ನೀರಿನಲ್ಲಿ ನಡೆಯುವ ರೊಬೋಟ್

ನೀರಿನಲ್ಲಿ ನಡೆಯುವ ರೊಬೋಟ್

ನೀರಿನಲ್ಲಿ ನಡೆಯುವ ರೊಬೋಟ್
ಹನ್ನೆರಡು ಪಾದಗಳಿರುವ ರೊಬೋಟ್ ನೀರಿನಲ್ಲಿ ನಡೆಯುವಂತೆ ಮಾಡಲು ಸಂಶೋಧಕರು ಸಫಲರಾಗಿದ್ದಾರೆ.ಇದು ಜಲಚರವೊಂದರ ನಡಿಗೆಯನ್ನು ಅನುಕರಿಸುವಂತೆ ಮಾಡಿ,ನೀರಿನ ಮೇಲ್ಮೈಯಲ್ಲಿ "ನಡೆಯುವಂತೆ" ಮಾಡಿರುವ ಸಂಶೋಧಕರು ರೊಬೋಟಿನ ತೂಕವನ್ನು ನಿಯಂತ್ರಿಸಲು ಸಫಲರಾಗಿಲ್ಲ.ಈ ರೊಬೋಟ್ ಮುನ್ನೂರತೊಂಭತ್ತು ಜಲಚರ ಜೀವಿಗಳ ಒಟ್ಟು ತೂಕದಷ್ಟಿದೆ.ಜಲಚರ ಜೀವಿಯ ಕಾಲುಗಳ ರೋಮಗಳು ಗಾಳಿಯ ಕುಶನ್‌ಗಳಂತೆ ವರ್ತಿಸಿ,ನೀರಿನಲಿ ತೇಲಲು ಅನುವು ಮಾಡಿಕೊಡುತ್ತವೆ ಎಂದು ತಿಳಿದುಕೊಂಡ ಸಮ್ಶೊಧಕರು,ಅದೇ ಮಾದರಿಯನ್ನು ಅನುಕರಿಸಲು,ಹನ್ನೆರಡು ಪಾದಗಳ ರೊಬೋಟ್ ರಚಿಸಬೇಕಾಯಿತು.ರೊಬೋಟಿನ ಮೋಟಾರನ್ನು ಹೊಟ್ಟೆಯ ಭಾಗದಲ್ಲಿರಿಸಿ,ಅದು ನೀರಿನ ಸಂಪರ್ಕಕ್ಕೆ ಬರದಂತೆ ಭದ್ರಪಡಿಸಿದ್ದಾರೆ.ಕಾಲುಗಳ ಪೈಕಿ  ಎರಡು,ದೇಹವನ್ನು ಎತ್ತಿ ಹಿಡಿಯಲು ಬಳಸಿದ್ದರೆ,ಉಳಿದವು ನೀರಿನ ಮೇಲೆ ಓಡಾಡಲು ಉಪಯೋಗಕ್ಕೆ ಬರುತ್ತವೆ.
---------------------------
ಅಲಿಬಾಬಾ:ಮೊಬೈಲ್ ಆಪರೇಟಿಂಗ್ ಸಿಸ್ಟಮ್


ಚೀನಾದ ಅಲಿಬಾಬಾ ಕಂಪೆನಿಯು ಗೂಗಲ್ ಮತ್ತು ಅಪಲ್ ಕಂಪೆನಿಗಳ ಮೊಬೈಲ್ ಅಪರೇಟಿಂಗ್ ವ್ಯವಸ್ಥೆ ತಂತ್ರಾಂಶಕ್ಕೆ ಸ್ಪರ್ಧೆ ಕೊಡಲು ಹೊಸ ತಂತ್ರಾಂಶವನ್ನು ಸಿದ್ಧ ಪಡಿಸಿದೆ.ಅಲಿಬಾಬಾ ಈ ತಂತ್ರಾಂಶದಲ್ಲಿ ಮಿಂಚಂಚೆ,ಶೋಧ ಮತ್ತು ಅಂತರ್ಜಾಲ ತಾಣಗಳ ಜತೆ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿದೆ.ಹಾಗೆಂದು ಅಲಿಬಾಬಾ ಕಂಪೆನಿಯು ತನ್ನದೇ ಆದ ಮೊಬೈಲ್ ಹ್ಯಾಂಡ್‌ಸೆಟ್ ತಯಾರಿಕೆ ಇಳಿದಿಲ್ಲ,ಸದ್ಯಕ್ಕೆ ಇಳಿಯುವ ಪ್ರಸ್ತಾಪವೂ ಅದರ ಮುಂದಿಲ್ಲ.ಉಳಿದ ಹ್ಯಾಂಡ್‍ಸೆಟ್ ತಯಾರಕರು ತನ್ನ ಆಪರೇಟಿಂಗ್ ವ್ಯವಸ್ಥೆಯನ್ನು ತಮ್ಮ ಸೆಟ್‌ನಲ್ಲಿ ಬಳಸಬಹುದೆಂಬ ವಿಶ್ವಾಸ ಅದರದು.ವಿಶ್ವದಲ್ಲೇ ಅತ್ಯಧಿಕ ಹ್ಯಾಂಡ್‌ಸೆಟ್ ಮಾರುಕಟ್ಟೆಯನ್ನು ಚೀನಾ ಹೊಂದಿದೆ.ಅಲಿಬಾಬಾ ಕಂಪೆನಿಯ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶ ಬಳಸಿದ ಮೊದಲ ಸ್ಮಾರ್ಟ್‌ಫೋನ್ ಕೆ-ಟಚ್ ಕೂಡಾ ಬಿಡುಗಡೆಯಾಗಿದೆ.ಚೀನಾದ ಕಂಪೆನಿಯಾದ ತಿಯಾನ್ಯು ಇದನ್ನು ತಯಾರಿಸಿದೆ.


---------------------------------------------------


ಹಗುರ:ಬೀಜಮಂತ್ರ


ನೋಟ್‌ಬುಕ್ ಅಂತಹ ಸಾಧನಗಳನ್ನು ಹಗುರವಾಗಿಸಲು ಕಂಪೆನಿಗಳು ಪ್ರಯತ್ನಿಸುವುದೀಗಿನ ಮಾದರಿಯಾಗಿದೆ.ಹಿಂದೆಲ್ಲಾ,ಸಾಧನಗಳಲ್ಲಿ ಸವಲತ್ತುಗಳು ಹೆಚ್ಚಿದ್ದಷ್ಟು ಒಳ್ಳೆಯದ್ದು ಎನ್ನುವ ಮನೋಭಾವ ಇತ್ತು-ಆದರೀಗ ಅದು ಬದಲಾಗಿದೆ.ಅತ್ತಿತ್ತ ಒಯ್ಯಲು ಸಾಧನ ಹಗುರವಾಗಿದ್ದಷ್ಟು ಒಳ್ಲೆಯದು ಎನ್ನುವುದು ಬಳಕೆದಾರರ ಹೊಸ ಮನೋಭಾವನೆಯಾಗಿದೆ.ಹಾಗಾಗಿ ತೆಳುವಾದ ನೋಟ್‌ಬುಕ್‌ಗಳು ಹೆಚ್ಚು ಜನಪ್ರಿಯವಾಗುತ್ತಿವೆ.ತೆಳುವಾಗಿಸಲು,ಡಿವಿಡಿ ಪ್ಲೇಯರ್ ಅಂತಹ ಭಾಗವನ್ನು ಬಿಟ್ಟು ಬಿಡುವುದೀಗ ಸಾಮಾನ್ಯ.ಹಾಗೆಯೇ ಫ್ಲಾಶ್ ಸ್ಮರಣಕೋಶಗಳ ಬಳಕೆ ಹೆಚ್ಚಿದೆ.ಹಾರ್ಡ್ ಡಿಸ್ಕ್‌ಗಳಿಗಿಂತ ಇವು ಹೆಚ್ಚು ದುಬಾರಿಯಾದರೂ,ಉತ್ತಮ ಕಾರ್ಯಕ್ಷಮತೆ,ವೇಗ ಮತ್ತು ಕಡಿಮೆ ಚಲಿಸುವ ಭಾಗಗಳನ್ನು ಹೊಂದಿದೆ.ಬೇಗನೆ ಕೆಡುವುದಿಲ್ಲ, ಎನ್ನುವುದಿವುಗಳ ಪ್ಲಸ್ ಪಾಯಿಂಟುಗಳು.ಹಗುರ ಸಾಧನಗಳನ್ನು ಪ್ಲಾಸ್ಟಿಕ್‍ನಿಂದ ಮಾಡಿದರೆ,ಹೆಚ್ಚು ಹಗುರವಾಗಿಸಬಹುದಾದರೂ,ಅವು ದೃಡವಾಗಿರವು.ಹಾಗಾಗಿ ಅಲ್ಯುಮೀನಿಯಂ ಬಳಕೆ ಹೆಚ್ಚು.ಲೋಹದ ಮೇಲ್ಮೈಯಿದ್ದರೆ,ಸಾಧನವನ್ನು ತಂಪಾಗಿಸುವುದು ಸುಲಭ.ಹಗುರ ಸಾಧನಗಳು ತೆಳುವಾಗಿ,ಅವನ್ನು ರಿಪೇರಿ ಮಾಡಲು ಹೆಚ್ಚು ಅವಕಾಶ ನೀಡವು.ಅವನ್ನು ಅಪ್‍ಗ್ರೇಡ್ ಮಾಡುವ ಅವಕಾಶವು ಕಡಿಮೆ.ಬಳಸಿ ಬಿಸಾಕುವ ಸದ್ಯದ ಜನರ ವೈಖರಿಗೆ ಈ ತೊಂದರೆಗಳು ಸಮಸ್ಯೆ ಅನಿಸುವುದಿಲ್ಲ.


-----------------------------------------------


ಗ್ಯಾಸ್ ಸಂಪರ್ಕ:ಅಂತರ್ಜಾಲ

ಅಕ್ರಮ ಎಲ್‌ಪಿಜಿ ಸಂಪರ್ಕ ಮತ್ತು ಪಡಿತರ ಚೀಟಿ ಬಗ್ಗೆ ಕರ್ನಾಟಕ ಸರಕಾರ ಕ್ರಮ ಕೈಗೊಳ್ಳಲು ಬಯಸಿದೆ.ಮೊದಲ ಹಂತದ ಪರಿಶೀಲನೆ ಬಳಿಕ ಲಕ್ಷಾಂತರ ಸಂಪರ್ಕಗಳನ್ನು ಮತ್ತು ಪಡಿತರ ಚೀಟಿಗಳನ್ನು ಅಮಾನತಿನಲ್ಲಿಡಲಾಗಿದೆ.ದಾಖಲೆಗಳು ತಾಳೆಯಾಗದಿರುವುದು.ಒದಗಿಸದಿರುವುದು ಈ ಕ್ರಮಕ್ಕೆ ಕಾರಣ.ಇಂತಹ ಪರಿಸ್ಥಿತಿಯಲ್ಲಿ ಹಲವು ನೈಜ ಬಳಕೆದಾರರಿಗೆ ಅನ್ಯಾಯವಾಗಿದೆ.ಜನರು ತಮ್ಮ ಅಹವಾಲುಗಳನ್ನು ಹೊತ್ತುಕೊಂಡು ಕಚೇರಿಗಳಿಗೆ ದೌಡಾಯಿಸುವುದು ತಪ್ಪಿಸಲು ಅಂತರ್ಜಾಲ ಹೇಗೆ ಸಹಕಾರಿ ಎನ್ನುವುದು ಜನಸಾಮಾನ್ಯರಿಗೆ ಮನವರಿಕೆಯಾಗಲು ಈ ಪ್ರಕರಣ ಒಂದು ಅವಕಾಶ ಒದಗಿಸಿದೆ.ದಾಖಲೆಗಳನ್ನು ಸ್ಕ್ಯಾನ್ ಮಾಡಿ,ಅಪ್ಲೋಡ್ ಮಾಡುವ ಅಂತರ್ಜಾಲ ಅಧಾರಿತ ವ್ಯವಸ್ಥೆಯು ,http://ahara.kar.nic.inನಲ್ಲಿ ಲಭ್ಯವಿದ್ದು,ಮನೆಯಿಂದಲೇ ದಾಖಲೆಗಳನ್ನು ಒದಗಿಸಲು ಸಾಧ್ಯ.ಅಂತರ್ಜಾಲ ಸಂಪರ್ಕ,ಬಳಕೆ ಬಗ್ಗೆ ಮಾಹಿತಿಯಿಲ್ಲದವರೂ,ಬ್ರೌಸಿಂಗ್ ಸೆಂಟರುಗಳ ಮುಖಾಂತರವೂ ದಾಖಲೆಗಳ ಸಲ್ಲಿಕೆ ಮಾಡಬಹುದು.ಇಂತಹ ವ್ಯವಸ್ಥೆ ಇಲ್ಲವಾಗಿದ್ದರೆ ಜನರ ಬವಣೆ ಇನ್ನಷ್ಟು ಹೆಚ್ಚುತ್ತಿತ್ತು-ಮಾತ್ರವಲ್ಲದೆ ಕಚೇರಿಗಳಲ್ಲಿ ಜನರು ಶೋಷಣೆಗೀಡಾಗುವುದು ಹೆಚ್ಚುತ್ತಿತ್ತು.


-----------------------------------------


ಗಿಗ್.ಯು;ಶರವೇಗದ ಜಾಲ

ಅಮೆರಿಕಾದಲ್ಲಿ ಇಪ್ಪತ್ತಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಸೇರಿ ಅತಿ ವೇಗದ ಕಂಪ್ಯೂಟರ್ ಜಾಲವನ್ನು ಅಣಿಗೊಳಿಸಲು ಯತ್ನಿಸುತ್ತಿವೆ.ಟೆಲಿಕಾಂ ಮತ್ತು ತಂತ್ರಜ್ಞಾನ ಕಂಪೆನಿಗಳ ಸಹಕಾರ ಪಡೆದು ಈ ಜಾಲವನ್ನು ಜನರಿಗೆ,ವಿದ್ಯಾರ್ಥಿಗಳಿಗೆ ಮತ್ತು ಕಂಪೆನಿಗಳಿಗೆ ನೀಡುವುದು ಈ ವಿವಿಗಳ ಬಯಕೆ.ನಗರಗಳಿಗಿಂದ ದೂರ ಇರುವ ಈ ಸಂಸ್ಥೆಗಳು ಇದರ ಮೂಲಕ ಹೆಚ್ಚು ಜನರನ್ನು ಮತ್ತು ಕಂಪೆನಿಗಳನ್ನು ತಮ್ಮ ಸುತ್ತಮುತ್ತಲಿನ ಪ್ರದೇಶಗಳಿಗೆ ವಲಸೆ ಬರುವಂತೆ ಮಾಡುವುದು ಸ್ಥಾಪನೆಯ ಹಿಂದಿನ ಮುಖ್ಯ ಉದ್ದೇಶ.ಒಂದು ಮಿನಿಟಿನಲ್ಲಿ ಚಲನಚಿತ್ರವೊಂದನ್ನು ಡೌನ್‌ಲೋಡ್ ಮಾಡುವಷ್ಟು ಈ ಜಾಲ  ವೇಗವಾಗಿರುತ್ತದೆ, ಎಂದರೆ ನೀವೇ ಯೋಚಿಸಿ.ಸದ್ಯ ಇರುವ ಜಾಲಗಳಿಗಿಂತ ನೂರಾರು ಪಟ್ಟು ವೇಗ ಈ ಜಾಲದ್ದು.ಅರಿಜೋನಾ,ಡ್ಯೂಕ್,ಮಿಚಿಗನ್,ವಾಷಿಂಗ್‌ಟನ್ ಮುಂತಾದ ಇಪ್ಪತ್ತೊಂಬತ್ತು ವಿವಿಗಳು ಯೋಜನೆಯಲ್ಲಿ ಭಾಗಿಯಾಗಿವೆ.ಯೋಜನೆಯ ಹಣಕಾಸು ನೆರವಿಗೆ ಸರಕಾರದತ್ತ ಮುಖ ಮಾಡದೆ ಖಾಸಗಿ ಮೂಲಗಳ ಸಹಕಾರವನ್ನೇ ಪಡೆದಿರುವುದು ಯೋಜನೆಯ ವೈಶಿಷ್ಟ್ಯ.ಅಂದಹಾಗೆ ಆಪಲ್ ಕಂಪೆನಿಯ ಹಣಕಾಸು ಸ್ಥಿತಿ ಅಮೆರಿಕಾ ಸರಕಾರಕ್ಕಿಂತ ಹೆಚ್ಚು ಪ್ರಬಲವಾಗಿದೆ ಎನ್ನುವುದು ತಾಜಾ ಸುದ್ದಿ.


--------------------------------------


ಸ್ಥಳ:ಮಾಹಿತಿ


ಜನರು ಇರುವ ಸ್ಥಳದ ಸುತ್ತಲಿನ ಮಾಹಿತಿ ಒದಗಿಸುವುದು ಈಗಿನ ಹೊಸ ಅಂತರ್ಜಾಲ ಸಾಮಾಜಿಕ ತಾಣಗಳ ಯಶಸ್ಸಿನ ಗುಟ್ಟಾಗಬಹುದು.ಪೋರ್‌ಸ್ಕ್ವೇರ್,ಗೊವಾಲ್ಲಾ ಇವು ಈ ಮಾದರಿಯ ಅಂತರ್ಜಾಲ ತಾಣಗಳು.ಇವುಗಳ ತಂತ್ರಾಂಶವನ್ನು ಸ್ಮಾರ್ಟ್‌ಫೋನಿನಲ್ಲಿ ಅನುಸ್ಥಾಪಿಸಿಕೊಂಡರೆ,ಸ್ನೆಹಿತರುಗಳು ಒಂದೇ ಪ್ರದೇಶಕ್ಕೆ ಬಂದಾಗ ಜತೆ ಸೇರುವುದು ಸುಲಭ.ಹಾಗೆಯೇ ಬಳಕೆದಾರರಿಗೆ ಅವರಿರುವ ಪ್ರದೇಶದಲ್ಲಿ ದೊರಕುವ ವಿವಿಧ ಸೇವೆ,ಸವಲತ್ತುಗಳ ಬಗ್ಗೆಯೆ ಹೆಚ್ಚು ಮಾಹಿತಿ ನೀಡುವುದು ಈ ತಾಣಗಳ ಹೆಗ್ಗಳಿಕೆ.ಕಲಾವಿದರು ಮತ್ತು ಅವರ ಅಭಿಮಾನಿಗಳಿಗೆ ಇಂತಹ ಸೇವೆ ಹೆಚ್ಚು ಉಪಯುಕ್ತ.
----------------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.
*ಕಂಪ್ಯೂಟರ್ ಚಿತ್ರಗಳು ಅಪೇಕ್ಷಿಸುವ ಸ್ಮರಣಶಕ್ತಿ ಗಾತ್ರ ತಗ್ಗಿಸಲು, ಯಾವ ತೆರನ ಚಿತ್ರಗಳು ಸೂಕ್ತ?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS42 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
**ಭಾರತದ ಐಟಿ ಕಂಪೆನಿಗಳ ಪೈಕಿ,ಮೂರನೆ ಸ್ಥಾನಕ್ಕೆ ಪೈಪೋಟಿ ಇರುವ ಕಂಪೆನಿಗಳು ವಿಪ್ರೋ ಮತ್ತು ಕಾಗ್ನಿಸೆಂಟ್.ಬಹುಮಾನ ಗೆದ್ದವರು ಗೀತಾ ಗೋಪಾಲ್,ಮೈಸೂರು.ಅಭಿನಂದನೆಗಳು.

Udayavani
*ಅಶೋಕ್‌ಕುಮಾರ್ ಎ