ಕನ್ನಡ ನಾಡಿಗೆ ಅನರ್ಘ್ಯ ರತ್ನವ ಕೊಡುಗೆ ನೀಡಿದ ಈ ವಿದೇಶಿ ಕವಿ !!!!!!
ಮೊನ್ನೆ ಶ್ರೀ ರಂಗ ಪಟ್ಟಣಕ್ಕೆ ಹೋಗಿದ್ದೆ ಸ್ನೇಹಿತರೊಬ್ಬರು ಸಿಕ್ಕಿದರು ಹಾಗೆ ಮಾತಾಡುತ್ತ ಅಚ್ಚರಿ ಹುಟ್ಟಿಸುವ ವಿಚಾರ ತಿಳಿಸಿದರು. ಮನೆಗೆ ಬಂದು ಜಾಲಾಡಿದಾಗ ಒಂದಷ್ಟು ವಿಚಾರ ತಿಳಿಯಿತು. ಹೌದು ಕನ್ನಡ ನಾಡಿನ ಮಣ್ಣಿನ ಲಕ್ಷಣವೇ ಹಾಗೆ ಅನ್ಸುತ್ತೆ. ಯಾರೇ ವಿದೇಶಿಯರು ಬಂದರು ಕನ್ನಡ ತಾಯಿಯ ಮಡಿಲಿನ ಪ್ರೀತಿಗೆ ಮನಸೋತು ಇಲ್ಲಿಗೆ ಯಾವುದಾದರು ಮರೆಯದ ಕೊಡುಗೆ ನೀಡುತ್ತಾರೆ. ಅದು ಅಂದಿಗೂ ಇತ್ತು ಇಂದಿಗೂ ಇದೆ ಆದರೆ ಇಂತಹ ಮಹನೀಯರನ್ನು ಗುರುತಿಸಿ ನೆನೆಯುವಷ್ಟು ಸಮಯ ಕನ್ನಡ ತಾಯಿಯ ಮಕ್ಕಳಾದ ನಮಗೆ ಇಲ್ಲಾ .ಬನ್ನಿ ಇಲ್ಲೊಬ್ಬ ಮಹನೀಯರನ್ನು ಪರಿಚಯ ಮಾಡಿಕೊಳ್ಳೋಣ.
೧೯೨೪ನೆಯ ಜುಲೈ ೨ ರಂದು ಶ್ರೀ ರಂಗಪಟ್ಟಣ ದಲ್ಲಿನ ಅತಿಥಿ ಗೃಹಕ್ಕೆ ಒಬ್ಬ ವಿಧ್ಯಾರ್ಥಿ ತಾನು ಬರೆದ ಇಂಗ್ಲೀಶ್ ಕವಿತೆಗಳ ಹಸ್ತ ಪ್ರತಿ ಹಿಡಿದು ಅಲ್ಲೇ ತಂಗಿದ್ದ ಐರಿಷ್ ಕವಿ "ಜೇಮ್ಸ್ ಹೆನ್ರಿ ಕಸಿನ್ಸ್" ಅವರ ಭೇಟಿಗೆ ಬರುತ್ತಾನೆ. ಅವರನ್ನು ಭೇಟಿಯಾದ ವಿಧ್ಯಾರ್ಥಿ ತಾನು ಬರೆದ ಇಂಗ್ಲೀಶ್ ಕವಿತೆಗಳನ್ನು ಹೆಮ್ಮೆಯಿಂದ ತೋರಿಸಿ ಸಲಹೆ ಕೇಳುತ್ತಾನೆ. ಹಸ್ತ ಪ್ರತಿ ನೋಡಿದ ಐರಿಷ್ ಕವಿ "ಜೇಮ್ಸ್ ಹೆನ್ರಿ ಕಸಿನ್ಸ್" ಸ್ವದೇಶೀ ವಸ್ತ್ರ ತೊಟ್ಟು ವಿದೇಶಿ ಭಾಷೆಯಲ್ಲಿ ಕವಿತೆ ಬರೆದ ಆ ವಿಧ್ಯಾರ್ಥಿ ಯನ್ನು ನೋಡಿ What is all this stuff? [ಏನಿದು ಕಗ್ಗ ] ಅಂತಾ ಕೇಳಿ , ನಿನ್ನ ಭಾಷೆಯಲ್ಲಿ ಏನಾದ್ರೂ ಬರೆದಿದ್ದೀಯ ಅಂತಾ ಪ್ರಶ್ನಿಸುತ್ತಾರೆ. ತನ್ನ ಆಂಗ್ಲ ಕವಿತೆಗೆ ಮೆಚ್ಚುಗೆ ಸಿಗಬಹುದೆಂದು ಬಂದ ಆ ವಿಧ್ಯಾರ್ಥಿಯ ಆಸೆಗೆ ತಣ್ಣೀರು ಎರಚುತ್ತಾರೆ . ಈ ಗಾಗಲೇ ತನ್ನ ಅಂಗ್ಲ ಕವಿತೆ ಮೆಚ್ಚಿ ಬೆನ್ನು ತಟ್ಟಿದ ತನ್ನ ಗೆಳೆಯರು , ಹಾಗು ಗುರುಗಳಂತೆ ಹೊಗಳದೆ ನಿಷ್ಟೂರವಾಗಿ ತನ್ನ ಅನಿಸಿಕೆ ಹೇಳಿದ ಈ ಕವಿಯ ಬಗ್ಗೆ ಆ ವಿಧ್ಯಾರ್ಥಿಗೆ ಮನದೊಳಗೆ ಕೋಪ ಬಂದರೂ ತಡೆದು "ಕನ್ನಡದಲ್ಲಿ, ಇಂಗ್ಲಿಷಿನಲ್ಲಿ ಸಾಧ್ಯವಾಗುವಂತೆ, ಉದಾತ್ತ ಭಾವಗಳನ್ನು ಉನ್ನತ ಆಲೋಚನೆಗಳನ್ನು ಹೇಳಲು ಸಾಧ್ಯವಾಗುವುದಿಲ್ಲ. ಆ ಭಾಷೆಯ ಮಟ್ಟ ಬಹಳ ಕೀಳು. ಅಲ್ಲದೆ ಅದರಲ್ಲಿರುವ ಛಂದಸ್ಸು ಹಳೆಯ ಕಂದಾಚಾರದ ಛಂದಸ್ಸು, ವೃತ್ತ, ಕಂದ ಇತ್ಯಾದಿ. ಇಂಗ್ಲಿಷಿನಲ್ಲಿರುವ ಛಂದೋ ವೈವಿಧ್ಯ ಇಲ್ಲವೆ ಇಲ್ಲ.'' ಆದ ಕಾರಣ ತಾನು ಆಂಗ್ಲ ಭಾಷೆಯಲ್ಲಿ ಕವಿತೆ ಬರೆದುದಾಗಿ ತಿಳಿಸುತ್ತಾನೆ. ಈ ಮಾತನ್ನು ಕೇಳಿದ ಆ "ಜೇಮ್ಸ್ ಹೆನ್ರಿ ಕಸಿನ್ಸ್" ಆ ವಿಧ್ಯಾರ್ಥಿಗೆ ತಿಳಿಹೇಳುತ್ತಾರೆ . ಬನ್ನಿ ಆ ವಿಧ್ಯಾರ್ಥಿಯ ಅನುಭವದಲ್ಲೇ ತಿಳಿಯೋಣ."``ಈಗ ನನಗೆ ಅತ್ಯಂತ ಅವಿವೇಕವಾಗಿಯೂ ಹಾಸ್ಯಾಸ್ಪದವಾಗಿಯೂ ಧೂರ್ತವಾಗಿಯೂ ತೋರುವ ನನ್ನ ಆ ಉತ್ತರವನ್ನು ಆಲಿಸಿ ಪರಿಣತ ಮನಸ್ಸಿನವರೂ ಅನುಭವಶಾಲಿಯೂ ಆಗಿದ್ದ ಅವರು ಸೌಮ್ಯ ಸಾಂತ್ವನಕರ ಧ್ವನಿಯಿಂದ ಹೇಳಿದರು: ``ಹಾಗಲ್ಲ ಯಾವ ಭಾಷೆಯೂ ತನಗೆ ತಾನೆ ಅಸಮರ್ಥವಲ್ಲ. ಸಮರ್ಥನೊಬ್ಬನು ಬರುವತನಕ ಮಾತ್ರ ಅದು ಅಸಮರ್ಥವೆಂಬಂತೆ ತೋರಬಹುದು, ಅಸಮರ್ಥರಿಗೆ. ಸಮರ್ಥನು ಬಂದೊಡನೆ ಅವನ ಕೈಯಲ್ಲಿ ಅದು ಎಂತಹ ಅದ್ಭುತವನ್ನಾದರೂ ಸಾಧಿಸಬಲ್ಲದು. ಈಗ ನೋಡಿ. ಬಂಗಾಳಿ ಭಾಷೆ ನೀವು ನಿಮ್ಮ ಭಾಷೆಯನ್ನು ಕುರಿತು ಹೇಳಿದಂತೆಯೇ ಅದೂ ಇತ್ತು. ರವೀಂದ್ರನಾಥ ಠಾಗೂರರು ಬಂದರು. ಹೊಸ ಹೊಸ ರೀತಿಯಲ್ಲಿ ಬರೆದರು. ಹೊಸ ಛಂದಸ್ಸುಗಳನ್ನು ಕಂಡುಹಿಡಿದರು. ಅವರಿಗೆ ನೊಬೆಲ್ ಬಹುಮಾನವೂ ಬಂದಿತು! ಹಾಗೆಯೆ ನೀವು ಹೊಸ ಹೊಸ ಛಂದಸ್ಸುಗಳನ್ನು ಕಂಡುಹಿಡಿದು, ಹೊಸ ಹೊಸ ಪದಗಳನ್ನು ಪದಪ್ರಯೋಗಗಳನ್ನು ಸಾಧಿಸಿ, ಹೊಸ ರೀತಿಯ ಸಾಹಿತ್ಯ ಸೃಷ್ಟಿಮಾಡಬೇಕು. ನೀವು ಸೃಷ್ಟಿಸುವ ಸಾಹಿತ್ಯ ಶ್ರೇಷ್ಠವೆಂದು ತೋರಿ ಬಂದರೆ ನಾವು ಅದನ್ನು ಇಂಗ್ಲಿಷಿಗೆ ಭಾಷಾಂತರಿಸಿಕೊಳ್ಳುತ್ತೇವೆ, ರವೀಂದ್ರರ ಸಾಹಿತ್ಯ ಇಂಗ್ಲಿಷಿಗೆ ಭಾಷಾಂತರವಾಗಿರುವಂತೆ. ನೀವು ಇಂಗ್ಲಿಷಿನಲ್ಲಿ ಸೃಜನ ಸಾಹಿತ್ಯ ಸೃಷ್ಟಿ ಮಾಡಲಾರಿರಿ. ಅದು ನಿಮಗೆ ಪರಭಾಷೆ. ಹುಟ್ಟಿನೊಡನೆ ಬಂದ ಭಾಷೆಯಲ್ಲಿ ಮಾತ್ರ ಉತ್ತಮ ಸೃಜನ ಸಾಹಿತ್ಯ ಸೃಷ್ಟಿಯಾಗಬಲ್ಲದು. ಅದರಲ್ಲಿಯೂ ಕವಿತೆಯಲ್ಲಂತೂ ಉತ್ತಮ ಸೃಜನ ಸಾಹಿತ್ಯ ಯಾರಿಗೂ ಪರಭಾಷೆಯಲ್ಲಿ ಸಾಧ್ಯವಿಲ್ಲ. ಅದು ನಿಮಗೆ ಗೊತ್ತಾಗುವುದೂ ಇಲ್ಲ. ಅದನ್ನು ಓದುವ ನಮಗೆ ಗೊತ್ತಾಗುತ್ತದೆ, ಅದೆಂತಹ ನಗೆಪಾಟಲ ಸೃಷ್ಟಿ ಎಂಬುದು.''
ಇನ್ನೂ ಕೆಲವು ವಿವೇಕದ ಮಾತುಗಳನ್ನಾಡಿ ಹಸ್ತಪ್ರತಿಯನ್ನು ನನಗೆ ವಾಪಸ್ಸು ಕೊಟ್ಟು ಬೀಳ್ಕೊಂಡರು. ನಾನು ಖಿನ್ನವಾಗಿ ಅತೃಪ್ತಿ ಮತ್ತು ಕುಪಿತ ಚಿತ್ತಭಂಗಿಯಲ್ಲಿ ಹೊರಗೆ ಬಂದೆ.
ಹೊರಗಡೆ ಕುಳಿತಿದ್ದ ಮಿತ್ರರಿಗೆ ನನಗಾದ ತೇಜೋವಧೆ ಎಂದು ನಾನು ತಿಳಿದುಕೊಂಡಿದ್ದ ಸಂಗತಿಯನ್ನು ಹೊರಗೆಡಹದೆ ಮುಚ್ಚಿಕೊಂಡೆ. ಕಸಿನ್ಸ್ ಅವರು ಸ್ವದೇಶೀ ಚಳವಳಿಗಾರರಾಗಿರುವುದರಿಂದ ನನ್ನ ಸ್ವದೇಶೀ ಭಾಷೆಯಾದ ಕನ್ನಡದಲ್ಲಿಯೆ ನಾನು ಬರೆದರೆ ಉತ್ತಮ ಮತ್ತು ದೇಶಭಕ್ತಿದ್ಯೋತಕ ಎಂದು ಬೋಧಿಸಿದರೆಂದು ವ್ಯಂಗ್ಯವಾಗಿ ಟೀಕಿಸಿದೆ.
ಆದರೆ ಕಸಿನ್ಸ್ ಅವರ ಹಿತವಚನ ಮೇಲೆ ಮೇಲಕ್ಕೆ ತಿರಸ್ಕೃತವಾಗಿದ್ದರು ಸುದೈವದಿಂದ ನನ್ನ ಅಂತಃಪ್ರಜ್ಞೆ ಅದನ್ನು ಒಪ್ಪಿಕೊಂಡಿತ್ತೆಂದು ತೋರುತ್ತದೆ. ಕನ್ನಡ ವಾಗ್ದೇವಿಯ ಕೃಪೆಯೂ ಆ ಸುಸಂಧಿಯನ್ನು ಉಪಯೋಗಿಸಿಕೊಂಡು ತನ್ನ ಕಂದನನ್ನು ತನ್ನ ಹಾಲೆದೆಗೆ ಎಳೆದುಕೊಂಡಳು!'' ಅಂದಹಾಗೆ ಆ ವಿಧ್ಯಾರ್ಥಿ ಯಾರು ಗೊತ್ತ ಅವರೇ ನಮ್ಮ ಕನ್ನಡದ ರಸ ಋಷಿ, ರಾಷ್ಟ್ರಕವಿ ಕು.ವೆಂ.ಪು. ರವರು
ಈ ಘಟನೆ ಓದಿದನಂತರ ನಿಮಗೆ ಈಗಾಗಲೇ ಅರ್ಥ ವಾಗಿರ ಬಹುದು ಹೌದು ಆ ವಿದೇಶಿ ಕವಿಯಿಂದ ಕನ್ನಡ ತಾಯಿಗೆ ದೊರೆತ ಒಂದು ಅನರ್ಘ್ಯ ರತ್ನವೇ ನಮ್ಮ ಹೆಮ್ಮೆಯ ರಸ ಋಷಿ, ರಾಷ್ಟ್ರಕವಿ" ಕು.ವೆಂ.ಪು." ರವರನ್ನು ಕನ್ನಡಕ್ಕೆ ಕೊಡುಗೆಯಾಗಿ ನೀಡಿದ ಈ ಘಟನೆ ಎಂತಹ ಸ್ವಾರಸ್ಯಕರ ಘಟನೆಯಲ್ವಾ. ಕೊಡುಗೆ ನೀಡಿದ
ಐರಿಷ್ ಕವಿ "ಜೇಮ್ಸ್ ಹೆನ್ರಿ ಕಸಿನ್ಸ್" ಹಾಗು ಘಟನೆನಡೆದ ಶ್ರೀ ರಂಗ ಪಟ್ಟಣಕ್ಕೆ ಒಂದು ಸಲ ಜೈ ಹೋ ಎನ್ನೋಣ. ಕನ್ನಡಕ್ಕೆ ಸಂಬಂಧಿಸದ , ಕನ್ನಡಕ್ಕೆ ಯಾವದೇ ಕೊಡುಗೆ ನೀಡದ ಎಷ್ಟೋ ಜನರನ್ನು ನೆನೆಯುವ ನಾವು ಇಂತಹ ಮಹನೀಯರನ್ನು ವರ್ಷದಲ್ಲಿ ಒಮ್ಮೆಯಾದರೂ ನೆನೆಯುವುದು ನಮ್ಮ ಕರ್ತವ್ಯ ಅಲ್ಲವೇ. .!![ ಈ ಲೇಖನದಲ್ಲಿನ ಕೆಲ ವಿಚಾರಗಳನ್ನು ಹಾಗು ಚಿತ್ರವನ್ನು ಕು.ವೆಂ.ಪು. ರವರ ಅಧಿಕೃತ ವೆಬ್ ಸೈಟ ನಿಂದ ಕೃತಜ್ಞತೆಯಿಂದ ಪಡೆಯಲಾಗಿದೆ]