ಸೌಭಾಗ್ಯ ಮನೆಗೆ ಮರಳಿದ ಮಾರನೆದಿನ
ಪ್ರಿಯ ಓದುಗ,
‘ಸೊಸೆ(ತಂದ) ಸೌಭಾಗ್ಯ‘ - ಹಿಂದೆ ಪ್ರಕಟಿಸಿದ ಕಥೆಯನ್ನು ನಿಲ್ಲಿಸುವಲ್ಲಿ ಒಂದು ಅಲ್ಪ ವಿರಾಮವನ್ನಿತ್ತಿದ್ದೆ, ಅದಕ್ಕೆ ಕಾರಣ ಈ ರೀತಿಯ ರಸಭಂಗಕ್ಕೆ ಓದುಗನ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಕೆಟ್ಟ ಕುತೂಹಲ ನನದಷ್ಟೆ, ತಮ್ಮ ಪ್ರತಿಕ್ರಿಯೆಗಳಿಂದ ಆದ ಎಲ್ಲ ಅನುಭವವನ್ನೂ ನಾ ಆಹ್ವಾದಿಸಿದೆ ಅದಕ್ಕಾಗಿ ಮೊದಲಿಗೆ ತಮಗೆ ನನ್ನ ನಮನಗಳು.
ಇನ್ನು ಒಂದು ಕಥೆಯನ್ನು ಪ್ರಾರಂಭ ಮಾಡಿದ ಮೇಲೆ ಅದನ್ನು ಸರಿಯಾದ ದಿಸೆಯಲ್ಲಿ ಮುನ್ನಡೆಸಿ ಕೊನೆಗೊಳಿಸದಿದ್ದರೆ, ಎದ್ದಾ ಕುತೂಹಲಗಳನ್ನು ತಣಿಸದಿದ್ದರೆ, ಅದು ಕಥೆಗಾರನ ನಿಜವಾದ ಜವ್ಬಾದಾರಿಯೆನ್ನಿಸುವುದಿಲ್ಲವೆಂದು ನನಗನ್ನಿಸುತ್ತದೆ, ಅದು ಹೇಗಿರುತ್ತದೆ ಎಂದರೆ ಸುಶ್ರಾವ್ಯ ರಾಗದ ಅಂತಿಮ ಘಟ್ಟದಲ್ಲಿ ನುಡುಸುತ್ತಿದ್ದ ಪಿಟೀಲು ವಾದನದ ತಂತಿ ಹರಿದಾಗ ಆಗುವ ಸನ್ನಿವೇಶ, ಒಮ್ಮೊಮ್ಮೆ ಅದು ನುಡಿಸುವವನ ತಪ್ಪೂ ಅಲ್ಲ.
ಅದು ಅಂತಿರಲಿ ಬಿಡಿ, ವಿಷಯಕ್ಕೆ ಬರುತ್ತಾ, ಮೇಲೆ ಹೆಸರಿಸಿದ ಕಥೆಯ ಕೊನೆಯ ಹಂತವನ್ನು ಓದಿಯಾದಮೇಲೆ ಭಾವನಾತ್ಮಕವಾಗಿ ತಮಗೆ ನೋವಾಗಿದ್ದರೆ ಕ್ಷಮೆ ಕೇಳುತ್ತಾ, ‘ಸೌಭಾಗ್ಯ ಮನೆಗೆ ಮರಳಿದ ಮಾರನೆ ದಿನವನ್ನು‘ ತಮ್ಮ ಮುಂದೆ ಬಿಚ್ಚಿಡುತ್ತಿದ್ದೇನೆ. ಅಲ್ಲಿ ನಡೆದ ಒಂದೆರಡು ಘಟನೆಗಳನ್ನು ತಮ್ಮೊಡನೆ ಹಂಚಿಕೊಂಡರೆ ನನಗೂ ಸಮಾಧಾನ, ಆದರೆ ಈ ವಿಷಯಗಳನ್ನೆಲ್ಲಾ ತಮ್ಮಲ್ಲಿ ಹೇಳಿದ್ದು ನಾನು ಅಂತ ಯಾರಿಗೂ ಹೇಳ್ಬೇಡಿ ಆಯ್ತಾ?....
- ಮಾರನೇದಿನ -
ರಾತ್ರಿ ತಡವಾಗಿ ಮಲಗುವುದನ್ನು ಮುಂದಿನ ಬೆಳಿಗ್ಗೆ ತಡವಾಗಿ ಏಳುವುದಕ್ಕೆ ಕಾರಣವಾಗಿ ಬಳಸುವ ಅಭ್ಯಾಸ ಸುಬ್ಬರಾಯ ಭಟ್ಟರಿಗಿಲ್ಲ. ಮಾಮೂಲಿನಂತೆ ೫-೩೦ಕ್ಕೆ ಎದ್ದವರು ತಮ್ಮ ಪ್ರಾತ: ವಿಧಿಗಳನ್ನು ಮುಗಿಸಿ - ‘ಲಕ್ಷ್ಮೀ.... ನಾನು ಅಂಗಳದಲ್ಲಿ ಕುಳಿತಿರುತ್ತೇನೆ ಕಾಫ಼ಿ ಅಲ್ಲಿಗೆ ಕಳ್ಸಿಬಿಡು ಆಯ್ತಾ, ಅಂದಹಾಗೆ ಮಕ್ಕಳು ಎದ್ರಾ?‘ - ‘ಹ್ಮು... ಅಂದ್ರೆ, ಸೌಭಾಗ್ಯ ಹಿತ್ತಲಲ್ಲಿ ಹೂ ಬಿಡಿಸುತ್ತಿದ್ದಾಳೆ, ಸರಿ ಕಾಫ಼ಿ ತಗೊಂಡು ನಾನೂ ಅಂಗಳಕ್ಕೆ ಬರುತ್ತೇನೆ ಅಲ್ಲೇ ಕಾಫ಼ಿ ಕುಡಿಯೋಣಂತೆ, ಮಕ್ಕಳನ್ನೂ ಕರೀತೀನಿ ನೀವು ನಡೀರಿ‘ - ‘ಸರಿ ಹಾಗೆ ಮಾಡು‘ - ಎಂದ ರಾಯರು ದಿನಪತ್ರಿಕೆಯನ್ನು ಅಂಗಳದಲ್ಲಿ ಅರಸಿ ಹೊರಡುವರಿದ್ದರು.
ಅಷ್ಟರಲ್ಲಿ ಫ಼ೋನ್ ರಿಂಗ್ ಆಯ್ತು. ಯಾರಿದು ಇಷ್ಟೊತ್ತಿಗೆ? ಅಂದು ಕೊಂಡವರು ಫ಼ೋನ್ ಬಳಿ ಸಾರಿ ತೆಗೆದವರೆ - ‘ಯಾರದು‘
- ‘ಭಟ್ಟರೆ ನಾನು ವರದರಾಜು, ಆರೋಗ್ಯವೋ?‘
- ‘ಅರೆ ವರದರಾಜು ಏನ್ರಿ ಮುಂಜಾನೇನೆ ನಮನ್ನು ನೆನಿಸಿಕೊಂಡ್ಬಿಟ್ರಲ್ಲ?‘
- ‘ಮತ್ತಿನ್ನೇನು ಭಟ್ಟರೆ ಒಳ್ಳೆಯ ಸೊಸೆ ಸಿಕ್ಕಳು ಅಂತ ನೀವು ಹುಡುಕಿ ಕೊಟ್ಟವರನ್ನು ಮರೆತು ಬಿಟ್ಟ್ರೆ, ಅದಕ್ಕೆ ನಮ್ಮ ಹುಡುಗಿ ಹೇಗಿದ್ದಾಳೆ ಹೊಂದ್ಕೆ ಆಯ್ತಾ ಹೇಗೆ ವಿಚಾರ್ಸೋಣ ಅಂತ ನಾನೇ ಮಾಡ್ದೆ‘
- ‘ನೀವು ಹುಡುಕಿದ ಮೇಲೆ ಅದನ್ನು ಕೇಳೋಹಾಗೇ ಇಲ್ಲ ಬಿಡಿ, ಎಲ್ಲ ಆ ನರಸಿಂಹ ದೇವರ ಕೃಪೆಯಿಂದ ಚೆನ್ನಾಗಿದೆ ವರದರಾಜು ಅವರೆ‘
- ‘ದೊಡ್ಡ ಮಾತುಬಿಡಿ ಎಲ್ಲಾ ಋಣಾನುಬಂಧ ಅಷ್ಟೆ. ಆಮೇಲೆ ನಿಮ್ಮ ತಮ್ಮನ ಮಗ ಇದ್ದಾನಲ್ಲ ಅವನಿಗೆ ಏನಾದ್ರೂ ಮದುವೆ ಪ್ರಸ್ತಾಪ ಉಂಟೋ?, ಏಕೇಂದ್ರೆ ನಮ್ಮ ಕಡೆ ಒಂದು ವಧು ಉಂಟು, ಅದಕ್ಕಾಗೇ ಫ಼ೋನ್ ಮಾಡ್ದೆ‘
- ‘ಹುಂ..... ನಾನು ಯಾವುದಕ್ಕೂ ಅವರ ಮನೇಲಿ ವಿಚಾರ್ಸಿ ತಮಗೆ ಹೇಳ್ತೀನಿ ವರದರಾಜು ಅವ್ರೆ‘
- ‘ಓ ಹೋ.. ಧಾರಾಳವಾಗಿ ಹಾಗೇ ಮಾಡಿ ಇಂಥಹ ವಿಷಯದಲ್ಲಿ ಆತ್ರ ಬೇಡ್ವೇ ಬೇಡ‘ -
- ‘ಅಂದಹಾಗೆ ನಿಮಗೆ ನಾನು ನೆನ್ನೆ ದಿನ ಮೊಬೈಲ್ಗೆ ಕಾಲ್ ಮಾಡಿದ್ದೆ ಅದು ನಂಬರ್ ಚಾಲ್ತಿಯಲ್ಲಿಲ್ಲ ಅಂತ ಹೇಳ್ತಿತ್ತಲ್ಲ‘ -
- ‘ಓ.... ಅದೊಂದು ದೊಡ್ಡ ಯಡವಟ್ಟು ಯಾಕೇಳ್ತೀರ? ಮೊನ್ನೆ ನನ್ನ ಮಗಳ ಮನೆಗೆ ಹೋಗಿದ್ದೆ, ಅಲ್ಲಿ ನನ್ನ ಮೊಮ್ಮಗ ನನ್ನ ಮೋಬೈಲ್ ತಗೊಂಡು ಆಟ ಆಡ್ತಾ ಆಡ್ತಾ ಅದನ್ನ ಹತ್ತಿರ ಇದ್ದ ಬಕೆಟ್ಟಿನ ನೀರಿನಲ್ಲಿ ಹಾಕಿ ಬಿಟ್ಟು ನೋಡ್ತಾ ನಿಂತಿದ್ದಾನೆ. ಏನ್ಮಾಡ್ತೀರ? ಚಿಕ್ಕ ಮಕ್ಕಳು ಗೊತ್ತಾಗೋಲ್ಲ, ಸರಿ ನನ್ನ ಅಳಿಯಂದ್ರು, ಬೇರೆ ಹೊಸ ಮೊಬೈಲ್ ಕೊಡ್ಸಿದ್ರು, ನೆನ್ನೆಯೆಲ್ಲ ಓಡಾಡಿ ಸಿಮ್ ಕಾರ್ಡ್ ಹಾಕ್ಸಿ ತಿರ್ಗಾ ಅದೇ ನಂಬರ್ ತಗೊಂಡೆ, ನಂಮಂತೋರ್ಗೆ ಈಗ ಈ ಮೊಬೈಲ್ ಅನ್ನೋದು ಇಲ್ದೇ ಇದ್ರೆ ಆಗೋದೇ ಇಲ್ಲ ನೋಡಿ, ಯಾಕೆ ನನ್ನನ ನೆನಿಸಿ ಕೊಂಡ್ರಿ‘
-‘ಸುಮ್ನೆ ಹಾಗೆ, ಸುಮಾರು ತಿಂಗ್ಳೆ ಆಗಿತ್ತಲ್ಲ ಅದಕ್ಕೆ, ಹ್ಯಾಗಿದೆ ನೋಡಿ ನೆನೆದವರ ಮನದಲ್ಲಿ ಅನ್ನೋಹಾಗಿ ನೀವಾಗ್ಲೆ ಫ಼ೋನ್ ಮಾಡ್ಬಿಟ್ರಲ್ಲ ಹ್... ಹ...... ಹಾ.......‘
-‘ಆಯ್ತು ಸಂತೋಷ ಭಟ್ರೆ, ನಿಮ್ಮ ತಮ್ಮನ ಮನೇಲಿ ಕೇಳಿ ನನಗೆ ತಿಳಿಸಿ ಎಲ್ಲ ಕೂಡಿ ಬಂದ್ರೆ ಮತ್ತೆ ಸಿಗೋಣಂತೆ, ನಮಸ್ಕಾರ.‘ ಫ಼ೋನ್ ಕಟ್ ಆಯ್ತು.
ಅಷ್ಟರೊಳಗೆ ಬಿಸಿಬಿಸಿ ಕಾಫ಼ಿ ಸಿದ್ದವಾಗಿತ್ತು, ನೆಮ್ಮದಿಯಾಗಿ ಎಲ್ಲರೂ ಒಟ್ಟಿಗೆ ಕುಳಿತು ಮಾತನಾಡುತ್ತಾ ಕಾಫ಼ಿ ಸಮಾರಾಧನೆ ಮುಗ್ಸಿ ಮುಂದಿನ ಕೆಲಸಕ್ಕೆ ಅಣಿಯಾಗುತ್ತಿದ್ದರು. ಇಷ್ಟರ ಮಧ್ಯೆ ಸೌಭಾಗ್ಯಳ ಕಡಿಮೆ ಮಾತಿನೊಂದಿಗೆ, ಹೆಚ್ಚಿನ ಮೌನವನ್ನು ರಾಯರು ಗಮನಿಸಲಿಲ್ಲವೆಂದೇನಲ್ಲ, ಅಂಥಹ
ಆಘಾತದಿಂದ ಹೊರಬರಲು ಸ್ವಲ್ಪ ಸಮಯ ಬೇಕೆಂಬುದನ್ನು ಅರಿಯುವ ಅನುಭವ ಅವರಲ್ಲಿತ್ತು.
ಸೌಭಾಗ್ಯ ಮನೆ ಕಸ ಗುಡಿಸುತ್ತಿದ್ದಾಳೆ, ಮನದಲ್ಲಿ ಮತ್ತದೆ ಕೆಟ್ಟ ನೆನಪು, ಇದ್ದಕಿದ್ದ ಹಾಗೆ ಏನೇನೆಲ್ಲಾ ನಡೆದು ಹೋಯಿತಲ್ಲ ಅನ್ನುವ ಚಿಂತೆ, ಜೊತೆಗೆ ಅಣ್ಣನ ನೆನಪು. ಇಷ್ಟು ದಿನವಾಗಿ ಹೋಯ್ತು ಫ಼ೋನ್ ಕೂಡ ಮಾಡಿಲ್ಲ, ಇವ್ರು ಬೇರೆ ಮೊನ್ನೆ ಮನೆ ಹತ್ರ ಹೋಗಿದ್ದಾಗ ಸಿಗಲಿಲ್ಲ, ಮನೆ ಕೂಡ ಬದಲಾಯಿಸಿದ್ದಾನೆ ಅಂತ ಹೇಳಿದ್ರು, ಹಳೆ ಕೆಲಸವನ್ನೂ ಬಿಟ್ಟಿದ್ದಾನೆ. ಏಕೆ ಹೀಗೆ ಮಾಡಿದ?, ಈಗ ನಡೆದಿರುವ ಈ ಘಟನೆಯಲ್ಲಿ ಒಂದು ಪಕ್ಷ ನಾನೂ ಇವರ ಕೈಗೆ ಸಿಕ್ಕಿರದಿದ್ದರೆ, ಅಣ್ಣನೂ ಹೀಗೆ ಮಾಡಿರುವುದು ಎಂಥಹ ಕೆಟ್ಟ ಅಭಿಪ್ರಾಯ ಕೊಡುತ್ತದೆ, ಛೇ.. ಏಕೆ ಹೀಗೆ ಮಾಡಿದ ಈ ಅಣ್ಣ. ಸದ್ಯ ಆ ಪಾಪಿಯ ಕೈಯಿಂದ ಬಿಡುಗಡೆ ಆಯ್ತು, ಇವರೇನಾದರೂ ಅಲ್ಲಿಗೆ ಬರದಿದ್ದರೆ ನಾನು ಬೀದಿ ಹೆಣವಾಗಿಬಿಡುತ್ತಿದ್ದೆ, ಇವರೂ, ಹಾಗೆ ನಮ್ಮ ಅತ್ತೆ, ಮಾವ ಎಲ್ಲ ಎಷ್ಟು ದೊಡ್ಡಗುಣ ನಿಜವಾಗಿಯೂ ನನ್ನ ಪುಣ್ಯ - ಹೀಗೆ ಏನೇನೋ ಯೋಚನೆಯ ಮಂಥನ ನಡೆಯುತ್ತಿರುವಾಗ ಫ಼ೋನ್ ಮತ್ತೊಮ್ಮೆ ರಿಂಗ್ ಆಯ್ತು. ಫ಼ೋನ್ ಬಳಿಯೆ ಇದ್ದ ಸೌಭಾಗ್ಯ ಗಾಬರಿಯಾಗಿ ಯೋಚನೆಯಿಂದ ಹೊರಬಂದಳು.
-‘ಓಹೋ... ಏನಪ್ಪ ಇವತ್ತು ಬೆಳಿಗ್ಗೆ ಬೆಳಿಗ್ಗೆನೇ ಫ಼ೋನ್ ದಾಳಿ ಶುರ್ವಾಗ್ಬಿಟ್ಟಿದೆ, ಸೌಭಾಗ್ಯ ನೋಡಮ್ಮ ಯಾರದು‘ - ಅಂದ್ರು ಭಟ್ರು.
ಫ಼ೊನ್ ತೆಗೆದುಕೊಂಡ ಸೌಭಾಗ್ಯ -‘ಹಲೋ ಯಾರು?‘ -
-‘ಚೆನ್ನಾಗಿದ್ಯೆನಮ್ಮ?‘
-‘ಯಾರು‘ -
‘ಆಯ್ತಮ್ಮ ಪರ್ವಾಗಿಲ್ಲ, ಮದ್ವೆ ಆಗಿ ಗಂಡ ಪಕ್ಕಕ್ಕೆ ಬಂದ ಅಂತ ಈ ಬಡ ಅಣ್ಣನನ್ನು ಮರೆತು ಬಿಡೋದು ಸಹಜ, ಇರಿಲಿ ಬಿಡಮ್ಮ.‘
-‘ಏ ಅಣ್ಣ, ಹೋಗಣ್ಣ ನೀನು ನನ್ನ ಮಾತಾಡಿಸ್ಬೇಡ, ತಂಗಿ ಒಬ್ಳು ಇದ್ದಳೆ ಅನ್ನೋದು ನಿಂಗೆ ಮರ್ತೇಹೋಯ್ತು ಅಲ್ವಾ?-
-‘ಇಲ್ಲಮ್ಮ ಕಂಡಿತಾ ಇಲ್ಲ, ನೀವು ಬಿಟ್ರೆ ನನಗೆ ಈ ಪ್ರಪಂಚ್ದಲ್ಲಿ ಬೇರೆ ಯಾರಿದ್ದಾರೆ ಹೇಳು? ಅದು ಏನಾಯ್ತು ಅಂದ್ರೆ, ಮುಲ್ಟಿ ನ್ಯಾಷನಲ್ ಕಂಪನಿ ಒಂದರಲ್ಲಿ ಕೆಲಸಕ್ಕೆ ಹಾಕಿದ್ದೆ. ಸುಮಾರು ತಿಂಗಳೇ ಕಳೆದರೂ ಏನೂ ಉತ್ತರವಿರಲಿಲ್ಲ. ನಿನ್ನ ಮದುವೆಯಾದ ಶುಭಗಳಿಗೆಯೋ ಏನೋ, ಒಂದೆರಡು ತಿಂಗಳ ಹಿಂದೆ ಕರೆ ಬಂತು ಇಂಟರ್ವೀವ್ಯೂ ಆಯ್ತು, ಒಳ್ಳೆ ಸ್ಯಾಲರಿ ಪ್ಯಾಕೇಜ್, ತಕ್ಷಣ ಕೆಲಸಕ್ಕೆ ಸೇರಿ ಬಾಂಬೆಯಲ್ಲಿ ಟ್ರೈನಿಂಗೆ ರಿಪೋರ್ಟ್ ಆಗ್ಬೇಕು ಅಂದ್ರು. ಸರಿ ನಿಂಗೆಲ್ಲ ಒಂದು ಸರ್ಪ್ರೈಸ್ ಕೊಡೋಣ ಅಂತ ಯಾರಿಗೂ ಹೇಳಿರ್ಲಿಲ್ಲ, ಆದ್ರೆ ನೆನ್ನೆ ನಮ್ಮ ಬೆಂಗಳೂರು ಬ್ರಾಂಚ್ನಿಂದ ಇನ್ಫ಼ರ್ಮೇಷನ್ ಬಂದಿತ್ತು ನರಸಿಂಹ ಅವ್ರು ನನ್ನನ್ನು ಹುಡುಕಿಕೊಂಡು ಬಂದಿದ್ರು ಅಂತ, ಅದಕ್ಕೆ ಈಗ ಬೆಳಿಗ್ಗೇನೆ ಫ಼ೋನ್ ಮಾಡ್ದೆ. ಏನಮ್ಮ ಏನಾದ್ರೂ ವಿಶೇಷ ಸಮಾಚಾರ ಇದ್ಯಾ? ನನಗೆ ಅಳಿಯನನ್ನು ಕೊಡ್ಬೇಕು ಅಂತ ಏನದ್ರೂ....... ಆಗ್ಲೇ..... ಹೇಳಮ್ಮ‘
-ಚೀ..... ಹೋಗಣ್ಣ ತಮಾಷೆ ಮಾಡ್ಬೇಡ ನಂಗೆ ನಾಚ್ಕೆ ಆಗುತ್ತೆ‘-
ಅಷ್ಟರಲ್ಲಿ ಅಲ್ಲಿಗೆ ಬಂದ ಯಜಮಾನರನ್ನು ಗಮನಿಸಿ, ಅಣ್ಣ ಫ಼ೋನ್ ಮಾಡಿದ್ದಾರೆ ಎಂದು ಹೇಳಿ ಪತಿದೇವರಿಗೆ ಫ಼ೋನ್ ವರ್ಗಾಯಿಸಿ ಪಕ್ಕಕ್ಕೆ ನಿಂತಳು ಸೌಭಾಗ್ಯ.
-‘ ನಮಸ್ಕಾರ ಶ್ರೀನಿವಾಸ್, ಚೆನ್ನಾಗಿದ್ದೀರಾ?‘-
-ಓ.. ನಾನು ಆರಾಮ ಇದ್ದೇನೆ ನೀವು ಹೇಗಿದ್ದೀರ? ಮನೇಲಿ ಅತ್ತೆ ಮಾವ ಎಲ್ಲಾ ಚೆನ್ನಾಗಿದ್ದಾರಾ?‘-
-‘ಎಲ್ಲ ಚೆನ್ನಾಗಿದ್ದಾರೆ‘-
- ‘ಅದು ಕೆಲವು ತಿಂಗಳ ಹಿಂದೆ ಅವೆನ್ಸ್ ಯುನಿವರ್ಸೆಲ್ ಪವರ್ ಸಿಸ್ಟೆಮ್ ಅನ್ನೊ ಮುಲ್ಟಿ ನ್ಯಾಷನಲ್ ಕಂಪನಿಯಲ್ಲಿ ಅಪ್ಲೈ ಮಾಡಿದ್ದೆ, ಇತ್ತೀಚೆಗೆ ಇದ್ದಕಿದ್ದಹಾಗೆ ಕಾಲ್ ಬಂದು ಇಂಟರ್ವೀವ್ಯೂ ನಡೀತು. ಎಲ್ಲ ಸೆಟ್ಲ್ ಆಗಿ ತಕ್ಷಣ ಸೇರ್ಕೊಳ್ಳಿ ಟ್ರೈನಿಂಗ್ ಪ್ರೊಗ್ರಾಂ ಸ್ಟಾರ್ಟ್ ಆಗ್ತಿದೆ ಆ ಬ್ಯಾಚ್ಗೆ ಹಾಕಿ ಬಿಡ್ತೀವಿ, ಆಮೇಲೆ ಬೆಂಗ್ಳೂರ್ ಪೋಸ್ಟಿಂಗ್ ಅಂದ್ರು, ಜೊತೆಗೆ ಫ಼್ಯಾಕ್ಟರಿ ಹತ್ರಾನೇ ಕ್ವಾರ್ಟ್ರಸ್ ಕೊಟ್ಟಿದ್ದಾರೆ, ಇದನೆಲ್ಲಾ ಒಂದು ಸರ್ಪ್ರೈಸ್ ಆಗಿ ನಿಮಗೆ ಹೇಳೋಣ ಅಂತ ಏನೂ ಹೇಳ್ದಲೆ ಇಲ್ಲಿ ಬಾಂಬೆಗೆ ಬಂದೆ ಟ್ರೈನಿಂಗ್ ಸೇರ್ಕೊಂಡೆ, ಇದಕ್ಕಾಗಿ ಯಾರೂ ಬೇಜಾರು ಮಾಡೇಕೋಬೇಡಿ, ನೆನ್ನೆ ನಮ್ಮ ಬೆಂಗಳೂರು ಬ್ರಾಂಚ್ ಹತ್ರ ನೀವು ಬಂದಿದ್ರ ಅಂತ ಇನ್ಫ಼ರ್ಮೇಷನ್ ಬಂತು, ರಾತ್ರಿ ೯ ಗಂಟೆವರಗೂ ಸೆಷನ್ ಇತ್ತು, ಹಾಗಾಗಿ ಈಗ ಕಾಲ್ ಮಾಡ್ತಿದ್ದೀನಿ ನರಸಿಂಹ, ಏನ್ಸಮಾಚಾರ‘? -
-‘ವಿಷೇಶ ಏನೂ ಇಲ್ಲ ನೆನ್ನೆ ನಾನು ಮತ್ತು ಚೆಂದ್ರು ಬೆಂಗ್ಳೂರ್ಗೆ ನನ್ನ ಸ್ನೇಹಿತನ ಮನೆ ಫ಼ಂಕ್ಷನ್ಗೆ ಬಂದಿದ್ವು, ಏಕೊ ಈಚೆಗೆ ನಿಮ್ಮಿಂದ ಫ಼ೋನ್ ಕೂಡ ಬಂದಿರ್ಲಿಲ್ವಲ್ಲ ಸರಿ ನಿಮ್ಮನ್ನ ನೋಡಿ ಬರೋಣ, ಅಂತ ನಿಮ್ಮ ಮನೆ ಹತ್ರ ಹೋದ್ವು ಅಲ್ಲಿ ನೀವು ಮನೆಯನ್ನೂ ಖಾಲಿ ಮಾಡಿ ಹೊಸ ಕೆಲ್ಸಕ್ಕೆ ಸೇರಿದ್ದೀರ ಅಂತ ಗೊತ್ತಾಯ್ತು? ವಿಷಯ ಸರಿಯಾಗಿ ತಿಳ್ಕೋಳೋಣ ಅಂತ ಫ಼್ಯಾಕ್ಟರಿ ಹತ್ರನೂ ಬಂದ್ವು ಆದ್ರೆ ಅಲ್ಲೂ ಸರಿಯಾಗಿ ಗೊತ್ತಾಗ್ಲಿಲ್ಲ, ಅವ್ರು ನಮ್ಮ ಇನ್ಫ಼ರ್ಮೇಷನ್ ತಗೊಂಡಿದ್ರು ಅಷ್ಟೆ ಮತ್ತಿನ್ನೇನೂ ಇಲ್ಲ, ಶ್ರೀನಿವಾಸ್, ಹೊಸ ಕೆಲಸ ಸಿಕ್ಕಿದಕ್ಕೆ ಕಂಗ್ರಾಡ್ಸ್, ಆಮೇಲೆ ಪಾರ್ಟಿ ಕೊಡೋದು ಮರಿಬೇಡಿ‘-
-‘ಒ ಎಸ್ ಶ್ಯೂರ್ ವೈ ನಾಟ್‘-
-‘ನೋಡಿದ್ರಾ ಆಗ್ಲೆ ಮುಲ್ಟಿನ್ಯಾಷನಲ್ ಇಂಗ್ಲೀಷ್ ಪ್ರಭಾವ ಶುರು ಆಗ್ಬಿಟ್ಟಿದೆ‘-
-‘ ಒ ನೋ.. ಹಾಗೇನೂ ಇಲ್ಲ ನರಸಿಂಹ, ಸರಿ ಮತ್ತೆ ನಾನು ಬೆಂಗಳೂರ್ಗೆ ಬಂದ್ಮೇಲೆ ಫ಼ೋನ್ ಮಾಡ್ತೀನಿ, ಎಲ್ಲಾರ್ಗೂ ಕೇಳ್ದೆ ಅಂತ ಹೇಳ್ಬಿಡಿ, ಆಗ್ಲೇ ಟೈಮ್ ಆಯ್ತು, ನಾನು ಮತ್ತೆ ಸಿಗ್ತೀನಿ ಬೈ...‘-
-‘ ಅಪ್ಪ ಸೌಭಾಗ್ಯಳ ಅಣ್ಣ, ಹೊಸಕೆಲ್ಸ ಸಿಕ್ಕಿದ್ಯಂತೆ, ಟ್ರೈನಿಂಗ್ ಅಂತ ಬಾಂಬೆಲಿದಾರಂತೆ, ನಮಗೆಲ್ಲಾ ಸರ್ಪ್ರೈಸ್ ಮಾಡ್ಬೇಕು ಅಂತ ಹೇಳ್ದೆ ಮುಚ್ಚಿಟ್ಟಿದ್ರಂತೆ, ಇನ್ನೊಂದು ೧೫ ದಿನ ಬೆಂಗ್ಳೂರ್ಗೆ ವಾಪಸ್ಸು ಬರ್ತಾರಂತೆ‘-
-‘ಹೋಗ್ಲಿ ಬಿಡಪ್ಪ ಎಲ್ಲಾ ಒಳ್ಳೆದಾಗ್ಲಿ, ಅಂತೂ ನಮ್ಮ ಮನಸ್ಸಿನಲ್ಲಿ ಇದ್ದ ಎಲ್ಲಾ ಪ್ರಶ್ನೆಗಳಿಗೂ ಆ ದೇವ್ರು ತಾನೆ ಉತ್ರ ಕೊಡ್ತಿದ್ದಾನೆ, ಸದ್ಯ ಸೌಭಾಗ್ಯಳ ಮುಖದಲ್ಲಿ ಈಗ ಸ್ವಲ್ಪ ಗೆಲುವು ಕಾಣಿಸ್ತು ನೋಡು, ನೋಡಿದ್ಯಾ ಲಕ್ಷ್ಮೀ ಇದನ್ನೆ ನಾನು ಹೇಳೋದು ಯದ್ಭಾವಂ ತದ್ಭವತಿ ಅಂತ, ನಾವು ಒಳ್ಳೆಯದನ್ನು ನೆನೆದರೆ ಅದು ಆಗುವುದೂ ಒಳಿತೆ ಗೊತ್ತಾಯ್ತಾ‘-
-‘ಕಂಡಿತಾ ಒಪ್ಪಿದೆ ರಿ‘-
-‘ನರಸಿಂಹ, ತೋಟಕ್ಕೆ ಹೋಗುವಾಗ ಸೌಭಾಗ್ಯಳನ್ನೂ ಕರೆದುಕೊಂಡು ಹೋಗು ಅವಳಿಗೂ ಸ್ವಲ್ಪ ಮನಸ್ಸು ಹಗುರವಾಗುತ್ತೆ‘-
-‘ಆಯ್ತಪ್ಪ ಹಾಗೇ ಆಗ್ಲಿ‘-
ಚಿಕ್ಕ ವಿರಾಮ, ಕುಡ್ಕೊಂಡು ಬನ್ನಿ ಹೋಗಿ - ಕಾಫ಼ೀನ....
Comments
ಉ: ಸೌಭಾಗ್ಯ ಮನೆಗೆ ಮರಳಿದ ಮಾರನೆದಿನ
In reply to ಉ: ಸೌಭಾಗ್ಯ ಮನೆಗೆ ಮರಳಿದ ಮಾರನೆದಿನ by kavinagaraj
ಉ: ಸೌಭಾಗ್ಯ ಮನೆಗೆ ಮರಳಿದ ಮಾರನೆದಿನ
ಉ: ಸೌಭಾಗ್ಯ ಮನೆಗೆ ಮರಳಿದ ಮಾರನೆದಿನ
In reply to ಉ: ಸೌಭಾಗ್ಯ ಮನೆಗೆ ಮರಳಿದ ಮಾರನೆದಿನ by ಗಣೇಶ
ಉ: ಸೌಭಾಗ್ಯ ಮನೆಗೆ ಮರಳಿದ ಮಾರನೆದಿನ
In reply to ಉ: ಸೌಭಾಗ್ಯ ಮನೆಗೆ ಮರಳಿದ ಮಾರನೆದಿನ by ಗಣೇಶ
ಉ: ಸೌಭಾಗ್ಯ ಮನೆಗೆ ಮರಳಿದ ಮಾರನೆದಿನ