ಜಾತಿನಿವಾರಣೆ ಮತ್ತು ಲೈಂಗಿಕ ಬೋಧನೆ
"ನಮ್ಮ ದೇಶ ಜಾತ್ಯಾತೀತ ದೇಶ", ನಮ್ಮದು "ಧರ್ಮ ನಿರಪೇಕ್ಷ ದೇಶ", ನಾವು "ದೇಶದ ಹಿಂದುಳಿದವರನ್ನು ಉದ್ಧರಿಸಿಬೇಕು" ಎಂಬ ದೊಡ್ಡ ದೊಡ್ಡ ಮಾತುಗಳನ್ನು ಭಾರತದಲ್ಲಿ ಕೇಳುತ್ತಾ ಬೆಳೆಯದ ಮಕ್ಕಳೇ ಇಲ್ಲ ಎಂದುಕೊಳ್ಳುತ್ತೇನೆ. ತಾತ್ವಿಕವಾಗಿ ಇದು ತುಂಬಾ ಘನವಾದ ಮಾತು. ಈ ಮಾತಿನಲ್ಲಿ ತುಂಬಾ ಮೌಲಿಕವಾದ ವಿಚಾರಗಳಿವೆ. ನಮ್ಮನ್ನು ನಾವು ನೋಡಿಕೊಳ್ಳುವ ರೀತಿಯನ್ನು ಇದು ನಿರ್ದೇಶಿಸುತ್ತದೆ, ನಿರೂಪಿಸುತ್ತದೆ. ಯಾವುದೋ ಅಮೂರ್ತವಾದ ನೆಲೆಯಲ್ಲಿ ನಮ್ಮ ದೇಶದ ಹಿರಿಮೆಯನ್ನು ನಾವು ಅರಿಯುವಂತೆ, ಕೊಂಡಾಡುವಂತೆ, ಸಂಭ್ರಮಿಸುವಂತೆ ಪ್ರೇರೇಪಿಸುತ್ತದೆ. ನಮ್ಮ ಮನಸ್ಸಿನಲ್ಲಿ ದೇಶದ ಬಗ್ಗೆ ಅಮೂಲ್ಯವಾದ ಪರಿಕಲ್ಪನೆಗಳನ್ನು ಬಿತ್ತುತ್ತವೆ.
ಆದರೆ ಈ ಎಲ್ಲ ವಿಚಾರವಾಹಿನಿಗಳು ನಮ್ಮ ದೇಶದ ಜಾತಿಯತೆಯನ್ನು, ಜಾತಿವಾದವನ್ನು ಅಳಿಸಲು ಸಾಧ್ಯವಾಗಿದೆಯೆ ಎಂಬುದು ಪ್ರಶ್ನೆ. ಇಂದಿಗೂ ಜಾತೀಯ ರಾಜಕೀಯ ಫಲ ಕೊಡುತ್ತಲೇ ಇರುವುದು, ಮೀಸಲಾತಿಯಿದ್ದೂ ಹಿಂದುಳಿದ ಜನಾಂಗಗಳು ಹಿಂದುಳಿದೇ ಇರುವುದು, ದಲಿತರ ಮತ್ತು ಹಿಂದುಳಿದವರ ಮೇಲೆ ಸಣ್ಣಪುಟ್ಟ ವಿಷಯಕ್ಕೂ ದೌರ್ಜನ್ಯ ನಡೆಯುವುದು ನಮ್ಮ ದೇಶದಲ್ಲಿ ನಡೆಯುತ್ತಲೇ ಬಂದಿದೆ. ಇಪ್ಪತ್ತೊಂದನೆಯ ಶತಮಾನದಲ್ಲೂ ಜಾತೀಯತೆ ನಮ್ಮ ನಡುವೆ ಪಿಡುಗಾಗಿ ಉಳಿದೇ ಇದೆ. ವೈಜ್ಞಾನಿಕವಾಗಿ ಜಾತಿಯ ಅಸಂಬದ್ಧತೆ ಗೊತ್ತಿದ್ದೂ, ಸಾಮಾಜಿಕವಾಗಿ ಅದರ ಕ್ರೌರ ಗೊತ್ತಿದ್ದೂ, ವಯ್ಯುಕ್ತಿಕವಾಗಿ ಅದರ ಪರಿಣಾಮ ಗೊತ್ತಿದ್ದೂ ಯಾಕೆ ಜಾತಿ ಹಾಗೆಯೇ ಉಳಿದಿದೆ? ಬೆಂಕಿ ಸುಡುತ್ತದೆ ಎಂದು ಗೊತ್ತಿದ್ದೂ ಅದರಿಂದ ಯಾಕೆ ದೂರ ಸರಿಯುತ್ತಿಲ್ಲ?
ರಾಜಕೀಯವನ್ನು ದೂರುವ ಮಾತನ್ನು ಸದ್ಯಕ್ಕೆ ಪಕ್ಕಕ್ಕಿಡುತ್ತೇನೆ. ಏಕೆಂದರೆ, ಜಾತ್ಯಾಧಾರಿತ ರಾಜಕೀಯವನ್ನು ನಾವು ಗೊಣಗುತ್ತಾ ಸಹಿಸಿಕೊಂಡು ಬಂದಿರುವುದನ್ನು ಗಮನಿಸಿ. ಆಗೀಗ ಅದರ ಬಗ್ಗೆ ಬಯ್ಯುತ್ತಾ ಇದ್ದೇವೆಯೇ ಹೊರತು ಅದರ ಬಗ್ಗೆ ಗಂಭೀರವಾದ ಪ್ರತಿಕ್ರಿಯೆ ಬಂದಿರುವುದು ಕಾಣುವುದಿಲ್ಲ. ಪ್ರತಿಕ್ರಿಯೆ ಮಾತಿನಲ್ಲಿ ಬಂದಿರಬಹುದು, ಭಾಷಣ ಲೇಖನಗಳಲ್ಲಿ ಇರಬಹುದು. ಆದರೆ ಕ್ರಿಯೆಯಲ್ಲಿ ಏನಾಗಿದೆ ಎಂದು ನೋಡಿದಾಗ ನಿರಾಶೆಯಾಗದೆ ಇರಲಾರದು. ಆದ್ದರಿಂದ ಜಾತಿ ಪರಿಸ್ಥಿತಿಗೆ ರಾಜಕೀಯವೇ ಕಾರಣ ಎಂದು ಪರಿಗಣಿಸದೆ ಅದೂ ಕೂಡ ನಮ್ಮ ಮತ್ತಾವುದೋ ಸೋಲಿನ ಒಂದು ಪರಿಣಾಮ ಎಂದು ನೋಡುವುದು ಹೆಚ್ಚು ಸೂಕ್ತ ಅನಿಸುತ್ತದೆ. ಜಾತಿ ರಾಜಕೀಯ ಖಂಡಿತವಾಗಿಯೂ ಜಾತೀಯತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು, ಕಾಪಾಡಿ ಬೆಳೆಸುತ್ತಿರುವುದು ಒಂದು ಮಟ್ಟದಲ್ಲಿ ನಿಜ ಎಂದು ಅನ್ನಿಸಿಯೂ ಈ ಮಾತು ಹೇಳುತ್ತಿದ್ದೇನೆ.
ಜಾತ್ಯಾತೀತ ರಾಜಕೀಯ, ಮೀಸಲಾತಿ, ಅಂತರ್-ಜಾತೀಯ ವಿವಾಹ ಇತ್ಯಾದಿಗಳನ್ನು ಜಾತಿ ನಿವಾರಣೆಗೆ ಮುಖ್ಯವಾದ ಪರಿಹಾರ ಮಾರ್ಗಗಳೆಂದು ಪರಿಗಣಿಸುತ್ತೇವೆ. ಇದು ಒಂದು ಅರ್ಥದಲ್ಲಿ ನಿಜವೂ ಹೌದು. ಅವುಗಳಿಂದ ಸ್ವಲ್ಪ ಮಟ್ಟಿಗಾದರೂ ಜಾತಿನಿವಾರಣೆಯ ಕೆಲಸ ಆಗುತ್ತಿದೆ ಎನ್ನುವುದು ಸುಳ್ಳಲ್ಲ. ಆದರೆ ಇವುಗಳೆಲ್ಲಾ ಜಾತಿಯನ್ನು ಸಾಮಾಜಿಕ ಮತ್ತು ಸಾಮುದಾಯಿಕ ಸಮಸ್ಯೆಯಾಗಿ ಮಾತ್ರ ನೋಡುವುದರಿಂದ ಕಾಣುವ ಪರಿಹಾರ ಮಾರ್ಗಗಳು ಮತ್ತು ಜಾತೀಯ ಮನಸ್ಸಿನ ಜತೆಗಿನ ನಮ್ಮ ಸಂಘರ್ಷಕ್ಕೆ ತುಂಬಾ ತಡವಾದ ಪ್ರತಿಕ್ರಿಯೆ. ರಾಜಕೀಯ, ಮೀಸಲಾತಿ, ವಿವಾಹ ಇತ್ಯಾದಿಗಳ ಹಂತಕ್ಕೆ ಬರುವ ಎಷ್ಟೋ ಮುಂಚೆಯೇ ಆಗಬೇಕಾದ ಕೆಲಸವನ್ನು ನಾವು ಮರೆಯುತ್ತಿದ್ದೇವೆ. ಎಳೆಯ ಮನಸ್ಸುಗಳಲ್ಲೇ ಇದರ ವಿಚಾರವನ್ನು ಹುಟ್ಟು ಹಾಕುವುದು ಮುಖ್ಯವಲ್ಲವೆ? ಅದು ವಿಚಾರವಾದ ಆದರಷ್ಟೇ ಸಾಲದು. ಶಿಕ್ಷಣ, ವಿದ್ಯೆ ಆದರಷ್ಟೇ ಸಾಲದು. ಅದು ತರಬೇತಿಯಾಗಬೇಕು. ಅಂದರೆ ನಿಜ ಜೀವನದಲ್ಲಿ ಜಾತಿಯ ನಿಷ್ಫಲತೆಯನ್ನು ಮನಗಾಣಿಸಲು ಶಿಬಿರಗಳು, ಕಾರ್ಯಾಗಾರಗಳು ಬೇಕಾಗುತ್ತವೆ. ಅವು ಒಟ್ಟಾರೆ ಜಾತಿಬೇಧ, ವರ್ಣಬೇಧ, ಲಿಂಗಬೇಧ ಇತ್ಯಾದಿಯಾಗಿ ಎಲ್ಲ ರೀತಿಯ ಬೇಧಭಾವಗಳನ್ನು ಹೋಗಲಾಡಿಸುವ ಕಾರ್ಯಾಗಾರವಾಗಬೇಕಾಗುತ್ತದೆ.
ಶಿಕ್ಷಣ, ವಿದ್ಯೆಗೂ ತರಬೇತಿಗೂ ಇರುವ ವ್ಯತ್ಯಾಸ ಎಲ್ಲರಿಗೂ ತಿಳಿದಿರುವಂಥದೇ. ತರಬೇತಿಯಲ್ಲಿ ಸಲಕರಣೆ ಸಾಧನಗಳು ಲಭ್ಯವಾಗುತ್ತದೆ. ಶಿಕ್ಷಣ, ವಿದ್ಯೆಯಲ್ಲಿ ಸಲಕರಣೆ ಸಾಧನಗಳ ಹಿಂದಿನ ತಿಳುವಳಿಕೆ ಮುಖ್ಯವಾಗುತ್ತದೆ. ಆದರೆ ಪ್ರತಿದಿನದ ಜೀವನದಲ್ಲಿ ಜಾತಿಬೇಧವನ್ನು ಎದುರಿಸಲು ನಮಗೆ ಇಲ್ಲದಿರುವ ಮುಖ್ಯ ಅಂಶ ಸಲಕರಣೆಗಳು. ಎದುರಿಸಬೇಕಾದ ಪರಿಸ್ಥಿತಿಗಳಲ್ಲಿ ನಾವು ಉಪಯೋಗಿಸಬೇಕಾದ ತಂತ್ರಗಳು. ನಮಗೆ ಅತಿ ಹತ್ತಿರದವರು, ನಮಗೆ ಜೀವನದಲ್ಲಿ ತುಂಬಾ ಸಹಾಯ ಮಾಡಿದವರು ಜಾತಿಬೇಧ ಮಾಡಿದಾಗ ಅದನ್ನು ಹೇಗೆ ಎದುರಿಸಬೇಕು? ಆಗ ನಮಗಾಗುವ ಮುಜುಗರವನ್ನು ಹೇಗೆ ವ್ಯಕ್ತಪಡಿಸುವುದು? ಜಾತಿಬೇಧಕ್ಕೆ ಗುರಿಯಾದವರಷ್ಟೇ ಅಲ್ಲ ಜಾತಿಬೇಧಮಾಡಿದವರಿಗೂ ಒಳ್ಳೆಯದಾಗುವಂತೆ ಹೇಗೆ ಪರಿಸ್ಥಿತಿಯನ್ನು ನಿಭಾಯಿಸುವುದು? ಜಾತೀಯ ಮನಸ್ಸುಗಳೊಂದಿಗೆ ವ್ಯವಹರಿಸಲು ಬೇಕಾದ ಅತಿಮುಖ್ಯವಾದ ವ್ಯಾವಹಾರಿಕ ಸಲಕರಣೆ ನಮಗೆ ಇಲ್ಲದಾಗಲೇ ಸಿಟ್ಟು, ಕೂಗಾಟ, ಜಗಳ ಇತ್ಯಾದಿಗಳಲ್ಲಿ ನಮ್ಮ ಮಾತು ಪರ್ಯಾವಸನಗೊಂಡು ದ್ವೇಷ, ಹಗೆತನದ ಪರಿಸ್ಥಿತಿ ಏರ್ಪಡುತ್ತದೆ.
ಆಡಿಕೊಂಡು ಖುಷಿಯಾಗಿರಬೇಕಾದ ಮನಸ್ಸುಗಳಲ್ಲಿ ಜಾತಿಯಂಥ ವಿಚಾರಗಳನ್ನು ಹಾಕುವುದು ಎಷ್ಟು ಸರಿ ಎಂಬ ಪ್ರಶ್ನೆ ಏಳಬಹುದು. ಆದರೆ, ಬ್ರಾಹ್ಮಣ ಜಾತಿಯಲ್ಲಿ ಏಳೆಂಟು ವರ್ಷದವರಿಗೆ ಉಪನಯನ ಮಾಡುವುದು ನಮಗೆ ಗೊತ್ತಿದೆ. ಬೇರೆ ಬೇರೆ ಜಾತಿಗಳಲ್ಲಿ ಇಂತಹ ನೂರಾರು ಜಾತೀಯ ಆಚರಣೆಗಳು ಎಳೆಯ ಮನಸ್ಸುಗಳ ಮೇಲೆ ಪರಿಣಾಮ ಬೀರದೇ ಇರುತ್ತದೆಯೆ? ಮಕ್ಕಳ ಮನಸ್ಸುಗಳ ಉಪಪ್ರಜ್ಞೆಯಲ್ಲಿ ಸ್ಥಾಪಿತವಾಗುವ ಇಂಥ ಜಾತೀಯ ವಿಚಾರಗಳನ್ನು ಹೊರಗೆ ತಂದು ಚರ್ಚಿಸುವ ಕೆಲಸವೂ ಸಣ್ಣ ವಯಸ್ಸಲ್ಲೇ ಆಗಬೇಕಲ್ಲವೆ? ಇಂಥ ವ್ಯವಸ್ಥೆ ನಮ್ಮ ಶಾಲೆಗಳಲ್ಲಿ ಇರಬೇಕಲ್ಲವೆ?
ಈ ರೀತಿಯ ತರಬೇತಿಯ ಬಗ್ಗೆ ಯೋಚಿಸಿದಾಗ ಒಂದೆರಡು ಉದಾಹರಣೆಗಳು ನೆನಪಾದವು. ಮೊದಲನೆಯದು ಜೇನ್ ಎಲಿಯಟ್ ಎಂಬ ಶಾಲಾ ಶಿಕ್ಷಕಿ ೧೯೬೮ರಲ್ಲಿ ನಡೆಸಿದ ಪ್ರಯೋಗದ ಬಗ್ಗೆ ನಾನು ನೋಡಿದ ಒಂದು ಸಾಕ್ಷ್ಯಚಿತ್ರ. ಬರೀ ಬಿಳಿಯರೇ ಇರುವ ಪುಟ್ಟ ಮಕ್ಕಳ ಶಾಲಾ ತರಗತಿಯೊಂದಕ್ಕೆ ವರ್ಣಬೇಧವನ್ನು ತಿಳಿಹೇಳಲು ನಡೆಸಿದ ಪ್ರಯೋಗ ಅದು. ನೀಲಿಗಣ್ಣು ಮತ್ತು ಕಂದುಗಣ್ಣಿನ ಆಧಾರದ ಮೇಲೆ ಶಾಲಾ ಮಕ್ಕಳನ್ನು ಬೇರ್ಪಡಿಸಿ ಕರಿಜನರನ್ನು ಅಮೇರಿಕ ನಡೆಸಿಕೊಳ್ಳುತ್ತಿದ್ದ ರೀತಿಯಲ್ಲಿ ನೀಲಿಗಣ್ಣಿನ ಮಕ್ಕಳನ್ನು ನಡೆಸಿಕೊಂಡು, ಕಂದುಬಣ್ಣದವರನ್ನು ಬೇಕಂತಲೇ ನೀಲಿಗಣ್ಣಿನ ಮಕ್ಕಳಿಗಿಂತ ಉಚ್ಛವಾಗಿ ನಡೆಸಿಕೊಳ್ಳುವುದೇ ಆ ಪ್ರಯೋಗದ ಮೂಲ ರೂಪ. ಅಮೇರಿಕದಲ್ಲಿ ನೀಲಿಗಣ್ಣು ಬಿಳಿಯ ಜನರಲ್ಲೇ ಉತ್ಕೃಷ್ಟತೆಯ ಸಂಕೇವಾಗಿ ಪರಿಗಣಿಸಲ್ಪಡುವುದು ನಿಮಗೆ ತಿಳಿದಿರಬಹುದು. ಆಗ ತಿಳಿದುಬಂದ ಒಂದು ವಿಷಯವೆಂದರೆ ಪ್ರಯೋಗದ ವೇಳೆಯಲ್ಲಿ ಬೇರೆ ಕ್ಲಾಸಿನಲ್ಲೂ ಕಂದುಬಣ್ಣದ ಮಕ್ಕಳು ಚೆನ್ನಾಗಿ ಪಾಠವನ್ನು ಕಲಿಯುತ್ತಿದ್ದು, ನೀಲಿಗಣ್ಣಿನ ಮಕ್ಕಳು ಹಿಂದೆ ಬಿದ್ದದ್ದು. ಮುಂದೆ ಜೇನ್ ಎಲಿಯಟ್ ದೊಡ್ಡವರಿಗೂ ಇಂಥ ಕಾರ್ಯಾಗಾರವನ್ನು ನಡೆಸಿ ಈಗ ಕಂಪನಿಗಳ ಕೆಲಸಗಾರರಿಗೂ ಅದನ್ನು ನಡೆಸುತ್ತಾಳೆ. ಆಕೆಯ ಪ್ರಯೋಗಗಳ ಬಗ್ಗೆ, ಕಾರ್ಯಾಗಾರದ ಬಗ್ಗೆ ವಾದವಿವಾದಗಳು ಏನೇ ಇದ್ದರು ಆಕೆಯ ಮೂಲ ಆಶಯ ತುಂಬಾ ಘನವಾದುದು ಎಂದು ನನಗನಿಸುತ್ತದೆ. ಇಷ್ಟಾಗಿಯೂ ಇದು ಅಮೇರಿಕ/ಆಸ್ಟ್ರೇಲಿಯಾದಂಥ ದೇಶಗಳಲ್ಲಿ ಈಗಲೂ ಸಾಕಷ್ಟು ಪ್ರಚಲಿತದಲ್ಲಿರುವ ವರ್ಣಬೇಧದ ಬಗೆಗೆ ಅರಿವು ಮೂಡಿಸುವ, ಮಾನಸಿಕ ತಯಾರಿ ನಡೆಸುವ ಕಾರ್ಯಾಗಾರ ಅಷ್ಟೆ. ನಾವೇ ಬೇಧಕ್ಕೆ ಗುರಿಯಾದಾಗ ಅಥವಾ ನಮ್ಮ ಎದುರೇ ಬೇಧಕೃತ್ಯ ನಡೆದಾಗ ಅದನ್ನು ನಿಭಾಯಿಸಲು ಬೇಕಾದ ಸಾಧನ ಸಲಕರಣೆಗಳನ್ನು ನೀಡುವುದಿಲ್ಲ.
ಮತ್ತೊಂದು ಉದಾಹರಣೆ ಆಸ್ಟ್ರೇಲಿಯಾದ ಶಾಲೆಗಳಲ್ಲಿ ಆರೇಳು ವರ್ಷದ ಪುಟ್ಟ ಮಕ್ಕಳಿಗೆ ಲೈಂಗಿಕ ಬೋಧನೆಯ ತರಗತಿಗಳು ಇರುತ್ತವೆ. ಈ ತರಗತಿಗಳಿಗೆ ಮಕ್ಕಳನ್ನು ಕಳಿಸಲು ತಂದೆ-ತಾಯಂದರು ಒಪ್ಪಗೆ ಸೂಚಿಸಬೇಕು. ಈ ತರಗತಿಗಳಲ್ಲಿ ಮಕ್ಕಳಿಗೆ ಲೈಂಗಿಕ ಅಂದರೆ, ಲೈಂಗಿಕ ಅತಿಕ್ರಮಣದಿಂದ ತಮ್ಮನ್ನು ಕಾಪಾಡಿಕೊಳ್ಳವುದರ ಬಗ್ಗೆ ಬೋಧನೆಯಾಗುತ್ತದೆ. ಯಾರಾದರೂ ಹಿರಿಯರು ಮಕ್ಕಳ ಹತ್ತಿರ ಬಂದು ಮುಟ್ಟಬಾರದ ಮೈ ಭಾಗಗಳನ್ನು ಮುಟ್ಟಿದರೆ ಹೇಗೆ ಹುಷಾರಾಗಿರಬೇಕು. ಹೇಗೆ ತಂದೆ-ತಾಯಂದಿರಿಂದ ಸಹಾಯ ಪಡೆಯಬೇಕು ಎಂದೆಲ್ಲಾ ಸುಲಭವಾಗಿ ಗ್ರಹಿಸಲು ಸಾಧ್ಯವಾಗುವ ಹಾಗೆ ತಿಳಿಹೇಳಲಾಗುತ್ತದೆ. ಇದು ಯಾಕೆ ಮುಖ್ಯವೆಂದರೆ ಮಕ್ಕಳ ಲೈಂಗಿಕ ಅತಿಕ್ರಮಣದ ಅಂಕಿ ಅಂಶಗಳ ಪ್ರಕಾರ ಅತಿ ಹೆಚ್ಚಿನ ಸಂದರ್ಭಗಳಲ್ಲಿ ಅತಿಕ್ರಮಣಕಾರರು ಕುಟುಂಬದವರೋ, ಕುಟುಂಬದ ಪರಿಚಿತರೋ, ಒಟ್ಟಾರೆ ಮಕ್ಕಳಿಗೆ ಪರಿಚದವರೇ ಆಗಿರುತ್ತಾರೆ. ಆದ್ದರಿಂದ ಮಕ್ಕಳಿಗೆ ಅತಿಕ್ರಮಣ ನಡೆಸಿದವರ ಮೇಲೆ ದೂರು ಹೇಳಲು ಅಂಜಿಕೆ ಇರುತ್ತದೆ. ಅತಿಕ್ರಮಣಕಾರರೊಡನೆ ತಂದೆ-ತಾಯಂದಿರು ಚೆನ್ನಾಗಿ ನಡೆದುಕೊಳ್ಳುವುದು ಇವರಿಗೆ ಮಾನಸಿಕ ಗೊಂದಲ ಉಂಟು ಮಾಡುತ್ತದೆ. ಹಾಗಾಗಿಯೆ ಮಕ್ಕಳಿಗೆ ಇಂಥ ಬೋಧನೆಯ ಅಗತ್ಯ ತುಂಬಾ ಇರುತ್ತದೆ. ಭಾರತೀಯ ಸಮಾಜದಲ್ಲಿ ಮಕ್ಕಳಿಗೆ ಲೈಂಗಿಕ ಬೋಧನೆ ನಡೆಸಬೇಕಾದ ಅವಶ್ಯಕತೆ ಸದ್ಯಕ್ಕೆ ಇಲ್ಲದಿರಬಹುದು. ಏಕೆಂದರೆ ನಮ್ಮ ಸಮಾಜ ಪಾಶ್ಚಿಮಾತ್ಯ ಸಮಾಜದಷ್ಟು ಇನ್ನೂ ಲೈಂಗೀಕೃತಗೊಂಡಿಲ್ಲ. ಆದರೂ ಲೈಂಗಿಕ ವಿಕೃತಿ ಇಲ್ಲ್ಲಎಂದು ಹೇಳಲು ಬರುವುದಿಲ್ಲ. ಆದರೆ ಆರೋಗ್ಯಕರ ಲೈಂಗಿಕತೆಯ ಚರ್ಚೆಯ ಅನಿವಾರ್ಯತೆಯಂತೂ ಇದೆ. ನಾನಿಲ್ಲಿ ಉದಾಹರಣೆಯನ್ನು ಎತ್ತಿಕೊಂಡ ಕಾರಣ ಲೈಂಗಿಕ ಚರ್ಚೆಯಲ್ಲ. ಪುಟ್ಟ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಮಾರಕವಾಗುವಂಥ ಲೈಂಗಿಕ ಅತಿಕ್ರಮಣಗಳಿಂದ ಅವರನ್ನು ರಕ್ಷಿಸಲು ಅವರನ್ನು ತರಬೇತು ಮಾಡುವುದು, ತಮ್ಮನ್ನು ತಾವು ರಕ್ಷಿಸಿಕೊಳ್ಳವುದನ್ನು ಅವರಿಗೆ ಕಲಿಸುವುದು ಎಷ್ಟು ಮುಖ್ಯ ಮತ್ತು ಉಪಯುಕ್ತ ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ. ಜಾತಿಯ ವಿಷಯದಲ್ಲೂ ಕೂಡ ಸಣ್ಣ ವಯಸ್ಸಿನಲ್ಲೇ ಇಂಥ ತರಬೇತಿಯ ಅಗತ್ಯವಿದೆ. ದಿನವಹಿ ನಡೆಯುವ ಆಚರಣೆಗಳಲ್ಲಿ ಜಾತಿಬೇಧ ಹೇಗೆ ರೂಪ ಪಡೆಯುತ್ತಿದೆ ಎಂಬ ಅಂಶ. ಮನೆಯಲ್ಲಿ ಪ್ರೀತಿಪಾತ್ರರಾದ ತಂದೆ-ತಾಯಂದಿರು ಜಾತೀಯವಾಗಿ ನಡೆದುಕೊಂಡಾಗ ಮಕ್ಕಳು ಅದನ್ನು ಹೇಗೆ ನಿಭಾಯಿಸಬೇಕು. ತಮ್ಮ ಹತ್ತಿರದ ಸ್ನೇಹಿತರು ಒಡನಾಡಿಗಳು ಜಾತೀಯವಾಗಿ ನಡೆದುಕೊಂಡಾಗ ಹೇಗೆ ವ್ಯವಹರಿಸಬೇಕು ಎಂಬಂಥ ತರಬೇತಿ ತುಂಬಾ ಮುಖ್ಯ. ಇಂಥ ತರಬೇತಿ ಹೊಂದಿದ ಮನಸ್ಸು ಬೆಳೆದು ದೊಡ್ಡದಾದ ಮೇಲೆ ಸಿಟ್ಟು, ಕೂಗಾಟ ಜಗಳವನ್ನು ಸ್ವಲ್ಪ ಮಟ್ಟಿಗಾದರೂ ಹತ್ತಿಕ್ಕಿ ಮುಖ್ಯವಾದ ಅಂಶದತ್ತ ಗಮನ ಹರಿಸಲು ಸಾಧ್ಯವಾಗಬಹುದು. ರಾಜಕೀಯ ಅಂಥ ಮನಸ್ಸನ್ನು ಸ್ವಾಧೀನ ಮಾಡಿಕೊಳ್ಳುವುದು ಕಷ್ಟವಾಗಬಹುದು.
ಇಷ್ಟು ಆಶಯಗಳನ್ನು ನಿಮ್ಮ ಮುಂದಿಟ್ಟು, ನೆನದೊಡನೆ ನಿದ್ದೆಯಿಂದ ಧಿಗ್ಗನೆ ಎಚ್ಚರವಾಗುವಂಥ ಕಳವಳವನ್ನು ನಿಮ್ಮ ಜತೆ ಹಂಚಿಕೊಳ್ಳುತ್ತೇನೆ. ಇವು ಯಾವುದೂ ಭಾರತೀಯ ಮನಸ್ಸಿಗೆ ಹೊಳೆಯದಂಥ ವಿಷಯವೇನೂ ಅಲ್ಲ. ನಮ್ಮ ವಿಚಾರವಂತರಿಗೆ, ಸಾಹಿತಿಗಳಿಗೆ, ಸಾಮಾಜಿಕ ನೇತಾರರಿಗೆ ಗೊತ್ತಿರದ ವಿಷಯವೇನಲ್ಲ. ಆದರೆ ಆ ದಿಕ್ಕಿನಲ್ಲಿ ಬೇಕಾದ ಕೆಲಸವಾಗದೇ ಇರುವುದು ನೋಡಿದರೆ ನಮಗೆ ಜಾತಿ ಬಗೆಗೆ ನಿಜವಾದ ಆತಂಕವಿದೆಯೆ ಎಂದು ಯೋಚಿಸುತ್ತೇನೆ. ಸಂಸ್ಕೃತಿ ಪರಂಪರೆ ಎಂಬಿತ್ಯಾದಿ ಅಂಶಗಳನ್ನು ಜಾತೀಯತೆಯೊಂದಿಗೆ ಕಲಸುಮೇಲೋಗರ ಮಾಡಿ ಇಂಥ ಹೀನ ಆಚರಣೆಯನ್ನು ಕಾಪಾಡಿಕೊಂಡು ಬರುತ್ತಿದೇವಾ ಎಂದು ಚಿಂತೆಯಾಗುತ್ತದೆ.