ಇಂಟೆಲ್:ದಕ್ಷ ಸಂಸ್ಕಾರಕ ರೆಡಿ

ಇಂಟೆಲ್:ದಕ್ಷ ಸಂಸ್ಕಾರಕ ರೆಡಿ

ಇಂಟೆಲ್:ದಕ್ಷ ಸಂಸ್ಕಾರಕ ರೆಡಿ


ಇಂಟೆಲ್ ಕಂಪೆನಿಯು ಕಂಪ್ಯೂಟರ್ ಸಂಸ್ಕಾರಕಗಳನ್ನು ತಯಾರಿಸುವಲ್ಲಿ ಅಗ್ರಗಣ್ಯ ಕಂಪೆನಿ.ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಸಾಧನಗಳ ಸಂಸ್ಕಾರಕಗಳ ಮಟ್ಟಿಗೆ ಮಾತ್ರಾ ಇಂಟೆಲ್ ತುಸು ಹಿಂದೆ ಬಿದ್ದಿದೆ.ಅರ್ಮ್ ಸಂಸ್ಕಾರಕವು ಈ ಸಾಧನಗಳ ಮಟ್ಟಿಗೆ ಇಂಟೆಲ್ ಅನ್ನು ಹಿಂದಿಕ್ಕಿದೆ.ಸದ್ಯ ಆಟಂ ಮತ್ತು ಓಕ್ ಟೈಲ್ ಎನ್ನುವ ಸಂಸ್ಕಾರಕಗಳು ಇಂಟೆಲ್ ಮಟ್ಟಿಗೆ ಮಿತ ಶಕ್ತಿ ಬಳಸುವ ಸಂಸ್ಕಾರಕಗಳು.ಈಗ ಅತ್ಯಧಿಕ ಕ್ಷಮತೆಯುಳ್ಳ ಸಂಸ್ಕಾರಕವನ್ನು ತಯಾರಿಸಿದೆ.ಹೊಸ ಬಳಸುವ ಶಕ್ತಿ ಎಷ್ಟು ಕಡಿಮೆ ಅಂದರೆ,ಅದು ಸೌರಕೋಶದಿಂದ ಉತ್ಪಾದನೆಯಾದ ಶಕ್ತಿಯನ್ನು ಬಳಸಿ ಕೆಲಸ ಮಾಡಬಲ್ಲುದು.ಒಂದು ಸಣ್ಣ ಪೋಸ್ಟೇಜ್ ಸ್ಟ್ಯಾಂಪ್ ಗಾತ್ರದ ಸೌರಕೋಶದಿಂದ ತಯಾರಾದ ಶಕ್ತಿ ಸಂಸ್ಕಾರಕಕ್ಕೆ ಸಾಕಾಗುತ್ತದೆ.ಅಂದ ಹಾಗೆ ಕುತೂಹಲದ ವಿಷಯವೆಂದರೆ,ಲೀನಕ್ಸ್ ಆಪರೇಟಿಂಗ್ ವ್ಯವಸ್ಥೆ ಇದರಲ್ಲಿ ಬಳಕೆಯಾಗಿದೆ.ಟ್ರಾನ್ಸಿಸ್ಟರುಗಳು ಕೆಲಸ ಮಾಡಲು ಬಳಸುವ ವೊಲ್ಟೇಜ್‌ನ ಅತಿ ಸಮೀಪದ ವೋಲ್ಟೆಜ್ ಬಳಸುವ ಮೂಲಕ ಸಂಸ್ಕಾರಕದ ಶಕ್ತಿಯ ಅಗತ್ಯವನ್ನು ತಗ್ಗಿಸಲು ಇಂಟೆಲ್ ಸಮರ್ಥವಾಯಿತು.ಈ ಸಂಸ್ಕಾರಕದ ದಕ್ಷತೆಯ ಕಾರಣ,ಇದು ಮೊಬೈಲ್ ಸಾಧನಗಳಿಗೆ ಹೇಳಿ ಮಾಡಿಸಿದ ಸಂಸ್ಕಾರಕವಾಗಲಿದೆ.ಬಳಸುವಾಗ,ವಿದ್ಯುತ್ ಸಂಪರ್ಕ ಇಲ್ಲದ ಸಾಧನಗಳಲ್ಲಿ ದಕ್ಷ ಸಂಸ್ಕಾರಕವನ್ನು ಬಳಸುವುದು ಬ್ಯಾಟರಿಯ ದೀರ್ಘ ಬಳಕೆಗೆ ಅನುಕೂಲ ಕಲ್ಪಿಸುತ್ತವೆ.ಹೊಸ ಸಂಸ್ಕಾರಕಕ್ಕೆ ಕ್ಲಾರಮೊಂಟ್ ಎಂದು ಹೆಸರಿಸಲಾಗಿದೆ.ಇವನ್ನು ಬಟಾಟೆ ಅಥವಾ ಲಿಂಬೆರಸದಲ್ಲಿ ಲಭ್ಯವಿರುವ ಶಕ್ತಿಯಿಂದಲೇ ಕೆಲಸ ಮಾಡುವಂತೆ ಮಾಡಲು ಸಾಧ್ಯವೆಂದು ಕಂಪೆನಿಯ ವಕ್ತಾರ ಹೇಳಿಕೊಂಡರು.ಇಂತಹ ಸಂಸ್ಕಾರಕವು ಕೆಲಸವಿಲ್ಲದಾಗಲೂ ಸ್ಥಗಿತಗೊಳ್ಳದೆ ಸದಾ ಚಾಲೂ ಆಗಿಟ್ಟರೂ ತೊಂದರೆಯಾಗದು.ಇದರ ಶಕ್ತಿಯ ಅಗತ್ಯ ಹತ್ತು ಮಿಲ್ಲಿವ್ಯಾಟ್‌ಗಿಂತ ಕಡಿಮೆಯಾದ ಕಾರಣ,ಇದರಲ್ಲಿ ಶಾಖ ಬಿಡುಗಡೆಯಾಗದು.ಶಾಖವನ್ನು ಹೊರಗಿನ ವಾತಾವರಣಕ್ಕೆ ಹೊರದೂಡಲು ಅಗತ್ಯವಾದ ಹೀಟ್ ಸಿಂಕ್ ಇದರಲ್ಲಿಲ್ಲ.ದಿನಪೂರ್ತಿ ನಡೆಯಬಹುದಾದ ಲ್ಯಾಪ್‌ಟಾಪ್,ಅಂತರ್ಜಾಲದಿಂದ ಮಾಹಿತಿಯನ್ನು ಆಗಾಗ ಇಳಿಸಿಕೊಳ್ಳುವ ಕೆಲಸ ಮಾತ್ರಾ ಮಾಡುತ್ತಿದ್ದರೆ,ಹತ್ತು ದಿನ ಕೆಲಸ ಮಾಡುವಷ್ಟು ಕಡಿಮೆ ಬ್ಯಾಟರಿಯನ್ನು ಬಳಸುತ್ತದೆ.

------------------------------------------------
ಆರ್ ಟಿ ಐ :ಮೊಬೈಲ್ ಮೂಲಕ ಅರ್ಜಿ
ಮಾಹಿತಿಯ ಹಕ್ಕು ಕಾನೂನು ಮೂಲಕ ಅಗತ್ಯ ಮಾಹಿತಿಗೆ ಅರ್ಜಿ ಸಲ್ಲಿಕೆಯನ್ನು ಮೊಬೈಲ್ ಮೂಲಕ ಸಾಧ್ಯವಾಗಿಸುವತ್ತ ಕರ್ನಾಟಕ ಸರಕಾರ ಹೆಜ್ಜೆಯಿಕ್ಕಿದೆ.ಖಾಸಗಿ ಸೇವಾದಾತೃಗಳ ಮೂಲಕ ಈ ಸೇವೆ ಜನರಿಗೆ ಲಭ್ಯವಾಗಲಿದೆ.ಮಾಹಿತಿಹಕ್ಕಿನ ಪ್ರಕಾರ ಸಲ್ಲಿಸಿದ ಅರ್ಜಿಗೆ ಅನ್ವಯಿಸುವ ಶುಲ್ಕವನ್ನು ಮೊಬೈಲ್ ಕರೆಯ ಮೇಲೆ ವಿಧಿಸುವ ಶುಲ್ಕದ ಮೂಲಕ ವಸೂಲಿ ಮಾಡಲಾಗುತ್ತದೆ.ಗ್ರಾಹಕ ಸರಕಾರಿ ಕಚೇರಿಗೆ ಹೋಗದೆ,ಈ ಸೇವೆಯ ಮೂಲಕ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ.ಟಿಸಿಎಸ್ ಕಂಪೆನಿಯ ಸೋದರಿ ಸಂಸ್ಥೆಯಾದ ಸಿಎಂಸಿಯು ಇದನ್ನು ಅಭಿವೃದ್ಧಿ ಪಡಿಸಲು ಸರಕಾರದಿಂದ ಹಸಿರು ಸಂಕೇತ ಪಡೆದಿದೆ.ಬಿಹಾರದಲ್ಲಿ ಇಂತಹ ಸೇವೆಯು ಲಭ್ಯವಾಗಿ ಇದೀಗಲೇ ನಾಲ್ಕು ವರ್ಷಗಳು ಕಳೆದಿವೆ.ಕಂಪೆನಿಯು ನಿರ್ವಹಿಸುವ ಕಾಲ್ ಸೆಂಟರಿನ ಮೂಲಕ ಜನರು ಮಾಹಿತಿಗಾಗಿ ಸಲ್ಲಿಸುವ ಬೇಡಿಕೆಯನ್ನು ದಾಖಲಿಸಿಕೊಂಡು ಸಂಬಂಧಿತ ಇಲಾಖೆಗೆ ಅರ್ಜಿಯನ್ನು ಸಲ್ಲಿಸುವ ಕೆಲಸವನ್ನು ಕಂಪೆನಿಯು ಮಾಡಲಿದೆ.ಅರ್ಜಿಯ ವಿಲೇವಾರಿ ಬಗ್ಗೆಯೂ ಮಾಹಿತಿಯನ್ನು ಕಾಲ್ ಸೆಂಟರಿನ ಮೂಲಕ ಪಡೆಯಲು ಸಾಧ್ಯ.ಹದಿನೈದು ಜನರನ್ನು ಕಾಲ್ ಸೆಂಟರಿನ ನಿರ್ವಹಣೆಗೆ ಸದ್ಯ ಬಳಸಲು ಕಂಪೆನಿಯು ತೀರ್ಮಾನಿಸಿದೆ.ಜನರು ಅಂತರ್ಜಾಲ ತಾಣದ ಮೂಲಕವೂ ಅರ್ಜಿ ಸಲ್ಲಿಸಬಹುದು.ಇದರಲ್ಲಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವ ಆಯ್ಕೆಯೂ ಇದೆಯಂತೆ.
------------------------------
ವಿಂಡೋಸ್ ಎಂಟು:ಮೊಬೈಲ್ ನಂಟು
ವಿಂಡೋಸ್ ಎಂಟು ಆಪರೇಟಿಂಗ್ ವ್ಯವಸ್ಥೆಯ ಮೂಲಕ ಮೈಕ್ರೋಸಾಫ್ಟ್ ಕಂಪೆನಿಯು ತನ್ನ ಹೊಸ ಆಪರೇಟಿಂಗ್  ತಂತ್ರಾಂಶವನ್ನು ಬರುವ ವರ್ಷ ತಯಾರು ಮಾಡಿ,ಜನರಿಗೆ ಒದಗಿಸಲು ಸಿದ್ಧತೆ ನಡೆಸಿದೆ.ಮಾಮೂಲಿ ಡೆಸ್ಕ್‌ಟಾಪ್ ಕಂಪ್ಯೂಟರುಗಳು,ಲ್ಯಾಪ್‌ಟಾಪ್ ಮತ್ತು ನೋಟ್‌ಬುಕ್‌ಗಳಲ್ಲಿ ಮಾತ್ರವಲ್ಲದೆ ಟ್ಯಾಬ್ಲೆಟ್ ಸಾಧನಗಳಲ್ಲೂ ಇದನ್ನು ಬಳಸಲು ಸಾಧ್ಯವಾಗಲಿದೆ.ಹಾಗಾಗಿ ಟ್ಯಾಬ್ಲೆಟ್‌ಗಳಿಗೆ ವಿಂಡೋಸ್ ವ್ಯವಸ್ಥೆಯಲ್ಲಿ ಬಳಸಬಹುದಾದ ತಂತ್ರಾಂಶಗಳ ತಯಾರಿ ಇದೀಗಲೇ ನಡೆಯಬಹುದು ಎನ್ನುವ ನಿರೀಕ್ಷೆಯಿದೆ.ಆಂಡ್ರಾಯಿಡ್,ಐಫೋನ್ ಅಂತೆ ವಿಂಡೋಸ್ ಇಂತಹ ಸಾಧನಗಳಲ್ಲಿ ಬಳಕೆಯಾಗುವ ಪ್ರಮಾಣ ಇಲ್ಲವೇ ಇಲ್ಲ ಎನ್ನುವಷ್ಟು ವಿರಳ.ಅಲ್ಲದೆ ವಿಂಡೋಸ್ ಎಂಟು ಬಿಡುಗಡೆಯಾಗಲು ಇನ್ನೂ ಸಮಯ ಹಿಡಿಸಬಹುದು ಎನ್ನುವುದು,ನಿಶ್ಚಿತ ಬಳಕೆದಾರರ ಭರವಸೆ ಇಲ್ಲದಿರುವುದು,ಅಭಿವೃದ್ಧಿಕಾರರನ್ನು ಸೆಳೆಯಲು ಪ್ರಮುಖ ಅಡ್ಡಿಗಳಾಗಿವೆ.
-------------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.
*ಮಣಿಪಾಲ್ ಮಾರ್ಟ್ ಏನು?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS48 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*ಕನ್ನಡ ಟೈಪಿಸಲು ಕಂಪ್ಯೂಟರಿನಲ್ಲಿ ಬರಹ,ನುಡಿ,ಪದ ಮುಂತಾದ ತಂತ್ರಾಂಶ ವ್ಯವಸ್ಥೆಗಳಿವೆ.ಬಹುಮಾನ ವಿಜೇತರು ಅವಿನಾಶ್ ವಿ,ಕಿನ್ನಿಕಂಬಳ.ಅಭಿನಂದನೆಗಳು.
Udayavani Unicode  
Udayavani
*ಅಶೋಕ್‌ಕುಮಾರ್ ಎ