ಮಾಂತ್ರಿಕ ದ್ವೀಪ - ಜಾನಪದ ಕಥೆ

ಮಾಂತ್ರಿಕ ದ್ವೀಪ - ಜಾನಪದ ಕಥೆ

ವಸಂತಪುರ ಒಂದು ಸುಂದರ ಪ್ರಾಂತ. ಆ ಪ್ರಾಂತದ ರಾಜ ವೀರಪ್ರತಾಪ. ವೀರಪ್ರತಾಪನ ಆಳ್ವಿಕೆಯಲ್ಲಿ ವಸಂತಪುರ ಸಮೃದ್ಧವಾಗಿತ್ತು. ವೀರಪ್ರತಾಪ ಪ್ರಜೆಗಳನುಮಕ್ಕಳಂತೆಯೇ ಪ್ರೀತಿಸುತ್ತಿದ್ದ. ಪ್ರಜೆಗಳು ಅಷ್ಟೇ ರಾಜನನ್ನು ಬಹಳ ಗೌರವಿಸುತ್ತಿದ್ದರು. ಎಲ್ಲವೂ ಚೆನ್ನಾಗಿದ್ದರೂ ವೀರಪ್ರತಾಪನಿಗೆ ಕೊರಗೊಂದು ಉಳಿದುಬಿಟ್ಟಿತ್ತು.ಅದೇನೆಂದರೆ ಆತನಿಗೆ ಮಕ್ಕಳಿರಲಿಲ್ಲ. ತನ್ನ ಮೊದಲನೆಯ ಹೆಂಡತಿ ತ್ರಿಪುರಾದೇವಿಗೆ ಮದುವೆಯಾಗಿ ಮೂರು ವರ್ಷಗಳಾದರೂ ಮಕ್ಕಳಾಗದಿದ್ದಾಗ,ಅಂಬಿಕಾದೇವಿಯನ್ನು ತನ್ನ ಎರಡನೆ ಹೆಂಡತಿಯಾಗಿ ವಿವಾಹವಾಗಿದ್ದ.  ಆದರೆ ಮದುವೆಯಾಗಿ ಎರಡು ವರ್ಷಗಳು ಕಳೆದರೂ ಮಕ್ಕಳಾಗುವ ಯಾವುದೇಲಕ್ಷಣಗಳಿರಲಿಲ್ಲ. ಅದೇ ಕೊರಗು ರಾಜನನ್ನು ಕಾಡುತ್ತಿತ್ತು. ಹೀಗಿರಲು ಒಂದು ದಿನ ಆಸ್ಥಾನಕ್ಕೆ ಪ್ರಖಾಂಡ ಪಂಡಿತರಾದ ರಾಜಶ್ರೀ ಮಾರ್ತಾಂಡ ಶಾಸ್ತ್ರಿಗಳು ಭೇಟಿ ಕೊಡುತ್ತಿದ್ದಾರೆಂದು ತಿಳಿದು ರಾಜನಿಗೆ ಬಹಳ ಸಂತೋಷವಾಯಿತು. ಪಂಡಿತರನ್ನು ಸತ್ಕರಿಸಲು ಸಕಲ ಏರ್ಪಾಟುಗಳನ್ನು ಮಾಡಿಕೊಂಡು ಸಿದ್ಧನಾದ.

ಮರುದಿನ ಆಸ್ಥಾನಕ್ಕೆ ಬಂದ ಪಂಡಿತರು ಸಭೆಯಲ್ಲಿ ನೆರೆದಿದ್ದವರನ್ನು ತಮ್ಮ ಪಾಂಡಿತ್ಯದಿಂದ ಆಶ್ಚರ್ಯಚಕಿತಗೊಳಿಸಿದರು. ನಂತರ ರಾಜನು ಪಂಡಿತರಿಗೆ ಸನ್ಮಾನಮಾಡಲು ತಾನು ಹಾಗೂ ತನ್ನ ಇಬ್ಬರು ರಾಣಿಯರೊಂದಿಗೆ ಬಂದಾಗ ಪಂಡಿತರು ಸತ್ಕಾರ ಸ್ವೀಕರಿಸಲು ನಿರಾಕರಿಸಿದರು. ರಾಜನಿಗೆ ಅರ್ಥವಾಗದೆ ಕಾರಣ
ಕೇಳಿದಾಗ ಪಂಡಿತರು ನಾವು ಪುತ್ರಾಸಂತಾನ ಇಲ್ಲದವರ ಕೈಯಿಂದ ಸತ್ಕಾರ ಸ್ವೀಕರಿಸುವುದಿಲ್ಲ ಎಂದರು. ಇದರಿಂದ ಬಹಳ ಬೇಸರಗೊಂಡ ರಾಜ ತನ್ನಪರಿಸ್ಥಿತಿಯನ್ನು ವಿವರಿಸಿ ಪರಿಹಾರ ಕೇಳಿದಾಗ ಪಂಡಿತರು ರಾಜನನ್ನು ಹತ್ತಿರ ಕರೆದು ಒಂದು ಹಣ್ಣನ್ನು ಮಂತ್ರಿಸಿಕೊಟ್ಟು ಹಾಗೆ ಬರುವ ಹುಣ್ಣಿಮೆಯಂದು ಒಂದುಯಾಗವನ್ನು ಮಾಡಲು ಸೂಚಿಸಿ ಆ ಯಾಗದ ನಂತರ ಮಧ್ಯರಾತ್ರಿ ಕಳೆದು ಬೆಳಗಿನ ಜಾವ ಕೋಳಿ ಕೂಗುವುದಕ್ಕೆ ಮೊದಲು ಈ ಹಣ್ಣನ್ನು ನಿನ್ನ ಇಬ್ಬರು ಮಡದಿಯರು ತಿನ್ನಬೇಕು. ಒಂದು ವಿಷಯ ಗಮನದಲ್ಲಿಟ್ಟುಕೊ ಆ ದಿನ ರಾತ್ರಿ ನೀವೂ ಮೂವರು ಕಲೆಯಬಾರದು. ಮೂವರು ಬೇರೆ ಬೇರೆ ಕೋಣೆಗಳಲ್ಲಿ ಮಲಗಬೇಕು.ಒಂದು ವೇಳೆ ಕೋಳಿ ಕೂಗಿದ ನಂತರ ಏನಾದರೂ ಹಣ್ಣನ್ನು ಸೇವಿಸಿದರೆ ಆ ಮಗು ಅಲ್ಪಾಯುಷಿಯಾಗುತ್ತದೆ. ಅದೇ ನಾ ಹೇಳಿದ ವೇಳೆಯಲ್ಲಿ ಹಣ್ಣನ್ನು ಸೇವಿಸಿದರೆನಿನಗೆ ಹೆಣ್ಣು ಮಗುವಿನ ಸಂತಾನವಾಗುವುದು. ಆ ಮಗು ಇಡೀ ದೇಶದಲ್ಲೇ ಎಲ್ಲೂ ಇರದಷ್ಟು ರೂಪವತಿಯಾಗಿರುತ್ತಾಳೆ. ಅಷ್ಟೇ ಅಲ್ಲದೇ ಮುಂದೆ ಈ ಪ್ರಾಂತದ ಆಳ್ವಿಕೆಯನ್ನು ತೆಗೆದುಕೊಳ್ಳುವವಳು ಅವಳೇ. ಶುಭವಾಗಲಿಎಂದು ಹರಸಿ ಹೊರಟು ಹೋಗುತ್ತಾರೆ. ರಾಜನು ತನ್ನಿಬ್ಬರ ಮಡದಿಯರಿಗೆ ಈ ವಿಷಯವನ್ನು ತಿಳಿಸಿ ಹುಣ್ಣಿಮೆಯ ಯಾಗಕ್ಕೆ ವಿಶೇಷ ಸಿದ್ಧತೆಗಳನ್ನು ಮಾಡಬೇಕಾಗಿಮಂತ್ರಿಗಳಿಗೆ ಸೂಚಿಸುತ್ತಾನೆ. ಹುಣ್ಣಿಮೆ ಬಂದೇಬಿಟ್ಟಿತು ಅಂದು ಪ್ರಾಂತದಲ್ಲಿ ಹಬ್ಬದ ವಾತಾವರಣ. ಅರಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದಾರೆ. ವಿವಿಧಕಡೆಗಳಿಂದ ಬಂದ ಪ್ರಖ್ಯಾತ ಪುರೋಹಿತರು, ಪಂಡಿತರು ಯಾಗದಲ್ಲಿ ಭಾಗಿಯಾಗಿದ್ದಾರೆ. ಅರಮನೆಯಿಂದ ಮಂತ್ರಘೊಷಗಳು ಕೇಳಿಬರುತ್ತಿವೆ. ಅಪರಾಹ್ನದ ವೇಳೆಗೆ ಯಾಗ ಮುಗಿದು ಇಡೀ ಪ್ರಾಂತದವರಿಗೆ ಅಂದು ಔತಣಕೂಟ ಏರ್ಪಾಡಾಗಿತ್ತು. ಬಂದವರೆಲ್ಲರೂ ರಾಜನ ಸತ್ಕಾರ ಸ್ವೀಕರಿಸಿ ಹರಸಿ ಹೊರಟರು. ಕಟ್ಟಲಾಗುತ್ತಿದ್ದಂತೆ ರಾಜ ತನ್ನಿಬ್ಬರು ಮಡದಿಯರನ್ನು ಕರೆದು ಪಂಡಿತರು ಹೇಳಿದ ವಿಷಯವನ್ನು ತಿಳಿಸಿ ಸಮಯದ ಮಹತ್ವವನ್ನು ಹೇಳಿ ಇಬ್ಬರಿಗೂ ಅರ್ಧ ಹಣ್ಣನ್ನು ಹೆಚ್ಚಿಕೊಟ್ಟು ಮೂವರು ಬೇರೆ ಬೇರೆ ಕೋಣೆಯಲ್ಲಿ ಮಲಗಲು ತೆರಳಿದರು.

ಬೆಳಗಿನಿಂದ ಸಡಗರದಲ್ಲಿ ಮುಳುಗಿದ್ದ ರಾಣಿಯರು ಮಲಗುತ್ತಲೇ ಗಾಢವಾದ ನಿದ್ರೆಗೆ ಜಾರಿಬಿಟ್ಟರು. ಇಬ್ಬರೂ ಹಣ್ಣಿನ ಬಗ್ಗೆ ಮರೆತುಬಿಟ್ಟರು. ಆದರೆ ರಾಣಿ ತ್ರಿಪುರಾ ದೇವಿ ಮಾತ್ರ ಇನ್ನೇನು ಕೋಳಿ ಕೂಗುವುದು ಎಂಬ ಸಮಯಕ್ಕೆ ಸ್ವಲ್ಪ ಮುಂಚೆ ಎಚ್ಚರಗೊಂಡು ಹಣ್ಣನ್ನು ತಿಂದುಬಿಟ್ಟಳು .ಇತ್ತ ಅಂಬಿಕಾದೇವಿ ಇನ್ನೂ ನಿದ್ದೆಯಲ್ಲಿದ್ದಾಗಲೇ ಕೋಳಿ ಕೂಗಿತು. ಆ ತಕ್ಷಣ ಗಡಿಬಿಡಿಯಿಂದ ಎಚ್ಚರಗೊಂಡು ತನ್ನ ತಪ್ಪಿನ ಅರಿವಾಗಿ ಕೂಡಲೇ ಹಣ್ಣನ್ನು ಸೇವಿಸಿ ಹೇಗಿದ್ದರೂ ಈ ವಿಷಯ ಯಾರಿಗೂ ಗೊತ್ತಿಲ್ಲ. ನಾನು ಸರಿಯಾದ ಸಮಯದಲ್ಲೇ ಹಣ್ಣನ್ನು ಸೇವಿಸಿದೆ ಎಂದು ಸುಳ್ಳನ್ನು ಹೇಳಿದರೆ ಆಗುತ್ತದೆ ಎಂದು ಸುಮ್ಮನಾಗಿಬಿಟ್ಟಳುವರ್ಷದೊಳಗೆ ಇಬ್ಬರೂ ಒಂದೇ ದಿನ ಪ್ರಸವಿಸಿದರು. ಆಶ್ಚರ್ಯವಾಗಿ ಇಬ್ಬರಿಗೂ ಹೆಣ್ಣು ಮಗು ಜನನವಾಯಿತು. ಎರಡೂ ಮಕ್ಕಳು ಮುದ್ದಾಗಿ ಇದ್ದವು. ರಾಜನಿಗಾದ ಸಂತೋಷ ಹೇಳತೀರದು. ಆದರೆ ಒಂದು ಗೊಂದಲ ರಾಜನನ್ನು ಕಾಡತೊಡಗಿತ್ತು. ಈ ಇಬ್ಬರು ಮಕ್ಕಳಲ್ಲಿ ಮುಂದೆ ನನ್ನ ಆಳ್ವಿಕೆ ವಹಿಸಿಕೊಳ್ಳುವವರು ಯಾರು. ಪಂಡಿತರು ಹೇಳಿದ ಸಕಲ ಅದೃಷ್ಟಶಾಲಿ ಮಗು ಯಾವುದು ಎಂದು ಯೋಚಿಸುತ್ತಿದ್ದ. ಈಗೇಕೆ ಅದರ ಬಗ್ಗೆ ಯೋಚನೆ ಎಂದು ಮತ್ತೆ ಖುಷಿಯಲ್ಲಿ ಮುಳುಗಿದ. ಆದರೆ ಅಂಬಿಕಾದೇವಿ ಮಾತ್ರ ಒಳಗೊಳಗೇ ತಾನು ಮಾಡಿದ ತಪ್ಪಿನಿಂದ ಹುಟ್ಟಿರುವ ಈ ಮಗು ಅಲ್ಪಾಯುಶಿ ಎಂದು ಯಾವಾಗ ರಾಜನಿಗೆ ತಿಳಿಯುವುದೋ ಏನೋ ಎಂದು ಆತಂಕಕ್ಕೆ ಒಳಗಾಗಿದ್ದಳು. ಅರಮನೆ ಹಾಗೂ ಪ್ರಾಂತದ ತುಂಬೆಲ್ಲ ಪ್ರಜೆಗಳು ಸಂತೋಷದಲ್ಲಿ ತೇಲುತ್ತಿದ್ದರು.

 


ಆದರೆ ಇತ್ತ ಪ್ರಾಂತದ ಆಚೆ ಸಾಗರದ ನಡುವೆ ಇದ್ದ ದ್ವೀಪವೊಂದರಲ್ಲಿ ದೊಡ್ಡ ಗುಹೆ ಒಂದರಲ್ಲಿ ಸುತ್ತಲೂ ಕತ್ತಲು ಅಲ್ಲಲ್ಲಿ ಉರಿಯುತ್ತಿರುವ ಪಂಜುಗಳು ಎಲ್ಲೆಡೆ ಮೂಳೆಯ ರಾಶಿ ಸ್ವಲ್ಪ ದೂರದಲ್ಲಿ ಹೋಮ ಕುಂಡದಲ್ಲಿ ಅಗ್ನಿ ಜ್ವಾಲೆ ಆಳೆತ್ತರಕ್ಕೆ ಉರಿಯುತ್ತಿದೆ . ಅದರ ಮುಂದೆ ಬೃಹದಾಕಾರದ ದೇವಿ ವಿಗ್ರಹ, ವಿಗ್ರಹದ ಕೊರಳಿನಲ್ಲಿ ಬುರುಡೆಗಳ ಮಾಲೆ. ಆ ವಿಗ್ರಹದ ಮುಂದೆ ನಿಂತಿದೆ ಒಂದು ಆಕೃತಿ. ಏಳು ಅಡಿ ಎತ್ತರ, ಸೊಂಟದವರೆಗೆ ಜಡೆ ಬೆಳೆದಿದೆ , ಕೈ ಉಗುರುಗಳು ಉದ್ದುದ್ದಕ್ಕೆ ಬಂದು ಒಂದು ಕೈಯಲ್ಲಿ ಮೂಳೆಯಿಂದ  ಮಾಡಿದ ಮಂತ್ರದಂಡ ಹಿಡಿದು ಮತ್ತೊಂದು ಕೈಯಲ್ಲಿ ಬೂದಿಯನ್ನು ಹಿಡಿದು ಆ ವಿಗ್ರಹದ ಮೇಲೆ ಎಸೆದು ಕಿರುಚುತ್ತಿದ್ದಾನೆ. ಅವನೇ ಕ್ಷುದ್ರ ಮಾಂತ್ರಿಕ ವಿಕಟಾಕ್ಷ. ಮಾತಾ ಇನ್ನೆಷ್ಟು ದಿನ ನನ್ನ ಕಾಯುವಿಕೆ ಎಲ್ಲವನ್ನೂ ಅರ್ಪಿಸಿದ್ದೇನೆ ಇನ್ನೇನು ಬೇಕು ಕೇಳಿಕೋ. ಎಂದು ನನ್ನನ್ನು ಈ ಪ್ರಪಂಚದ ಅಧಿಪತಿಯನ್ನಾಗಿ ಮಾಡುವೆ ಎಂದು ಕಿರುಚುತ್ತಿದ್ದ. ಆಗ ಅಶರೀರವಾಣಿಯೊಂದು ಮೊಳಗಿತು. ಲೇ ಮೂಢ ಸರಿಯಾಗಿ ಕೇಳಿಸಿಕೋ ಈ ಸುತ್ತಮುತ್ತಲ ಪ್ರಾಂತದಲ್ಲಿ ಹುಣ್ಣಿಮೆಯ ದಿವಸ ವರವಾಗಿ ಬಂದ ಹಣ್ಣೊಂದನ್ನು ತಿಂದ ಫಲವಾಗಿ ಒಂದು ಹೆಣ್ಣು ಮಗು ಜನಿಸಿದೆ ಆ ಮಗುವಿಗೆ 18 ವರ್ಷ ವಯಸ್ಸು ತುಂಬಿ ನಂತರ ಬರುವ ಅಮಾವಾಸ್ಯೆಯಂದು ಆಕೆಯನ್ನು ನನಗೆ ಬಲಿ ಕೊಟ್ಟಲ್ಲಿ ನಿನ್ನ ಆಸೆ ಈಡೇರುವುದು. ಆ ಮಾತನ್ನು ಕೇಳಿ ಗಹಗಹಿಸಿ ನಕ್ಕ ಮಾಂತ್ರಿಕ ತನ್ನ ಮಾಯಾ ಕನ್ನಡಿಯ ಬಳಿ ಹೋಗಿ ಆ ಮಗು ಯಾವುದೆಂದು ತಿಳಿಯುವ ಪ್ರಯತ್ನ ಮಾಡುತ್ತಿದ್ದಾನೆ.  ಮುಂದುವರಿಯುವುದು

 


.... 
Rating
No votes yet

Comments