ಧರೆಗಿಳಿದ ದೈವ ಗುರುರಾಘವೇಂದ್ರರು
ಒಂದೊಂದು ಬಾರಿ ಶಾಪವೂ ವರವಾಗುತ್ತದೆ ಎಂಬುವದಕ್ಕೆ ನಮ್ಮ ಇತಿಹಾಸದಲ್ಲಿ ಅನೇಕ ಉದಾಹರಣೆಗಳು ಕಂಡುಬರುತ್ತವೆ. ಅದರಲ್ಲಿ ಶ್ರೀ ರಾಘವೇಂದ್ರತೀರ್ಥರ ಜೀವನವೂ ಒಂದು. ಇವರು ಮೊದಲಿಗೆ ಶಂಕುಕರ್ಣನೆಂಬ ಕರ್ಮಜ ದೇವತೆ ಬ್ರಹ್ಮದೇವರಿಗೆ ಪೂಜೆಗೆ ಬೇಕಾದ ಪುಷ್ಪಗಳನ್ನು ತರುವ ಜವಾಬ್ದಾರಿಯು ಲೋಪವಾದಾಗ ಬ್ರಹ್ಮದೇವರಿಂದ ಶಾಪಗ್ರಸ್ಥರಾದರು, ದೈತ್ಯ ಯೋನಿಯಲ್ಲಿ ಹುಟ್ಟಿದನು. ಹಿರಣ್ಯಕಶ್ಯಪುವಿನ ಪುತ್ರ ಪ್ರಲ್ಹಾದನಾಗಿ ಅವತರಿಸಿ ಭಗವಂತನನ್ನು ಸರ್ವತ್ರ ಕಂಡು ಅವನ ಅನುಗ್ರಹದಿಂದ ಪುನೀತನಾದನು. ಪ್ರಲ್ಹಾದನಿಗಾಗಿ ಭಗವಂತನು ಕಂಬದಿಂದ ನರಸಿಂಹನಾಗಿ ಅವತರಿಸಿ.
ಪ್ರಹ್ಲಾದನನ್ನು ರಕ್ಷಿಸಿದನು. ಪ್ರಹ್ಲಾದನ ಭಕ್ತಿಗೆ ಮೆಚ್ಚಿದ ನರಸಿಂಹದೇವರು
ಮದ್ಭಕ್ತಾಃ ತ್ವಾಮನುವ್ರತಾಃ
ಎಂಬ ಮಾತಿನ ಮೂಲಕ ಯಾರು ನಿನ್ನನ್ನು ಅನುಸರಿಸುವರೋ ಅವರು ನನ್ನ ಭಕ್ತರು ಎಂಬ ವರವನ್ನು ಕೊಟ್ಟು ಅನುಗ್ರಹಿಸಿದರು. ಆ ನರಸಿಂಹದೇವರ ದಿವ್ಯವಾದ ಅನುಗ್ರಹ ಬಲದಿಂದ ಮುಂದೆ ಬಾಹ್ಲೀಕರಾಗಿ - ಶ್ರೀ ವ್ಯಾಸರಾಜರಾಗಿ ಅವತರಿಸಿ ಭಗವಂತನ ವಿಶೇಷ ಸೇವೆಯನ್ನು ಮಾಡಿ ಅವನ ಅನುಗ್ರಹಕ್ಕೆ ಪಾತ್ರರಾದರು.
ಧರೆಗಿಳಿದ ದೈವ
ಹಿಂದೆ ಪ್ರಹ್ಲಾದ - ಬಾಹ್ಲೀಕ - ಶ್ರೀ ವ್ಯಾಸರಾಜರಾಗಿ ಅವತರಿಸಿದ ಇವರ ಪುಣ್ಯರಾಶಿ ಅಖಂಡವಾಗಿತ್ತು. ಅದನ್ನು ಹಂಚಲೋಸುಗ ಭೂಮಿಯಲ್ಲಿ ಅವತರಿಸಲು ಇಚ್ಛಿಸಿದರು. ಅಲ್ಲದೆ ಹಿಂದೆ ಪ್ರಹ್ಲಾದರಾದಾಗ ಭಗವಂತನು ಇವರಿಗೆ ಮೋಕ್ಷವನ್ನೇ ಕೊಡುತ್ತೇನೆಂದು ಹೇಳಿದ್ದನು. ಆದರೆ, ಅದನ್ನು ಕೂಡ ಬೇಡವೆಂದು ಹೇಳುತ್ತಾ ನನ್ನನ್ನು ನಂಬಿದ ಕೋಟಿ ಕೋಟಿ ಭಕ್ತರನ್ನು ಬಿಟ್ಟು ಒಬ್ಬನೇ ಬರಲಾರೆಎಂದು ಹೇಳಿದ್ದರು. ನಂಬಿದ ಭಕ್ತರ ಉದ್ಧಾರಕ್ಕಾಗಿ ಮತ್ತೊಮ್ಮೆ ಅವತರಿಸುವ ಉದ್ದೇಶ್ಯವಿತ್ತು. ಇದಕ್ಕೆ ಆರಿಸಿಕೊಡ ವಂಶ ಷಾಷ್ಠಿಕ ವಂಶ
ಎಂದರೆ,
ಕರುನಾಡಿನ ಪ್ರಭಾವಿ ರಾಜರ ವಂಶದಲ್ಲಿ ಕದಂಬರು ಪ್ರಸಿದ್ಧರು. ಇವರ ವಂಶಜರಾದ ಮಯೂರವರ್ಮನು ಯಾಗಗಳನ್ನು ಮಾಡಿ ತನ್ಮೂಲಕ ಜಯಗಳಿಸಬೇಕೆಂದು ಚಿಂತಿಸಿದ. ಆಗ ಕರೆಸಿಕೊಂಡ ಬ್ರಾಹ್ಮಣರ ಸಮೂಹ ಅಲ್ಲೇ ನೆಲೆ ಊರಿತು. ಆಗಿದ್ದ ೬೦ ಮನೆತನದ ಬ್ರಾಹ್ಮಣರ ಮನೆತನಕ್ಕೆ ೬೦ ಒಕ್ಕಲ ಅಥವಾ ಷಾಷ್ಠಿಕ ವಂಶ ಎಂದು ಕರೆಯುತ್ತಾರೆ. ಇವರಲ್ಲಿ ಗೌತಮ ಗೋತ್ರಜರು, ಕಾಶ್ಯಪ ಗೋತ್ರಜರು ಮುಂತಾದ ಅನೇಕ ಗೋತ್ರದವರು ಇದ್ದಾರೆ. ಅದರಲ್ಲಿ ಗೌತಮ ಗೋತ್ರದಲ್ಲಿ ಬೀಗಮುದ್ರೆ ಮನೆತನದವರು ಪ್ರಧಾನರು.
ಈ ವಂಶದಲ್ಲಿ ಶ್ರೌತಸ್ಮಾರ್ತ ಕರ್ಮಾನುಷ್ಠಾನ ಪರರಾದ ಕೃಷ್ಣಭಟ್ಟರೆಂಬ ವಿದ್ವಾಂಸರಿದ್ದರು. ಷಟ್ ಕರ್ಮನಿರತರಾದ ಇವರು ಉತ್ತಮ ವೈಣಿಕ ವಿದ್ವಾಂಸರೂ ಹೌದು. ಇವರ ಮಕ್ಕಳು ಕನಕಾಚಲ ಭಟ್ಟರು. ಇವರು ಕೂಡಾ ಪರಂಪರಾ ಪ್ರಾಪ್ತವಾದ ವೈಣಿಕ ವಿದ್ಯೆಯೊಂದಿಗೆ ಶಾಸ್ತ್ರದಲ್ಲಿಯೂ ಅದ್ವಿತೀಯ ಪಂಡಿತರಾಗಿದ್ದರು. ಇವರಿಗೆ ತಿಮ್ಮಣ್ಣ ಭಟ್ಟರೆಂಬ ಒಬ್ಬ ಸುಪುತ್ರನಿದ್ದನು. ಕನಕಾಚಲಭಟ್ಟರು ಕಾವೇರಿಪಟ್ಟಣವನ್ನು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದರು. ಮಗನಿಗೆ ವಿವಾಹ ಸಂಸ್ಕಾರವನ್ನು ಮಾಡಿದ ಕನಕಾಚಲಭಟ್ಟರು ವೈಕುಂಠ ವಾಸಿಗಳಾದರು. ಗೋಪಿಕಾಂಬಾ ತಿಮ್ಮಣ್ಣಭಟ್ಟರ ಧರ್ಮಪತ್ನಿ. ಶ್ರೀನಿವಾಸನ ಅನುಗ್ರಹದಿಂದ ವೇಂಕಟಾಂಬಾ - ಗುರುರಾಜನೆಂಬ ಮಕ್ಕಳು ಹುಟ್ಟಿದರು. ಮತ್ತೊಬ್ಬ ಮಗನ ಬಯಕೆಯಿಂದ ಶ್ರೀನಿವಾಸನನ್ನು ಸೇವಿಸಿದ ತಿಮ್ಮಣ್ಣಭಟ್ಟ ದಂಪತಿಗಳಿಗೆ ಕ್ರಿ.ಶ.೧೫೯೮ರಲ್ಲಿ ಸುಪುತ್ರನ ಜನನವಾಯಿತು. ವೇಂಕಟೇಶನ ಅನುಗ್ರಹದಿಂದ ಜನಿಸಿದ ಮಗನಿಗೆ ವೆಂಕಟನಾಥನೆಂದು ನಾಮಕರಣ ಮಾಡಿದರು. ವೆಂಕಟನಾಥನೇ ಇಂದಿನ ಶ್ರೀರಾಘವೇಂದ್ರ ಗುರುಗಳು.
ಆದರ್ಶ ಬಾಲಲೀಲೆ
ಒಮ್ಮೆ ವೆಂಕಟನಾಥನಿಗೆ ಅಕ್ಷರಾಭ್ಯಾಸದ ಸಮಯ. ಮೊದಲೆಲ್ಲ ಅಕ್ಷರಗಳನ್ನು ಮರಳಿನಲ್ಲಿ ಬರೆದು ಕಲಿಸುತ್ತಿದ್ದರು. ತಂದೆ ತಿಮ್ಮಣ್ಣಭಟ್ಟರು ಮರಳಿನಲ್ಲಿ ಓಂ ಎಂದು ಬರೆದು ಇದನ್ನು ಓಂ ಎಂದು ಹೇಳು ಎಂದರು. ಆಗ ಬಾಲಕನಾದ ವೆಂಕಟನಾಥನು ಅಪ್ಪ! ಓಂ ಎಂದರೆ ಗುಣಪೂರ್ಣನಾದ ಜಗತ್ತನ್ನು ವ್ಯಾಪಿಸಿದ ಭಗವಂತ ಎಂದು ನೀವು ಪ್ರವಚನದಲ್ಲಿ ಹೇಳಿದ್ದೀರಿ. ಜಗತ್ತನ್ನು ವ್ಯಾಪಿಸಿದ ಭಗವಂತ ಈ ಚಿಕ್ಕ ಅಕ್ಷರದಲ್ಲಿ ಹೇಗೆ ಇದ್ದಾನೆ? ಎಂದು ಆಶ್ಚರ್ಯಕರವಾದ ಮಾತನ್ನು ಆಡಿ ಎಲ್ಲರಿಗೂ ಸಂತೋಷವನ್ನುಂಟು ಮಾಡಿದನು.
ಆರಂಭಿಕ ವಿದ್ಯಾಭ್ಯಾಸ
ತಮ್ಮ ಮನೆತನಕ್ಕೆ ಉಚಿತವಾದ ಸಂಸ್ಕೃತ ಅಧ್ಯಯನಕ್ಕಾಗಿ ತನ್ನ ಭಾವಂದಿರಾದ ಅಂದರೆ ಅಕ್ಕ ವೇಂಕಟಾಂಬಾದೇವಿಯ ಯಜಮಾನರಾದ ಲಕ್ಷ್ಮೀನರಸಿಂಹಾಚಾರ್ಯರಲ್ಲಿ ಕೋಶ, ಕಾವ್ಯ, ನಾಟಕ, ವ್ಯಾಕರಣಾದಿಗಳನ್ನು ಅಧ್ಯಯನ ಮಾಡಿ ಉತ್ತಮ ವಿದ್ಯಾರ್ಥಿಯಾಗಿ ಬೆಳೆದು ಬಂದನು.
ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕುಲಗುರುಗಳಾದ ಶ್ರೀ ಸುಧೀಂದ್ರತೀರ್ಥರಲ್ಲಿದ್ದು ತರ್ಕ - ವ್ಯಾಕರಣ - ಮೀಮಾಂಸ - ವೇದಾಂತಾದಿ ಶಾಸ್ತ್ರಗಳನ್ನು ಅಧ್ಯಯನವನ್ನು ಮಾಡಿ ಉತ್ತಮ ವಿದ್ವಾಂಸರಾದರು.
ಮಾದರಿ ಅಧ್ಯಯನ
ಆಧುನಿಕ ಪಾಠ್ಯ ಕ್ರಮದಂತೆ ವೇಳಾಪಟ್ಟಿಯನ್ನು ಹಾಕಿಕೊಂಡು ಪ್ರಾತಃ ವೇದಾಂತ ಶಾಸ್ತ್ರವನ್ನು ನಂತರ ವ್ಯಾಕರಣ ಭಾಷ್ಯವನ್ನು, ಮಧ್ಯಾಹ್ನ ವೇಳೆಯಲ್ಲಿ ತರ್ಕ ಶಾಸ್ತ್ರವನ್ನು ನಂತರ ಮೀಮಾಂಸ ಶಾಸ್ತ್ರವನ್ನು ಅಧ್ಯಯನ ಮಾಡುತ್ತಿದ್ದರು.
ಅಷ್ಟೇ ಅಲ್ಲದೇ ರಾತ್ರಿ ಇಡೀ ಚಿಂತನೆಯನ್ನು ಮಾಡಿ ಮಾದರಿ ವಿದ್ಯಾರ್ಥಿಯಾಗಿ ಎಲ್ಲರಿಗೂ ವಿದ್ಯಾರ್ಥಿ ಜೀವನ ಹೇಗಿರಬೇಕೆಂದು ತೋರಿಕೊಡುತ್ತಿದ್ದರು. ಹಾಗಾಗೇ ಅವರು ಉತ್ತಮ ಪಂಡಿತರಾಗಿ ಜಗತ್ಪ್ರಸಿದ್ಧರಾದರು.
ಗೃಹಸ್ಥಾಶ್ರಮ ಸ್ವೀಕಾರ
ಋಣತ್ರಯಗಳಲ್ಲಿ ಪಿತೃಋಣವೂ ಒಂದು ಅದರಿಂದ ಮುಕ್ತನಾಗಬೇಕಾದರೆ, ವಿವಾಹಿತನಾಗಿ ಉತ್ತಮರೀತಿಯಲ್ಲಿ ವಂಶವನ್ನು ಬೆಳೆಸಿ ತನ್ಮೂಲಕ ಪಿತೃಋಣದಿಂದ ಮುಕ್ತರಾಗುತ್ತಾರೆ. ಅದೇ ಉದ್ದೇಶದಿಂದ ಅಣ್ಣಂದಿರಾದ ಗುರುರಾಜಾಚಾರ್ಯರಿಂದ ನೋಡಲ್ಪಟ್ಟ ಉತ್ತಮ ಕುಲ ಪ್ರಸೂತಳಾದ ರೂಪ, ಗುಣ, ಸೌಶೀಲ್ಯ ಮುಂತಾದ ಗುಣಗಳಿಂದ ಶೋಭಿಸುತ್ತರುವ ಸರಸ್ವತಿ ಎಂಬ ಕನ್ಯೆಯೊಡನೆ ವಿವಾಹಿತರಾಗಿ, ಲಕ್ಷ್ಮೀನಾರಾಯಣ ನೆಂಬ ಸುಪುತ್ರನನ್ನು ಪಡೆದು ಸುಖವಾಗಿದ್ದರು.
ಕಡು ಬಡತನದ ಅನುಭವ
ವೆಂಕಟನಾಥರ ಪೂರ್ವಜರ ಸಿರಿತನವನ್ನು ಜಗತ್ತಿನ ಯಾರದೋ ಸಿರಿತನಕ್ಕೆ ಹೋಲಿಸಬಹುದು. ಆದರೆ, ವೆಂಕಟನಾಥರ ದಾರಿದ್ರ್ಯಕ್ಕೆ ಉಪಮೆಯೆ ಸಿಗುವುದಿಲ್ಲ. ಇರುವ ಮನೆ ಸೋರುತ್ತಿತ್ತು, ಹರಿದ ಬಟ್ಟೆಗಳು, ಹೊಟ್ಟೆಗೆ ಆಹಾರವಿಲ್ಲ, ಒಂದೊಂದು ಬಾರಿ ಐದು ದಿನದಕಾಲ ಉಪವಾಸವಿರುತ್ತಿದ್ದರು. ಇಂಥದ್ದರಲ್ಲಿ ಕಳ್ಳತನವಾಗಿ ಮನೆಯಲ್ಲಿದ್ದ ಒಡಕು ಪಾತ್ರೆಗಳು ಕಳುವಾದವು. ಎಲ್ಲವೂ ಹರಿ ಇಚ್ಛೆ ಎಂದು ಚಿಂತಿಸದೇ ಇದ್ದರು. ಕಷ್ಟ, ಸುಖವೆರಡರಲ್ಲಿಯೂ ಸಮಾನವಾದ ಮನಸ್ಥಿತಿಯಲ್ಲಿರುತ್ತಿದ್ದರು.
ಮತ್ತೆ ಸುಧೀಂದ್ರತೀರ್ಥರ ಆಶ್ರಯ
ಗುರುಗಳಾದ ಸುಧೀಂದ್ರತೀರ್ಥರ ಆದೇಶದಂತೆ ಶ್ರೀಮಠದಲ್ಲಿ ವಾಸ್ತವ್ಯ ಹೂಡಿ ಪಾಠ ಪ್ರವಚನ ಮಾಡುತ್ತಿದ್ದರು.
ವಾದಿ ದಿಗ್ವಿಜಯ
ಗುರುಗಳ ಜೊತೆಯಲ್ಲಿ ಸಂಚಾರತ್ವೇನ ಹೊರಟು ಅನೇಕ ಕಡೆಯಲ್ಲಿ ವಾದಿಗಳನ್ನು ಗೆದ್ದು ಶ್ರೀಮಠಕ್ಕೆ ಕೀರ್ತಿ ತರುತ್ತಿದ್ದರು. ಒಮ್ಮೆ ವ್ಯಾಕರಣ ಶಾಸ್ತ್ರದಲ್ಲಿ ಅದ್ವಿತೀಯವಾದ ಪಾಂಡಿತ್ಯವನ್ನು ಕಂಡ ಸುಧೀಂದ್ರತೀರ್ಥರು ಮಹಾಭಾಷ್ಯ ಎಂಬ ಬಿರುದನ್ನು ನೀಡಿ ಸತ್ಕರಿಸಿದರು. ಮತ್ತೊಮ್ಮೆ ಶುಲ್ಬ ಸೂತ್ರಗಳ ಮೇಲೆ ವಾದವನ್ನು ಮಂಡಿಸಿ ಜಯಶೀಲರಾದರು. ಇನ್ನೊಮ್ಮೆ ಭೈರವಭಟ್ಟ, ವೀರಭದ್ರ ಎಂಬ ಪ್ರಕಾಂಡ ಪಂಡಿತರನ್ನು ಗೆದ್ದು ಜಯಪತ್ರವನ್ನು ಗಳಿಸಿದರು. ಶ್ರೀಸುಧೀಂದ್ರಗುರುಗಳಿಗೆ ಎಲ್ಲಿಲ್ಲದ ಸಂತೋಷ.
ಸುಧೀಂದ್ರತೀರ್ಥರಿಗೆ ಸ್ವಪ್ನ ಸೂಚನೆ
ಹಂಸನಾಮಕ ಪರಮಾತ್ಮನ ಈ ಪರಂಪರೆಗೆ ಮುಂದಿನ ವಾರಸುದಾರನು ಯಾರೆಂದು ಹುಡುಕುತ್ತಿರುವ ಶ್ರೀಸುಧೀಂದ್ರತೀರ್ಥರಿಗೆ ಸ್ವಪ್ನದಲ್ಲಿ ಶ್ರೀಮೂಲರಾಮದೇವರು ಕಂಡು ವೆಂಕಟನಾಥನೇ ನಿಮ್ಮ ಮುಂದಿನ ಪೀಠಾಧಿಪತಿ ಎಂದು ಸೂಚನೆಯನ್ನಿತ್ತರು. ಅದನ್ನರಿತ ಗುರುಗಳು ಒಮ್ಮೆ ವೆಂಕಟನಾಥನ ಬಳಿ ಈ ವಿಚಾರವನ್ನು ಪ್ರಸ್ತಾವನೆ ಮಾಡಿದರು. ಆಗ ವೆಂಕಟನಾಥನು ಈ ಅಪಾರ ದ್ವೈತಸಿದ್ಧಾಂತದ ಸಾಮ್ರಾಜ್ಯವೆಲ್ಲಿ? ನಾನೆಲ್ಲಿ. ಭಾರವನ್ನು ಹೊತ್ತು ಸಮುದ್ರವನ್ನು ದಾಟಲು ಹೋದಂತೆ ಆಗುತ್ತದೆ. ಅಷ್ಟೇ ಅಲ್ಲ, ನಾನು ಚಿಕ್ಕವನು, ನನ್ನಹೆಂಡತಿ ಚಿಕ್ಕವಳು, ಮಗನಿಗೆ ಉಪನಯನ ಮಾಡಿಲ್ಲ ಎಂದು ಮನೆಗೆ ಹೋದರು.
ವಿದ್ಯಾದೇವಿಯ ಉಪದೇಶ
ಒಂದು ದಿನ ಬೆಳಗಿನ ಜಾವ ಸ್ವಪ್ನದಲ್ಲಿ ವಿದ್ಯಾದೇವಿಯು ಕಂಡು ವೆಂಕಟನಾಥನಿಗೆ ಸಂಸಾರದ ಬಗ್ಗೆ ತಿಳುವಳಿಕೆಯನ್ನು ನೀಡಿ ಸಂಸಾರವನ್ನು ನೆಚ್ಚಿ ನೀ ಇರಬೇಡಾ, ನಿನ್ನ ಅವತಾರವು ಶ್ರೀಮದಾಚಾರ್ಯರ ತತ್ವಶಾಸ್ತ್ರದ ಪ್ರಚಾರಕ್ಕಾಗಿ, ನಿನ್ನ ಗುರುಗಳು ಕೇವಲ ಇನ್ನೆರಡು ವರ್ಷಗಳು ಮಾತ್ರ ಇರುತ್ತಾರೆ. ನಿನ್ನಿಂದ ಅನಿತರ ಸಾಧಾರಣ ಕಾರ್ಯಗಳಾಗಬೇಕಾಗಿದೆ. ವಿದ್ಯಾದೇವಿಯಾದ ನಾನು ನಿನ್ನ ಕೈಪಿಡಿದು ಜಗತ್ಪ್ರಸಿದ್ಧಳಾಗಬೇಕೆಂದಿದ್ದೇನೆ. ನಿನ್ನ ನಾಲಿಗೆಯೆಂಬ ರಂಗಸ್ಥಳದಲ್ಲಿ ನರ್ತನಮಾಡಲು ಬಯಸಿದ್ದೇನೆ. ಕಾರಣ ನೀ ಯತಿಯಾಗಬೇಕು. ನೀನು ಯತಿಯಾಗುವುದು - ನಾನು ನಿನ್ನ ಅಧೀನಳಾಗುವುದು
ಎರಡೂ ದೈವಸಂಕಲ್ಪ. ನಿನ್ನಲ್ಲಿ ಬಂದು ನೆಲೆಸಿದ ನಾನು ಸ್ವಪ್ನದಲ್ಲೂ ಇನ್ನೊಬ್ಬ ಯತಿಯನ್ನು ಸ್ಮರಿಸುವುದಿಲ್ಲ ಎಂದು ಹೇಳಿ ಸನ್ಯಾಸಾಶ್ರಮಕ್ಕೆ ಪ್ರಚೋದನೆಯನ್ನು ನೀಡಿ ಅದೃಶ್ಯಳಾದಳು.
ಸನ್ಸ್ಯಾಸ ಸ್ವೀಕಾರ
ನಂತರ ಗುರುಗಳು ವಿಶೇಷ ಉಪದೇಶವನ್ನು ನೀಡಿ ಅವರ ಮನಸ್ಸನ್ನು ಕರಗುವಂತೆ ಮಾಡಿದರು.
ಆಗ ಸನ್ಸ್ಯಾಸಕ್ಕೆ ಸಿದ್ಧರಾದ ಇವರಿಗೆ ತಂಜಾವೂರಿಗೆ ಕರೆದುಕೊಂಡು ಹೋಗಿ ವಿಧಿಯುಕ್ತ ಮಾರ್ಗದಿಂದ ತುರೀಯಾಶ್ರಮವನ್ನು ನೀಡಿ ರಾಘವೇಂದ್ರತೀರ್ಥರೆಂದು ನಾಮಕರಣ ಮಾಡಿ ಸುರೇಂದ್ರತೀರ್ಥರಂತೆ ತಪಸ್ವಿಯಾಗು, ವಿಜಯೀಂದ್ರತೀರ್ಥರಂತೆ ಕೀರ್ತಿವಂತನಾಗು, ನನ್ನಂತೆ ವಾದಿಮಲ್ಲನಾಗು ಎಂದು ಆಶೀರ್ವದಿಸಿ ಶ್ರೀ ಮೂಲರಾಮದೇವರೇ ಮೊದಲಾದ ಪ್ರತಿಮೆಗಳನ್ನು ಎರಡು ವ್ಯಾಸಮುಷ್ಠಿಗಳನ್ನು, ಗ್ರಂಥಗಳರಾಶಿಯನ್ನು, ಶ್ವೇತಛತ್ರವನ್ನು, ಬಂಗಾರದ ಪಲ್ಲಕ್ಕಿಯನ್ನು ಕರುಣಿಸಿದರು.
ದಿಗ್ವಿಜಯ ಯಾತ್ರೆ
ಗುರುಗಳಿಂದ ದೀಕ್ಷೆಯನ್ನು ಪಡೆದ ಶ್ರೀರಾಘವೇಂದ್ರತೀರ್ಥರು ಸಂಚಾರತ್ವೇನ ಅನೇಕ ತೀರ್ಥ ಕ್ಷೇತ್ರಗಳನ್ನು ಸಂಚರಿಸಿದರು. ವಿಶೇಷವಾಗಿ ದಕ್ಷಿಣ ಭಾರತದ ಶ್ರೀರಂಗ, ಕುಂಭಕೋಣ, ನಾಮಗಿರಿ, ತಂಜಾವೂರು, ಮಧುರೈ, ಅನಂತಶಯನ, ರಾಮೇಶ್ವರ, ಪಂಢರಪುರ, ತಿರುಪತಿ, ಉಡುಪಿ ಮುಂತಾದ ಅನೇಕ ಕ್ಷೇತ್ರಗಳನ್ನು ಸಂಚರಿಸಿ, ತತ್ವಪ್ರಚಾರ, ವಾದಿನಿಗ್ರಹ ಶಿಷ್ಯರಿಗೆ ತಪ್ತಮುದ್ರಾಧಾರಣೆ ಮಾಡುತ್ತಾ ನೊಂದು ಬಂದ ಭಕ್ತರ ಕಷ್ಟಗಳನ್ನು ಪರಿಹರಿಸುತ್ತಾ ಸಂಚರಿಸಿದರು. ಗುರುಗಳ ದೇಹಾಲಸ್ಯವನ್ನು ಮನಗಂಡ ಅವರು, ಗುರುಗಳ ಇಚ್ಛೆಯಂತೆ ಆನೆಗುಂದಿ ತುಂಗಭದ್ರಾ ನದಿತೀರದಲ್ಲಿ ಶ್ರೀಮಠದ ಪೂರ್ವಿಕ ಗುರುಗಳ ಮೂಲಬೃಂದಾವನವಿರುವ ಸ್ಥಳಕ್ಕೆ ಹೊರಟು ಬಂದರು. ಗುರುಗಳು ಯಾವಾಗ ಹರಿಧ್ಯಾನಪರರಾಗಿ ದೇಹತ್ಯಾಗವನ್ನು ಮಾಡಿದರೋ ಆಗ ಅವರ ಬೃಂದಾವನವನ್ನು ಪ್ರತಿಷ್ಠೆ ಮಾಡಿ, ಮಹಾಸಮಾರಾಧನೆಯನ್ನು ನಿರ್ವಹಿಸಿದರು.
ಸಂಸ್ಥಾನಾಧಿಪತ್ಯ ಸ್ವೀಕಾರ
ಗುರುಗಳ ನಿರ್ಯಾಣದ ನಂತರ ಈ ಮೂಲಮಹಾಸಂಸ್ಥಾನದ ಜವಾಬ್ದಾರಿಯನ್ನು ಹೊತ್ತ ಶ್ರೀರಾಘವೇಂದ್ರ ಗುರುಗಳು ದೇಶದ ಅನೇಕ ಮೂಲೆ ಮೂಲೆಗಳಲ್ಲಿ ಸಂಚರಿಸಿ ಸಜ್ಜನರನ್ನು ಉದ್ಧರಿಸುತ್ತಾ ಕಾಲಿಟ್ಟ ಭೂಮಿಯನ್ನು ಪವಿತ್ರೀಕರಿಸುತ್ತಾ ಜಾತಿ ಮತ ಪಂಥದ ಭೇದವಿಲ್ಲದಲೆ ಎಲ್ಲರನ್ನೂ
ಉದ್ಧರಿಸಿದರು.
ಗ್ರಂಥ ರಚನೆ
ಸುಮಾರು ೪೮ ಕ್ಕೂ ಮಿಗಿಲಾದ ಗ್ರಂಥಗಳನ್ನು ರಚಿಸಿ ಟಿಪ್ಪಣ್ಣ್ಯಾಚಾರ್ಯ ಚಕ್ರವರ್ತಿಗಳೆಂದು ಪ್ರಸಿದ್ಧರಾದರು. ನದೀ ತಾರತಮ್ಯ ಸ್ತೋತ್ರವೆಂಬ ಚಿಕ್ಕ ಗ್ರಂಥದಿಂದ ಆರಂಭಿಸಿ ಪರಿಮಳವೆಂಬ ದೊಡ್ಡ ಗ್ರಂಥಗಳವರೆಗೆ ರಚಿಸಿ ಪಂಡಿತ ಮಂಡಳಿಗೆ ಮಹತ್ತರವಾದ ಕೊಡುಗೆಯನ್ನು ನೀಡಿದ್ದಾರೆ.
ದಡ್ಡ ವೆಂಕಣ್ಣ ಮಂತ್ರಿಯಾದ
ದನಗಾಹಿ ವೆಂಕಣ್ಣನಿಗೆ ಶ್ರೀಗುರುರಾಜರು ತಮ್ಮ ಸ್ಮರಣೆಯಿಂದ ಆದವಾನಿಯ ನವಾಬನ ಮಂತ್ರಿ ಪದವಿಯನ್ನು ನೀಡಿದ ಘಟನೆ ವಿಶಿಷ್ಟವಾದದ್ದು.
ಓದಲು ಬರೆಯಲು ಆಗದ ವೆಂಕಣ್ಣನಿಗೆ ತನಗೆ ಬಂದ ವಿಜಯದ ಪತ್ರವನ್ನು ಓದಲು ಕೊಟ್ಟ ಆದವಾನಿಯ ನವಾಬ. ನನಗೆ ಓದಲು ಬರುವುದಿಲ್ಲವೆಂದು ಬೇಡಿದರೂ ಕೇಳದ ಅವನನ್ನು ನೋಡಿ ಹೆದರಿದ ವೆಂಕಣ್ಣನು ರಾಯರನ್ನು ನೆನೆಸಿದ ಅದರಿಂದ ಪತ್ರವು ಓದಲು ಬಂದಿತು. ಪತ್ರದ ಅಭಿಪ್ರಾಯವನ್ನು ಕಂಡ ನವಾಬನು ವೆಂಕಣ್ಣನನ್ನು ತನ್ನ ರಾಜ್ಯಕ್ಕೆ ದಿವಾನನನ್ನಾಗಿ ಮಾಡಿದನು. ಗುರುಗಳ ಅನುಗ್ರಹದಿಂದ ತನಗೆ ಈ ಪದವಿ ಬಂದಿದೆಯೆಂದು ತಿಳಿದು ರಾಜಧಾನಿಗೆ ಕರೆಸಿ ಗುರುಗಳಿಗೆ ಗೌರವಿಸಿದನು.
ಮಾಂಸವನ್ನು ಫಲವನ್ನಾಗಿಸಿದರು
ಆದವಾನಿಯ ನವಾಬನು ಗುರುಗಳ ಪರೀಕ್ಷೆಗಾಗಿ ಕೊಟ್ಟ, ಬಟ್ಟೆ ಮುಚ್ಚಿದ ಮಾಂಸವನ್ನು ಶಂಕೋದಕ ಪ್ರೋಕ್ಷಣೆ ಮಾಡುವದರಿಂದ ಫಲವನ್ನಾಗಿಸಿ ಶ್ರೀಹರಿಗೆ ಸಮರ್ಪಿಸಿದರು. ಇದನ್ನರಿತ ರಾಜನು ಗುರುಗಳಿಗೆ ಮಂಚಾಲೆ ಗ್ರಾಮವನ್ನೇ ದಾನವಾಗಿ ನೀಡಿದರು.
ಆದವಾನಿಯ ನವಾಬನು ನೀಡಿದ ಸ್ಥಳದಲ್ಲಿ ಈ ಹಿಂದೆ ಶ್ರೀರಾಯರೇ ಪ್ರಲ್ಹಾದರಾಜರಾದಾಗ ಯಜ್ಞವನ್ನು ಮಾಡಿದ್ದರು. ಆ ಸ್ಥಳವನ್ನು ತೋರಿಸಿ ತಾವು ಅಲ್ಲೇ ಬೃಂದಾವನ ಪ್ರವೇಶ ಮಾಡುವುದಾಗಿ ತಿಳಿಸಿ ವಿರೋಧಿಕೃತ್‌ಶ್ರಾವಣಬಹುಳಬಿದಿಗೆಯ ದಿನ ರಾಜಾಧಿರಾಜರು - ಬ್ರಾಹ್ಮಣ ಹರಿದಾಸರು, ಅಸಂಖ್ಯಾ ಭಕ್ತರ ಸಮ್ಮುಖದಲ್ಲಿ ಸಶರೀರವಾಗಿ ಬೃಂದಾವನ ಪ್ರವೇಶ ಮಾಡಿದರು.
ಶ್ರೀಗುರುರಾಜರ ಪವಾಡಗಳು
೧. ತಮ್ಮ ತಪಃಸ್ಸಾಮರ್ಥ್ಯದಿಂದ ತಂಜಾವೂರು ಪ್ರಾಂತಕ್ಕೆ ಮಳೆಯನ್ನು ತರಿಸಿ ಕ್ಷಾಮವನ್ನು ನೀಗಿಸಿದ್ದು.
೨. ಬಿಸಿಲಿಗೆ ಬೆಂಡಾದ ಬಾಣಂತಿಗೆ ಭೂಮಿಯಿಂದ ನೀರನ್ನು ತರಿಸಿ ನೀರುಣಿಸಿದ ಮಹಾನುಭಾವರು.
೩. ಮೃತ್ತಿಕೆಯ ಮಹಿಮೆಯಿಂದ ಹುಟ್ಟಿಸಾಯುತ್ತಿರುವ ದೇಸಾಯಿ ಪುತ್ರರನ್ನು ರಕ್ಷಿಸಿದ್ದು.
೪. ನೀರಿನ ವೆಂಕಣ್ಣಗೆ ಚಿತ್ರದುರ್ಗದಲ್ಲಿ ಮೋಕ್ಷವನ್ನು ಕರುಣಿಸಿದ್ದು.
೫. ಮಂತ್ರ ಪ್ರಭಾವದಿಂದ ಒನಕೆಯನ್ನು ಚಿಗುರಿಸಿದ್ದು.
೬. ಶೀಕರಣೆಯಲ್ಲಿ ಬಿದ್ದು ಮೃತನಾದ ಬಾಲಕನನ್ನು ಬದುಕಿಸಿದ್ದು.
ಹೀಗೆ ನೂರಾರು ಮಹಿಮೆಗಳನ್ನು ತೋರಿದ ಗುರುಗಳು ಬೃಂದಾವನದಲ್ಲಿ ನಿಂದು ನೊಂದು ಬಂದ ಭಕ್ತರ ಸಂಕಟಗಳನ್ನು ನಿವಾರಿಸಿ ಇಂದಿಗೂ ಉದ್ಧರಿಸುತ್ತಿದ್ದಾರೆ.
ಅನುಪಮ ಗುರುಗಳು
ಬಹುಶಃ ಜಗತ್ತಿನಲ್ಲಿ ಯಾವ ಗುರುಗಳಿಗೆ ಇಲ್ಲದ ಮಹಿಮೆ ಶ್ರೀರಾಯರಿಗೆ ಬರಲು ಕಾರಣವೇನೆಂದರೆ ಒಂದು ಪ್ರಲ್ಹಾದರಾದಾಗ ಭಗವಂತನು ಇವರಿಗೆ ವಿಶೇಷವಾದ ವರವನ್ನು ಕೊಟ್ಟು ಅನುಗ್ರಹಿಸಿರುವುದು, ಇನ್ನೊಂದು ಶ್ರೀಮಧ್ವಾಚಾರ್ಯರೇ ಮೊದಲಾದ ಎಲ್ಲಾ ಪೂರ್ವಜ ಯತಿಗಳು ಇವರಲ್ಲಿ ನಿಂದು ಆಶಕ್ತಿಯನ್ನು ಕೊಡುತ್ತಿದ್ದಾರೆ. ಅಷ್ಟೇ ಅಲ್ಲ
ಭಗವಂತನು - ರಾಮನಾಗಿ ಇವರಲ್ಲಿದ್ದು ಭಕ್ತರಿಗೆ ಅನ್ನವಸನಾದಿಗಳನ್ನು, ಕೃಷ್ಣನಾಗಿಲ್ಲಿದ್ದು ದಾಂಪತ್ಯ ಸುಖವನ್ನು ಮತ್ತು ಪುತ್ರರನ್ನು, ನರಸಿಂಹನಾಗಿ ಇವರಲ್ಲಿದ್ದು ಭಯನಿವಾರಣೆಯನ್ನು ವೇದವ್ಯಾಸನಾಗಿ ಇವರಲ್ಲಿದ್ದು ತತ್ವಜ್ಞಾನವನ್ನು ನಾರಾಯಣನಾಗಿಲ್ಲಿದ್ದು ಮೋಕ್ಷವನ್ನು - ಧನ್ವಂತರಿಯಾಗಿದ್ದು
ಆರೋಗ್ಯವನ್ನು ಉಂಟುಮಾಡುತ್ತಾನೆಂದು ಹರಿದಾಸರು ಹಾಡಿ ಹೊಗಳಿದ್ದಾರೆ.
ಸರ್ವಜನಾನುರಾಗಿ ಯತಿಗಳು
ಜಾತಿಮತದ ಪಂಥವಿಲ್ಲದೇ ಎಲ್ಲರನ್ನು ಒಂದೇ ರೀತಿಯಲ್ಲಿ ರಕ್ಷಿಸುವ ಗುರುಗಳೆಂದರೆ ಶ್ರೀಮಂತ್ರಾಲಯ ಪ್ರಭುಗಳು. ಇದಕ್ಕೆ ಅವರ ಚರಿತ್ರೆ ಸಾಕ್ಷಿಯಾಗಿ ನಿಂತಿವೆ.
ಒಮ್ಮೆ ಶ್ರೀರಾಯರು ಮಾನವಿಯಲ್ಲಿ ಚಾತುರ್ಮಾಸ್ಯ ದೀಕ್ಷಾಬದ್ಧರಾಗಿದ್ದರು. ಪೂಜಾದಿಗಳಲ್ಲಿ ಆಸಕ್ತರಾದ ಅವರ ದೃಷ್ಟಿ ದೂರದಲ್ಲಿ ಕುಳಿತ ಒಬ್ಬ ಭಕ್ತನ ಮೇಲೆ ಬಿತ್ತು. ದಿವ್ಯ ದೃಷ್ಟಿಯಿಂದ ನೋಡಿದರು. ಹಾ! ಇವನು ನಾವು ವ್ಯಾಸರಾಜರಾಗಿದ್ದಾಗ ಕನಕನಾಗಿದ್ದವನು ಎಂದು ಹತ್ತಿರ ಹೋಗಿ ಕನಕ! ಎಂದರು. ಹೇಗಿದ್ದೀಯೋ ಆಗ ಕನಕನು ಅಪ್ಪ ನಿಮ್ಮ ದರ್ಶನಕ್ಕೆ ಬಂದಿದ್ದೆ ಎಂದ. ಸಂತೋಷ ಎಂದರು. ಕನಕನು ತಮ್ಮ ಹೊಲದಲ್ಲಿ ಬೆಳೆದ ಸಾಸಿವೆಯನ್ನು ಗುರುಗಳಿಗೆ ತಂದಿದ್ದನ್ನು ಅರ್ಪಿಸಿದ.ಆಗ ಗುರುಗಳು ಈ ದಿನ ಶ್ರೀಮೂಲರಾಮದೇವರ ಪೂಜೆಗೆ ನೈವೇದ್ಯಕ್ಕಾಗಿ ಉಪಯೋಗಿಸಿರಿ ಎಂದು ಹೇಳಿದರು. ಆಗ ಮಠದ ಪರಿಚಾರಕರು ಸ್ವಾಮಿ! ಇದು ಅಷಾಢ ಮಾಸ ಸಾಸ್ವಿಯನ್ನು ಬಳಸುವಂತೆ ಇಲ್ಲ ಎಂದರು. ಆಗ ಗುರುರಾಜರು ನಮ್ಮ ಭಕ್ತನಾದ ಕನಕನು ಶ್ರದ್ಧೆಯಿಂದ ತಂದಿದ್ದಾನೆ, ನಿಷಿದ್ಧವಿದ್ದರೂ ಅಡ್ಡಿ ಇಲ್ಲಾ ಬಳಸಿರಿ ಎಂದು ಹೇಳಿ ಅಡುಗೆಯಲ್ಲಿ ಉಪಯೋಗಿಸಿದರು. ಅದು ಇಂದಿಗೂ ಚಾಲ್ತಿಯಲ್ಲಿದೆ. ಇದರಿಂದ ಅರ್ಥವಾಗುತ್ತದೆ ಒಬ್ಬ ಶ್ರೇಷ್ಟ ಭಕ್ತನು ಯಾವುದೇ ಜಾತಿಯವನಾಗಿರಲಿ ಭಕ್ತಿಯಿಂದ ತಂದಿದ್ದನ್ನು ಸ್ವೀಕರಿಸಿ ತಮ್ಮ ಉದಾತ್ತತೆಯಿಂದ ಮೆರೆದವರು ಶ್ರೀರಾಯರು.
ಕಿತ್ತೂರಿನ ಚೆನ್ನಮ್ಮಗೆ ಅನುಗ್ರಹಿಸಿದ ಗುರುರಾಜರು
ಸಂಚಾರತ್ವೇನ ಒಮ್ಮೆ ಕಿತ್ತೂರಿಗೆ ಹೊರಟಾಗ ಅಲ್ಲಿಯ ಕುಹಕಿಗಳ ಪ್ರೇರಣೆಯಂತೆ ರಾಯರನ್ನು ಅಲ್ಲಿಗೆ ಬರದಂತೆ ತಡೆಹಿಡಿಯಲಾಯಿತು. ಹರಿ ಇಚ್ಛೆಯೆಂದು ಗುರುಗಳು ಮುಂದೆ ಪ್ರಯಾಣ ಬೆಳೆಸಿದರು. ಇದರಿಂದ ಆ ಊರಿಗೆ ಮೂರು ವರ್ಷಗಳಕಾಲ ಕ್ಷಾಮವೇರ್ಪಟ್ಟಿತು.ಆಗ ರಾಣಿಯಾದ ಚೆನ್ನಮ್ಮ ಗುರುಗಳಿದ್ದಲ್ಲಿಗೆ ಹೋಗಿ ಆತ್ಮೀಯತೆಯಿಂದ ತಮ್ಮ ಊರಿಗೆ ಬರಮಾಡಿಕೊಂಡಳು. ಹಿಂದಿನ ಕಹಿ ವಿಚಾರವನ್ನು ಮರೆತ ರಾಯರು ಆ ಊರಿಗೆ ಪ್ರಯಾಣಮಾಡಿ ತಮ್ಮ ತಪಃಪ್ರಭಾವದಿಂದ ಮಳೆ ಬೆಳೆಯನ್ನುಂಟು ಮಾಡಿ ಎಲ್ಲರನ್ನು ಅನುಗ್ರಹಿಸಿದರು. ಆಗ ರಾಣಿ ಚೆನ್ನಮ್ಮ ಅನೇಕ ರಾಜಮರ್ಯಾದೆಯಿಂದ ಗುರುಗಳಿಗೆ ಸತ್ಕರಿಸಿದಳು.
ಆದವಾನಿಯ ಮುಸ್ಲಿಂ ದೊರೆಯ ಮೇಲೆ ಕೃಪಾದೃಷ್ಠಿ
ಆದವಾನಿ ಅರಸ ಸಿದ್ಧಿ ಮಸೂದ್‌ಖಾನ್ ಮುಸ್ಲಿಂದೊರೆ, ಒಮ್ಮೆ ತನ್ನ ಸಂಸ್ಥಾನಕ್ಕೆ ಬರಮಾಡಿಕೊಂಡ ಹತ್ತಿರದ ದೇವಾಲಯದಲ್ಲಿ ಬಿಡಾರ ಹೂಡಿದರು. ರಾಜನು ಪರೀಕ್ಷೆಗಾಗಿ ಗೋಮಾಂಸವನ್ನು ಕಳಿಸಿದ. ಆಗ ಗುರುರಾಜರು ಅವನಿತ್ತ ಮಾಂಸವನ್ನು ಫಲವನ್ನಾಗಿ ಪರಿವರ್ತಿಸಿ ದೇವರಿಗೆ ಸಮರ್ಪಿಸಿದರು. ಸಂತುಷ್ಟನಾದ ರಾಜನು ಮಂಚಾಲೆಗ್ರಾಮವನ್ನು ದಾನವನ್ನಾಗಿ ನೀಡಿದನು. ಶ್ರೀಗುರುರಾಜರು ಅಲ್ಲೇ ಬೃಂದಾವನಸ್ಥರಾದರು. ಇದರ ಸ್ಮಾರಕವಾಗಿ ರಾಯರ ಬೃಂದಾವನದ ಮಂಟಪದ ಹಿಂದಿನ ಭಾಗದಲ್ಲಿ ಮುಸಲ್ಮಾನರ ಚಿಹ್ನೆ ಗುಂಬಜ ಇಂದಿಗೂ ಕಾಣಬಹುದಾಗಿದೆ. ಮಂತ್ರಾಲಯಕ್ಕೆ ಅನೇಕ ಮುಸ್ಲಿಂ ಜನಾಂಗದವರು ಬಂದು ದರ್ಶನ ಮಾಡಿಕೊಂಡು ಹೋಗುವುದು ಇಂದಿಗೂ ರೂಢಿಯಲ್ಲಿದೆ.
ಆಂಗ್ಲ ಅಧಿಕಾರಿಗೆ ದರ್ಶನ ಕೊಟ್ಟ ಗುರುರಾಜರು
ಬ್ರಿಟ್ಟೀಷ್ ಅಧಿಕಾರದ ಅವಧಿ, ಆಗ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸರ್ ಥಾಮಸ್ ಮನ್ರೋ ಎಂಬ ಕ್ರಿಶ್ಚಿಯನ್ ಅಧಿಕಾರಿ ಕೈಯಲ್ಲಿತ್ತು. ಮೇಲಿನವರ ಆದೇಶದಂತೆ ಯಾವುದೋ ಒಬ್ಬ ಸನ್ಯಾಸಿ ಸಶರೀರರಾಗಿ ಬೃಂದಾವನ ಪ್ರವೇಶ ಮಾಡಿದ್ದಕ್ಕೆ ಒಂದು ಗ್ರಾಮವೇ ಇನಾಂ ಆಗಿ ಕೊಡುವುದು ಸರಿ ಅಲ್ಲ ಎಂದು ಇನಾಮನ್ನು ವಜಾಗೊಳಿಸಲು ಬಂದಿದ್ದ. ಆಗ ರಾಯರ ಬೃಂದಾವನದಮುಂದೆ ಬಂದ ಅವನಿಗೆ ರಾಯರು ಪ್ರತ್ಯಕ್ಷ್ಯವಾಗಿ ಕಂಡು ಆಂಗ್ಲ ಭಾಷೆಯಲ್ಲಿ ಮಾತನಾಡಿಸಿ ನಿನಗೆ ಒಳ್ಳೇದಾಗುತ್ತದೆ. ಈ ಮಠದ ವಿಚಾರಕ್ಕೆ ಬರಬೇಡವೆಂದು ಹೇಳಿ ಫಲ ಮಂತ್ರಾಕ್ಷತೆಯನ್ನಿತ್ತರು. ಆಗ ಅವನು ಮದ್ರಾಸಿನ ಮೇಲಿನ ಅಧಿಕಾರಿಗೆ ಪತ್ರ ಬರೆದು ತನ್ನ ಅನುಭವವನ್ನು ತಿಳಿಸಿ ಇನಾಂ ರದ್ದುಗೊಳಿಸಬಾರದೆಂದು ಮನವಿಮಾಡಿದನು. ಇದರಿಂದ ಅವನಿಗೆ ಬಹು ವರ್ಷಗಳಿಂದ ಆಗದಿದ್ದ ಪುತ್ರೋತ್ಸವವಾಯಿತು. ಉದ್ಯೋಗದಲ್ಲಿ ಬಡ್ತಿ ಕೂಡಾಸಿಕ್ಕಿತು. ಮುಂದೆ ಅವನು ಮದ್ರಾಸ್‌ಗೆ ಅಧಿಕಾರಿಯಾಗಿ ಹೋದನು. ಆಶ್ಚರ್ಯವೆಂದರೆ, ತಾನು ಬಳ್ಳಾರಿಯಿಂದ ಬರೆದ ಮನವಿ ಪತ್ರ ತಾನೇ ಮಂಜೂರು ಮಾಡುವ ಪ್ರಸಂಗ ಬಂದು ಇನಾಂ ರದ್ದುಗೊಳಿಸಬಾರದೆಂದು ಆದೇಶ ಹೊರಡಿಸಿ ಅದನ್ನು ಬಳ್ಳಾರಿಯ ಗೆಜೆಟ್‌ನಲ್ಲಿ ದಾಖಲಿಸಿದ್ದನ್ನು ಇಂದೂ ನಾವು ನೋಡಬಹುದು.
ಹೀಗೆ ಜಾತಿ ಮತಗಳ ಸಾಮರಸ್ಯಕ್ಕೆ ಪ್ರತೀಕರಾದ ಶ್ರೀರಾಘವೇಂದ್ರ ಗುರುಸಾರ್ವಭೌಮರು ಬೃಂದಾವನ ಪ್ರವೇಶ ಮಾಡಿ ೩೪೦ ವರ್ಷಗಳು ಕಳೆದಿದ್ದರೂ ಇಂದಿಗೂ ಅವರ ಮಹಿಮೆ ಅಚ್ಚಳಿಯದೇ ಅಭಿವೃದ್ಧಿಯಾಗುತ್ತಲಿದೆ ಎಂಬುದರಲ್ಲಿ ಎರಡನೇ ಮಾತಿಲ್ಲ.
ಗುರುರಾಜರ ೨೦೧೧ ರ ಆರಾಧನಾ ಮಹೋತ್ಸವವು ಸಕಲ ಸದ್‌ಭಕ್ತರಿಗೆ - ಹಾಗೂ ವಿಜಯಕರ್ನಾಟಕ ಪತ್ರಿಕಾ ಬಳಗದವರಿಗೆ ಸಕಲ ಸನ್‌ಮಂಗಳವನ್ನುಂಟು ಮಾಡಲೆಂದು ಗುರುಗಳಲ್ಲಿ ಪ್ರಾರ್ಥಿಸುತ್ತೇವೆ.
Comments
ಉ: ಧರೆಗಿಳಿದ ದೈವ ಗುರುರಾಘವೇಂದ್ರರು
ಉ: ಧರೆಗಿಳಿದ ದೈವ ಗುರುರಾಘವೇಂದ್ರರು
ಉ: ಧರೆಗಿಳಿದ ದೈವ ಗುರುರಾಘವೇಂದ್ರರು
In reply to ಉ: ಧರೆಗಿಳಿದ ದೈವ ಗುರುರಾಘವೇಂದ್ರರು by Prabhu Murthy
ಉ: ಧರೆಗಿಳಿದ ದೈವ ಗುರುರಾಘವೇಂದ್ರರು