ಶ್ವಾನ ಪುರಾಣಮ್ 3
ಶ್ವಾನ ಪುರಾಣಮ್ 3
ಇನ್ನೊಂದು ಸಾರಿ ನಾವು ವಾರದ ಮಟ್ಟಿಗೆ ಊರಿಗೆ ಹೋದಾಗ ಮೂರ್ನಾಲ್ಕು ದಿನ ಹತ್ತಿರದ ಮನೆಯವರು ಯಾರು ಏನು ಕೊಟ್ಟರೂ ತಿನ್ನದೇ, ನಮ್ಮ ಬಾಗಿಲ ಬಳಿಯಲ್ಲೇ ಕಣ್ಣೀರಿಡುತ್ತಾ ಕುಳಿತಿತ್ತಂತೆ. ನಾವು ವಾಪಾಸು ಬಂದಮೇಲೆ ಇದೆಲ್ಲಾ ಕೇಳಿದ ನಮಗೆ ಹೃದಯ ತುಂಬಿ ಬಂದರೆ ಲೂಯಿ ನಮ್ಮನ್ನೆಲ್ಲಾ ನೋಡಿ ತುಂಬಾನೇ ಸಂತಸ ಪಟ್ಟ.ಲೂಯಿಗೆ ನಮ್ಮ ಹಾಗೇ ಸಸ್ಯಾಹಾರ ಅಂದರೆ ತುಂಬಾ ಇಷ್ಟ. ಅದರಲ್ಲೂ ನಾನ್, ಐಸ್ ಕ್ರೀಮ್ ಎಂದರೆ ಪಂಚ ಪ್ರಾಣ.ನಾವು ಎಷ್ಟೇ ಅಡಗಿಸಿ ತಂದರೂ ಅವನಿಗೆ ತಿಳಿದು,ಅದನ್ನು ಅವನಿಗೆ ಸಿಗುವವರೆಗೆ ಕಿರುಚಾಡುತ್ತಿರುತ್ತಾನೆ. ಮಕ್ಕಳಂತೂ ಅವನನ್ನು ತುಂಬಾನೇ ಹಚ್ಚಿಕೊಂಡಿದ್ದಾರೆ, ಆದರೆ ಅದು ಆಟದ ಪ್ರೀತಿಗಷ್ಟೇ ಸೀಮಿತ.
ಹೀಗಿರುವಾಗ ಬಂದೆರಗಿದ ಎರಡು ತರಹದ ವಿಪತ್ತು ನನ್ನನ್ನು ದೀರ್ಘ ಚಿಂತೆಯಲ್ಲಿ ಮುಳುಗಿಸಿತು. ಮೊದಲನೆಯದು, ನಮ್ಮ ಈ ಹೊಸ ಸದಸ್ಯನ ಆಗಮನ - ಜಾತಕ, ಕುಂಡಲಿಗಳನ್ನು ನಂಬುವ ಮನೆತನದವರಾದ ನಮ್ಮ ಮನೆಯವರಲ್ಲಿ,ನಡೆದು ಬಂದ ಹಿಂದಿನ ಅಚಾರದ ಪ್ರಕಾರ, ಹೊರಗಿನಿಂದ ಬಂದ ನಾಯಿ ತಿಥಿ ಮಾಡಿಸುತ್ತದೆ, ಬಂದ ಬೆಕ್ಕು ಮದುವೆ ಮಾಡಿಸುತ್ತೆ ಅಂತ ಪ್ರಚಾರವಿದ್ದು, ನನ್ನ ತಾಯಿಯಿಂದ ಅವಳ ಸೊಸೆ ಅರ್ಥಾತ್ ನನ್ನ ಧರ್ಮಪತ್ನಿಗೆ ಎಲ್ಲಿಂದಲೋ ಬಂದ ಈ ಲೂಯಿಯನ್ನು ಇಟ್ಟುಕೊಳ್ಳಲೇ ಬಾರದು ಅಂತ ಅಪ್ಪಣೆಯಾಯಿತು, ಅಲ್ಲದೇ ಇದಕ್ಕೆ ಇಂಬು ಕೊಡುವಂತೆ ನನ್ನ ಸಹ ಧರ್ಮಿಣಿಯ ತಾಯಿಯವರಿಂದ ಕೂಡಾ ಇದೇ ವಿಷಯ ರವಾನೆಯಾಗಿ, ಲೂಯಿಯ ಕೊರಳಿಗೆ ಯಮ ಪಾಶವಾಗಿ ಪರಿಣಮಿಸಿತು.ಜತೆಯಲ್ಲೇ ಎರಡನೆಯದು ನನಗೆ ಬೆಂಗಳೂರಿಗೆ ವರ್ಗಾವಣೆಯಾದ ವಿಷಯವೂ ಬರಸಿಡಿಲಿನಂತೆ ಬಂದೊರಗಿತು.ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಡಿಮೆಯೆಂದರೆ ನಾಲ್ಕೈದು ತಿಂಗಳಾದರೂ ನಾನು ಒಬ್ಬನೇ ಬೆಂಗಳೂರಿನಲ್ಲಿರಬೇಕಾಗಿರುವುದರಿಂದ ನಾನು ಅಲ್ಲಿಗೆ ಹೋದರೆ ಇಲ್ಲಿ ಲೂಯಿಯ ಗತಿ? ಅವನು ನಮ್ಮನ್ನು ಎಷ್ಟು ಹೊಂದಿಕೊಂಡಿದ್ದಾನೆಂದರೆ ಮನೆಯವನೇ ಆಗಿದ್ದಾನೆ, ಆದರೆ ಗೃಹಮಂತ್ರಿ ಸುತರಾಂ ಒಪ್ಪಲಿಲ್ಲ, ಮನೆಯಲ್ಲಿ ಮೊದಲೇ ಇದ್ದ ಎರಡು ಪ್ರಾಣಿಗಳನ್ನೇ ತುಂಬಾ ಕಷ್ಟದಲ್ಲಿ ಸಾಕುತ್ತಿರುವಾಗ, ಇನ್ನೊಂದು ಅದೇ ತರಹದ ತಾಪತ್ರಯ ಕಟ್ಟಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಕಡಾಖಂಡಿತವಾಗಿ ಹೇಳಿಬಿಟ್ಟಳು.ಅದು ನಿಜವೂ ಕೂಡಾ. ನನ್ನ ವರ್ಗಾವಣೆಯ ಟೆನ್ಷನ್, ಮಕ್ಕಳ ಓದು,ಮನೆಯ ಉಸ್ತುವಾರಿ,ಸಾಗಾಟದ ಪ್ಯಾಕಿಂಗ್, ಇವೆಲ್ಲದರ ಜತೆ ಲೂಯಿಯ ಹೊಸತೊಂದು ಸಮಸ್ಯೆ ಬೇಡವೇ ಬೇಡ,ಎಂದುದದರಿಂದ ನಾನು ಬೆಂಗಳೂರಿಗೆ ಹೋಗುವುದರೊಳಗಾಗಿ ಲೂಯಿಯನ್ನು ಹೇಗಾದರೂ, ಎಲ್ಲಾದರೂ ಸರಿಯಾದ ಜಾಗದಲ್ಲಿ ಸೇರಿಸುವ ಹೊಸದೊಂದು ಜವಾಬ್ದಾರಿ ನನ್ನ ಹೆಗಲಿಗೆ ಜೋತು ಬಿದ್ದಿತು.
ಪ್ರತಿದಿನ ನನಗಂತೂ ಆಫೀಸಿನಲ್ಲಿ ಅದರದ್ದೇ ವಿಷಯ, ಲೂಯಿಯ ಲೀಲಾಮೃತ ಹೇಳಿನನಗಂತೂ ಎಂದೂ ದಣಿವೆನ್ನಿಸಲಿಲ್ಲ, ನನ್ನ ಸೆಕ್ಷನ್ ಸಹೋದ್ಯೋಗಿ ಆಶಾಲತ ಎಲ್ಲಾ ವಿಷಯ ಕೇಳಿ ಲೂಯಿಯನ್ನು ಯಾರ ಹತ್ತಿರ ಬಿಟ್ಟರೆಒಳ್ಳೆಯದು ಎಂದು ಪ್ಲಾನ್ ಮಾಡುತ್ತಿದ್ದರು. ಅಗೊಮ್ಮೆ ಇದೆಲ್ಲಾ ಕೇಳುತ್ತಿದ್ದ ತ್ರಿವೇಣಿ ಬಾಯಿ ಬಂದು "ಲೂಯಿಯನ್ನು ನನಗೆ ಕೊಡಿಸಾರ್, ನಾನು ಬಡವಳು ನಿಜ ನನ್ನ ಮನೆಯಲ್ಲಿ ನಾನೂ ನನ್ನ ಮಗ ಇಬ್ಬರೇ ಇರುವುದು, ನೀವು ಲೂಯಿಯನ್ನ ನನಗೆ ಕೊಟ್ಟರೆ ಮೂರು ಜನರಾದ ಹಾಗೆ ಆಯ್ತು. ನನಗೂ ಕಳ್ಳ ಕಾಕರ ಭಯ ತಪ್ಪಿದ ಹಾಗೆ ಆಯ್ತು, ಆಲೋಚನೆ ಮಾಡಿ ಹೇಳಿ ಸಾರ್" ಎಂದಳು. ನೋಡೋಣ, ಆಲೋಚನೆ ಮಾಡಿ ಹೇಳ್ತೇನೆ" ಎಂದೆ. ನಿಜ ಹೇಳಬೇಕೆಂದರೆ ಲೂಯಿಯನ್ನು ಅವಳಿಗೆ ಕೊಡಲು ಆಗ ನನ್ನ ಮನಸ್ಸೊಪ್ಪಲಿಲ್ಲ.
ಮೊದಲು, ನನ್ನ ಖಾಸಾ ದೋಸ್ತ್ ಅಗಿದ್ದ ಪರಶುರಾಮನಲ್ಲಿ ಇದನ್ನು ಹೇಳಿದಾಗ "ಆತ ನೋಡು ಈ ಸಮಸ್ಯೆಯನ್ನು ನಾನು ಚುಟಕಿ ಹಾಕೋದ್ರಲ್ಲಿ ಅದನ್ನು ಬಗೆಹರಿಸಿ ಬಿಡುವೆ, ನಿನ್ನ ನಾಯಿಯನ್ನು ನಾನೇ ಸಾಕುತ್ತೇನೆ ಎಂದು ಹೇಳಿ ಈಗಲೇ ಹೊರಡೋಣ ನಡಿ ಎನ್ನುತ್ತಾ ತನ್ನ ಕಾರಿನಲ್ಲಿ ಕೂಡಲೇ ನನ್ನ ಮನೆಗೆ ಹೊರಟ. ಕಷ್ಟಪಟ್ಟು ಲೂಯಿಯನ್ನು ಹಿಡಿದು ಕೆಳತಂದೆ. ಅದನ್ನು ನೋಡಿದ ಪರಶು ರಾಮ ಗಾಬರಿಯಲ್ಲಿ " ನಾನೇನೋ ಇದನ್ನು ಸಣ್ಣ ಮರಿಯೆಂದುಕೊಂಡಿದ್ದೆ, ಇದು ತುಂಬಾನೇ ದೊಡ್ಡ ನಾಯಿ" ಎಂದ. ನಾನು "ಇದು ದೊಡ್ಡದಲ್ಲ, ನೋಡಿ"ಎಂದು ಲೂಯಿಯನ್ನು ಎರಡೂ ಕೈಯ್ಯಲ್ಲಿಎತ್ತಿಕೊಂಡು (ಕುರಿಮರಿ ಎತ್ತುವ ಹಾಗೆ) ತೋರಿಸಿದೆ.ಲೂಯಿಗೇ ಇಷ್ಟವಾದ ಬಟರ್ ಬಿಸ್ಕಿಟ್ ತುಂಡು ಕೊಟ್ಟು ಅವನಿಗೆ ಸ್ವಲ್ಪ ಪ್ರೀತಿ ತೋರಿಸುವ ಅಭ್ಯಾಸ ಮಾಡಿಸಲು ಹೇಳಿದೆ, ಆತ ಕೊಟ್ಟ ದ್ದನ್ನು ಲೂಯಿ ತಿಂದಷ್ಟು ಹೊತ್ತು ಅವನ ಆಜ್ಞಾಕಾರಿಯಾದ. ಆದರೆ ಆತ ಯಾವಾಗ ಇವನನ್ನು ಎತ್ತಿಕೊಳ್ಳಲು ಹೋದನೋ ತನ್ನ ಎಲ್ಲಾ ಹಲ್ಲುಗಳನ್ನೂ ಒಮ್ಮೆಲೇ ವಿಚಿತ್ರ ರೀತಿಯಲ್ಲಿ ತೋರಿಸಿಬಿಟ್ಟ. ಲೂಯಿಯ ತೆರೆದ ಬಾಯಿ ನೋಡಿದ ಪರಶುರಾಮ ಇಲಿಯಮರಿಯಾಗಿಬಿಟ್ಟ. ಹೇಗೆ ಬಂದಿದ್ದನೋ ಅವನ ಮಾರುತಿ ಕಾರಿನಲ್ಲಿ ಹಾಗೆಯೇ ವಾಪಾಸು ಹೋದ, ಸುತರಾಮ್ ಒಪ್ಪದೇ, ಆಫೀಸಿನಲ್ಲಿ ನನ್ನ ಬಂಗ್ಲೆಯಲ್ಲಿ ತುಂಬ ಚೆನ್ನಾಗಿ ಇರ್ತಾನೆ ಅವ, ಅವನಿಗೆ ಏನೂ ಕಮ್ಮಿಯಾಗದು, ನೋಡು ನಿನಗೆ ನಾನು ನಾಯಿ ಸಾಕುವುದು ಹೇಗೆ ಅಂತ ತೋರಿಸಿ ಕೊಡ್ತೇನೆ, ಎಂದೆಲ್ಲಾ ಹೇಳಿದ್ದ, ಆದರೆ ಈಗ ಹಾಗೆಯೇ ಹೊರಟು ಹೋಗಿದ್ದ. ನನ್ನ ಮೊದಲನೆಯ ಪ್ರಯತ್ನ ಫ಼ಲಿಸಲಿಲ್ಲ. ಮರನೆಯ ದಿನ ಈತ ಆಫೀಸಿನಲ್ಲಿ ಏನು ಹೇಳಿದನೋ ಮತ್ತಿಬ್ಬರು ನನ್ನ ದೋಸ್ತಿಗಳು ದಿನಾ ನನ್ನ ಮುಖ ನೋಡದೇ, ನನ್ನ ಹತ್ತಿರ ಮಾತನಾಡದಿದ್ದರೇ ಬೆಳಗೇ ಆಗಲ್ಲ ಅಂತಿದ್ದವರು, ಆ ದಿನದಿಂದ ನನ್ನ ಹತ್ತಿರವೂ ಬರಲಿಲ್ಲ.
(ಮುಂದುವರಿಯುವುದು)
Comments
ಉ: ಶ್ವಾನ ಪುರಾಣಮ್ 3
In reply to ಉ: ಶ್ವಾನ ಪುರಾಣಮ್ 3 by kavinagaraj
ಉ: ಶ್ವಾನ ಪುರಾಣಮ್ 3
ಉ: ಶ್ವಾನ ಪುರಾಣಮ್ 3
In reply to ಉ: ಶ್ವಾನ ಪುರಾಣಮ್ 3 by manju787
ಉ: ಶ್ವಾನ ಪುರಾಣಮ್ 3
ಉ: ಶ್ವಾನ ಪುರಾಣಮ್ 3
In reply to ಉ: ಶ್ವಾನ ಪುರಾಣಮ್ 3 by partha1059
ಉ: ಶ್ವಾನ ಪುರಾಣಮ್ 3