ಬೀchi ಜೋಕು (ಭಾಗ ೩): ಅಳಿಯ ದೆವ್ವ್.......ರು

ಬೀchi ಜೋಕು (ಭಾಗ ೩): ಅಳಿಯ ದೆವ್ವ್.......ರು

    ("ಬುರುಡೆ ನಾಟಿ" ಮತ್ತು "ಅಣ್ಣಿಗೇರಿ ಒಂದು ಭಯಾನಕ ಅನುಭವ"ದ ಪ್ರಭಾವವೋ ಏನೋ ನನಗೂ ದೆವ್ವದ ಬಗ್ಗೆ ಬರೆಯುವ ಪ್ರೇರೇಪಣೆಯಾದಂತಿದೆ.)
                                                                           ಎರಡು ದೆವ್ವಗಳು

    ತಿಮ್ಮನಿಗೆ ಬೆಂಗಳೂರಿಗೆ ವರ್ಗವಾಗಿ ಹಲವಾರು ತಿಂಗಳುಗಳಾದವು. ತಿಮ್ಮನ ಹೆಂಡತಿ ಅವನಿಗೆ ಹಲವಾರು ಪತ್ರ ಬರೆದಳು, ತನ್ನನ್ನು ಮತ್ತು ಮಕ್ಕಳನ್ನು ಅಲ್ಲಿಗೇ ಕರೆಸಿಕೊಳ್ಳಿ ಎಂದು. ಪ್ರತಿಬಾರಿ ತಿಮ್ಮನದು ಅದೇ ಉತ್ತರ; ಇಲ್ಲಿ ಸರಿಯಾದ ಮನೆ ಸಿಕ್ಕಿಲ್ಲವೆಂದು ತಾನೇ ತನ್ನ ಸ್ನೇಹಿತರೊಬ್ಬರ ಮನೆಯಲ್ಲಿದ್ದು ಕಷ್ಟಪಡುತ್ತಿದ್ದೇನೆ, ಇತ್ಯಾದಿ......ಇತ್ಯಾದಿ.  ತಿಮ್ಮನ ಹೆಂಡತಿಗೂ ಈ ರೀತಿಯ ಪತ್ರಗಳನ್ನು ಓದಿ ಓದಿ ರೋಸಿಹೋಯ್ತು.  ಕಟ್ಟ ಕಡೆಯದಾಗಿ ತಿಮ್ಮನಿಗೆ ಓಲೆಯೊಂದನ್ನು ರವಾನಿಸಿದಳು. ಇನ್ನೊಂದು ವಾರದೊಳಗೆ ನೀವು ನಮ್ಮನ್ನು ಅಲ್ಲಿಗೆ ಕರೆಸಿಕೊಳ್ಳದಿದ್ದರೆ, ನಾನು ಮಕ್ಕಳ ಸಮೇತ ನನ್ನ ತವರು ಮನೆಗೆ ಹೋಗಿ ಬಿಡುತ್ತೇನೆ. ಹೆಂಡತಿಯ ಈ ಅಸ್ತ್ರ ಪ್ರಯೋಗದಿಂದ ವಿಚಲಿತನಾದ ತಿಮ್ಮ ಮನೆ ಕೊಡಿಸುವ ಬ್ರೋಕರ‍್ನನ್ನು ಹಿಡಿದುಕೊಂಡು ಅಗಧೀ ಸೀರಿಯಸ್ಸಾಗಿ ಮನೆ ಹುಡುಕಲು ಷುರು ಮಾಡೇಬಿಟ್ಟ. ಹಲವಾರು ಮನೆ ನೋಡಿದ ತಿಮ್ಮನಿಗೆ; ಒಂದೋ ಬಾಡಿಗೆ ಹೆಚ್ಚು ಇಲ್ಲಾ ನೀರು ಸರಿಯಾಗಿ ಬರುವುದಿಲ್ಲಾ, ಇಲ್ಲಾ ಮತ್ತೇನೋ ಸಮಸ್ಯೆ; ಹೀಗಾಗಿ ಯಾವ ಮನೆಯೂ ಸರಿ ಕಾಣಲಿಲ್ಲ.; ಏನು ಮಾಡುವುದಕ್ಕೂ ದಿಕ್ಕು ತೋಚದಂತಾಯಿತು. ಇಂಥಾ ಪರಿಸ್ಥಿತಿಯಲ್ಲಿ ಎಲ್ಲ ರೀತಿಯಿಂದಲೂ ಅನುಕೂಲವಾಗಿರುವ ಮನೆಯೊಂದು ಕಣ್ಣಿಗೆ ಬಿತ್ತು. ನೋಡೋಣವೆಂದು ಕೊಂಡು ಹೋಗಿ ಕೇಳಿದರೆ ಬಾಡಿಗೆದಾರರಿಗೇ ಮನೆಯ ಮಾಲೀಕರು ಪ್ರತಿ ತಿಂಗಳು ನೂರು ರೂಪಾಯಿ ಬಾಡಿಗೆ ಕೊಡುತ್ತಾರೆಂದು ಮತ್ತು ಕನಿಷ್ಟ ಪಕ್ಷ ಎರಡು ವರ್ಷವಾದರೂ ಆ ಮನೆಯಲ್ಲಿ ವಾಸಮಾಡಬೇಕೆಂಬ ಕರಾರಿಗೆ ಒಪ್ಪುವುದಾದರೆ ಮಾತ್ರ ಆ ಮನೆಯನ್ನು ಬಾಡಿಗೆಗೆ ಕೊಡುವುದಾಗಿ ತಿಳಿಸಿದರು. ಬೆಂಗಳೂರಿನಲ್ಲಿ ಅಡ್ವಾನ್ಸಿಲ್ಲದೆ ಮನೆ ಸಿಗುವುದೇ ಕಷ್ಟ! ಅಂಥಾದ್ದರಲ್ಲಿ ಓನರ್ರೇ ಎದುರು ಬಾಡಿಗೆ ಕೊಡುತ್ತಾರೆಂದರೆ?!!!! ಇದರಲ್ಲೇನೋ ಮರ್ಮವಿರ ಬೇಕೆಂದು ತಿಮ್ಮ ಸುತ್ತಮುತ್ತಲು ವಿಚಾರಿಸಿದ. ಆಗ ತಿಳಿದು ಬಂದ ವಿಚ್ಹಾರವೇನೆಂದರೆ ಆ ಮನೆಯಲ್ಲಿ ದೆವ್ವವೊಂದು ವಾಸವಾಗಿರುವುದರಿಂದ ಆ ಮನೆಗೆ ಬರಲು ಬಾಡಿಗೆದಾರರು ಹೆದರುತ್ತಿದ್ದರು; ಆದ್ದರಿಂದ ಉಪಾಯವಾಗಿ ಯಾರನ್ನಾದರೂ ಆ ಮನೆಯಲ್ಲಿ ಕೆಲವು ಕಾಲ ವಾಸವಾಗಿರುವಂತೆ ಮಾಡಿದರೆ; ಜನಕ್ಕೆ ದೆವ್ವದ ಹೆದರಿಕೆ ಹೋಗುತ್ತದೆ. ಇವರ ನಂತರ ಬಾಡಿಗೆಗೆ ಬರುವವರಿಂದ ಬಾಡಿಗೆ ಕೀಳಬಹುದೆಂದು ಮನೆ ಮಾಲೀಕರ ವಿಚಾರವಾಗಿತ್ತು. ಇಷ್ಟೆಲ್ಲಾ ಗೊತ್ತಾದ ಮೇಲೂ ಅಲ್ಲಿ ವಾಸಕ್ಕಾಗಿ ತಾನು ಒಪ್ಪಿರುವುದಾಗಿ ಮನೆಮಾಲಿಕರಿಗೆ ಹೇಳಿದ ತಿಮ್ಮ, ಕೂಡಲೇ ತನ್ನ ಹೆಂಡತಿಗೆ ತಾರು ಕಳುಹಿಸಿದ. ಅದರ ಒಕ್ಕಣೆ ಹೀಗಿತ್ತು: ಬೆಂಗಳೂರಿನಲ್ಲಿ ತನಗೆ ಮನೆ ಸಿಕ್ಕೆದೆಯೆಂದು, ಅದಕ್ಕಾಗಿ ತಮ್ಮ ಮಗಳಿಗೆ ಬೇಗನೇ ಮದುವೆ ಮಾಡಬೇಕೆಂದು ಮತ್ತು ಮಗಳು ಹಾಗು ಅಳಿಯನೊಂದಿಗೆ ಆ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಬೇಕೆಂಬುದು. ತಿಮ್ಮನ ಹೆಂಡತಿಗೆ ಆ ತಾರಿನ ತಲೆ-ಬುಡ ಅರ್ಥವಾಗಲಿಲ್ಲ, ತಕ್ಷಣವೇ ತನ್ನ ತಮ್ಮನನ್ನು ಕರೆದುಕೊಂಡು ಬೆಂಗಳೂರಿಗೆ ಹೊರಟು ಬಂದಳು. ತಿಮ್ಮ ಆ ದೆವ್ವದ ಮನೆಯ ವಿಚಾರ ತಿಳಿಸಿ ಅಲ್ಲಿಯೇ ತಾವು ಮಗಳು ಮತ್ತು ಅಳಿಯನೊಂದಿಗೆ ವಾಸವಾಗುವುದಾಗಿ ತಿಳಿಸಿದನು. ಆಗ ತಿಮ್ಮನ ಹೆಂಡತಿ ಅವನಿಗೇನಾದರೂ ತಲೆ-ಗಿಲೆ ಕೆಟ್ಟಿದೆಯಾ ಎಂದು ಕೇಳಿದಳು, ಇಲ್ಲಾಂದ್ರೆ ದೆವ್ವದ ಮನೆಯಲ್ಲಿ ಯಾರಾದರೂ ಅಳಿಯ ಮತ್ತು ಮಗಳೊಡನೆ ವಾಸವಾಗುತ್ತಾರೆಯೇ? ತಿಮ್ಮ ಬಿಡಿಸಿ ಹೇಳಿದ, "ಒಂದೇ ಮನೆಯಲ್ಲಿ ಎರಡೆರಡು ದೆವ್ವಗಳು ವಾಸವಾಗಿರುವುದಿಲ್ಲ ಕಣೇ!"  ಆಗ ತಿಮ್ಮನ ಹೆಂಡತಿ ಥಟ್ಟನೇ ಅಂದಳು, "ಅರ್ಥವಾಯ್ತು ಬಿಡಿ, ನಮ್ಮ ಮದುವೆಯಾದ ಬಳಿಕ ನಮ್ಮಪ್ಪ ನಿಮ್ಮನ್ನೇಕೆ ಮನೆಯೊಳಗಿಟ್ಟುಕೊಂಡಿದ್ದರೆಂದು!"

     "ಜಾಮಾತೋ ದಶಮೋ ಗ್ರಹಃ" - ಎಲ್ಲರಿಗೂ ಒಂಭತ್ತು ಗ್ರಹಗಳ ಕಾಟವಿದ್ದರೆ ಹೆಣ್ಣು ಕೊಟ್ಟ ಮಾವನಿಗೆ ಹತ್ತನೆಯ ಗ್ರಹವಾಗಿ ಅಳಿಯ ಕಾಡುತ್ತಾನೆ ಎನ್ನುವುದು ಇದರ ಭಾವಾರ್ಥ. ಅದು ಅಂದಿನವರಿಗೆ ಹಾಗೆ ಕಾಣಿಸಿದರೆ ಬೀchi ಸಾಹೇಬರಿಗೆ ಅಳಿಯ ದೇವರು ಕಾಣಿಸಿದ್ದು ಹೇಗೆ ಎಂಬುದೇ ಈ ಕಥೆಯ ಸ್ವಾರಸ್ಯ. ಕಥೆಯನ್ನು ನೆನಪಿನಾಳದಿಂದ ಬರೆದಿರುವುದರಿಂದ ಹಲವಾರು ಸ್ವಾರಸ್ಯಗಳು ಬಿಟ್ಟು ಹೋಗಿರಬಹುದು ಅಥವಾ ಮಾರ್ಪಾಡು ಹೊಂದಿರಬಹುದು ಅದಕ್ಕಾಗಿ ವಾಚಕರ ಕ್ಷಮೆ ಇರಲಿ.