ಏನ್ರಿ ರೀ, ಒಂದ್ ದಿನದ ಜೀವನ ನಡೆಸೋಕೆ 32 ರೂಪಾಯಿ ಸಾಲಲ್ವ?

ಏನ್ರಿ ರೀ, ಒಂದ್ ದಿನದ ಜೀವನ ನಡೆಸೋಕೆ 32 ರೂಪಾಯಿ ಸಾಲಲ್ವ?

ಇನ್ಮಾಕ್ಯೆ ಎಲ್ರೂವೇ ಜಿನಕ್ಕೆ ಬರೀ 32 ರೂಪಾಯಿ ಅಶ್ಟೇ ಕಣ್ರಪ್ಪೋ ಕರ್ಚ್ ಮಾಡ್ಬೇಕಾಗಿರಾದು...

ಇದ್ಯಾಕಣ್ಣ ಇಂಗಂದೀಯೆ? ಅದೆಂಗಣ್ಣ ಆಯ್ತದೆ? ಶರಾಪ್ ಪಾಕೀಟ್ಗೆ ಅದ್ಕಿಂತ ಜಾಸ್ತಿ ಕರ್ಚಾಯ್ತದಲ್ಲಣ್ಣ... ಒಟ್ಟೆ ಬಟ್ಗ ಏನ ಮಣ್ಣಾ ತಿನ್ನಾದು?

ಅದೆಲ್ಲ ಗೊತ್ತಿಲ್ಲ ಕಣಪ್ಪೋ, ಸರ್ಕಾರ ಅಂಗಂದಂದೆ, ನೀವು ಅಂಗೆ ನೆಡ್ಕಬೇಕು ನೋಡ್ರಪ್ಪ. ಇಲ್ದಿದ್ರ ನಿಂಗ್ಯಾವ ಸವ್ಲತ್ತು ಸಿಗಾಕ್ಕಿಲ್ಲ... ನೀನು ಬಡವಾ ಅನ್ನಿಸ್ಕಬ್ಯಾಕು, ಅಂಗನ್ನಿಸ್ಕಂಡ್ರ ನಿಂಗ ಸಿಗ್ಬೇಕಾಗಿರ ಸವ್ಲತ್ ಗೊಳು ಸಿಗ್ಬಾಕ್ ಅನ್ನಂಗಿದ್ರ ಇನ್ಮಾಕ್ಯೆ ಎಲ್ರೂವೇ ಜಿನಕ್ಕೆ ಬರೀ 32 ರೂಪಾಯಿ ಅಶ್ಟೇ ಕಣ್ರಪ್ಪೋ ಕರ್ಚ್ ಮಾಡ್ಬೇಕಾಗಿರಾದು. ಇದೇ ಬಾರಿ ದೊಡ್ ಸುದ್ದಿಯಾಗ್ ಕುಂತದೆ...

ಅಯ್ಯೋ ಸಿವನೆ, ಇವ್ರು ಬಾಯಿಗ ಮಣ್ ಹಾಕೋವ್ರು... ಇಂಗಣ್ಣ ಮಾಡಾದು... ಕೊಡಾದ್ ಮೂರ್ಕಾಸು, ಅದ್ರಲ್ಲೂ...

ನೀನು ಸಿಟೀನಾಗಿರಕೇನ ಸರಿ ಓಯ್ತು ಕಣಪ್ನೆ, ನಿಮ್ಮಳ್ಳೀಲೆ ಇದ್ದಿದ್ರ ನೀನು ಇನ್ನೂ ಕಮ್ಮಿ ಕರ್ಚ್ ಮಾಡ್ಬೇಕಾಯ್ತಿತ್ತಲ್ಲ ಅದುಕ್ಕೇನಂದೀಯೇ?

ಅಂಗಂತ?

ಹೂ ಕಪ್ನೆ, ಹಳ್ಳಿನಾಗಿರೊರು ಬರಿ 26 ರೂಪಾಯಿ ಕರ್ಚ್ ಮಾಡ್ಬೇಕಂತ ಮಾಡವ್ರೆ...

ಅಲ್ಲಣ್ಣ, ಇವ್ರ್ ಮನೆ ಕಾಯೋಗ, ಬೀಡಿ ಕಡ್ಡಿಪೆಟ್ಟಿಗೇ ಆಯ್ತದಲ್ಲಣ್ಣ... ಉಣ್ಣಾದ್, ತಿನ್ನಾದಿರ್ಲಿ, ಟೀ ಕಾಪಿ ಮಾಡ್ಕಂದು ಮನಮಂದಿ ಕುಡಿದ್ರೂ 26 ರೂಪಾಯಿಗಿಂತ ಜಾಸ್ತಿ ಆಯ್ತದಲ್ಲಣ್ಣ.

ಅಲ್ಲ್ ಕಣಪ್ನೆ, ನಿಂಗ "ಬಡತನದ ರೇಕೆ ಕೆಳ್ಗಿರೋರು" ಅಂತ ಕರಿಯಾದು ಅಂದ್ರೆ ಸುಮ್ಕೆ ಅಂದ್ಕಂಡಿದೀಯೆ? ನೀನು ಬಡವ್ನಾಗ್ ಉಟ್ಟಿದ್ ಮ್ಯಾಕೆ ಅವ್ನೆಲ್ಲ ಮಾಡಂಗಿಲ್ಲ, ಅಪ್ರಾದ ಆಯ್ತದೆ..

ಮತ್ತ, ಅದ್ಯಾರೋ ಅಣ್ಣಾ ಅಜಾರೆ ಅಂತ ಏನೋ ಓರಾಟ ಮಾಡ್ತವ್ರೆ, ಎಲ್ಲ ಸರಿ ಓಯ್ತದೆ ಅಂತ ನೀನೇ ಯೋಳ್ತಿದ್ದಲ್ಲಣ್ಣೋ?

ಅಂತವ್ರ್ಗೆ ಅಂತೆ ಕಣಪ್ನೆ ಬಿಪಿಎಲ್ ಕಾರ್ಡ್ ಕೊಡಾದು... ಅನ್ನೇಡ್ ದಿನ ಉಪಾಸ ಅಂದ್ರ ಸುಮ್ಕೆ ಅಂದಿಯೇನೂ? ಅವ್ರು ಏನೂ ಕರ್ಚ್ ಮಾಡ್ದಿರಾದ್ ನೋಡಿಯೇ ಏನಾ ಇಂಗ್ ಮಾಡಿರಾದ್ ಅಂತ ನಂಗ್ಯಾಕೋ ಅನ್ಮಾನ!

ಇರ್ಬೇಕ್ ಕಣಣ್ಣಾ... ಈಗ್ಲೆ ಎಲ್ಲದ್ರೂ ಮ್ಯಾಕ್ಕೆ ಟ್ಯಾಕ್ಸು, ಗೀಕ್ಸು ಅಂತ ಆಕಿ ಎಲ್ಲ ಬೆಲೆಗಳ್ನು ಆಕಾಸ್ದೆತ್ರಕ್ಕೆ ಏರ್ಸೋರೆ, ಇನ್ನು ಇದ್ ಬೇರೆ ಮಾಡುದ್ರೆ ನಾವ್ ಬದ್ಕಂಗಿಲ್ಲ....
ಯಾವತ್ತು ಜನ ಕುಡಿಯಾ ನೀರ್ಗು ಕಾಸ್ ಕೊಟ್ಟು ಕುಡಿಯಂಗಾದ್ರು ಆಗ್ಲೆ ಅಂದ್ಕಂದೆ ನಂ ದೇಸ ಎಕ್ಕುಟ್ಟೋಯ್ತು ಅಂತ, ರೂಪಾಯ್ಗೆ ಏಡು ಮೂರು ಕೆಜಿ ಉಪ್ಪು ಸಿಕ್ತಿತ್ತು, ಈಗ ಪಾಕೀಟುಪ್ಪು ತಗತಿನಿ ಅಂದ್ರ ಅದ್ಕೂ ಕೆಜಿಗ ಅತ್ತೋ ಅದಿನೈದೋ ಕೊಡ್ಬೇಕಾಗದೆ... ಇನ್ನು ಅಕ್ಕಿ, ಬ್ಯಾಳೆ, ಸಕ್ರೆ ಕತ್ವಂತು ಕೇಳಂಗೇ ಇಲ್ಲ....ಏನ್ ಕಾಲ್ವೋ ಏನೋ... ಎಲ್ರೂಗು ಬಡವನ ಮೇಲೆ ಯಾಕಣ್ಣಾ ಕಣ್ಣು? ನಂ ಒಟ್ಟೆ ಮ್ಯಾಕೆ ಯಾಕೊಡ್ದಾರು? ನಾವೇನಾ ಅಂತ ಪಾಪ ಮಾಡಿರಾದು ಅಂತೀನಿ? ನಮ್ಮೂರು ಚಾಮುಂಡಿ ತಾಯೀನಾದ್ರೂ ಏನಾದ್ರೂ ಮಾಡಕ್ಕಾಗಕ್ಕಿಲ್ವಣ್ಣ?

ರೈತ ಅಂದ್ರೆ ಬಡವ, ಅವರೇ ಈ ದೇಸದ ಬೆನ್ನೆಲುಬು ಕಪ್ನೇ... ಅದುಕ್ಕೇಯ ಇರೋರೆಲ್ರುಗೂ ಅವರ ಮ್ಯಾಕ್ಕೆ ಕಣ್ಣು... ಇವರ್ಗ ಒಟ್ಟ ಇದ್ರ ತಾನೇ ಬಡ್ಡೈಕ್ಳು ಇಂಗನ್ನೋದು ಅಂತ  ಒಟ್ಟೇನೇ ಇಲ್ದಿರಂಗ ಮಾಡಾಕ್ ಒಂಟವ್ರೆ... ಸ್ವಾತಂತ್ರ ಬಂದು 60 ವರ್ಸುದ್ ಮ್ಯಾಕ್ಕಾಯ್ತು... ಬಡ್ತಾನನಂತೂ ಓಗ್ಸಾಕ್ಕಾಗ್ನಿಲ್ಲ... ಈ ಬಡವ್ರು ಮುಂಡೆಮಕ್ಳು ಇದ್ರ ತಾನ ಪಜೀತಿ, ಅವ್ರುನ್ನೆ ಇಲ್ದಿರಂಗೆ ಮಾಡ್ಬುಟ್ರೆ ನಂ ದೇಸ ಅಬಿರುದ್ದಿ ಒಂದಿದ ದೇಸ ಅಂತ ಯೋಳ್ಕಬೋದಲ್ವ? ಆಗ ನೋಡು ನಾವು ಉತ್ತಿಬಿತ್ತಿದ ಬೂಮಿನೆಲ್ಲ ಇವ್ರುದ್ ಮಾಡ್ಕಂದು ಬಿಲ್ಡಿಂಗ್ ಮ್ಯಾಲೆ ಬಿಲ್ಡಿಂಗ್, ಪಾರ್ಮೌಸು, ಐವೇ, ಆಳೂ ಮೂಳು ಅಂತ ಮಾಡಿ ಇಂದೊಬ್ಬ ಮುಕ್ಯಮಂತ್ರಿ ಅಂತಿದ್ರಲ್ಲ ಅಂಗೆ ಸಿಂಗಪೂರ ಮಾಡಕ್ ಸಾದ್ಯ... ನಿನ್ನ ನನ್ನಂತ ಜನ ಕಟ್ಕಂದೇನ್ ಮಾಡ್ದಾರು ಇವ್ರು?

ಅಂಗಂದ್ರ ನಂಗೊಳ್ಗೆ ಉಳಿಗಾಲಾನೇ ಇಲ್ಲಂತಿಯೇನಣ್ಣ, ನಮ್ ಮಕ್ಳು ಮರಿ?

ಏನು ತೋಚ್ತಿಲ್ಲ ಕಪ್ನೆ... ಅಳು ಬಂದಂಗಾಯ್ತದೆ... ಅದೇನೋ ಅವಾಗೀವಾಗ ಪ್ರಳಯ ಗಿಳಯ ಅಂತಿರ್ತಾರಲ್ಲ, ಅದಾಗಿ ಗಾಂದಿಯಂತ ಮನ್ಸ ದೇಶ ಆಳಿದ್ರ ನೋಡಪ್ಪ ಬಡವನ್ಗೂ ಬಾಗ್ಯ ಬರ್ಬೋದು... ಅಲ್ಲಿಗಂಟ ಇಂಗೇಯ...

ಹೂ ಕಣಣ್ಣ, ಅಂಗೇ ಆಗ್ಬೇಕು... ಆದ್ರ, ಪ್ರಳಯ ಆಗಾದು ಯಾವಾಗಣ್ಣ?

Rating
No votes yet

Comments