ಅಣ್ಣಾ ಹಜಾರೆ ಹೋರಾಟ ಸತ್ಯಾಗ್ರಹ ಅಂತ್ಯವಲ್ಲ; ಆರಂಭ ಯಾಕೆ...?

ಅಣ್ಣಾ ಹಜಾರೆ ಹೋರಾಟ ಸತ್ಯಾಗ್ರಹ ಅಂತ್ಯವಲ್ಲ; ಆರಂಭ ಯಾಕೆ...?

ಬರಹ

ಇದೇನೂ ಅಂತ್ಯವಲ್ಲ ಆರಂಭ ಎಂಬ ಮಾತೂ ಕೇಳಿ ಬರುತ್ತಿರುವುದು ಗಮನಾರ್ಹ. ಯಾಕೆಂದರೆ, ಅಣ್ಣಾ ಅವರ ಹೋರಾಟ 13 ದಿನಗಳೇ ಅಹರ್ನಿಶಿ ನಡೆಯಿತು. ಅದರ ಆರಂಭದಲ್ಲೇ ಅದು ಸಂವಿಧಾನಿಕ ನಿಯಮಗಳಿಗೆ ವಿರೋಧಿ, ಅವರು ಜನತೆಯನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಅವರನ್ನು ಸೆರೆಮನೆಗೆ ತಳ್ಳುವ ನಾಟಕವೂ ನಡೆಯಿತು. ಆನಂತರ, ದೇಶದಾದ್ಯಂತ ಹಜಾರೆ ಅವರ ಉಪವಾಸ ಸತ್ಯಾಗ್ರಹಕ್ಕೆ ಜನಬೆಂಬಲ ದೊರೆತು, ಅಣ್ಣಾ ಅವರ ಗುಂಪು ಸಶಕ್ತ ಜನಲೋಕಪಾಲ ಮಸೂದೆ ಹೀಗೇ ಇರಬೇಕೆಂಬ ಅಂಶಗಳನ್ನು ಸರ್ಕಾರದ ಮುಂದಿಟ್ಟು ತಮ್ಮ ಹೋರಾಟದ ಪಟ್ಟು ಬಿಗಿಗೊಳಿಸಿತು. ಅದು ಸರ್ವಾಧಿಕಾರಿ ದೋರಣೆ ಎಂಬ ವಾದವೂ ಕೂಡ ಪ್ರಬಲವಾಗಿ ಆಳುವ ವರ್ಗದಿಂದ ಜನರ ನಡುವೆ ಬುದ್ದಿವಂತರೂ ವಿದ್ವಾಂಸರು ಎನಿಸಿಕೊಂಡವರ ಗುಂಪಿನಿಂದಲೂ ಕೇಳಿ ಬಂದದ್ದೂ ದೊಡ್ಡ ವಾದವಿವಾದಕ್ಕೆ ಕಾರಣವಾಯಿತು.

ಯಾರೇನೆ ಅನ್ನಲಿ, ಅಣ್ಣಾ ಅವರ ಗುಂಪು ಹಾಗೆ ಪಟ್ಟು ಹಿಡಿಯಲು ಕಾರಣ ನಿಚ್ಛಳವಾಗಿತ್ತು. ನಮ್ಮ ಸಂವಿಧಾನದಲ್ಲಿ ಶಾಸನಗಳನ್ನು ರೋಪಿಸಿವವರು ಶಾಸಕರೇ, ಅದಕ್ಕೆ ಆಚಾರ ಸಂಹಿತೆಗಳನ್ನು ನೀಡುವವರು ಸಂಸದರೇ ಆಗಿರುತ್ತಾರೆ. ಯಾವುದೇ ವಿಧೇಯಕ ಒಂದನ್ನು ಮಂಡಿಸಿದಾಗ ಸಭಾದ್ಯಕ್ಷರೂ ಸಚಿವರೆಲ್ಲರೂ ಸೇರಿ ಸಂಸತ್ತಿನಲ್ಲಿ ಒಮ್ಮತದಿಂದ ಅಂಗೀಕರಿಸಿದಾಗ ಮಾತ್ರ ಅದೊಂದು ಕಾಯಿದೆಯಾಗುತ್ತದೆ. ಸಂವಿಧಾನಕ್ಕೆ ಯಾವುದೇ ತಿದ್ದು ಪಡಿಯೂ ಆಗಬೇಕೆಂದರೆ ಇದೇ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಇದು ನಮ್ಮ ಪ್ರಜಾಪ್ರಭುತ್ವದಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿರುವ ಸಂವಿಧಾನಿಕ ಅಧಿನಿಯಮವೇ. ಆದರೂ, ಸ್ವಾತಂತ್ರ್ಯಾನಂತರದ ಭಾರತದಲ್ಲಿ ನಮ್ಮ ದೇಶದ ಸಂವಿಧಾನವೆಂಬುದು 1950 ರ ದಶಕದಲ್ಲಿ ಜಾರಿಗೆ ಬಂದಂದಿನಿಂದಲೂ ಅದಕ್ಕೆ ಅನೇಕ ತಿದ್ದು ಪಡಿಗಳಾಗಿವೆ; ಅವೆಲ್ಲ ಕಾಯ್ದೆಗಳೂ ಆಗಿ ಜಾರಿಯಲ್ಲಿವೆ. ಬರು ಬರುತ್ತಾ ಆದುದು ಆಗುತ್ತಿರುವುದಾದರೂ ಏನು? ನಾವುಗಳು ಆರಿಸಿ ಕಳುಹಿಸಿದ ಬಹುತೇಕ ಶಾಸಕರು ಸಚಿವರು ಜನಪ್ರತಿನಿಧಿಗಳೆನಿಸಿಕೊಂಡಿರುವವರು ಜನಹಿತಕ್ಕಿಂತ ತಮ್ಮಸ್ವಹಿತ ಸ್ವಲಾಭಕ್ಕೆ ಸ್ವಜನ ಪಕ್ಷಪಾತಕ್ಕಷ್ಟೇ ಹೆಚ್ಚುಹೆಚ್ಚು ಒತ್ತುಕೊಡಲಾರಂಭಿಸಿದರು. ಅವರ ಅಕ್ರಮ ಅವ್ಯವಹಾರಗಳಿಗೆ ಕೊನೆ ಮೊದಲಿಲ್ಲವಾಯಿತು. ಅವರಲ್ಲಿ ಪ್ರಾಮಾಣಿಕರೂ ಯಾರೂ ಇಲ್ಲ ಎಂಬಷ್ಟು ನಂಬಿಕೆ! ಸಚಿವರು ಶಾಸಕರಾಗುವುದೆಂದರೆ ತಮ್ಮ ಸ್ವಂತಕ್ಕೆ ಅಕ್ರಮ ಆಸ್ತಿ ಹಣ ಮಾಡಿಕೊಳ್ಳುವುದೇ ಮುಖ್ಯವಾಗಿ ಬಿಟ್ಟಿತು.

ಈ ಜನಪ್ರತಿನಿಧಿಗಳಲ್ಲಿ ಎಷ್ಟೋ ಮಂದಿ ದುಡ್ಡು ಗುಳುಂ ಮಾಡುವ ಅವಕಾಶಗಳನ್ನು ಯಾವುದೇ ಜನಪರ ಯೋಜನೆಗಳು ಜಾರಿಯಾಗಲಿ ಅವನ್ನು ಚೆನ್ನಾಗಿಯೆ ಬಳಸಿಕೊಂಡು ತಾವು ಶ್ರೀಮಂತರಾಗಿ ಮೆರೆಯುತ್ತಿದ್ದಾರೆ. ಅದೇ ಅವರಿಗೆ ಪ್ರತಿಕೂಲವಾಗುವಂತಹ ಯಾವುದೇ ಕಾಯಿದೆ ಕಾನೂನು ಜಾರಿಯಾಗುವುದರಲ್ಲಿ ವಿಳಂಬ ನೀತಿಯಾಗುವುದನ್ನು ಅವರೆಲ್ಲರೂ ಪೋಷಿಸಿಕೊಂಡೇ ಬಂದಿದ್ದಾರೆ ಎಂಬುದು ಉತ್ಪ್ರೇಕ್ಷೆಯೇನಲ್ಲ.

ಜನಲೋಕಪಾಲ ಮಸೂದೆ ಮೊದಲ ಬಾರಿಗೆ ಮಂಡನೆಯಾದದ್ದು 1968 ರಲ್ಲಿ; ಮೊರಾರ್ಜಿದೇಸಾಯಿ ಅವರ ಸರ್ಕಾರವಿದ್ದಾಗ. ಕಳೆದ ನಾಲ್ಕು ದಶಕಗಳಿಂದ ನೆನೆಗುದಿಗೆ ಬೀಳಲು ಕಾಂಗ್ರೇಸ್ ಕಾರಣವೆಂಬುದು ಇದೀಗ ಸ್ಪಷ್ಟವಾಗಿಬಿಟ್ಟಿದೆ. ಇಂತಹ ಸಶಕ್ತ ಜನಪರ ಲೋಕಪಾಲ ವಿಧೇಯಕದ ವಿಚಾರದಲ್ಲಿ ಸಾಮಾನ್ಯ ಜನತೆ ಏನೂ ಮಾಡಲಾರದವರಾಗಿದ್ದರು. ಸಾಮಾನ್ಯವಾಗಿ ಸಂವಿಧಾನದ ವಿಧಿವಿಧಾನಗಳಲ್ಲಿ ಕೈಗೊಳ್ಳುವ ನಿರ್ಣಯಗಳೆಲ್ಲಿ ಶಾಸಕ ಸಂಸದರ ಸ್ವಾರ್ಥಕ್ಕೆ ಹಾಗೂ ಲಾಭಕ್ಕೆ ಅಡೆತಡೆಯಿಲ್ಲದಿರುವಂತಹವು ಬಹುಬೇಗ ಜಾರಿಯಾಗಿಬಿಡುತ್ತವೆ. (ಉದಾಹರಣೆಗೆ ಇತ್ತಿಚೆಗೆ ದುಪ್ಟಟ್ಟು ಹೆಚ್ಚಾಗಿ ಅತಿಶೀಘ್ರದಲ್ಲೇ ಜಾರಿಯಾಗಿರುವ ಶಾಸಕರು ಮತ್ತು ಮಂತ್ರಿ ಮಹೋದಯರುಗಳ ಸಂಬಳ ಸಾರಿಗೆ ಹಾಗೂ ಇತರೆ ಭತ್ಯೆಗಳು!). ಅದೇ ಬಡ ಜನತೆಯ ಜನಪರ ಕಾಳಜಿಯುಳ್ಳ, ಮಸೂದೆಗಳು ಚರ್ಚೆಗೆ ಬಂದರೂ ಅವುಗಳ ಅನುಮೋದನೆಗೆ ಅನಗತ್ಯ ವಿಳಂಬಮಾಡುವುದು, ಒಳ್ಳೆಯ ಕೆಲಸಕ್ಕೆ ಯಾವಾಗಲೂ ಅಡ್ಡಗಾಲು.

ಅಪರೂಪಕ್ಕೊಂದು ಅಂತಹ ಜನಉಪಯೋಗಿ ಕಾಯಿದೆ ಜಾರಿಯಾದರೂ ಅದು ನಿರ್ಧಿಷ್ಟ ಫಲಾನುಭವಿಗಳಿಗೆ ತಲುಪುವಾಗಲೂ ಭ್ರಷ್ಟರಿಗೆ ಅದರಲ್ಲೂ ಪಾಲು. ಇನ್ನೂ ಉಳಿದವು ಮೂಲೆಗುಂಪುಗಳಾಗಿ ಬಿಡುವುದು ಹೆಚ್ಚಾಯಿತು. ಸಂಸತ್ತಿನಲ್ಲಿ ಆಳುವವರ ಮತ್ತು ವಿರೋಧಪಕ್ಷಗಳ ನಡುವೆ ನಡೆಯುವ ಕಿತ್ತಾಟ ಅರಚಾಟಗಳು ನಗೆಪಾಟಲಿಗೀಡಾದವು. ಹೀಗಾಗಿ ನಮ್ಮ ಪ್ರಜಾಸತ್ತೆಯ ಸಂವಿಧಾನಿಕ ಕಲಾಪಗಳನ್ನೇ ದೇಶದ ಮಹಾಜನತೆ ಸಂಶಯದಿಂದ ನೋಡುವಂತಾಗಿದ್ದು ತಾವು ಆಯ್ಕೆಮಾಡಿ ಕಳುಹಿಸಿದ ಜನಪ್ರತಿನಿಧಿಗಳೇ ಕಡು ಸ್ವಾರ್ಥಿಗಳಾಗಿ ಭ್ರಷ್ಟಾಚಾರ ಸ್ವಜನ ಪಕ್ಷಪಾತದಲ್ಲಿ ತೊಡಗಿದ್ದು ಜನರ ನಂಬಿಕೆಗೆ ಅರ್ಹರಲ್ಲವೆಂಬಂತೆ ಕಂಡುಬರುವುದೇ ವಿಪರೀತವಾಗಿದ್ದು ದುರಾದೃಷ್ಟಕರವೇ.

ಹೀಗಾಗಿ ದಿನೇ ದಿನೇ ಇಡಿ ದೇಶವೇ ಕೆಳವರ್ಗದಿಂದ ಮೇಲ್ಮಟ್ಟದ ಅಧಿಕಾರಿಗಳವರೆಗೂ ಭ್ರಷಾಚಾರದ ಜಟಿಲ ಸಮಸ್ಯೆಯನ್ನೆದುರಿಸುತ್ತಿರುವ ದುರ್ಭರ ಪರಿಸ್ಥಿತಿಯಲ್ಲಿ ಗಾಂಧೀವಾದಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಭ್ರಷ್ಟಾಚಾರವನ್ನು ಬುಡಸಹಿತ ಕಿತ್ತೊಗೆಯಲು ಕಾರ್ಯಪ್ರವೃತ್ತರಾದರು. ದೇಶದಾದ್ಯಂತ ಜನತೆಗೆ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಕರೆಕೊಟ್ಟರು. ಈವರೆಗೆ ಭ್ರಷ್ಟಾಚಾರದಿಂದ ರೋಸಿಹೋಗಿದ್ದ ಜನತೆ ಸ್ವಯಂ ಪ್ರೇರಿತರಾಗಿ ಮುಂದೆ ಬಂದದ್ದು ಅಣ್ಣಾ ಅವರ ಸತ್ಯಾಗ್ರಹಕ್ಕೆ ಬೆಂಬಲ ಪ್ರವಾಹದಂತೆ ಹರಿದು ಬಂದದ್ದು ಸಹಜವೇ ಆಗಿತ್ತು.
ಇದೀಗ ಅಣ್ಣಾ ಹಜಾರೆ ಅವರ ಸೇವೆ ಈ ದೇಶಕ್ಕೆ ಇನ್ನೂ ಬೇಕಾಗಿದೆ. ಸದ್ಯ ಸರ್ಕಾರ ಅಣ್ಣಾ ಕೊನೆ ಘಟ್ಟದಲ್ಲಿ ಸಶಕ್ತ ಜನಲೋಕಪಾಲ ಮಸೂದೆಗೆ ಮುಂದಿಟ್ಟ 3 ತಾತ್ವಿಕ ನೆಲೆಗಟ್ಟಿನ ಅಂಶಗಳನ್ನು ಸಂಸತ್ತಿನಲ್ಲಿ ಮಾನ್ಯಮಾಡಿದೆ. ಅಣ್ಣಾ ಅವರ ಆರೋಗ್ಯ ಮತ್ತು ವಯೋಮಾನದ ದೃಷ್ಟಿಯಲ್ಲಿ ಎಲ್ಲರ ಅಪೇಕ್ಷೆಯಂತೆ ಅವರ ಸತ್ಯಾಗ್ರಹ ಅಂತ್ಯಕಂಡಿದೆ. ಈಗಾಗಲೇ ಅಣ್ಣಾ ತಮ್ಮ ಮುಂದಿನ ಹೋರಾಟ ದೇಶದ ಯಾವ ಸಮಸ್ಯೆಗಳ ಬಗ್ಗೆ ಎಂಬುದರ ಸುಳಿವನ್ನೂ ನೀಡಿದ್ದಾರೆ.

ಆದರೆ, ಜನಲೋಕಪಾಲ ಮಸೂದೆ ಮಂಡನೆಯಾಗಿ ನಾಲ್ಕು ದಶಕಗಳೇ ಕಳೆದಿದ್ದು, ಈ ಅವಧಿಯಲ್ಲಿ 9 ಬಾರಿ ಸಂಸತ್ತಿನಲ್ಲಿ ಮಂಡನೆಯಾಗಿದೆಯಾದರೂ, ಯಾವೊಬ್ಬ ಜನಪ್ರತಿನಿಧಿಯೂ ಅದನ್ನು ಜಾರಿಗೊಳಿಸುವ ಹೋರಾಟಕ್ಕೆ ಮುಂದಾಗಿಲ್ಲವೆಂಬುದೂ ಗಮನಿಸಬೇಕಾದ್ದೇ... ಇದೀಗ ಅಣ್ಣಾ ಹೋರಾಟದಲ್ಲಿ ಅದು ಮಂಡನೆಯಾಗಿ ಸಂದೀಯ ಸ್ಥಾಯಿ ಸಮಿತಿಯ ಎದುರು ಇದೆ. ಈ ಸಮಿತಿಯಲ್ಲಿರುವವರ ಚಾರಿತ್ರ್ಯವು ಶಂಕಾಸ್ಪದವಾಗಿದೆ. ಮೇವು ಹಗರಣದ ಲಾಲೂ ಪ್ರಸಾದ್ ಯಾದವ್, ಕಲ್ಲಿದ್ದಲು ಹಗರಣದ ರಾಮ್ ವಿಲಾಸ್ ಪಸ್ವಾನ್, ಸಂಸದರಿಗೆ ಮತಕ್ಕಾಗಿ ಲಂಚ ನೀಡಿದ ಆರೋಪ ಎದುರಿಸುತ್ತಿರುವ ಅಮರ್ ಸಿಂಗ್ ಇವರುಗಳೆಲ್ಲ ಇಂದಿನ ಆಳುವ ಪಕ್ಷ ಕಾಂಗ್ರೆಸ್ ಬೆಂಬಲಿಗರೇ.

ಇಲ್ಲಿ ಒಂದು ಪ್ರಶ್ನೆ ಎಳುತ್ತದೆ. ಇತ್ತೀಚೆಗೆ ಸಂಸತ್ತಿನಲ್ಲಿ ಈ ಮಸೂದೆ ಚರ್ಚೆಗೆ ಬಂದಾಗ ಭ್ರಷ್ಟಾಚಾರ ವಿರೋಧಕ್ಕೆ ಅಣ್ಣಾ ಅವರ ಪರ ಹೆಚ್ಚು ವಾದಕ್ಕಿಳಿದ ಪ್ರಬಲ ವಿರೋಧ ಪಕ್ಷವೆಂದರೆ ಬಿಜೆಪಿ. ಅವರೂ ಆಯ್ಕೆಯಾಗಿ ಬಂದಿರುವ ಸಂಸದರೇ ಅಲ್ಲವೇ...? ಅಂದರೆ, ವಿರೋಧಪಕ್ಷದ ಕಡೆಯಿಂದಲೂ ಜನಲೋಪಕಪಾಲ ಸ್ಥಾಯಿಸಮಿತಿಗೆ ಒಬ್ಬಿಬ್ಬರಾದರೂ ಸಂಸದರನ್ನೇಕೆ ಆರಿಸಲಿಲ್ಲ...? ಆಳುವ ಪಕ್ಷ ಮಾತ್ರಕ್ಕೆ ಆ ಅನುಮೋದನೆಗೆ ಪರಮಾಧಿಕಾರವೇನೂ ಇಲ್ಲವಲ್ಲ ಎಂಬುದನ್ನು ಗಂಭೀರವಾಗಿ ಯೋಚಿಸಬೇಕಾದ ವಿಚಾರವಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet