ಗಣಪತಿ ಹಬ್ಬ
ಗಣಪತಿ ಹಬ್ಬಕ್ಕೆ ಚಿತ್ರ ವಿಚಿತ್ರ ಗಣಪತಿ ಇಡ್ತಾರೆ.. ಮೊನ್ನೆ ದಾರೀಲಿ ಬರ್ಬೇಕಾದ್ರೆ "danger boys ವಿದ್ಯಾವರ್ಧಕ ಗಣಪತಿ" ಅಂತ ಬೋರ್ಡ ನೋಡಿದ್ದೆ. ಕಾರ್ಗಿಲ್ ಗಣಪತಿ, ಉಪೇಂದ್ರ, ಮಣ್ಣಿನ ಮಗ ಹಿಂಗೆ ತರಾವರಿ ಅದ್ವಾನ.ಕೈಯಲ್ಲಿ ಮೆಷಿನ್ ಗನ್ ಹಿಡಿದ, ಹರಕು ಪ್ಯಾಂಟಿನ ಗಣಪತಿ ನೋಡಿ ಎಂಥಾ ಕಾಲ ಬಂತಪ್ಪಾ ದೇವ್ರೆ ಅಂತ ಹಿರಿಯರು ಗೋಳಾಡ್ತಿರ್ತಾರೆ. ಅದರ ಜೊತೆಗೆ ಮೈಕು ಹಾಕಿ ಭಕ್ತಿಗೀತೆಗಳ ಜೊತೆಗೆ ಅನಿಸುತಿದೆ ಯಾಕೋ ಇಂದು, ಹೊಡಿ ಮಗ ಹೊಡಿ ಮಗ.. ತರದ ಹಾಡು ಹಾಕಿ ಇಡೀ ದಿನ ಕುಣಿಯೋರು ಇದ್ದಾರೆ. ಆ ಟೈಮಲ್ಲೇ ತಾರಕ ಮೈಕ ಧ್ವನಿ ಮಧ್ಯೆ ಓದ್ಬೇಕಾಗಿರೋ ಇಂಟರ್ನಲ್ಲು,ಟೆಸ್ಟು ಇರೋ ವಿದ್ಯಾರ್ಥಿಗಳ ಗತಿ ಆ ಗಣಪತಿಗೇ ಪ್ರೀತಿ. ಗಣಪತಿ ಆಚರಣೆಯನ್ನು ಮೊದಲು ಜಾರಿಗೆ ತಂದೋರು ನಮ್ಮ ಮಾನ್ಯ ತಿಲಕರು. ಇದು ಜನರ ಹಬ್ಬ. ದೇವ್ರು ನಮ್ಮ ಕಣ್ಣ ದೃಷ್ಟಿ ಹಂಗೆ, ಯೋಚ್ನೆ ಮಾಡೋ ಹಂಗೆ ಇದ್ರೆ ಪೂಜೆ ಮಾಡೋ ಉತ್ಸಾಹ ಇರುತ್ತೆ ಬಾಸ್ ಅಂತಾರೆ ಹೀಗೆಲ್ಲಾ ಇಟ್ಟೋರು. ವರ್ಷವಿಡೀ ಕೂಗೋರಿಗೆ ಕೇಳೋಲ್ಲ, ನಮಗ್ಯಾಕೆ ಕೇಳ್ತೀರ ಅಂಥ ಸಮರ್ಥನೆ ಬೇರೆ ಮೈಕಾಸುರರಿಗೆ..ಗಣಪತಿ ಇಡ್ತೀವಿ ಅಂತ ರಸ್ತೆ ಅಡ್ಡಗಟ್ಟಿ ಚಂದ ಎತ್ತೋರು, ಮನೆ ಸುತ್ತಮುತ್ತ ಗಣಪತಿ ಇಟ್ಟಿದೀವಿ ಹಸಿರು ನೋಟು ಕೊಡದೇ ಹೋಗೋದೆ ಇಲ್ಲ ಅನ್ನೋ ಜನರು, ಹಲವಾರು ಗಣಪತಿ ಪೂಜಿಸುವ ಗಡಿಬಿಡಿಲಿರೋ ಭಟ್ಟರು..ಯಾವುದು ತಪ್ಪು ಅಂತ ನೀವೇ ಹೇಳ್ಬೇಕು. ಇದ್ಯಾವುದರ ಅರಿವೂ ಇಲ್ಲದೆ ಪಂಚಕಜ್ಜಾಯ ಯಾವಾಗ ಸಿಗತ್ತಪ್ಪಾ ಅಂತ ಕಾಯೋ ಮಕ್ಕಳು, ಅವ್ರು ಪೂಜೆ ಆಗೋದ್ರೊಳಗೆ ತಿಂದ್ರೆ ಗತಿಯೇನು ಅಂಥ ಅವ್ರನ್ನ ಕಾಯೋ ಅಮ್ಮಂದಿರು, ನಿಮ್ಮನೇಲಿ ಎಷ್ಟು ಪಟಾಕಿ ಬಾಕ್ಸ್ ನಮ್ಮನೇಲಿ ಇಷ್ಟು ಎಂಬ ಎಳೆಯರ ಮಾತುಗಳು, ಹೊಸ ಬಟ್ಟೆ ಸಂಭ್ರಮ, ಸೀರೆಗೆ ಮ್ಯಾಚಿಂಗ್ ಸೆಟ್ ಹುಡುಕಾಟದಲ್ಲಿರೋ ಹೆಂಗಳೇರು, ೨-೩ ದಿನ ಆಫಿಸಿಗೆ ರಜಾ ಆರಾಮು ಅಂತಿರೋ ಗಂಡಸ್ರು.. ಹಿಂಗೆ ಒಂದು ಬೇರೆ ದುನಿಯಾನೇ ಸೃಷ್ಟಿ ಆಗುತ್ತೆ ಆ ಸಮಯದಲ್ಲಿ.. ಹಬ್ಬದ ದಿನ ಅಂತೂ ಎಷ್ಟು ಗಣಪತಿ ನೋಡಿದೆ, ಎಷ್ಟು ಕಡೆ ಪಂಚಕಜ್ಜಾಯ ತಿಂದೆ, ಯಾವ್ಯಾವ ಗಣಪತಿ ಮೂಮೆಂಟ್ ಶೋ ನೋಡಿದೆ ಎಂಬ ಉತ್ಸಾಹವೋ ಉತ್ಸಾಹ.. ರಾತ್ರಿಯೆಲ್ಲಾ ಪಟಾಕಿ, ಸುರು ಸುರು ಬತ್ತಿ,ಕುಂಡಗಳ ಬೆಳಕ ಸಂಭ್ರಮ. ಮನೆ ಬಿಟ್ಟು ದೂರ ಓಡಿ ಹೋಗೋ ನಾಯಿಗಳು, ಎಲ್ಲೋ ಅನಿಸುತಿದೆ ನೀನೆ ಎಂದು ಹಾಡ್ತಾ ಇರೋ ಆರ್ಕೆಸ್ಟ್ರಾ, ಟಿ.ವಿ ಯಲ್ಲಿ ಜಭರದಸ್ತ್ ಕಾರ್ಯಕ್ರಮಗಳು, ಮನೆಗೆ ಬರೋ ಹೊಸ ನೆಂಟರುಗಳು.. ಹೀಗೆ ಸಂಭ್ರಮವೋ ಸಂಭ್ರಮ.. ಇನ್ನು ಚೌತಿ ದಿನ ಚಂದ್ರ ಕಾಣ್ತಾನೆ ಅಂತ ಮನೆ ಹೊರಗೇ ಹೊರಡೋದಿಲ್ಲ ಕೆಲೋರು. ಚಂದ್ರ ನೋಡಿದ ತಪ್ಪಿಗೆ ಶ್ಯಮಂತಕ ಪುರಾಣ ಕೇಳೋದು, ನೋಡದಿದ್ದರೂ ಕಥೆ ಚೆನ್ನಾಗಿದೆ ಅಂಥ ಕೇಳೋದು ಹೀಗೆ ಮನೇಲಿರೋ ಹಿರೀರಿಗೆ ಫುಲ್ ಕೆಲಸ.. ಇಟ್ಟಷ್ಟು ದಿನವೂ ದಿನಾ ಹೊಸದು ನೈವೇದ್ಯಕ್ಕೆ ಏನು ಮಾಡೋದು ಅಂತ ಮನೆಯೊಡತಿ ಚಿಂತೆ,ಮಕ್ಕಳಿಗೆ ದಿನಾ ಹೊಸದು ಸಿಗತ್ತಲ್ಲಾ ಅಂತ ಸಂತಸದ ಸಂತೆ. ಹಳ್ಳಿಗಳ ಕಡೆ ಗೌರಿಯನ್ನೂ ತರೋ ಆಚರಣೆ ಇದೆ. ಅದರದ್ದೂ ವಿಭಿನ್ನ ಸಂಭ್ರಮ.
ಗಣೇಶ ಚತುರ್ಥಿಯನ್ನು ಎಂದು ಮೊದಲು ಆಚರಿಸಲಾಯಿತು ಎಂಬುದರ ಬಗ್ಗೆ ನಿಖರ ದಾಖಲೆಗಳಿಲ್ಲ..ಇತಿಹಾಸ ತಜ್ಞ ರಾಜವಾಡೆ ಅವರ ಪ್ರಕಾರ ಗಣೇಶ ಚತುರ್ಥಿಯನ್ನು ಶಾತವಾಹನರು, ರಾಷ್ಟ್ರಕೂಟರು,ಚಾಲುಕ್ಯರ ಕಾಲದಲ್ಲೇ ಆಚರಿಸುತಿದ್ದರಂತೆ..ಮರಾಠ ರಾಜ ಶಿವಾಜಿ ಮಹಾರಾಜನು ಅದನ್ನು ಮಹಾರಾಷ್ಟ್ರದಲ್ಲಿ ವಿಜ್ರಂಭಣೆಯಿಂದ ಆಚರಿಸಲು ಪ್ರಾರಂಭಿಸಿದನು.ಅದೇ ರೀತಿ ಪೇಶ್ವೆಯವರ ಕಾಲದಲ್ಲೂ ಈ ಆಚರಣೆಯಿದ್ದ ಉಲ್ಲೇಖವಿದೆ.ಅವರ ಮನೆದೈವ ಗಣೇಶ.ಅವರ ಆಳ್ವಿಕೆ ದುರ್ಬಲಗೊಂಡ ಕಾಲದಲ್ಲಿ ಅಂದರೆ ೧೮೧೮-೧೮೯೨ ರ ಕಾಲದಲ್ಲಿ ಈ ಆಚರಣೆ ಅವರ ಮನೆತನಕ್ಕೆ ಮಾತ್ರ ಸೀಮಿತಗೊಂಡಿತು ಎನ್ನುತ್ತಾರೆ ಇತಿಹಾಸಕಾರರು. ೧೮೯೩ ರಲ್ಲಿ ಈ ಗಣಪತಿ ಹಬ್ಬವನ್ನು ದೇಶಾದ್ಯಂತ ಆಚರಿಸುವಂತೆ ಮಾಡಿದವರು ಲೋಕಮಾನ್ಯ ಬಾಲಗಂಗಾಧರ ತಿಲಕರು. ಅಂದಿನಿಂದ ಆರಂಭಗೊಂಡ ಈ ಸಂಭ್ರಮ ಇಂದು ಭಾರತವನ್ನೂ ಮೀರಿ ನೇಪಾಳ,ಫಿಜಿ,ಕೆನಡಾ,ಅಮೇರಿಕಾ ಮತ್ತಿತರ ದೇಶಗಳಿಗೂ ವ್ಯಾಪಿಸಿದೆ.ಜಾತಿಗಳ ಗೋಡೆಯೊಡೆದು , ಮೇಲು ಕೀಳೆಂಬ ಭಾವ ಮೆಟ್ಟಿ ನಿತ್ತು ದೇಶವೆಲ್ಲಾ ಒಂದಾಗಲೆಂಬ ಉದಾತ್ತ ಉದ್ದೇಶದಿಂದ ತಿಲಕರು ಗಣಪತಿ ಹಬ್ಬವನ್ನು ಜನ ಸಾಮಾನ್ಯರ ಹಬ್ಬವನ್ನಾಗಿ ರೂಪಿಸಿದರು. ಬೀದಿ ಬೀದಿಗಳಲ್ಲಿ ಆಳೆತ್ತರದ ಗಣೇಶನನ್ನು ಪ್ರತಿಷ್ಟಾಪಿಸಲು ಪ್ರೋತ್ಸಾಹಿಸಿದರು ಎನ್ನುತ್ತಾರೆ..
ಮುಂಚೆ ಎಲ್ಲಾ ಮನೆ ಬಳಿಯೆ ತೆಗೆದ ಜೇಡಿ ಮಣ್ಣಿನಿಂದ ಗಣೇಶನನ್ನು ತಯಾರಿಸಿ , ಪೂಜಿಸಿ ನಂತರ ನೀರಲ್ಲಿ ವಿಸರ್ಜಿಸಲಾಗುತಿತ್ತು.. ಮಣ್ಣಿನಿಂದಲೇ ಹುಟ್ಟಿದ ನಾವು ಕೊನೆಗೆ ಸೇರುವುದು ಅಲ್ಲಿಗೇ ಎಂಬ ಆಧ್ಯಾತ್ಮಿಕ ತತ್ವ ಇದರ ಹಿಂದೆ ಅಡಗಿತ್ತು ಎನ್ನುತ್ತಾರೆ. ಆದರೆ ಈಗ ಪ್ಲಾಸ್ಟರ್ ಆಫ್ ಪ್ಯಾರಿಸ್ ನ ವ್ಯಾವಹಾರಿಕ ಗಣಪ ಬರಲಾರಂಭಿಸಿದ ಮೇಲೆ ಅದರಿಂದಾಗುವ ಪರಿಸರ ಮಾಲಿನ್ಯವೂ ಅತಿಯಾಗುತ್ತಿದೆ.ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ನೀರಿನ ಆಮ್ಲೀಯತೆ ಅತಿಯಾಗುವುದಲ್ಲದೇ , ಬಣ್ಣಗಳಲ್ಲಿರುವ ತರಹೇವಾರಿ ವಿಷ ರಾಸಾಯನಿಕಗಳಿಂದಲೂ ನೀರು ಹಾಳಾಗುತ್ತದೆ. ಇದರಿಂದ ಸಾವಿರಾರು ಮೀನುಗಳು ಗಣೇಶ ವಿಸರ್ಜನೆಯ ಮಾರನೇ ದಿನ ಸತ್ತು ತೇಲುವುದು ಅನೇಕ ಕಡೆ ವರದಿಯಾಗಿದೆ. ಭಕ್ತರಕ್ಷಕನ ವಿಸರ್ಜನೆಗೆಂದು ಏನೂ ಅರಿಯದ ಆ ಜೀವಿಗಳ ಜೀವ ತೆಗೆಯುವುದು ಎಷ್ಟು ಸರಿ? ಪ್ರತೀ ನಾಲ್ವರಿಗೆ ಒಂದು ಗಣೇಶನಂತೆ ಲೆಖ್ಕಕ್ಕೆ ತೆಗೆದುಕೊಂಡರೂ ಕರ್ನಾಟಕದಲ್ಲೇ ೧ ಕೋಟಿ ಗಣೇಶ.ಪ್ರತೀ ಗಣೇಶನ ನಿರ್ಮಾಣದಲ್ಲೂ ಸುಮಾರು ೨೦೦ ಗ್ರಾಂ ನಷ್ಟು ವಿಷ ರಾಸಾಯನಿಕಗಳನ್ನು ಬಣ್ಣವಾಗಿ ಬಳಸುತ್ತಾರೆ.. ಅಂದರೆ ಎಷ್ಟೊಂದು ಭಾರಿ ಪ್ರಮಾಣದ ಮಾಲಿನ್ಯ ಎಂಬ ಆಕರ್ಷಕ ವರದಿ ಕನ್ನಡ ದಿನಪತ್ರಿಕೆಯೊಂದರಲ್ಲಿ ಮೊನ್ನೆ ಪ್ರಕಟವಾಗಿತ್ತು. ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ?
ಯಾಕಿಲ್ಲ. ಪರಿಸರ ಸ್ನೇಹಿ ಗಣಪನನ್ನು ನಿರ್ಮಿಸಿ ಎಂಬ ಪರಿಸರವಾದಿಗಳ ಕೂಗು ಮುಗಿಲು ಮುಟ್ಟುತ್ತಿರುವ ವೇಳೆಯಲ್ಲಿ ನಾವೂ ಜಾಗರೂಕರಾಗಬೇಕಾದ ಅಗತ್ಯವಿದೆ. ಗಣಪತಿ ಹಬ್ಬಕ್ಕೆ ಮೂರು ತಿಂಗಳ ಮುಂಚೆಯೇ ಟನಗಟ್ಟಲೇ ಸೀಸರಹಿತ ಬಣ್ಣವನ್ನು ಉತ್ಪಾದಿಸಿ ಗಣಪತಿ ಮಾಡುವವರ ಸಭೆ ಕರೆದು ಆ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಕಳೆದ ವರ್ಷ ಈ ಪ್ರಯತ್ನ ಶೇ.೩೦ ರಷ್ಟು ಯಶ ಕಂಡಿತ್ತು ಅನ್ನುತ್ತವೆ ಸರ್ಕಾರಿ ಮೂಲಗಳು.. ಈ ಬಾರಿ ಅದು ಇನ್ನೂ ಹೆಚ್ಚಬೇಕಾಗಿದೆ.ಬಣ್ಣವಿಲ್ಲದ ಗಣಪತಿಯನ್ನು ಪೂಜಿಸುವ, ಲೋಹದ ಗಣಪನನ್ನು ಪೂಜಿಸುವ, ಅವನ್ನು ಬಕೆಟ್ನಲ್ಲಿ ವಿಸರ್ಜಿಸುವ ಹೀಗೆ ಹಲವಾರು ಸಲಹೆಗಳು ಪ್ರತೀ ವರ್ಷ ಬರುತ್ತವೆ.. ಇವುಗಳಿಗೆ ಆಸ್ತಿಕ ಬಂಧುಗಳ ಆಕ್ಷೇಪಣೆ ಏನೇ ಇದ್ದರೂ ಪರಿಸರದ ಬಗೆಗಿನ ಕಾಳಜಿಯನ್ನು ಅವರು ಮರೆಯದಿದ್ದರೆ ಚೆಂದ. ಭೂಮಿಯಿಂದಲೇ ನಾವು. ಜಲದಿಂದಲೇ ಜೇವನ. ಆ ಜಲ ಶುಚಿಯಾಗಿದ್ದರಷ್ಟೇ ಸ್ವಸ್ಥ, ಸ್ವಚ್ಚ ಜೀವನ ಸಾಧ್ಯ. ಹಾಗಾಗಿ ಈ ಬಾರಿ ಪ್ರಕೃತಿಪ್ರಿಯರಾಗಿ ಮೋದಕಪ್ರಿಯನ ಹಬ್ಬವನ್ನು ಆಚರಿಸೋಣವೇ?
Comments
ಉ: ಗಣಪತಿ ಹಬ್ಬ
ಉ: ಗಣಪತಿ ಹಬ್ಬ
ಉ: ಗಣಪತಿ ಹಬ್ಬ