ಚಲೋ ಮಲ್ಲೇಶ್ವರ ೧೩.೫

ಚಲೋ ಮಲ್ಲೇಶ್ವರ ೧೩.೫

ಚಲೋ ಮಲ್ಲೇಶ್ವರ ೧೩ರ ಮುಂದುವರಿದ ಭಾಗ-


(ಪಾರ್ಥಸಾರಥಿಯವರು ತಿರುಗಿ ನೋಡಿದಾಗ...................- "ನಾನು ಏಕೊ ಅನುಮಾನದಿಂದ ಮತ್ತೆ ಹಿಂದೆ ನೋಡಿದೆ, ಅರೆ ಹೌದಲ್ಲ , ಉನ್ನತ ದೇಹಿ, ದೈತ್ಯಾಕಾರಿ, ಗಣೇಶ ದೇವರನ್ನು ಮೀರಿಸುವ ಗುಡಾಣ ಹೊಟ್ಟೆ, ಮುಖದಲ್ಲಿ ತುಂಬಿನಿಂತ ನಗು, ಎಲ್ಲ ಸರಿ ಆದರೆ ಒಬ್ಬರಲ್ಲ ಇಬ್ಬರು !!! ಮಾತನಾಡಿದವರು ಯಾರು !!
ಹೆಚ್ಚು ಕಡಿಮೆ ಒಂದೆ ಆಕಾರ, ದೇಹ ,ಅರೆ ಇಬ್ಬರಲ್ಲಿ ಯಾರು ಗಣೇಶ ! ನಾನು ಮಾತು ಮರೆತು ನಿಂತೆ !)


ನನಗೂ ನನ್ನಷ್ಟೇ ಗಾತ್ರದ ಈ ದೈತ್ಯನ ಮೇಲೆ ಸಂಶಯವಿತ್ತು. ದೇವಸ್ಥಾನದ ಒಳಗೆ ನನ್ನ ಹಿಂಬದಿಯಲ್ಲೇ ಇದ್ದ. ಬಹುಷಃ ಬಾರಿಮುತ್ತು ಕಳುಹಿಸಿದ ಗೂಂಡಾ ಇರಬಹುದೇ? ಇವನಿಂದ ತಪ್ಪಿಸಿಕೊಳ್ಳಲು ಯಾವತ್ತೂ ಸುತ್ತು ಹಾಕದವನು ದೇವರಿಗೆ ಸುತ್ತು ಹಾಕಿದೆ. ಆವಾಗ ಪಕ್ಕಕ್ಕೆ ಬಂದ ಆತ "ನಮಸ್ತೆ, ನಾನೇ ಅಂಡಾಂಡಭಂಡ ಜ್ಯೋತಿಷಿ. ಜ್ಯೂಸೀ ನ್ಯೂಸ್ ಚಾನಲ್ನಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ನಡೆಸುತ್ತಿರುವೆ."ಅಂದ. ಗೂಂಡಾ ಅಲ್ಲವಲ್ಲ ಎಂದು ನೆಮ್ಮದಿಯಿಂದ "ನಿಮ್ಮನ್ನು ಗೊತ್ತಿಲ್ಲದವರು ಯಾರಿದ್ದಾರೆ? ನಾನೇ ಮಾತನಾಡಿಸಬೇಕೆಂದಿದ್ದೆ, ಕಾರ್ಯಕ್ರಮ ನನಗೆ ಬಹಳ ಇಷ್ಟ..."ಎಂದು ಸುಳ್ಳೇ ಹೊಗಳಿದೆ.


"ನೋಡಿ ಗಣೇಶರೆ, ನಿಮ್ಮಿಂದ ಒಂದು ಕೆಲಸವಾಗಬೇಕಿತ್ತು..."


"ತಮಗೆ ನನ್ನ ಹೆಸರು ಹೇಗೆ ಗೊತ್ತು?" ಎಂದೆ. "ನಿಮ್ಮ ಹೆಸರೇನು.. ನೀವು ನಿಮ್ಮ ಗೆಳೆಯರು ಚಲೋ ಮಲ್ಲೇಶ್ವರ ಹೊರಟಿರುವುದು, ಅದಕ್ಕೆ ಅನೇಕ ವಿಘ್ನಗಳು ಬರುತ್ತಿರುವುದು...ಎಲ್ಲಾ ಗೊತ್ತಿದೆ" ಅಂದರು. ಇದನ್ನು ಕೇಳಿ ನನಗೆ ಶಾಕ್! ಭಾರೀ ದೇಹವಿರುವುದರಿಂದ ಆಗುವ ಲಾಭವೆಂದರೆ ಎಲ್ಲಾ ಶಾಕ್‌ಗಳನ್ನು ಈ fat ಹೀರಿ, ಹಾರ್ಟ್ ತನಕ ಮುಟ್ಟಲು ಬಿಡುವುದಿಲ್ಲ..


ಹೇಗೂ ಫ್ರೀ ಆಗಿ ಸಿಕ್ಕಿದ್ದಾರೆ, ಪರಿಹಾರನೂ ಕೇಳಿ ಬಿಡೋಣ - " ಈ ವಿಘ್ನಗಳಿಗೆ ಪರಿಹಾರ ತಿಳಿಸುವಿರಾ?"


"ನಿಮ್ಮಲ್ಲಿ ಒಬ್ಬರಿಗೆ ಅವರಿಗಾಗದವರು ಮಾಟ ಮಾಡಿಸಿದ್ದಾರೆ. ಅದನ್ನು ತೆಗೆಸಿದಾಗಲೇ ನಿಮ್ಮ ಹಾದಿ ಸುಗಮವಾಗುವುದು. ಈಗಾಗಲೇ ಅದಕ್ಕೆ ವ್ಯವಸ್ಥೆ ಮಾಡಿರುವೆ. ಯೋಚಿಸಬೇಡಿ. ಈಗ ನನ್ನ ಕೆಲಸದ ಬಗ್ಗೆ-............................ " ಅವರು ಹೇಳುತ್ತಾ ಹೋದ ಹಾಗೇ ನನಗೆ ತಲೆಸುತ್ತು ಬರಲು ಶುರುವಾಯಿತು. "ಇಲ್ಲ. ನನ್ನಿಂದ ಸಾಧ್ಯವಿಲ್ಲ." ಎನ್ನುತ್ತಾ ಹೊರಗೋಡಿ ಬಂದೆ. ಜತೆಯಲ್ಲಿ ಅವರೂ ಬಂದರು. (ನಮ್ಮಿಬ್ಬರನ್ನು ಒಟ್ಟಿಗೇ ನೋಡಿದ ನಮ್ಮ "ಚಲೋ ಮಲ್ಲೇಶ್ವರ" ತಂಡಕ್ಕೆ ಕನ್‌ಫ್ಯೂಸ್!! ಯಾರು ಇವರಿಬ್ಬರಲ್ಲಿ ಗಣೇಶ!!)  ಕೊನೆಗೆ ಜ್ಯೋತಿಷಿಗಳೇ ಅವರ ಪರಿಚಯ ಹೇಳಿ, "ನಿಮ್ಮೆಲ್ಲರ ಪರಿಚಯ ನನಗಿದೆ! ಸಂಪದದಲ್ಲಿ ನಿಮ್ಮೆಲ್ಲರ ಲೇಖನ ನೋಡುತ್ತಿರುವೆ. ನೀವೆಲ್ಲಾ ಅನೇಕ ಸಮಸ್ಯೆಗಳನ್ನು ಪರಿಹರಿಸಿದ್ದೀರಿ. ಈಗ ನನ್ನ ಸಮಸ್ಯೆಯನ್ನೂ ಪರಿಹರಿಸಿ. ಅರ್ಜೆಂಟಾಗಿ ನಾನು ವಿದೇಶಕ್ಕೆ ಹೋಗಬೇಕಾಗಿದೆ. ಕಾರಣ ಕೇಳಬೇಡಿ. ಮೊದಲೇ ಗೊತ್ತಿರುತ್ತಿದ್ದರೆ ಅಷ್ಟೂ ಎಪಿಸೋಡ್ ಮೊದಲೇ ಶೂಟ್ ಮಾಡಿ ಇಟ್ಟುಕೊಳ್ಳುತ್ತಿದ್ದೆ. ಈಗ ಸಮಯವಿಲ್ಲ. ನನ್ನ ಈ ಕಾರ್ಡ್ ತೆಗೆದುಕೊಳ್ಳಿ. ಮಲ್ಲೇಶ್ವರದಲ್ಲಿ ಏನು ಬೇಕಾದರೂ ಪರ್ಚೇಸ್ ಮಾಡಿ. ಹಣವೆಷ್ಟಾದರೂ ತೊಂದರೆಯಿಲ್ಲ. ನನ್ನ ಹಾಗೇ ಇರುವ ಈ ಗಣೇಶರನ್ನು ಹಾಕಿ ನಾನು ಬರುವವರೆಗಿನ ಎಪಿಸೋಡ್‌ಗಳನ್ನು ಮಾಡಿ. ನಮ್ಮ ಚಾನಲ್‌ನ ವೀಕ್ಷಕರನ್ನು ಬೇರೆ ಚಾನಲ್‌ನ ಜ್ಯೋತಿಷಿಗಳು ಸೆಳಕೊಳ್ಳಬಾರದು" ಅಂದರು. "ಓಕೆ..ಓಕೆ.." ಅಂದು ಮೋಹನರು ಹೇಳಿದಾಗ ಜ್ಯೋತಿಷಿಗಳು ಎಲ್ಲರಿಗೂ ಕೈಬೀಸಿ, ತಮ್ಮ ಮರ್ಸಿಡಿಸ್ ಕಾರಲ್ಲಿ ಹೋದರು. "ನನ್ನಿಂದ ಸಾಧ್ಯವಿಲ್ಲ..ನನ್ನಿಂದ ಸಾಧ್ಯವಿಲ್ಲಾ..."ಎಂದು ಬೊಬ್ಬಿಟ್ಟರೂ ಕೇಳಿಸಿಕೊಳ್ಳಲಿಲ್ಲ. "ಥತ್.. ಇದೊಳ್ಳೆ ಗ್ರಹಚಾರವಾಯಿತಲ್ಲಾ.. ಅಶ್ವಿನಿ,ಭರಣಿ ಬಿಟ್ಟರೆ ನಂತರದ ನಕ್ಷತ್ರಗಳ ಹೆಸರೇ ಗೊತ್ತಿಲ್ಲ. ನಾನು ಜ್ಯೋತಿಷ್ಯ ಕಾರ್ಯಕ್ರಮ ಹೇಗೆ ನಡೆಸಲಿ? ನಿಮಗೆ ಬುದ್ಧಿ ಇದೆಯಾ? ಇಲ್ಲವಾ? ಓಕೆಯಂತೆ ಓಕೆ..."ಕೋಪಮಾಡಿಕೊಂಡು ದೇವಸ್ಥಾನದ ಕಟ್ಟೆಯಲ್ಲೇ ಕುಳಿತೆ.


ಮಂಜಣ್ಣ, ಸುರೇಶ್, ಗೋಪಾಲ್, ಪಾರ್ಥಸಾರಥಿ, ಮೋಹನ್, ಜಯ್, ಚಿಕ್ಕು, ಸತೀಶ ಎಲ್ಲಾ ಸೇರಿ ದೂರದಲ್ಲಿ ಸಮಾಲೋಚನೆ ನಡೆಸಿ, ಗೋಪಾಲ್ ಮತ್ತು ಪಾರ್ಥರನ್ನು ಬಿಟ್ಟು ಎಲ್ಲರೂ ಒಂದೊಂದು ಕಡೆ ಹೋದರು. ಪಾರ್ಥರು ನನ್ನ ಬಳಿ ಬಂದು "ಹೋಗಲಿ ಬಿಡಿ. ಅವರೆಲ್ಲಾ ಹೋದರು.ನಾವೇ ೩ ಜನ ಚಲೋಮಲ್ಲೇಶ್ವರ ಮುಂದುವರಿಸೋಣ." ಅಂದರು. ಸಮಾಧಾನವಾಗಿ ಅವರ ಜತೆ ಉತ್ಸಾಹದಿಂದ ಹೊರಟೆ.


" ಈ ಮಲ್ಲೇಶ್ವರ ಎಂಟನೇ ಕ್ರಾಸ್‌ನಲ್ಲಿ-ಹೇರ್‌ಪಿನ್‌ನಿಂದ ಹಿಡಿದು ನೆಕ್ಲೆಸ್‌ವರೆಗೆ, ಕೊತ್ತಂಬರಿ ಸೊಪ್ಪಿನಿಂದ ಹಿಡಿದು ಕಣಿಲೆವರೆಗೆ, ೫೦ ರೂ ಕರ್ಟನ್‌ನಿಂದ ಹಿಡಿದು ರೇಷ್ಮೆ ಸೀರೆವರೆಗೆ, ೧೦ ರೂ ಕ್ಯಾಸೆಟ್‌ನಿಂದ..."ನನ್ನ ಮಾತನ್ನು ಅರ್ಧಕ್ಕೆ ತಡೆದು ಗೋಪಾಲರು, "ಗಣೇಶರೆ, ರೇಷ್ಮೇ ಸೀರೆ ಅಂದಾಗ ನೆನಪಾಯಿತು. ಮನೆಯಾಕೆ ಹಬ್ಬಕ್ಕೆ ರೇಶ್ಮೇ ಸೀರೆ ತರಲು ಹೇಳಿದ್ದಳು. ಇಲ್ಲಿ ಹತ್ತಿರ ಒಳ್ಳೆಯ ಸೀರೆ ಅಂಗಡಿ ಯಾವುದಿದೆ?" ಅಂದರು. ವೀನೂಸ್ ಎದುರಿಗಿದ್ದ ರೇಶ್ಮೇ ಸೀರೆ ಅಂಗಡಿಗೆ ಕರಕೊಂಡು ಹೋದೆ. ಅವರ ಹೆಂಡತಿ ಭಾರೀ ಗಾತ್ರದವರೇ ಇರಬೇಕು ಕಾಣುತ್ತದೆ-೧೨ ಮೊಳ ಜರೀಸೀರೆ, ಬಹಳ ಅಬ್ಬರವಾಗಿರುವುದು ತೋರಿಸಲು ಹೇಳಿದರು. ಮ್ಯಾಚ್ ಆಗುತ್ತಾ ಎಂದು ನನಗೆ ಹೊದಿಸಿ ನೋಡುತ್ತಿದ್ದರು. "ಇದು ಸರಿ ಅಲ್ಲ, ಗೋಪಾಲರೆ. ನೋಡುವವರು ಏನು ತಿಳಕೊಳ್ಳುತ್ತಾರೆ.." "ಅಲ್ರೀ ನಮ್ಮಾಕೆಯದ್ದೂ ನಿಮ್ಮದೇ ಕಲರ್. ಹಾಗೇ ಮ್ಯಾಚ್ ಆಗುತ್ತಾ ನೋಡಿದ್ದು, ಕ್ಷಮಿಸಿ" ಅಂದ್ರು ಗೋಪಾಲರು. ಪರವಾಗಿಲ್ಲ. ಹತ್ತೇ ನಿಮಿಷದಲ್ಲಿ ೭-೮ ಸೀರೆ ಸಿಲೆಕ್ಟ್ ಮಾಡಿ, ಪ್ಯಾಕ್ ಮಾಡಿಸಿ, ಜ್ಯೋತಿಷಿಗಳ ಕಾರ್ಡಲ್ಲಿ ಪೇ ಮಾಡಿದರು. ನನಗೆ ಸರಿಕಾಣಿಸಲಿಲ್ಲ. ಆದರೆ ಹೇಗೆ ಹೇಳುವುದು? "ಇದನ್ನು ಮನೆಗೆ ತಲುಪಿಸಿ ಬಂದು, ಚಲೋಮಲ್ಲೇಶ್ವರ ಮುಂದುವರೆಸೋಣ" ಅಂದರು. ಹೊರಗೆ ಬರುವಾಗ ಸತೀಶ್ ಒಂದು ವ್ಯಾನ್ ತೆಗೆದುಕೊಂಡು ಬಂದಿದ್ದರು. ವ್ಯಾನ್ ಸೀದಾ ಹೋಗಿ ನಿಂತದ್ದು ಸ್ಟುಡಿಯೋದ ಎದುರಿಗೆ!!


ಎಲ್ಲಾ ಸೇರಿ, ಬೇಡ ಎಂದು ಒದರಾಡುತ್ತಿದ್ದ ನನ್ನನ್ನು ಎತ್ತಿಕೊಂಡೇ ಸ್ಟುಡಿಯೋದೊಳಗೆ ಹೋದರು. ೧೨ ಮೊಳ ಸೀರೆ ಸುತ್ತಿ, ಹೆಗಲಿಗೊಂದು ಸೀರೆ ಶಾಲಿನಂತೆ ಹೊದಿಸಿದರು. "ಇದಕ್ಕಾ ಸೀರೆ..ಗೋಪಾಲರೆ, ನೀವೂ ಇವರೊಂದಿಗೆ ಸೇರಿದಿರಲ್ಲಾ..."


"ಮೊದಲು ಜಯಂತನ ಪಂಚೆ, ಶಾಲು ನಿಮಗೆ ಉಡಿಸುವುದು ಅಂತ ಇದ್ದೆವು. ನಿಮ್ಮ ಗಾತ್ರಕ್ಕೆ ಸಾಲುವುದಿಲ್ಲ. ಅದಕ್ಕೇ..ನೀವು ಏನೂ ಆಲೋಚಿಸಬೇಡಿ. ನೀವು ಆ ಪೀಠದಲ್ಲಿ ಕುಳಿತು ಬಾಯಿಗೆ ಬಂದದ್ದನ್ನ ಹೇಳಿ. ನಾವಿದ್ದೇವೆ" ಅಂದು ಪೀಠದಲ್ಲಿ ಕುಳ್ಳಿರಿಸಿ, ಬಳಿಯಲ್ಲಿ ಒಂದು ಸುಂದರಿಯನ್ನೂ ನಿಲ್ಲಿಸಿದರು.


ಲೈಟ್ಸ್..ಕ್ಯಾಮರಾ..ಆಕ್ಷನ್... ಗಾಬರಿಯಿಂದ ತಲೆ ಎತ್ತಿ ನೋಡಿದೆ. ಡೈರೆಕ್ಷನ್‌ಗೆ ಮಂಜಣ್ಣ! ಕ್ಯಾಮರಾ ಹಿಂದೆ ಕ್ಯಾಮರವನ್ನು ನನ್ನ ಪಕ್ಕಕ್ಕೆ ಪೋಕಸ್ ಮಾಡಿಕೊಂಡು ಚಿಕ್ಕು!! ಪಕ್ಕದಲ್ಲಿ ಮ್ಯೂಸಿಕ್ ಡೈರೆಕ್ಟ್ ಮಾಡುತ್ತಾ ಸುರೇಶ್!!! ನನ್ನ ಹಿಂಬದಿ ತಿರುಗಿ ನೋಡಿದರೆ, ಕ್ಯಾಮರಕ್ಕೆ ಕಾಣಿಸದಂತೆ, ಸ್ಟೇಜ್‌ನ ಕೆಳಬದಿಯಲ್ಲಿ, ೫-೬ ಕಂಪ್ಯೂಟರ್‌ನೊಂದಿಗೆ ಸಹಾಯಕ್ಕೆ ಸಂಪದಿಗರು!!! ಅವರ ಪಕ್ಕಕ್ಕೆ ವೀಕ್ಷಕರ ಆಶು ಪ್ರಶ್ನೆಗೆ ಉತ್ತರಿಸಲು ಸಹಾಯಕ್ಕೆ ನಿಂತಿರುವ ವಾಕ್ಪಥದ ಆಶುಭಾಷಣಕಾರರು!!! "ಗಣೇಶರೆ.." ಸ್ವರ ಕೇಳಿ ತಿರುಗಿ ನೋಡಿದರೆ, ನನ್ನ ಬೆನ್ನಿಗೇ ಒರಗಿಕೊಂಡು, ಕ್ಯಾಮರಕ್ಕೆ ಕಾಣಿಸದಂತೆ, ನಾಗರಾಜರು ಕುಳಿತುಕೊಂಡು, "ಎಲ್ಲಾ ನಾನೇ ಹೇಳುತ್ತೇನೆ. ನೀವು ಆಕ್ಷನ್ ಮಾಡಿ ಸಾಕು." ಅಂದರು!!!!


ಅವರ ಹಿಂಬದಿಯಲ್ಲಿರುವ ದೇವಿ ಮೂರ್ತಿಗೆ, ಬುರುಡೆಗಳನ್ನು ಕುತ್ತಿಗೆಗೆ ಮಾಲೆಯಂತೆ ಹಾಕಿಕೊಂಡು ಮಾಂತ್ರಿಕನೊಬ್ಬ ಪೂಜೆ ಮಾಡುತ್ತಿದ್ದ. "ಗಾಬರಿಯಾಗಬೇಡಿ, ಅದು ನಮ್ಮ ಜಯ್!! ತಂತ್ರ ಮಾಟವನ್ನೆಲ್ಲಾ ಇಲ್ಲೇ ಪೂಜೆ ಮಾಡಿ ನಿವಾರಿಸಿಬಿಡುವೆವು."ಅಂದರು ನಾಗರಾಜ್.


ಇನ್ನೆಲ್ಲಿಯ ಭಯ. ಕ್ಯಾಮರ ಕಡೆ ಮುಗುಳ್ನಕ್ಕು-"ಚಿಕ್ಕು, ಕ್ಯಾಮರಾ ನನ್ನ ಕಡೆ ತಿರುಗಿಸು" ಅಂದೆ.


-ಗಣೇಶ


 

Rating
No votes yet

Comments