ಸ್ನೇಹಿತರ ದಿನಾಚರಣೆ ಹೀಗೂ ಆಗುತ್ತೆ - ಗುರುವೇ ಸಿದ್ದೇಸ
ನಿಮಗೆಲ್ಲಾ ಗೊತ್ತಿರುವ ಹಾಗೆ ಸಿದ್ದನಿಗೆ ಆತ್ಮೀಯರಾದವರು ಅಂದ್ರೆ, ಜೀವಕ್ಕೆ ಜೀವ ನೀಡುವ ಸ್ನೇಹಿತರೆಂದರೆ ನಾನು, ಸುಬ್ಬ, ನಿಂಗ, ಕಿಸ್ನ, ತಂಬೂರಿ ನಾಗ, ತಂಜಾವೂರಿ ಸೀನ ಇನ್ನು ಕೆಲವರು. ನಾವೆಲ್ಲಾ ಅಂಗನವಾಡಿಯಿಂದಲೂ ಫ್ರೆಂಡ್ಸ್, ಏನೇ ತಂದರೂ ಒಟ್ಟಿಗೆ ತಿನ್ನುತ್ತಾ ಇದ್ವಿ, ಕೆರೆತಾವ ಹೋಗೋ ಬೇಕಾದ್ರೂ ಒಂದೇ ಚೊಂಬು ಮಡಿಕ್ಕಂಡು ಹೋಯ್ತಾ ಇದ್ವಿ. ಅಂತ ಸ್ನೇಹ ನಮ್ಮದು.
ಕೆಲವೊಮ್ಮೆ ಹುಡುಗಿಯರ ವಿಸಯದಲ್ಲಿ ಜಗಳ ಆಯ್ತದೆ ಅದು ಬುಡಿ. ಆಮ್ಯಾಕೆ ರಾಜಿ ಸಂಧಾನ ಮಾಡ್ಕಂಡು ಮತ್ತೆ ಫ್ರೆಂಡ್ಸ್ ಆಯ್ತೀವಿ. ಆದ್ರೆ ಪಿಚ್ಚರ್್ಗೆ ಅಂಗೇ ಹೋಟೆಲ್್ಗೆ ಹೋಗೋಬೇಕಾದ್ರೆ ಮಾತ್ರ ಮಿಲಿಟರಿ ಸಿಸ್ಟಮ್, ಅಂದ್ರೇ ಅವರ ಕಾಸು ಅವರೇ ಕೊಡಬೇಕು. ಇದು ನಮ್ಮ ಸ್ನೇಹ. ನೋಡ್ರಲಾ ದಿನಾ ನಾವು ಎಲ್ಲಾ ಸೇರ್ಕಂಡು ಏನಾದರೂ ಮಾಡ್ತಾನೇ ಇರ್ತೀವಿ. ಇವತ್ತು ಸ್ನೇಹಿತರ ದಿನಾಚರಣೆ ಏನಾದರೂ ಒಂದು ವಿಶೇಷ ಕಾರ್ಯಕ್ರಮ ಮಾಡುವಾ ಎಲ್ಲಾ ಎಣ್ಣೆ ನೀರು ಹಾಕ್ಕೊಂಡು ಸಿದ್ದೇಸನ ಗುಡಿತಾವ ಬರ್ರಲಾ ಅಂದ ಸಿದ್ದ, ಸರಿ ಅಂತಾ ಎಲ್ಲಾ ಹೊಂಟ್ವಿ.
ಸೀನ ಹರಳೆಣ್ಣೆ ಹಚ್ಕಂಡು, ಮಗಾ ತಣ್ಣೀರಲ್ಲಿ ಸ್ನಾನ ಮಾಡಿಕಂಡು ಬಂದಿದ್ದ. ಹಂಗೇ ಸಿಗೇಪುಡಿ ಉಜ್ಜಿದ್ನಂತೆ. ಯಾಕ್ಲಾ, ಲೇ ನಮ್ಮನ್ಯಾಗೆ ಸೌದೆ ಖಾಲಿ ಆಗೈತೆ ಅಂದ. ಮಗ ಹತ್ತಿರ ಬಂದರೆ ಹಳಸೋದು ಫಲಾವಿ ವಾಸನೆ ಬರೋದು. ಏಥೂ. ಸುಬ್ಬ ಮಾತ್ರ ಬಹಳ ಫ್ರೆಸ್ ಆಗಿದ್ದ, ಹೆಂಗಲಾ ಸುಬ್ಬ. ಲೇ ಕೊಬ್ಬರಿ ಎಣ್ಣೆ ಹಚ್ಚಿ, 2ರೂಪಾಯಿ ಕೊಟ್ಟು ಹೆಡ್ ಅಂಡ್ ಸೋಲ್ಡರ್ ಸ್ಯಾಂಪು ಹಾಕ್ದೆ, ಆದ್ರೆ ಮೈ ಉಜ್ಜಕ್ಕೆ ಬಟ್ಟೆ ಸೋಪು ರಿನ್ ಹಾಕ್ದೆ ಕಲಾ ಅಂದ ಬಡ್ಡೆ ಐದ. ಏಥೂ. ಇನ್ನು ಒಂದು ತಿಂಗಳು ನಾವು ಸಾನ ಮಾಡಂಗಿಲ್ಲ ಅಂದ ತಂಜಾವೂರಿ ಸೀನ, ಯಾಕ್ಲಾ , ಇದರ ವಾಲಿಡಿಟಿ ಒಂದು ತಿಂಗಳು ಇತ್ತದೆ ಕಲಾ ಅಂದ , ಏಥೂ, ಸುಬ್ಬ ಹೋಗ್ಲಾ ಅತ್ಲಾಗೆ ಅಂತ ಉಗೆದ. ಸರಿ ಹಳ್ಳಿಯಲ್ಲಿ ಇವತ್ತು ಸ್ನೇಹಿತರ ದಿನಾಚರಣೆ ಅಂಗವಾಗಿ ಇಸೇಸ ಕಾರ್ಯಕ್ರಮ ಮಡಿಗಿದೀವಿ, ಹಂದಿ ತಿಂದಂಗೆ ತಿಂದು, ಸ್ಟೇಜ್ ಪಕ್ಕ ಮಕ್ಕೊಬೇಡಿ, ಹಂಗೆ ಮಕ್ಕೊಬೇಕು ಅನ್ನಿಸಿದ್ರೆ, ಮನೆಯಿಂದಲೇ ಬೆಸೀಟ್, ದಿಂಬು ತರಬೇಕು, ಕಾರ್ಯಕ್ರಮ ಎಂಜಾಯ್ ಮಾಡಿ ಅಂತಾ ಹಲಗೆ ಹೊಡಿಸಿದ್ವಿ. ಹಂಗೇ ಮೈಕ್ ರಂಗಂಗೆ ಹಳೆ ಬಾಕಿ ಜೊತೆ ಇದನ್ನೂ ಕೊಡ್ತೀವಿ. ಅಂತಾ ಹೇಳಿ ಮೈಕ್ ಸೆಟ್ ಹಾಕಕ್ಕೆ ಹೇಳಿದ್ವಿ. ನಿಮ್ಮನ್ನ ನಂಬಿಕೊಂಡರೆ ನನ್ನ ಹೆಂಡರು ಬೇರೆಯವರ ಜೊತೆ ಓಡೋಯ್ತಾಳೆ ಕನ್ರಲಾ ಅಂದ ರಂಗ. ಒಳ್ಳೇದೇ ಆಯ್ತು ಬುಡ್ಲಾ ಅಂದ ಸೀನ. ಮಗನೇ ಪಾತ್ರೆ ನೀನು ತೊಳಿತಿಯಾ ಅಂದ ರಂಗ. ಸರಿ ಎಲ್ಲಾರೂ ಸಿದ್ದನ ಮನೆಕಡೆ ಹೊಂಟ್ವಿ.
ಎಲ್ಲಾ ಎಣ್ಣೆ ನೀರು ಹಾಕ್ಕಂಡು ಸಿದ್ದನ ಮನೆ ತಾವ ಹೋದ್ವಿ. ಕಟ್ಟಿಗೆ ಒಡೆಯೋ ಕಿಸ್ನ ಮಾತ್ರ ಲೇಟಾಗಿ ಬಂದ. ಸಿದ್ದ ಸರಿ ನಡೀರಲಾ ನಾವು ಎಷ್ಟೊಂದು ಪ್ರೆಂಡ್ಸ್ ಅಂತಾ ಹಳ್ಳಿಯಲ್ಲಿ ಗೊತ್ತಾಗಬೇಕು ಅಂಗೇ, ಸಿದ್ದೇಸನ ಗುಡಿಗೆ ಹೋಗಿ ಬರುವಾ ಅಂದ. ಕಿಸ್ನ ಆ ಕಡೆ ಈ ಕಡೆ ಕಾಲು ಒಗೆಯೋನು. ಯಾಕಲಾ ಕಿಸ್ನ. ಅಣ್ಣಾ ನೀನೆ ಹೇಳಿದ್ಯಲ್ಲಾ ಅಣ್ಣಾ, ಎಣ್ಣೆಗೆ ನೀರು ಹಾಕ್ಕೊಂಡು ಬಾ ಅಂತಾ. ನಾನು ಯಾವಾಗಲೂ ಸುಕ್ಕಾ ಹೊಡೀತಿದ್ದೆ. ಅಣ್ಣಾ ನೀನು ಹೇಳಿದ್ದಕ್ಕೆ ನೀರು ಮಿಕ್ಸ್ ಮಾಡಿಕೊಂಡು, ಎರಡು ಕ್ವಾರ್ಟರ್ ಸೆಕೆಂಡ್ಸ್ ರಮ್ ಹೊಡೆದಿದ್ದೀನಿ ಅಂದಾ.ಏ ಥೂ. ಲೇ ಅಂಗಾರೆ ನೀನು ದೇವಸ್ಥಾನಕ್ಕೆ ಬರಬ್ಯಾಡಲೇ ಅಂದ ಸುಬ್ಬ. ಅಟ್ಟೊತ್ತಿಗೆ ನಮ್ಮ ಬೆಂಗಳೂರಿನ ಸ್ನೇಹಿತರಾದ ಕುಳ್ಳ ರಾಜ, ಹಲಸಿನಹಣ್ಣು ಮೂಗಿನ ನಾಗ ಬಂದ್ರು,. ನೀವೇ ಕನ್ರಲಾ ಇವತ್ತಿನ ಕಾರ್ಯಕ್ರಮದ ಅತಿಥಿ ಅಂದೆ. ಯಾವ ತಿಥಿಲಾ ಅಂದ್ರು, ಲೇ ತಿಥಿ ಅಲ್ಲ ಕಲಾ, ಆ ತಿಥಿ. ಹೂಂ ಸರಿ.
ಊರ್ನಾಗೆ ಏನು ನಮ್ಮದೇ ಮಾತು ನೋಡ್ರಲಾ ಏನ್ ಪ್ರೆಂಡ್ಸ್ ಇವರೂ ಅಂತಾ. ಮುಂದೆ ಹಲಗೆ ,ಹಿಂದೆ ನಾವು. ಫುಲ್ ಡಂಕಣಕ ಡ್ಯಾನ್ಸ್. ಹಳ್ಳಿಯಲ್ಲಿ ಯಾರೋ ಸಿವನ ಪಾದ ಸೇರಿದಾರೆ ಅಂತಾ ಜನ ಕಿಟಕಿಯಲ್ಲೇ ನೋಡೋರು, ನಾವು ಅಂತ ಗೊತ್ತಾದ ಮೇಲೆ, ಏಥೂ ಅನ್ನೋರು. ಲಕ್ಸ್ಮೀ ಪಟಾಕಿ ಹೊಡೆದಿದ್ದೇ ಹೊಡೆದಿದ್ದು. ಮಗಾ ಕಿಸ್ನ ಬೀಡಿಯಲ್ಲೇ ಹಚ್ಚೋನು, ಬಾಯಿ ಬುಟ್ಟರೆ ಬರೀ ಪಟಾಕಿ ಹೊಗೇನೇ ಬರೋದು. ಬೀಡಿ ಹೊಗೆನೋ, ಇಲ್ಲಾ ಬೀಡಿ ಹೊಗೇನೋ ಅನ್ನೋದು ಡೌಟು. ಒಂದೆರೆಡು ಪಟಾಕಿ ಸಿದ್ದ ಕಾಲು ಕೆಳಗೆ ಬಂದು ಢಮ್ ಅಂದ್ವು. ಸಿದ್ದನ ಜರಿ ಪಂಚೆ ಸ್ವಲ್ಪ ಬಸ್ ಏಜೆಂಟರ ಟವಲ್ ಆದಂಗೆ ಆಗಿತ್ತು. ಮಗಂದು ಜಡೇ ಮಾಯಿಸಂದ್ರದ ಪಟಾಪಟಿ ಚೆಡ್ಡಿ ಕಾಣೋದು. ಹಲಗೆ ಹೊಡೆತಕ್ಕೆ ಅಲ್ಲಿದ ಹೋರಿ ಗಾಬರಿಯಾಗಿ ಹಿಂದಿಂದ ಬಂದು ಸುಬ್ಬಂಗೆ ಗುದ್ದಿತ್ತು. ಮಗಾ ಸುಬ್ಬ ಚೆರಂಡಿಯಲ್ಲಿ ಕಿಸ್ಕಂಡಿದ್ದ. ರಂಗನ ಮಗಳು ನಾಗಮ್ಮ ಬಂದು ಎತ್ತಿತ್ತು. ಕಿಸ್ನ ಹಲ್ಲು ಕಡಿಯೋನು, ಯಾಕ್ಲಾ ಕಿಸ್ನ. ಲೇ ಅದು ನಂದಲಾ ಫಿಗರ್ . ಅಂತಾ ಕಿಸ್ನಂಗು ಮತ್ತೆ ಸುಬ್ಬಂಗೆ ಹೊಡೆದಾಟನೇ ಸುರುವಾತು. ಏನ್ರಲಾ ಪ್ರೆಂಡ್ಸ್ ದಿನಾ ಕನ್ರಲಾ ಸುಮ್ಕಿರಲಾ ಅಂದಾ ಸಿದ್ದ.
ಅಂಗಾರೆ ನಿನ್ನ ಮೂರನೇ ಫಿಗರ್ ಸುಬ್ಬಂಗೆ ಕೊಟ್ಟು ಮದುವೆ ಮಾಡ್ಲಾ ನೋಡುವಾ ಅಂದಾ ಕಿಸ್ನ. ಹಂಗೇ ಹೊಡೆದಾಟ ಸುರುವಾತು ನೋಡಿ ಬಿಳೀ ಪಂಚ್ಯಾಗೆ ಹೋದಾರು ನಾವು. ಸಗಣಿಯಲ್ಲಿ ಹೊರಳಾಡಿ ದೊಡ್ಡ ಹೊಡೆದಾಟನೇ ಆತು. ಎಲ್ಲರೂ ಮುಖನೂ ಸಗಣಿಯಾ. ಗುರುತು ಹಿಡಿಯಕ್ಕೆ ಕಷ್ಟ ಆಗಿತ್ತು. ಸರಿ ಪಂಚಾಯ್ತಿಯವರು ಕೋಮು ಗಲಭೆ ಅಂತಾ ದಂಡ ಹಾಕಿದ್ಮೇಲೆ ಎಲ್ಲಾ ಸುಮ್ಕಾದ್ವು. ಹಳ್ಳಿಯಲ್ಲಿ ಯಾರ್ಯಾರೋ ಸಾಯ್ತಾರೆ. ಈ ಮುಂಡೇ ಮಕ್ಕಳಿಗೆ ಏನಾಗಿದೆ ಅಂತಾ ಹೆಣ್ಣು ಮಕ್ಕಳು ಉಗಿಯೋರು. ಒಂದು ಹೆಣ್ಣಿಂದ ನಮ್ಮ ಸ್ನೇಹ ಹಾಳು ಆಗಬಾರದು ಕನ್ರಲಾ ಅಂದ ಸಿದ್ದ. ಆಮೇಲೆ ಚಾ ಅಂಗಡಿ ನಿಂಗನ ಅಂಗಡಿಯಲ್ಲಿ, ಮತ್ತೆ ಬೈ ಟು ಚಾ ಕುಡಿದು ಮತ್ತೆ ಫ್ರೆಂಡ್ಸ್ ಆದ್ವಿ. ಆದ್ರೂ ಸುಬ್ಬನ ಕಂಡರೆ ಕಿಸ್ನ ಹಲ್ಲು ಕಡಿಯೋನು. ಮಗಾ ಎಣ್ಣೆ ಬೇರೆ ಹೊಡೆದಿದ್ದ. ಹೇಳಿದ್ದನ್ನೇ ಒಂದು ಹತ್ತು ಕಿತಾ, ಹಳೇ ಗ್ರಾಮ ಪೋನ್ ತರಾ ಹೇಳ್ತಾನೇ ಇದ್ದ. ಸಿದ್ದ ಮಾತ್ರ ಪೆಕರನ ತರಾ ಆಗಿದ್ದ. ಏಥೂ ಸುಮ್ಕಿರ್ಲಾ ಅಂತಾ ಸಾನೇ ಉಗಿದ.
ಸರಿ ಸಂಜೆ ಕಾರ್ಯಕ್ರಮ ಸುರುವಾತು. ಕುಳ್ಳ ರಾಜ. ಹೆಸರಿಗೆ ತಕ್ಕಂಗೆ ಕುಳ್ಳಗೆ ಇದ್ದುದರಿಂದ ಖರ್ಚಿ ಮ್ಯಾಗೆ ಕುಂತ್ರು ಖುರ್ಚಿ ಕಾಲಿ ಇದ್ದಂಗೆ ಕಾಣ್ತಿತ್ತು. ಲೇ ಮಧ್ಯದ ಖುರ್ಚಿ ಕಾಲಿ ಬಿಟ್ಟಿದ್ದೀರಲ್ಲೂ ಅಂದ ಮೈಕ್ ಸೆಟ್ ರಂಗ. ಕೊನೆಗೆ ರಾಜನ್ನ ಟೇಬಲ್ ಮೇಲೆ ಹತ್ತಿಸಿ ತೋರಿಸಿದ ಮೇಲೆ ರಾಜ ಇದಾನೆ ಅಂತಾ ಗೊತ್ತಾಗಿದ್ದು. ಮಗಾ ರಾಜ, ಯಡೂರಪ್ಪನ ತರಾ ಎರಡು ಬೆರಳು ತೋರಿಸೋನು, ಕೆರೆತಾವ ಹೋಗಬೇಕೇನ್ಲಾ ಅನ್ನೋವು ನಮ್ಮೋವು. ಹಲಸಿನ ಹಣ್ಣು ಮೂಗಿನ ನಾಗನ್ನ ನೋಡಿ, ಇವನೇನ್ಲಾ ಮಾರಿ ಹಬ್ಬದಾಗೆ ಕೋಣ ಕಡಿಯೋನು ಇದ್ದಂಗೆ ಅವ್ನೆ ಅಂದ್ವು. ಮಚ್ಚು ಮಡಗವ್ನೆ ಬೇಕಾ ಅಂದ್ ಮೇಲೆ ಸುಮ್ಕಾದ್ವು. ಸರಿ ಎಂದಿನಂತೆ ನನ್ನ ಪ್ರಾರ್ಥನೆ. "ಸ್ನೇಹಿತರೇ ನಿಮಗೆ ಸ್ವಾಗತ. ಬಂದೀವಿ ಮುಂದೆ ಹೇಳಲಾ. ನಾವೆಲ್ಲಾ ಸಂದಾಗಿ ಇರಬೇಕು. ಸಂದಾಗಿ ಬಾಳಬೇಕು. ಸ್ಯಾನೆ ಸಗಣಿಯಾಗೆ ಹೊಡೆದಾಡಬೇಕು. ಆಮ್ಯಾಕೆ ಸಾನ ಮಾಡಬೇಕು. ನಾವೆಲ್ಲಾ ಒಗ್ಗಟ್ಟಾಗಿರಬೇಕು" ಲೇ ಏನ್ಲಾ ಇದು ಪ್ರಾರ್ಥನೆ ಅಂದಾ ಸಿದ್ದ. ನಿನ್ನ ಮಕ್ಕೆ ದೋಸೆ ಹಿಟ್ಟು ಹುಯ್ಯಾ ಅಂದ ಸಿದ್ದ.
ಅಟ್ಟೊತ್ತಿಗೆ ರಾಜ ಏನ್ರಲಾ ಸಗಣಿ ಮತ್ತು ಹಂದಿ ಸತ್ತು ವಾಸನೆ ಮಿಕ್ಸಾಗಿ ಬತ್ತಾ ಇದೆ ಅಂದ. ಅದಾ ನಮ್ಮ ಸಿದ್ದನ ಪೆಸೆಲ್ ಅಂದೆ. ಅದಾಯಿತು ಮತ್ತೆ ಸಗಣಿ ವಾಸನೆ. ಏನ್ಲಾ ಕಿಸ್ನ. ಏ ನಂದಲ್ಲಪ್ಪಾ ಅಂದ. ಮಗಾ ನಿಂಗನ ಸಲ್ಟಿಗೆ ಬೆಳಗ್ಗೆ ಹೊಡೆದಾಟದಾಗೆ ಸಗಣಿ ಬಿದ್ದಿತ್ತು ಮಗಾ ತೊಳಿದೇ ಅಂಗೇ ಬಂದು ಕುಂತಿದ್ದ. ಬೆರಣಿ ತಟ್ಟಿದಂಗೆ ಇತ್ತು. ಸರೀ ಈಗ ನಮ್ಮ ಆತ್ಮೀಯ ಸ್ನೇಹಿತರಾದ ಸುಬ್ಬ ಒಂದೆರೆಡು ಮಾತಾಡುತ್ತಾರೆ. ಮೈಕ್ ಕೊಯ್್್ ಅಂತು. ಯಾಕಲಾ ಮೈಕ್ ರಂಗ. ಅಣ್ಣಾ ನಿನ್ನ ಬಾಯ್ನಾಗೆ ಮೈಕೆ ಕವರ್ ಹೋಗೈತೆ. ಅದನ್ನು ಮೈಕಿಗೆ ಹಾಕು ಸವಂಡ್ ಬರಕ್ಕಿಲ್ಲ ಅಂದ. ಮಗಾ ಸವಂಡ್ ಜಾಸ್ತಿ ಬರಲಿ ಬಾಯಿನ ತಗೊಂಡು ಮೈಕಿಗೆ ಇಟ್ಟಿದ್ದ ಸುಬ್ಬ,
ಸರೀ ಈಗ ಕಟ್ಟಿಗೆ ಕಿಸ್ನ ನಾಲ್ಕು ಮಾತಾಡಬೇಕು. ನೋಡಿ ಮಹಾಜನಗಳೆ, ನಾನು ಕಟ್ಟಿಗೆ ಒಡೆದ ಮೇಲೆ ಎಲ್ಲರ ಮನೆಯಲ್ಲೂ ದುಡ್ಡು ಇಸ್ಕಂತೀನಿ ಆದ್ರೆ ಸಿದ್ದನ ಮನೆಯಲ್ಲಿ ಕಾಸು ಇಸ್ಕಳಕ್ಕಿಲ್ಲ. ನಮ್ಮ ಸ್ನೇಹಿತರು ಅಂದ. ಲೇ ಇವನಿಗೆ ಕುಡಿಯೋ ಕೊಟ್ಟಿರೋ ಕಾಸು ಲೆಕ್ಕ ಹಾಕಿದ್ರೆ. ಇನ್ನು ನಾಲ್ಕು ಗಾಡಿ ಕಟ್ಟಿಗೆ ಒಡಿಬೇಕು. ಮಗಾ ಮಾತಾಡೋದು ನೋಡಿದರೆ ಗ್ರಾ.ಪಂ ಟಿಕೆಟ್ ಕೇಳೋಹಂಗೆ ಐಯ್ತೆ ಇಳಸಲಾ ಅಂದ ಸಿದ್ದ. ಸರಿ ಈಗ ಹಳಸೋದು ಫಲಾವು ವಾಸ್ನೆ ಖ್ಯಾತಿಯ ಸಿದ್ದನವರ ಭಾಸಣ, ನೋಡ್ರಲಾ ನಾವೆಲ್ಲಾ ಸ್ನೇಹಿತರು. ನಮ್ಮೊಳಗೆ ಜಗಳ ಬರಬಾರದು ಕನ್ರಲಾ. ನಿನ್ನ ಮೂರನೇ ಫಿಗರ್್ನ್ನ ಅಂಗಾರೆ ಸುಬ್ಬಂಗೆ ಕೊಡಲಾ ಅಂದ ನಿಂಗ. ಹಂಗೇ ಸುರುವಾತು ನೋಡಿ ಹೊಡೆದಾಟ. ಮೈಕ್ ರಂಗ ಸ್ಟೇಜ್ ಕೆಳಗೆ ಅಡಿಕಂಡಿದ್ದ. ಬಂದಿದ್ದ ಕುಳ್ಳ ರಾಜ ಜಮಖಾನ ಹೊದ್ಕಂಡು ಮಲಗಿದ್ದ. ಹಲಸಿನ ಮೂಗು ನಾಗ ಮೈಕ್ ಹಾರನ್ ಕಟ್ಟಿರೋ ಬೊಂಬಿಗೆ ತಗಲಾಕ್ಕಂಡಿದ್ದ. ಸ್ಟೇಜ್ ಅನ್ನೋದು ರಣರಂಗವಾಗಿತ್ತು. ಜಗಳ ಮುಗಿದ ಮೇಲೆ ನೋತ್ತೀವಿ. ನಮ್ಮ ಡ್ರೆಸ್ ಚೆನ್ನಾಗೇ ಇತ್ತು. ಬಿಡಸಕ್ಕೆ ಬಂದೋರು ಮಾತ್ರ ಭಿಕ್ಸುಕರು ತರಾ ಆಗಿದ್ರು. ಸಿಟ್ಟಿಗೆ ಸಲ್ಟೆಲ್ಲಾ ಹರಿದಿದ್ದ ಸುಬ್ಬ.. ಸಿದ್ದನ ಚಪ್ಪಲಿ ಕಿಸ್ನ ಹಾಕ್ಕಂಡಿದ್ದ. ಯಾಕಲಾ. ಜಗಳದಾಗೆ ಚಪ್ಪಲಿ ಎಸ್ದ ಕನ್ಲಾ. ನನ್ನ ಸೈಜಿಗೆ ಸರಿ ಆಗೈತೆ ಅಂದಾ. ಏ ಥೂ. ಅವತ್ತು ಪೂಜೆಗೆ ಸಗಣಿ ಬೇಕು ಅಂದ್ರೂ ಇಲ್ಲಾ. ಎಲ್ಲಾ ಸ್ಟೇಜ್ನಾಗೆ ಇತ್ತು. ಮೈಕ್ ರಂಗ ಬಾಡಿಗೆ ಸೇರಿ 5ಸಾವಿರ ಬಿಲ್ ಮಾಡಿದ್ದ. ಯಾಕಲಾ. ಮಗನೇ ಸ್ಪೀಕರ್ ಬಾಕ್ಸ್ ನಾಗೆ ಡಬ್ಬಿ ಬಿಟ್ಟು ಇನ್ನೇನು ಇರ್ಲಿಲ್ಲ. ಇದೀಗ ಹಳ್ಯಾಗೆ ಪ್ರೆಂಡ್ಸ್ ಅಂದರೆ ಪ್ರೆಂಡ್ಸ್ ದಿನ ಹೊಡೆದಾಡಬೇಕು ಎನ್ನೋ ಹೊಸಾ ಗಾದೆ ಮಾತು ಹೊಂಟೈತೆ,.