ಎಮ್ಮೆ ನಿನಗೆ ಸಾಟಿಯಿಲ್ಲ!!

ಎಮ್ಮೆ ನಿನಗೆ ಸಾಟಿಯಿಲ್ಲ!!

ಲೆ ಮತ್ತು ಎಲ್ ಪಿ ಜಿ ಸಿಲಿಂಡರ್ ಮಾತ್ರ ಇಲ್ಲ. ಹೌದು ಇನ್ನೊಮ್ಮೆ ಎಲ್ಲ ಪರೀಕ್ಷಿಸಿದೆ.. ಅವೆರಡೇ.... ನಮ್ಮ ಅಡುಗೆಮನೆಯಲ್ಲಿರುವ ಇನ್ನೆಲ್ಲಾ ಪಾತ್ರೆ ಪರಿಕರಗಳೆಲ್ಲವೂ ಅಲ್ಲಿ ಮೌಜೂದಾಗಿದ್ದವು.ಗೆಳೆಯನ ಮದುವೆಗೆಂದು ಮುಂಬೈಯಿಂದ ಬೆಂಗಳೂರಿಗೆ ಬರುವ ಉದ್ಯಾನ್ ಎಕ್ಸ್ ಪ್ರೆಸ್ ನಲ್ಲಿ UPPER BERTH ಸೀಟಿನಲ್ಲಿ ಒಂದು ಸಣ್ಣ ನಿದ್ರೆ ಮುಗಿಸಿ ಕೆಳಗೆ ಇಣುಕಿದ ನನಗೆ ದಿಗ್ಬ್ರಮೆ ಕಾದಿತ್ತು. ಒಂದು ಕ್ಷಣ ನನ್ನನ್ನು ಯಾರೊ ಕಿಡ್ನ್ಯಾಪ್ ಮಾಡಿ ಒಂದು ಅಡುಗೆ ಮನೆಯಲ್ಲಿ ಕೂಡಿ ಹಾಕಿದ್ದಾರೆ ಎಂದುಕೊಂಡೆ.ಆಮೇಲೆ ತಿಳಿಯಿತು LOWER BERTH ನಲ್ಲಿದ್ದ ಒಂದು ತುಂಬು ಕುಟುಂಬವು ಮಧ್ಯಾಹ್ನದ ಭೋಜನದ ತಯಾರಿ ನಡೆಸಿದ್ದರು.ರೈಲಿನಲ್ಲಿದ್ದೇವೆಂದು USE AND THROW ಪ್ಲೇಟ್ ಅಥವಾ ಪ್ಲಾಸ್ಟಿಕ್ಕಿನ ಲೋಟಗಳು ಹುಡುಕಿದರೂ ಸಿಗುತ್ತಿರಲಿಲ್ಲ ಎಲಾ ಥಳಥಳ ಹೊಳೆಯುವ ಸ್ಟೀಲಿನ ಬಟ್ಟಲು ಮತ್ತು ಲೋಟಗಳು. ಅತ್ತಿತ್ತ ಓಡಾಡುತ್ತಿದ್ದವರು ಇದೇ ರೈಲಿನ PANTRY ಎಂದುಕೊಂಡಿರಬೇಕು. ನಾವು ಮನೆಯಲ್ಲಿದ್ದರೂ ಉಪ್ಪು ಖಾರ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಇನ್ಯಾರು ಎದ್ದು ಹೋಗಿ ತರುತ್ತಾರೆಂದು ಆಲಸ್ಯದಿಂದ ತೆಪ್ಪಗೆ ಊಟ ಮಾಡುತ್ತೇವೆ. ಆದರೆ ಇವರೋ ಚಲಿಸುವ ರೈಲಿನಲ್ಲಿದ್ದರೂ ರುಚಿಯೊಂದಿಗೆ ಯಾವುದೇ ಸಂಧಾನ-ರಾಜಿ ಮಾಡಿಕೊಳ್ಳದೇ ರೊಟ್ಟಿಯಿಂದ ಶುರುಮಾಡಿ ಉಪ್ಪು ತುಪ್ಪ ಸೊಪ್ಪು ಎಲ್ಲವನ್ನೂ ಸರಿಯಾಗಿ ಹಾಕಿಕೊಂಡು ಪೊಂಗಲ್ಲಿನಲ್ಲಿ ಮೈಮರೆತು ಮೊಸರನ್ನದೊಂದಿಗೆ ಊಟ ಮುಗಿಸಿದಾಗ ವಾಚಿನ ಮುಳ್ಳುಗಳು ಪರಸ್ಪರ ಲಂಬಕೋನಕ್ಕೆ ಬಂದು ಗಂಟೆ ಬರೋಬ್ಬರಿ ಮೂರಾಯಿತೆಂದು ಹೇಳುತ್ತಿದ್ದವು. ಈ ಸಂಚಾರಿ ಅಡುಗೆ ಮನೆಯನ್ನು ನೋಡಿದ ನಂತರವೇ ನನಗೆ ಬಸವಣ್ಣನವರ " ಸ್ಠಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ " ಎಂಬ ವಾಕ್ಯ ಪೂರ್ತಿ ಅರ್ಥವಾಗಿದ್ದು.

 
             ಅಂತೂ ಇಂತೂ ಬೆಳಿಗ್ಗೆ ಏಳೂವರೆಗೆ ಬೆಂಗಳೂರು ರೈಲ್ವೇನಿಲ್ದಾಣಕ್ಕೆ ರೈಲು ತಲುಪಿತು. ಮಾಯಾನಗರಿ ಮುಂಬೈಯ ಸುಡುಬಿಸಿಲಿಗೆ ತತ್ತರಿಸಿದ್ದ ದೇಹ ನಮ್ಮ ಬೆಂಗಳೂರಿನ ತಂಪು ಹವೆಗೆ ಭಲೇ ಭಲೇ!!! ಎಂದಿತು.ಈ ಪ್ರಯಾಣ ಮುಗಿಯುವಷ್ಟರಲ್ಲಿ ನನ್ನ SKIN TONE ಎರಡು ಪಾಯಿಂಟ್ ನಷ್ಟು ಸುಧಾರಣೆಯಾಗಬಹುದೆಂದು ನನ್ನೊಳಗೆ ಅಂದಾಜು ಮಾಡಿ ಸಂತಸಪಟ್ಟೆನು. ಜನಜಂಗುಳಿಯ ವಿಚಾರದಲ್ಲಿ ಮುಂಬೈ ಹಿಂದೆಬಿದ್ದಿಲ್ಲವಾದರೂ ಈ TRAFFIC JAM ವಿಷಯದಲ್ಲಿ ಬೆಂಗಳೂರೇ ಅದ್ವಿತೀಯ ಅಜೇಯ ಭುಜಬಲ ಪರಾಕ್ರಮಿ ಎಂಬುದರಲ್ಲಿ ಎರಡು ಮಾತಿಲ್ಲ. ಮುಂಬೈನಲ್ಲಿ ಲೋಕಲ್ ರೈಲು ಇರುವುದರಿಂದ ಯಾವುದೇ ಜಾಗಕ್ಕೆ ತಲುಪಲು ಬೇಕಾಗುವ ಸಮಯವನ್ನು ಒಂದು ಹತ್ತು ನಿಮಿಷದ ಪರಿಮಿತಿಯಲ್ಲಿ ಅಂದಾಜಿಸಬಹುದು. ಆದರೆ ಬೆಂಗಳೂರಿನಲ್ಲಿ ಬಸ್ಸು ಹತ್ತಿದ ಮೇಲೆ ನಾವು ತಲುಪುವ ಸಮಯವನ್ನು ಪ್ರಳಯ ತ್ಸುನಾಮಿಗಳನ್ನು ಕರಾರುವಾಕ್ ಆಗಿ ಹೇಳಿದ ನಾಸ್ಟ್ರಡಾಮಸ್ ತಿಪ್ಪರಲಾಗ ಹಾಕಿದರೂ ಹೇಳಲಾರ. ಮನೆಯಿಂದ ಹೊರಡುವ ಮುನ್ನ "ಹೇ ಭಗವಂತಾ!!! ಮೆಜೆಸ್ಟಿಕ್, ಎಮ್.ಜಿ ರಸ್ತೆಯಲ್ಲಿ ನಾನು ಕಾಯಬಲ್ಲೆ ಕಾರ್ಪೊರೇಷನ್ ಮತ್ತು ಮೇಕ್ರಿ ಸರ್ಕಲ್ ಹತ್ರ ಸ್ವಲ್ಪ ನೊಡ್ಕೊಳ್ಳಪ್ಪಾ !!! ಎಂದು ಬೇಡಿಕೊಂಡರೆ, ಆ ಸರ್ವಶಕ್ತನು "ವತ್ಸಾ ನಿನ್ನನ್ನು ಕಾಪಾಡಲು ನನ್ನಿಂದಾದಷ್ಟು ಪ್ರಯತ್ನಿಸುತ್ತೇನೆ. ಸಧ್ಯಕ್ಕೆ ನಾನು ಅಲಸೂರ್ ಟ್ರಾಫಿಕ್ಕಿನಲ್ಲಿ ಸಿಕ್ಕಿ ಬಿದ್ದಿದ್ದೇನೆ. ಏನಾಗುತ್ತದೋ ನೋಡೋಣ ಎಂದಾನು.
 
         ಒಂಭತ್ತು ಗಂಟೆಗೆ ಬಸವನಗುಡಿಯಲ್ಲಿದ್ದ ನನ್ನ ಅಣ್ಣನ ಮನೆಗೆ ಹೋಗಿ ಸ್ನಾನ ತಿಂಡಿ ಮುಗಿಸಿ ಸುಮಾರು ಹತ್ತು ಗಂಟೆಗೆ ಮದುವೆ ಛತ್ರಕ್ಕೆ ಹೊರಡಲು ತಯಾರಾದೆನು. ಕನ್ನಡ ಬರುವುದೆಂಬ ಒಂದು ವಿಷಯ ಬಿಟ್ಟರೆ ಇನ್ನೆಲ್ಲಾ ವಿಚಾರದಲ್ಲಿ ಬೆಂಗಳೂರು ನನಗೆ ಹೊಸತು. ಛತ್ರ ತಲುಪಲು ನನ್ನ ಬಳಿ ಇದ್ದ ಏಕೈಕ ಸುಳಿವು ಅಶೋಕ ಪಿಲ್ಲರ್. ಅಣ್ಣನಿಂದ ಅದು ಜಯನಗರದಲ್ಲಿ ಇದೆ ಎಂದು ತಿಳಿದುಕೊಂಡು ಜಯನಗರಕ್ಕೆ ಹೋಗುವ ಬಸ್ಸು ಹತ್ತಿದೆ. ಈ ಭಾಷಾವಾರು ವಿಂಗಡನೆಯು ನನ್ನ ಮನಸ್ಸಿನಲ್ಲಿ ಇಲ್ಲದಿದ್ದರೂ ಬಸ್ಸಿನಲ್ಲಿ ನಾನು ಗಮನಿಸಿದ ವಿಷಯವೇನೆಂದರೆ ಚೆಪ್ಪು ಸೊಲ್ಲುಗಳ ನಡುವೆ ಕನ್ನಡದ ಗುಲ್ಲು ಅಲ್ಲೊಮ್ಮೆ ಇಲ್ಲೊಮ್ಮೆ ಕೇಳಿಸುತ್ತಿತ್ತು ಅಷ್ಟೆ. ಹೀಗೆ ಆಲೋಚಿಸುತ್ತಿರುವಾಗಲೇ ಆ ದಿನದ ಅಪಭ್ರಂಶ ಕನ್ನಡದ ಬೋಣಿ ಆಯಿತು.
 

ನೋಡಿ ಸಿಟ್ಟು ಬಂತು.ಇಂತಹ ಬಸ್ಸಿನಲ್ಲಿ ನಾನು ಪ್ರಯಾಣ ಮಾಡಬಾರದೆಂದು ನಿರ್ಧರಿಸಿ ಕೆಳಗೆ ಇಳಿಯಲು ಹೋದೆ. ಆದರೆ ಬಾಗಿಲ ಬಳಿ ಬಂದವನೇ ಹೊರಗೆ ನೋಡಿ ಕಂಗಾಲಾದೆ ... ಅತ್ತ ದರಿ ಇತ್ತ ಪುಲಿ ಎಂಬಂತಹ ಸ್ಥಿತಿ.ಮತ್ತೆ ಸೀಟಿನಲ್ಲಿ ಕುಳಿತೆನು. ಏನು?? ಏನಾಯಿತು ಎಂದು ಕೇಳಿದಿರಾ?? ಹೊರಗಡೆ ಒಂದು ಬೋರ್ಡ್ ನೋಡಿದೆ. ಅದಕ್ಕಿಂತ ಬಸ್ಸೇ ಒಳ್ಳೆಯದು ಎಂದು ನಿರ್ಧರಿಸಿ ಮರಳಿದೆ.


ಕಿಟಕಿಯಿಂದ ಹೊರಗೆ ಇಣುಕುತ್ತಾ ಅಶೋಕ ಪಿಲ್ಲರನ್ನು ಹುಡುಕತೊಡಗಿದೆ. ಟಿಕೆಟ್ ಖರೀದಿಸದೇ ರೈಲಿನಲ್ಲಿ ಕೂತಾಗ ಕಂಡ ಪ್ರತಿ ಗಂಡಸು ಟಿ.ಸಿ ಯಂತೆ ಕಾಣಿಸುವಂತೆ ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಕಂಬಗಳೂ ಅಶೋಕ ಪಿಲ್ಲರ್ ನಂತೆ ಕಾಣುತ್ತಿದ್ದವು. ಹಿಂದೆ ಮುಂದೆ ಅಕ್ಕಪಕ್ಕ ಕುಳಿತಿದ್ದ ಎಲ್ಲರಿಗೂ ಅಶೋಕ ಪಿಲ್ಲರ್ ಬಂದಾಗ ತಿಳಿಸಲು ಹೇಳಿ ಮೈಯೆಲ್ಲ ಕಿವಿಯಾಗಿಸಿಕೊಂಡು ಕುಳಿತೆನು. ಕೊನೆಗೆ ಹಾಗೊ ಹೀಗೋ ಅಶೋಕ ಪಿಲ್ಲರ್ ಬಳಿ ಇಳಿದೆನು. ಈಗ ಛತ್ರಕ್ಕೆ ತಲುಪಲು ಮುಂದಿನ ಸುಳಿವನ್ನು ಪಡೆಯಲು ಮದುವೆಗೆ ಬರುತ್ತಿದ್ದ ಇನ್ನೊಬ್ಬ ಲೋಕಲ್ ಗೆಳೆಯನಿಗೆ ಕರೆ ಮಾಡಿದೆ. ಒಂದು ವಿಧದಲ್ಲಿ ನಾನು REAL TIME TREASURE HUNT ಆಡುತ್ತಿದ್ದೆ.
ಅಮ್ಮಾ ಲೂಸಾ.... ಅಪ್ಪಾ ಲೂಸಾ.... ನಾನೇ ಲೂಸಾ... ಅದು ಸರಿ ಅದು ಸರಿ....... ನನ್ನ ಗೆಳೆಯನ ರಿಂಗ್ ಟೋನ್ ರಿಂಗಣಿಸಿತು
ಏಯ್ ಲೂಸು.... ಮದ್ವೆ ಹಾಲ್ ಗೆ ಹ್ಯಾಗೊ ಬರೋದು ??
ಲೋ ಅಶೋಕ ಪಿಲ್ಲರ್ ಹತ್ರ ಕಣೋ...
ಸಾಕು ಹರ್ಕೊಂಡಿದ್ದು..... ಅದು ನಂಗೂ ಗೊತ್ತು. ಅಶೋಕ ಪಿಲ್ಲರ್ ಹತ್ರ ಇದ್ದೀನಿ ನಾನು ಇಲ್ಲಿಂದ ಹೇಗೆ ಬರ್ಬೇಕು ಹೇಳು. ಸರಿಯಾದ ಲ್ಯಾಂಡ್ ಮಾರ್ಕ್ ಹೇಳು ಗುಬಾಲ್.........
 
   ನಾನು ಹೀಗೆ ಹೇಳಲು ಕಾರಣ ಇದೆ. ಕಾಲೇಜಿನಲ್ಲಿರುವಾಗ ಎಲ್ಲರೂ ಹೊರಗೆ ಎಲ್ಲಾದರೂ ಪ್ರವಾಸಕ್ಕೆ ಹೋದಾಗ ಎಲ್ಲಾದರೂ ನಾವು ದಾರಿ ತಪ್ಪಿ ಅವರಿರುವ ಜಾಗದ ಬಗ್ಗೆ ಕೇಳಿದರೆ ಈ ಪುಣ್ಯಾತ್ಮ ಲೋ.. ಅಲ್ಲಿ ದೊಡ್ಡ ಮರ ಇದೆ ನೋಡು ಅಲ್ಲಿ ಇದ್ದೇವೆ ಎಂದೊ ಅಥವಾ ಟ್ರ್ಯಾಕ್ಟರ್ ನಿಂತಿದೆ ನೋಡು ಅಲ್ಲಿ ಇದ್ದೇವೆ ಎಂದೊ ಹೇಳುತ್ತಿದ್ದ. ಆ ಮರದ ಪಕ್ಕದಲ್ಲಿದ್ದ ಶಾಂತಿಸಾಗರ್ ಹೋಟೆಲ್ ಅಥವಾ ಜಯದೇವ ಆಸ್ಪತ್ರೆ ಇವನಿಗೆ ಕಾಣುತ್ತಲೇ ಇರಲಿಲ್ಲ.
 
ಅಲ್ಲಿ ಜಯನಗರ ಥರ್ಡ್ ಮೈನ್ ಸೆಕೆಂಡ್ ಕ್ರಾಸ್ ಗೊತ್ತಾ ??
ಊಹೂಂ.......
ಹೋಗ್ಲಿ ಬನಶಂಕರಿಗೆ ಹೋಗುವ ಮೈನ್ ರೋಡ್ ಗೊತ್ತಾ ??
ಇಲ್ಲ ಕಣೋ ...... ಮನಸ್ಸಿನಲ್ಲೇ ನಾನು ಛತ್ರ ತಲುಪಿದ ಮೇಲೆ ಇವನಿಗೆ "ಗುಬಾಲ್" ಎಂದು ಬೈಯ್ಯಬಹುದಿತ್ತೇನೋ.... ಎಂದುಕೊಂಡೆನು.
ಲೋ ಇನ್ನೇನು ಉದ್ಧಾರ ಮಾಡೋಕ್ಕೆ ಬೆಂಗ್ಳೂರ್ ಗೆ ಬಂದ್ಯೊ ?? ಎಲ್ಲಿದ್ದೀಯಾ ಈವಾಗ??
ಅಶೋಕ ಪಿಲ್ಲರ್ ಹತ್ರ ಇದ್ದೀನೊ.... ಆ ಪಿಲ್ಲರ್ ಹತ್ತಿ ಕೂತ್ಕೊ..... ನಾನೇ ಅಲ್ಲಿಗೆ ಬರ್ತೀನಿ.
ಕಲಿಯುಗ ... ನನ್ನ ಗುಬಾಲು ಶಬ್ದಕ್ಕೆ ತಕ್ಕ ಫಲ......
 
ಸ್ವಲ್ಪ ಹೊತ್ತಿಗೆ ಸ್ನೇಹಿತ ಬಂದು ನನ್ನನ್ನು ಮದುವೆ ಛತ್ರಕ್ಕೆ ಕರೆದುಕೊಂಡು ಹೋದನು. ಮದುವೆ ಗಲಾಟೆ ,ಊಟ ಉಪಚಾರ - ಗೆಳೆಯರ ಬಳಗದ ಹಾರಾಟ ಎಲ್ಲಾ ಜೋರಾಗಿತ್ತು. ಎಲ್ಲಾ ಮುಗಿದು ಕೊನೆಗೆ ನವ ವಧು ವರರಿಗೆ ಸಹಭೋಜನದ ಸಮಯದಲ್ಲಿ ನಡೆದ ಘಟನೆಯೇ ಈ ಲೇಖನದ ಸಾರಾಂಶ. ವಧು ವರರಿಗಾಗಿ ಐದಾರು ಬಾಳೆ ಎಲೆಗಳನ್ನು ಒಂದಾಗಿಸಿ ಹರಡಿದ್ದರು. ಅದರ ಸುತ್ತಲೂ ಅಂದವಾಗಿ ರಂಗೋಲಿ ಹಾಕುತ್ತಿದ್ದರು ಹಾಗೂ ಎಲೆಯ ಮುಂದೆ ವಧು ವರರ ಹೆಸರು ಬರೆಯುತ್ತಿದ್ದರು. ಹುಡುಗನ ಹೆಸರು ಅರುಣ. ಫೋಟೊ ತೆಗೆಯುತ್ತಿದ್ದ ನಾನು ಅದರಲ್ಲಿ ’ಣ’ ಅಕ್ಷರ ತಪ್ಪಾಗಿ ಬರೆದಿದ್ದನ್ನು ಗಮನಿಸಿದೆ. ರಂಗೋಲಿ ಹಾಕುತ್ತಿದ್ದವರ ಗಮನಕ್ಕೆ ತಂದೆನು. ಅವರು ಓಹ್!!! ಹೌದಲ್ವಾ.... ಎಂದು ಸರಿ ಮಾಡಿದರು.ಅಷ್ಟರಲ್ಲೇ ನಮ್ಮ ಕಥಾನಾಯಕಿಯ ಎಂಟ್ರಿ ಆಯಿತು.
 
 jalebi
 
 
ಅವರು ಜಲೇಬಿ ಬಾಯಿಯ FAN ಇರಬೇಕು. ಬಂದವರೇ ಅದು ’ಣ’ ತಪ್ಪಾಗಿದೆ ಎಂದು ಹೇಳಿ ಸರಿಯಾಗಿದ್ದ ’ಣ’ ವನ್ನು ಮೇಲೆ ಚಿತ್ರದಲ್ಲಿರುವಂತೆ ತಪ್ಪಾಗಿ ತಿದ್ದಿದರು. ಅಲ್ಲೇ ಇದ್ದ ನಾನು "ಮೇಡಮ್ ಇದು ತಪ್ಪು ’ಣ’ ಕ್ಕೆ ಎರಡು ಕಡೆ ಮಾತ್ರ ಸುರುಳಿ ಬರುತ್ತದೆ ಎಂದೆನು. ಮರು ಕ್ಷಣವೇ "ಯಾವ ಆಧಾರದ ಮೇಲೆ ಹೇಳ್ತಾ ಇದ್ದೀರಾ ?? " ಮಿಂಚಿನ ವೇಗದಲ್ಲಿ ಪ್ರಶ್ನೆ ಬಂದಿತು. ಓಹ್ ಹೀಗಾಗುವುದೆಂದು ಮೊದಲೇ ಗೊತ್ತಿದ್ದರೆ ಯಾವುದಾದರೂ ವಕೀಲರನ್ನು ಕರೆದುಕೊಂಡು ಹೋಗುತ್ತಿದ್ದೆ. ಆ ರಂಗೋಲಿಯ ಮೇಲೆ “ವಿವಾದಿದ ರಂಗೋಲಿ” ಎಂದು STAY ORDER ತರಬಹುದಾಗಿತ್ತು ಎಂದುಕೊಂಡೆನು.ಇರಲಿ ಎಂದು "ಇಪ್ಪತ್ತೈದು ವರ್ಷಗಳಿಂದ ಕರ್ನಾಟಕದಲ್ಲಿ ಇದ್ದೇವೆ ಮೇಡಮ್... ಇದಕ್ಕಿಂತ ಹೆಚ್ಚಿನ ಆಧಾರ ಏನು ಬೇಕು ಮೇಡಮ್ ?? ಎಂದೆನು.
 
ನಾನು ನಲವತ್ತು ವರ್ಷದಿಂದ ಕರ್ನಾಟಕದಲ್ಲಿ ಇದ್ದೀನಿ ಕನ್ನಡದಲ್ಲಿ ಎಂ.ಎ ಬೇರೆ ಮಾಡಿದ್ದೀನಿ . ನನಗೆ ಗೊತ್ತು ಗೆ ಮೂರೂ ಕಡೆ ಸುರುಳಿ ಇದೆ ಎಂದರು.
 ಧ್ವನಿಯಲ್ಲಿ ಒಂದು ಮೊಂಡುತನ ಅಹಂ ತುಂಬಿ ತುಳುಕುತ್ತಿತ್ತು.
ಹಳೆಗನ್ನಡದಲ್ಲಿ ’ಣ’ ವನ್ನು ಹೀಗೆ ಬರೆಯುತ್ತಿದ್ದರಿರಬಹುದು. ಕರ್ನಾಟಕ ಎಂಬ ಹೆಸರು ಹೇಗೆ ಬಂದಿತು ಎಂಬ ಚರ್ಚೆಯನ್ನು ಓದುತ್ತಿದ್ದಾಗ ಕುಮಾರವ್ಯಾಸನ ಅವನ ಷಟ್ಪದಿಗಳಲ್ಲಿ ಹಲವಾರು ಕಡೆ ’ಕರ್ಣಾಟ’ (’ಣ’ ಕ್ಕೆ ಮೂರೂ ಕಡೆ ಸುರುಳಿ ಕೊಟ್ಟು) ಎಂಬ ಶಬ್ದ ಬಳಸಿದ್ದಾನೆಂದು ಓದಿದ ನೆನಪು. ಆದರೆ ನಮ್ಮ- ಅವರ ಪೀಳಿಗೆಯ ಜನರು ಈ ಹಳೆಗನ್ನಡ ಬಿಟ್ಟು ಹೊಸಗನ್ನಡವನ್ನು ಈಗಾಗಲೇ ರೂಢಿಸಿಕೊಂಡಾಗಿದೆ. ಆ ಅಕ್ಷರಗಳನ್ನು ವ್ಯಾಕರಣದಲ್ಲಿ ಮೊದಲು ಹೀಗಿತ್ತು ಎಂದು ಓದುವುದು ಬಿಟ್ಟರೆ ಇನ್ನೆಲ್ಲೂ ಬಳಸುತ್ತಿಲ್ಲ. ಇದೇ ವಿಷಯವನ್ನು ಅವರು ಹೇಳಿದ್ದರೆ ’ಓಹ್ ಇವರು ಎಲ್ಲಾ ತಿಳಿದವರು ನಾನೇ ಅಧಿಕಪ್ರಸಂಗ ಮಾಡಿದೆ ನನ್ನದೇ ತಪ್ಪು ಎಂದು ಭಾವಿಸುತ್ತಿದ್ದೆ ಹಾಗೂ ಅವರ ಬಗ್ಗೆ ಗೌರವ ಮೂಡುತ್ತಿತ್ತು. ಆದರೆ ನನ್ನ ಮಾತಿಗೆ ಒಂದು ಬೆಲೆಯೇ ಇಲ್ಲದಂತೆ ತನ್ನ ಮಂಚಕ್ಕೇ ಮೂರು ಕಾಲು ಎಂಬಂತೆ ಮಾತುಗಳು ಹರಿದುಬಂದವು.( ಈ ವಿಚಾರದಲ್ಲಿ ಬಲ್ಲವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾರೆಂದು ಆಶಿಸುತ್ತೇನೆ.)
 
ನನ್ನ ಜಾಗದಲ್ಲಿ ಬಬ್ರುವಾಹನನೇನಾದರೂ ಇದ್ದಲ್ಲಿ "ಕೆರಳಿದ ಕಾಳಸರ್ಪದ ಹೆಡೆ ಮೆಟ್ಟಿ ನಿಲ್ಲಬಲ್ಲೆ ಬರಸಿಡಿಲು ಬಡಿದರೆ ನನ್ನ ರೋಮ ಕಂಪಿಸದು ಆದರೆ ಅಹ್ ಹ್ ಹ್ ಹ್ ಜಾರಿಣಿ ಎಂಬ ಶಬ್ದದಲ್ಲಿ ’ಣ’ ವನ್ನು ಜಲೇಬಿಯಾಕಾರದಲ್ಲಿ ಬರೆದ ಈ ಮಾತೃಭಾಷಾ ನಿಂದನೆಯನ್ನು ಸಹಿಸಲಾರೆ. ಎನ್ನುತ್ತಿದ್ದನು. ಅವರು ಯಾವ ಯುನಿವರ್ಸಿಟಿಯಲ್ಲಿ ಈ "ಎಮ್ಮೆ" ಪಡೆದರೆಂದು ಕೇಳೋಣವೆಂದಿದ್ದೆ. ಆಮೇಲೆ ಸುಮ್ಮನೆ ಗೆಳೆಯನ ಮದುವೆ ಸಂದರ್ಭದಲ್ಲಿ ಯಾಕೆ ಮನಸ್ತಾಪಎಂದು ಸುಮ್ಮನಾದೆ. ಆದರೂ ಮನಸ್ಸಿನ ಮೂಲೆಯಲ್ಲಿ ತಪ್ಪನ್ನು ಸರಿ ಎಂದು ಒಪ್ಪಿಕೊಂಡೆ ಎಂಬ ತಳಮಳ ಕಾಡುತ್ತಿತ್ತು. ತಕ್ಷಣ ಒಂದು ಉಪಾಯ ಬಂತು. ರೋಮಿಂಗ್ ನಲ್ಲಿದ್ದರೂ ಇರಲಿ ಬಿಡಿ ಎಂದು ನನ್ನ ಮೊಬೈಲ್ ನಲ್ಲಿ "ಉದಯವಾಣಿ"ಯ ವೆಬ್ ಸೈಟ್ ತೆರೆದೆ. ಅದರಲ್ಲಿ " ಉದಯವಾಣಿ " ಯಲ್ಲಿ ಬರುವ ’ಣ’ ತೋರಿಸಿ "ಇಲ್ಲಿ ’ಣ’ ಹೇಗೆ ಬರೆದಿದ್ದಾರೆ ನೋಡಿ ಮೇಡಮ್ " ಎಂದೆನು.
"ಇಂಟರ್ನೆಟ್ ನಲ್ಲಿ ಬರೆಯೋದೆಲ್ಲಾ ತಪ್ಪು " ಶರವೇಗದಲ್ಲಿ ಸ್ಟೇಟ್ ಮೆಂಟು ಬಂದುಬಿಟ್ಟಿತು.
ಇನ್ನು ವಾದಮಾಡಿ ಪ್ರಯೋಜನವಿಲ್ಲವೆಂದು ತಿಳಿದು ಶರಣಾಗತನಾಗಿ ಬಂದೆನು. ಮೇಲೆ ಚಿತ್ರದಲ್ಲಿ ತೋರಿಸಿದ "ಕಲ್ಕೆಷನ್ನಿನಲ್ಲಿ ಬಟ್ಟೆ ಕರಿದಿಸುವ" ಜನರೆಲ್ಲಾ ಇವರದ್ದೇ ಪಟ್ಟಶಿಷ್ಯರಿರಬೇಕೆಂದುಕೊಂಡೆನು.
 
    ಒಮ್ಮೆ ಚಿನ್ನ ಮತ್ತು ಕಬ್ಬಿಣ ಪರಸ್ಪರ ಸುಖ ದುಃಖಗಳನ್ನು ಹಂಚಿಕೊಳ್ಳುತ್ತಿದ್ದಾಗ ಚಿನ್ನವು "ನನ್ನ ಆಭರಣಗಳು ತುಂಬಾ ಬೆಲೆಬಾಳುತ್ತವೆ ಆದರೂ ಅದನ್ನು ಮಾರುವಾಗ ನನ್ನನ್ನು ಕಿಲುಬು ಕಾಸಿನ ಗುಲಗುಂಜಿಯೊಡನೆ ತೂಕ ಮಾಡುವಾಗ ತುಂಬಾ ನೋವಾಗುತ್ತದೆ ಎಂದಿತು. ಆಗ ಕಬ್ಬಿಣವು ನನ್ನ ನೋವು ಏನೆಂದರೆ ನಾನು ಬೆಂಕಿಯಲ್ಲಿ ಕಾದು ಕೆಂಪಾಗಿರುವಾಗ ನನ್ನನ್ನು ಬಡಿದು ಬಡಿದು ಆಕಾರ ಕೊಡುತ್ತಾರೆ .ಆ ಪೆಟ್ಟು ಬೇರೆ ಯಾರಾದರೂ ಹೊಡೆದಿದ್ದರೆ ನಾನು ಸಹಿಸಿಕೊಳ್ಳುತ್ತಿದ್ದೆ ಆದರೆ ನಮ್ಮವನೇ ಆದ ಕಬ್ಬಿಣದ ಸುತ್ತಿಗೆ ನನ್ನನ್ನು ಹೊಡೆಯುವಾಗ ದೇಹಕ್ಕಷ್ಟೇ ಅಲ್ಲ ಮನಸ್ಸಿಗೂ ತುಂಬಾ ಬೇಸರವಾಗುತ್ತದೆ ಎಂದಿತು. ಹಾಗೆಯೇ ನಾನು ಮುಂಬೈಯಲ್ಲಿದ್ದಾಗ ಅಲ್ಲಲ್ಲಿ ಕನ್ನಡದ ಬೋರ್ಡುಗಳನ್ನು ನೋಡಿದಾಗ ಅದರಲ್ಲಿ ಅಲ್ಪ ಸ್ವಲ್ಪ ತಪ್ಪುಗಳಿದ್ದರೂ ಪರ ಊರಿನಲ್ಲಿ ಕಸ್ತೂರಿ ಕನ್ನಡದ ಕಂಪನ್ನು ಕಂಡು ಸಂತೋಷವಾಗುತ್ತಿತ್ತು.ಆದರೆ ಈಗ ನಮ್ಮ ಬೆಂಗಳೂರಿನಲ್ಲಿಯೇ ಇಂತಹ ತಪ್ಪುಗಳನ್ನು ನೋಡಿದ್ದಲ್ಲದೇ ತಪ್ಪನ್ನೇ ಸರಿಯೆಂಬ ವಾದ ಮಾಡುವ ಸ್ನಾತಕೋತ್ತರ ಪದವಿ ಪಡೆದವರನ್ನು ನೋಡಿ ತುಂಬಾ ಬೇಸರವಾಯಿತು.ಯಾವುದಾದರೂ ಕನ್ನಡ ಸಂಘಟನೆಯಲ್ಲಿ ಇವರ ವಿರುದ್ಧ ದೂರು ಕೊಡಬೇಕೆಂದುಕೊಂಡೆನು.ತುಂಬಾ ಜನರನ್ನು ಕೇಳಿದ ಮೇಲೆ ಅಂತಹ ಒಂದು ಯುವಕರ ಸಂಘ ಇರುವುದೆಂದು ತಿಳಿದು ಸಂತೋಷವಾಯಿತು. ಆದರೆ ಆ ಸಂಘದ ಅಧ್ಯಕ್ಷರು ಈ ಎಮ್ಮೆ ಸಂಘದ ಸಕ್ರಿಯ ಸದಸ್ಯರೆಂದು ಅರಿತು ಬಂದ ದಾರಿಗೆ ಸುಂಕವಿಲ್ಲ ಎಂದು ತೆಪ್ಪಗೆ ಮುಂಬೈಗೆ ಮರಳಿದೆನು.
 

 

ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
 
--------ವಿಕಟಕವಿ-------

Comments