ಮಲ್ಲೇಶ್ವರ ಚಲೋ .... ಇತ್ತು

ಮಲ್ಲೇಶ್ವರ ಚಲೋ .... ಇತ್ತು

ಚಲೋ ಮಲ್ಲೇಶ್ವರ - ೩.... ಮಲ್ಲೇಶ್ವರದಾಗೆ ಗೌಡಪ್ಪ - ಗಣೇಶ ಡಿಶು೦"ನಲ್ಲಿ ಬರುವ "ಹೊಯ್ಸಳ" ಹೋಟೆಲ್ ಇರುವ ಜಾಗದಲ್ಲಿ ಒಂದು ಕಾಲಕ್ಕೆ ಹಲವು ತಲೆಮಾರುಗಳು ಜೀವಿಸುತ್ತಿದ್ದ ಜೋಡಿ ಮನೆಯಿತ್ತು. ಒಂದರಲ್ಲಿ ನಮ್ಮ ತಾತನವರ ತಂಗಿಯ ಸಂಸಾರ. ಇನ್ನೊಂದರಲ್ಲಿ ಅವರ ಅಚ್ಚುಮೆಚ್ಚಿನ ಅಣ್ಣ-ಅತ್ತಿಗೆ. ಎಲ್ಲರಿಗೂ ತಮ್ಮ ಚಿಕ್ಕಂದಿನ ದಿನಗಳನ್ನು ನೆನಪಿಸುವ ಅಚ್ಚುಮೆಚ್ಚಿನ ಒಂದು ಬೀದಿ, ಒಂದು ಮನೆ, ಒಂದು ನೆರೆಹೊರೆಯಿರುತ್ತದೆ. ನನ್ನ ಪಾಲಿಗೆ ಬಂದದ್ದು ಆ ಮನೆ, ಆ ಬೀದಿ (೫ನೇ ಮತ್ತು ೪ನೇ ಅಡ್ಡರಸ್ತೆ), ಆ ನೆರೆಹೊರೆ. ನಮ್ಮ ತಾಯಿಯವರು ಬೆಳೆದದ್ದು, ಮದುವೆ ಆಗಿದ್ದು ಕೂಡ ಆ ಮನೆಯ ಅಂಗಳದಲ್ಲೆ! ಅದು ಅವರ ತವರು ಮನೆ. ನನಗೆ ಅಜ್ಜಿಯ ಮನೆ! ಎಷ್ಟೋ ಬಾರಿ ಪಕ್ಕದ ಶಿಶುವಿಹಾರದಿಂದ ಶಾಲೆ ಮುಗಿದ ಮೇಲೆ ಕೊಂಚ ದೂರದ ಶ್ರೀ ರಾಂ‌ಪುರದಲ್ಲಿದ್ದ ನಮ್ಮ ಮನೆಗೆ ಹೋಗುತ್ತಲೇ ಇರಲಿಲ್ಲ. ಅಜ್ಜಿ ಮನೆಯಲ್ಲೇ ಹಾಲ್ಟ್! ಎಲ್ಲಾ ಹಬ್ಬಗಳಿಗೆ ಅಲ್ಲಿ ಹಾಜರ್! ದಸರಾ ಮತ್ತು ಬೇಸಗೆ ರಜೆಯ ಎಷ್ಟೋ ದಿನಗಳು ಅಲ್ಲೇ! ಶಾಲೆಯ ಸಹಪಾಠಿಗಳೆಲ್ಲಾ ಆಸುಪಾಸಿನ ಮನೆಗಳಲ್ಲಿ. ಈಗ ಮಂತ್ರಿ ಮಾಲ್ ಇರುವಲ್ಲಿ ಇದ್ದ ರಾಜಾ ಮಿಲ್ಲ್ಸ್‌ನಲ್ಲಿ ನಮ್ಮ ತಾತನವರ ನೌಕರಿ. ದೊಡ್ಡ ಅಂಗಳದ ಆ ಸಣ್ಣ ಮನೆಯಲ್ಲಿ ಆದ ಹುಟ್ಟು-ಸಾವು ಮದುವೆ-ಮುಂಜಿ ಸೀಮಂತ-ಬಾಣಂತನ ತೊಟ್ಟಿಲು-ನಾಮಕರಣ ವ್ರತ-ಹಬ್ಬ ತಿಥಿಗಳೆಷ್ಟೋ! ಬೇಸಿಗೆಯಲ್ಲಿ ಅಜ್ಜಿ ಒಣಗಲು ಹಾಕುತ್ತಿದ್ದ ಹಪ್ಪಳ ಸಂಡಿಗೆ ಬಾಳಕ ಉಪ್ಪುಹಚ್ಚಿದ ಮೆಣಸಿನ ಕಾಯಿ, ಅವರು ನಾದಿನಿಯರು ಎಲ್ಲಾ ಸೇರಿ ಮಾಡುತ್ತಿದ್ದ ಅಕ್ಕಿ ಪುರಿ, ಅವಲಕ್ಕಿ ಪುರಿ ಇತ್ಯಾದಿಗಳು ಎಷ್ಟೋ! ಫಿಲ್ಲಿಪ್ಸ್ ರೇಡಿಯೋ ಮುಂದೆ ತಾತ, ಚಿಕ್ಕಪ್ಪ ಚಿಕ್ಕಮ್ಮ ಸೋದರ ಮಾವ, ಅತ್ತೆ, ಮತ್ತು ಒಡಹುಟ್ಟಿದವರು, ಕಸಿನ್ಸ್ ಹೀಗೆ ಮೂರು ತಲೆಮಾರಿನ ಮಂದಿ ಕೂತು ಕೇಳಿದ ಕ್ರಿಕೆಟ್ ಕಾಮೆಂಟರಿಗಳು, ಕನ್ನಡ ಸಿನೆಮಾ ಸೌಂಡ್ ಟ್ರ್ಯಾಕ್‌ಗಳು ಎಷ್ಟೋ! ಅಂಗಳದ ಒಂದು ತುದಿಯಿಂದ ಬೌಲಿಂಗ್ ಇನ್ನೊಂದು ತುದಿಯಲ್ಲಿದ್ದ ತುಳಸಿ ಕಟ್ಟೆಯ ಹಿಂಬಾಗವನ್ನೇ ವಿಕೆಟ್ ಮಾಡಿಕೊಂಡು ಆಡುತ್ತಿದ್ದ ಅಂಗಳದ ಕ್ರಿಕೆಟ್ಟಿಗೆ ಮತ್ತೆ ಎಲ್ಲಾ ತಲೆಮಾರಿನವರೂ ಸೇರುತ್ತಿದ್ದರು! ಹುಡುಗರೆಲ್ಲಾ ಸೀಬೆಕಾಯಿ ಮರ ಹತ್ತಿ ಮರಕೋತಿ ಆಡುತ್ತ ಪಕ್ಕದ ಮನೆಯ ತಾರಸಿಗೆ ಏರುತ್ತಿದ್ದೆವು. ಅಕ್ಕಪಕ್ಕದವರ ನಡುವೆ "ನಮ್ಮನೆ - ನಿಮ್ಮನೆ" ಎನ್ನುವ ಭಾವ ಆಗ ಅಷ್ಟಾಗಿ ಬೇಕಾಗಿರಲಿಲ್ಲ ಎನಿಸುತ್ತದೆ. ಕೆಲವೊಮ್ಮೆ ನಮ್ಮ ಅಜ್ಜಿ ಮತ್ತು ನೆರೆಮನೆಯ ಪಾಟಿ ತಮ್ಮ ಮನೆ-ಮನೆ ಕತೆ ವಿನಿಮಯ ಮಾಡಿಕೊಳ್ಳುತ್ತಿದ್ದರು. ಅಜ್ಜಿ ಕನ್ನಡದಲ್ಲಿ, ಪಾಟಿ ತಮಿಳಲ್ಲಿ ಮಾತಾಡುತ್ತಿದ್ದುರೂ ಸಂವಹನೆಗೆ ತೊಡಕು ಇರುತ್ತಿರಲಿಲ್ಲ. ಹಲವು ದಶಕಗಳ ಹಿಂದೆ ಬೆಂಗಳೂರಿನಲ್ಲಿ ತೀರಾ ಸಾಮಾನ್ಯವಾಗಿದ್ದ ಸುಸಂಸ್ಕೃತವಾದ ಮತ್ತು ನಿರಾಡಂಬರವಾದ ಜೀವನಕ್ಕೆ ದ್ಯೋತಕವಾಗಿದ್ದ ಆ ಮನೆ, ಆ ಜನ, ಆ ಬೀದಿ ಮತ್ತು ಆ ನೆರೆಹೊರೆ! ಈಗ ಇಲ್ಲ. ದೊಡ್ಡ ಅಂಗಳದ ಸಣ್ಣ ಮನೆಗಳನ್ನು ನುಂಗಿದ ಕಾಂಕ್ರೀಟ್ ದೈತ್ಯಾಕಾರಗಳು ತಿಂದು ಹೆಚ್ಚಾಗಿ ತುಂಬಾ ಮೈ ಬಂದ ಅನಾರೋಗ್ಯದಂತೆ ಕಾಣುತ್ತವೆ. ಈಗ ಮಲ್ಲೇಶ್ವರದ ಐದನೆ ಅಡ್ಡರಸ್ತೆಯನ್ನು ಹಾದು ಹೋಗಬೇಕಾದಾಗೆಲ್ಲಾ... ಮಲ್ಲೇಶ್ವರ ಮೆಜೆಸ್ಟಿಕ್ ಆಗಿಹೋಗಿದೆ ಎನ್ನಿಸುತ್ತದೆ! ಪ್ರಭು
Rating
No votes yet

Comments