"ಅಂತಾರಾಶ್ಟ್ರೀಯ ಅನುವಾದ ದಿನಾಚರಣೆ"ಯ ಶುಭಾಶಯಗಳು

"ಅಂತಾರಾಶ್ಟ್ರೀಯ ಅನುವಾದ ದಿನಾಚರಣೆ"ಯ ಶುಭಾಶಯಗಳು

ಇಂದು "ಅಂತಾರಾಶ್ಟ್ರೀಯ ಅನುವಾದ ದಿನಾಚರಣೆ."

ಸಂತ ಜೆರೋಮ್ ನ ದಿನವನ್ನು( ಅಂದರೆ ಸೆಪ್ಟಂಬರ್ 30), "ಅಂತಾರಾಶ್ಟ್ರೀಯ ಅನುವಾದ ದಿನಾಚರಣೆ"ಯಾಗಿ ಆಚರಿಸಲಾಗುತ್ತದೆ.

ಸಂತ ಜೆರೋಮ್, ಬೈಬಲ್ ಅನುವಾದಕ. ವಿಶ್ವದೆಲ್ಲೆಡೆ ಅನುವಾದಕರಿಗೆ ಹಾಗೂ ದುಭಾಶಿಗಳಿಗೆ ಆಶ್ರಯದಾತನೆಂದೇ ಹೆಸರುವಾಸಿ. ಬಹಳ ಕಾಲದಿಂದಲೂ, ಸೆಪ್ಟಂಬರ್ 30ರ ಆಸುಪಾಸಿನ ದಿನಗಳು, ವಾರಗಳು, ಕೆಲವೊಮ್ಮೆ ತಿಂಗಳುಗಳನ್ನು ಅನುವಾದಕರು ಹಾಗೂ ದುಭಾಶಿಗಳು(ಅವರ ಸಂಫಸಂಸ್ಥೆಗಳು) "ಅನುವಾದ ಹಬ್ಬ"ವನ್ನಾಗಿ ಆಚರಿಸುತ್ತಾರೆ. 1953ರಲ್ಲಿ FIT (International Federation of Translators) ಸ್ಥಾಪನೆಯಾದ ದಿನದಿಂದಲೂ ಸಂತ ಜೆರೋಮನ ದಿನದ ಆಚರಣೆಗಳು ನಡೆದುಕೊಂಡಿವೆ. ಆದರೆ, 1991ರಲ್ಲಿ FIT ಯ ಸಾರ್ವಜನಿಕ ಸಂಬಂಧಗಳ ಸಮಿತಿಯು "ಅಂತಾರಾಶ್ಟ್ರೀಯ ಅನುವಾದ ದಿನಾಚರಣೆ"ದ ಆಲೋಚನೆಯನ್ನು ಮಾಡಿತು. FIT ಸಲಹೆಯ ಮೇರೆಗೆ UNESCO ಸೆಪ್ಟಂಬರ್ 30ನ್ನು "ಅಂತಾರಾಶ್ಟ್ರೀಯ ಅನುವಾದ ದಿನಾಚರಣೆ"ಯನ್ನಾಗಿ ಘೋಶಿಸಿದೆ. ಪ್ರತಿವರ್ಶ FIT "ಅಂತಾರಾಶ್ಟ್ರೀಯ ಅನುವಾದ ದಿನಾಚರಣೆ"ಗೆ ಒಂದು ವಿಶಯವನ್ನು ಆಯ್ಕೆ ಮಾಡುತ್ತದೆ. ಈ ವರ್ಶದ ವಿಶಯ: "Translation: Bridging Cultures".  ಅಂದರೆ. "ಅನುವಾದ: ಸಂಸ್ಕ್ರುತಿಗಳನ್ನು ಬೆಸೆಯುವುದು." ಅದು ನಿಜವೇ.

"ಅನುವಾದಕರು ದೇಶದ್ರೋಹಿಗಳು" ಎಂದಿದ್ದ ಕಾಲವೂ ಇತ್ತು. ಆದರೆ, ಅನುವಾದಕರು ಅಥವಾ ಭಾಶಾಂತರಕಾರರು ಇಲ್ಲದಿದ್ದಲ್ಲಿ ನಾವೆಲ್ಲ ಹೇಗಿರುತ್ತಿದ್ದೆವೆಂದು ಊಹೆ ಮಾಡಿಕೊಳ್ಳಲೂ ಸಾಧ್ಯವಿಲ್ಲ. ದೊಡ್ಡ ಮಟ್ಟದಲ್ಲಿ ಹೇಳಬೇಕೆಂದರೆ, ನಾವು ಇಂದು ನಮ್ಮ ನುಡಿಯನ್ನೇ ಮಾತನಾಡುತ್ತಿಲ್ಲ. ನಾವು ಪ್ರತಿಕ್ಷಣ ಮಾಡುತ್ತಿರುವುದು "ಅನುವಾದ" ಅಥವಾ "ಭಾಶಾಂತರ." ಮುಂದೊಂದು ದಿನ ಅನುವಾದಕರೆಂದರೆ "ದೇಶಪ್ರೇಮಿಗಳು" ಎಂದು ಕರೆಯುವ ಕಾಲವೂ ಬರಬಹುದು.

ನಮ್ಮ ದೇಶದ ಬಹುಪಾಲು ಭಾಶೆಗಳ ಇತಿಹಾಸ ಶುರುವಾಗುವುದೇ ಅನುವಾದದ ಮೂಲಕವೇ. ಕವಿರಾಜಮಾರ್ಗಕಾರನಿಂದ ಆರಂಭಗೊಂಡು ಪಂಪ, ರನ್ನ, ಪೊನ್ನ, ಕುಮಾರವ್ಯಾಸಾದಿಗಳೆಲ್ಲರೂ ಶ್ರೇಷ್ಠ ಅನುವಾದಕರೇ. ನಮ್ಮ ದೇಶದ ಬಹುಪಾಲು ಸಾಹಿತ್ಯ ರಾಮಾಯಣ, ಮಹಾಭಾರತದ ಭಾಶಾಂತರ, ಅನುವಾದ, ರೂಪಾಂತರಗಳೇ...

ನಮ್ಮ ಆಧುನಿಕ ಕನ್ನಡದ ಶ್ರೇಶ್ಟಾತಿಶ್ರೇಶ್ಟ ಸಾಹಿತಿಗಳೆಲ್ಲ. ಜ್ಡಾನಪೀಠರೆಲ್ಲ ಅನುವಾದ, ಭಾಶಾಂತರಗಳನ್ನ ಮಾಡಿದ್ದಾರೆ. ಆದರೆ, ನಮ್ಮ ನಾಡಿನಲ್ಲಿ ಹಂಪಿಯ "ಕನ್ನಡ ವಿಶ್ವವಿದ್ಯಾಲಯ"ವನ್ನು ಹೊರತುಪಡಿಸಿ ಬೇರಾವ ವಿಶ್ವವಿದ್ಯಾಲಯದಲ್ಲೂ "ಅನುವಾದ ಅಧ್ಯಯನ" ಅಥವಾ "ಭಾಶಾಂತರ ಅಧ್ಯಯನ" ವಿಭಾಗಗಳಿಲ್ಲ. ಕೆಲವರುಶಗಳ ಹಿಂದೆ "ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ" ಹುಟ್ಟಿಕೊಂಡಿತು. ಆನಂತರ ಅದು "ಕುವೆಂಪು ಭಾಶಾಭಾರತಿ ಪ್ರಾಧಿಕಾರ" ಆಗಿ ಭಾಶೆಯನ್ನು ಅಧ್ಯಯನ ಮಾಡುವ ಯಾವುದೇ ಸಂಸ್ಥೆಯಿರಬೇಕು ಎಂದೆನಿಸತೊಡಗಿತು.

2008ರಲ್ಲಿ ಮೈಸೂರಿನ ಭಾರತೀಯ ಭಾಶೆಗಳ ಕೇಂದ್ರ ಸಂಸ್ಥೆಯಲ್ಲಿ "ರಾಶ್ಟ್ರೀಯ ಅನುವಾದ ಮಿಶನ್" ಹುಟ್ಟಿಕೊಂಡಿತು. ಇಂಗ್ಲಿಶ್ ನಲ್ಲಿರುವ ಜ್ಞಾನಪಠ್ಯಗಳು - ಅಂದರೆ, ಮಾನವಿಕಗಳು(ಸಾಹಿತ್ಯವನ್ನು ಹೊರತುಪಡಿಸಿ), ಸಮಾಜವಿಜ್ಢಾನಗಳು ಹಾಗೂ ಭೌತಿಕ ವಿಜ್ಞಾನಗಳ ಪಠ್ಯಗಳನ್ನು ಭಾರತೀಯ ಭಾಶೆಗಳಿಗೆ ಅನುವಾದಿಸುವ ಗುರಿಯನ್ನು ಹೊಂದಿದೆ. ಇದಲ್ಲದೆ, 50ರ ದಶಕದಿಂದಲೂ ಸಾಹಿತ್ಯ ಅಕಾಡೆಮಿ, ನ್ಯಾಶನಲ್ ಬುಕ್ ಟ್ರಸ್ಟ್ ನಂತಹ ರಾಶ್ಚ್ರೀಯ ಸಂಸ್ಥೆಗಳು, ರಾಜ್ಯ ಮಟ್ಟದಲ್ಲಿ ಸಾಹಿತ್ಯ ಪರಿಶತ್ತು, ಪುಸ್ತಕ ಪ್ರಾಧಿಕಾರದಂತಹ ಸಂಸ್ಥೆಗಳೂ ಅನುವಾದದಲ್ಲಿ ತೊಡಗಿಕೊಂಡಿವೆ. ಹಾಗೆ ನೋಡುವುದಾದರೆ,. ಮೈಸೂರು ವಿಶ್ವವಿದ್ಯಾಲಯ 60ರ ದಶಕದಲ್ಲಿಯೇ ಭಾಶಾಂತರ ಕೋರ್ಸನ್ನು ಆರಂಭಿಸಿತ್ತು. ಅಲ್ಲದೆ, ವಿಶ್ವವಿದ್ಯಾಲಯದ ಪ್ರಸಾರಾಂಗ ಬಾರಿ ದೊಡ್ಡ ಮಟ್ಟದಲ್ಲಿ ಅನುವಾದದ ಮೂಲಕ ವಿಶ್ವಶ್ರೇಶ್ಟ ಗ್ರಂಥಗಳನ್ನು ಕನ್ನಡಕ್ಕೆ ತಂದಿತು. ಆದರೆ, ಇಂದಿನ ಜರೂರು ಕನ್ನಡದ ವಿಶ್ವಶ್ರೇಷ್ಟ ಕ್ರುತಿಗಳನ್ನ ಬೇರೆ ಬೇರೆ ಭಾಶೆಗಳಿಗೆ ಕೊಂಡೊಯ್ಯುವುದು ಅಂದರೆ, ಅನುವಾದಿಸುವುದು.

ಇಶ್ಟೆಲ್ಲ ಆದರೂ, ನಮಗೆ "ಅನುವಾದ" ಅಂದರೆ ಅಸಡ್ಡೆಯೇ. ಅದೊಂದು ಸ್ರುಜನಶೀಲ ಕೆಲಸವಲ್ಲ ಎಂದು ಮೂಗುಮುರಿಯುವವರೂ ಇದ್ದಾರೆ. ಆದರೆ, ಅನುವಾದ ಇಂದಿನ ಜಗತ್ತಿನ ಅತ್ಯಂತ ದೊಡ್ಡ ಜರೂರು. "ಮಾಹಿತಿ ಕ್ರಾಂತಿ" ಆದಂತೆ ಮುಂದೊಂದು ದಿನ "ಅನುವಾದ ಕ್ರಾಂತಿ" ಆದರೆ ಅಚ್ಚರಿಯೇನಿಲ್ಲ. ಈಗಾಗಲೇ ಮಾಧ್ಯಮಗಳಲ್ಲಿ ಈ ಕ್ರಾಂತಿ ದೊಡ್ಡ ಮಟ್ಟದಲ್ಲಾಗಿದೆ. ಇನ್ನುಳಿದ ಕ್ಶೇತ್ರಗಳಲ್ಲಿ ಆಗುವ ದಿನ ದೂರ ಉಳಿದಿಲ್ಲ...

ಸದ್ಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಅನುವಾದ ಅಥವಾ ಭಾಶಾಂತರದಲ್ಲಿ ತೊಡಗಿರುವ, ತೂಡಗಲಿರುವ ಎಲ್ಲರಿಗೂ "ಅಂತಾರಾಶ್ಟ್ರೀಯ ಅನುವಾದ ದಿನಾಚರಣೆ"ಯ ಶುಭಾಶಯಗಳು.

Rating
No votes yet

Comments