ಮಾಯಾದ್ವೀಪ - ಜಾನಪದ ಕಥೆ ಭಾಗ ೩
ವೀರಪ್ರತಾಪ ಪಂಡಿತರ ಮಾತಿನಿಂದ ಬಹಳ ನೊಂದಿದ್ದ. ತನ್ನ ಮಗಳು ಮೇಘನಂದಿನಿ ಅಲ್ಪಾಯುಷಿಯಂದು ತಿಳಿದು ಬಹಳ ಬೇಸರವಾಗಿತ್ತು. ಅಂಬಿಕಾದೇವಿಯ ಕೋಣೆಗೆ ಬಂದ ವೀರಪ್ರತಾಪ ಯಾಕೆ ನೀನು ಹಣ್ಣನ್ನು ಸರಿಯಾದ ಸಮಯದಲ್ಲಿ ತಿನ್ನಲಿಲ್ಲ, ಯಾವೆಆ ವಿಷಯವನ್ನು ನನ್ನಿಂದ ಮುಚ್ಚಿಟ್ಟೆ. ಅಂದೇ ಈ ವಿಷಯವನ್ನು ಹೇಳಿದ್ದರೆ ಹುಟ್ಟಿದ ಕೂಡಲೇ ಮಗುವನ್ನು ಕೊಂದುಬಿಡುತ್ತಿದ್ದೆ . ಈಗ ವಯಸ್ಸಿಗೆ ಬಂದ ಮಗಳನ್ನು ಕಳೆದುಕೊಳ್ಳುವುದು ಎಷ್ಟು ನೋವಿನ ಸಂಗತಿ ಎಂದು ನಿನಗೆ ತಿಳಿದಿಲ್ಲವೆ? ಸ್ವಾಮಿ ನನ್ನಿಂದ ತಪ್ಪಾಯಿತು ಕ್ಷಮಿಸಿಬಿಡಿ ಎಂದು ಕೇಳಿಕೊಂಡಳು ಅಂಬಿಕಾದೇವಿ. ವೀರಪ್ರತಾಪನು ಈಗ ಏನು ಮಾಡಿದರೂ ಪ್ರಯೋಜನವಿಲ್ಲ ಎಂಬ ಸತ್ಯಅರಿತವನಾದ್ದರಿಂದ ಸುಮ್ಮನೇ ಆದ. ನಂತರ ಸ್ವಲ್ಪ ಹೊತ್ತು ಮೌನದ ನಂತರ ಮೇಘನಂದಿನಿಗೆ ಮದುವೆ ಮಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದ.ಆಶ್ಚರ್ಯಗೊಂಡ ಅಂಬಿಕಾದೇವಿ ಪ್ರಭು ಇದೇನಿದು ನಿಮ್ಮ ನಿರ್ಧಾರ ಅವಳು ಅಲ್ಪಾಯುಷಿಯಂದು ತಿಳಿದೂ ಸಹ ನಿಮ್ಮ ಈ ನಿರ್ಧಾರ ನಿಮಗೆ ಸರಿ ಎನಿಸಿದೆಯೇ?ಎಂದೋ ಬರುವ ಸಾವಿಗೆ ಹೆದರಿ ಈಗಿನಿಂದಲೇ ಏಕೆ ಆ ಮಗುವಿನ ಸಂತೋಷ ಆಸೆಗಳನ್ನು ಏಕೆ ಕೊಲ್ಲಬೇಕು. ಅದಕ್ಕೆ ಈ ನಿರ್ಧಾರ. ಸರಿ ಪ್ರಭು ಆದರೆ ರಾಣಿ ತ್ರಿಪುರಾದೇವಿಯವರ ಮಗಳಿಗೆ ಆದ ಮೇಲೆ ನನ್ನ ಮಗಳಿಗೆ ಆದರೆ ಒಳ್ಳೆಯದಲ್ಲವೇ ಎಂದಿದ್ದಕ್ಕೆ ಪಂಡಿತರು ಹೇಳಿದ ಮಾತನ್ನು ಹೇಳಿದ ವೀರಪ್ರತಾಪ.
ಮೇಘ ನಂದಿನಿಯನ್ನು ಕರೆದು ಮದುವೆಯ ವಿಷಯ ಪ್ರಸ್ತಾಪಿಸಿದ್ದಕ್ಕೆ, ಜನಕ ನಿಮ್ಮ ಆಸೆಗೆ ನನ್ನದೇನೂ ಅಡ್ಡಿ ಇಲ್ಲ. ಆದರೆ ನನ್ನ ಮದುವೆ ಹಾಗೂ ಹಂಸಾನಂದಿನಿಯ ಮದುವೆ ಎರಡೂ ಒಟ್ಟಿಗೆ ನಡೆಯಬೇಕೆಂದು ನನ್ನ ಆಸೆ ಎಂದಾಗ ರಾಜ ಮರುಮಾತಾಡದೇ ಒಪ್ಪಿಗೆ ಸೂಚಿಸಿದ. ಇನ್ನೇನು ಆರು ತಿಂಗಳಿಗೆ ಹಂಸಾನಂದಿನಿಗೆ ಕೂಡ ಮದುವೆ ಮಾಡಬಹುದು. ಇಬ್ಬರ ಮದುವೆಯೂ ಒಟ್ಟಿಗೆ ನಡೆದರಾಯಿತು ಎಂಬು ತೀರ್ಮಾನಿಸಿದನು.
ಇತ್ತ ದ್ವೀಪದಲ್ಲಿ ಮಾಂತ್ರಿಕ ಹದಿನೆಂಟು ವರ್ಷಗಳಿಂದ ಆ ಮಗು ಯಾವುದೆಂದು ತಿಳಿಯಲು ಶತಪ್ರಯತ್ನ ಪಟ್ಟರೂ ಅದರ ಸುಳಿವೇ ಸಿಗದೆ ಮತ್ತಷ್ಟು ಉಗ್ರನಾಗಿದ್ದಾನೆ. ಹಲವು ಬಾರಿ ತಾನೇ ಮಾಯಾ ಕನ್ನಡಿ ತಯಾರಿಸಲು ಪ್ರಯತ್ನ ಪಟ್ಟು ವಿಫಲನಾಗಿದ್ದ. ಇನ್ನೇನು ಆರು ತಿಂಗಳುಗಳಲ್ಲಿ ತನ್ನ ಕಾರ್ಯ ಸಿದ್ಧಿಯ ಸಮಯ ಸನಿಹವಾಗುತ್ತಿದೆ. ಒಮ್ಮೆ ಅರಮನೆಯ ಕಡೆ ಹೋಗಿ ತನ್ನ ಬಲಿಗೆ ಸಿದ್ಧವಾಗುತ್ತಿರುವ ಆ ಬಾಲೆ ಯಾರೆಂದು ನೋಡಿ ಬರುವ ಎಂದು ತೀರ್ಮಾನಿಸಿ ಮಾಯಾ ರೂಪದಲ್ಲಿ ವಸಂತಪುರಕ್ಕೆ ಕಾಲಿಟ್ಟ. ಅವನ ಆಗಮನದಿಂದ ಮತ್ತದೇ ಅಲ್ಲೋಲ ಕಲ್ಲೋಲ ಜೋರಾಗಿ ಬಿರುಗಾಳಿ ಬೀಸಿ ಮುಗಿಲೆತ್ತರಕ್ಕೆ ಮಣ್ಣಿನ ಧೂಳು ಏಳುವುದನ್ನು ಕಂಡ ವಸಂತಪುರದ ಜನತೆಗೆ ಧಿಗ್ಭ್ರಮೆ ಉಂಟಾಯಿತು. ಅರಮನೆಯ ಆವರಣದಲ್ಲಿ ಸಖಿಯರೊಡನೆ ಆಟವಾಡುತ್ತಿದ್ದ ಹಂಸ ಮತ್ತು ಮೇಘ ಖುಷಿಯಲ್ಲಿ ಮುಳುಗಿದ್ದರು. ಅಷ್ಟರಲ್ಲಿ ಒಳಗಿನಿಂದ ತ್ರಿಪುರಾದೇವಿ ಹಂಸಳನ್ನು ಒಳಗೆ ಕೂಗಿದ್ದು ಕೇಳಿಸಿ ಹಂಸ ಅರಮನೆಯ ಒಳಕ್ಕೆ ಓಡಿದಳು. ಅದೇ ಸಮಯಕ್ಕೆ ಅರಮನೆಯ ಆವರಣಕ್ಕೆ ಮಾಯಾ ರೂಪದಲ್ಲಿ ಬಂದಿದ್ದ ವಿಕಟಾಕ್ಷ ಅಲ್ಲಿ ಆಟ ಆಡುತ್ತಿದ್ದ ಮೇಘ ನಂದಿನಿಯನ್ನು ನೋಡಿ ಇವಳೇ ನನ್ನ ಕಾರ್ಯಸಿದ್ಧಿಗೆ ಹುಟ್ಟಿರುವ ಹೆಣ್ಣೆಂದು ಭ್ರಮಿಸಿ ಸಂತೋಷದಲ್ಲಿ ತೇಲಾಡಿದನು. ಅಲ್ಲಿಂದ ತನ್ನ ಗುಹೆಗೆ ಮರಳಿ ತನ್ನ ಕಾರ್ಯಸಿದ್ಧಿಯ ಸಮಯಕ್ಕೆ ಕಾದು ಕುಳಿತನು.
ದಿನಗಳು ಉರುಳುತ್ತಿದ್ದಂತೆ ವೀರಪ್ರತಾಪ ಮದುವೆಯ ಸಿದ್ಧತೆಯನ್ನು ಮಾಡತೊಡಗಿದ್ದ. ಸುತ್ತಮುತ್ತಲ ಎಲ್ಲ ಪ್ರಾಂತಗಳ ಯುವರಾಜರಿಗೆ ಸ್ವಯಂವರಕ್ಕೆ ಆಹ್ವಾನ ಕಳುಹಿಸಿದ್ದ. ಇತ್ತ ವಿಕಟಾಕ್ಷನೂ ತನ್ನ ಕಾರ್ಯಸಿದ್ಧಿಯ ಸಮಯ ಸನಿಹವಾಗುತ್ತಿದ್ದಂತೆ ಆನಂದದಿಂದ ಗುಹೆಯಲ್ಲ ಕೇಕೆ ಹಾಕುತ್ತಿದ್ದಾನೆ. ಆರು ತಿಂಗಳುಗಳು ಕಳೆದು ಸ್ವಯಂವರದ ದಿನ ದಶಮಿಯಂದು ನಿಗದಿಪಡಿಸಲಾಯಿತು. ಸ್ವಯಂವರದ ಸುದ್ದಿ ತಿಳಿದ ವಿಕಟಾಕ್ಷ ಅಂದೇ ನಾನು ಆ ಬಾಲೆಯನ್ನು ಹೊತ್ತುಕೊಂಡು ಬರಬೇಕು. ಅಂದಿನಿಂದ ನನಗೆ ಐದು ದಿವಸಗಳ ಕಾಲಾವಕಾಶ ಇರುತ್ತದೆ. ಆ ಸಮಯದಲ್ಲಿ ನನ್ನ ಪೂಜೆಗೆಸಿದ್ಧತೆಗಳನ್ನು ಮಾಡಿಕೊಳ್ಳಬಹುದೆಂದು ಆಲೋಚಿಸುತ್ತಿದ್ದನು. ದಶಮಿಯ ದಿನ ಬಂದೇಬಿಟ್ಟಿತು. ವಸಂತಪುರದಲ್ಲಿ ಪ್ರತಿ ಮನೆ ಮನೆಯೂ ರಂಗವಲ್ಲಿಗಳಿಂದಸಿಂಗರಿಸಿ ಇಡೀ ವಸಂತಪುರವೆ ನವ ವಧುವಿನಂತೆ ಸಿಂಗಾರಕೊಂಡಿತ್ತು. ಅರಮನೆಯ ಹೊರಗಡೆ ಮೈದಾನದಲ್ಲಿ ವೇದಿಕೆ ಸಿದ್ಧವಾಗಿತ್ತು. ಒಂದು ಕಡೆ ಹಂಸಾನಂದಿನಿ ಮತ್ತೊಂದು ವೇದಿಕೆಯಲ್ಲಿ ಮೇಘನಂದಿನಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ಪ್ರಾಂತದ ಯುವರಾಜರು ಬಂದು ತಮ್ಮ ತಮ್ಮ ಆಸನಗಳಲ್ಲಿ ಆಸೀನರಾಗಿದ್ದರು. ಇನ್ನೇನು ಸ್ವಯಂವರ ಶುರುವಾಗಬೇಕು ಅಷ್ಟರಲ್ಲಿ ವಿಕಟಾಕ್ಷನ ಆಗಮನವಾಯಿತು. ಸುತ್ತಲೂ ಕತ್ತಲಾವರಿಸಿತು. ಭೀಕರ ಗಾಳಿ ಧೂಳು, ಕ್ಷಣಮಾತ್ರದಲ್ಲಿ ಎಲ್ಲ ನಡೆದುಹೋಯಿತು. ಎಲ್ಲ ಶಾಂತವಾಗಿ ಸ್ವಯಂವರ ಮತ್ತೆ ಚಾಲನೆಯಾಗಬೇಕು ಎಂದು ವೇದಿಕೆಯ ಬಳಿ ಕಣ್ಣು ಹಾಯಿಸಿದಾಗ ಮೇಘನಂದಿನಿ ಕಾಣೆಯಾಗಿದ್ದಳು.
Rating