ಏಕಾಂಗಿ - ಏಕಾಂತ
ಕವನ
ಏಕಾಂಗಿ - ಏಕಾಂತ
ಓ ಏಕಾಂಗಿಯೆಂಬ ದುಸ್ಸಹ ಮನಃಸ್ಥಿತಿಯೆ,
ಹೃದಯ ಹರುಷವ ಸುಡುವ ಅಗ್ನಿಯೆ,
ವಿಕೃತಗೊಳಿಸದಿರು ನನ್ನ ಬಾಳ ಸುರೂಪ,
ಆರಿಸದಿರು ಮನಮಂದಿರದ ಚೈತನ್ಯ ದೀಪ.
ಬಾಳಿನಲಿ ನನಗೆ ನಂಬಿಕೆಯು ಹೋಹ ಮುನ್ನ.
ತೊಲಗಾಚೆ ಬಹುದೂರ,ಕಾಡದೆ ನನ್ನ?
ಬೇಸರದ ಶೃಂಕಲೆಗಳು ಬಿಗಿದಿಡಿದು
ಉಸಿರ್ಗಟ್ಟಿಸಿದೆ ನಿರುತ್ಸಾಹಿ ಜೀವವ.
ಅಂತರಂಗ ಸ್ಮಶಾನದಲಿ ಸ್ಪಂದನೆಯಿಲ್ಲದೆ
ಬಿದ್ದಿವೆ ಭಾವಗಳ ಶವ.
ಓ ಏಕಾಂಗಿ ನಿನ್ನ ಕ್ರೂರ ದೆಸೆಯಿಂದ,
ಪ್ರೀತಿ ಪ್ರೇಮ ವಿಶ್ವಾಸಗಳ ವಿಸ್ಮೃತಿಯಲಿ,
ಸ್ನೇಹ, ಸೌಹಾರ್ದ, ಮೈತ್ರಿಗಳ ಅಪನಂಬಿಕೆಯಲಿ
ಜಡಭಾವಿಯಾಗಿ ಬದುಕಿರುವೆ.
ಸುತ್ತಲಿರುವವರು ಛದ್ಮವೇಷಿಗಳೆಂಬ,
ಅವರ ಸ್ವಾರ್ಥಕ್ಕೆ ನಾ ಬಲಿಯೆಂಬ,
ಜುಗುಪ್ಸೆಯ ಬಂಡೆಯಡಿ ಸಿಲುಕಿರುವೆ.
ನಾ ಏನು ಮಾಡಿದರು ತಪ್ಪಾಗುವುದೆಂಬ
ಆತಂಕದಲಿ ತೊಳಲುತಿರುವೆ.
ನನ್ನ ಕಣ್ಣೀರಿಗೆ, ನನ್ನ ನಿಟ್ಟುಸಿರಿಗೆ,
ನನ್ನ ಮೌನಕ್ಕೆ, ನನ್ನ ಅಸಹಾಯಕ್ಕೆ,
ಜಗವು ಲಾಕ್ಷಣಿಕ ಮುಖವಾಡ ಧರಿಸಿದೆ.
ನನ್ನ ನಗುವಿನಲಿ ಅಳುವಡಗಿದೆ.
ನನ್ನ ಅಳುವಿನಲಿ ದುಃಖ ಬಿಕ್ಕೆದೆ.
ಇಂದು ಒಂಟಿ ನಾನು.....ಹಃ.ಹಃ..ಏಕಾಂಗಿ ಗೆದ್ದೆ ನೀನು.!!!
------ * -------
ಓ ಏಕಾಂತ ಪರಿಸರ ಮಹರ್ಷಿಯೆ,
ಬಾ ಇಲ್ಲಿ ಎನ್ನ ಹೃದಯ ಬನದ
ಮಾನಸ ಸರೋವರದ ತಟಕೆ.
ತಪವನಾಚರಿಸು ಧೀರ ಏಕಾಗ್ರತೆಯಲಿ
ಆಪೋಷಿಸಿ ಜ್ಞಾನರಸವೆನ್ನ ಮನಕೆ.
ದಿಕ್ಕು ದಿಕ್ಕುಗಳಲಿ ನುಗ್ಗುವ ಚಿತ್ತವನು
ಅಂಕೆಯಲ್ಲಿಡಲು, ಶಕ್ತಿಯನನುಗ್ರಹಿಸು.
ಇಲ್ಲ, ಸಲ್ಲದ, ಅನರ್ಥ ಚಿಂತನೆಗಳ
ದೂರವಿರಿಸಿ ಶಾಂತಿಯನು ಕರುಣಿಸು.
ಅಳಿಯಲಿ ಉದ್ವಿಗ್ನತೆ, ಭವ ಸಂಸಾರ ವೈಕಲ್ಯ.
ದೊರೆಯಲಿ ಶಾಂತತೆ, ಅನುಭಾವದಲ್ಲಿ ಸಾಕಲ್ಯ.
ಸ್ಮೃತಿ ಬೃಂದಾವನದಿ ಚಿಗುರಲಿ ಬಾಳ ಸಾಫಲ್ಯ.
ಓ ಏಕಾಂತ! ನಿನ್ನಾಲಿಂಗನದ ದೆಸೆಯಿಂದ,
ಸುಚಿಂತನೆಗಳ ಕೇಂದ್ರವಾಗಲಿ ಎನ್ನ ಹೃದಯ.
ಮನದಿ ಮೂಡಲಿ ಋಜುಭಾವ ಛಾಯ.
ದುಗುಡಗಳು ಕರಗಿ, ಕ್ಷೋಭೆಗಳಡಗಿ,
ನಾನಗುವೆ ಬಾಳ ಗಮ್ಯವರಿವ ಯೋಗಿ.
ಅಚಲ ಚಿತ್ತದಿ, ನಿಶ್ಚಲ ಮನದಿ,
ದಿವ್ಯ ದರ್ಶನಗಳ ಪಡೆವ ಬೋಗಿ.
ನಿನ್ನ ಭವ್ಯ ಮೌನದಲಿ,
ಜಗದ ಉಸಿರಿನಲಿ ಉಸಿರಾಗಿ,
ಜಗದಣು ಅಣುವಿನಲಿ ಅಣುವಾಗಿ ಮೈಮರೆಯುವೆ.
ನಾನಿರುವ ಅರಿವನೇ ಮರೆತು ನಗುವೆ.
ನನ್ನ ಜೊತೆಯಿರಲು ನೀನು....ಈ ಜಗಕೆ ನೃಪನು ನಾನು.
- ಚಂದ್ರಹಾಸ ( ೨ - ೮ - ೨೦೧೧ )