ನನ್ನ ಜೀವನಪ್ರವಾಹವು ಉತ್ತರಮುಖಿಯಾಯಿತು(೧೯೦೫-೦೯೦೬)

ನನ್ನ ಜೀವನಪ್ರವಾಹವು ಉತ್ತರಮುಖಿಯಾಯಿತು(೧೯೦೫-೦೯೦೬)

'ನನ್ನ' ಅಂದ್ರ ನಂದಲ್ರೀ!! , ಕರ್ಣಾಟಕ ಕುಲಪುರೋಹಿತ ಶ್ರೀ ಆಲೂರು ವೆಂಕಟರಾಯರದು. ಹಿಂದೆ ಅವರ ಆತ್ಮ ಚರಿತ್ರೆಯಿಂದಾಯ್ದ ಭಾಗಗಳನ್ನು ಬರೆಯಲಾರಂಭಿಸಿದ್ದೆ. (ಮೊದಲ ಭಾಗಕ್ಕೆ ಇಲ್ಲಿ ನೋಡಿ)

ಮನುಷ್ಯನ ಜೀವಿತದಲ್ಲಿ ಕೆಲವೊಂದು ಕಾಲಕ್ಕೆ ಇಡೀ ಜೀವಿತಪ್ರವಾಹವೇ ಒಂದು ದಿಶೆಯಿಂದ ಬೇರೊಂದು ದಿಶೆಗೆ ಬದಲಾಗುವ ಪ್ರಸಂಗ ಬರುತ್ತದೆ . ಅಂಥದೊಂದು ಕ್ರಾಂತಿಪ್ರಸಂಗವು ನನ್ನ ಆಯುಷ್ಯದಲ್ಲಿ ನನಗೆ ೧೯೦೫-೦೬ನೆಯ ಇಸ್ವಿಯಲ್ಲಿ ದೊರೆಯಿತು.

ಕೆಲವರಿಗೆ ಕೆಲವೊಂದು ಕ್ಷುದ್ರನಿಮಿತ್ತದಿಂದ ಹೀಗೆ ಉಪರತಿಯದುದನ್ನು ನಾವು ಅನೇಕ ಮಹಾವಿಭೂತಿಗಳ ಚರಿತ್ರೆಯಲ್ಲಿ ಓದುತ್ತೇವೆ. ಕೆಲವರಿಗೆ ಪೂರ್ವಜನ್ಮದ ಸಂಸ್ಕಾರದ ಮೂಲಕ ಯಾವ ನಿಮಿತ್ತವೂ ಇಲ್ಲದೆಯೂ ಒಮ್ಮೆಲೆ ಉಪರತಿಯುಂಟಾಗಬಹುದು. ಕೆಲವು ಅವತಾರಪುರುಷರು ಹುಟ್ಟಿದಾಗಲೇ ಪರಿಪಕ್ವ ಬುದ್ಧಿಯವರಾಗಿ ಹುಟ್ಟುವರು. ಇನ್ನು ಕೆಲವರ ಜೀವನದಲ್ಲಿ ಕೆಲವೊಂದು ಕ್ಷುದ್ರಕಾರಣವು ಅಲ್ಲಿಯವರೆಗೆ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಅವರ ಆತ್ಮ ವಿಕಾಸದ ಹೊಳೆಗೆ ಬಹಿರಂಗವಾದ ಸ್ವರೂಪವನ್ನು ಕೊಟ್ಟಿತು. ಆದರೆ ಇಂಥವರು ಅತಿದೊಡ್ದವಿಭೂತಿಗಳು , ಅದಕ್ಕೆ ಹೆಚ್ಚಿನ ಆತ್ಮ ಯೋಗ್ಯತೆ ಬೇಕು , ಹೆಚ್ಚಿನ ಪುಣ್ಯ ಬೇಕು, ಮತ್ತೆ ಕೆಲವರ ಜೀವನದಲ್ಲಿ ಆತ್ಮವಿಕಾಸವು ಸಾವಕಾಶವಾಗಿ ಆಗಿರುತ್ತದೆ.... ಇಂಥ ಮಹಾಪುರುಷರು ಕಾಲವು ಅನುಕೂಲವಿರಲಿ, ಇರದಿರಲಿ ಕಾಲವನ್ನು ತಮ್ಮ ಕ್ರಿಯಾಸತ್ವದ ಬಲದಿಂದ ಅನುಕೂಲವಾಗಿ ಮಾಡಿಕೊಂಡು ತಮ್ಮ ಧ್ಯೇಯವನ್ನು ಸಾಧಿಸಿಕೊಳ್ಳಲಿಕ್ಕೆ ಪ್ರಯತ್ನಿಸುತ್ತಾರೆ. ಅವರ ಅಚಲವಾದ ಧ್ಯೇಯನಿಷ್ಠೆಯು , ಅಖಂಡವಾದ ತಪಶ್ಚರ್ಯವು ಇಡೀ ದೇಶದ ಇತಿಹಾಸವನ್ನು ಹೊಸರೀತಿಯಲ್ಲಿ ಮಾರ್ಪಡಿಸುತ್ತದೆ . ಆದರೆ , ಈ ತರಹದ ಯಾವ ಅಲೌಕಿಕ ಉಪರತಿಯನ್ನೂ ಕ್ರಿಯಾಶಕ್ತಿಯನ್ನೂ ವಾಚಕರು ನನ್ನ ಜೀವನದಲ್ಲಿ ಕಾಣಲಾರಿರಿ.

೧೯೦೫-೦೯೦೬ ರ ಸುಮಾರಕ್ಕೆ ನಾನು ದೂರದಲ್ಲಿ ಒಂದು ಬೆಳಕನ್ನು ಕಂಡೆ . ಅದು ಬಲು ದೂರದಲ್ಲಿ ಇತ್ತು . ಅತಿ ಚಿಕ್ಕದಾಗಿ ಕಾಣುತ್ತಿತ್ತು . ಮಿಣಿಮಿಣಿಯಾಗಿ ಮಿಂಚುತ್ತಿತ್ತು. ಮಸುಕುಮಸುಕಾಗಿ ಹೊಳೆಯುತ್ತಿತ್ತು. ಕರ್ನಾಟಕದ ಕಗ್ಗತ್ತಲೆಯಲ್ಲಿ ಅದೇ ನನಗೆ ಕಣ್ಣದೀಪವಾಯಿತು. ಬೆಳಕಿನಲ್ಲಿ ಬೆಳಕಿಗೆ ಬೆಲೆ ಇಲ್ಲ ; ಕತ್ತಲೆಯಲ್ಲಿ ಕಿರುದೀಪಕ್ಕೂ ಹಿರಿ ಬೆಲೆ. ನಾನು ಆ ದೂರದ ಬೆಳಕಿನ ಕಡೆ ಎಡವುತ್ತ ಮುಗ್ಗರಿಸುತ್ತ ಸಾಗಿ , ನನ್ನ ಆತ್ಮಕ್ಕೆ ಆ ದೀಪವನ್ನು ಹೊತ್ತಿಸಿಕೊಂಡೆ . ಆಗ ಹೊತ್ತಿಸಿಕೊಂಡ ಅಗ್ನಿಯಿಂದ ಅಗ್ನಿಹೋತ್ರವನ್ನು ಇಂದಿನವರೆಗೆ ಇಟ್ಟಿರುವೆ.

ಮಹಾಮಹಾಪುರುಷರು ಪರಮಾತ್ಮನ ಆ ಗರ್ಭಗುಡಿಯಲ್ಲಿ ತಮ್ಮ ಉಜ್ವಲವಾದ ಆತ್ಮಪ್ರಕಾಶದ ವಿದ್ಯುದ್ದೀಪಗಳನ್ನು ಹಚ್ಚಿ ಪ್ರಮಾತ್ಮನನ್ನು ಕಣ್ತುಂಬಾ ನೋಡುತ್ತಿರುವರು. ಆ ಭಾಗ್ಯವು ನನಗೆ ಪ್ರಾಪ್ತವಾಗಿಲ್ಲ . ಈ ಜನ್ಮದಲ್ಲಿ ಪ್ರಾಪ್ತವಾಗುವ ಆಶೆಯಿಲ್ಲ. ಆದರೂ ನಾನು ನನ್ನ ಮಿಣಿಮಿಣಿ ಉರಿಯುತ್ತಿರುವ ಹೂಬತ್ತಿಯ ದೀಪದಲ್ಲಿ ನೋಡುತ್ತಿರುವ ಆ ಅಸ್ಪಷ್ಟವಾದ ಪರಮಾತ್ಮನ ಒಂದು ಚಿಕ್ಕ ಪ್ರತಿಮೆಯದ ಕರ್ನಾಟಕದೇವಿಯ ಮೂರುತಿಯೇ ನನಗೆ ಅಪಾರ ಆನಂದವನ್ನು ನೀಡುತ್ತಿದೆ. .... ಇರಲಿ , ಇಲ್ಲಿ ನನಗೆ ಹೇಳತಕ್ಕ ಮುಖ್ಯ ಮಾತೇನೆಂದರೆ - ನಾನು ಆಗ ನನ್ನ ಉಪಾಸನಾಮೂರ್ತಿಯಾಗಿಟ್ಟುಕೊಂಡ ವಿಭೂತಿರೂಪವು ಬಲು ಚಿಕ್ಕದು. ಕರ್ನಾಟಕದೇವಿಯೇ ಆ ಚಿಕ್ಕಮೂರ್ತಿಯು. ನನ್ನ ಆರಾಧ್ಯಮೂರ್ತಿಯು . ಕರ್ನಾಟಕದ ಸರ್ವಾಂಗೀಣ ಉನ್ನತಿಯೇ ನನ್ನ ಆಯುಷ್ಯದ ಧ್ಯೇಯವು . ಅದಕ್ಕಿಂತ ಹೆಚ್ಚಿನ ವಿಭೂತಿಯನ್ನು ನಾನು ಇಟ್ಟುಕೊಂಡಿಲ್ಲ; ಇಟ್ಟುಕೊಳ್ಳುವ ಯೋಗ್ಯತೆ ನನ್ನಲ್ಲಿ ಇಲ್ಲ . ಈ ನನ್ನ ಇಷ್ಟದೇವತೆಯ ಮುಖಾಂತರವಾಗಿಯೇ ನಾನು ಸಕಲಪುರುಷಾರ್ಥಗಳನ್ನು ಸಾಧಿಸಲೆತ್ನಿಸಿರುವೆನು. "ಕರ್ನಾಟಕದ ಸರ್ವಾಂಗೀಣ ಉನ್ನತಿ" ಎಂಬ ಮೂರು ಶಬ್ದಗಳಲ್ಲಿ ನನ್ನ ಜಗತ್ತೆಲ್ಲವೂ ಅಡಕವಾಗಿದೆ. ಈ ಮೂರು ಪಾದಗಳಿಂದ ನಾನು ತ್ರಿವಿಕ್ರಮನಂತೆ ಮೂರು ಲೋಕಗಳನ್ನು ಅಳೆಯಬಲ್ಲೆನು . ಅ ಮೂರು ಲೋಕಗಳು ಯಾವುವೆಂದರೆ - ಕರ್ನಾಟಕ , ಭರತಖಂಡ , ವಿಶ್ವ. ಕರ್ನಾಟಕದೇವಿಯ ಉಪಾಸನೆಯ ಬಲದಿಂದ ಈ ಮೂರೂ ಜಗತ್ತುಗಳ ಕಲ್ಯಾಣವನ್ನು ಕರ್ನಾಟಕರು ಸಾಧಿಸಬಲ್ಲರೆಂಬ ನಂಬಿಕೆ ನನಗಿದೆ. ಪರಮಾತ್ಮನ ಯಾವುದೇ ಪ್ರತಿಮೆ ಇರಲಿ , ಎಷ್ಟೇ ಚಿಕ್ಕದಿರಲಿ , ಅದರಲ್ಲಿ ಪರಮಾತ್ಮನ ವಿಶ್ವಶಕ್ತಿಯೆಲ್ಲವು ಅಡಗಿರುತ್ತದೆಂಬ ತತ್ವದ ಮರ್ಮವನ್ನು ಬಲ್ಲವರಿಗೆ ಮಾತ್ರ ಕರ್ನಾಟಕತ್ವವು ಸಂಕುಚಿತ ಕಲ್ಪನೆಯಗಿಲ್ಲವೆಂಬುದು ಗೊತ್ತಾಗುವದು. ಒಂದು ಹುಲ್ಲು ಕಡ್ಡಿಯಲ್ಲಿಯೂ ಪರಮಾತ್ಮನ ವಿಸ್ವಶಕ್ತಿಯನ್ನು ಸರ್ವಸಾನಿಧ್ಯವನ್ನು ಕಾಣಬಹುದು . ಅಂದಬಳಿಕ ಕರ್ನಾಟಕದೇವಿಯಲ್ಲಿ ನಾವು ಅವನ್ನು ಕಾಣಲಾರೆವೇ ?

..........ಮುಂದುವರೆಯುವದು .....ಕಾದುನೋಡಿ ... (ಉತ್ತರಮುಖಿ ಎಂದರೇನು ? ಮುಂದಿನ ಭಾಗದಲ್ಲಿ ನೋಡಬಹುದು.)

Rating
No votes yet