ಪಕ್ಷಿನೋಟ - ಜುಲೈ ಮಾಸದಲ್ಲಿ ಸಂಪದ

ಪಕ್ಷಿನೋಟ - ಜುಲೈ ಮಾಸದಲ್ಲಿ ಸಂಪದ

ಜುಲೈ ತಿಂಗಳಲ್ಲಿ 'ಸಂಪದ' ದಲ್ಲಿ  ಸಂಭ್ರಮಗಳ ಸಾಲು ಸಾಲು.

ಹಲವು ಸಂಪದಿಗರ ಹುಟ್ಟುಹಬ್ಬದ ಆಚರಣೆ ಈ ಮಾಸದಲ್ಲಿ!
ಜು-೨ ಹರೀಶ ಅತ್ರೇಯರ, ಜು-೯ ರಾಕೇಶ ಶೆಟ್ಟಿಯವರ, ಜು-೧೫ ನಾವಡರ ನವಜಾತ ಹೆಣ್ಣುಮಗುವಿನ ಜನ್ಮದಿನ, ಜು-೧೬ ರಂದು ಆಸುರವರ  ಜು-೨೦ ಜಯಂತರಾಮಾಚಾರ್  ಜು-೨೧ ಹೊಳೆನರಸಿಪುರ ಮಂಜುನಾಥರವರ ಜನ್ಮದಿನಗಳು
ಎಲ್ಲಕ್ಕು ಕಳಶವಿಟ್ಟಂತೆ, ಜು-೨೪ ರಂದು 'ಸಂಪದ' ಕ್ಕೆ ಹುಟ್ಟು ಹಬ್ಬದ ಸಂಭ್ರಮ. ಆರುವರ್ಷ ದಾಟಿದ ಸಂಭ್ರಮ.
ನಿಜಕ್ಕು ಇದು ದೊಡ್ಡ ಸಾಧನೆ , ಇದಕ್ಕೆ ಕಾರಣರಾದ ಹರಿಪ್ರಸಾದ ನಾಡಿಗರು ಮತ್ತು ಎಲ್ಲ ಸಂಪದ ಬಳಗದವರನ್ನು ಈ ಸಮಯದಲ್ಲಿ  ಅಭಿನಂದಿಸಲು ನನಗೆ ಹೆಮ್ಮೆ ಎನಿಸುತ್ತಿದೆ.

ಮೇ-೧೩ ೨೦೧೦ ರಿಂದ ಪ್ರಾರಂಭವಾದ ಕವಿನಾಗರಾಜರ ಹಾಗು ಎಲ್ಲರ ಮೆಚ್ಚಿನ 'ಮೂಡ ಉವಾಚ' ಈ ಬಾರಿ ತನ್ನ ನೂರು ಕಂತುಗಳನ್ನು ಪೂರೈಸಿತು. ನಾಗರಾಜರಿಗೆ ಅಭಿನಂದನೆಗಳು. ಹಾಗು ಇದನ್ನು ನಮಗೆ ಉಣಬಡಿಸಿದ ಸಂಪದಕ್ಕು


ಅಷ್ಟೆ ಅಲ್ಲ ಹರಿಪ್ರಸಾದರ 'ಸಾರಂಗ ಮೀಡಿಯ' ಪ್ರಕಾಶನದಿಂದ ಸಂಪದಿಗರಾದ ಶ್ರೀಹಂಸಾನಂದಿಯವರ 'ಹಂಸನಾದ' ಪುಸ್ತಕದ ಬಿಡುಗಡೆಯ ಸಂಭ್ರಮ ಜುಲೈ ೧೬ ರಂದು ನಡೆಯಿತು.

ಈ ಎಲ್ಲ ಸಂಭ್ರಮಗಳ ನಡುವೆ ಸದ್ದೆ ಇಲ್ಲದೆ ಇನ್ನೊಬ್ಬ ಸಂಪದಿಗರ ಪುಸ್ತಕ ಬಿಡುಗಡೆಯು ನಡೆಯಿತು ಅದನ್ನು ಅವರು ಕವನ ವಿಭಾಗದಲ್ಲಿ ಸಣ್ಣದಾಗಿ ಪ್ರಕಟಿಸಿ ಸುಮ್ಮನಾಗಿಬಿಟ್ಟರು, ಅದು ಸಿದ್ದಿಕೀರ್ತಿಯವರ 'ಹಸೆಯ ಮೇಲಿನ ಹಾಡು' ಎಂಬ ಅವರ ಚೊಚ್ಚಲ ಕವನ ಸಂಕಲನ , ಸಿದ್ದಿಕೀರ್ತಿಯವರೆ ನಿಮಗು ಅಭಿನಂದನೆ.


ಬ್ಲಾಗ್ ವಿಭಾಗ :
ಸತೀಶ್ ರವರ ನಗುವಿಗಾಗಿ ಎಂಬ ಹಾಸ್ಯದ ಸಾಲುಗಳ ಜೊತೆ ಬ್ಲಾಗ್ ವಿಭಾಗ ಪ್ರಾರಂಭ.
ಬೇಸರಗೊಂಡ ಮನಕ್ಕೆ ಸಾಂತ್ವನ ಹೇಳುವ ಪರಿ "ನಿನ್ನಿ ಬದುಕು ನಿನ್ನದಷ್ಟೆ ಅಲ್ಲ ಜೊತೆಯಲ್ಲಿರುವೆವು ನಾವು'  ಇದು  'ನಿರೀಕ್ಷೆಮಾಡದಿರು ಹುಸಿ' ಎಂಬ ಆಸುರವರ  ಕವನದ ಸಾಲು. ಪ್ರೀತಿ ಒಂಥರ ಹುಚ್ಚು ರೀತಿ ಎನ್ನುವ ಪ್ರಸನ್ನರು ನಂತರ 'ಮನೆಯೆಂದರೆ ಬರಿ ಮನೆಯಲ್ಲಿ' ಎನ್ನುವ ನನ್ನ ಕವನಕ್ಕೆ 'ಚಿತ್ರ ಬರೆದುಕೊಟ್ಟು ವಿಶಿಷ್ಟ ಪ್ರಯೋಗಕ್ಕೆ ಜೊತೆಯಾದರು.  ಅವರ 'ರಾತ್ರಿಯ ಸದ್ದು'ವಿನಲ್ಲಿ ಯಾರು ಏನು ಮಾಡುತ್ತಿದ್ದರು ರಾದೆಗೆ ಕೃಷ್ಣನದೆ ಚಿಂತೆ ಎನುವ ಸಾಲುಗಳು ಖುಷಿಕೊಡುವಂತವು.

ಶಿವರಾಮಸುಭ್ರಮಣ್ಯರು ಕಳೆದು ಹೋಗಿರುವ ಸಂಪದಿಗರೆನ್ನೆಲ್ಲ ನೆನೆದುಕೊಂಡರು ನಂತರ ಶೀಮನ ಹೆಸರಿನ ಲಘು ಹಾಸ್ಯ ಚಾಟಿಗಳು ಎಲ್ಲರು ನಗುವಂತೆ ಮಾಡಿದವು. ಗೋಪಿನಾಥರು 'ನೀವೆನುಹೇಳ್ತೀರೊ ಅದನ್ನೆ ಮಾಡಿಕೊಡುವೆ' ಎಂದು ಪತ್ನಿಯರ ಮಾತಿನಲ್ಲಿನ ಮರ್ಮವನ್ನು ತಿಳಿಸಿದರು.

ಚೇತನ ಕೋಡುವಳ್ಳಿಯವರ ಎರಡೆರಡು ಸಾಲಿನ ಪದ್ಯಗಳು 'ಅವನು ಅವಳು' ಮತ್ತು 'ಸಾರಾಯಿ' ದೊಡ್ದಲೇಖನದಷ್ಟೆ ಪರಿಣಾಮಕಾರಿಯಾಗಬಲ್ಲದು ಎಂದು ತೋರಿಸಿದರು. ರಶ್ಮಿಪೈ ಅವರಿಗೆ 'ಹಳೆಯ ನೆನಪುಗಳು'.ಹಾಗೆಯೆ ಗಾರ್ಗಿಭಟ್ ರವರ  'ನನ್ನ ಹೆಸರಿನ ಪುರಾಣ' ಅವರ ತಂದೆ ಅವರಿಗಿಟ್ಟ ಅಪರೂಪದ ಹೆಸರಿನ ಹಿನ್ನಲೆಯಿಂದ ಅವರಿಗಾದ ಅನುಭವವನ್ನು ನಿರೂಪಿಸಿದ ಶೈಲಿ ಚೆನ್ನ ಅನ್ನಿಸಿತು.

ಶೊಭಕರಂದ್ಲಾಜೆ ಯವರು ಎಲ್ಲರಿಗು 'ಗ್ಯಾಸ್ ' ತೊಂದರೆ ಕೊಡುತ್ತಿರುವಾಗ, ಗೋಪಾಲರಿಗೆ ಬೇರೆಯದೆ 'ಗ್ಯಾಸ್' ತೊಂದರೆಯ ಕಿರಿಕಿರಿ. ಜಯಂತರು ಬುಲೆಟಿನ್ನಲ್ಲಿ ರಂಗಣ್ಣನ ದರ್ಶನ ಪಡೆದು ಬಂದು ನಮಗೆಲ್ಲ ವಿವರಿಸಿ, ಮತ್ತೆ ೧೩ ರಂದು ಎಲ್ಲರ ಗಮನ 'ಉಗ್ರರ ದಾಳಿ'ಯತ್ತ ಸೆಳೆದರು. ನಿಜಕ್ಕು ಮುಂಬಯಿಯ ಘಟನೆ ದು:ಖದಾಯಕ.

ಅಷಾಡಮಾಸದ ನಿಜ ಚಿತ್ರಗಳನ್ನು ನೀಡಿದ್ದು, ಶಶಿಧರ ಹೆಬ್ಬಾರ ಹಾಲಾಡಿ ಯವರ 'ಅಷಾಡದ ಅಚ್ಚರಿಗಳು' . ಕಾಯರವರ 'ಬೇರುಗಳು' ಜರ್ಮನಿಯತ್ತ ಅವರ ಪ್ರಯಾಣದ ಅನುಭವ  ಹಾಗೆಯೆ ಮನಸೆಳೆಯುವ ಚಿತ್ರಗಳು ಆಕರ್ಷಕವಾಗಿದ್ದವು. ರಾಮಮೋಹನರ 'ಸೊಸೆ ತಂದ ಸೌಭಾಗ್ಯ' ಉತ್ತಮವಾಗಿ ಮೂಡಿಬಂದರು ಕಡೆಯಲ್ಲಿ 'ರಹಸ್ಯ' ಬಯಲಾಗಲಿಲ್ಲವೆಂದು ಎಲ್ಲರ ಅಸಮಾದಾನ.

ಗಣೇಶರ 'ಇದು ಆತ್ಮಹತ್ಯೆಯ? ಕೊಲೆಯ?" ವಿಶಿಷ್ಟ ಅನುಭವ ನೀಡಿದ ಹಾಸ್ಯಲೇಖನ(?),   ಈಗ ಉಪಯೋಗದಲ್ಲಿಲ್ಲದ 'ಕ್ಯಾಮರ' ಒಂದರ ಇತಿಹಾಸವಿದ್ದರು, ಏಕೊ ಎಂತದೊ ಕ್ರೌರ್ಯದ ಭಾವವನ್ನು ಮನಸಿನ ಮೂಲೆಯಲ್ಲೆಲ್ಲೊ ಕೆಣಕಿದ್ದು ಪ್ಯಾನಿಗೆ ನೇತು ಹಾಕಿದ ಕ್ಯಾಮರದ ಚಿತ್ರವೊ ಅಥವ ಅದರ ಶೀರ್ಷಿಕೆಯೊ ತಿಳಿಯದಾಯಿತು.

ಎಸ್.ಎನ್.ಸಿಂಹರ 'ಸಿಮ್ ಕಾರ್ಡ್' ಹಾಗು 'ಮುಕ್ತಛಂದ' ಈಗಿನ ಸಾಮಾಜಿಕ ಸ್ಥಿಥಿಯ ಒಂದು ವಿಶ್ಲೇಷಣೆ ಅನ್ನಬಹುದು. ಹಾಗೆಯೆ ಸಂಪದಿಗರಿಗೆ ಒಂದು ಪ್ರಶ್ನೆ ಅಬ್ದುಲ್ಲರಿಂದ ' ಭಾರತೀಯನಾಗಲು ಹಿಂದಿ ಗೊತ್ತಿರಲೆ ಬೇಕೆ?"  ಅದಕ್ಕೆ ಉತ್ತರ ಗೊತ್ತಿಲ್ಲ.

ಆಚಾರ್ಯರು 'ಗೊಂಬೆ' ಯಲ್ಲಿ ಹೇಗೆ ನಮ್ಮದೆ ಸೃಷ್ಟಿ ನಮ್ಮ ಹತೋಟಿಯನ್ನು ಮೀರಿ ಬೆಳೆದುನಿಂತು ನಮ್ಮನ್ನಾಳಬಲ್ಲದೆಂದು ಕವನದಲ್ಲಿ ಅರ್ಥೈಸಿದ್ದಾರೆ. ಜೊತೆಯಲ್ಲಿ ಗೋಪಿನಾಥರ ಹೊಸ ಸೀರಿಯಲ್ ಪ್ರಾರಂಬ ' ಗಣೇಶರ ರಾಗಿ ಮುದ್ದೆ ಚಾಲೆಂಜ್.."

ಆಸುರವರ 'ಭಾವಕ್ಕು ಭಾವಾಭಿವ್ಯಕ್ತಿಗು' ಸಂಭದ ಬೇಡವೆ ಎಂಬ ಪ್ರಶ್ನೆಗೆ ನೀವೆ ಉತ್ತರ ಹುಡುಕಿಕೊಳ್ಳಬೇಕು. ಸದಾ ಪ್ರಪಂಚದ ರಾಜಕೀಯದ ಬಗ್ಗೆ ತಲೆಕೆಡಸಿಕೊಳ್ಳುವ ಅಭ್ದುಲ್ಲರ 'ಬ್ಲಾಕ್ ಬ್ಯೂಟಿ' ಬಗೆಗಿನ ಲೇಖನ ಖುಷಿಕೊಡುವಂತದ್ದು.  'ಸತ್ಯ ಮಿತ್ಯದ ಮಾಯೆ' ಸತೀಶರ ಕವನ ವೇದಾಂತದತ್ತ ಮನಸನ್ನು ಕರೆದೊಯ್ಯೂವ ಕವನ. ಹಾಗೆಯೆ ಬಹಳದಿನಗಳ (ತಿಂಗಳ?) ನಂತರ ಮೌನಮುರಿದ ನಾಗರತ್ನರ 'ಬಿನ್ನಾಣವದೆಷ್ಟು ಈ ಕವಿತೆಗೆ' ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು.

ಹರಿಪ್ರಸಾದ ನಾಡಿಗರ 'ಕಲಿಯುಗದ ಐರಾವತ ' ನಮ್ಮ ಟ್ರಾಫಿಕ್ ಸಮಸ್ಯೆಗಳತ್ತ ಗಮನ ಸೆಳೆದರು, ಕಡೆಯಲ್ಲಿ ಅವರು ಹೇಳಿದ 'ಬಳಕುತ್ತ ಸಾಗುವ' ಐರಾವತ ಅನ್ನುವ ವಿವರಣೆ ಹೇಗೆ ಕಲ್ಪಿಸಿಕೊಳ್ಳುವುದು ಅನ್ನುವುದೆ ಅರ್ಥವಾಗದ ವಿಷಯ :-))),
                                              

ಲೇಖನ ವಿಭಾಗ:

ಲೇಖನ ವಿಭಾಗ ಜಯಂತರ ಜೂನ್ ತಿಂಗಳ ಪಕ್ಷಿನೋಟದೊಂದಿಗೆ ಪ್ರಾರಂಬ. ಶ್ರೀಕಾಂತರ "ನಮಗೇಕೆ ಸೌಂದರ್ಯ ಪ್ರಜ್ಞೆ ಇಲ್ಲ" ಎನ್ನುವ ಲೇಖನ , ಮುಂಬಯಿಯ ಕೆಲವು ಮನೆಗಳ ಮುಂದಿನ ಸುಂದರ ನೋಟ, ಆದರೆ ಶ್ರೀಕಾಂತರೆ ನಮ್ಮ ಬೆಂಗಳೂರಿನ ಕೆಲಮನೆಗಳನ್ನು ಹುಡುಕುತ್ತ ಹೊರಟಲ್ಲಿ ಇಂತದೆ ನೋಟಗಳು ಕಾಣಸಿಗುತ್ತವೆ. ಇನ್ನು ಕೆಲವು ಮನೆಗಳಲ್ಲಿ ಮನೆ ಮುಂದಿನ ಕೈತೋಟ ನೋಡಲು ಮುದ ನೀಡುತ್ತವೆ.
ಮಂಸೂರೆರವರ ವಿಭಿನ್ನ ದೃಷ್ಟಿಕೋನದ "ಕಲಾವಿದರೊಳಗಿನ ಬ್ರಾಂಡ ಅಂಬಾಸಿಡಾರ್" ಕಲಾವಿದ ಹುಸೇನ್ ರವರ ಬಗೆಗಿನ ಲೇಖನ, ಹಲವು ಚರ್ಚೆಗೆ ಗ್ರಾಸವಾಗಬಹುದಾದ ವಿಷಯ ಒಳಗೊಂಡಿದೆ.
 ನಾಸ್ತಿಕನೊಬ್ಬನೆ ಸಾವಿನನಂತರದ ಬವಣೆ , 'ನರಕದ ನ್ಯಾಯಸ್ಥಾನದಲ್ಲಿ.. ' ಕರ್ನೂಲ್ ರಮೇಶರವರ ಹಾಸ್ಯಬರಹ ಓದುಗರನ್ನು ನಗಿಸಿತು. ಹಾಗೆಯೆ ಪ್ರಶಶ್ತಿಯವರ ಬೆಂಗಳೂರಿನಲ್ಲಿ 'ಬಸ್ಸಿನಲ್ಲಿ ಮಿಸ್ಸಾದವರ 'ಅನುಭವ, ಕೋಮಲ್ ರವರ ಅವರದೆ ವಿಶಿಷ್ಟ ಶೈಲಿಯ 'ಸಿದ್ದ ಹೆಂಡ್ತಿ ಊರಿಗೆ ಓಯ್ತಾನೆ' ಇವೆಲ್ಲ ಸಾಕಷ್ಟು ಕಚುಗುಳಿ ಇಟ್ಟಿತು. ಕೆ.ಜಿ. ಲಕ್ಷ್ಮೀನಾರಾಯಣಭಟ್ಟರ 'ಆಟದ ಗಮತ್ತು' ಮನ್ನ ಜೀವನದ ಹಲವು ಮಜಲುಗಳಲ್ಲಿನ 'ಆಟ'ದ ಪ್ರಾಶಸ್ತ್ಯ ವಿವರಿಸುವ ಲಲಿತ ಪ್ರಭಂದ.
ಮಹಾಭಾರತದಲ್ಲಿ ಗಂಗೆಯ ಪಾತ್ರ ವಿವರಿಸುವ ಶ್ರೀನಾಥರ ಲೇಖನ 'ಮಹಾಭಾರತದಲ್ಲಿ ಬಾಗಿರಥಿಯ ಪಾತ್ರ'  ಮಹಾಕಾವ್ಯದ ಬಗೆಗೆ ಒಂದು ಸೀಳು ನೋಟ ಒದಗಿಸಿತು.

ಮತ್ತೆ ಹರಿಪ್ರಸಾದರ 'ಜುಲೈ ೨೪ ಆರುವರ್ಷ ಸಂಪದ ಸಂಭ್ರಮ'    ಸಂಪದಕ್ಕೆ ಆರು ವರ್ಷ ತುಂಬಿದ ಅವರ ಸಂಭ್ರಮ, ನಡೆದು ಬಂದ ಹಾದಿಯ ಮೆಲುಕು ನಿಜಕ್ಕು ಎಲ್ಲ ಸಂಪದಿಗರ ಸಂಭ್ರಮವಾಗಿತ್ತು.ಇದಕ್ಕೆ ಪೂರಕವೆಂಬಂತೆ 'ಸಂಪದ' ತನ್ನ ರೂಪ ಬದಲಿಸಿಕೊಂಡು ಹೊಸತನದಿಂದ ನಿಂತಿತು. ಬರಹಗಾರರಿಗೆ ವಿಶೇಷ ಸವಲತ್ತುಗಳೊಂದಿಗೆ ಮೂಡಿಬಂದ ಈ ಹೊಸರೂಪ ಸಂಪದಿಗರೆಲ್ಲರ ಖುಷಿಗೆ,ಸ್ವಾಗತಕ್ಕೆ ಕಾರಣವಾಯಿತು.

'ಸಿವಿಲ್ ಇಂಜಿನೀಯರ್ ಮಾತ್ರ ಇಂಜಿನೀಯರ್' ಎಂಬ ಅಜ್ಜಿಯ 'ಮೊಂಡುವಾದದಿಂದ  ತಲೆತಿನ್ನುವ' ಲೇಖನ ಚೇತನ ಹೊನ್ನವಿಲೆಯವರ ಮತ್ತೊಂದು ಲಹರಿಯ ಬರವಣಿಗೆ, ಹಾಗೆಯೆ ಅವರ ಮತ್ತೊಂದು ಅನುಭವ ' ಸೀನನ ನೇರಳೆ ದುರಂತ' ಹೃದಯ ಸ್ಪರ್ಷಿ.  
ಜೀವನದಲ್ಲಿ ಶಾಂತಿ ಎಲ್ಲಿ ದೊರೆತೀತು ಇದು ಕುಡುಕ ವ್ಯಸನಿಯೊಬ್ಬನ ಹುಡುಕಾಟದ  'ಒಮ್ಮೆಮ್ಮೆ ಹೀಗು ಅಗವುದು' ಸಪ್ತಗಿರಿಯವರ ಹೊಸದೃಷ್ಟಿಯ ಕಥೆ.

ಹೆಚ್ಚೆಸ್ವಿಯವರ ಅಧ್ಯಕ್ಷತೆಯಲ್ಲಿ ನಮಗೆಲ್ಲ 'ಕುವೆಂಪುರಾಮಯಣ ದರ್ಶನ' ಮಾಡಿಸಿದವರು ಗೋಪಿನಾಥರಾಯರು, ಉತ್ತಮ ವರದಿ ಹಾಗು ಚಿತ್ರಗಳು. ಅಂತೆಯೆ "ಐ ಡೊಂಟ್ ವಾಂಟು ಡೈ" ಎನ್ನುವ ಮಗುವಿನ ಮುಗ್ದ ನುಡಿಯ ಹಿಂದಿನ ,ನಮ್ಮ ಜೀವನದ ಅನಿವಾರ್ಯ ಪ್ರಕೃತಿನಿಯಮವನ್ನು ಅರಿವು ಮೂಡಿಸಿದವರು ಕವಿನಾಗರಾಜರು.
ಯುಗಯುಗದ ಜಿಜ್ಞಾಸೆ "ದೇವರು"  ವಿಸ್ತಾರವಾದ ವಿಶಯವನ್ನು ಕೆಲವೆ ವಾಕ್ಯಗಳಲ್ಲಿ ಹಿಡಿದಿಟ್ಟ ಶ್ರೇಯಸ್ಸು ನವೀನ ವಿಜಯರದು.
ಮತ್ತೆ ಮಾನವೀಯ ಮುಖದ ದರ್ಶನ ' ಮೈಕ್ಸೊ ಮೆಟಾಸಿಸ್ 'ಮೊಲಗಳಿಗೆ ಅಮರಿಕೊಳ್ಳುವ ಈ ಮಾರಣಾಂತಿಕ ಕಾಯಿಲೆ ಹಾಗು ತಡೆಗಟ್ಟಬಹುದಾದ ಸಾದ್ಯತೆಗಳ ಬಗ್ಗೆಯ ಲೇಖನ ಪ್ರಮೋದ್ ರವರದು.
'ಮೂರು ಗುಡ್ಡಗಳು' ಅಡ್ಡೂರುಕೃಷ್ಣರಾವ ರವರ ಅನುಭವ ಲೇಖನ, ಮಲೆನಾಡಿನ ಜೀವನ ಶೈಲಿಯನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಅವರ ಬಾಷೆಯ ಸೊಗಡು ಸಹ ಮಲೆನಾಡಿನ ಸಹಜ ಶೈಲಿಯಲ್ಲಿದ್ದು ಓದುಗರನ್ನು ಸೆಳೆಯುತ್ತದೆ.  
ಅಂತರ್ಜಾಲದ ವಿವಿದ ಮುಖಗಳ ವಿವರಣೆಯಿರುವ ಉಪಯುಕ್ತ ಲೇಖನ ನಾಡಿಗರ "ಆನ್ಲೈನ್ ಮಾಧ್ಯಮ", ಸಾಕಷ್ಟು ಮಾಹಿತಿ ಇರುವ ಲೇಖನ.  
ಇಷ್ಟಾದಮೇಲೆ ಪಾಪ ಶ್ರೀನಾಥರವರ ಕಥೆಯ ವ್ಯಥೆ 'ಆಮೇಲೆ ಏನಾಯ್ತು ಅಂದ್ರೆ' , ಪಾಪ ಅವರ ಮನೆಕೆಲಸದವಳ ವರ್ಣನೆಗೆ ಹೊರಟ ಅವರ ಸ್ಥಿಥಿ ಪಾಪ ಏನಾಯ್ತು ಅಂದ್ರೆ , ಬೇಡ ಬಿಡಿ , ನೀವೆ ಇನ್ನೊಮ್ಮೆ ಓದಿಬಿಡಿ

ಲೇಖನ ವಿಭಾಗದಲ್ಲಿ ತಿಂಗಳ ಕಡೆಯ ಲೇಖನ "ಘಂ" ಎನ್ನುವ ದಾಲ್ಚಿನ್ನಿಯ ಬಗ್ಗೆ ರಾಜಲಕ್ಷ್ಮಿಯವರು ಬರೆದ "ಮನೆಮದ್ದು"

ಕವನ ವಿಭಾಗ :
ಸರಿಯಾಗಿ ನೂರು ಕವನ ದಾಖಲಿಸಿದ ಜುಲೈತಿಂಗಳ ಕವನ ವಿಭಾಗವನ್ನು ಒಂದು ಪ್ಯಾರದಲ್ಲಿ ಹಿಡಿದಿಡಲು ಸಂಕೋಚವೆನಿಸುತ್ತೆ.
'ಬುದ್ದನಾಗುವ ಹೊತ್ತು' ಎಂಬ ಕವನದೊಂದಿಗೆ ವಿಫಲ ಪ್ರೇಮಿಯೊಬ್ಬನ ಭಾವವನ್ನು ಡಾ! ಜ್ಞಾನದೇವರವರು ತೆರೆದಿಟ್ಟರು. ಮತ್ತೆ ಸಿದ್ದಿಕೀರ್ತಿಯವರ 'ನನ್ನ ಕವನ ಸಂಕಲನ ಆನಂದ' ಇದು ಪದ್ಯವಲ್ಲ ಸಂಪದಿಗರಿಗೆ ಬರೆದ ಪತ್ರ ! .

ತನ್ನನ್ನು ಒಂಟಿಮಾಡಿ ಆಷಾಡಕ್ಕೆ ತವರು ಮನೆಗೆ ಹೊರಟ ಪತ್ನಿಯ ಬಗ್ಗೆ ಪತಿಯ ಭಾವನೆಯ ಕವನ ಜಯಂತರ 'ಸಖೀ ನಿನಗಿದು ಸರಿಯೆ?"  ಅದೇ ರೀತಿ ಶೃಂಗಾರದ ಕವಿತೆ 'ಆಮಂತ್ರಣ' ಕವಿ ಚೇತನರವರದು. ' 'ಬದುಕೆಂದರೆ ಹೀಗೆಯೆ' ಮಲೆನಾಡಿಗ ನಂದೀಶರು ಬರೆದ ಬದುಕಿನ ಚಿತ್ರಣ. ಮತ್ತೆ ಗಾರ್ಗಿಭಟ್ ರವರ 'ಬಂಗಲೆ' ಬಿಡಿಸಿರುವ ಅಕ್ಷರಗಳಿಗಿಂತ ಬೇರೆಯದೆ ಆದ ಭಾವವನ್ನು  ಆಯಾಮವನ್ನು ಹೊಂದಿರುವ ಕಳಕಳಿಯ ಕವನ.
ಗುರುತಿಸುವ, ಗುರುತಿಸದ್ದನ್ನು ಮುಚ್ಚಿಡುವ, ಗುರುತಿಸಿದ್ದನ್ನು ತಾನೆ ಮರೆತಿರುವ ಬಗ್ಗೆ ಅರ್ಥವತ್ತಾದ ಸಾಲುಗಳು ನಾರಯಣ ಭಾಗ್ವತರಿಂದ 'ಗುರುತಿಸಲಾರೆ ಗುರುತಿಸಲಾರೆಯ ಗುರುತಿಸು' ಕವನದಲ್ಲಿ.

'ನೀ ಯಾಕೆ ಬದಲಾಗಲ್ಲ' ಅನ್ನುವ ನಿಮ್ಮ ಕವನದ ಭಾವ ಸುಂದರ ಪವಿತ್ರ ಶೆಟ್ಟಿಯವರೆ. ಆದರೆ ಬೇಡ , ಈಗಲು ಬದಲಾಗದ ಮೌಲ್ಯ ಎಂದರೆ ಅದೊಂದೆ 'ಅಮ್ಮ' , ಅವಳು ಬದಲಾದರೆ ನಾವೆಲ್ಲ ಅನಾಥರೆ, ಅದಕ್ಕಾಗಿಯೆ ನೀವು ಸ್ವಾರ್ಥವೆಂದು ಜರಿದರು ಸರಿ, ಅಮ್ಮ ಎಂಬುವಳು ಹಾಗೆಯೆ ಇದ್ದು ಬಿಡಲಿ ಬಿಡಿ 'ಅಮ್ಮ'ನಾಗಿಯೆ.

'ವೃದ್ದಾಪ್ಯ'ವೆಂದರೆ ಮರುಕಳಿಸುವ ಬಾಲಿಶತನ, ಅಪ್ಪ ಅಮ್ಮ ಇಲ್ಲದ ತಬ್ಬಲಿತನ ನಿಜ ಗಣೇಶ ಕುಮಾರರೆ ನಮಗೆ ಎಷ್ಟೆ ವಯಸ್ಸಾಗಲಿ ಏಕೊ ಅಮ್ಮ ಅಪ್ಪ ಎಂದರೆ ಏನೊ ಆರ್ಧ್ರಭಾವ.

 

ಚಿತ್ರ ವಿಭಾಗ:

 ಚಿತ್ರ ವಿಭಾಗದಲ್ಲಿ ಈ ಬಾರಿ ಕಡಿಮೆ ಅಂದರೆ ಕೇವಲ ಇಪ್ಪತ್ತು ಚಿತ್ರಗಳು. ಬಹುಷಃ ಚಿತ್ರಗಳು ಬಹಳಷ್ಟು 'ಬ್ಲಾಗ್ ವಿಭಾದಲ್ಲಿ ಪ್ರಕಟವಾಗಿಬಿಡುತ್ತವೆ !.
 
ಚಳ್ಳೆ ಹಣ್ಣು ತಿನ್ನಿಸಿದ ಅನ್ನುವದನ್ನು ನಮ್ಮಕಡೆ ಒಬ್ಬರನ್ನು ಏಮಾರಿಸಿದ ಅನ್ನುವದಕ್ಕೆ ಪರ್ಯಾಯವಾಗಿ ನುಡಿಗಟ್ಟಿನಂತೆ ಬಳಸಲಾಗುತ್ತೆ ಆದರೆ ನಿಜವಾದ 'ಚಳ್ಳೆಹಣ್ಣು' ನೋಡಿದ್ದು ಇಲ್ಲಿ ದೇವರು ಆರ್ ಭಟ್ಟರ ಚಿತ್ರದಲ್ಲಿಯೆ. ಹಾಗೆಯೆ ನಂದೀಶರ 'ನೇರಳೆ ಹಣ್ಣುಗಳು' ಬಾಯಲ್ಲಿ ನೀರು ತರಿಸುತ್ತವೆ. ಮತ್ತೆ ಕೆನಾಡದ ಆಂಟೆರೀಯ ಮ್ಯೂಸಿಯಂ ಚಿತ್ರಗಳ ಅಪರೂಪದವು. ಹಾಗೆಯೆ ಅನಿಲ್ ರಮೇಶರ ಕಸುವಿನ ಎಲೆ ಹಾಗು ಉಳಿದ ಚಿತ್ರಗಳು ಸಹ.

ಚೇತನರ 'ಇವರಾರೆಂದು ಗೊತ್ತಿಲ್ಲ' ಉತ್ತಮ ಸಂಯೋಜನೆಯ ಚಿತ್ರ.ನಂದೀಶರ ಮಲೆನಾಡಿನ ಸಾಲು ಸಾಲು ಚಿತ್ರಗಳು ಆಕರ್ಷಕ. ಗಣೇಶರು ಗಿಣಿಗೆ ಉಪ್ಪಿಟ್ಟು ಮಾಡುವದನ್ನು ಕಲಿಸುತ್ತಿರುವ ಚಿತ್ರ ಮನಸೆಳೆಯುತ್ತದೆ.

ಮತ್ತೆ ದೇವರು ಆರ್ ಭಟ್ಟರ ಸಾಲುಸಾಲು ಆನೆಗಳು ಏಕೊ ಹಿಂದೆ ಮುಂದಾಗಿ ನಿಂತಿವೆ, ಜಮದಗ್ನಿಯವರ 'ಜನಮರುಳೊ..' ಚಿತ್ರದಲ್ಲಿ ನಾನು ಇದ್ದೀನ ಅಂತ ಹುಡುಕಬೇಕೆನಿಸುತ್ತದ ಅಲ್ಲವೆ.

ಉಮೇಶ ಮುಂಡಳ್ಳಿಯವರ ಬರವಸೆಯ ಛಾಯೆ ಅವರದೆ ರಿಲೀಸ್ ಆದ ಕ್ಯಾಸೆಟ್ ಮೇಲಿನ ಚಿತ್ರ. ಸುಮಂತರವರ ಎಮ್ಮೆ ನಿನಗೆ ಸಾಟಿ ಇಲ್ಲ ಚಿತ್ರ ಗಳು ಸಹ ಅವರದೆ ಲೇಖನದಲ್ಲಿ ಉಪಯೋಗಿಸಿದ ಚಿತ್ರಗಳು, ಅವರ ಹೆಸರಿನ ಜೊತೆ ಇರುವ 'ಭಾರತ' ಎಂಬುದ ಅವರ ಮನದ ಭಾವೈಕ್ಯವನ್ನು ತೋರಿಸುತ್ತದೆ ಎನ್ನೋಣವೆ, ನಾವೆಲ್ಲ ಬೆಂಗಳೂರು, ಮಂಗಳೂರು ಎಂದು ಹಾಕುವಾಗ ಅವರು ಭಾರತ ಎನ್ನುತ್ತಾರೆ!

ಸಂಪದ ಗೆಳೆಯರೆ ಈ ಮಾಸದ ಸಂಪದ ನಿಜಕ್ಕು ಖುಷಿ ಕೊಟ್ಟಿತ್ತು. ಉತ್ತಮ ಬರಹಗಳು. ಹೊಸ ಹೊಸ ಲೇಖಕರ ಸಾಲು ಸಾಲು. ಹಳಬರ ಮರುಪ್ರವೇಶ. ಸಂಪದದ ಆರುವರ್ಷದ ಸಂಭ್ರಮ. ಎಲ್ಲವು ಸೇರಿ ನಿಜಕ್ಕು ಇದು 'ಹೊಸ ಚಿಗುರು ಹಳೆ ಬೇರಿನ' ಸಮತೋಲನದ ಮಿಶ್ರಣ.   

ಅಷ್ಟಾಗಿಯು ಎಕೊ ಜುಲೈನ ಎಲ್ಲ ಪ್ರಕಟಣೆಗಳನ್ನು ಒಂದೆ ಲೇಖನದಲ್ಲಿ ಅಡಗಿಸಿಡಲಾಗದ ಅಸಾಹಯಕತೆ ಗೆಳೆಯರೆ !!!
 

Comments