ಸಂಶೋಧನೆ:ಮುಕ್ತ,ಮುಕ್ತ

ಸಂಶೋಧನೆ:ಮುಕ್ತ,ಮುಕ್ತ

ಸಂಶೋಧನೆ:ಮುಕ್ತ,ಮುಕ್ತ
ಸಂಶೋಧನೆಗಳನ್ನು ಪ್ರಯೋಗಾಲಯದಲ್ಲಿ ಮಾಡುವಾಗ,ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ನೀಡುವ ಪರಿಪಾಠ ಇಲ್ಲ.ಸಂಶೋಧನೆಗಳ ಫಲಿತಾಂಶಗಳನ್ನು ಸಮಾವೇಶಗಳಲ್ಲಿ ಪ್ರಬಂಧ ಮಂಡಿಸುವ ಮೂಲಕ ಅಥವಾ ಜರ್ನಲುಗಳಲ್ಲಿ ಪ್ರಬಂಧವನ್ನು ಪ್ರಕಾಶಿಸುವ ಮೂಲಕವಷ್ಟೇ ಫಲಿತಾಂಶವನ್ನು ಬಹಿರಂಗ ಪಡಿಸಿ,ಸಂಶೋಧನೆಯ ಬಗ್ಗೆ ಸಂಶೋಧಕರ ಹಕ್ಕುಸ್ವಾಮ್ಯವನ್ನು ರಕ್ಷಿಸಿಕೊಳ್ಳಲಾಗುತ್ತದೆ.ಇದರಿಂದ ಕೆಲವೊಮ್ಮೆ ಸುಳ್ಳು ಸುಳ್ಳೇ ಫಲಿತಾಂಶಗಳನ್ನು ನೀಡಿದರೂ,ಅದನ್ನು ಸಿದ್ಧಪಡಿಸಲು ಸಾಧ್ಯವಾಗದೆ ಹೋಗುವುದಿದೆ.
ಬ್ಯಾಕ್ಟೀರಿಯಾವೊಂದರ ಡಿಎನ್‌ಎಯಲ್ಲಿರುವ ರಂಜಕದ ಅಣುವನ್ನು ಆರ್ಸೆನಿಕ್ ಅಂಶದಿಂದ ಬದಲಾಯಿಸಿದರೂ,ಆ ಬ್ಯಾಕ್ಟೀರಿಯಾ ಬದುಕುತ್ತದೆ ಎಂದು ತಮ್ಮ ಸಂಶೋಧನೆಗಳು ತೋರಿಸಿವೆ ಎಂದು ಸಂಶೋಧಕ ಸೈಮನ್ ಎಂಬಾತ ಪ್ರಕಟಿಸಿದ್ದರು.ಆತ ನಾಸಾದ ಪ್ರಾಯೋಜಿತ ಸಂಶೋಧಕ.ಆರ್ಸೆನಿಕ್ ಅಂತಹ ವಿಷವನ್ನು ಹೊಂದಿದ ಡಿಎನ್‌ಎ ಬದುಕುವುದರ ಬಗ್ಗೆ ಅನುಮಾನಗಳಿದ್ದರೂ,ಸ್ವಲ್ಪಕಾಲ ಆ ಸಂಶೋಧನೆ ವಿಜ್ಞಾನ ವಲಯಗಳಲ್ಲಿ ಚರ್ಚಿತವಾಯಿತು.ಈ ಪ್ರಯೋಗದ ಫಲಿತಾಂಶವನ್ನು ಖಚಿತ ಪಡಿಸಿಕೊಳ್ಳುವ ನಿಟ್ಟಿನಲ್ಲಿ ರೆಡ್‌ಫೀಲ್ಡ್ ಎಂಬಾಕೆ ಮುಕ್ತ ಪ್ರಯೋಗ ಆರಂಭಿಸಿದರು.ಇವರ ಪ್ರಯೋಗಗಳ ಬಗ್ಗೆ,ಅವನ್ನು ನಡೆಸುವ ರೀತಿಯ ಬಗ್ಗೆ ಮತ್ತು ಫಲಿತಾಂಶಗಳ ಬಗ್ಗೆ ಅಂತರ್ಜಾಲ ಮತ್ತಾಕೆಯ ಬ್ಲಾಗಿನಲ್ಲಿ ಸಂಪೂರ್ಣ ವಿವರಗಳು ನಿಯಮಿತವಾಗಿ ಲಭ್ಯವಾಗುತ್ತಿತ್ತು.ಅಂತಿಮವಾಗಿ ಸೈಮನ್‌ನ ಸಂಶೊಧನೆಯ ಪೊಳ್ಳುತನ ಬಯಲಾಯಿತೆನ್ನಿ.ಈ ರೀತಿ  ಮುಕ್ತವಾಗಿ ಸಂಶೋಧನೆಗಳನ್ನು ಕೈಗೊಳ್ಳುವಾಗ,ಇತರ ಸಂಶೋಧಕರು ಇದರ ದುರ್ಬಳಕೆ ಮಾಡುವ ಅಪಾಯ ಇದೆ.ಧನಾತ್ಮಕವಾಗಿ ನೋಡಿದರೆ,ಸಂಶೋಧಕ ದಾರಿ ತಪ್ಪಿದಾಗ,ಆತನನ್ನು ಎಚ್ಚರಿಸುವಂತಹ ಸಹಾಯ ಸಿಗಲು ಸಾಧ್ಯವಿದೆ.ಪ್ರಯೋಗ ಫಲಿತಾಂಶವನ್ನು ಅನುಕೂಲಕ್ಕೆ ತಕ್ಕಂತೆ ಬದಲಾಯಿಸಲಾಗದು ಎನ್ನುವುದು ಇದರ ಬಹುದೊಡ್ಡ ಪ್ರಯೋಜನವಾಗಿದೆ.
-------------------------------------------
ಆಪಲ್:ವಿಶ್ವದ ನಂಬರ್ ಒನ್
ಮಾರುಕಟ್ಟೆಯಲ್ಲಿ ಶೇರಿನ ಮೌಲ್ಯದ ಆಧಾರದಲ್ಲಿ ವಿಶ್ವದ ಅತಿ ದೊಡ್ಡ ಕಂಪೆನಿಯಾಗಿ  ಆಪಲ್ ಕಂಪೆನಿಯು ಹೊರಹೊಮ್ಮಿದೆ.ಇದನ್ನು ಸ್ಥಾಪಿಸಿದ ಸ್ಟೀವ್ ಜಾಬ್ ಮತ್ತಿತ್ತರರು ಸಾಲದ ಹಣದಿಂದ ಕಂಪೆನಿ ಆರಂಭಿಸಿದ್ದರು.ಈಗದರ ಶೇರಿನ ಮಾರುಕಟ್ಟೆ ಮೌಲ್ಯ ಮುನ್ನೂರಮೂವತ್ತೇಳು ಬಿಲಿಯನ್.ಇದು ಎಕ್ಸಾನ್ ಕಂಪೆನಿಯ ಶೇರಿನ ಮೌಲ್ಯಕ್ಕಿಂತ ಹೆಚ್ಚಾಗಿತ್ತು.ಐಪಾಡ್,ಐಫೋನ್ ಮತ್ತೀಗ ಐಟ್ಯಾಬ್ ಮೂಲಕ ಜನಮನ್ನಣೆಯ ಸಾಧನಗಳನ್ನು ಮಾರುಕಟ್ಟೆಗಿಳಿಸಿ,ಕಂಪೆನಿ ಈ ಕರಾಮತ್ತು ಮಾಡಿದೆ.ಐಟ್ಯೂನ್ ಎನ್ನುವ ಆನ್‌ಲೈನ್ ತಾಣದ ಮೂಲಕ ಸಂಗೀತ ಮುದ್ರಿಕೆಗಳನ್ನು ಮಾರುವ ಆಪಲ್, ಐಫೋನ್‌ಗೆ ತಂತ್ರಾಂಶಗಳನ್ನೂ ಮಾರುಕಟ್ಟೆಗೆ ಬಿಟ್ಟು ಭರ್ಜರಿ ಲಾಭಗಿಟ್ಟಿಸುತ್ತಿದೆ.ಸುಮಾರು ಐದುಲಕ್ಶ ಐಫೋನ್ ತಂತ್ರಾಂಶಗಳೀಗ ಲಭ್ಯವಿವೆ.ಹದಿನೈದು ಬಿಲಿಯನ್ ಬಳಕೆದಾರರು ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ, ಎಂದರೆ ಈ ಮಾರುಕಟ್ಟೆಯ ವ್ಯಾಪ್ತಿಯ ಅರಿವು ಸುಲಭದಲ್ಲಿ ಆಗಬಹುದು.
---------------------------------------------
ತ್ರೀಡಿ ತೊರಿಸುವ ಲ್ಯಾಪ್‌ಟಾಪ್
ಟೊಶಿಬಾ ಕಂಪೆನಿಯು ಮೂರು ಆಯಾಮಗಳಲ್ಲಿ ಚಿತ್ರ ತೋರಿಸುವ ಲ್ಯಾಪ್‌ಟಾಪ್‌ನ್ನು ಬಿಡುಗಡೆ ಮಾಡಿದೆ.ವಿಶೇಷವೆಂದರೆ,ಇದರಲ್ಲಿ ಕನ್ನಡಕದ ಬಳಕೆ ಮಾಡದೆ,ತ್ರೀಡಿ ಚಿತ್ರ ನೋಡಲು ಬರುತ್ತದೆ.ತುಸು ವಿಭಿನ್ನ ಚಿತ್ರಗಳನ್ನು ಒಂದರ ಮೇಲೆ ಇನ್ನೊಂದು ಚಿತ್ರ ತುಸು ಸರಿದು ಕಾಣುವಂತೆ ಮೂಡಿಸುವ ಮೂಲಕ ತ್ರೀಡಿ ಕಾಣಿಸುವಂತೆ ಮಾಡಲಾಗುತ್ತದೆ.ವೆಬ್‍ಕ್ಯಾಮ್ ‍ಮೂಲಕ ವೀಕ್ಷಕರ ಸ್ಥಾನವನ್ನು ಗಮನಿಸಿ,ಚಿತ್ರದಲ್ಲಿ ಅಗತ್ಯ ಬದಲಾವಣೆಗಳಾಗುವುದರಿಂದ ತ್ರೀಡಿ ವೀಕ್ಷಣೆಯು ಸತತವಾಗಿ ಸಾಧ್ಯವಾಗುತ್ತದೆ.ಬಹಳಷ್ಟು ಜನ ಒಟ್ಟಿಗೆ ಕುಳಿತು ನೋಡುವಾಗ, ಮೂರು ಆಯಾಮದ ಚಿತ್ರ ವೀಕ್ಷಣೆ ಸಾಧ್ಯವಾಗದು.ಇಂತಹ ಲ್ಯಾಪ್‌ಟಾಪ್‌ಗಳ ಸ್ಪರ್ಧೆ ಎದುರಿಸಲೋ ಎನ್ನುವಂತೆ,ಟಿವಿ ತಯಾರಕರು ಮೂರು ಆಯಾಮಗಳ ಟಿವಿ ವೀಕ್ಷಣೆಗೆ ಬಳಸುವ ಕನ್ನಡಕಗಳನ್ನು,ಯಾವುದೇ ಟಿವಿ ಜತೆ ಬಳಸಲಾಗುವಂತೆ ಮಾಡುವ ಒಪ್ಪಂದಕ್ಕೆ ಬಂದಿದ್ದಾರೆ.ಆದರೆ ಸಮೀಕ್ಷೆಗಳ ಪ್ರಕಾರ,ತ್ರೀಡಿ ಟಿವಿ ಖರೀದಿಗೆ ಜನರು ಹೇಳುವಂತಹ ಉತ್ಸಾಹವನ್ನೇನೂ ಹೊಂದಿಲ್ಲ.
-------------------------------------------
ಆಂಡ್ರಾಯಿಡ್:ದಾಳಿಗೆ ದಾರಿ
ಆಂಡ್ರಾಯಿಡ್ ಫೋನುಗಳಿಗೆ ತಂತ್ರಾಂಶಗಳು ಹೆಚ್ಚಿನವು ಮುಕ್ತ ತಂತ್ರಾಂಶಗಳು.ಇವುಗಳನ್ನು ದಾಳಿಕೋರರು ಬಳಸಿಕೊಂಡು.ಇವುಗಳ ಮೂಲಕ ಫೋನುಗಳ ಸ್ಮರಣಕೋಶದಲ್ಲಿರುವ ಮಾಹಿತಿ ಕದಿಯುವುದು,ಅಕ್ರಮ ಕರೆಗಳನ್ನು ಮಾಡುವುದು ಮುಂತಾದ ಅಕ್ರಮಗಳಲ್ಲಿ ತೊಡಗುತ್ತಾರೆ.ಮೊದಲು ಸಾಚಾ ತಂತ್ರಾಂಶ ನೀಡಿ,ಅವನ್ನು ಕಾಲಕಾಲಕ್ಕೆ ನವೀಕರಿಸುವ ವೇಳೆ ಇಂತಹ ಕೆಟ್ಟ ಚಟುವಟಿಕೆಗಳಿಗೆ ಅನುವು ಮಾಡುವ ತಂತ್ರಾಂಶಗಳನ್ನು ಸೇರಿಸುವುದೂ ಕಂಡು ಬಂದಿದೆ.ಆಂಡ್ರಾಯಿದ್ ಫೋನುಗಳ ಜನಪ್ರಿಯತೆಯ ಕಾರಣ ದಾಳಿಕೋರರು,ಅವನ್ನು ಹೆಚ್ಚು ಹೆಚ್ಚು ಗುರಿಯಾಗಿರಿಸಿ,ಹೆಚ್ಚು ಜನರನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ.ಇದೇ ರೀತಿ ವಿಂಡೋಸ್ ಆಪರೇಟಿಂಗ್ ವ್ಯವಸ್ಥೆಯ ಕಂಪ್ಯೂಟರುಗಳಿಗೆ ಜನಪ್ರಿಯತೆಯೇ ಕುತ್ತಾಯಿತು.
--------------------------------
ಆರ್ಥಿಕ ದುಸ್ಥಿತಿ:ಸಂಶೋಧನೆಗೆ ಕತ್ತರಿ
ಆರ್ಥಿಕ ಹಿನ್ನಡೆಯ ಕಾರಣ ಸರಕಾರಗಳು ಮತ್ತು ಕಂಪೆನಿಗಳು ತಮ್ಮ ಖರ್ಚನ್ನು ಮಿತಗೊಳಿಸಲು ಕ್ರಮ ಕೈಗೊಳ್ಳುತ್ತಿವೆ.ಸಂಶೋಧನಾ ಚಟುವಟಿಕೆಗಳಿಗೆ ಮೀಸಲಿರಿಸಿದ ಹಣದಲ್ಲಿ ಕಡಿತ ಮಾಡುವುದು ಸುಲಭ ಕ್ರಮ.ಸಂಶೋಧನೆಗಳು ದುಬಾರಿ ಮತ್ತು ಫಲಿತಾಂಶಗಳ ಬಗ್ಗೆ ಖಚಿತವಾಗಿ ಹೇಳಲು ಬರುವುದಿಲ್ಲ.ವರ್ಷಗಟ್ಟಲೆ ಕೆಲಸ ಮಾಡಿ,ಹಣ ಖರ್ಚು ಮಾಡಿ,ಕೊನೆಗೆ ನಿರೀಕ್ಷಿತ ಫಲಿತಾಂಶ ಬಾರದಿದ್ದರೆ ಹಾಕಿದ ಹಣವೆಲ್ಲಾ ನಷ್ಟ.ಹೀಗಾಗಿ ಮಿತವ್ಯಯ ಕ್ರಮವಾಗಿ ಸಂಶೋಧನೆಗಳನ್ನು ನಿಲ್ಲಿಸುವುದು ಸಾಮಾನ್ಯ.ಒಡನೆಯೇ ಸಂಶೋಧನೆಗಳು ನಿಲ್ಲದಿದ್ದರೂ,ಮುಂದಿನ ವರ್ಷಗಳಲ್ಲಿ,ಅದರಲ್ಲೂ ಎರಡುಸಾವಿರದ ಹದಿನಾಲ್ಕರ ನಂತರ ಸಂಶೋಧನಾ ಬಜೆಟ್ ನಿಜಕ್ಕೂ ಪಾತಾಳಕ್ಕೆ ಕುಸಿಯಬಹುದು ಎನ್ನುವ ಮುನ್ಸೂಚನೆ ಇದೆ.ನಾಸಾದಂತಹ ಸಂಸ್ಥೆಗಳೂ ಇದರಿಂದ ತುಂಬಾ ಹಿನ್ನಡೆ ಅನುಭವಿಸಲಿವೆ.
--------------------------------
ಟ್ವಿಟರ್:ಚಿತ್ರ ಹಾಕಲೂ ಸೌಕರ್ಯ
ಇದುವರೆಗೆ ಟ್ವಿಟರ್ ಸಂದೇಶಗಳ ಜತೆ ಚಿತ್ರ ಹಾಕಲು ಟ್ವಿಕ್‌ಪಿಕ್,ವೈಫ್ರಾಗ್ ಎಂಬ ಇತರ ತಾಣಗಳ ಸೇವೆ ಬಳಸಬೇಕಿತ್ತು.ಆದರೀಗ ಟ್ವಿಟರ್ ಸ್ವಂತವಾಗಿ ಈ ಸೇವೆ ನೀಡಲಾರಂಭಿಸಿದೆ.ಹಾಗಾಗಿ ಇತರ ತಾಣಗಳ ಸೇವೆ ಬಳಸುವುದು ಅನಗತ್ಯ.ಟ್ವಿಟರಿನ ಸಂದೇಶ ಪೆಟ್ಟಿಗೆಯ ಕೆಳಗೆ ಕ್ಯಾಮರಾ ಚಿತ್ರವನ್ನು ಕ್ಲಿಕ್ಕಿಸುವ ಮೂಲಕ, ಈ ಸೇವೆ ಪಡೆಯಬಹುದು.ಟ್ವಿಟರಿನ ಈ ವೈಖರಿ,ಚಿತ್ರ ಅಪ್ಲೋಡ್ ಮಾಡಲು ಬಳಸುವ ತಾಣಗಳ ಸೇವೆ ಪಡೆಯುವವರ ಸಂಖ್ಯೆಯ ಮೇಲೆ ಪರಿಣಾಮ ಬೀರಬಹುದು.
-----------------------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.
*ಗ್ಲಾಸ್‌ಡೋರ್ ತಾಣ ಕೊಡುವ ಸೇವೆ ಏನು?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS44 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*ಪ್ರಯೋಗಾರ್ಥ ಬಳಕೆಯಲ್ಲಿರುವ ಹೊಸ ವೋಟಿಂಗ್ ಮೆಶೀನ್‌ಗಳಲ್ಲಿ ಆಗಿರುವ ಬದಲಾವಣೆಯೆಂದರೆ,ಮತದಾರನಿಗೆ ಅತ ಚಲಾಯಿಸಿದ ಮತ ಯಾರಿಗೆ ಹೋಗಿದೆ ಎನ್ನುವುದರ ಮುದ್ರಿತ ಚೀಟಿ ಸಿಗುತ್ತದೆ.ಬಹುಮಾನ ಗೆದ್ದವರು ಸ್ಟೀವನ್ ಸಿಕ್ವೇರಾ,ಬಂಟ್ವಾಳ.ಅಭಿನಂದನೆಗಳು.
udayavani
*ಅಶೋಕ್‌ಕುಮಾರ್ ಎ