ಸಾಹಿತ್ಯ ಸಮ್ಮೇಳದಲ್ಲಿ ವಿಧವೆಯರು

ಸಾಹಿತ್ಯ ಸಮ್ಮೇಳದಲ್ಲಿ ವಿಧವೆಯರು

ಬರಹ

 ಸಾಹಿತ್ಯ ಮತ್ತು ಅದರ ಹೆಸರಿನ ಸಮ್ಮೇಳನಕ್ಕೂ, ಅದರಲ್ಲಿ ಪಾಲ್ಗೊಳ್ಳ ಬಯಸುವ ಹೆಣ್ಣಿನ ವೈವಾಹಿಕ ಸ್ಥಾನ-ಮಾನಕ್ಕೂ ಎತ್ತಣಿಂದೆತ್ತ ಸಂಬಂಧ?!
 ಸ್ಥಳೀಯ ಮಹಿಳೆಯೊಬ್ಬರು ಮಾಡಿರುವ ಪ್ರಸ್ತಾವದ ಬಗ್ಗೆ ಸೆ. 27ರ ’ಕನ್ನಡಪ್ರಭ’ವರದಿ ಗಮನ ಸೆಳೆಯಿತು. ಸದರಿ ಮಹಿಳೆ, ಕಸಾಪ ಅಧ್ಯಕ್ಷರಿಗೆ ಪತ್ರ ಬರೆದು ಈ ಕುರಿತು ’ಸವಾಲು’ ಹಾಕಿದ್ದಾರಂತೆ. ಅದರಲ್ಲಿ ಸಾಹಿತಿಗಳನ್ನು ’ವಿಚಾರವಂತರು’ ಎಂದು ಕರೆದಿರುವುದು ಬಹುಶಃ ಆಕೆಯ ’ಮೂಢನಂಬಿಕೆ’ ಎಂದುಕೊಳ್ಳುತ್ತೇನೆ. ಏಕೆಂದರೆ, ಛೋಟಾ-ಮೋಟಾ ಮಾಧ್ಯಮಗಳ ಹುಡುಗ-ಹುಡುಗಿಯರು, ಮೊದಮೊದಲು ತಮ್ಮನ್ನೇ ಮಧ್ಯಮತಜ್ಞರೆಂದು ಬಿಂಬಿಸಿಕೊಂಡು, ನಂತರ ಸಾಹಿತಿ ಪಟ್ಟವನ್ನೂ ಕಟ್ಟಿಕೊಂಡುಬಿಡುವುದು ಸಾಮಾನ್ಯಸಂಗತಿ. ಅಂತಹ ಸದಸ್ಯರ ಸಂಖ್ಯೆ ಸಹ, ಪರಿಷತ್ತಿನಲ್ಲಿ ಕಡಿಮೆಯೇನಿಲ್ಲ!
 
 ಸಮ್ಮೇಳನಾಧ್ಯಕ್ಷರ ಅದ್ದೂರಿ ರಥಯಾತ್ರೆ; ಅದರ ಮುಂದೆ ಕಳಸಹೊತ್ತ ಕನ್ನಿಕೆ/ಸುಮಂಗಲೆಯರ ಸಮೂಹ; ಅದಕ್ಕೂ ಮುಂದೆ ಡೊಲು. ನಾಗಸ್ವರವಾದನ ಇತ್ಯಾದಿಗಳಿಗೂ, ಸಾಹಿತ್ಯ ಸಮ್ಮೇಳನದ ಉದ್ದೇಶ-ಹೂರಣಗಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಹಾಗೆಯೇ ಕಳಸ ಕನ್ನಿಕೆ/ಸುಮಂಗಲೆಯರುಗಳು, ಜಾತ್ರೆ, ದೇವರ ಹಬ್ಬ, ಮದುವೆ ಇತ್ಯಾದಿ ಎಲ್ಲ ಮಂಗಳ ಸಮಾರಂಭಗಳಲ್ಲೂ ಇರುತ್ತಾರೆ. ಹೆಣ್ಣುಮಕ್ಕಳು ಸಹಜವಾಗಿಯೇ ರಮಣೀಯವಾಗಿರುತ್ತಾರೆ; ವಸ್ತ್ರಾಭರಣಭೂಷಿತೆಯಾದರಂತೂ (ಇದೇ ’ಐದು ಮುತ್ತಿ’ನ ಸಂಕೇತಾರ್ಥ)ಇನ್ನೂ ಹೆಚ್ಚು ಅಂದವಾಗಿ ಕಾಣಿಸುತ್ತಾ ಮೆರವಣಿಗೆಗೆ ಕಳೆಕಟ್ಟಿಸುತ್ತಾರೆ. ಇದು ಅನೂಚಾನವಾದ ಪದ್ಧತಿ.

 ಹೆಣ್ಣಿನ ಲಕ್ಷಣಕ್ಕೂ ಗಂಡನಿರುವುದು, ಇಲ್ಲದಿರುವುದಕ್ಕೂ ಭೌತಿಕವಾಗಿ, ತಾರ್ಕಿಕ ಸಹಜವಾಗಿ ಯಾವ ಸಂಬಂಧವೂ ಇರುವುದಿಲ್ಲ. 150 ವರ್ಷದಕೆಳಗೆ, ಮತ್ತೈದೆಯನ್ನು ಗಂಡನ ಚಿತೆಯಲ್ಲಿ ಹಾಕಿ ಜೀವಂತ ಸುಟ್ಟುಬಿಡುತ್ತಿದ್ದರು; ನಂತರದ ದಿನಗಳಲ್ಲಿ, ರಾಜಿಮಾಡಿಕೊಂಡು, ಅಕೆಯ ಓಲೆ-ತಾಳಿ ಕಿತ್ತು, ತಲೆಬೋಳಿಸಿ ವಿಕಾರಗೊಳಿಸುತ್ತಿದ್ದರು. ಈಗ ಅಂತಹ ಬರ್ಭರತೆ ಬಹುತೇಕ ಇಲ್ಲ. ಇದನ್ನೇನೂ ಸಮಾಜ ಕೊಟ್ಟ ರಿಯಾಯತಿ ಅಥವಾ ಔದಾರ‍್ಯವೆಂದು ಭಾವಿಬೇಕಾಗಿಲ್ಲ; ಅದು ಜನ ಹೆಚ್ಚು ಹೆಚ್ಚು ’ಮನುಷ್ಯ’ರಾಗುತ್ತಿರುವುದರ ಸಂಕೇತ, ಅಷ್ಟೆ!
 
 ನೀನು, ಕನ್ಯೆಯೋ, ಗಂಡನುಳ್ಳವಳೋ, ಗಂಡಸತ್ತವಳೋ ಎಂದು ಕೇಳದೆ 78 ಮಂದಿ ಲಕ್ಷಣವಂತೆಯರನ್ನು, ಗಂಗಾವತಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಕಳಸ ಹೊರಲು ಆಹ್ವಾನಿಸುವುದು ’ನಾಗರಿಕತೆ’. ಕನ್ನಡ ಸಾಹಿತ್ಯ ಪರಿಷತ್ತು ಅಷ್ಟು ನಾಗರಿಕವಾಗಿದೆಯೇ ಎಂದು ಕಾದು ನೋಡಬೇಕು.
  ಹ್ಞಾ, ಅಕಸ್ಮಾತ್ ಹಾಗೆ ಮಾಡಿದರೂ ಖಂಡಿತವಗಿಯೂ ಅದಕ್ಕೆ ಮಾಧ್ಯಮದ ಹೈಪ್ ಕೊಡಲೇಬಾರದು!  
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet