ಅಣ್ಣಾ ಹಜಾರೆ ಆಂದೋಲನದ ಸಾಧನೆಗಳು

ಅಣ್ಣಾ ಹಜಾರೆ ಆಂದೋಲನದ ಸಾಧನೆಗಳು

ಇತ್ತೀಚೆಗೆ ಅಣ್ಣಾ ಹಜಾರೆ ಆಂದೋಲನವು ನಮ್ಮ ದೇಶದ ಉದ್ದಗಲದಲ್ಲಿ ಒಂದು ಸಂಚಲನ ಮೂಡಿಸಿದ್ದನ್ನು ನಾವು ಕಂಡಿದ್ದೇವೆ. ಇದರ ಸಾಧನೆಗಳೇನು ಎಂದು ಪರಿಶೀಲಿಸೋಣ.

ನಮ್ಮ ಚುನಾಯಿತ ಪ್ರತಿನಿಧಿಗಳು ಸಾಂವಿಧಾನಿಕ ವ್ಯವಸ್ಥೆಯನ್ನೇ ವಿರೂಪಗೊಳಿಸಿದ್ದರು. ಇದನ್ನು ಸುಧಾರಿಸಲು ತಮ್ಮಿಂದ ಸಾಧ್ಯವಿಲ್ಲ ಎಂಬ ಅಸಹಾಯಕತೆ ಜನರಲ್ಲಿತ್ತು. ಇಂತಹ ನಿರಾಶಾದಾಯಕ ಸನ್ನಿವೇಶದಲ್ಲಿ, ಸಾಂವಿಧಾನಿಕ ವ್ಯವಸ್ಥೆಯನ್ನು ಸುಧಾರಿಸುವ ಶಕ್ತಿ ಇನ್ನೂ ತಮ್ಮ ಕೈಯಲ್ಲಿದೆ ಎಂಬುದನ್ನು ಈ ಆಂದೋಲನ ತೋರಿಸಿಕೊಟ್ಟು ಜನರಲ್ಲಿ ಆಶಾಭಾವನೆ ಮೂಡಿಸಿದೆ.

 ಯುವಜನತೆಯಲ್ಲಿ ಈ ದೇಶದ ಬಗ್ಗೆ ಕಾಳಜಿ ಇಲ್ಲ ಎಂಬ ಭಾವನೆ ಕಳೆದ ದಶಕದಲ್ಲಿ ಹಿರಿಯರಲ್ಲಿ ಬೆಳೆದಿತ್ತು. ಅದನ್ನು ತೊಡೆದು ಹಾಕಿದೆ ಈ ಆಂದೋಲನ. ಜೊತೆಗೆ, ಯುವಜನತೆ ಇದರಲ್ಲಿ ಧುಮುಕಿದ ರೀತಿ ಅವರ ಧೈರ್ಯವನ್ನು ಬೆಳಕಿಗೆ ತಂದಿದೆ.

ಜನಲೋಕಪಾಲ ಮಸೂದೆಯನ್ನು ಸಂಸತ್ತಿನ ಮೇಲೆ ಹೇರಿದ್ದರ ಬಗ್ಗೆ ಕೆಲವರ ಆಕ್ಷೇಪವಿದೆ. ಜನಪರವಾದ ಒಂದು ಮಸೂದೆಯನ್ನು ಸಂಸತ್ತಿನಲ್ಲಿ ಸಂಸದರೇ ಅಂಗೀಕರಿಸಬೇಕಾಗಿತ್ತು. ಅವರು ಅದಕ್ಕೆ ತಯಾರಿಲ್ಲ ಎಂದಾಗ, ಜನತೆ ಕೈಕಟ್ಟಿ ಕೂರಬೇಕೇ? ಕಳೆದ ೪೨ ವರುಷಗಳಲ್ಲಿ ಲೋಕಪಾಲ ಮಸೂದೆಯನ್ನು ಅಂಗೀಕರಿಸದೆ, ಜನಮಾನಸದ ಆಶಯವನ್ನು ಧಿಕ್ಕರಿಸುತ್ತ ಬಂದ ಸಂಸತ್ತಿನ ಮೇಲೆ ಒತ್ತಡ ತರಲು ಬೇರೆ ಯಾವ ದಾರಿ ಉಳಿದಿತ್ತು? ದೇಶದ ಜನರ ಆಶಯ ಕಾಯಿದೆಯಾಗುವುದೇ ಪ್ರಜಾಪ್ರಭುತ್ವದ ಮೂಲ ಆಶಯವಲ್ಲವೇ? ಸರಕಾರ ಅಥವಾ ಸಂಸದರು ಮಂಡಿಸಿದರೆ ಮಾತ್ರ ಕಾಯಿದೆ ಆಗಬೇಕೆಂಬ ಹಂತವನ್ನು ದಾಟಿ, ಜನರು ಮಂಡಿಸಿದ ಮಸೂದೆಯೂ ಶಾಸನವಾಗುವುದು ನಮ್ಮ ಪ್ರಜಾಪ್ರಭುತ್ವ ಇನ್ನಷ್ಟು ಪಕ್ವವಾಗುವ ಲಕ್ಷಣ.

ಅನೇಕ ಜನಪ್ರತಿನಿಧಿಗಳು "ತಮ್ಮನ್ನು ಹೇಳುವವರು ಕೇಳುವವರು ಯಾರೂ ಇಲ್ಲ" ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಸಂಸತ್ತಿನ ಹಾಗೂ ವಿಧಾನಸಭೆಗಳ ಕಲಾಪಗಳೂ ಇದಕ್ಕೆ ಪುರಾವೆ. ಪ್ರಜೆಗಳು ಪ್ರತಿಭಟಿಸಬಲ್ಲರು ಎಂಬುದನ್ನು ಜಗಜ್ಜಾಹೀರು ಪಡಿಸಿದ ಈ ಆಂದೋಲನವು ಜನಪ್ರತಿನಿಧಿಗಳ ಅಂತಹ ವರ್ತನೆಗೆ ಬಿಸಿ ಮುಟ್ಟಿಸಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂಬುದನ್ನು ಅವರಿಗೆ ನೆನಪು ಮಾಡಿ ಕೊಟ್ಟಿದೆ.

ಒಂದು ಕಾನೂನು ಅಂಗೀಕಾರವಾದರೆ ಎಲ್ಲವೂ ಬದಲಾಗುತ್ತದೆ ಎಂಬ ಭ್ರಾಂತಿ ಯಾರಲ್ಲಿಯೂ ಇಲ್ಲ. ಭ್ರಷ್ಟಾಚಾರ ನಿಷೇಧ ಕಾಯಿದೆ ಹಾಗೂ ಪಕ್ಷಾಂತರ ನಿಷೇಧ ಕಾಯಿದೆಗಳನ್ನು ಜ್ಯಾರಿಯ ಹಂತದಲ್ಲಿ ರಾಜಕಾರಣಿಗಳೂ ಅಧಿಕಾರಿಗಳೂ ನಗೆಪಾಟಲಿನ ಕಾಯಿದೆಗಳಾಗಿ ಮಾಡಿರುವುದನ್ನು ನಾವು ಕಂಡಿದ್ದೇವೆ. ಕಾನೂನು ಚಾಪೆ ಕೆಳಗೆ ತೂರಿದರೆ ರಂಗೋಲಿ ಕೆಳಗೆ ತೂರಿ ಕಾನೂನಿನ ಹಿಡಿತದಿಂದ ಜಾರಿಕೊಳ್ಳುವ ವಿಧಾನಗಳು ಇದ್ದೇ ಇರುತ್ತವೆ.

ಆದ್ದರಿಂದ, ಕಾಯಿದೆಗಳನ್ನು ಇನ್ನಷ್ಟು ಬಿಗಿ ಮಾಡುತ್ತಲೇ ಇರಬೇಕು. ಆಗ ಕಾಯಿದೆಗಳಿಂದ ಪರಿಣಾಮ ಆಗಿಯೇ ಆಗುತ್ತದೆ. ಉದಾಹರಣೆಗೆ, ಬಾಲ್ಯ ವಿವಾಹ ಕಾಯಿದೆ ಮತ್ತು ಆದಾಯ ತೆರಿಗೆ ಕಾಯಿದೆ. ಇವುಗಳಿಂದಾಗಿ ಏನೂ ಆಗಿಲ್ಲ ಎನ್ನುವುದು ಸಿನಿಕತನ. ಇವನ್ನು ಉಲ್ಲಂಘಿಸಿದವರಿಗೆ (ಹೆತ್ತವರನ್ನು ಪೊಲೀಸರು ತನಿಖೆ ಮಾಡಿ ವ್ಯಾಜ್ಯ ಹೂಡಿದಾಗ, ಆದಾಯ ತೆರಿಗೆ ಅಧಿಕಾರಿಗಳು ಮನೆಗೆ ಹಾಗೂ ಆಫೀಸಿಗೆ ದಾಳಿ ನಡೆಸಿದಾಗ) ಸಾಮಾಜಿಕ ಕಳಂಕ ಅಂಟಿಕೊಳ್ಳುತ್ತದೆ. ಅದೇ ರೀತಿಯಲ್ಲಿ, ಬಳಕೆದಾರರ ರಕ್ಷಣಾ ಕಾಯಿದೆ ಮತ್ತು ಮಾಹಿತಿ ಹಕ್ಕು ಕಾಯಿದೆಗಳಿಂದ ಖಂಡಿತವಾಗಿ ಪರಿಣಾಮವಾಗಿದೆ. ಮಾರಾಟ ಮಾಡಿದ ವಸ್ತುಗಳ ದೋಷ ಹಾಗೂ ಒದಗಿಸಿದ ಸೇವೆಗ ನ್ಯೂನತೆಗಳಿಗಾಗಿ ಸಾವಿರಾರು ಪೂರೈಕೆದಾರರಿಗೆ ಮತ್ತು ಮಾಹಿತಿ ನೀಡದ ಅಧಿಕಾರಿಗಳಿಗೆ ದಂಡ ವಿಧಿಸಿರುವುದೇ ಇದಕ್ಕೆ ಪುರಾವೆ

ಪ್ರಜಾಪ್ರಭುತ್ವದ ಆಧಾರಸ್ತಂಭಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ನಾಗರಿಕ ಸಮಾಜದಲ್ಲಿ ನೈತಿಕ ಅಧಃಪತನ ಎದ್ದು ಕಾಣುತ್ತಿದೆ. ಇದರ ವಿರುದ್ಧ ಜನಸಾಮಾನ್ಯರ ಆಕ್ರೋಶವನ್ನು ಅಣ್ಣಾ ಹಜಾರೆ ಆಂದೋಲನ ಬೆರಳೆತ್ತಿ ತೋರಿಸಿದೆ.

ಭ್ರಷ್ಟಾಚಾರ ತಪ್ಪೇ ಅಲ್ಲ ಎಂಬಂತಹ ಧೋರಣೆಯನ್ನು ನಾವೀಗ ತೊಡೆದು ಹಾಕಬೇಕಾಗಿದೆ. ಅದಕ್ಕಾಗಿ ಮಾಡಬೇಕಾದ್ದೇನು? ಭ್ರಷ್ಟಾಚಾರದ ಜೊತೆ ರಾಜಿ ಮಾಡಿಕೊಳ್ಳುವ ಬದಲಾಗಿ
ನಮ್ಮ ಸರ್ವಶಕ್ತಿಯಿಂದ ಅದನ್ನು ಪ್ರತಿಭಟಿಸುವುದು. ಬಳಕೆದಾರರ ವೇದಿಕೆಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ಸಂಘಟನೆಗಳು ಲಕ್ಷಗಟ್ಟಲೆ ಪ್ರಕರಣಗಳಲ್ಲಿ ಕಾನೂನಿನ ಚೌಕಟ್ಟಿನಲ್ಲಿಯೇ ಬಳಕೆದಾರರಿಗೆ ನ್ಯಾಯ ಒದಗಿಸಿವೆ. ಮಾಹಿತಿ ಹಕ್ಕು ಕಾರ್ಯಕರ್ತರೂ ಭ್ರಷ್ಟಾಚಾರದ ಹಲವಾರು ಹಗರಣಗಳನ್ನು ಬೆಳಕಿಗೆ ತರುವಲ್ಲಿ ಬಹಳ ಯಶಸ್ಸು ಸಾಧಿಸಿದ್ದಾರೆ. ಇವೆಲ್ಲದರ ಮಾಹಿತಿ ಇಂಟರ್ ನೆಟ್ ನಲ್ಲಿ, ವೆಬ್ ಸೈಟ್ ಗಳಲ್ಲಿ ಮತ್ತು ಪುಸ್ತಕಗಳಲ್ಲಿ ಲಭ್ಯವಿದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ತಾನು ಅಸಹಾಯಕ ಎಂಬ ಭಾವನೆ ಯಾರಲ್ಲಿಯೂ ಇರಬಾರದು. ಯಾಕೆಂದರೆ ದಕ್ಷ ಆಡಳಿತ ವ್ಯವಸ್ಥೆ ನಮ್ಮೆಲ್ಲರ ಹಕ್ಕು. ಅದಕ್ಕಾಗಿ, ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಆಡಳಿತದ ಎಲ್ಲ ಹಂತಗಳಲ್ಲಿಯೂ ಅಳವಡಿಸಿಕೊಳ್ಳಲು ನಾವೆಲ್ಲರೂ ಶ್ರಮಿಸೋಣ.

ಅದರ ಜೊತೆಗೆ, ಪ್ರತಿಯೊಬ್ಬರೂ ಆತ್ಮಶೋಧನೆ ಮಾಡಿಕೊಂಡು, ಅನೀತಿಯ ಸೋಂಕೂ ಇಲ್ಲದಂತೆ ಬದುಕುವುದನ್ನು ರೂಢಿ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಇಂದೇ ಈ ಸಂಕಲ್ಪ ಮಾಡಿ, ಅದರಂತೆ ಬದುಕಿದರೆ ಅಣ್ಣಾ ಹಜಾರೆಯವರ ಆಂದೋಲನ ಸಾರ್ಥಕ, ಅಲ್ಲವೇ?
- ಅಡ್ಡೂರು ಕೃಷ್ಣ  ರಾವ್

ಚಿತ್ರ ಕೃಪೆಃ ಟೈಮ್ಸ್ ಆಫ್ ಇಂಡಿಯಾ

Comments