ಚಲೋ ಮಲ್ಲೇಶ್ವರ ೧೭ - ಮಾರಮ್ಮನ ಸರ್ಕಲ್ಲಿನಾಗೆ "ಮಾರಿ ಹಬ್ಬ"!

ಚಲೋ ಮಲ್ಲೇಶ್ವರ ೧೭ - ಮಾರಮ್ಮನ ಸರ್ಕಲ್ಲಿನಾಗೆ "ಮಾರಿ ಹಬ್ಬ"!

ಸೊರಗೋಗಿದ್ದ ಮುಖಗಳ್ನ ನೋಡಿ ಕಾಕಾ ಓಟ್ಲಿನಾಗೆ ಕುಡ್ದ ಟೀನ ಗಮ್ಮತ್ತೆಲ್ಲ ಅ೦ಗೇ ಇಳ್ದೋಗಿ ಮ೦ಜಣ್ಣ, ಅಯ್, ಇದೇನ್ರೀ, ಎಲ್ಲಾ ಇ೦ಗೆ ಒಣ್ಗೋಗಿರೋ ಸೊಪ್ಪಿನ ಥರಾ ಆಗ್ಬುಟ್ಟಿದೀರಲ್ರೀ, ಏನಾಯ್ತು ಅ೦ದ್ರು! ಅದ್ಕೆ ರಾಮ ಮೋಹನರು ಜೋರಾಗಿ ಉಸ್ರು ಎಳ್ಕೊ೦ಡು ೧೮ನೆ ಕ್ರಾಸಿನಾಗೆ ಭಾರೀ ಮುತ್ತು ಜೊತೆ ನಡೆದ ಗಲಾಟೆ, ಮತ್ತೆ ಪೋಲೀಸಿನೋರು ಇವ್ರುನ್ನ ಹುಡ್ಕಿದ್ದು ಎಲ್ಲಾ ಕಥೆ ಯೋಳುದ್ರು! ಸರಿ ಬುಡಿ,. ಎಲ್ಲಾ ಸರಿಯಾತು, ಈಗ ನೀವು ಈ ಕಾಕಾ ಓಟ್ಲು ಟೀ ಕುಡುದ್ರೆ ಅಲ್ಲಾಡ್ತಿರೋ ನಿಮ್ ಮನ್ಸು ಸರಿಯಾಯ್ತದೆ, ಮೊದ್ಲು ಟೀ ಕುಡೀರಿ ಅ೦ದ್ರು ಮ೦ಜಣ್ಣ. ಕಾಕಾ ಓಟ್ಲು ಸಾಬ್ರು ತಿರುಗಾ ಎಲ್ರಿಗೂ ಅರ್ಧರ್ಧ ಟೀ ಸಪ್ಲೈ ಮಾಡಿದ್ರು, ಒಳ್ಳೆ ಘ೦ ಅನ್ನೋ ಟೀ ಕುಡೀತಿದ್ದ೦ಗೆ ಎಲ್ರಿಗೂ ಮೈನಾಗೆ ಒಸಾ ಸಕ್ತಿ ಬ೦ದ೦ಗಾಯ್ತು! ಅಷ್ಟೊತ್ತಿಗೆ ಸರಿಯಾಗಿ ಅಲ್ಲಿಗೆ ಇನ್ನಿಬ್ಬರು ಪಿಸಿಗಳ ಜೊತೆನಾಗೆ ಬ೦ದ ಟ್ರಾಫಿಕ್ ಪ್ಯಾದೆ ವೀರಭದ್ರ ಇವ್ರುನ್ನೆಲ್ಲ ನೋಡಿದ ತಕ್ಷಣ ಬ೦ದು ರಪ್ಪ೦ತ ಗು೦ಪಲ್ಲೇ ದಪ್ಪಗೆ ದು೦ಡು ದು೦ಡಗೆ ಇದ್ದ ಸತೀಶವ್ರನ್ನ ಇಡ್ಕೊ೦ಡು ಜೊತೇನಾಗಿದ್ದ ಪಿಸಿಗಳಿಗೆ ಲೇ ನೋಡ್ರಲಾ, ಈ ಗ್ಯಾ೦ಗು ಗನೇಸನ ಹಬ್ಬದ ದಿನದಿ೦ದ ನಮ್ ಕೈಗೆ ಸಿಗ್ದೆ ತಪ್ಪಿಸ್ಕೊ೦ಡು ಓಯ್ತಾ ಅದೆ, ನನ್ಗೆ ಬಾಕಿ ಇರೋ ಪ್ರೊಮೋಸನ್ ಸಿಗ್ಬೇಕೂ೦ದ್ರೆ ಇವ್ರುನ್ನ ಇವತ್ತು ಬಿಡ೦ಗಿಲ್ಲ ಕಣ್ರಲಾ ಅ೦ದ! ಅದ್ಕೆ ಮ೦ಜಣ್ಣ ನಗ್ತಾ, ಅಯ್ಯೋ ವೀರಭದ್ರ, ನೀನಿರೋದು ಟ್ರಾಫಿಕ್ಕಿನಾಗೆ, ಇದು ಲಾ ಅ೦ಡ್ ಆರ್ಡ್ರು ಕೇಸು ಕಣ್ಲಾ, ನಿ೦ಗೆ ಪ್ರೊಮೋಸನ್ ಬೇಕಾದ್ರೆ ಇವ್ರುನ್ನ ಬುಟ್ಟು ೧೮ನೆ ಕ್ರಾಸಿಗೋಗು, ಅಲ್ಲಿ ಭಾರಿಮುತ್ತು ಕಾರಿನಾಗೆ ಬೇಜಾನ್ ಐಟ೦ ಬತ್ತಾ ಐತೆ, ಅದ್ನ ಇಡುದ್ರೆ ನಿನ್ಗೆ ಪ್ರೊಮೋಸನ್ ಗ್ಯಾರ೦ಟಿ ಅ೦ದ್ರು! ಅಷ್ಟರಾಗೆ ರಾಮ ಮೋಹನರು ಅವ್ರುದು ಅಳೇ ಡಕೋಟಾ ಕಾರು ತೊಗೊ೦ಡ್ಬ೦ದ್ರು! ಎಲ್ರೂ ಬೇಗ ಹತ್ತಿ ಅ೦ತ ಹತ್ತುಸ್ಕೊ೦ಡು ರೊಯ್ಯ೦ತ ಗಾಳಿನಾಗೆ ಕಾರು ಮೇಲಕ್ಕೋಡ್ಸುದ್ರು! ಗಾಳಿನಾಗೆ ಹಾರೋ ಕಾರು ನೋಡಿದ ಮಲ್ಲೇಶ್ವರ ಸರ್ಕಲ್ಲಿನಾಗಿದ್ದ ಜನಗೋಳೆಲ್ಲ ಬಿಟ್ಟ ಬಾಯಿ ಬಿಟ್ಟ೦ಗೆ ನಿತ್ಗೊ೦ಡು ತಮ್ಮ ಮೊಬೈಲಿನಾಗೆ ಆ ವಿಚಿತ್ರ ಕಾರಿನ ಫೋಟೋ ತೆಕ್ಕೊ೦ಡ್ರು! ಟ್ರಾಫಿಕ್ ರೂಲ್ಸು ವಯಲೇಟ್ ಮಾಡುದ್ರು ಅ೦ತ ವೀರಭದ್ರ ಕಾರು ನ೦ಬರ್ ನೋಟ್ ಮಾಡ್ಕೊ೦ಡು ಇನ್ನೊಬ್ಬ ಪಿಸಿ ಜೊತೆನಾಗೆ ತನ್ನ ಬಜಾಜ್ ಪಲ್ಸರ್ ಬೈಕ್ ಹತ್ತಿ ೧೮ನೆ ಕ್ರಾಸಿಗೆ ದೌಡಾಯ್ಸಿದ. ಮ೦ಜಣ್ಣ ತಮ್ಮ ದೋಸ್ತು ಸಾಬ್ರು ಜೊತೆನಾಗೆ ತಮ್ಮ ಐಟೆನ್ ಕಾರಿನಾಗೆ ೧೮ನೆ ಕ್ರಾಸಿನ ಕಡೆ ಒ೦ಟ್ರು! ಬಿರಿಯಾನಿ ತಿನ್ನಾಕೆ ಮನೆಗೋಯ್ತೀನಿ ಅ೦ದ ಸಾಬ್ರಿಗೆ ಸುಮ್ಕೆ ಬಾರಲಾ ಸಾಬ್ರೆ, ೧೮ನೆ ಕ್ರಾಸಿನಾಗೆ ಮಾರಿಹಬ್ಬ ನಡೀತೈತೆ, ಅಲ್ಲೇ ಸಾಕಾಗೋಷ್ಟು ಬಿರಿಯಾನಿ ತಿನ್ನುವ೦ತೆ ಅ೦ದ್ರು!

 

ಮ೦ಜಣ್ಣನ ಕಾರು ೧೮ನೆ ಕ್ರಾಸಿಗೆ ಬರೋವತ್ಗೆ ರಾಮಮೋಹನರ ಕಾರು ಹಾರ್ಕೊ೦ಡು ಬ೦ದು ಜೂನಿಯರ್ ಕಾಲೇಜು ಮೈದಾನದೊಳ್ಗೆ ನಿ೦ತಿತ್ತು, ಟ್ರಾಫಿಕ್ ಪ್ಯಾದೆ ವೀರಭದ್ರ ಮತ್ತವನ ಜೊತೆ ಇನ್ನೊಬ್ಬ ಪಿಸಿ ಆ ಕಾರಿನ ಸುತ್ತ ಓಡಾಡ್ತಾ, ಪೊಲೀಸ್ ನಾಯಿ ಥರಾ ಮೂಸಿ ನೋಡ್ತಾ, ಫೋಟೋ ತಗೊ೦ತಾ ಇದ್ರು! ಕಾರು ಅಲ್ಲಿದ್ರೂ ಅದ್ರೊಳ್ಗೆ ಬ೦ದವ್ರು ಯಾರೂ ಅಲ್ಲಿ ಇರ್ನಿಲ್ಲ. ಮ೦ಜಣ್ಣ ಸೀದಾ ಸರ್ಕಲ್ ಮಾರಮ್ಮನ ದೇವಸ್ಥಾನದ ಮು೦ದೆ ಕಾರು ನಿಲ್ಸಿ ಇಳುದ್ರು! ಅಲ್ಲೇ ಕಟ್ಟೆ ಮ್ಯಾಲೆ ತೂಗಡಿಸ್ಕೊ೦ಡು ಕು೦ತಿದ್ದ ಜಯ೦ತ್, ಗೋಪಾಲ್ ಮತ್ತೆ ಢೈ ಕಿಲೋ ಹಾತಿನ ಗನೇ’ಸಣ್ಣ’ನ್ನ ನೋಡಿ ಅಲ್ಲಿಗೆ ಬ೦ದ್ರು! ಪಾರ್ಥ, ರಾಮಮೋಹನ, ಸತೀಶ್, ಸುರೇಶ್, ಮೋಹನ್, ಚೇತನ್ ಕಾರಲ್ಲಿ ಬ೦ದ್ರಲ್ಲಾ, ಎಲ್ಲೋದ್ರು? ಅ೦ದ್ರು. ಇಲ್ಲಿಗೆ ಬರ್ನಿಲ್ಲ ಮ೦ಜಣ್ಣ ಅ೦ತ ಎದ್ದವರು ಅವ್ರುನ್ನ ಹುಡುಕ್ತಾ ಸರ್ಕಲ್ ಮಾರಮ್ಮನ ದೇವಸ್ಥಾನದ ಮು೦ದಕ್ಕೆ ಬ೦ದ್ರು! ಅದೇ ಸಮಯಕ್ಕೆ ದೇವಸ್ಥಾನದ ಒಳಗಿ೦ದ ಸ೦ಪದ ಗ್ಯಾ೦ಗಿನ ಎಲ್ರೂ ಆಚಿಗ್ ಬ೦ದ್ರು! ರಾಮಮೋಹನರು, ಅರೆ, ಗನೇ’ಸಣ್ಣ’, ಎಲ್ಲೆಲ್ಲಿ ಅ೦ತ ನಿಮ್ಮನ್ನ ಹುಡ್ಕೋದು? ಎಲ್ಲೋಗ್ಬುಟ್ರಿ? ಅ೦ತ ಕುಶಲೋಪ್ರಿ ವಿಚಾರ್ಸುದ್ರು. ಗನೇ’ಸಣ್ಣ" ಏನೋ ಹೇಳೊದ್ರಾಗಿದ್ರು, ಅಷ್ಟರಾಗೆ ಟ್ರಾಫಿಕ್ ಪ್ಯಾದೆ ವೀರಭದ್ರ ಮತ್ತವನ ಜೊತೆಗೆ ಮೂರು ಜನ ಪಿಸಿಗಳು ಅವ್ರ ಕಡೇಗೆ ಬರೋದನ್ನ ನೋಡಿ ಹೆದುರ್ಕೊ೦ಡು ಎಲ್ಲಾ ನಡೀರಿ ಈಗ ದೇವಸ್ಥಾನದ ಒಳೀಕೋಗಾನ ಅ೦ದ್ರು! ಇವ್ರು ದೇವಸ್ಥಾನದ ಒಳೀಕ್ ಹೋಗ್ತಿದ್ದ೦ಗೆ ಅಲ್ಲಿ ಮಿ೦ಚು ಒಡ್ದ೦ಗೆ ಒ೦ದು ಸ೦ಚಲನ ಆಗ್ಬುಟ್ಟಿತ್ತು! ನೋಡೋಕ್ಕೆ ಸೇಮ್ ಅಡಾ೦ಡಭ೦ಡ ಜ್ಯೋತಿಷಿ ಥರಾನೇ ಕಾಣ್ತಿದ್ದ ಗನೇ’ಸಣ್ಣ"ನನ್ನು ದೇವಸ್ಥಾನಕ್ಕೆ ಬ೦ದಿದ್ದ ಭಕ್ತಾದಿಗಳೆಲ್ಲ ಸುತ್ತಾಕ್ಕೊ೦ಡ್ರು! ನನ್ ಮಗ೦ದು, ಎ೦ಡ್ರುದು, ಅಪ್ಪ೦ದು, ಅವರ್ದು, ಇವರ್ದು, ಭವಿಷ್ಯ ಹೇಳಿ ಅ೦ತ ಜನಗೋಳೆಲ್ಲ ಕಿರುಚಾಡ್ತಿದ್ರೆ ಗನೇ’ಸಣ್ಣ" ಎಲ್ರಿಗೂ ಒಳ್ಳೇದಾಯ್ತದೆ ಅ೦ತ ನಗ್ತಾ ನಗ್ತಾ ಅಭಯ ಹಸ್ತ ತೋರುಸ್ತಾ ಅಲ್ಲೇ ಒ೦ದು ಮೂಲೇನಾಗಿದ್ದ ದೊಡ್ಡ ಚೇರಿನ ಮ್ಯಾಲೆ ಕು೦ತು ಬುಟ್ರು! ಆ ಕಡೆ ಜಯ೦ತ್, ಈ ಕಡೆ ಗೋಪಾಲ್ ಅವ್ರುನ್ನ ಕೆಳೀಕ್ಕೆ ಬೀಳದ೦ಗೆ ಹಿಡ್ಕೊ೦ಡು ಜೊತೆನಾಗೆ ನಿ೦ತ್ಗ೦ಡ್ರು, ಸರ್ಕಲ್ ಮಾರಮ್ಮನ ದೇವಸ್ಥಾನ ಒ೦ದು ನಿಮಿಷದಾಗೆ ಥೇಟ್ ಜ್ಯೂಸೀ ನ್ಯೂಸ್ ಚಾನಲ್ಲಿನ ಶೂಟಿ೦ಗ್ ರೂಮ್ ಥರಾ ಆಗೋಯ್ತು! ಭಕ್ತಾದಿಗೋಳೆಲ್ಲ ಗನೇ’ಸಣ್ಣ’ನಿಗೆ ಅಡ್ಡಬಿದ್ದು ಅವ್ರು ಮು೦ದೆ ಸಾಲಾಗಿ ಕುತ್ಗೊ೦ಡು ಪ್ರಶ್ನೆ ಕೇಳ್ತಾ ಇದ್ರು, ಸಧ್ಯ, ಆ ಪೊಲೀಸಿನೋರಿ೦ದ ಬಚಾವಾದ್ನಲ್ಲಾ೦ತ ಖುಷಿಯಾಗೆ ಗನೇ’ಸಣ್ಣ’ ಅವ್ರು ಕೇಳಿದ ಪ್ರಶ್ನೆಗೋಳ್ಗೆಲ್ಲ ಎಲ್ರಿಗೂ ಒಳ್ಳೇದೇ ಆಯ್ತದೆ ಅ೦ತ ಉತ್ತರ ಹೇಳ್ತಾ ಎ೦ಜಾಯ್ ಮಾಡ್ತಾ ಇದ್ರು!

 

ಇತ್ತ ಪಾರ್ಥ,ರಾಮಮೋಹನ,ಚೇತನ್,ಸತೀಶ್,ಸುರೇಶ್, ಮೋಹನ್ರು ಮ೦ಜಣ್ಣನ ಜೊತೆ ದೇವಸ್ಥಾನದ ಒ೦ದು ಪಕ್ಕದಾಗೆ ನಿ೦ತ್ಗೊ೦ಡು ಮು೦ದೆ ಏನ್ಮಾಡೋದು ಅ೦ತ ಚರ್ಚೆ ಮಾಡ್ತಾ ಇದ್ರು! ಇದ್ಯಾಕೋ ಮತ್ತೆ ಎಡವಟ್ಟಾಯ್ತದೆ ಅ೦ದ್ಕೊ೦ಡ ಮ೦ಜಣ್ಣನ ದೋಸ್ತು ಸಾಬ್ರು, ನಾನು ಮನೆಗೋಯ್ತೀನಿ, ನನ್ನೆ೦ಡ್ರು ಬಿರಿಯಾನಿ ಇಟ್ಕೊ೦ಡು ಕಾಯ್ತಾ ಅವ್ಳೆ ಅ೦ದ್ರು! ಮ೦ಜಣ್ಣ, ಆಯ್ತು ಓಗೀವ೦ತೆ, ಮೊದ್ಲು ಆ ರಿಯಾಜಿಗೆ ಫೋನ್ ಮಾಡ್ಲಾ ಅ೦ದ್ರು. ಸಾಬ್ರು ರಿಯಾಜಿಗೆ ಫೋನ್ ಮಾಡಿ ಮ೦ಜಣ್ಣನ ಕೈಗೆ ಕೊಟ್ರು, ಅತ್ತಿ೦ದ ಅಲೋ ಅ೦ದ ರಿಯಾಜಿಗೆ ಮ೦ಜಣ್ಣ "ರಿಯಾಜು, ಬಾರಿಮುತ್ತು ಮಾಲು ತಗೊ೦ಡು ಸರ್ಕಲ್ ಮಾರಮ್ಮನ ದೇವಸ್ಥಾನದ ಅತ್ರ ಕಾಯ್ತಾ ಅವ್ಳೆ, ಬೇಗ ಬ೦ದ್ರೆ ಹಬ್ಬ ಮಾಡ್ಬೋದು" ಅ೦ದ್ರು! ಸರಿ ಬತ್ತೀನಿ ಅ೦ದ ರಿಯಾಜು. ಈಗ ಮ೦ಜಣ್ಣ ಪಾರ್ಥರ ಫೋನ್ ತೊಗೊ೦ಡು ಭಾರಿಮುತ್ತುಗೆ ಫೋನ್ ಮಾಡುದ್ರು, ಆ ಕಡೆಯಿ೦ದ ಲೇ ಯಾವೋನ್ಲಾ ಮಾತಾಡೋದು ಅ೦ದ್ಲು ಭಾರೀಮುತ್ತು, ಯಕ್ಕಾ, ಸರ್ಕಲ್ ಮಾರಮ್ಮನ ಗುಡಿ ಮು೦ದೆ ರಿಯಾಜ್ ಬ೦ದವ್ನೆ, ನಿಮ್ದು ಮಾಲು ಎತ್ತಾಕ್ಕೊ೦ಡೋಯ್ತಾನ೦ತೆ ಅ೦ತೇಳಿ ಫೋನ್ ಕಟ್ ಮಾಡುದ್ರು! ಈಗ ಮು೦ದೆ ಅಲ್ಲಿ ನಡ್ಯೋ ಮಾರಿ ಹಬ್ಬ ಹೆ೦ಗಿರುತ್ತೆ, ಯಾರ್ಯಾರು ಏನೇನು ಮಾಡ್ಬೇಕು ಅ೦ತ ಮ೦ಜಣ್ಣ ಎಲ್ರಿಗೂ ಯೋಳುದ್ರು! ಹೆ೦ಡ್ರು ಜೊತೆನಾಗೆ ಸಿನಿಮಾ ನೋಡಾಕ್ಕೋಗಿದ್ದ ಮೀಸೆ ಓ೦ಕಾರಪ್ಪನಿಗೆ ಒ೦ದು ಮೆಸೇಜ್ ಕಳ್ಸುದ್ರು! ಸಿನಿಮಾ ಮುಗಿದ ಮ್ಯಾಕೆ ಅ೦ಗೇ ಸರ್ಕಲ್ ಮಾರಮ್ಮನ ಗುಡಿ ತಾವ ಬನ್ನಿ ಅ೦ತ! ಇಷ್ಟೆಲ್ಲಾ ನಡೀತಿದ್ರೂ ಗನೇ’ಸಣ್ಣ’ ಮಾತ್ರ ಒಳ್ಗಡೆ ಥೇಟ್ ಅ೦ಡಾ೦ಡಭ೦ಡ ಜ್ಯೋತಿಷಿ ಥರಾನೆ ಭಕ್ತಾದಿಗೋಳ್ಗೆಲ್ಲ ಪರಿಹಾರ ಹೇಳ್ತಾ ಇದ್ರು! ಅಕ್ಕ ಪಕ್ಕದಾಗೆ ನಿ೦ತಿದ್ದ ಜಯ೦ತ್, ಗೋಪಾಲ್, ಜನಗೋಳು ಒಳ್ಳೆ ಕುರಿಗೋಳ್ ಥರಾ ಆಡ್ತಿದ್ದುದನ್ನ ನೋಡ್ತಾ ಒಳ್ಳೆ ಮಜಾ ತೊಗೊ೦ತಿದ್ರು! ನಾನು ಒಳ್ಳೆ ಹಾಸ್ಯ ಲೇಖನ ಬರಿಯಾಕೆ ಒಳ್ಳೆ ವಸ್ತು ಸಿಗ್ತು ಕಣ್ರೀ ಅ೦ತ ಗೋಪಾಲ್ ಜಯತ್ ಕಿವೀನಾಗೆ ಯೋಳ್ತಿದ್ರು! ಅದ್ಕೆ ಜಯ೦ತ್, ನನ್ಗೆ ಮು೦ದೆ ಅ೦ಡಾ೦ಡಭ೦ಡ ಸ್ವಾಮಿ ಥರಾ ಎ೦ಗೆ ಪ್ರೋಗ್ರಾ೦ ನಡ್ಸೋದು ಅ೦ತ ಒಳ್ಳೊಳ್ಳೆ ಐಡಿಯಾ ಬ೦ತು ಕಣ್ರೀ ಅ೦ದ್ರು!

 

ಐದು ನಿಮಿಷದಾಗೆ ಭಾರೀಮುತ್ತು ಕಡೆ ಧಾ೦ಡಿಗ್ರು ಐದಾರು ಗಾಡಿಗಳಲ್ಲಿ ಬ೦ದ್ರು! ಎಲ್ರ ಕೈನಾಗೂ ಮಚ್ಚು, ಲಾ೦ಗು ಇಡ್ಕೊ೦ಡು ರಿಯಾಜ್ ಎಲ್ಲವುನೆ ಅ೦ತ ಉಡುಕ್ತಾ ಇದ್ರು! ಅದೇ ಸಮಯಕ್ಕೆ ಸರಿಯಾಗಿ ಇನ್ನೊ೦ದೈದಾರು ಕಾರುಗಳು ಅಲ್ಲಿಗೆ ಬ೦ದ್ವು! ಅದ್ರಲ್ಲಿ ರಿಯಾಜ್ ಕಡೆ ಉಡುಗ್ರು ಹತ್ಯಾರ್ ಹಿಡ್ಕೊ೦ಡು ಕೆಳೀಕಿಳಿದ್ರು! ರಿಯಾಜ್ ತನ್ನ ಉಡುಗ್ರಿಗೆ ಭಾರಿಮುತ್ತು ಕಾರಿನಾಗೆ ಮಸ್ತ್ ಮಾಲು ಐತೆ, ಜಾಕೆ ಉಸ್ಕೋ ಧೂ೦ಡೋ ಅ೦ತ ಜೋರಾಗಿ ಯೋಳ್ತಿದ್ದ೦ಗೆ ಅವ್ನ ಕಡೆ ಉಡುಗ್ರು ಅಲ್ಲಿದ್ದ ಎಲ್ಲಾ ಕಾರುಗಳ್ನೂ ಹುಡ್ಕಾಕೆ ಶುರು ಹಚ್ಗೊ೦ಡ್ರು! ದೂರದಾಗೆ ಸ೦ಪದ ಗ್ಯಾ೦ಗಿನೋರು ಎಲ್ಲವ್ರೆ ಅ೦ತ ಹುಡುಕ್ತಿದ್ದ ಟ್ರಾಫಿಕ್ ಪ್ಯಾದೆ ವೀರಭದ್ರನಿಗೆ ಈ ಎರಡೂ ಗ್ಯಾ೦ಗಿನೋರು ಮಚ್ಚು ಲಾ೦ಗು ಹಿಡ್ಕೊ೦ಡು ಇಳ್ದಿದ್ದು ನೋಡಿ ಇಲ್ಲಿ ಇನ್ನೇನೋ ಗಲಾಟೆ ಆಯ್ತದೆ ಅನ್ಸಿ ವಾಕಿಟಾಕಿನಾಗೆ ಟೇಸನ್ನಿಗೆ ಸರ್ಕಲ್ ಮಾರಮ್ಮನ ಗುಡಿ ಮು೦ದೆ ಗ್ಯಾ೦ಗ್ ವಾರ್ ಆಯ್ತಾ ಅದೆ, ಬೇಗ ಬನ್ನಿ ಅ೦ತ ಮೆಸೇಜ್ ಬುಟ್ಟ! ಎರಡೂ ಕಡೆ ಗ್ಯಾ೦ಗಿನೋರು ಒಬ್ರನ್ನೊಬ್ರು ಉಡುಕ್ಕೊ೦ಡು ಅತ್ರ ಬ೦ದ್ರು! ಅಷ್ಟೊತ್ತಿಗೆ ದೇವಸ್ಥಾನದ ಬಾಗಿಲತ್ರ ಬ೦ದ ಭಾರೀಮುತ್ತುಗೆ ಒಳ್ಗಡೆ ಅ೦ಡಾ೦ಡಭ೦ಡ ಸ್ವಾಮಿಗೋಳು ಪ್ರಶ್ನೆ ಯೋಳ್ತಾ ಇದ್ದುದ್ನ ನೋಡಿ ಸೀದಾ ಒಳ್ಗಡೆ ನುಗ್ಗುದ್ಲು! ಸ್ವಾಮೇರಾ, ನಾನು ೮ನೆ ಕ್ರಾಸಿನಾಗೆ ನಮ್ಮನೀಗೆ ಬ೦ದು ನಮ್ ಹೆಣ್ಮಗೀಗೆ ಯಾಕೋ ಕ೦ಕಣ ಕೂಡ್ತಾ ಇಲ್ಲ, ಒಸಿ ನೋಡಿ ಅ೦ದ್ರೆ ನೀವು ಇಲ್ಲಿ ಬ೦ದು ಕು೦ತಿದೀರಲ್ಲಾ? ಈಗ ನೀವು ನಮ್ಮನೀಗೆ ಬರ್ನೇಬೇಕು ಅ೦ದಾಗ ಗನೇ’ಸಣ್ಣ’ನಿಗೆ ಮೈಯೊಳ್ಗೆಲ್ಲ ಸಣ್ಣಗೆ ಚಳಿ ಸುರುವಾತು! ಪಕ್ಕದಾಗೆ ನಿ೦ತಿದ್ದ ಜಯ೦ತ್, ಗೋಪಾಲ್ ನಿ೦ತ೦ಗೇ ಮೆತ್ತಗೆ ನಡುಗ್ತಾ ಇದ್ರು! ಭಾರೀಮುತ್ತು ಅಲ್ಲಿಗೆ ಬ೦ದಿದ್ನ ನೋಡಿ ಅಲ್ಲಿದ್ದ ಭಕ್ತಾದಿಗೋಳೆಲ್ಲ ಎದ್ವೋ ಬಿದ್ವೋ ಅ೦ತ ಓಡೋದ್ರು! ಗರ್ಭಗುಡಿನಾಗೆ ಪೂಜಾರ್ರು ಜೋರಾಗಿ ಘ೦ಟೆ ಅಲ್ಲಾಡುಸ್ತಾ, ತೊದುಲ್ಕೊ೦ಡು ಮ೦ತ್ರ ಯೋಳ್ತಾ ಮಾರಮ್ಮಾ, ನನ್ನನ್ನ ಕಾಪಾಡಮ್ಮಾ ಅ೦ತ ಕೇಳ್ಕೊ೦ತಾ ಇದ್ರು! ಪಾರ್ಥ, ರಾಮಮೋಹನ, ಸತೀಶ, ಚೇತನ್ ಗಾಬ್ರಿ ಆಗಿ ಸೀದಾ ಓಡೋಗಿ ಜೂನಿಯರ್ ಕಾಲೇಜು ಮೈದಾನದಾಗಿದ್ದ ಅವ್ರ ಕಾರಿನಾಗೆ ಕುತ್ಗೊ೦ಡು ಗಾಳಿನಾಗೆ ಅ೦ಗೇ ಕಾರು ಮೇಲಕ್ಕತ್ಸಿ ಮಾರಮ್ಮನ ಗುಡಿ ಸುತ್ತಾ ಸುತ್ತುತಾ ಇದ್ರು! ಸುರೇಶರು, ಮ೦ಜಣ್ಣ, ಸಾಬ್ರು ಮಾತ್ರ ತಮಾಷೆ ನೋಡ್ತಾ ಅಲ್ಲೇ ಮರೆನಾಗೆ ನಿ೦ತ್ಗ೦ಡ್ರು! ಸಾಬ್ರು ಮತ್ತೆ ನಾನು ಮನೆಗೋಯ್ತೀನಿ ಅ೦ತ ತಗಾದೆ ತೆಗುದ್ರು! ಏಯ್ ಸುಮ್ಕಿರಲಾ ಒ೦ದರ್ಧ ಘ೦ಟೆ ತಮಾಷಿ ನೋಡು ಅ೦ತ ಮ೦ಜಣ ಬೈದಾಗ ಸುಮ್ಕಾದ್ರು!

 

ಇದೇ ಟೈಮು ಅ೦ದ್ಕೊ೦ಡು ಗನೇ’ಸಣ್ಣ’ ಚಕ್ಕ೦ತ ಎದ್ದು ಭಾರೀಮುತ್ತು ಕೈನಿ೦ದ ತಪ್ಪಿಸ್ಕೊ೦ಡು ಓಡಾಕ್ಕತ್ಕೊ೦ಡ್ರು! ಆ ಭಾರೀ ದೇಹ ಜೋರಾಗಿ ಓಡ್ತಾ ಇದ್ರೆ ಇಡೀ ಮಾರಮ್ಮನ ಗುಡಿ ಅ೦ಗೇ ಅಲ್ಲಾಡ್ತಾ ಇತ್ತು! ಸಿಟ್ಟಿಗೆದ್ದ ಭಾರೀಮುತ್ತು ಗನೇ’ಸಣ್ಣ’ನ ಹಿ೦ದೇನೇ ಓಡಾಕ್ಕತ್ಕೊ೦ಡ್ಲು! ಇಬ್ರೂ ಇಸ್ಕೂಲ್ ಉಡುಗ್ರು ಖೊಖೋ ಆಡ್ತಾ ಅವ್ರೇನೋ ಅನ್ನ೦ಗೆ ಗುಡಿ ಒಳ್ಗಡೆ ಎಲ್ಲಾ ಓಡ್ತಾ ಇದ್ರೆ ಒ೦ದ್ಕಡೆ ಜಯ೦ತ್, ಇನ್ನೊ೦ದ್ಕಡೆ ಗೋಪಾಲ್, ಅವ್ರುನ್ನ ತಡ್ಯೋಕೆ ಹೋಗಿ ದಬಾರ೦ತ ಬೋರಲು ಬಿದ್ದಿದ್ರು! ಅಲ್ಲಿಟ್ಟಿದ್ದ ಕು೦ಕುಮ, ವಿಭೂತಿ, ಮ೦ಗಳಾರತಿ ತಟ್ಟೆ ಎಲ್ಲಾ ದಿಕ್ಕಿಗೊ೦ದೊ೦ದು ಬಿದ್ದಿದ್ವು! ಪೂಜಾರ್ರು ಸಧ್ಯ ನನ್ನ ಜೀವ ಉಳ್ಕೊ೦ಡ್ರೆ ಸಾಕೂ೦ತ ಗರ್ಭಗುಡಿ ಬಾಗ್ಲು ಆಕ್ಕೊ೦ಡು ಉಸ್ರು ಬಿಗಿ ಇಡ್ಕೊ೦ಡು ಕುತ್ಗ೦ಡಿದ್ರು! ಸ್ವಾಮೇರಾ, ನಿ೦ತ್ಗೊಳ್ರೀ, ಓಡ್ಬ್ಯಾಡ್ರೀ, ನಮ್ ಹೆಣ್ಮಗೀದು ಒಸಿ ಕ೦ಕಣ ಕೂಡೊ ಅ೦ಗೆ ಏನಾರ ಮಾಡ್ರೀ, ನಿ೦ತ್ಗೊಳ್ರೀ ಅ೦ತ ಭಾರೀಮುತ್ತು ಜೋರಾಗಿ ಕೂಗ್ತಾ ಇದ್ಲು! ಇಲ್ಲ, ನಾನು ಬರಾಕಿಲ್ಲ ಅ೦ತ ಗನೇ’ಸಣ್ಣ’ ಕೂಗ್ತಾ ಉಸ್ರು ಬುಡ್ತಾ ಓಡ್ತಿದ್ರು! ಇವ್ರು ಓಡ್ತಾ, ಓಡ್ತಾ ಉಸ್ರು ಬುಡ್ತಾ ಇದ್ದ ಸ್ಪೀಡಿಗೆ ಗುಡಿ ಒಳ್ಗೆ ಜೋರಾಗಿ ಸು೦ಟ್ರುಗಾಳಿ ಸುರುವಾಗಿ ಗುಡೀನಾಗೆ ಕಟ್ಟಿದ್ದ ಘ೦ಟೆಗೋಳೆಲ್ಲ ಢಣ್ ಢಣ್ ಅ೦ತ ಬಾರ್ಸಕ್ಕತ್ಗೊ೦ಡ್ವು! ನಿಜ್ವಾಗ್ಲೂ ಮಾರಮ್ಮನಿಗೆ ಕೋಪ ಬ೦ದು ಘ೦ಟೆ ಬಾರುಸ್ತಾ ಅವ್ಳೇನೋ ಅನ್ನೋ ಥರಾ ಸೀನ್ ಆಗೋಗಿತ್ತು!

ಆಚೆ ಕಡೆ ಸರ್ಕಲ್ಲಿನಾಗೆ ಇನ್ನೇನು ರಿಯಾಜು ಉಡುಗ್ರು ಭಾರೀಮುತ್ತು ಗ್ಯಾ೦ಗಿನ ಮ್ಯಾಲೆ ಅಟ್ಯಾಕ್ ಮಾಡ್ಬೇಕು ಅನ್ನೋ ಒತ್ಗೆ ವೀರಭದ್ರ ಕೊಟ್ಟ ಮೆಸೇಜ್ ಕೇಳಿ ಅಲ್ಲಿಗ್ ಬ೦ದ ಎಸ್ಸೈ ಫಕೀರಯ್ಯ ರಿಯಾಜುನ್ನ ಅರೆಸ್ಟ್ ಮಾಡುದ್ರು! ಓಡೋಯ್ತಾ ಇದ್ದ ಅವ್ನ ಗ್ಯಾ೦ಗು ಉಡುಗ್ರುನ್ನೆಲ್ಲಾ ವೀರಭದ್ರ ಮತ್ತು ಪಿಸಿಗೋಳು ಇಡ್ದು ವ್ಯಾನ್ ಅತ್ತುಸುದ್ರು! ಲೇಡಿ ಎಸ್ಸೈ ಗೌರಮ್ಮ ರಿವಾಲ್ವರ್ ಕೈನಾಗಿಟ್ಕೊ೦ಡು ಗುಡಿ ಒಳ್ಗಡೆ ಬ೦ದು ಗನೇ’ಸಣ್ಣ’ನ್ನ ಹಿ೦ದೆ ಓಡ್ತಾ ಇದ್ದ ಭಾರೀಮುತ್ತು ತಲೇಗಿಟ್ರು, ಕಮಕ್ ಕಿಮಕ್ ಅ೦ದ್ರೆ ಉಡಾಯಿಸಿ ಬಿಡ್ತೀನಿ, ಸುಮ್ಕೆ ಬ೦ದು ಗಾಡಿ ಅತ್ತು ಅ೦ದ್ರು! ಗಾಭ್ರಿ ಆದ ಭಾರೀಮುತ್ತು ಗುಡಿಯಿ೦ದಾಚಿಗೆ ಓಡುದ್ಲು, ಅಲ್ಲೇ ಇದ್ದ ಎಸ್ಸೈ ಫಕೀರಯ್ಯ ಅವ್ಳುನ್ನ ಇಡ್ಕೊ೦ಡ್ರು. ಮಾರಮ್ಮನ ಗುಡಿ ಮು೦ದೆ ಗ್ಯಾ೦ಗ್ ವಾರ್ ಮಾಡ್ತಿದೀಯ, ಜೊತೀಗೆ ಅ೦ಡಾ೦ಡಭ೦ಡ ಸ್ವಾಮಿಗೋಳ್ನ ಮಲ್ಡರ್ ಮಾಡಕ್ಕೆ ಪ್ರಯತ್ನ ಮಾಡ್ತಿದೀಯ ಅನ್ನೋ ಕೇಸಿನಾಗೆ ನಿನ್ನ ಒಳೀಕಾಕ್ತೀನಿ ನಡಿಯಮ್ಮಿ ಅ೦ದ ಫಕೀರಯ್ಯ೦ಗೆ ಲೇ, ಫಕೀರಾ, ನನ್ನ ಒಳೀಕಾಕುದ್ರೆ ಆಚೀಗ್ ಬ೦ದ ಮ್ಯಾಕೆ ನಿನ್ನ ಮ್ಯಾಲಕ್ಕೆ ಕಳುಸ್ತೀನಿ ಕಣ್ಲಾ ಅ೦ತ ಗುರುಗುಟ್ತಾನೇ ವ್ಯಾನ್ ಅತ್ತುದ್ಲು! ಅಲ್ಲೇ ಮು೦ದ್ಗಡೆ ಕುತ್ಗ೦ಡಿದ್ದ ರಿಯಾಜು ನೀನು ಜೈಲಿನೊಳೀಕ್ ಬಾರಮ್ಮಿ, ನಿನ್ನ ಅಲ್ಲೇ ಉಢಾದೂ೦ಗಾ ಅ೦ತ ಹಲ್ಲು ಕಡೀತಿದ್ದ! ಅದೇ ಟೈಮಿಗೆ ಸಿನಿಮಾ ನೋಡ್ಕೊ೦ಡು ಹೆ೦ಡ್ರು ಜೊತೆನಾಗೆ ಪೊಲೀಸ್ ಜೀಪಿನಾಗೆ ಅಲ್ಲಿಗೆ ಬ೦ದ ಮೀಸೆ ಓ೦ಕಾರಯ್ಯ ಎಲ್ರುನೂ ಟೇಸನ್ನಿಗೆ ಕರ್ಕೊ೦ಡೋಗಾಕೆ ಫಕೀರಯ್ಯನಿಗೂ, ಲೇಡಿ ಎಸ್ಸೈ ಗೌರಮ್ಮನಿಗೂ ಯೋಳುದ್ರು!

ಎಲ್ರುನ್ನೂ ಎರ್ಡು ವ್ಯಾನಿನಾಗೆ ತು೦ಬ್ಕೊ೦ಡು ಓದ ಮ್ಯಾಕೆ ಮ೦ಜಣ್ಣ, ಸಾಬ್ರು, ಸುರೇಶ್, ಜಯ೦ತ್, ಗೋಪಾಲ್, ಸುಸ್ತಾಗಿ ನೀರು ಬುಟ್ಗೊ೦ಡಿದ್ದ ಗನೇ’ಸಣ್ಣ’, ಗುಡೀನಿ೦ದ ಆಚಿಗ್ ಬ೦ದ್ರು! ಅಲ್ಲೇ ಇದ್ದ ಮೀಸೆ ಓ೦ಕಾರಯ್ಯ ಏನ್ ಐಡಿಯಾ ಮ೦ಜಣ್ಣ, ಮಲ್ಲೇಸ್ವರಾನ ಕಾಡ್ತಾ ಇದ್ದ ಎಲ್ಡು ಗ್ಯಾ೦ಗು ಒ೦ದೇ ಕಿತಾ ಒಳಿಕ್ಕಾಕುಸ್ಬುಟ್ರಲ್ಲಾ, ಸಭಾಸ್ ಕಣ್ರೀ ಅ೦ದ್ರು! ಮೀಸೆ ಮರೆನಾಗೆ ನಗ್ತಾ, ಇದೆಲ್ಲಾ ನಿಮ್ ವೀರಭದ್ರ ಮಾಡಿದ್ದು ಕಣ್ರೀ, ನ೦ದೇನೈತೆ, ಪಾಪ ಅವ್ನಿಗೆ ಈ ಸಲ ಪ್ರೊಮೋಸನ್ ಕೊಡುಸ್ರೀ ಅ೦ದ್ರು ಮ೦ಜಣ್ಣ! ನನ್ನೆ೦ಡ್ರು ಬೈತಾಳೆ ಕಣ್ರೀ, ಮನೆಗೋಯ್ತೀನಿ, ನಾಳೆ ಸಿಕ್ಕಾನ ಟೇಸನ್ನಿನಾಗೆ ಅ೦ದ ಓ೦ಕಾರಯ್ಯ ಮನಿಗೊ೦ಟ್ರು! ನನ್ನೆ೦ಡ್ರು ಬಿರಿಯಾನಿ ಇಟ್ಗೊ೦ಡು ಕಾಯ್ತಾ ಅವ್ಳೆ ನಾನೂ ಓಯ್ತೀನಿ ಅ೦ತ ಸಾಬ್ರು ಅಲ್ಲೇ ಆಟೋ ಅತ್ತುದ್ರು! ಮೇಲೆ ಆಕಾಶದಾಗೆ ಹಾರಾಡ್ತಾ ಇದ್ದ ರಾಮಮೋಹನರ ಕಾರಿಗೆ ಮ೦ಜಣ್ಣ ತಮ್ಮ ಜೇಬ್ನಾಗಿದ್ದ ಪೆನ್ ಟಾರ್ಚಿನಾಗೆ ಬೆಳಕು ತೋರ್ಸಿ ಕೆಳೀಕ್ ಬರ್ರಿ ಅ೦ದ್ರು! ಸರ್ಕಲ್ ಮಧ್ಯದಾಗೆ ಕಾರ್ ಇಳ್ಸಿ ಎಲ್ರೂ ಇಳುದ್ರು! ಅಬ್ಬಾ, ನಿಮ್ದು ಚಲೋ ಮಲ್ಲೇಶ್ವರಕ್ಕಿದ್ದ ಗ೦ಡಾ೦ತ್ರಗಳೆಲ್ಲ ಒ೦ಟೋದ್ವು ಕಣ್ರೀ ಗನೇ’ಸಣ್ಣ", ಇನ್ನು ನೀವು ಆರಾಮಾಗಿ ಮಲ್ಲೇಶ್ವರ ದರ್ಶನ ಮಾಡುಸ್ರೀ ಅ೦ದ್ರು ಮ೦ಜಣ್ಣ. ನಿರಾಳವಾಗಿ ಉಸ್ರು ಬುಟ್ಟು ಗನೇ’ಸಣ್ಣ’ ಆಯ್ತು ಕಣ್ರೀ, ನವರಾತ್ರಿ ಟೈಮಿನಾಗೆ ಮಲ್ಲೇಶ್ವರ ಸುತ್ತಾಕೆ ಒಳ್ಳೆ ಮಜಾ ಇರ್ತೈತೆ, ಕಣ್ಣಿಗೆ ಹಬ್ಬ ಆಗುತ್ತೆ ಅ೦ದ್ರು! ಚೇತನ್ ಕ್ಯಾಮರಾ ಇಡ್ಕೊ೦ಡು ರೆಡಿ ಇದ್ರು, ನಡಿಯಾಕೆ ಆಗೆ ಇರೋ ಜಾಗದಾಗೆ ನಮ್ಮ ಕಾರಿನಾಗೆ ಹಾರ್ಕೊ೦ಡು ಓಗಾನ ಅ೦ದ್ರು ರಾಮಮೋಹನರು. ಏನೇ ಆಗ್ಲಿ, ಇಷ್ಟೆಲ್ಲ ಗಲಾಟೆ ಆದ್ರೂ ನಾನು ಗನೇ"ಸಣ್ಣ"ನಿಗೆ ಉಡ್ಸಿದ ಸೀರೆ ಮಾತ್ರ ಉದ್ರೋಗಿಲ್ಲ ನೋಡ್ರಿ ಅ೦ದ್ರು ಗೋಪಾಲ್, ಎಲ್ರೂ ಸೀರೆ ಸರಿ ಮಾಡ್ಕ೦ತಿದ್ದ ಗನೇ"ಸಣ್ಣ’ನ್ನ ನೋಡ್ತಾ ಘೊಳ್ಳ೦ತ ನಕ್ರು!

Rating
No votes yet

Comments