ಬೀchi ಜೋಕುಗಳು (೪): ಕುದುರೆ ಮತ್ತು ಸಾಹುಕಾರ

ಬೀchi ಜೋಕುಗಳು (೪): ಕುದುರೆ ಮತ್ತು ಸಾಹುಕಾರ

       ಅಣ್ಣಾ ಹಜಾರೆಯವರು ಇತ್ತೀಚೆಗೆ ಉಪವಾಸ ಕೈಗೊಂಡು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ಕೇಂದ್ರ ಸರ್ಕಾರವನ್ನು ಬಗ್ಗಿಸಿದರು.  ಈ ಭ್ರಷ್ಟ್ರಾಚಾರದ ವಿಷಯ ಬಂದಾಗ ಸಮಿತಿಗಳ ಮೇಲೆ ಸಮಿತಿಗಳು ರಚನೆಯಾಗಿವೆ. ಒಬ್ಬರೇ ಇದ್ದರೆ ಭ್ರಷ್ಟಾಚಾರ, ಲಂಚಗಾರಿಕೆ ಹೆಚ್ಚುತ್ತದೆಂದು ಭಾವಿಸಿ ಸರ್ಕಾರಗಳು ಹೋಬಳಿ ಮಟ್ಟದ ಅಧಿಕಾರಿಗಳು ಅವರ ಮೇಲೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಅವರ ಮೇಲೆ ಜಿಲ್ಲಾ ಮಟ್ಟ - ವಲಯ ಮಟ್ಟ - ರಾಜ್ಯಮಟ್ಟದ ಅಧಿಕಾರಿಗಳು ಮತ್ತು ಲಂಚ-ನಿರೋಧಕ ಬ್ಯೂರೋಗಳನ್ನು ಸ್ಥಾಪಿಸಿದೆ. ಅದರ ಜೊತೆಗೆ ಅವರೆಲ್ಲರನ್ನೂ ನಿಯಂತ್ರಿಸಿಲು ಪೋಲಿಸ್ ಹಾಗು ನ್ಯಾಯಾಂಗ ವ್ಯವಸ್ಥೆಯೂ ಇದೆ. ಅವರೆಲ್ಲರ ಮೇಲೆ ಲೋಕಾಯುಕ್ತ-ಉಪಲೋಕಾಯುಕ್ತ ಹುದ್ದೆಗಳನ್ನು ಸೃಷ್ಠಿಸಿದೆ. ಹೀಗೆ ಹತ್ತು ಹಲವು ವ್ಯವಸ್ಥೆಗಳಿದ್ದಾಗ್ಯೂ ದೇಶದಲ್ಲಿ ಭ್ರಷ್ಟಾಚಾರ ನಿಯಂತ್ರಣದಲ್ಲಿಲ್ಲದೇ ಇನ್ನೂ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಬೀchiಯವರ ಈ ಕಥೆ ಹೆಚ್ಚು ಪ್ರಸ್ತುತವೆನಿಸುತ್ತದೆ.
  

  ಒಬ್ಬ ಸಾಹುಕಾರನಿದ್ದ ಅವನೊಂದು ಕುದುರೆಯನ್ನು ಸಾಕಿದ್ದ. ಆ ಕುದುರೆಯನ್ನು ನೋಡಿಕೊಳ್ಳಲು ಒಬ್ಬ ಸೇವಕನನ್ನು ನೇಮಿಸಿದ್ದ. ಆ ಸೇವಕ ಶೇಖಡ ಹತ್ತರಷ್ಟು ಹುರುಳಿ-ಹುಲ್ಲಿನ ಬಾಬತ್ತನ್ನು ಬಳಸಿಕೊಂಡು ಕುದುರೆಗೆ ತೊಂಬತ್ತು ಭಾಗವನ್ನು ಹಾಕುತ್ತಿದ್ದ. ಸ್ವಲ್ಪ ದಿನಗಳ ಮೇಲೆ ಆ ಸೇವಕ ಕುದುರೆಗೆ ಸರಿಯಾಗಿ ಹುರುಳಿ-ಮೇವು ಹಾಕುತ್ತಿದ್ದಾನೋ ಇಲ್ಲವೋ ಎಂಬ ಗುಮಾನಿ ಆ ಸಾಹುಕಾರನಿಗೆ ಉಂಟಾಯಿತು. ಅದನ್ನು ತಿಳಿದುಕೊಳ್ಳಲು ಮತ್ತೊಬ್ಬ ಸೇವಕನನ್ನು ಇವನ ಮೇಲ್ವಿಚಾರಕನಾಗಿ ನೇಮಿಸಿದ. ಎರಡನೇ ಸೇವಕ ಕೆಲಸಕ್ಕೆ ಸೇರಿದ ಮೇಲೆ ಸ್ವಲ್ಪ ದಿವಸ ಎಲ್ಲಾ ಸುಸೂತ್ರವಾಗಿ ನಡೆದಂತೆ ಕಂಡುಬಂತು; ಇದರಿಂದ ಸಾಹುಕಾರನೂ ತನ್ನ ಉಪಾಯ ಫಲಿಸಿದ್ದಕ್ಕೆ ಸಂತೋಷಗೊಂಡ. ಮತ್ತೆ ಸ್ವಲ್ಪ ದಿನಗಳು ಕಳೆಯುವುದರೊಳಗೆ ಎರಡೂ ಜನ ಸೇವಕರು ಒಂದಾಗಿ ತಲಾ ಹತ್ತತ್ತು ಶೇಖಡ ಕಬಳಿಸಿ ಕುದುರೆಗೆ ಎಂಬತ್ತು ಭಾಗ ಮೇವುಕೊಡಲಾರಂಭಿಸಿದರು. ಸಾವುಕಾರನಿಗೆ ಮತ್ತೆ ಕೆಲವು ದಿವಸಗಳ ಬಳಿಕ ಇವರಿಬ್ಬರ ಮೇಲೂ ಅನುಮಾನ ಉಂಟಾಯಿತು; ಅದರ ಪರಿಷ್ಕಾರಕ್ಕಾಗಿ ಮತ್ತೊಬ್ಬ ಸೇವಕನನ್ನು ನೇಮಿಸಿದ ಆಗ ಸ್ವಲ್ಪ ದಿನಗಳ ಕಾಲ ಎಲ್ಲವೂ ಚೆನ್ನಾಗಿರುವಂತೆ ಕಂಡಿತು. ಮತ್ತೆ ಯಥಾ ಪ್ರಕಾರ ಆ ಮೂವರೂ ಒಂದಾಗಿ ಶೇಖಡಾ ಹತ್ತರಷ್ಟು ತಿಂದು ಉಳಿದ ಎಪ್ಪತ್ತರಷ್ಟನ್ನು ಕುದುರೆಗೆ ಆಹಾರವಾಗಿ ನೀಡಲಾರಂಭಿಸಿದರು. ಹೀಗೆಯೋ ಒಬ್ಬರ ಮೇಲೆ ಒಬ್ಬರಂತೆ ಆ ಸಾಹುಕಾರ ಹತ್ತು ಜನರನ್ನು ಕುದುರೆಯ ಮೇಲ್ವಿಚಾರಣೆಗೆ ನಿಯಮಿಸಿದ. ಸ್ವಲ್ಪ ದಿನಗಳಲ್ಲಿ ಆ ಕುದುರೆ ಆಹಾರವಿಲ್ಲದೇ ಸತ್ತುಹೋಯಿತು. ಒಬ್ಬನೇ ಇದ್ದಿದ್ದರೆ ಶೇಖಡ ಹತ್ತು ತಿಂದು ತೊಂಬತ್ತನ್ನು ಕುದುರೆಗೆ ನೀಡುತ್ತಿದ್ದ ಆಗ ಕುದುರೆ ಬದುಕುಳಿಯಲು ಸಾಧ್ಯವಿತ್ತು! ಅಷ್ಟೊಂದು ಜನರನ್ನು ನೇಮಿಸಿದ್ದರಿಂದ ಪ್ರತಿಯೊಬ್ಬನೂ ಶೇಖಡ 10% ತಿಂದು ಕುದುರೆಗೆ 100% ಆಹಾರವಿಲ್ಲದಂತಾಯಿತು.

(ಇದನ್ನೇ ತಾನೇ ನಮ್ಮ ಘನ ಸರ್ಕಾರಗಳು ಮಾಡುತ್ತಾ ಬಂದಿರುವುದು? ಹಾಗಾಗಿ "ಜನಲೋಕಪಾಲ್ ಮಸೂದೆ" ಮತ್ತೊಬ್ಬ ಮೇಲ್ವಿಚಾರಕನಾಗಿ ವ್ಯವಸ್ಥೆಯನ್ನು ಬಲಹೀನ ಪಡಿಸದಿರಲಿ.)