ಆದರ್ಶ ಶಿಕ್ಷಕರು
ಶಿಕ್ಷಕರು ಎಂದರೆ ಯಾರು? ಈ ಪ್ರಶ್ನೆ ಮಕ್ಕಳಿಗೆ ಕೇಳಿದರೆ ಮಿಸ್ಸು, ಟೀಚರ್, ಮೇಡಮ್, ಗುರುಗಳು ಎಂದು ಹೇಳುತ್ತಾರೆ. ನೀವು ಶಿಕ್ಷಕರನ್ನು ಭೇಟಿಯಾಗಿ ಈ ವೃತ್ತಿಯನ್ನು ಏಕೆ ಕೈಗೊಂಡಿರಿ ಎಂದು ಕೇಳಿದರೆ "ಎಲ್ಲೂ ಕೆಲಸ ಸಿಗದಿದ್ದರಿಂದ ಈ ಕೆಲಸಕ್ಕೆ ಬಂದೆ. ನಮ್ಮದೇನು ಬಡ ಮೇಷ್ಟ್ರ ಕೆಲಸ" ಎಂದು ಅಸಡ್ಡೆಯಿಂದ ಉತ್ತರಿಸುವವರಿದ್ದಾರೆ. ಅತಿ ಹೆಚ್ಚು ಜವಾಬ್ದಾರಿಯುತವಾದ, ಬಹಳ ನಿಷ್ಟೆಯಿಂದ ಮಾಡಬೇಕಾದ ವೃತ್ತಿ ಶಿಕ್ಷಕ ವೃತ್ತಿ. ಪುಸ್ತಕದಲ್ಲಿರುವ ನಾಲ್ಕು ಸಾಲುಗಳನ್ನು ಓದಿ, ಹೇಳಿ, ಬರೆಸಿ, ಬಾಯಿ ಪಾಠ ಮಾಡಿಸಿ, ಪರೀಕ್ಷೆ ಮಾಡಿ ಅಂಕ ಹಾಕುವುದಷ್ಟೇ ಶಿಕ್ಷಕರ ಕೆಲಸವಲ್ಲ.
ಶಿಕ್ಷಕ ವೃತ್ತಿಯನ್ನು ಬಯಸುವವರು ಮೊದಲು ಮೇಧಾವಿಯಾಗಿರಬೇಕು. ಪ್ರತಿದಿನ, ಪ್ರತಿ ಕ್ಷಣವೂ ಸ್ವಾಧ್ಯಾಯ ಮಾಡುವವರಾಗಿರಬೇಕು, ವಿದ್ಯಾರ್ಥಿಗಳ ಮನಸ್ಸನ್ನು ಅರಿಯುವ ಜಾಣ್ಮೆ, ತಾಳ್ಮೆ ಇರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯ ಬೇರೆ ಬೇರೆ ಇದ್ದರೂ ಅವರೆಲ್ಲರಿಗೂ ಅರಿವಾಗುವಂತೆ ತಿಳಿಸಿಕೊಡುವ ಸಾಮರ್ಥ್ಯವಿರಬೇಕು. ಕೇವಲ ಧನ ಸಂಪಾದನೆಗಾಗಿ ಈ ವೃತ್ತಿಯನ್ನು ಕೈಗೊಳ್ಳದೆ ಇದೊಂದು ಸೇವೆ ಎಂದರಿತು ಸುಸಂಸ್ಕೃತ ಮಾನವರನ್ನು ನಿರ್ಮಿಸುವ ಕರ್ತಾರನಾಗಬೇಕು. ವಿದ್ಯಾರ್ಥಿಗಳನ್ನು ಆಕರ್ಷಿಸುವ ಗುಣ ನಡತೆಯಿದ್ದು, ಉತ್ತಮ ವಾಗ್ಮಿಯಾಗಿರಬೇಕು. ಇವೆಲ್ಲಾ ಗುಣಗಳಿದ್ದು, ಹೇಳಿದಂತೆ ನಡೆಯುವ ಉತ್ತಮ ಶೀಲವಂತನಾಗಿರಬೇಕು. ಇಂತಹ ಶಿಕ್ಷಕರಿಂದ ಸುಸಂಸ್ಕೃತ ಮಾನವರು ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ.
ಇಂದು ಶಿಕ್ಷಣ ಸಂಸ್ಥೆಗಳ ಆದೇಶಕ್ಕನುಗುಣವಾಗಿ, ನಿಗದಿತ ವಿದ್ಯಾರ್ಥಿಗಳ ಗುಂಪಿಗೆ, ನಿಗದಿತ ವಿಷಯಗಳನ್ನಷ್ಟೇ, ನಿಗದಿತ ಅವಧಿಯಲ್ಲಿ ಶಿಕ್ಷಕರು ಪಾಠ ಮಾಡಬೇಕು. ಇಂಥಹ ಶಿಕ್ಷಣ ಪದ್ದತಿಯಲ್ಲಿ ನಾವು ಆದರ್ಶ ಶಿಕ್ಷಕರನ್ನು ಕಾಣಲು ಸಾಧ್ಯವೇ? ಉತ್ತಮ ವಿದ್ಯಾರ್ಥಿಗಳನ್ನು ಕಾಣಲು ಸಾಧ್ಯವೇ? ಇಂಥಹ ಶಿಕ್ಷಣ ಪದ್ಧತಿಯಿಂದ ಅಕ್ಷರಸ್ಥರು ಹೆಚ್ಹಾಗಬಹುದೇ ವಿನಹ ಸುಶಿಕ್ಷಿತರು ಹೆಚ್ಚಾಗಲು ಸಾಧ್ಯವಿಲ್ಲ. ಈಗ ಶಿಕ್ಷಕ ವೃತ್ತಿಯ ಪ್ರವೇಶಕ್ಕೂ ಲಂಚ, ಡೊನೇಷನ್ ಕೊಡಬೇಕು. ಹೀಗಿರುವಾಗ ಆದರ್ಶ ಶಿಕ್ಷಕರನ್ನು ಕಾಣುವುದು ಮರೀಚಿಕೆಯೇ ಎನಿಸುತ್ತದೆ. ನಮ್ಮ ಶಿಕ್ಷಣ ಪದ್ಧತಿ ಉತ್ತಮವಾಗಿ, ಆದರ್ಶ ಶಿಕ್ಷಕರು ಸಿಗುವಂತಹ ವಾತಾವರಣ ಶೀಘ್ರದಲ್ಲಿ ನಿರ್ಮಾಣವಾಗಲಿ. ನಾಳೆ ಶಿಕ್ಷಕರ ದಿನಾಚರಣೆ. ನನ್ನ ಕನಸಿನ ಆದರ್ಶ ಶಿಕ್ಷಕರಿಗೆ ಸಾಷ್ಟಾಂಗ ನಮಸ್ಕಾರಗಳು ಹಾಗೂ ಅಭಿನಂದನೆಗಳು.