ಪ್ರಾಣಿಗಳ ಜೊತೆ ಒಂದು ದಿನ

ಪ್ರಾಣಿಗಳ ಜೊತೆ ಒಂದು ದಿನ

ಮೂವತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಇದ್ದರೂ ಒಮ್ಮೆಯಾದರೂ ಬೆಂಗಳೂರಿಗೆ ಕೇವಲ ೨೫-೩೦ ಕಿ.ಮೀ ಅಂತರದಲ್ಲಿರುವ ಬನ್ನೇರುಘಟ್ಟ ಉದ್ಯಾನವನಕ್ಕೆ ಭೇಟಿ ನೀಡಲು ಆಗಿರಲಿಲ್ಲ. ಎಷ್ಟೋ ಸಲ ಹೋಗೋಣ ಎಂದುಕೊಂಡರೂ ಯಾರೋ ಒಬ್ಬರು ಅಯ್ಯೋ ಅಲ್ಲೇನಿದೆ ನೋಡಕ್ಕೆ ಎನ್ನುತ್ತಿದ್ದರು. ಹಾಗಾಗಿ ನಾನೂ ಸುಮ್ಮನಾಗಿ ಬಿಡುತ್ತಿದ್ದೆ. ಮದುವೆಯಾದ ಮೇಲೆ ಹೆಂಡತಿ ಬಹಳ ದಿನದಿಂದ ಬನ್ನೆರುಘಟ್ಟಕ್ಕೆ ಹೋಗೋಣ ಎನ್ನುತ್ತಿದ್ದರೂ ಕಿವಿಗೆ ಹಾಕಿಕೊಂಡಿರಲಿಲ್ಲ. ಕಳೆದ ಶನಿವಾರ ರಾತ್ರಿ ನಾಳೆ ಎಲ್ಲಪ್ಪ ಕರೆದುಕೊಂಡು ಹೋಗುವುದು ಎಂದು ಯೋಚಿಸುತ್ತಿದ್ದಾಗ ಸರಿ ಒಮ್ಮೆ ಹೋಗಿ ನೋಡಿಯೇ ಬಿಡೋಣ ಬನ್ನೆರುಘಟ್ಟಕ್ಕೆ ಎಂದು ನಿರ್ಧರಿಸಿ ಹೆಂಡತಿಗೆ ಎಲ್ಲಿಗೆ ಎಂದು ಹೇಳದೆ ಸುಮ್ಮನೆ ಬೆಳಿಗ್ಗೆ ಬೇಗನೆ ಸಿದ್ಧವಾಗು ಆಚೆ ಹೋಗೋಣ ಎಂದೆ. ಮಾರನೆಯ ದಿನ ಬೆಳಿಗ್ಗೆ ಬೇಗನೆ ಎದ್ದು ಸಿದ್ಧವಾಗಿ ತಿಂಡಿ ತಿಂದು ಮನೆ ಬಿಡುವಷ್ಟರಲ್ಲಿ ಸಮಯ ೧೦-೧೫ ಆಗಿತ್ತು. ನನ್ನ ಹೆಂಡತಿ ಎರಡು ಮೂರು ಬಾರಿ ಎಲ್ಲಿಗೆ ಎಂದು ಕೇಳಿದರೂ ಗೊತ್ತಿಲ್ಲ ಸುಮ್ಮನೆ ಹೋಗುತ್ತಿರುವುದು ಎಂದು ಹೇಳಿ ಗಾಡಿ ಓಡಿಸುತ್ತಿದ್ದೆ. ಜೆ.ಪಿ.ನಗರ ದಾಟಿ ಬಲಕ್ಕೆ ತಿರುಗುವಾಗ ಅಲ್ಲಿದ್ದ ಮಾರ್ಗಸೂಚಿ ಫಲಕದಲ್ಲಿದ್ದ ಬನ್ನೇರುಘಟ್ಟ ಹೆಸರನ್ನು ನೋಡಿ ಅವಳಿಗೆ ಗೊತ್ತಾಯಿತು.


ನಾವು ಬನ್ನೇರುಘಟ್ಟ ಉದ್ಯಾನವನ ತಲುಪಿದಾಗ ೧೧.೩೦ ಆಗಿತ್ತು. ರೂ ನಿಲುಗಡೆ ದರ ನೀಡಿ ಒಳಗಡೆ ಹೋಗಿ ನನ್ನ ಗಾಡಿ ನಿಲ್ಲಿಸಿ ಮುಖ್ಯ ಟಿಕೆಟ್ ಕೌಂಟರಿನ ಬಳಿ ಬಂದೆ. ಭಾನುವಾರವಾದ್ದರಿಂದ ಜನಸಂದಣಿ ಸ್ವಲ್ಪ ಹೆಚ್ಚೇ ಇತ್ತು. ಅಲ್ಲಿದ್ದ ಫಲಕದಲ್ಲಿ ಮೃಗಾಲಯ -೪೫, ಗ್ರಾಂಡ್ ಸಫಾರಿ -೧೬೦, ಕಾಡಿನಲ್ಲಿ ನಡಿಗೆ -೭೦, ಆನೆ ಸವಾರಿ -೬೫ ಹೀಗೆ ವಿವಿಧ ಬಗೆಯ ದರಪಟ್ಟಿ ಇತ್ತು. ನಾನು ಮೊದಲನೇ ಬಾರಿ ಬರುತ್ತಿರುವುದರಿಂದ ಯಾವುದಕ್ಕೆ ಹೋಗುವುದು ಎಂದು ಸ್ವಲ್ಪ ಗೊಂದಲ ಉಂಟಾಯಿತು. ನಂತರ ಯೋಚಿಸಿದೆ ಬರೀ ಮೃಗಾಲಯ ತೆಗೆದುಕೊಂಡರೆ ಬೋನಿನಲ್ಲಿರುವ ಪ್ರಾಣಿಗಳನ್ನು ನೋಡಬೇಕಷ್ಟೇ, ಕಾಡಿನಲ್ಲಿ ನಡಿಗೆ ಅದು ಮಧ್ಯಾಹ್ನ .೩೦-.೩೦ ಇದ್ದದ್ದರಿಂದ ಅದಕ್ಕೆ ಕಾಯುವಷ್ಟು ವ್ಯವಧಾನ ಇರಲಿಲ್ಲ, ಇನ್ನು ಆನೆ ಸವಾರಿ ಪ್ರಾಣಿ ಹಿಂಸೆ ಇಷ್ಟವಿರಲಿಲ್ಲ...ಹೀಗಾಗಿ ಗ್ರಾಂಡ್ ಸಫಾರಿ ಟಿಕೆಟ್ ತೆಗೆದುಕೊಂಡು ಒಳಗಡೆ ಅಡಿ ಇಟ್ಟೆವು. ಒಳಗಡೆ ಅಡಿ ಇತ್ತ ತಕ್ಷಣ ಅಲ್ಲೊಂದು ಫಲಕವಿತ್ತು. ಅದರಲ್ಲಿ ಪ್ಲಾಸ್ಟಿಕ್ ತಿಂದು ಮೃತಪಟ್ಟ ಜಿಂಕೆಯ ಚಿತ್ರವೊಂದನ್ನು ಹಾಕಿ ದಯವಿಟ್ಟು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿಸಾಡಬೇಡಿ ಎಂಬ ಮಾಹಿತಿ ಇತ್ತು. ಅದರ ಪಕ್ಕದಲ್ಲೇ ಒಂದು ಮೇಜನ್ನು ಹಾಕಿಕೊಂಡು ಒಳಗೆ ಬರುವ ಜನರ ಬಳಿ ತಿನ್ನುವ ವಸ್ತುಗಳೆನಾದರೂ ಪ್ಲಾಸ್ಟಿಕ್ ಕವರಿನ ಒಳಗಿದ್ದರೆ ಅದನ್ನು ತೆಗೆದುಕೊಂಡು ತಿನಿಸನ್ನು ಪ್ಲಾಸ್ಟಿಕ್ ಕವರಿನಿಂದ ಪೇಪರ್ ಚೀಲಕ್ಕೆ ಹಾಕಿ ಕೊಡುತ್ತಿದ್ದರು. ಮೊದಲು ಸಫಾರಿ ಮುಗಿಸಿಕೊಂಡು ಬಂದು ನಂತರ ಮೃಗಾಲಯ ನೋಡಲು ಹೋಗೋಣವೆಂದು ನಿರ್ಧರಿಸಿ ಸಾಲಿನಲ್ಲಿ ನಿಂತೆವು. ಖೈದಿಗಳನ್ನು ಕುಳ್ಳಿರಿಸಿಕೊಂಡು ಹೋಗುವ ವಾಹನದಂತಿರುವ ಒಂದು ವಾಹನ ಬಂದಿತು. ಒಂದರಲ್ಲಿ ಮೂವತ್ತು ಜನದಂತೆ ತುಂಬಿಸಿ ಹೊರಡುತ್ತಿದ್ದ. ನಾವು ಗಾಡಿ ಹತ್ತುವ ವೇಳೆಗೆ ಬಹುತೇಕ ಎಲ್ಲ ಆಸನಗಳು ಭರ್ತಿಯಾಗಿದ್ದವು. ನಮ್ಮ ಅದೃಷ್ಟವೆಂಬಂತೆ ಡ್ರೈವರ್ ಪಕ್ಕದ ಎರಡು ಆಸನಗಳು ಖಾಲಿ ಇದ್ದವು. ಅಲ್ಲೇ ಕುಳಿತೆವು. ಅಷ್ಟು ದುಡ್ಡು ಕೊಟ್ಟು ಸಫಾರಿ ಗೆ ಬಂದಿದ್ದೇನೆ. ಅಕಸ್ಮಾತ್ ಪ್ರಾಣಿಗಳು ಕಾಣಿಸದಿದ್ದರೆ ವ್ಯರ್ಥ ಎಂದುಕೊಳ್ಳುತ್ತಿದ್ದೆ. ಏಕೆಂದರೆ ಕಳೆದ ಬಾರಿ ನಾನು ಸ್ನೇಹಿತರೊಡನೆ ಭದ್ರ ಅಭಯಾರಣ್ಯಕ್ಕೆ ಹೋಗಿದ್ದಾಗ  ದಟ್ಟ ಕಾಡಿನಲ್ಲಿ ಸುಮಾರು ೩೦ ಕಿ.ಮೀ ನಷ್ಟು ಹೋದರು ಒಂದೇ ಒಂದು ಕಾಡು ನಾಯಿ ಸಹ ಕಂಡಿರಲಿಲ್ಲ. ಇಲ್ಲೂ ಅದೇ ರೀತಿ ಆಗಬಾರದೆಂದು ಎಲ್ಲಾದರೂ ಪ್ರಾಣಿಗಳು ಕಾಣಿಸುತ್ತವ ಎಂದು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದೆ. ಗಾಡಿ ಹೋರಾಟ ಐದೇ ನಿಮಿಷದಲ್ಲಿ ಅಲ್ಲೇ ರಸ್ತೆಯ ಪಕ್ಕದಲ್ಲಿ ನಿಂತು ಹುಲ್ಲನ್ನು ತಿನ್ನುತ್ತಿದ್ದ ಜಿಂಕೆಗಳು ಕಂಡವು. ಕ್ಯಾಮೆರ ಸಿದ್ಧವಾಗಿ ಇಟ್ಟುಕೊಂಡಿದ್ದೆ ಕೂಡಲೇ ಅದರ ಚಿತ್ರಗಳನ್ನು ತೆಗೆದುಕೊಂಡು ಹಾಗೆ ಮುಂದೆ ಬಂದರೆ ಅಲ್ಲೊಂದು ದೊಡ್ಡ ಗೇಟ್ ಇತ್ತು ಅದರ ಮೇಲೆ ಕರಡಿ ಸಫಾರಿ ಎಂದಿತ್ತು. ಪಕ್ಕದಲ್ಲಿದ್ದ ಡ್ರೈವರ್ ನನ್ನು ಕೇಳಿದೆ ಇದೇನು ಒಂದೊಂದಕ್ಕೆ ಒಂದೊಂದು ಜಾಗ ಇದೆಯಾ ಎಂದಾಗ ಹೌದು ಕರಡಿ, ಹುಲಿ, ಸಿಂಹ, ಜಿಂಕೆ ಎಲ್ಲಕ್ಕೂ ಪ್ರತ್ಯೇಕ ಜಾಗಗಳಿವೆ. ಎಂದು ಗೇಟ್ ಒಳಗೆ ನಮ್ಮ ಗಾಡಿ ಹೋದಾಗ ನಮ್ಮ ಗಾಡಿಗೆ ಎದುರಾಗಿ ಒಂದು ಕರಡಿ ಬರುತ್ತಿದ್ದು ಕಂಡು ಏನೋ ಒಂದು ರೀತಿ ಪುಳಕ ಉಂಟಾಯಿತು. ಕ್ಯಾಮೆರ ಮಾತ್ರ ವಿಶ್ರಾಂತಿ ಇರದೇ ಕೆಲಸ ಮಾಡುತ್ತಿತ್ತು. ಜಿಂಕೆ ಆಯಿತು, ಕರಡಿ ಆಯಿತು ಇನ್ನು ಮುಂದೇನು ಎಂದುಕೊಳ್ಳುತ್ತಿದ್ದಾಗಲೇ ದೊಡ್ಡ ಫಲಕ ಕಣ್ಣಿಗೆ ಬಿಟ್ಟು. ಹುಲಿ ಸಿಂಹ ಸಫಾರಿ ಎಂದು. ಫಲಕ ಕಂಡ ಕೂಡಲೇ ಏನೋ ಒಂದು ರೀತಿ ಹೊಸ ಉತ್ಸಾಹ ಬಂತು, ಕಣ್ಣುಗಳು ಚುರುಕಾದವು ಸ್ವಲ್ಪವೇ ಮುಂದೆ ಬಂದಿದ್ದು. ಕೂಡಲೇ ಕಂಡವು ನೋಡಿ ಸಿಂಹಿಣಿಗಳು. ಆಹಾ ಒಂದಲ್ಲ ಎರಡಲ್ಲ ಐದಾರು ಎಲ್ಲ ಅಲ್ಲಲ್ಲೇ ಒಟ್ಟಿಗೆ ದರ್ಶನ ಕೊಟ್ಟವು. ಹಾಗೆ ಮುಂದೆ ಬಂದಾಗ ಮತ್ತೊಂದು ಸಿಂಹಿಣಿ ನಮ್ಮ ಗಾಡಿಗೆ ಎದುರಾಗಿ ರಸ್ತೆಯಲ್ಲಿ ಇತ್ತಿಂದ ಅತ್ತ ಅತ್ತಿಂದಿತ್ತ ಓಡಾಡುತ್ತಿತು. ಎಲ್ಲವನ್ನೂ ಕ್ಯಾಮೆರಾದಲ್ಲಿ ಬಂಧಿಸಿ ಮುಂದೆ ಸಾಗಿದರೆ ಹುಲಿ ಸಫಾರಿ ಎದುರಾಯಿತು. ಮೊದಲಲ್ಲೇ ಎರಡು ಬಿಳಿ ಹುಲಿಗಳ ದರ್ಶನವಾಯಿತು. ಎರಡು ಬಿಳಿ ಹುಲಿಗಳೂ ತಮ್ಮ ಮಧ್ಯಾಹ್ನದ ಭೋಜನ ಮುಗಿಸಿ ವಿಶ್ರಾಂತಿ ಪಡೆಯುತ್ತಿತ್ತು. ಹುಲಿಯ ಆಕಾರವೇ ಭಯ ಹುಟ್ಟಿಸುವಂಥದ್ದು. ಎತ್ತರ, ಗಾತ್ರ, ಕಣ್ಣುಗಳು ಅಬ್ಬಬ್ಬ..ಅಲ್ಲಿಂದ ಮುಂದೆ ಹೋದಾಗ ಕಣ್ಣಿಗೆ ಬಿಟ್ಟು ನೋಡಿ "ರಾಯಲ್ ಬೆಂಗಾಲ್" ಹುಲಿ ಅದರ ಗಾಂಭೀರ್ಯವೇ ಗಾಂಭೀರ್ಯ. ಅದರ ಮುಖವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಎಷ್ಟೋ ಪ್ರಯತ್ನ ಪತ್ತೆ. ಆದರೆ ಸಾಧ್ಯವಾಗಲಿಲ್ಲ. ಹಾಗೆ ಗಾಡಿ ತಿರುಗಿಸಿದ ಡ್ರೈವರ್ ಅಲ್ಲೇ ಪಕ್ಕದಲ್ಲಿದ್ದ ಹುಲಿ ಮನೆಗಳ ಮುಂದೆ ನಿಲ್ಲಿಸಿದ. ಒಂದು ತಿಂಗಳ ಹಿಂದಷ್ಟೇ ಹುಟ್ಟಿದ ಎರಡು ಪುಟ್ಟ ಹುಲಿಮರಿಗಳು ಓಡಾಡುತ್ತಿದ್ದವು. ಮರಿಗಳನ್ನು ಸೇರಿಸಿ ಒಟ್ಟು ಮೂವತ್ತು ಹುಲಿಮರಿಗಳು ಇವೆಯಂತೆ ಬನ್ನೇರುಘಟ್ಟದಲ್ಲಿ. ಒಂದು ದಿವಸಕ್ಕೆ ಒಂದು ಹುಲಿ ಸಂಸಾರವನ್ನು ಮಾತ್ರ ಆಚೆ ಬಿಡುತ್ತಾರಂತೆ. ಎರಡು ಸಂಸಾರಗಳನ್ನು ಬಿಟ್ಟರೆ ಅದರಲ್ಲೇ ಕಿತ್ತಾಟಗಳು ಆಗುತ್ತವೆಯಂತೆ.

ಹುಲಿಯನ್ನು ನೋಡುವುದರೊಂದಿಗೆ ಗ್ರಾಂಡ್ ಸಫಾರಿ ಕೊನೆಗೊಳ್ಳುತ್ತದೆ. ನಿಜವಾಗಿಯೂ ಸಾರ್ಥಕವಾಗಿತ್ತು. ಅಲ್ಲಿಂದ ಮತ್ತೆ ಮೃಗಾಲಯಕ್ಕೆ ಭೇಟಿ ಕೊಟ್ಟೆವು ಅಲ್ಲಿ ವಿವಿಧ ಬಗೆಯ ಸರ್ಪಗಳು, ಪಕ್ಷಿಗಳು, ನವಿಲುಗಳು, ಮೊಸಳೆಗಳು, ನೀರುಕುದುರೆ, ಕೋತಿಗಳು, ಚಿರತೆಗಳು, ಆನೆ ಎಲ್ಲವೂ ಇದ್ದವು. ಆದರೆ ಅವೆಲ್ಲವನ್ನೂ ಬಂಧನದಲ್ಲಿಟ್ಟಿದ್ದಂತೆ ಭಾಸವಾಗುತ್ತಿತ್ತು. ಆನೆಗಳ ಜಾಗದಲ್ಲಿ ಸ್ವಲ್ಪ ಹೊತ್ತು ನಿಂತೆವು. ಅಲ್ಲಿ ಆನೆಗಳ ಮೇಲೆ ಸವಾರಿ ಮಾಡಲು ಜನ ಉಲ್ಲಾಸದಿಂದ ಹೋಗುತ್ತಿದ್ದನ್ನು ನೋಡಿ ಬೇಸರವಾಯಿತು. ಏಕೆಂದರೆ ಅಲ್ಲಿ ಸವಾರಿ ಮಾಡುತ್ತಿದ್ದ ಆನೆಗಳೆಲ್ಲವೂ ಹೆಚ್ಚು ಕಡಿಮೆ ಮುದಿ ಆನೆಗಳುಅಲ್ಲೇ ಪಕ್ಕದಲ್ಲಿ ಜೀಬ್ರ ಇತ್ತು. ಅಲ್ಲಿ ಸುತ್ತಲೂ ಬೇಲಿಯನ್ನು ಹಾಕಿರುವುದು ಏನಕ್ಕೆ ಪ್ರಾಣಿಗಳಿಂದ ನಮಗೆ ತೊಂದರೆ ಆಗದಿರಲಿ ಮತ್ತು ನಮ್ಮಿಂದ ಪ್ರಾಣಿಗಳಿಗೆ ತೊಂದರೆ ಆಗದಿರಲಿ ಎಂದು. ಅಷ್ಟು ಸಾಮಾನ್ಯ ಜ್ಞಾನ ಇಲ್ಲದ ಮಾನವ ಕೋತಿಯೊಂದು ಬೇಲಿಯ ಒಳಗೆ ಕೈ ತೂರಿಸಿ ಜೀಬ್ರದ ಹತ್ತಿರ ಏನೋ ಮಾಡುತ್ತಿದ್ದ. ಇದ್ದಕ್ಕಿದ್ದಂತೆ ಅದು ಅವನ ಕೈಯನ್ನು ಬಾಯಿಂದ ಹಿಡಿದು ಬಿಟ್ಟಿತು. ಅವನು ಜೋರಾಗಿ ಒದರಿಕೊಂಡು ಕೈ ಆಚೆ ಎಳೆದುಕೊಂಡ. ತಾನು ಮಾಡಿದ ತಪ್ಪಿಗೆ ಜೀಬ್ರದ ಹಲ್ಲಿನ ಗುರುತುಗಳು ಅವನ ಕೈ ಮೇಲೆ ಅಚ್ಚಾಗಿದ್ದವು.

ಇಷ್ಟೆಲ್ಲಾ ಮುಗಿಸಿಕೊಂಡು ಆಚೆ ಬರುವ ಹೊತ್ತಿಗೆ ಮೂರು ಗಂಟೆ ಆಗಿತ್ತು. ಹೊಟ್ಟೆ ಚುರುಗುಟ್ಟುತ್ತಿತ್ತು. ಅಲ್ಲಿಂದ ಸೀದಾ ಮನೆಗೆ ಬಂದು ಊಟ ಮಾಡಿ ಬೆಳಗಿನ ನೆನಪುಗಳನ್ನು ಮೆಲುಕು ಹಾಕುತ್ತ ಭಾನುವಾರವನ್ನು ಕಳೆದುಬಿಟ್ಟೆ

Rating
No votes yet

Comments