ಮನಸೇ ಥೋಡಿ ಅನಬನ ರಖನಾ
ಚಂಚಲಂ ಹಿ ಮನಮ್ ಕೃಷ್ಣ ಪ್ರಮಾಥೀನಿ ಬಲವದ್ಧೃಢಮ್ ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಮ್ ॥ ಗೀತಾ ೬.೩೪ (ಚಂಚಲವೀ ಮನವು ಕೃಷ್ಣ ಮದ್ದಾನೆಯ ಬಲವುಳ್ಳದ್ದು ಗಾಳಿಯ ಹಿಡಿದಷ್ಟೇ ಕಷ್ಟವು ಮನವ ತಡೆಯುವದು) ರಾಹತ್ ಫತೇ ಅಲೀಖಾನ್ ಹಾಡುಗಾರಿಕೆಗೆ ಮೊದಲು ಸೋತದ್ದು 'ದಿಲ್ ತೋ ಬಚ್ಚಾ ಹೈ ಜೀ' ಹಾಡನ್ನು ಕೇಳಿದಾಗ. ಗುಲ್ಜಾರ್ ಬರೆದ ಆ ಹಾಡಿನ ಸಾಲುಗಳು ಮತ್ತು ಅವುಗಳ ಅರ್ಥವನ್ನು ಹೊಮ್ಮಿಸುವ ರಾಹತ್ ಫತೇ ಅಲೀಖಾನನ ಹಾಡುಗಾರಿಕೆ ಒಂದಕ್ಕೊಂದು ಪೂರಕವಾಗಿ ಆ ಹಾಡನ್ನ ಮತ್ತೆ ಮತ್ತೆ ಕೇಳುವಂತೆ ಮಾಡಿದವು. ನಂತರದ ದಿನಗಳಲ್ಲಿ ದಬಂಗಿನ 'ತೆರೆ ಮಸ್ತ್ ಮಸ್ತ್ ದೋ ನೈನ್' ಕೂಡ ಮನಸೆಳೆದಿತ್ತು. ಯೂಟ್ಯೂಬಿನಲ್ಲಿ ಅದನ್ನು ಹುಡುಕಿ ಎಷ್ಟೋ ಸಲ ಕೇಳಿದೆ. ರಾಹತ್ ಹಾಡಿರುವ ಹಾಡುಗಳನ್ನೇ ಹುಡುಕಿಕೊಂಡು ಹೋದಾಗ ಸಿಕ್ಕ ಹಾಡು 'ಆಕ್ರೋಶ್' ಸಿನೆಮಾದ 'ಮನ್ ಕೆ ಮತ್ ಪೆ ಮತ್ ಚಲಿಯೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಬಾರಿ ಕೇಳಿರುವ, ಕೇಳುತ್ತಿರುವ ಹಾಡು. ಮನ್ ಕಿ ಮಂಡಿ ಮನ್ ವ್ಯಪಾರಿ ಮನ ಹಿ ಮನಕಾ ಮೋಲ್ ಕರೆ ಭೂಲಭಾಲಕೆ ನಫಾ ಮುನಾಫಾ ನೈನ್ ತರಾಜು ತೋಲ ಕರೆ (ಮನದಂಗಡಿ ಮನವ್ಯಾಪಾರಿ ಮನವೇ ಮನವನಳೆಯುವದು ಲಾಭಾಲಾಭಗಳ ತಕ್ಕಡಿ ಕಣ್ಣಳತೆಯಲೆ ತೂಗುವದು) ಎನ್ನುವ ಸಾಲುಗಳು ತಲೆದೂಗಿಸಿದರೆ, ಮುಂದೆ ಬರುವ ಸಾಲುಗಳು ಸೆರೆ ಹಿಡಿದವು. ಮನ ಕಿ ಮತ ಮೆ ಪ್ಯಾರ್ ಹೈ ಮೆಹೆಂಗಾ ಪ್ರಾನ್ ಟಕೆ ರೂಹ್ ಹೈ ಸಸ್ತೆ (ಮನಸಿನ ಲೆಕ್ಕದಿ ಒಲವಿಗೆ ಬೆಲೆ ಜೀವಕೆ ಕಾಸು ಆತುಮ ಸೋವಿ) ಈ ಮುಂದಿನ ಸಾಲುಗಳ ಗುಂಗು ಬಿಡುವದೇ ಇಲ್ಲವೇನೋ! ಮನಸೇ ಥೋಡಿ ಅನಬನ ರಖನಾ ಮನಕೆ ಆಗೆ ದರಪನ ರಖನಾ ಮನವಾ ಶಕಲ ಛುಪಾಲೇಗಾ (ಮನಸಿಗೆ ಅಂಟದೆ ಬಿಡು ಮನಸಿನ ಮುಂದೆ ಕನ್ನಡಿ ಇಡು ಮನಸೆ ಮುಖ ತಪ್ಪಿಸುವದು) 'ಅನಬನ' ಶಬ್ದ ನನಗೆ ಹೊಸತು. ಹಾಡಿದ ಸಂದರ್ಭಕ್ಕೆ ಹೊಂದಿಸಿಕೊಂಡು ಅದು 'detachment' ಎಂಬರ್ಥದಲ್ಲಿ ಪ್ರಯೋಗವಾಗಿರಬೇಕು ಅನಿಸಿದರೂ ಗೂಗಲೇಶ್ವರನ ಬೆನ್ನು ಹತ್ತಿ ಅದರ ಅರ್ಥವನ್ನು confirm ಮಾಡಿಕೊಳ್ಳುವವರೆಗೂ ಸಮಾಧಾನವಾಗಲಿಲ್ಲ. ಹಾಡು ಹತ್ತಿಸಿದ ಗುಂಗಿನಿಂದಾಗಿ ಬಹುಷಃ ಸಿನೆಮಾ ಕೂಡ ಚನ್ನಾಗಿರಬಹುದು ಅನಿಸಿ ಆಕ್ರೋಶ್ ಸಿನೆಮಾ ನೋಡಿದೆ. ಮೊದಲ ಹತ್ತು ನಿಮಿಷದಲ್ಲೆ ಇದು 'Mississipi Burning' ಚಿತ್ರದ ಭಾರತೀಯ ಅವತರಿಣಿಕೆ ಇದ್ದಂತಿದೆಯಲ್ಲ ಎಂಬ ಅನಿಸಿಕೆ ಮುಂದಿನ ಫ್ರೇಮು ಫ್ರೇಮಿನಲ್ಲೂ ಗಟ್ಟಿಯಾಗತೊಡಗಿದಂತೆ ಆ ಚಿತ್ರದ ಬಗ್ಗೆ ಪಿಚ್ಚೆನಿಸಿತು (ಕತೆಯ ಹಂದರ ಚನ್ನಾಗಿದೆ ಆದರೆ ಅದನ್ನು ಇಂಗ್ಲಿಷ ಸಿನೆಮಾದ ಅವತರಿಣಿಕೆಯಾಗದೆಯೂ ಒಂದು ಒಳ್ಳೆ ಚಿತ್ರವನ್ನಾಗಿ ಮಾಡಬಹುದಿತ್ತು ಅನಿಸಿತು). ಯೂ ಟ್ಯೂಬಿನಲ್ಲಿ ಈ ಹಾಡನ್ನು ಕೇಳಬಹುದು. ಕೊ.: ಹಾಡಿನ ಸಾಹಿತ್ಯ ಮತ್ತು ಇಂಗ್ಲೀಷ್ ಅನುವಾದ ಇಲ್ಲಿದೆ, ಹಾಡಿನ ಸಾಹಿತ್ಯ ಇರ್ಷಾದ್ ಕಮಿಲ್ ಅವರದು. ಕೊ.ಕೊ.: ಇದನ್ನು ಓದಿದ ನನ್ನ ಹೆಂಡತಿಯ ಅನಿಸಿಕೆಯಂತೆ ಮೊದಲಿಗೆ ಹಾಕಿದ ಗೀತೆಯ ಶ್ಲೋಕದ ಭಾವಾರ್ಥವನ್ನೂ ನನಗೆ ತಿಳಿದ ಮಟ್ಟಿಗೆ ಬರೆದಿರುವೆ.
Rating