ಚಲೋ ಮಲ್ಲೇಶ್ವರ ೬

ಚಲೋ ಮಲ್ಲೇಶ್ವರ ೬

ಮರದ ಕಡೆ ನೋಡುತ್ತಿರುವ ಗುಂಪಿನ ಕೇಂದ್ರಬಿಂದು ಚೇತನ ಎಂದು ಜಯಂತನಿಂದ ಗೊತ್ತಾದ ಮೇಲೆ, ಗುಂಪಿನ ನಡುವೆ ನುಸುಳಿ, ಆತನನ್ನು ಎಳಕೊಂಡು ಬಂದೆ. " ಸಮಯ ತುಂಬಾ ಆಗಿದೆ. ಮಂತ್ರಿ ಮಾಲ್ ಬೇಗ ಸುತ್ತು ಹಾಕಿ ಬರೋಣ" ಎಂದೆ. " ಬೇಡ, ನಾವಿಬ್ಬರೂ ಆಗಲೇ ನೋಡಿಯಾಗಿದೆ. ಮುಂದೆ ಹೋಗೋಣ" ಅಂದ ಜಯಂತ.(ದೇವಸ್ಥಾನ ಸುತ್ತು ಹಾಕುವ ಆತುರದಲ್ಲಿದ್ದಾನೆ ಕಾಣುತ್ತದೆ :( .)


ಮಂತ್ರಿಮಾಲ್‌ನಿಂದಾಗಿ ಮಲ್ಲೇಶ್ವರದ ಟ್ರಾಫಿಕ್‌ಗೆ ಆಗಿರುವ ತೊಂದರೆ ಬಗ್ಗೆ ಮಾತನಾಡುತ್ತಾ, ಮುಂದೆ ಬರುತ್ತಿರುವಾಗ, ೩ನೇ ಕ್ರಾಸ್‌ನ ಬಲಕ್ಕಿರುವ "ಹಳ್ಳಿಮನೆ" ಹೋಟಲ್ ಕಂಡಿತು. ಆಗಲೇ ೧೦೮+೧೦೮+೧೦೮ ಸುತ್ತು ಹೊಡೆದುದನ್ನು ನೋಡಿ ಬಳಲಿರುವ ನನ್ನ ಹೊಟ್ಟೆ ತಾಳಹಾಕುತ್ತಿತ್ತು. ಒಳಹೋಗಿ ತಾಳಕ್ಕೆ ತಕ್ಕ ಹಾಗೆ mealಅ ಮುಗಿಸಿ ಹೊರಬಂದೆವು.


ನಮ್ಮ ಪಯಣ ಅದೇ ಸಂಪಿಗೆ ರಸ್ತೆಯಲ್ಲಿ ಮುಂದುವರಿಯಿತು." ಇದೇ ನೋಡಿ ಮಲ್ಲೇಶ್ವರ ೫ನೇ ಕ್ರಾಸ್. ಮಲ್ಲೇಶ್ವರ ಸರ್ಕಲ್ ಅಂದೂ ಕರೆಯುತ್ತಾರೆ. ಇಲ್ಲೇ ಎಡಬದಿಯಲ್ಲಿ ಮುಂದಕ್ಕೆ ಪೋಲೀಸ್ ಸ್ಟೇಶನ್, ಪಕ್ಕದಲ್ಲಿ ಇಲ್ಲಿನ ಹೆಸರುವಾಸಿ KCG ಆಸ್ಪತ್ರೆ, ಎದುರಿಗೆ ಆಟದ ಮೈದಾನವಿದೆ.ಈ ಓವರ್ ಬ್ರಿಡ್ಜ್, ಇಲ್ಲಿನ ಕಟ್ಟಡಗಳನ್ನು ನೋಡುವಾಗ, ಕೇವಲ ಕೆಲವೇ ವರ್ಷಗಳ ಹಿಂದೆ ಸ್ಟೇಶನ್ ಎದುರು ರಸ್ತೆಯ ಬಲಬದಿಯಲ್ಲಿ ಟಾಂಗಾ ನಿಲ್ದಾಣವಿತ್ತು ಎಂದು ನಂಬಲೂ ಆಗುವುದಿಲ್ಲ. ಇಲ್ಲ.. ಇಲ್ಲ.. ನಾವು ಅಲ್ಲಿಗೆ ಹೋಗಲಿಕ್ಕಿಲ್ಲ. ನಾವು ಇದೇ ರಸ್ತೆಯಲ್ಲಿ ಮುಂದೆ ಹೋಗೋಣ." ಸಿನೆಮಾಗಳಲ್ಲಿ ಆಗುವಂತೆ ಇಲ್ಲೂ ಇದ್ದಕ್ಕಿದ್ದಂತೆ ಮೋಡ ಕವಿದು, ಮಳೆ ಬರಲು ಶುರುವಾಯಿತು. "ಮಳೆ ನಿಲ್ಲುವವರೆಗೆ ಪುನಃ ಹಳ್ಳಿಮನೆಗೆ ಹೋಗೋಣವಾ" ಎಂದು ಹೇಳಿದಾಗ ಗಾಬರಿಯಿಂದ ನನ್ನ ಹೊಟ್ಟೆ ನೋಡುತ್ತಾ ಚೇತನ "ಬೇಡ, ಬೇಡ. ನಾನು ಮಳೆನಾಡಿನವ, ಈ ಮಳೆ ಯಾವ ಲೆಕ್ಕ?" ಅಂದರೆ ಜಯಂತನೂ " ನಾನು ಮಡಿಯವ. ಮಳೆಬಿದ್ದರೆ ಇನ್ನೂ ಚೆನ್ನ. ನಮ್ಮ ಪಯಣ ಮುಂದುವರಿಸೋಣ"ಅಂದ.


ಮೆಜಾರಿಟಿ ಮಾತಿಗೆ ಬೆಲೆ ಕೊಟ್ಟು ಎರಡು ಹೆಜ್ಜೆ ಮುಂದೆ ಇಟ್ಟಿದ್ದೇನೋ ಇಲ್ಲವೋ, ಒಂದು ಕಾರು ಹಿಂದಿನಿಂದ ಬಂದು ನನಗೆ ಗುದ್ದಿತು.. ಗುದ್ದಿದ ರಭಸಕ್ಕೆ ಕಾರಿನ ಬಾನೆಟ್ ತೆರೆದು, ಕಾರು "ಆ" ಎಂದು ಬಾಯಿ ತೆರೆದು ಆಶ್ಚರ್ಯದಿಂದ ಇರುವಂತೆ ಕಾಣಿಸಿತು! ನನಗೆ ಏಟು ಏನೂ ಆಗಿಲ್ಲ ಎಂದು ಖಾತ್ರಿ ಮಾಡಿಕೊಂಡ ಜಯಂತ್ ಮತ್ತು ಚೇತನ ಕಾರಿನವನ ಮೇಲೆ ಜಗಳಕ್ಕೆ ಹೊರಟರು. ನಾನೇ ತಡೆದು "ಈ ಜನ ಈದಿನವೂ, ಕನ್ನಡಕ ಇಲ್ಲದೇ ಮಳೆಯಲ್ಲಿ ಕಾರು ಡ್ರೈವ್ ಮಾಡಿಕೊಂಡು ಬಂದರು. ರಾಮಮೋಹನ್ ಇರಬೇಕು ನೋಡಿ"ಎಂದೆ. "ಹೌದ್ರೀ, ನಿಮಗೆ ಹೇಗೆ ಗೊತ್ತಾಯಿತು?" "ಹ್ಹ ಹ್ಹ..ಅದೇ ಒಂದು ಸಿನೆಮಾ ಕತೆ..ಕಾರನ್ನು ಸೈಡ್‌ಗೆ ಪಾರ್ಕ್ ಮಾಡಿಸಿ ರಾಮ್ ಮೋಹನರನ್ನು ಕರಕೊಂಡು ಬನ್ನಿ"


ಸ್ವಲ್ಪ ಹೊತ್ತಿಗೆ ರಾಮ್ ಮೋಹನರು ಬಂದು "ಗೊತ್ತಿಲ್ಲದೇ ನಿಮ್ಮ ಕಾರಿಗೆ ಡ್ಯಾಶ್ ಹೊಡೆದೆ.."


"ಕಾರಿಗಲ್ರೀ ನನಗೇ ಗುದ್ದಿದ್ದು. ಪರವಾಗಿಲ್ಲ, ಮುಂದೆ ಹೋಗೋಣ್ವಾ? "ಅಂದೆ


"ಇಲ್ರೀ..ನೀವು ಮುಂದುವರೆಸಿ. ನನ್ನ ಕಾರಿನ ಬಾನೆಟ್ ಮುಚ್ಚಲಾಗುತ್ತಿಲ್ಲ. ಯಾರಾದರೂ ಮ್ಯಕಾನಿಕ್‌ನ ಕರಕೊಂಡು ಬಂದು ರಿಪೇರಿ ಮಾಡಿಸಬೇಕು."


"ತಡೀರಿ. ಅಲ್ಪ ಸ್ವಲ್ಪ ಮೆಕಾನಿಕ್ ಕೆಲಸ ನನಗೂ ಬರುತ್ತದೆ. ನೋಡುತ್ತಾ ಇರಿ. ಎರಡೇ ನಿಮಿಷ.." ಅಂದು ಕಾರಿನ ಬಳಿ ಹೋಗಿ, ಕಿಟಕಿ ಇಳಿಸಿ," ಬಾಯಿಮುಚ್ಚಿದರೆ ಸರಿ. ಇಲ್ಲದಿದ್ದರೆ ಕಾರಿನ ಒಳಗೆ ಬಂದು ಕುಳಿತುಕೊಳ್ಳುವೆ" ಅಂದೆ. ಕಾರು ಓರೆಗಣ್ಣಲ್ಲಿ ನನ್ನನ್ನು ನೋಡಿದ್ದೇ, ಟಪ್ ಅಂತ ಬಾನೆಟ್ ಮುಚ್ಚಿಕೊಂಡಿತು. ಚೇತನ್ ಮತ್ತು ಜಯಂತ್ ಕಿಟಕಿಯ ಬಳಿ ಯಾವ ಸ್ವಿಚ್ ಇದೆಯೆಂದು ಹುಡುಕುತ್ತಾ ಇದ್ದರು.


ಬೇಗ ಬನ್ನಿ ಹೀಗೇ ನಿದಾನವಾದರೆ ನಾವು ಚಲೋ ಮಲ್ಲೇಶ್ವರ ಮುಗಿಸುವುದು ಯಾವಾಗಾ?


-ಗಣೇಶ.


ಚಲೋ ಮಲ್ಲೇಶ್ವರ -  http://sampada.net/blog/%E0%B2%9A%E0%B2%B2%E0%B3%8B-%E0%B2%AE%E0%B2%B2%E0%B3%8D%E0%B2%B2%E0%B3%87%E0%B2%B6%E0%B3%8D%E0%B2%B5%E0%B2%B0/23/08/2011/33043


ಚಲೋಮಲ್ಲೇಶ್ವರ ೨- http://sampada.net/blog/%E0%B2%9A%E0%B2%B2%E0%B3%8B-%E0%B2%AE%E0%B2%B2%E0%B3%8D%E0%B2%B2%E0%B3%87%E0%B2%B6%E0%B3%8D%E0%B2%B5%E0%B2%B0-%E0%B3%A8/25/08/2011/33055


ಚಲೋ ಮಲ್ಲೇಶ್ವರ ೩- (ಮಂಜುನಾಥರು ಬರೆದದ್ದು) -  http://sampada.net/blog/%E0%B2%9A%E0%B2%B2%E0%B3%8B-%E0%B2%AE%E0%B2%B2%E0%B3%8D%E0%B2%B2%E0%B3%87%E0%B2%B6%E0%B3%8D%E0%B2%B5%E0%B2%B0-%E0%B3%A9-%E0%B2%AE%E0%B2%B2%E0%B3%8D%E0%B2%B2%E0%B3%87%E0%B2%B6%E0%B3%8D%E0%B2%B5%E0%B2%B0%E0%B2%A6%E0%B2%BE%E0%B2%97%E0%B3%86-%E0%B2%97%E0%B3%8C%E0%B2%A1%E0%B2%AA%E0%B3%8D%E0%B2%AA-%E0%B2%97%E0%B2%A3%E0%B3%87%E0%B2%B6-%E0%B2%A1%E0%B2%BF%E0%B2%B6%E0%B3%81%E0%B3%A6-%E0%B2%A1%E0%B2%BF%E0%B2%B6%E0%B3%81%E0%B3%A6/25/08/2011/33067


ಚಲೋಮಲ್ಲೇಶ್ವರ ೪- http://sampada.net/blog/%E0%B2%9A%E0%B2%B2%E0%B3%8B-%E0%B2%AE%E0%B2%B2%E0%B3%8D%E0%B2%B2%E0%B3%87%E0%B2%B6%E0%B3%8D%E0%B2%B5%E0%B2%B0-%E0%B3%AA/27/08/2011/33094


ಚಲೋ ಮಲ್ಲೇಶ್ವರ ೫- (ಬಿಡುಗಡೆಗೆ  ಸಿದ್ಧವಾಗಿದೆ)


ಮಲ್ಲೇಶ್ವರ ಚಲೋ..ಇತ್ತು- ಪ್ರಭು ಅವರ ಲೇಖನ-  http://sampada.net/blog/%E0%B2%AE%E0%B2%B2%E0%B3%8D%E0%B2%B2%E0%B3%87%E0%B2%B6%E0%B3%8D%E0%B2%B5%E0%B2%B0-%E0%B2%9A%E0%B2%B2%E0%B3%8B-%E0%B2%87%E0%B2%A4%E0%B3%8D%E0%B2%A4%E0%B3%81/28/08/2011/33120#comment-148336


 

Rating
No votes yet

Comments