಮಾರ್ ಸಮಾದಿಯನ್ನು ದಾಟಿ ಮಾಗಡಿ ರಸ್ತೆಯ ಕಡೆ ಚಲಿಸುತ್ತಿತ್ತು, ಅದರ ಹಿಂದೆ ಇವರ ಕಾರು.

‘ಆತುರ ಬೇಡ ಚಂದ್ರು, ನಿಧಾನ, ನಾವು ಹಿಂಬಾಲಿಸುವುದು ಆ ಕಾರಿನವರಿಗೆ ತಿಳಿಯಬಾರದು, ಒಂದು ಹೋಗಿ ಮತ್ತೇನೋ ಆಗಬಾರದು, ಇದು ನಿಜವಾಗಿಯೂ ನನಗೆ ಆಶಾಕಿರಣ, ಇಲ್ಲೂ ನಿರಾಸೆಯಾದರೆ ಮತ್ತೇನು ಕಷ್ಟವೂ ತಿಳಿಯದು‘ - ಅಂದ ನರಸಿಂಹ, ತುಂಬಾ ಸನಿಹಕ್ಕೆ ಕಾರನ್ನು ದೌಡಾಯಿಸುತ್ತಿದ್ದ ಚಂದ್ರುವನ್ನು ನೋಡಿ. ಆಯಿತು ಎಂದು ಸಮ್ಮತಿಸಿದ ಚಂದ್ರು ವಾಹನದ ವೇಗವನ್ನು ತಗ್ಗಿಸಿ ಸ್ವಲ್ಪ ಅಂತರದಲ್ಲಿ ಹಿಂಬಾಲಿಸ ತೊಡಗಿದ.

ರಿಂಗ್ ರಸ್ತೆಯ ಕೊನೆಗೆ ಬಂದ ಕಾರು ಮಾಗಡಿರಸ್ತೆಗೆ ತಿರುಗಿ ಚಲಿಸತೊಡಗಿತು.

‘ಎಲ್ಲಿಗೆ ಹೊಗ್ತಾನೊ ಇವನು‘ - ಅಂದ ಚಂದ್ರು - ‘ಗೊತ್ತಿಲ್ಲ ನೋಡೇ ಬಿಡೋಣ ನಡಿ, ಜೊತೆಗೆ ನಮಗೆ ಮಾಡೋದಿಕ್ಕೆ ಬೇರೆ ದಾರಿ ತಾನೆ ಏನಿದೆ? ನೀರಿನಲ್ಲಿ ಮುಳುಗುವವನಿಗೆ ಹುಲ್ಲು ಕಡ್ಡಿಯೂ ಒಂದು ಆಸರೆಯಂತೆ‘ - ನರಸಿಂಹನ ಉತ್ತರ. ಜೊತೆಗೆ ನರಸಿಂಹ ಆ ಕಾರಿನ ಮೇಲೆ ನೆಟ್ಟ ದೃಷ್ಟಿ ಇಟ್ಟಿದ್ದ, ಹದ್ದಿನ ಕಣ್ಣು ಅಂತಾರಲ್ಲ ಹಾಗೆ. ಯಾವುದೆ ಕಾರಣಕ್ಕೂ ಆ ಕಾರು ಇವನ ನೋಟದಿಂದ ತಪ್ಪಿಸಿಕೊಳ್ಳಲು ಸಾದ್ಯವೇ ಇರಲಿಲ್ಲ.

ಮಾಗಡಿ ರಸ್ತೆಯಲ್ಲಿ ಮುಂದುವರೆದ ಕಾರು, ಮುಂದೆ ತುಮಕೂರು ರಸ್ತೆಯ ಕಡೆಗೆ ಹೋಗುವ ನೈಸ್ ರಸ್ತೆಗೆ ತಿರುಗಿತು.

‘ಇಲ್ಲ ಕಣೊ ಆ ಕಾರು ಊರಿನಿಂದ ಆಚೆಗೆ ಹೋಗ್ತಿದೆ, ಭಹುಷಃ ಅವನು ತುಮಕೂರು ರಸ್ತೆಯಿಂದ ನೆಲಮಂಗಲ ಮಾರ್ಗವಾಗಿ ಹಾಸನಕ್ಕೆ ಹೋಗ್ತಿದಾನೋ ಏನೋ‘ - ‘ಇಲ್ಲ ಚಂದ್ರು, ಹಾಗಿದ್ದರೆ ಗೊರಗೊಂಟೆ ಪಾಳ್ಯದಿಂದ ಸೀದಾ ನೆಲಮಂಗಲದ ಕಡೆ ಹೋಗುತ್ತಿದ್ದ ಹೀಗೆ ಬಳಸುವ ಅವಶ್ಯಕತೆ ಏನಿದೆ?‘ - ಈಗ ನರಸಿಂಹನ ಮನಸ್ಸಿನಲ್ಲಿ ಯಾವುದೂ ತರ್ಕ ನಿರ್ಧಿಷ್ಟವಾಗಿ ನಡೆಯುತ್ತಿದೆ, ಅದೇನೆಂದು ಅವನಿಗೂ ತಿಳಿಯದು.

ನೈಸ್ ರಸ್ತೆಯಲ್ಲಿ ಸ್ವಲ್ಪ ದೂರ ಕ್ರಮಿಸಿದ ಕಾರು ರಸ್ತೆಯ ಎಡ ಬಾಗದಲ್ಲಿ ಹೋಗಿದ್ದ ಕಚ್ಚಾ ರಸ್ತೆಗೆ ಇಳಿದು ಮುಂದಕ್ಕೆ ಚಲಿಸಿ, ರಸ್ತೆಯಿಂದ ಸ್ವಲ್ಪ ದೂರದಲ್ಲಿದ್ದ ತೋಟದ ಕಾಂಪೌಂಡ್ನೊಳಕ್ಕೆ ಹೋಯಿತು, ದೃಷ್ಟಿ ಹಾಯಿಸಿ ನೋಡಿದಾಗ ಒಳಗಡೆ ಒಂದು ಮನೆಯೂ ಜೊತೆಗೆ ಸಣ್ಣ ಮಂದ ಬೆಳಕೂ ಕಾಣಿಸಿತು.

ಕಾರು ಪಕ್ಕಕೆ ನಿಲ್ಲಿಸಿದ ಚಂದ್ರಶೇಖರ, ಎಂಜಿನ್  ಆಫ಼್ ಮಾಡಿ ಕೆಳಗಿಳಿದ, ಇನ್ನೊಂದು ಪಕ್ಕದಿಂದ ಇಳಿದು ರಸ್ತೆಗೆ ಬಂದು ಚಂದ್ರುವಿನ ಬಳಿ ಬಂದು ನರಸಿಂಹ, ಚಂದ್ರುವನ್ನು ಮುಖಕ್ಕೆ ಮುಖವಿಟ್ಟು ನೋಡಿ ಕಣ್ಣಿನ ಹುಬ್ಬನ್ನು ಮೇಲಕ್ಕೆ ಹಾರಿಸಿ ಈಗ ಏನೆನ್ನುತ್ತೀಯ ಅನ್ನುವಂತೆ ಮೌನವಾಗಿ ಕೇಳಿದ. ಓಕೆ ನೋಡೋಣ ಅನ್ನುವಂತೆ ಭುಜ ಹಾರಿಸಿ ಉತ್ತರ ಕೊಟ್ಟ ಚಂದ್ರಶೇಖರ.

ಸುತ್ತಲೂ ಕತ್ತಲು, ಈಗ ಇಲ್ಲಿ ಏನು ಮಾಡಬೇಕು? ಮುಂದಿನ ಹೆಜ್ಜೆ ಹೇಗೆಂದು ಸುತ್ತಮುತ್ತಲೂ ಇಬ್ಬರೂ ಅವಲೋಕಿಸುತ್ತಿರುವಾಗ, ದಾರಿಹೋಕನೊಬ್ಬ ಬರುತ್ತಿರುವುದು ಕಣ್ಣಿಗೆ ಬಿತ್ತು

ಹತ್ತಿರ ಬಂದ ದಾರಿಹೋಕನನ್ನು ಮಾತನಾಡಿಸುತ್ತಾ ನರಸಿಂಹ ‘ಏನಪ್ಪ ಯಾವ ಊರು ‘ - ‘ಐ.. ಇಲ್ಲೆ ಮಾದಾವರ ಕಣೇಳಿ, ತಾವ್ ಯಾರ್ ಸಾಮಿ‘ - ‘ಇಲ್ಲಪ್ಪ ಊರಿಗೆ ಹೋಗ್ತಿದ್ವು ಹಾಗೆ ಸುಮ್ನೆ ಗಾಳಿಗೆ ಸ್ವಲ್ಪ ಹೊತ್ತು ನಿಂತ್ಕೊಂಡ್ವು, ಈ ಕಡೆ ಜಮೀನ್ ರೇಟೆಲ್ಲ ಹ್ಯಾಗೆ?‘ - ‘ಅಯ್ಯೊ ಅದ್ನ್ಯಾಕೇಳ್ತಿರಿ ಈ ನೇಸ್ ರೋಡ್ ಆದ್ಮೇಲೆ, ಆಕಾಶಕ್ಕೆ ಹೋಗಿ ಕುಂತಿದೆ, ನಮ್ಗೊಳಕೈಲೆಲ್ಲಾ ಸರಾ ಸಗ್ಟಾಗಿ ಕಿತ್ಕೊಂಡು ಈಗ ಅವ್ರು ಕಾಸ್ ಮಾಡ್ಕೋತಾವ್ರೆ‘ - ‘ಅಲ್ಲಿ ಕಾಣಿಸ್ತಿದ್ಯಲ್ಲ ಆ ತೋಟ ಯಾರ್ದು ಗೊತ್ತಾ?‘ - ‘ಯಾವ್ದು ಆ ದೊಡ್ಡ ಗೇಟ್ ಅದಲ್ಲ ಅದಾ ಸಾಮಿ, ಬಂದ್ಕಂಡು ಅವ್ರ್ಯಾರೂ ಬೆಂಗ್ಳೂರ್ನೋರ್ದು, ಈಗ ಒಂದೆಳ್ಡು ತಿಂಗ್ಳ ಹಿಂದೆ ಅದ್ಯಾರೂ ಹಾಸ್ನದ ಸಾವ್ಕಾರ್ರು ತಗೊಂಡವರಂತೆ, ಆ ಕಡೆ ಯಾರೂ ಹೋಗೋದೂ ಇಲ್ಲ, ಜನ್ಸಂಚಾರ ಇಲ್ದಿರೊ ದಾರಿ, ಅದ್ನೇನಂತ ತಗೊಂಡ್ರೊ, ಶಾದ್ರೆ ಬೆಳ್ಕಂಡು ಕುಂತೈತೆ, ವ್ಹು... ದೊಡ್ಡೊರಾಟ ನಮ್ಗೇನ್ ಗೊತ್ತಾಯ್ತದೆ ಸಾಮಿ ಅಲ್ಲುವ್ರಾ‘ - ‘ಅದು ಸರೀನೆ, ನೀನು ಇನ್ನು ನಡಿಯಪ್ಪ ನಾವು ಹೊರ್ಡ್ತಿವಿ‘ - ‘ಹೌದು ಹೊಂಡಿ ಸಾಮಿ ಕಾಡ್ಗತ್ಲು ಬೇರೆ, ಹಾವು ಹುಳ ಹುಪ್ಟೆ ಓಡಾಡೊ ಹೊತ್ತು.., ಜಾಗ...‘ - ಅಂದ ದಾರಿ ಹೋಕ, ಶರಟಿನ ಜೇಬಿಗೆ ಕೈಹಾಕಿ, ನೋಡಿ, ೫೦ ರೂ ನೋಟೊಂದನ್ನು ಅವನ ಕೈಗಿತ್ತ ನರಸಿಂಹ. ‘ಏ ಇದ್ಯಾಕೆ ಸಾಮಿ‘ - ‘ಇರ್ಲಿ ಇಟ್ಕೋಳ್ಳಪ್ಪ ತಿಂಡಿ ತಿನ್ನು‘ - ‘ಆಯ್ತು ಸಾಮಿ ದೇವ್ರು ನಿಂನ ತಣ್ಣಿಗಿಟ್ಟಿರ್ಲಿ‘ - ಅಂದವನೆ ಅಲ್ಲಿಂದ ಹೊರಟ. ‘ಏನಪ್ಪ ನಿನ್ನ ಹೆಸರೇನು‘ - ಏ ಕುಳ್ ನರ್ಸುಮ್ಮ ಅಂತಾರೆ ಸಾಮಿ‘ - ನರಸಿಂಹನ ಪ್ರಶ್ನೆಗೆ, ಕೂಗಿಹೇಳುತ್ತಾ ಕತ್ತಲಲ್ಲಿ ಕರಗಿಹೋದ ಆ ದಾರಿಹೋಕ.

ಬೆಳಗಿನಿಂದ ದುಗುಡದಲ್ಲಿದ್ದ ನರಸಿಂಹನ ಮುಖದಲ್ಲಿ ಈಗ ಸ್ವಲ್ಪ ಸಮಾಧಾನವನ್ನು ಗುರುತಿಸಿದ ಚಂದ್ರಶೇಖರ, ‘ಮುಂದಿನ ದಾರಿ ಏನಪ್ಪ ನರಸಿಂಹ?, ಅಂತು ಏನೋ ಸಾಧನೆ ಮಾಡಿದ ಸಂತೋಷ ನಿನ್ನಲಿ ಕಾಣುತ್ತಿದೆ, ನನಗಂತೂ ಏನೂ ತೋಚುತ್ತಿಲ್ಲ ನೀನು ಏನು ಹೇಳುತ್ತಿಯೋ ಅದನ್ನು ಕೇಳುತ್ತೇನೆ, ಮಾಡುತ್ತೇನೆ‘, - ‘ಸ್ವಲ್ಪ ಇರು ನನಗೂ ಏನೂ ಗೊತ್ತಿಲ್ಲ, ಆದ್ರೂ ಏನೊ ಸಿಗುತ್ತೇನೊ ಅಂತ ಗಮನಿಸುತ್ತಿದ್ದೇನೆ‘.

ಇಷ್ಟು ಮಾತನಾಡುವಷ್ಟರಲ್ಲಿ ಆ ತೋಟದ ಒಳಗೆ ಹೋಗಿದ್ದ ಕಾರು ಹೊರಬಂದು ಮುಖ್ಯ ರಸ್ತೆಯನ್ನು ಸೇರಿ ಆ ಕಡೆ ತುಮಕೂರು ರಸ್ತೆಯೆಡೆಗೆ ಹೊರಟಿತು. ಸಮಯ ನೋಡಿಕೊಂಡ ನರಸಿಂಹ, ಗಡಿಯಾರದ ಮುಳ್ಳು ಆಗಲೇ ೭-೩೦ ದಾಟಿತ್ತು.

ಧೃಡ ನಿರ್ದಾರ ಮಾಡಿದ್ದ ನರಸಿಂಹ, ಮತ್ತೊಮ್ಮೆ ತೋಟದ ಕಡೆ ನೋಡುತ್ತಾ,

‘ಚಂದ್ರು ಈಗ ನಾನು ತೋಟದ ಒಳಗೆ ಹೋಗ್ತಿನಿ, ನೀನು ಇಲ್ಲೇ ಇದ್ದು ಗಮನಿಸುತ್ತಿರು, ಯವುದಾದ್ರೂ ಅಪಾಯ ಕಂಡುಬಂದಲ್ಲಿ ನನ್ನ ಮೊಬೈಲ್ಗೆ ಎರಡು ಸಾರಿ ಮಿಸ್ ರಿಂಗ್ ಕೊಡು, ಒಂದೊಮ್ಮೆ ನನಗೆ ಒಳಗೇನಾದರೂ ತೊಂದರೆ ಕಂಡು ಬಂದರೆ ನಿನಗೆ ಎರಡು ಮಿಸ್ ರಿಂಗ್ ಕೊಡುತ್ತೇನೆ, ನೀನು ಒಳಗೆ ಬರುವ ಪ್ರಯತ್ನ ಮಾಡು, ಇಬ್ಬರೂ ವೈಬ್ರಟರ್ ಮೋಡ್ನಲ್ಲಿ ಇಟ್ಟಿರೋಣ ಆಯ್ತಾ‘ - ‘ಸರಿ ಹಾಗೇ ಮಾಡೋಣ, ನರಸಿಂಹ ಹುಷಾರಪ್ಪ, ಕಂಡು ಕೇಳಿಲ್ಲದ ಜಾಗ ಮತ್ತೇನಾದರೂ ವ್ಯತ್ಯಾಸವಾದರೆ ಕಷ್ಟ, ಒಂದು ಹೋಗಿ ಮತ್ತೊಂದಾಗಬಾರದು‘ - ಸ್ವಲ್ಪ ಅಳುಕಿನಲ್ಲಿ ಹೇಳಿದ ಚಂದ್ರಶೇಖರ. ಆಲ್ ದ ಬೆಸ್ಟ್ ಅನ್ನುವಂತೆ ಒಬ್ಬರಿಗೊಬ್ಬರು ಕೈ ಹಿಡಿದು ಮುಖ ನೋಡಿಕೊಂಡರು.

ನಿಧಾನವಾಗಿ ಹೆಜ್ಜೆಯನಿಡುತ್ತಾ ದೊಡ್ಡ ಗೇಟನ್ನು ದಾಟಿ ಒಳ ನಡೆದ ನರಸಿಂಹ, ಸುತ್ತಲೂ ಕತ್ತಲು, ಸ್ವಲ್ಪ ನಡೆದಮೇಲೆ ಕತ್ತಲಲ್ಲಿಯೂ ದಾರಿ ಸುಮಾರಾಗಿ ಕಾಣುವಂತಾಯ್ತು ನರಸಿಂಹನ ಕಣ್ಣುಗಳಿಗೆ. ಸುತ್ತಾಮುತ್ತಾ ಅವಲೋಕಿಸುತ್ತಾ ದೊಡ್ಡ ಆವರಣದ ಮಧ್ಯದಲ್ಲಿದ್ದ ಮನೆಯ ಮುಂಬಾಗಿಲಿಗೆ ಬಂದ, ಮನುಷ್ಯರು ವಾಸಿಸುತ್ತಿರುವ ಯಾವ ಕುರುಹೂ ಕಾಣದಿದ್ದರೂ ಮುಂಬಾಗಿಲಿನಿಂದ ಹೊರಗೆ ಒಳಗೆ ಓಡಾಡಿರುವ ಕುರುಹು ಸೂಕ್ಷ್ಮವಾಗಿ ಗಮನಿಸಿದಾಗ ಕಾಣುತ್ತಿತ್ತು, ಯಾರೂ ಇಲ್ಲ  ಎಂಬುದನ್ನು ಮತ್ತೊಮ್ಮೆ ಖಚಿತ ಪಡಿಸಿ ಕೊಂಡ ನರಸಿಂಹ, ತನ್ನ ಮೊಬೈಲ್ ಬೆಳಕಿನಲ್ಲಿ ಮುಂದಿನ ಬಾಗಿಲಿನ ಅವಲೋಕನ ಮಾಡಿದ, ಬಾಗಿಲನ್ನು ತಳ್ಳಿ ನೋಡಿದ, ಇಲ್ಲ ಬೀಗ ಹಾಕಿದೆ. ಮನೆಯ ಒಳಗೆ  ಮುಂದಕ್ಕಿರುವ ಒಳಗಿನ ಹಾಲ್ ನಲ್ಲಿ ಮಂದ ಬೆಳಕು ಕಾಣಿಸುತ್ತಿದೆ ಕಿಟಕಿಯಿಂದ ಅದೂ ಸ್ವಲ್ಪ ಒಳ ಮಟ್ಟಕ್ಕಿರುವ ಹಾಲ್ನಲ್ಲಿ ಮಾತ್ರ. ಒಳಕ್ಕೆ ಪ್ರವೇಶಿಸಲು ಮುಂದಿನಿಂದ ಸಾದ್ಯವಿಲ್ಲದ್ದನ್ನು ಮನಗಂಡು ಒಳಕ್ಕೆ ನುಗ್ಗವ ಬೇರೆ ಯಾವುದಾದರೂ ಪರಿಯಿದಯೇನೋ ಎಂದು ಅರಸುತ್ತಾ, ಮನೆಯ ಮುಂದಿನ ಮೆಟ್ಟಲುಗಳಿಂದ ಕೆಳಗಿಳಿದ ಎಡಪಕ್ಕದಿಂದ ಹಾಯುತ್ತಾ, ನಿಧಾನವಾಗಿ ಹೆಜ್ಜೆಗಳನ್ನಿಡುತ್ತಾ ಮನೆಯ ಹಿಂಭಾಗಕ್ಕೆ ಬಂದ ನರಸಿಂಹ, ದೊಡ್ಡ ಪ್ರಾಕಾರದ ಮನೆ ಕೆಲವು ನಿಮಿಷಗಳೇ ಹಿಡಿದವು ಹಿಂದೆ ತಲುಪಲು. ಮನೆಯ ಹಿಂದೆ ಬಾಲ್ಕಾನಿಗೆ ಚಾಚಿ ಕೊಂಡಂತೆ ತೆಂಗಿನ ಮರವೊಂದಿತ್ತು, ಬಾಲ್ಕಾನಿಯಲ್ಲಿ ದೊಡ್ಡ ಕಿಟಕಿಯೊಂದು ಕಾಣಿಸಿತು, ಎತ್ತರದ ಕಿಟಕಿ ಒಬ್ಬ ಮನುಷ್ಯ ಒಳ ತೂರಿ ಹೋಗಬಹುದಾದಷ್ಟು ದೊಡ್ಡದು. ಎರಡು ನಿಮಿಷ ಯೋಚಿಸಿದ ನರಸಿಂಹ, ಸರಸರನೆ ತೆಂಗಿನ ಮರ ಏರಿ ಬಾಲ್ಕಾನಿ ತಲುಪಿದ, ತೋಟಗಳಲ್ಲಿ ಇದರ ಎರಡರಷ್ಟು ಎತ್ತರದ ಮರಗಳನ್ನು ಏರುವ ನರಸಿಂಹನಿಗೆ ಇದು ಏನೇನೂ ಅಲ್ಲವೆನಿಸಿತು. ಬಾಲ್ಕಾನಿಯಲ್ಲಿದ್ದ ಕಿಟಕಿಯನ್ನು ಬಲವಾಗಿ ತಳ್ಳಿದ ತನ್ನ ಕೈಗಳಿಂದ ನರಸಿಂಹ, ಬಹಳ ದಿನಗಳಿಂದ ಬಳಸಿರಲಿಲ್ಲವೇನೋ ದಡ್ ಎಂಬ ಶಬ್ದದೊಂದಿಗೆ ಬಾಗಿಲು ತೆಗೆದು ಕೊಂಡಿತು, ಉಂಟಾದ ಶಬ್ದದಿಂದ ಒಳಗಿದ್ದ ಎರಡು ಹಕ್ಕಿಗಳು ಹಾರಿ ಹೊರ ಹೋದವು. ಸ್ವಲ್ಪ ಕಾದು ನೋಡಿದ ನರಸಿಂಹ ಕಿಟಕಿಯ ಒಳಗಿಂದ ಮನೆ ಪ್ರವೇಶಿಸಿದ.

ಇತ್ತ ಚಂದ್ರಶೇಖರ ರಸ್ತೆಯಲ್ಲೇ ಕಾಯುತ್ತಿದ್ದಾನೆ, ಹೆಚ್ಚೂ ಕಡಿಮೆ ೨೦ ನಿಮಿಷವಾಯ್ತು ಇನ್ನೂ ಏನೂ ಗೊತ್ತಗ್ತಾಇಲ್ವಲ್ಲ? ಏನ್ ಮಾಡೋದು ನಾನೂ ಒಳಗೆ ಹೋಗ್ಲಾ ಅಂತ ಯೋಚಿಸ್ದ, ಬೇಡ ಬೇಡ ಆ ಕಾರ್ ಏನಾದ್ರೂ ಬಂದ್ರೆ?, ಇಲ್ಲಿಂದ ಅವ್ನಿಗೆ ವಿಷ್ಯ ತಿಳಿಸ್ಬಹುದು, ಆದ್ರಿಂದ ನಾನು ಇಲ್ಲೇ ಇರೋದು ಒಳ್ಳೇದು, ಆದ್ರೆ ಒಳಗಿನಿಂದ ಏನೂ ಸಂಪರ್ಕ ಇಲ್ಲ, ಇರ್ಲಿ ಕಾಯೋಣ, ಹೇಗೂ ಏನಾದ್ರೂ ಅಪಾಯ ಆದ್ರೆ ಮಿಸ್ ಕಾಲ್ ಕೊಡ್ತಿನಿ ಅಂದಿದಾನೆ, ಇನ್ನೂ ಸ್ವಲ್ಪ ಹೊತ್ತು ಇಲ್ಲೇ ಕಾಯೋಣ ಅಂತ ನಿರ್ಧರಿಸಿ ಸುಮ್ಮನಾದ.

ಒಳಗೆ ಬಂದ ನರಸಿಂಹ ಹೆಜ್ಜೆಯ ಮೇಲೆ ಹೆಜ್ಜೆಯನಿಡುತ್ತಾ ಹಾಲ್ ಕಡೆಗೆ ನಡೆಯುತ್ತಿದ್ದಾನೆ, ಯಾರೂ ವಾಸವಿಲ್ಲದ ಕಾರಣ ಗಬ್ಬು ವಾಸನೆ ಹೊಡೆಯುತ್ತಿದೆ, ಈ ಪರಿಸ್ಥಿತಿಯಲ್ಲಿರುವ ಮನೆಯಲ್ಲಿ ಯಾರು ವಾಸಿಸಲು ಸಾಧ್ಯ ಒಂದೊಮ್ಮೆ ನನ್ನ ಲೆಕ್ಕಾಚಾರವೇನಾದರೂ ತಪ್ಪಾಯಿತೆ ಅಂದುಕೊಂಡ ಮನದೊಳಗೆ ನರಸಿಂಹ, ಯೊಚಿಸುತ್ತಲೇ ಮುಂದಡಿಯಿಡುತ್ತಿದ್ದವ ತೆರೆದ ಮೇಲ್ಛಾವಣಿಯ ಮಾದರಿ, ಬಾಲ್ಕಾನಿಯುಳ್ಳ ಹಾಲ್ ನ ಬಾಲ್ಕಾನಿಯಲ್ಲಿ ನಿಂತಿದ್ದ, ಮುಂದಿದ್ದ ಮರದ ಗ್ರಿಲನ್ನು ಹಿಡಿದು ಕೆಳಗೆ ಕಾಣುತ್ತಿದ್ದ ಹಾಲನ್ನು ಸುತ್ತಲೂ ಪರಿಶೀಲಿಸಿದ ನರಸಿಂಹ, ಈಗಾಗಲೇ ಈ ವಾತಾವರಣಕ್ಕೆ ಹೊಂದಿಕೊಂಡಿದ್ದ ನರಸಿಂಹನಿಗೆ ಸ್ವಲ್ಪ ಮನಸ್ಸಿನ ದುಗುಡ ಕಡಿಮೆಯಾಗಿತ್ತು, ಮಂದ ಬೆಳಕಿನಲ್ಲಿ ಕೆಳಗೆ ಕಾಣುತ್ತಿದ್ದ ದೊಡ್ಡದಾದ ಹಾಲ್ ನ ಭಾಗವನ್ನು ಸುತ್ತಲೂ ಗಮನಿಸುತ್ತಿದ್ದ ನರಸಿಂಹನಿಗೆ ಒಮ್ಮೆಲೆ ಶಾಕ್ ಹೊಡೆದಂತಾಯಿತು, ಹೌದು ಅಲ್ಲಿ ಒಬ್ಬ ಹೆಂಗಸನ್ನು ಕುರ್ಚಿಗೆ ಕಟ್ಟಿಹಾಕಿದೆ, ಹೆಚ್ಚು ತಡ ಮಾಡದೆ ಬಾಲ್ಕಾನಿಯ ಮೆಟ್ಟಲುಗಳಿಂದ ಕೆಳಗಿಳಿದು ಹಾಲ್ ನಲ್ಲಿದ್ದ ಆ ಕುರ್ಚಿಯ ಬಳಿ ದಾವಿಸಿದ ನರಸಿಂಹ, ಹತ್ತಿರ ಸಾರಿ ಮೊಬೈಲ್ ಬೆಳಕು ಬಿಟ್ಟು ನೋಡಿದ ನಿತ್ರಾಣಳಾಗಿ ಕಣ್ಣುಮುಚ್ಚಿ ಕುಳಿತಿರುವ ಆಕೆಯ ಬಾಯಿಗೆ ಬಟ್ಟೆ ತುರುಕಿದೆ, ಅವನ ಪ್ರಯತ್ನ ಫಲಿಸಿತ್ತು, ಆ ಕುರ್ಚಿಯಲ್ಲಿ ಬಂಧಿತಳಾಗಿರುವವಳು ಬೇರೆ ಯಾರೂ ಅಲ್ಲ, ಅದು ಅವನ ಸೌಭಾಗ್ಯ, ತಡಮಾಡದೆ ಬಾಯಿಗೆ ತುರುಕಿದ್ದ ಬಟ್ಟೆಯನ್ನು ತೆಗೆದ, ‘ಸೌಭಾಗ್ಯ ಸೌಭಾಗ್ಯ‘ - ಎಂದು ಮೆಲು ಧನಿಯಲ್ಲಿ ಕೂಗುತ್ತ ಕೈಗಳಿಗೆ ಕಟ್ಟಿದ್ದ ಕಟ್ಟನ್ನೂ ಬಿಚ್ಚಿದ. ಸೌಭಾಗ್ಯಳಿಗೆ ಈ ಕಡೆ ಪ್ರಘ್ನೆ ಇದ್ದಂತೆ ಕಾಣಲಿಲ್ಲ ಹತ್ತಿರ ಇದ್ದ ಟೀಪಾಯಿಯ ಮೇಲಿದ್ದ ನೀರಿನ ಬಾಟೆಲ್ನಿಂದ ನೀರು ತೆಗೆದು, ಸೌಭಾಗ್ಯಳ ಮುಖದ ಮೇಲೆ ಸಿಂಪಡಿಸಿದ, ಬೆಚ್ಚಿಬಿದ್ದ ಹರಿಣಿಯಂತೆ ಕಣ್ಣು ಬಿಟ್ಟಳು ಸೌಭಾಗ್ಯ, ಗಾಬರಿಯಿಂದ ನರಸಿಂಹನನ್ನು ನೋಡಿ ಒಂದು ಕ್ಷಣ ದಿಟ್ಟಿಸಿ ತಟ್ಟನೆ ಕುರ್ಚಿಯಿಂದ ಮೇಲೆದ್ದು ತನ್ನಿನಿಯನ ಕೈ ಹಿಡಿದು ‘ಏನೂಂದ್ರೆ ನೀವಾ?, ನಾನೇನು ತಪ್ಪು ಮಾಡಿಲ್ಲ ಅಂದ್ರೆ, ನನನ್ನು ಇಲ್ಲಿಂದ ಬೇಗ ಕರೆದು ಕೊಂಡೂ ಹೋಗಿ, ಅ ಪಾಪಿ ನನ್ನ ಬಿಡೊಲ್ಲಾ, ಬೇಗ ನಡೀರಿ, ಅವನೆಲ್ಲಿ?‘ - ತೀವ್ರವಾದ ಆಘಾತಕ್ಕೆ ಒಳಗಾಗಿದ್ದಳು ಸೌಭಾಗ್ಯ  - ‘ಯಾರದು ನಿನ್ನ ಕರೆದು ತಂದಿರುವವರು?, ಇಲ್ಲಿ ಯಾರೂ ಇಲ್ಲ‘ - ‘ಹಾಗಾದರೆ ಬೇಗ ನಡೆಯಿರಿ ಮೊದಲು ಇಲ್ಲಿಂದ ಹೋಗೋಣ ಆಮೇಲೆ ಎಲ್ಲಾ ಹೇಳುತ್ತೇನೆ‘ - ಇಷ್ಟು ಮಾತನಾಡುವುದರಲ್ಲಿ ತೀವ್ರವಾಗಿ ಬಳಲಿದ ಸೌಭಾಗ್ಯ ಕುರ್ಚಿಯ ಮೇಲೆ ಮತ್ತೆ ಕುಸಿದಳು. - ‘ ಭಾಗ್ಯ ಎಚ್ಚರ ಮಾಡಿಕೊ ಏಳು‘ - ಎಂದ ನರಸಿಂಹನಿಗೆ ಬಲ ಮೂಲೆಯಲ್ಲಿದ್ದ ರೂಂನ ಕಡೆ ಕೈ ಮಾಡಿ ತೋರಿಸಿ, ಸುಸ್ತಿನಿಂದ ಕಣ್ಣು ಮುಚ್ಚಿದಳು.
ಆ ರೂಮ್ನೆಡೆಗೆ ಏಕೆ ತೋರಿಸುತ್ತಿದ್ದಾಳೆ?, ಅಲ್ಲೇನಿದೆ?, ಇದನ್ನೂ ನೋಡೇಬಿಡೋಣ ಎಂದುಕೊಂಡು ಒಂದೊಂದೆ ಹೆಜ್ಜೆ ಇಟ್ಟು ಅತ್ತ ನಡೆದ ನರಸಿಂಹ, ಅಲ್ಲಿ ಯಾರಾದರೂ ಇದ್ದಾರೇನೊ ಎಂದು ಎಚ್ಚರಿಕೆಯಿಂದ ಗಮನಿಸುತ್ತಿದ್ದ, ಹತ್ತಿರ ಬಂದು ನಿಧಾನವಾಗಿ ಬಾಗಿಲನ್ನು ಸ್ವಲ್ಪ ಸ್ವಲ್ಪವೇ ಹಿಂದೆ ನೂಕಿದ ಯಾವ ಪ್ರತಿಕ್ರಿಯೆಯೂ ಇಲ್ಲದ್ದನ್ನು ಖಚಿತ ಪಡಿಸಿಕೊಂಡು ಒಳಗಡಿಯಿಡುತ್ತಾ ಸುತ್ತಲೂ ಗಮನಿಸಿದ, ಒಳಗೆ ಯಾರೂ ಇದ್ದ ಹಾಗೆ ಕಾಣಲಿಲ್ಲ. ರೂಂನ ಮಧ್ಯದಲ್ಲಿ ಮಂಚ ಹಾಗೂ ಮಂಚದ ಮೇಲೆ ಕಿಟ್ ಬ್ಯಾಗೊಂದು ಕಾಣಿಸಿತು, ಮಂಚವನ್ನು ಸಮೀಪಿಸಿ ನೋಡಿದ ಹೌದು ಅದು ತನ್ನ ಮನೆಯದೆ ಕಿಟ್ ಬ್ಯಾಗ್, ಹಾಕಿದ್ದ ಜಿಪ್ ಎಳೆದು ನೋಡಿದ ನರಸಿಂಹ ತನ್ನ ಕಣ್ಣನ್ನು ತಾನೆ ನಂಬದಾದ, ಮನೆಯಿಂದ ಹೊತ್ತೊಯಿದಿದ್ದ ವಡವೆಗಳೆಲ್ಲ ಹಾಗೆ ಇದೆ, ಸೌಭಾಗ್ಯ ಇದಕ್ಕಾಗಿಯೆ ರೂಂ ನೆಡೆಗೆ ಕೈತೋರಿರಬಹು ಎಂದುಕೊಂಡು, ಹೆಚ್ಚು ತಡ ಮಾಡಿದರೆ ಮತ್ತೇನಾದರೂ ಅಪಾಯವಗಬಹುದೆಂದು, ಆ ಬ್ಯಾಗನ್ನು ತೆಗೆದುಕೊಂಡು ರೂಮ್ನಿಂದ ಬೇಗನೆ ಹೊರಬಂದವನೆ ಹೊರಗಡೆ ಇದ್ದ ಚಂದ್ರಶೇಖರನ ಮೊಬೈಲ್ಗೆ ರಿಂಗ್ ಮಾಡಿದ.

ಸುಮಾರು ೪೦ ನಿಮಿಷ ಕಾಯುವ ತವಕದಲ್ಲಿದ್ದ ಚಂದ್ರಶೇಖರ, ಸುತ್ತಲೂ ಕತ್ತಲು ಸುರಿಯುತ್ತಿದೆ, ಆಗಾಗ ನಯಸ್ಸಾದ ರಸ್ತೆಯಮೇಲೆ ಬರ್... ಎಂದು ಹಾದು ಹೋಗುವ ಕಾರುಗಳ, ಮಂದಗತಿಯಲ್ಲಿ ಓಡುವ ಲಾರಿಗಳಲ್ಲಿರುವ ಭಾರವನ್ನು ಹೊರಲಾರೆ ಎಂದು ಅರಚಿ ಹೇಳುವ ಲಾರಿಗಳ ಟೈರ್ ಶಬ್ದ ಬಿಟ್ಟರೆ ಬೇರೆ ಶಬ್ದವಿಲ್ಲ. ಜೊತೆಗೆ ಒಳಗೆ ಏನು ನಡಿಯುತ್ತಿದೆ ಎಂಬ ಅರಿವಿಲ್ಲ, ಯಾವ ಸೌಜ್ನೆಯೂ ಬಂದಿಲ್ಲ, ಹೊರಗೆ ಹೋಗಿರುವ ಆ ಕಾರು ಯಾವ ಕ್ಷಣದಲ್ಲಾದರೂ ವಾಪಸ್ಸಾಗಬಹುದೆಂಬ ಆತಂಕ, ಎಲ್ಲವೂ ಸೇರಿ ಚಂದ್ರ ಶೇಖರನ ಮೆದುಳಿನ ರೇಡಿಯೇಟರ್ ಆಗಲೇ ಬಾಯ್ಲಿಂಗ್ ಪಾಯಿಂಟ್ ಮುಟ್ಟಿತ್ತು. ಅಂತಹ ಸಮಯದಲ್ಲಿ  ಒಮ್ಮೆಲೆ  ಕೈನಲ್ಲಿದ್ದ ಮೊಬೈಲ್ ಗರ್... ಗರ್.... ಎಂದು ಅಲ್ಲಾಡಿದಾಗ ಗಾಬರಿಯಾಯ್ತು. ತಡಬಡಿಸಿ ಮೊಬೈಲ್ನಲ್ಲಿ ತೋರಿಸುತ್ತಿದ್ದ ಹೆಸರನ್ನು ಗಮನಿಸಿ, ನರಸಿಂಹ, ಇದೇನಿದು ಏನಾದರೂ ಅಪಾಯವಿದ್ದರೆ ಎರಡು ಮಿಸ್ ರಿಂಗ್ ಕೊಡ್ತಿನಿ ಅಂದಿದ್ದೋನು ಕಂಟಿನುಯಸ್ಸಾಗಿ ರಿಂಗ್ ಮಾಡ್ತಿದ್ದಾನೆ, ಏನು ಅಪಾಯವೊ ಏನೋ ಅನ್ಕೊಂಡು ಫ಼ೋನ್ ರಿಸೀವ್ ಮಾಡ್ದ, - ‘ಹೇಳು ನರಸಿಂಹ ಏನಾಯ್ತು ಒಳಗೆ ಬರ್ಲಾ‘ - ‘ತಕ್ಷಣ ಒಳಗೆ ಬರಬೇಕು, ಹಾ... ಒಂದು ಕೆಲಸ ಮಾಡು ಕಾರನ್ನು ಸೀದಾ ಕಾಂಪೌಂಡ್ ಒಳಕ್ಕೆ ತೆಗೆದುಕೊಂಡು ಬಾ, ಇಲ್ಲಿ ಓಳಗಿರುವ ಮನೆಯಮುಂದೆ ರಿವರ್ಸ್ ತೆಗೆದು ನಿಲ್ಲಿಸಿರು, ತಕ್ಷಣ ಹೊರಡುವಂತಿರಬೇಕು, ಆಮೇಲೆ ಇನ್ನೊಂದು ವಿಷಯ ಸೌಭಾಗ್ಯ ಸಿಕ್ಕಿದ್ದಾಳೆ ಬಾಕಿ ವಿಷಯ ಆಮೇಲೆ‘ -  ಲೈನ್ ಕಟ್ ಆಯ್ತು.

ಎಷ್ಟು ಎಚ್ಚರಿಸಿದರೂ ಎದ್ದು ನಡೆಯುವ ಸ್ಥಿತಿಯಲಿಲ್ಲ ಸೌಭಾಗ್ಯ, ಕಾಯ್ದು ಅವಳನ್ನು ಎಬ್ಬಿಸಿ ಹೊರಡುವಷ್ಟು ಸಮಯವಿಲ್ಲ, ಭಹುಷಃ ತನ್ನ ಗಂಡನನ್ನು ನೋಡಿದ ಸಮಾಧಾನವೊ ಇನ್ನು ತನಗೆ ಭಯವಿಲ್ಲವೆಂಬ ಅಭಯವೊ, ತೀಕ್ಷ್ಣವಾಗಿ ಧಣಿದಿರುವ ಶರೀರದ ಆಯಾಸವೋ, ಅಂತು ಸೌಭಾಗ್ಯ ನಿಶ್ಚಿಂತೆಯ ನಿದ್ದೆಗೆ ಜಾರಿದ್ದಳೆ. ಧೃಡ ಮನಸ್ಸು ತಳೆದ ನರಸಿಂಹ ಮನೆ ದೇವರನ್ನು ಮನದಲ್ಲಿ ನೆನೆದ, ಸೌಭಾಗ್ಯಳ ಎಡ ಬಲ ಭುಜದ ತೋಳನ್ನು ಹಿಡಿದು ಎಬ್ಬಿಸಿ ನಿಲ್ಲಿಸಿ, ಸ್ವಲ್ಪ ಕೆಳಕ್ಕೆ ಬಗ್ಗಿ, ಒಂದೆ ಮನಸ್ಸಿನಿಂದ ಅವಳನ್ನು ತನ್ನ ಹೆಗಲ ಮೇಲೆ ಮಲಗಿಸಿಕೊಂಡು ಎಡಕೈನಿಂದ ಆಸರೆ ಕೊಟ್ಟು ಧೃಡವಾಗಿ ಎದ್ದು ನಿಂತವನು, ತನ್ನ ಬಲಗೈನಿಂದ ಕಿಟ್ ಬ್ಯಾಗಿನ ಹಿಡಿಯನ್ನು ಹಿಡಿದು ಎತ್ತಿಕೊಂಡವನೆ ದಾಪುಗಾಲುಗಳನ್ನಿಡುತ್ತಾ, ತಾನು ಇಳಿದು ಬಂದ ಮೆಟ್ಟಲುಗಳನ್ನೇರಿ ಬಾಲ್ಕಾನಿಯ ಮೂಲಕ ಹಾಯ್ದು, ಒಳತೂರಿದ ಕಿಟಕಿಯ ಬಳಿ ಬಂದ. ಒಂದು ಕ್ಷಣ ಅಲ್ಲಿ ಸುಧಾರಿಸಿ ಕೊಂಡು, ಸೌಭಾಗ್ಯಳನ್ನು ಮೊದಲು ಕಿಟಕಿಯಿಂದ ಹೊರಗೆ ಕಳುಹಿಸಿದ. ತೋಯ್ದಾಡುತ್ತಿದ್ದವಳನ್ನು ಒಂದು ಕೈಲಿ ಹಿಡಿದು ತಾನೂ ಕಿಟಕಿಯಿಂದ ಹೊರಬಂದು, ಮತ್ತೆ ಅದೇ ರೀತಿ ಸೌಭಾಗ್ಯಳನ್ನು ಹೊತ್ತು ತಾನು ಮೇಲೇರಿದ ತೆಂಗಿನ ಮರದ ಬಳಿ ಬಂದವನೆ ಬಲಗೈಲಿದ್ದ ಕಿಟ್ ಬ್ಯಾಗನ್ನು ಕೆಳಕ್ಕೆ ಹಾಕಿ ಸೌಭಾಗ್ಯಳ ಭಾರವನ್ನು ಹೊತ್ತು, ಬಲಗೈಯನ್ನು ಆಸರೆಯಾಗಿಸಿ ಮರವನ್ನು ಹಿಡಿದು ಕೆಳಗಿಳಿದ.

ಎಷ್ಟು ಹೊತ್ತಯಿತು ಫ಼ೋನ್ ಮಾಡಿ ಇನ್ನೂ ಇವನ ಸುಳಿವಿಲ್ಲ, ಒಳಗೆಲ್ಲಿದ್ದಾನೊ ಮುಂದಿನ ಬಾಗಿಲು ಹಾಕಿದೆ ಏನು ಮಾಡೋದೀಗ ಎಂಬ ದುಗುಡದಲ್ಲಿದ್ದ ಚಂದ್ರಶೇಖರನಿಗೆ ಕಳೆದಿದ್ದು ಕೆಲವೇ ಕ್ಶಣಗಳಾದರೂ, ಅದು ಗಂಟೆಗಳೆನ್ನಿಸ್ಸಿತ್ತು ಮನೆಯ ಎಡ ಬದಿಯಿಂದ ಹೆಜ್ಜೆಗಳ ಸದ್ದಾಗುವುದನ್ನರಿತ ಚಂದ್ರು ಗಾಬರಿ ಹಾಗು ಎಚ್ಚರಿಕೆಯಿಂದ ಆ ಕಡೆ ತಿರುಗಿ ನೋಡಿದ, ಸಮಯದ ಸೂಕ್ಷ್ಮತೆಯನ್ನರಿತ ಅವನು ಕಾರಿನ ಹಿಂದಿನ ಬಾಗಿಲನ್ನು ತೆರೆದವನೆ, ನಡೆದು ಬರುತ್ತಿದ್ದ ನರಸಿಂಹನೆಡೆಗೆ ಧಾವಿಸಿ ಅವನ ಕೈನಲ್ಲಿದ್ದ ಬ್ಯಾಗಿನ ಭಾರವನ್ನು ತಾನು ತೆಗೆದು ಕೊಂಡವನೆ, ಪುನಃ ಕಾರ್ನೆಡೆಗೆ ಧಾವಿಸಿ ಬ್ಯಾಗನ್ನು ಹಿಂದಿನ ಆಸನದ ದ್ವಾರದ ಮುಖಾಂತರ ಡಿಕ್ಕಿಯಲ್ಲಿ ಹಾಕಿ, ಆಗಲೆ ಕಾರ್ ನ ಬಳಿಗೆ ಬಂದಿದ್ದ ನರಸಿಂಹನಿಗೆ ಅವನ ಹೆಗಲ ಮೇಲೆ ಮಲಗಿದ್ದ ಸೌಭಾಗ್ಯಳನ್ನು ಒಳಗೆ ಕೂಡಿಸಲು ಅನುವು ಮಾಡಿಕೊಟ್ಟ.
ಸೌಭಾಗ್ಯಳನ್ನು ಒಳಗೆ ಕೂಡಿಸುತ್ತಲೆ ತ್ವರಿತವಾಗಿ ಹೊರಡು ಎನ್ನುತ್ತಾ ನರಸಿಂಹ ‘ ಬೇಗ, ಬೇಗ ‘ - ಅನ್ನುತ್ತಿದ್ದ, ಆಗಲೆ ಚಾಲಕನ ಆಸನದಲ್ಲಿ ಕುಳಿತಿದ್ದ ಚಂದ್ರಶೇಖರನನ್ನು ನೋಡಿ.

ಇಗ್ನಿಷನ್ ಆನ್ ಮಾಡಿ ಎಂಜಿನ್ಗೆ ಜೀವ ಕೊಟ್ಟು, ತೋಟದೊಳಗಿಂದ ಹೊರ ತಂದು, ಕಚ್ಚಾ ರಸ್ತೆಯಲ್ಲಿ ಎಷ್ಟು ಸಾಧ್ಯವೊ ಅಷ್ಟು ವೇಗವಾಗಿ ಮುನ್ನಡೆಸಿ, ಮುಖ್ಯ ರಸ್ತೆಗೆ ಕಾರು ತಲುಪಿದ್ದೆ ತಡ, ಲಾಂಚರ್ನಿಂದ ಹೊರ ಚಿಮ್ಮುವ ರಾಕೇಟ್ನಂತೆ, ಶರ ವೇಗಕ್ಕೆ ಸಮವೇನೊ ಎಂದು ಭಾಸವಾಗುವಂತೆ ಕಾರನ್ನು ಚಲಾಯಿಸಿದ ಚಂದ್ರಶೇಖರ.

ಸೌಭಾಗ್ಯಳನ್ನು ದಿಟ್ಟಿಸಿ ನೋಡಿದ ನರಸಿಂಹ, ಅಯ್ಯೊ ಪಾಪ ಎನ್ನಿಸಿತು, ೩-೪ ದಿನದಿಂದ ಎಷ್ಟು ನೊಂದಿದೆಯೊ ಈ ಜೀವ ಎನ್ನಿಸಿತು, ಎಬ್ಬಿಸೋಣವೇ ಅಂದುಕೊಂಡವನು, ಬೇಡ ಸ್ವಲ್ಪ ನೆಮ್ಮದಿಯಾಗಿ ಮಲಗಲಿ ಆಮೇಲೆ ನೋಡೋಣ ಎಂದು ಸುಮ್ಮನಾದ. ಸತತ ಕೆಲವು ದಿನಗಳ ತೊಳಲಾಟ, ಯವುದಕ್ಕೂ ಗೊತ್ತು ಗುರಿ ಇಲ್ಲದೆ ಒತ್ತಡದ ಮನಸ್ಸಿನ ಜೊತೆ ಓಡಾಟದ ಆಯಾಸ, ಏನಾದಳೊ? ಏನೋ, ಮತ್ತೆ ಸಿಗಿತ್ತಾಳೋ ಇಲ್ಲವೋ ಎಂದು ವೇದನೆ ಅನುಭವಿಸಿದ ಮನಸ್ಸಿಗೆ, ಈಗ ತನ್ನವಳು ತನಗೆ ವಾಪಸ್ಸು ಸಿಕ್ಕಳೆಂಬ ಸಮಾಧಾನ, ಜೊತೆಗೆ ತಾನೆ ಪ್ರಯತ್ನ ಪಟ್ಟು ಮತ್ತೆ ವಾಪಸ್ಸು ತಂದೆ ಎಂಬ ಆತ್ಮಾಭಿಮಾನ, ಎಲ್ಲದರ ಮಜಲಿನಲ್ಲಿದ್ದ ನರಸಿಂಹ, ತನ್ನ ಎಡಗೈಯನ್ನು ಸೌಭಾಗ್ಯಳ ಕೊರಳ ಹಿಂದಿನಿಂದ ಬಳಸಿ ಅವಳನ್ನು ತನ್ನ ಭುಜದ ಬಳಿ ಎಳೆದು ಕೊಂಡು, ಹಾಗೆಯೆ ಹಿಂದಕ್ಕೊರಗಿ ಕಣ್ಣುಮುಚ್ಚಿ ಕುಳಿತ. ರೇ ವೀವ್ ಮಿರರ್ ನಲ್ಲಿ ಇಬ್ಬರೂ ನೆಮ್ಮದಿಯಾಗಿ ಮಲಗಿರುವುದನ್ನು ಗಮನಿಸಿದ ಚಂದ್ರಶೇಖರ, ಮುಗುಳ್ನಗೆಯೊಂದಿಗೆ ರಸ್ತೆಯ ಕಡೆ ತನ್ನ ಏಕಾಗ್ರತೆಯನ್ನು ನೀಡುವ ಮುನ್ನ ಆಡಿಯೊ ಸಿಸ್ಟಂನಲ್ಲಿ ಸಮಯ ನೋಡಿದ ಆಗಲೆ ೯-೩೦ ರ ಹತ್ತಿರವಾಗುತ್ತಿದೆ. ೧೦ ರಿಂದ ೧೨ ಕಿ ಮಿ ದೂರ ಕ್ರಮಿಸಿದ್ದರೇನೂ, ಮುಂದೆ ರಸ್ತೆಯಲ್ಲಿ ಸ್ವಲ್ಪ ವಾಹನಗಳ ದಟ್ಟಣಿ ಕಾಣಿಸಿತು, ಹತ್ತಿರ ಬರುವ ಹೊತ್ತಿಗೆ ಕಾರಿನ ವೇಗ ತಗ್ಗಿಸಿ ಮುಂದಿದ್ದ ವಾಹನ ಹಿಂದೆ ತನ್ನ ಕಾರನ್ನು ನಿಲ್ಲಿಸಿದವನೆ ಎಂಜಿನ್ ಆಫ಼್ ಮಾಡಿದ. ವೇಗವಾಗಿ ಹೋಗುತ್ತಿದ್ದ ಕಾರು ನಿಂತಾಗ ಎಚ್ಚೆತ್ತ ನರಸಿಂಹ - ‘ಏಕೆ ಏನಾಯ್ತು?‘ - ‘ಗೊತ್ತಿಲ್ಲ ಏನೋ ಆಕ್ಸಿಡೆಂಟ್ ಅಂತ ಕಾಣುತ್ತೆ ವೆಹಿಕಲ್ಸ್ ನಿಂತಿದೆ ಮುಂದೆ ಹೋಗುತ್ತಿಲ್ಲ, ಒಂದು ನಿಮಿಷ ವಿಚಾರಿಸಿ ಬಂದುಬಿಡುತ್ತೇನೆ‘ - ‘ನಿಧಾನ ಮಾಡಬೇಡ‘ - ಎಂದ ನರಸಿಂಹ.

ಹೊರಗೆ ಹೋದವನು ೫ ನಿಮಿಷದಲ್ಲೇ ವಾಪಸ್ಸು ಬಂದ, ವಾಹನಗಳು ನಿಧಾನವಾಗಿ ಚಲಿಸ ತೊಡಗಿದವು. ಸ್ವಲ್ಪ ದೂರ ಮುನ್ನಡೆದ ಮೇಲೆ - ‘ನರಸಿಂಹ ಅಲ್ಲಿ ಆಕ್ಸಿಡೆಂಟ್ ಆಗಿತ್ತಲ್ಲ, ಅಲ್ಲಿ ಕಾರು ಮುಂದಿನ ಅರ್ಧಭಾಗ ಪೂರ್ತಿ ಲಾರಿಯ ಕೆಳಗೆ ಸೇರಿಕೊಂಡಿತ್ತು, ಕಾರಿನ ಡ್ರೈವರ್ ಸ್ಪಾಟ್ ಔಟ್ ಅಂತೆ, ಅಲ್ಲಿದ್ದೋರು ಮಾತನಾಡಿಕೊಳ್ಳುತ್ತಿದ್ದರು, ಆಮೇಲೆ ಆ ಕಾರು ಬೇರೆ ಯಾವ್ದು ಅಲ್ಲ ನಾವು ಹಿಂಬಾಲಿಸಿ ಕೊಂಡು ಬಂದ ಕಾರು‘ - ‘ಏನೂ ಆ ಕಾರಾ? ಸರಿಯಾಗಿ ನೋಡಿದೆಯಾ?‘ - ‘ಹೌದು ಅದೇ ಕಾರು, ಹಾಸನದ್ದು ಸಿ-೦೧೦೨. ಹಾಗಾಗೆ ನಾನು ತಕ್ಷಣ ವಾಪಸ್ಸು ಬಂದೆ, ಸದ್ಯ ಬೇಗ ಟ್ರಾಫ಼ಿಕ್ ಕೂಡ ಚಾಲನೆಯಾಯ್ತು‘.

ಇತ್ತ ಊರಿನಲ್ಲಿ ‘ಅಲ್ಲಾ ರಿ ಮಧ್ಯಾಹ್ನದಲ್ಲಿ ಕರೆ ಮಾಡಿದ್ದ ನರಸಿಂಹ ಮತ್ತೆ ಮಾಡ್ಲೇ ಇಲ್ವಲ್ರಿ, ಏನಾಯ್ತೋ ಏನೊ? ಒಂದೂ ಗೊತ್ತಗ್ತಿಲ್ಲ, ನೀವೇ ಮಾಡಿ ನೋಡ್ರಿ ಅಂದ್ರು ರಾಯರ ಯಜಮಾನಿ‘. ಅದೂ ಸರಿಯೆ ಎಂದು ಕೊಂಡ ಸುಬ್ಬರಾಯ ಭಟ್ಟರು ಕುಳಿತಲ್ಲಿಂದ ಎದ್ದು ಫ಼ೋನ್ ನೆಡೆಗೆ ನಡೆದರು. ಇನ್ನೇನು ಫ಼ೋನ್ ಎತ್ತಿಕೊಳ್ಳಬೇಕು ಕರೆ ಮಾಡಲು ಅನ್ನುವ ಕ್ಷಣಕ್ಕೆ ಸರಿಯಾಗಿ ಫ಼ೋನ್ ರಿಂಗ್ ಆಯ್ತು,‘ ಓ.. ಅವರೆ ಇರಬೇಕು, ಯಾರದು‘ - ‘ಅಪ್ಪ ನಾನು ನರಸಿಂಹ, ಬೆಂಗಳೂರಿಂದ ಹೊರಟಿದ್ದೇವೆ, ಸಾದ್ಯವಾದಷ್ಟು ಬೇಗ ಅಲ್ಲಿಗೆ ಬರುತ್ತೇವೆ, ನೀವೇನೂ ಕಾಯ ಬೇಡಿ ಮಲಗಿರಿ, ಹಾ... ಇನ್ನೊಂದು ವಿಷ್ಯ ಅಪ್ಪ ನಮ್ಮ ಸೌಭಾಗ್ಯ ಸಿಕ್ಕಿದ್ದಾಳೆ ಕರೆದುಕೊಂಡು ಬರುತ್ತಿದ್ದೇವೆ, ನಾನು ಅಲ್ಲಿಗೆ ಬಂದ್ಮೇಲೆ ವಿವರವಾಗಿ ಹೇಳುತ್ತೇನೆ, ಅಮ್ಮನಿಗೂ ಹೇಳ್ಬಿಡಿ‘ - ‘ಸರಿಯಪ್ಪ ಜೋಪಾನ ನಾವು ಕಾಯ್ತಿರ್ತಿವಿ‘ - ಫ಼ೋನ್ ಕಟ್ ಆಯ್ತು.

‘ನೋಡಿದ್ಯಾ ಲಕ್ಷ್ಮಿ ಮಕ್ಕಳು ಆಗಲೇ ವಾಪಸ್ಸು ಬರುತ್ತಿದ್ದಾರೆ ಅದೂ ಸೌಭಾಗ್ಯಳೂ ಜೊತೆಗಿದ್ದಾಳಂತೆ, ನೀನು ಅವಳಮೇಲೆ ಅನುಮಾನ ಪಟ್ಟೆ, ನೋಡಿಗ ನಿನಾಡಿದ ಆ ಮಾತುಗಳನ್ನು ವಾಪಸ್ಸು ಪಡೆಯಲು ಸಾಧ್ಯವೇ?‘ - ಅಂದರು.

ಮನೆಗೆ ಬಂದೊಡನೆಯೆ ಸೌಭಾಗ್ಯ ಅತ್ತೆ-ಮಾವನ ಕಾಲಿಗೆ ನಮಸ್ಕಾರ ಮಾಡಿ
‘ ಮಾವ ಅದು ಏನಾಯ್ತು ಅಂದ್ರೆ.....‘ ಎಂದು ಉಮ್ಮಳಿಸಿ ಬರುತ್ತಿರುವ ದುಃಖವನ್ನು ತಡೆದು, ಸೌಭಾಗ್ಯ ಹೇಳ ಹೊರಟಾಗ ‘ನೋಡು ತಾಯಿ ನೀನು ಏನೂ ಹೇಳಬೇಡ, ಆಗಿದ್ದು ಆಗಿ ಹೋಯ್ತು ನಡೆದಿದ್ದೆಲಾ ಒಂದು ಕೆಟ್ಟ ಕನಸು ಅಂತ ಮರೆತು ಬಿಡು, ನೀನೇನು ಅಂತ ನನಗೆ ಗೊತ್ತು, ನೆಮ್ಮದಿಯಾಗಿ ನಿದ್ದೆ ಮಾಡು ಹೋಗು ತಾಯಿ‘ - ಅಂದ್ರು ಸುಬ್ಬರಾಯ ಭಟ್ರು.

‘ಹೌದು ಸೌಭಾಗ್ಯ ಎಲ್ಲಾ ಮರೆತು ಬಿಡು, ನೀನು ನನ್ನ ಸೊಸೆ ಮಾತ್ರ ಅಲ್ಲಮ್ಮ ನನ್ನ ಮಗಳು ಕೂಡ, ಎಲ್ಲರನ್ನೂ ಅನುಮಾನದಿಂದ ನೋಡುತ್ತಿದ್ದ ನನ್ನಲ್ಲಿ ಇಂದು ಹೊಸ ಭರವಸೆ ನಂಬಿಕೆ ಮೂಡಿಸಿದೆ, ನಿನ್ನನ್ನು ನೋಡಿದರೆ ನಿನ್ನ ಸ್ಥಿತಿ ನನಗೆ ಅರಿವಾಗುತ್ತದೆ, ನಾವೆಲ್ಲಾ ನಿನ್ನೊಡನಿದ್ದೇವೆ, ಸದ್ಯ ನೀನು ನನ್ನ ಮಗ ತಿರುಗಿ ಕ್ಷೇಮವಾಗಿ ಮನೆಗೆ ಬಂದ್ರಲ್ಲ ಅಷ್ಟು ಸಾಕು‘ - ಅಂದ್ರು ರಾಯರ ಪತ್ನಿ. - ‘ದೊಡ್ಡಮ್ಮ ಅಷ್ಟೆ ಅಲ್ಲ ಒಂದ್ನಿಷ ಬಂದೆ‘ - ಇರಿ ಅಂದವನೆ ಹೊರಗೆ ಹೋಗಿ ಒಳ ಬಂದ ಚಂದ್ರು ವಡವೆಯ ಬ್ಯಾಗನ್ನೂ ಅವರ ಮುಂದಿಡುತ್ತ ‘ತಗೊಳ್ಳಿ ನಿಮ್ಮ ಸೊಸೆಯ ಜೊತೆ ಹೊರಗೆ ಹೋಗಿದ್ದ ಐಶ್ವರ್ಯ ಲಕ್ಷ್ಮಿ ಕೂಡಾ ವಾಪಸ್ಸು ಬಂದಿದ್ದಾಳೆ ನೋಡಿ ಅಂದ‘ - ‘ಏನು ವಡವೆಗಳೆಲ್ಲಾ ಮತ್ತೆ ಸಿಗ್ತಾ ಹೋಗ್ಲಿ ಬಿಡು  ಎಲ್ಲಾ ಸರಿಹೋಯ್ತು, ಏನೆ ಅದ್ರೂ ಇದೆಲ್ಲಕಿಂತ ನಮ್ಮ ಸೊಸೆ ಮನೆಗೆ ಬಂದ್ಲು ಅದು ನನಗೆ ದೊಡ್ಡದು, ಬರುವಾಗ ಜೊತೆಲಿ ನನಗೆ ಹೊಸ ನಂಬಿಕೆ ಭರವಸೆ ಎರಡನ್ನೂ ತಂದಳು ಅದೇ ನನಗೆ ಸೊಸೆ ತಂದ ಸೌಭಾಗ್ಯ‘ - ನಗುನಗುತ್ತಾ ಎಲ್ಲರೂ ಊಟದ ಮನೆಯತ್ತ ಹೆಜ್ಜೆ ಹಾಕಿದರು. ................................................................................. ಅರೆ ಇದೇನ್ರಿ ಇನ್ನು ಓದ್ಕೊಂಡು ಮುಂದೆ ಮುಂದೆ ಬರ್ತಾನೆ ಇದೀರಲ್ಲ ಆಯ್ತು ಅಷ್ಟೆ, ಇನ್ನೇನು ಆಗಬೇಕ್ರಿ? ಮನೆಯಿಂದ ಹೊರಗೆ ಹೋಗಿದ್ದ ಸೌಭಾಗ್ಯ ಮನೆ ಸೇರಿದ್ಲು, ಅವಳ ಸಂಕಟದ ಪರಿಸ್ಥಿತಿಯನ್ನು ನೋಡಿದ ಅವಳ ಗಂಡ, ಅಲ್ಲಿಂದ ಅವಳನ್ನು ಪಾರುಮಾಡಿ ಅವಳದೇನೂ ತಪ್ಪಿಲ್ಲ ಎಂದು ಒಪ್ಪಿ ಅವಳನ್ನು ಅಪ್ಪಿ ಸ್ವೀಕರಿಸಿದ್ದಾನೆ, ಅವರ ಮಾವ ನೀನು ಎನೂ ಹೇಳಬೇಡ ತಾಯಿ, ನೀನೇನೆಂದು ನನಗೆ ಗೊತ್ತು, ನೆಮ್ಮದಿಯಾಗಿರು ಎಂದು ಹರಸಿದ್ದಾರೆ, ಇನ್ನು ಎಲ್ಲರನ್ನೂ ಅನುಮಾನದಿಂದ ನೋಡುತ್ತಿದ್ದ ಅವರತ್ತೆ ನೀನು ಮನೆಗೆ ವಾಪಸ್ಸಗಿ ಹೊಸ ಭರವಸೆಯ ನಂಬಿಕೆಯ ಸೌಭಾಗ್ಯವನ್ನೇ ನನಗೆ ಕೊಟ್ಟೆ ಅದೇ ಸಾಕು ಅಂದ್ರು, .... ಇಷ್ಟಾದ ಮೇಲೆ ಇನ್ನೇನಾಗಬೇಕು ನಮಗೆ ತಾನೆ ಅಲ್ವಾ?.... ಏನು ಸೌಭಾಗ್ಯ ಅವತ್ತು ರಾತ್ರಿ ಏನು ನಡೀತು ಅಂತ ಹೇಳ್ಲೇ ಇಲ್ಲ ಅಂತಿದೀರಾ?.... ಏನ್ರಿ ನೀವು? ಪಾಪ ಸುಬ್ಬರಾಯ ಭಟ್ಟರು ಅದು ಅವರ ಮನೆ ಮರ್ಯಾದೆ ಪ್ರಶ್ನೆ ಅಂತ ಎಷ್ಟು ಗೌಪ್ಯತೆ ಕಾಪಾಡಿದ್ದಾರೆ ಈಗೇಕೆ ಅದರ ಪ್ರಸ್ತಾಪ ಅಲ್ವಾ? ಬಿಟ್ಬಿಡ್ರಿ ಬೇಡ. .... ಏನು.. ನನಗೆ ಗೊತ್ತಲ್ವ ಹೇಳಿ ಅಂತಿದ್ದೀರಾ? ಅಲ್ಲಾರಿ ಆ ವಿಷ್ಯ ನನಗೆ ಗೊತ್ತಿದೆ ಅಂತ ಭಟ್ರ ಮನೆಯೊರಿಗೆಲ್ಲಾ ಗೊತ್ತು, ಹಾಗಾಗಿ ಇದು ನನ್ನಿಂದ ಬೀದಿ ಟಾಂ ಟಾಂ ಆಯ್ತು ಅಂತ ಭಟ್ರುಗೆ ಗೊತ್ತಾದ್ರೆ ಅವರು ನನ್ನ ಬಗ್ಗೆ ಏನಂದ್ಕೊಳ್ಳ ಹೇಳಿ.... ಈ ವಿಷ್ಯ ನನಗೆ ಧರ್ಮ ಸಂಕಟ ಆದ್ರಿಂದ ಸ್ವಲ್ಪ ಯೋಚ್ನೆ ಮಾಡಿ ಹೇಳಿ, ನಾನೂ ವಿಚಾರ ಮಾಡ್ತಿನಿ ಆಯ್ತಾ............ ಮತ್ತೆ ಸಿಗೋಣ ಹೀಗೆ ಯಾವ್ದಾದ್ರೂ ಸಂಗ್ತಿ ತಿಳಿದ್ರೆ ನಿಮಗೂ ಹೇಳ್ತೀನಿ... ಓಕೆ ಬರ್ಲಾ.....?

-ರಾಮಮೋಹನ.




 

Rating
No votes yet

Comments