"ಬಾಳೆಬರೆ" ರಸ್ತೆ (ಪ್ರಬಂಧ)

"ಬಾಳೆಬರೆ" ರಸ್ತೆ (ಪ್ರಬಂಧ)

 


 


 


ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿಯಂತಿರುವ ಈ ಘಾಟಿಗೆ ಬಾಳೆಬರೆ ಎಂಬ ಹೆಸರು ಬಂದಿದ್ದಕ್ಕೆ ಕಾರಣ ಸರಳ. ಅಲ್ಲಿನ ಕಡಿದಾದ ಪರ್ವತ ಭಿತ್ತಿಗಳಲ್ಲಿ ಕಲ್ಲುಬಾಳೆಗಳು ಸಾಲುಸಾಲಾಗಿ ಬೆಳೆದಿರುತ್ತವೆ. ಬರೆ ಎಂದರೆ, ಕಡಿದಾದ ಪರ್ವತ ಸಾಲು ಎಂಬ ಅರ್ಥವಿದೆ. ಆದ್ದರಿಂದ ಬಾಳೆಬರೆ ಎಂಬುದು ಅನ್ವರ್ಥ ನಾಮವೆನ್ನಬಹುದು. ಈ ಬಾಳೆಬರೆ ಘಾಟಿಯೊಂದಿಗೆ ನನ್ನ ಅನುಬಂಧ ಬಾಲ್ಯ ಕಾಲದಿಂದಲೂ ಮುಂದುವರಿದುಕೊಂಡು ಬಂದಿದೆ. ನಮ್ಮ ತಂದೆ ಘಟ್ಟದ ಮೇಲೆ ಕೆಲಸದಲ್ಲಿದ್ದುದರಿಂದ, ಪ್ರತಿವರ್ಷ ಒಂದೆರಡು ಬಾರಿಯಾದರೂ ಈ ಘಾಟಿಯ ಮೂಲಕ ನಮ್ಮನ್ನೆಲ್ಲಾ ಕರೆದುಕೊಂಡು ಹೋಗಿಬರುತ್ತಿದ್ದರು. ನಾನು ಹುಟ್ಟುವ ಸಮಯದಲ್ಲಾಗಲೇ ಅವರು ದೂರದ ಊರಿನಲ್ಲಿ ಕೆಲಸದಲ್ಲಿದ್ದುದರಿಂದ, ಆಗಾಗ ಅವರು ಊರಿಗೆ ಬಂದು ಹೋಗುವಾಗ, ಅವರ ಜೊತೆ ಪಯಣ ಮಾಡುತ್ತಾ, ನಾನು ಹುಟ್ಟಿದ ವರ್ಷದಿಂದ ಆರಂಭಿಸಿ, ಪ್ರತಿವರ್ಷ ಒಂದೆರಡು ಬಾರಿಯಾದರೂ ಈ ಘಾಟಿಯನ್ನು ನಾನು ಹತ್ತಿ ಇಳಿದಿದ್ದೇನೆ ಎನ್ನಬಹುದೇನೊ! ಬಾಳೆಬರೆ ಘಾಟಿಯ ಮೂಲಕ ಬಸ್ ಪ್ರಯಾಣ ತುಸು ಶ್ರಮದಾಯಕವೆಂದೇ ಹೇಳಬಹುದು. ಅಲ್ಲಲ್ಲಿ, ದಟ್ಟ ಕಾಡಿನ ನೋಟ, ದಟ್ಟ ಕಾಡಿನ ವಾತಾವರಣ ಈಗಲೂ ಅಲ್ಲಿದೆ. ಹಿಂದೆ, ಅಂದರೆ, ವಾರಾಹಿ ನೀರಾವರಿ ಯೋಜನೆಯ ಕಾಮಗಾರಿ ಆರಂಭವಾಗುವ ಮುಂಚೆ, ಭಾರೀ ಕಾಡಿನಿಂದಾವೃತವಾದ ಆ ರಸ್ತೆಯಲ್ಲಿನ ಪ್ರಯಾಣವೇ ಒಂದು ವಿಶಿಷ್ಟ ಅನುಭವವೆನ್ನಬಹುದು. ನನಗೆ, ೬ ಅಥವಾ ೭ ವರ್ಷವಾಗಿದ್ದಾಗ, ಒಮ್ಮೆ ಈ ಘಾಟಿ ರಸ್ತೆಯುದ್ದಕ್ಕೂ, ಕಿಟಿಕಿಯ ಪಕ್ಕದಲ್ಲಿ ನಿಂತುಕೊಂಡೇ, ನೋಟವನ್ನು ಸವಿಯುತ್ತಾ ಬಂದಿದ್ದ ನೆನಪು ಈಗಲೂ ಸವಿಸವಿಯಾಗಿದೆ.


ಘಾಟಿ ರಸ್ತೆಯಲ್ಲಿ ಬಸ್ ಪ್ರಯಾಣದುದ್ದಕ್ಕೂ ಚಂದದ ಪ್ರಕೃತಿ ನೋಟವನ್ನು ಸವಿಯಬಹುದು. ಆಳವಾದ ಕಣಿವೆಗಳು, ಅಲ್ಲಲ್ಲಿ ಪುಟ್ಟ ದೊಡ್ಡ ಜಲಪಾತಗಳು, ದೂರದಲ್ಲಿ ಕೊಡಚಾದ್ರಿ ಪರ್ವತ, ಕಣಿವೆಯ ತಳದಲ್ಲಿ ಅಡಿಕೆ ತೋಟಗಳು, ಕಾಡಿನ ನಡುವೆ ನಿಗೂಢವೆನಿಸುವಂತೆ ಕಾಣುವ ಏಕಾಂಗಿ ಮನೆಗಳು, ದೂರದಲ್ಲಿ ವಿಶಾಲವಾದ ಬಯಲು,ಕಾಡುಗಳು, ಇನ್ನೂ ದೂರದಲ್ಲಿ ಮಸುಕಾಗಿ ಸಮುದ್ರದ ನೋಟ ; ಹತ್ತಿರದಲ್ಲಿ ಬಳ್ಳಿ,ಕಲ್ಲು,ಹುಲ್ಲು,ಗಿಡ,ಮರ ಈ ರೀತಿಯ ಹೊಸ ಹೊಸ ಅನುಭವಗಳ ಗಣಿ ಈ ಘಾಟಿ ರಸ್ತೆ. ಇತ್ತ ನಾವು ಸುಂದರ ದೃಶ್ಯಗಳನ್ನು ನೋಡುತ್ತಾ ಕುಳಿತಿರಬೇಕಾದರೆ, ಅತ್ತ ಹೊಟ್ಟೆತೊಳಸಿ ವಾಂತಿ ಮಾಡುವವರ ಬವಣೆ ಇನ್ನೊಂದೆಡೆ. ದೊಡ್ಡ ದೊಡ್ಡ ಮರಗಳನ್ನು, ಆಳವಾದ ಕಮರಿಗಳನ್ನು, ದೂರದಲ್ಲಿ ನೀಲಿಗಟ್ಟಿದ ಪರ್ವತ ಶ್ರೇಣಿಗಳನ್ನು ನೋಡುತ್ತಾ ಕಿಟಿಕಿಯಲ್ಲಿ ಮುಖವಿಟ್ಟಿರುವಾಗಲೇ, ಸಹ ಪ್ರಯಾಣಿಕರು ಗಾಬರಿಗೊಂಡಂತೆ, "ಅಯ್ಯೋ,ಕಿಟಿಕಿಹಾಕಿ! ಕಿಟಿಕಿಹಾಕಿ!" ಎಂದು ಕೂಗಿಕೊಂಡು, ಪ್ರಾಕೃತಿಕ ಲೋಕದಲ್ಲಿನ ನಮ್ಮ ಮಾನಸಿಕ ವಿಹಾರಕ್ಕೆ ಕಡಿವಾಣ ಹಾಕುತ್ತಾರೆ! ನಮಗಿಂತ ಎರಡು ಮೂರು ಸೀಟು ಮುಂದೆ ಕುಳಿತವರು, "ವ್ಯಾಂಕ್ ವ್ಯಾಂಕ್" ಎಂದು ಕಿಟಿಕಿಯಲ್ಲಿ ವಾಂತಿ ಮಾಡುತ್ತಾ, ಅದರ ಸಿಂಚನವನ್ನು ಹಿಂದೆ ಕುಳಿತವರಿಗೆ ಸಿಂಪಡಿಸುತ್ತಿರುವ ಸಂದರ್ಭವದು. ಬೇರೆಯವರು ವಾಂತಿ ಮಾಡುವ ಸೂಚನೆಯನ್ನು ಮುಂದಾಗಿ ಗಮನಿಸಿ, ಅದರ ಸಿಂಚನ ನಮಗೆ ಆಗದಿರಲಿ, ಎಂದು ಲಗುಬಗನೆ ಕಿಟಿಕಿ ಮುಚ್ಚಿಸುವಲ್ಲಿ ಅಪ್ಪಯ್ಯ ಮುಂದು. ಅಂದಿನ ಕಾಲದ ಬಸ್ ಗಳಲ್ಲಿ ಕಿಟಿಕಿ ಮುಚ್ಚಲು ಪ್ರತ್ಯೇಕ ಗಾಜುಗಳಿರಲಿಲ್ಲ, ಬದಲಾಗಿ ಉದ್ದನೆಯ ತಾರ್ಪಾಲುಗಳು ಇದ್ದವು! ಅದನ್ನು ಮುಚ್ಚಿಸಿದರೆ, ಒಮ್ಮೆಗೇ ನಾಲ್ಕಾರು ಸಾಲಿನ ಕಿಟಿಕಿಗಳು ಮುಚ್ಚಿಕೊಳ್ಳುತ್ತಿದ್ದವು. ಆಗ ಬಸ್ ಒಳಗೆ ತಂಗಾಳಿ ಬರದಂತಾದಾಗ, ಇತರ ಎಲ್ಲ ಮಕ್ಕಳಿಗೂ ವಾಂತಿ ಬರುವಂತಹ ಮಿಥ್ಯಾನುಭವ. ಮುಂದಿನ ಸೀಟಿನ ಹುಡುಗನೊಬ್ಬ ವಾಂತಿ ಮಾಡಿದರೆ, ಹಿಂದೆ ಕುಳಿತ ನಮಗೆ, ಅದರ ವಾಸನೆಗೋ, ಕಿಟಿಕಿ ಮುಚ್ಚಿ ಗಾಳಿಯಾಡದಂತೆ ಇರುವುದರಿಂದಲೋ ಏನೊ, ಹೊಟ್ಟೆಯಲ್ಲಿ ಹುಣಿಸೆ ಹಣ್ಣು ಕಿವುಚಿದಂತಾಗುತ್ತದೆ - ವಾಂತಿಯ ಈ ಮಿಥ್ಯಾನುಭವವು, ಸತ್ಯಕ್ಕೆ ಹೊರಳಿಕೊಂಡಾಗ, ನಮ್ಮಲ್ಲಿಯೂ "ವ್ಯಾಂಕ್ ವ್ಯಾಂಕ್ " ಶುರು! ನನ್ನ ಅಮ್ಮನಿಗೆ ಮತ್ತು ತಂಗಿಯರಿಗೆ ಬೇಗನೆ ವಾಂತಿ ಬರುವ ಸಂಭವ ಇತ್ತು. ಇದನ್ನು ಗಮನಿಸಿದ ಅಪ್ಪಯ್ಯ, ಮುಂದಿನ ಬಾರಿ ಘಟ್ಟ ಹತ್ತಿ ದೂರದ ಊರಿಗೆ ಹೋಗುವ ಸಮಯದಲ್ಲಿ, "ವಾಂತಿ ಮಾತ್ರೆ" ಯನ್ನು ತಿನ್ನಿಸಿಬಿಡುತ್ತಿದ್ದರು. ವಾಂತಿ ಆಗದಿರಲೆಂದು ತಿನ್ನುವ ಈ "ವಾಂತಿ ಮಾತ್ರೆ" ಯ ಪ್ರಭಾವದಿಂದ, ನಿದ್ರೆಯ ಅನುಭವ ಜಾಸ್ತಿಯಾಗಿ ವಾಂತಿಯಿಂದ ದೂರವಿರಬಹುದಾದರೂ, ಅದರ ದುಷ್ಪರಿಣಾಮಗಳು ಬೇರಾವ ರೀತಿ ಕಾಡಿರಬಹುದೋ, ಈಗ ನೆನಪಿಗೆ ಬರುತ್ತಿಲ್ಲ. ಕೆಲವರು ಲಿಂಬೆ ಹಣ್ಣನ್ನು ಕೈಲಿ ಹಿಡಿದುಕೊಂಡು, ಅದಕ್ಕೆ ಉಗುರಿನಿಂದ ಚುಚ್ಚಿ, ಅದರ ವಾಸನೆಯನ್ನು ಮೂಸುತ್ತಾ ವಾಂತಿಯ ಅನುಭವದಿಂದ ದೂರವಿರುವ ಪ್ರಯತ್ನ ಮಾಡುತ್ತಿರುವುದನ್ನೂ ಈ ಘಾಟಿ ರಸ್ತೆಯ ಬಸ್ಸಿನಲ್ಲಿ ನೋಡಬಹುದಿತ್ತು!


ಬಾಳೆ ಬರೆ ಘಾಟಿ ರಸ್ತೆಯಲ್ಲಿ ಒಂದು ಜಲಪಾತವಿದೆ. ಮಳೆಗಾಲದಲ್ಲಿ ಚೆನ್ನಾಗಿ ಮೈದುಂಬಿಕೊಂಡು, ರಸ್ತೆಯ ಪಕ್ಕವೇ ತನ್ನ ಶ್ವೇತ ಧಾರೆಯ ದರ್ಶನನೀಡುತ್ತದೆ. ಹಾಗೂ ಹೀಗೂ ಚಳಿಗಾಲದ ತನಕವೂ ಇಲ್ಲಿನ ಜಲಧಾರೆ, ಬಸ್ ಪಯಣಿಗರ ಕಣ್ತಣಿಸುವುದಾದರೂ, ಬೇಸಗೆಯಲ್ಲಿ ಈ ಜಾಗದಲ್ಲಿ ಕಪ್ಪನೆಯ ಬಂಡೆ ಮತ್ತು ಆ ಸುತ್ತಲಿನ ದಟ್ಟ ಕಾಡು ಮಾತ್ರ ಕಾಣಸಿಗುತ್ತದೆ. ಬೆಳದಿಂಗಳಿರುವ ರಾತ್ರಿಯಲ್ಲಿ ಈ ಮಾರ್ಗದಲ್ಲಿ ಚಲಿಸುವ ಬಸ್ ಪ್ರಯಾಣಿಕರಿಗೆ, ಬೆಳದಿಂಗಳಿನಲ್ಲಿ ಮಿಂಚುವ ಜಲಧಾರೆಯ ಅಪೂರ್ವ ನೋಟ ಲಭ್ಯ. ರಸ್ತೆಯ ಪಕ್ಕವೇ ಇರುವ ಈ ಜಲಪಾತವು ನಿರ್ಮಿಸಿರುವ ತೊರೆಯ ನೀರನ್ನು ಬಳಸಿ, ಈಚಿನ ವರ್ಷಗಳಲ್ಲಿ ಲಾರಿಗಳನ್ನು ತೊಳೆಯುವ ಪದ್ದತಿ ಬೆಳೆದು ಬಂದಿದ್ದು, ಆ ಭಾಗದಲ್ಲಿ ರಸ್ತೆಯ ಮೇಲೆ ಲಾರಿ ನಿಲ್ಲಿಸುವ ಪರಿಪಾಠದಿಂದಾಗಿ, ರಸ್ತೆ ಕೆಟ್ಟಿದ್ದು, ಅಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಸ್ವಲ್ಪ ಕುಂದು ತಂದಿದೆ ಎನ್ನಬಹುದು. ಬಾಳೆ ಬರೆ ಘಾಟಿಯ ಸಾಲಿನಲ್ಲೇ, ಸ್ವಲ್ಪ ಪೂರ್ವದಿಕ್ಕಿನಲ್ಲಿ, ಕುಂಚಕಲ್ ಅಬ್ಬಿ ಎಂಬ ಹಲವು ಹಂತಗಳ ಜಲಪಾತವೂ ಇದ್ದು, ಅದನ್ನು ತಲುಪಲು ಚಾರಣದ ಅಗತ್ಯವಿದೆ.


ನಾನು ಓದಿದ ಶಂಕರನಾರಾಯಣ ಪ್ರೌಢಶಾಲೆಯ ಆಟದ ಮೈದಾನದಲ್ಲಿ ನಿಂತು, ಪೂರ್ವಕ್ಕೆ ನೋಡಿದರೆ, ಬಾಳೆಬರೆ ಘಾಟಿ ಮತ್ತು ಆ ಸುತ್ತಲಿನ ಪರ್ವತ ಶ್ರೇಣಿಯ ಚಂದದ ದೃಶ್ಯ ಲಭ್ಯ. ಅಲ್ಲಿನ ಘಾಟಿ ರಸ್ತೆಯಲ್ಲಿ ಚಲಿಸುವ ಬಸ್ ಗಳು, ತಮ್ಮ ಮುಂಭಾಗದ ಗಾಜಿನಿಂದ ಪ್ರತಿಫಲಿಸುವ ಸೂರ್ಯನ ಸಂಜೆಬಿಸಲನ್ನು ಅಲ್ಲಿನ ಆಟದ ಮೈದಾನದಿಂದ ಗಮನಿಸುವುದು ನಮಗೊಂದು ಆಟವಾಗಿತ್ತು. ಆಗಿನ ದಿನಗಳಲ್ಲಿ "ಬಾಳೆಬರೆ ಬೈಂದೂರು ಲೈನ್ ಕಂಬೈಂಡ್" ಎಂಬ ಹೆಸರಿನ ಬಸ್ ಕಂಪನಿಗಳ ಸಂಘವು ಆ ಮಾರ್ಗವಾಗಿ ಬಸ್ಸುಗಳನ್ನು ಓಡಿಸುತ್ತಿತ್ತು. ಬಿ.ಬಿ.ಎಲ್.ಸಿ. ಎಂಬ ಹೃಸ್ವ ಹೆಸರಿನ ಈ ಸಂಘದ ಮೂಲಕ ನಾವೆಲ್ಲ ವಿದ್ಯಾರ್ಥಿಗಳು ಬಸ್ ಪಾಸಿಗಾಗಿ ಪ್ರಯತ್ನಿಸುತ್ತಿದ್ದೆವು. ಈ ರೀತಿ "ಬಾಳೆಬರೆ" ಹೆಸರು ನಮ್ಮ ವಿದ್ಯಾರ್ಥಿ ಜೀವನದ ದಿನಚರಿಯಲ್ಲೂ ಸೇರಿಕೊಂಡ ಸಂದರ್ಭ ಅದು.


ಬಾಳೆಬರೆ ಘಾಟಿಯೊಡನೆ, ನನ್ನ ವೈಯಕ್ತಿಕ ಮುಖಾಮುಖಿಗಳು ಸಹಾ ಕೆಲವು ಇವೆ. ಒಮ್ಮೆ ದಸರಾ ರಜಾದಲ್ಲಿ, ನಮ್ಮ ಅಪ್ಪಯ್ಯ ಅಮ್ಮನನ್ನು ನೋಡಲು ದೂರದ ಆಂಧ್ರಕ್ಕೆ ಹೋಗಿ, ವಾಪಸು ನಾನೊಬ್ಬನೇ ಬಂದು, ಊರಿಗೆ ಹೋಗಲು ಶಿವಮೊಗ್ಗದಲ್ಲಿ ಹನುಮಾನ ಬಸ್ ಹತ್ತಿದೆ. ಸ್ವಲ್ಪ ಮಳೆಯೂ ಇತ್ತೆಂದು ಅನಿಸುತ್ತದೆ. ಬಸ್ಸಿನಲ್ಲಿ ಜನಗಳೂ ಕಡಿಮೆ ಇದ್ದರು. ಇತ್ತ ಬಾಳೆಬರೆ ಘಾಟಿಯ ಹತ್ತಿರ ಬಂದು, ಘಾಟಿ ಇಳಿಯುವಾಗ, ಇಡೀ ಬಸ್ಸಿನಲ್ಲಿ ನಾವು ಮೂವರು ಮಾತ್ರ ಉಳಿದುಕೊಂಡೆವು - ಓರ್ವ ಚಾಲಕ, ಓರ್ವ ನಿರ್ವಾಹಕ ಮತ್ತು ಓರ್ವ ಪ್ರಯಾಣಿಕನಾಗಿ ನಾನು ಮಾತ್ರ! ಬಸ್ ಡ್ರೈವರ್ ಗೋವಿಂದ ಎಂಬಾತ, ಚಂಡಿಕಾಂಬಾ ದೇವಾಲಯದ ಬಳಿ ಎದುರಾದ ಇತರ ಬಸ್ ಚಾಲಕರೊಂದಿಗೆ, "ಹ್ವಾಯ್, ಕಾಣಿ, ಇಡೀಬಸ್ ಗೆ ಈ ಹುಡುಗ ಮಾತ್ರ , ಜನವೇ ಇಲ್ಲೆ ಮಾರಾಯ್ರೆ" ಎಂದು ಮಾತಾಡಿಕೊಂಡು ನಗುತ್ತಾ ಬಸ್ ಚಲಾಯಿಸುತ್ತಿದ್ದ. ಘಾಟಿ ಇಳಿದು, ಹೊಸಂಗಡಿ ಹತ್ತಿರ ಬಂದ ನಂತರವಷ್ಟೇ, ನಾಲ್ಕಾರು ಪ್ರಯಾಣಿಕರು ಬಸ್ ಏರಿದರು. ಬಾಳೆಬರೆ ಘಾಟಿಯೊಂದಿಗಿನ ನನ್ನ ಮತ್ತೊಂದು ವೈಯಕ್ತಿಕ ಅನುಭವವೆಂದರೆ, ಕಾಲೇಜು ಪರೀಕ್ಷೆಗಳು ಮುಗಿದ ನಂತರ, ಬಾಳೆ ಬರೆ ನೋಡಲು ನಾನೊಬ್ಬನೇ ಹೋಗಿದ್ದು. ಬೆಳಿಗ್ಗೆ ಬೇಗನೆ ಬಸ್ ಏರಿ, ಬಾಳೆಬರೆ ಘಾಟಿಯ ಮಧ್ಯ ಇರುವ ಚಂಡಿಕಾಂಬಾ ದೇವಾಲಯ ತಲುಪಿದೆ. ಅಲ್ಲಿ ಇಳಿದು, ಹತ್ತಿರದಲ್ಲಿದ್ದ ಸೂರ್ಯಾಸ್ತ ನೋಡುವ ಸ್ಥಳದ ಬಳಿಯ ಮೆಟ್ಟಿಲಿನಲ್ಲಿ ಸ್ವಲ್ಪ ಹೊತ್ತು ಕುಳಿತೆ. ಈಗಿನಷ್ಟು ವಾಹನ ಸಂಚಾರ, ಜನಜಂಗುಳಿ ಆಗ ಇರಲಿಲ್ಲ. (ಆಗ ಇದ್ದ ಸೂರ್ಯಾಸ್ತ ನೋಡುವ ಆ ಸ್ಥಳವು ಈಗ ಪ್ರಚಾರದಿಂದ ಮರೆಯಾಗಿದೆ). ಕಣಿವೆಯ ದಟ್ಟ ಕಾಡಿನಿಂದ ಹಕ್ಕಿಗಳ ಕೂಗು ತೇಲಿಬರುತ್ತಿತ್ತು. ಆ ಕಣಿವೆಯ ದಟ್ಟಕಾಡಿನ ಮೇಲಿರುವ ಕೆಲವು ಮೋಡಗಳು ಅಲ್ಲಲ್ಲಿ ಘನೀರ್ಭವಿಸಿ, ತುಷಾರ ಸಿಂಚನವೂ ಆಗುತ್ತಿತ್ತು. ಘಾಟಿ ನೋಡುವ ಆಸೆಯಿಂದ ಬಂದರೂ, ಏಕಾಂಗಿಯಾಗಿ ಅಲ್ಲಿನ ದೃಶ್ಯವನ್ನು ತುಂಬಾ ಸಮಯ ಸವಿಯಲು ಹೆಚ್ಚಿನ ಕುತೂಹಲ ಮೂಡಿಬರಲಿಲ್ಲ. ಬಾಳೆಬರೆ ಘಾಟಿಯ ರಸ್ತೆಯುದ್ದಕ್ಕೂ ನಡೆದುಕೊಂಡು ವಾಪಸು ಹೊರಟೆ. ಘಾಟಿಯ ತಳದ ಹೊಸಂಗಡಿ ಊರಿನ ತನಕ ನಡೆದುಕೊಂಡು ಹೋಗುವುದು ಎಂಬುದು ನನ್ನ ಉದ್ದೇಶ. ( ಹತ್ತಿರ ನಿಂತರೆ, ಕುಂಚಕಲ್ ಅಬ್ಬಿ ಎಂಬ ಜಲಪಾತ ದೂರದಲ್ಲಿ ಕಾಣಿಸುತ್ತಿತ್ತು.) ಆಗ ಹೆಚ್ಚು ಕಮ್ಮಿ ನಿರ್ಜನ ರಸ್ತೆ, ಆಗಾಗ ಸಂಚರಿಸುವ ಒಂದೆರಡು ಬಸ್ಸುಗಳನ್ನು ಬಿಟ್ಟರೆ, ನಿಗೂಢ ಕಾಡು ಪ್ರದೇಶ ಅದಾಗಿತ್ತು. ಇನ್ನೂ ವಾರಾಹಿ ವಿದ್ಯುತ್ ಉತ್ಪಾದನಾ ಕೇಂದ್ರ ತನ್ನ ಕೆಲಸವನ್ನು ಆರಂಭಿಸಿರಲಿಲ್ಲ. ಜೀರುಂಡೆಗಳ ಜೀಕಾಟ, ಹಕ್ಕಿಗಳ ಉಳಿತ, ಗುಮ್ಮಾಡಲು ಹಕ್ಕಿಗಳ ಗೂಂ ಗೂಂ ಕೂಗುಗಳನ್ನು ಕೇಳುತ್ತಾ, ಆ ರಸ್ತೆಯ ಹಿಮ್ಮುರಿ ತಿರುವುಗಳನ್ನು ನಡೆಯುತ್ತಾ ಸಾಗುತ್ತಿದ್ದೆ. ಆರೆಂಟು ಮೈಲಿ ನಡುಗೆಯಲ್ಲಿ, ಒಂದು ಕೆಂಜಳಿಲು ಮರವೊಂದರಿಂದ ನೆಗೆದ ನೋಟವನ್ನು ಬಿಟ್ಟರೆ, ಬೇರಾವ ಕಾಡು ಪ್ರಾಣಿಯೂ ಕಾಣಸಿಗಲಿಲ್ಲ. ಅರ್ಧದಷ್ಟು ನಡೆದು ಬಂದಿದ್ದಾಗ, ಘಾಟಿ ರಸ್ತೆ ಏರುತ್ತಾ ನಿಧಾನವಾಗಿ ಬರುತ್ತಿದ್ದ ಒಂದು ಬಸ್ ಕಿಟಕಿಯೊಂದ, ಯಾರೋ ಉದ್ವೇಗದಿಂದ ಕೈ ಬೀಸುತ್ತಿದ್ದಾರೆ! ಯಾರು ಎಂದು ಗಮನಿಸಿದರೆ, ಓರಗೆಯಲ್ಲಿ ನನಗೆ ಭಾವನಾಗಿದ್ದ, ತಾರಿಕಟ್ಟೆ ರಾಜಣ್ಣ! "ಎಲ್ಲಿಗೆ ಹೋಗ್ತಾ ಇದೀಯಾ?" ಎಂದು ಕೈಯಲ್ಲಿ ಪ್ರಶ್ನಾರ್ಥಕ ಚಿಹ್ನೆಯನ್ನು ನಟಿಸುತ್ತಾ,ತಾರಿಕಟ್ಟೆ ರಾಜಣ್ಣ ಕೂಗಿ ಕೇಳಿದ. ಅವನನ್ನು ಆ ಬಸ್ಸಿನಲ್ಲಿ ಕಂಡ ಅಚ್ಚರಿಯಿಂದ ಹೊರಬಂದು, ಸೂಕ್ತ ಉತ್ತರವನ್ನು ಹೇಳುವಷ್ಟರಲ್ಲಿ, ಬಸ್ ಮುಂದಕ್ಕೆ ಚಲಿಸಿಯಾಗಿತ್ತು. ನಂತರ, ಹೊಸಂಗಡಿ ತಲುಪಿ, ಬಸ್ ಏರಿ ಮನೆ ತಲುಪಿದ ನನ್ನ ಈ ಏಕಾಂಗಿ ಚಾರಣಕ್ಕೆ ತಾರಿಕಟ್ಟೆ ರಾಜಣ್ಣನು ಸಾಕ್ಷಿಯಾಗಿದ್ದಂತೂ ಒಂದು ವಾಸ್ತವ. ಆಗ ಸವಳಂಗದಲ್ಲಿದ್ದ ತಾರಿಕಟ್ಟೆ ರಾಜಣ್ಣ,ನಂತರದ ದಿನಗಳಲ್ಲಿ ಊರಿಗೆ ಬಂದಾಗ, ಅಂದು ಘಾಟಿ ರಸ್ತೆಯಲ್ಲಿ ಒಬ್ಬನೇ ಚಾರಣ ಮಾಡುತ್ತಿದ್ದ ನನ್ನ ಹವ್ಯಾಸವನ್ನು ಕಂಡು, ನಕ್ಕದ್ದೂ ಉಂಟು.   


     ಮಗದೊಮ್ಮೆ, ಬಾಳೆಬರೆ ಘಾಟಿಯ ತಳದಲ್ಲಿರುವ ಮೆಟ್ಟುಕಲ್ ಅಣೆಯನ್ನು ಏರಲು ನಾವು ನಾಲ್ಕಾರು ಮಂದಿ ಬಂದು, ರಾತ್ರಿಯನ್ನು ಚಂಡಿಕಾವನದ ದೇವಸ್ಥಾನದ ಹಜಾರದಲ್ಲಿ ರಾತ್ರಿ ಕಳೆದಿದ್ದೆವು. ಹೊಸಂಗಡಿ ಹಳ್ಳಿಯ ಹತ್ತಿರವೇ ಇರುವ ಮೆಟ್ಟುಕಲ್ ಅಣೆ ಒಂದು ಏಕಾಂಗಿ ಗುಡ್ಡ; ಆ ಬೆಟ್ಟದ ತುಂಬಾ ದಟ್ಟವಾದ ಕಾಡು. ಆದರೆ, ಆ ದಿನ ಸ್ವಲ್ಪ ಮಳೆಯೂ ಬಂದು, ನಾವು ಬೇಗನೆ ಚಾರಣ ಮುಗಿಸಿ, ಬಾಳೆಬರೆ ಘಾಟಿಯನ್ನು ಬಸ್ ಮೂಲಕ ಏರಿ, ಚಂಡಿಕಾಂಬಾ ದೇವಳದಲ್ಲಿ ವಿಶ್ರಾಂತಿ ತೆಗೆದುಕೊಂಡೆವು. ಬಹಳ ವರ್ಷಗಳ ಹಿಂದೆ ಅಲ್ಲಿಗೆ ಬಂದು ದೇವಾಲಯ ಆರಂಭಿಸಿದ ಅಲ್ಲಿನ ಮಳೆಯಾಳಿ ಪೂಜಾರಿಯ ಅನುಭವಗಳನ್ನು ಕೇಳುತ್ತಾ, ಆ ರಾತ್ರಿಯನ್ನು ಬಾಳೆಬರೆಯ ಮಧ್ಯೆ ಕಳೆದ ನೆನಪುಗಳ ಮಧ್ಯೆ ಆ ರಾತ್ರಿ ಅಲ್ಲಿ ಸುರಿದ ಜಡಿಮಳೆಯ ಅನುಭವವೂ ಸೇರಿಹೋಗಿದೆ. ಆ ರಾತ್ರಿ ದೇವಾಲಯದಲ್ಲಿ ನಮಗೆ ದೊರೆತ ಊಟವು ಆ ದೇವಿಯ ಪ್ರಸಾದವೆಂದೇ ಹೇಳಬಹುದು; ರುಚಿಯೂ ಚೆನ್ನಾಗಿತ್ತು.


ಮರುದಿನ ಬೆಳಗ್ಗೆ, ಊರಿಗೆ ಹೋಗಿ ನೋಡಿದರೆ, ಬ್ಯಾಂಕ್ ಕೆಲಸಕ್ಕೆ ಸೇರಲು ನನಗೆ ಅಪಾಯಿಂಟ್ಮೆಂಟ್ ಆರ್ಡರ್ ಅಂಚೆ ಮೂಲಕ ಬಂದು, ಕಾದು ಕುಳಿತಿತ್ತು! (ಚಿತ್ರ ಕೃಪೆ : ತುಳು-ರಿಸರ್ಚ್ ಬ್ಲಾಗ್ ಸ್ಪಾಟ್.ಕಾಮ್)


 

Rating
No votes yet