ಸಾಧನಗಳ ಅಯ್ಕೆ ನೌಕರರಿಗೆ
ಸಾಧನಗಳ ಅಯ್ಕೆ ನೌಕರರಿಗೆ
ಕಚೇರಿಗಳಲ್ಲಿ ಡೆಸ್ಕ್‌ಟಾಪ್,ಲ್ಯಾಪ್‌ಟಾಪ್ ಅಂತಹ ಸಾಧನಗಳನ್ನು ನೌಕರರಿಗೆ ಒದಗಿಸುವುದರ ಬಗ್ಗೆ ಕಂಪೆನಿಗಳು ತಮ್ಮಷ್ಟಕ್ಕೆ ನಿರ್ಧರಿಸುವುದೇ ಹೆಚ್ಚು.ಯಾವ ತರದ,ಯಾವ ಸಾಮರ್ಥ್ಯದ,ಕಂಪೆನಿಯ ಸಾಧನವೆನ್ನುವುದರಲ್ಲಿ ನೌಕರನ ಖುಷಿಯನ್ನು ಕೇಳುವ ಕಚೇರಿಗಳು ಹೆಚ್ಚಿರಲಿಲ್ಲ.ಅದೇನಿದ್ದರೂ ಆಡಳಿತ ವರ್ಗದ ತೀರ್ಮಾನವಾಗುತ್ತಿತ್ತು.ಈಗ ಬದಲಾದ ಪರಿಸ್ಥಿತಿಗಳಲ್ಲಿ,ಹಲವು ಸಾಧನಗಳ ಲಭ್ಯತೆಯಿದೆ.ಟ್ಯಾಬ್ಲೆಟ್,ಸ್ಮಾರ್ಟ್‌ಪೋನುಗಳ ಬಳಕೆ ಇಷ್ಟಪಡುವವರು ಕೆಲವರಾದರೆ,ಲ್ಯಾಪ್‌ಟಾಪ್ ಇಷ್ಟಪಡುವವರೂ ಇದ್ದಾರೆ.ಡೆಸ್ಕ್‌ಟಾಪಿಗೇ ಕಟ್ಟ್ಟುಬೀಳುವವರು ಕಡಿಮೆಯಾದರೂ ಇಲ್ಲವೇ ಇಲ್ಲವೆಂದೇನೂ ಹೇಳಲಾಗದು.ಕಂಪೆನಿಗಳು ಸಾಧನಗಳ ಅಯ್ಕೆಯನ್ನು ನೌಕರರಿಗೇ ಬಿಟ್ಟು,ಅದಕ್ಕೆ ಹಣಕಾಸು ಒದಗಿಸಲು ಮುಂದೆ ಬರುವುದು ಸದ್ಯದ ವೈಖರಿ.ನೌಕರರ ಅಯ್ಕೆಯ ಪ್ರಕಾರ ಸಾಧನಗಳನ್ನು ಒದಗಿಸಿ,ಅವರಿಂದ ಹೆಚ್ಚಿನ ದಕ್ಷತೆಯ ಕೆಲಸವನ್ನವು ನಿರೀಕ್ಷಿಸುತ್ತವೆ.ಕೆಲಸಕ್ಕೆ ಒತ್ತು-ಯಾವ ಸಾಧನ ಎನ್ನುವುದು ನಗಣ್ಯ ಎನ್ನುವುದು ಕಂಪೆನಿಗಳ ನಿರ್ಣಯ.ಇದು ನೌಕರರಿಗೂ ಇಷ್ಟವಾಗುವ ವೈಖರಿ.ಮನೆಯಲ್ಲೂ ಬಳಸಲು ಅನುಕೂಲವಾಗುವ ಸಾಧನವನ್ನು ಖರೀದಿಸಿದದರೆ ಹೆಚ್ಚು ಅನುಕೂಲ-ಸ್ವಾಮಿಕಾರ್ಯ,ಸ್ವಕಾರ್ಯ ಎರಡೂ ನಡೆಯುತ್ತದಲ್ಲ ಎನ್ನುವುದು ಅವರ ಲೆಕ್ಕಾಚಾರ.
----------------------------------------
ಫ್ರಾನ್ಸಿನಲ್ಲಿ 4ಜಿ ಹರಾಜು
ಫ್ರಾನ್ಸಿನಲ್ಲಿ 4ಜಿ ತರಂಗಾಂತರವನ್ನು ಹರಾಜು ಹಾಕುವ ಪ್ರಕ್ರಿಯೆ ಜಾರಿಯಲ್ಲಿದೆ.ಅದು ನಿರೀಕ್ಷಿತ ಆದಾಯಗಳಿಕೆಯನ್ನು ತರುವುದೂ ಬಹುತೇಕ ನಿಶ್ಚಿತವೆಂದು ಕಾಣುತ್ತಿದೆಯಂತೆ.ಹರಾಜಿನಿಂದ ಸರಕಾರ ಮೂರೂವರೆ ಬಿಲಿಯನ್ ಡಾಲರು ಆದಾಯ ನಿರೀಕ್ಷಿಸಿರುವ ಫ್ರಾನ್ಸ್ ಸರಕಾರ,ಆ ಮೊತ್ತ ಗಳಿಸುವುದು ಬಹುತೇಕ ಖಚಿತವಾಗಿದೆ.ಈಗ ಎರಡು ಸುತ್ತುಗಳ ಹರಾಜು ಪ್ರಕ್ರಿಯೆ ನಂತರ ಮುಕ್ಕಾಲು ಪಾಲು ಆದಾಯ ಬಂದಾಗಿದೆ.
----------------------------------
ಗೂಗಲ್ ವಾಲೆಟ್:ಮೊಬೈಲ್ ಮೂಲಕ ಪಾವತಿ
ಗೂಗಲ್ ನಕ್ಸಸ್ ಪೋನುಗಳನ್ನು ಬಳಸುವವರಿಗೆ ವ್ಯಾಲೆಟ್ ಎನ್ನುವ ಹೊಸ ಸೇವೆಯನ್ನು ಗೂಗಲ್ ನೀಡಲಾರಂಭಿಸಿದೆ.ಕ್ರೆಡಿಟ್ ಕಾರ್ಡನ್ನು ಮೊಬೈಲ್ ತಂತ್ರಾಂಶಕ್ಕೆ ತುಂಬಿ,ಅದರ ಮೂಲಕ ಹಣ ಪಾವತಿಸುವ ವ್ಯವಸ್ಥೆ ಇದಾಗಿದೆ.ರೀಡರ್ ಇರುವೆಡೆ,ಹ್ಯಾಂಡ್‌ಸೆಟ್ಟನ್ನು ರೀಡರಿಗೆ ಸ್ಪರ್ಶಿಸುವ ಮೂಲಕವೇ ಹಣ ಪಾವತಿಸುವ ಅನುಕೂಲತೆಯಿದೆ.ಸಮೀಪಜಾಲಗಳ ಏರ್ಪಡುವಿಕೆಯ ಮೂಲಕ ಕೆಲಸ ಮಾಡುವ ಈ ವ್ಯವಸ್ಥೆಯು ಜನರಿಗೆ ಅರ್ಥವಾಗಲು ತುಸು ಸಮಯ ಹಿಡಿಸಬಹುದು.ಜತೆಗೆ ಸಾಧನ ನಕ್ಸಸ್ ಬೇಕೆನ್ನುವುದು ಇದರ ಬಳಕೆಗೆ ಇನ್ನೊಂದು ಅಡ್ದಿಯಾಗಲಿದೆ.ಎಲ್ಲಾ ಮೊಬೈಲ್ ಜಾಲಗಳಲ್ಲಿ ಈ ಸೇವೆ ಲಭ್ಯವಿಲ್ಲವೆನ್ನುವುದು ಇನ್ನೊಂದು ಸಮಸ್ಯೆ.
-----------------------------------
ಗ್ರಹಗಳ ಪತ್ತೆ:ಜನರ ಸಹಭಾಗಿತ್ವ
ಜನರು ತಮಗೆ ತಿಳಿದ ವಿಷಯಗಳನ್ನು ಇತರರ ಜತೆ ಹಂಚಿಕೊಳ್ಳುವ ಮೂಲಕ,ಇತರರೂ ಅದರ ಲಾಭ ಪಡೆಯಲು ಅನುವಾಗುವ ಪ್ರಕ್ರಿಯೆ ಅಂತರ್ಜಾಲದ ಮೂಲಕ ನಡೆಯುತ್ತಲಿದೆ.ಹೋಟೆಲುಗಳು,ಅಂಗಡಿಗಳು,ಪುಸ್ತಕಗಳು ಹೀಗೆ ಹಲವಾರು ಮಾಹಿತಿಗಳ ಬಗ್ಗೆ ಜನರು ತಮಗೆ ತಿಳಿದದ್ದನ್ನು ಅಂತರ್ಜಾಲದಲ್ಲಿ ಇತರರೊಂದಿಗೆ ಹಂಚಿಕೊಂಡು,ಅವರೂ ಅವುಗಳ ಪ್ರಯೋಜನ ಪಡೆಯಲು ಸಹಕಾರ ನೀಡುವುದಿದೆ.ಇದನ್ನು ಗ್ರಹಗಳ ಅನ್ವೇಷನೆಗೂ ಬಳಸುವ ಯೋಜನೆ ಈಗ ಚಾಲ್ತಿಯಲ್ಲಿದೆ.ನಾಸಾದ ಕೆಪ್ಲರ್ ಯೋಜನೆಯನುಸಾರ ಪ್ರತಿ ಮೂವತ್ತು ಸೆಕೆಂಡಿಗೆ ಎರಡು ಲಕ್ಷ ನಕ್ಷತ್ರಗಳ ಬಗ್ಗೆ ಮಾಹಿತಿ ಸಂಗ್ರಹವಾಗುತ್ತದೆ.ಈ ಮಾಹಿತಿಯನ್ನು ಕಂಪ್ಯೂಟರುಗಳು ಜಾಲಾಡಿ,ಹೊಸ ಗ್ರಹಗಳನ್ನು ಅನ್ವೇಷಿಸುತ್ತವೆ.ಜನರೂ ಅಂತಹ ಜಾಲಾಟದಲ್ಲಿ ಕೈಗೂಡಿಸಿದರೆ,ಅವರೂ ಗ್ರಹಗಳ ಅನ್ವೇಷಣೆ ಮಾಡಬಹುದು.ಕಂಪ್ಯೂಟರ್ ಮೂಲಕ ನಡೆವ ಅನ್ವೇಷಣೆಗಿಂತ ಜನರು ನಡೆಸುವ ಅನ್ವೇಷಣೆ ಹೆಚ್ಚು ಯಶಸ್ವಿಯಾಗಬಹುದು.ಆದರೆ ಮಾಹಿತಿಯ ಅಗಾಧತೆಯ ಕಾರಣ ಈ ಕೆಲಸಕ್ಕೆ ಸಾವಿರಾರು ಜನರ ಸಹಭಾಗೀತ್ವ ಬೇಕಾಗುತ್ತದೆ.ಹಾಗಾಗಿ ಅಂತರ್ಜಾಲದ ಮೂಲಕ ನಡೆಯುವ ಅನ್ವೇಷಣೆಗೆ ಹೆಚ್ಚು ಅರ್ಥ ಬರುತ್ತದೆ.ಮೂರು ಲಕ್ಷ ಜನರು ಇಂತಹ ಯೋಜನೆಯೊಂದರಲ್ಲಿ ಕೆಪ್ಲರ್ ಮಾಹಿತಿಯನ್ನು ಪರಿಶೀಲಿಸಿ,ಎರಡು ಗ್ರಹಗಳ ಅನ್ವೇಷಣೆಗೆ ಸಹಾಯಹಸ್ತ ನೀಡಿದ್ದಾರೆ.ಗ್ರಹಾನ್ವೇಷಿಗಳ ಈ ಹೊಸ ಬಳಗ ತಮ್ಮ ಮೂರುಲಕ್ಷ ಮಿದುಳಿನ ಶಕ್ತಿಯನ್ನು ಜತೆಯಾಗಿಸಿ,ಆಪೂರ್ವ ವಿನ್ಯಾಸ ಅನ್ವೇಷಿಗಳಾಗಿ ಮೂಡಿಬಂದಿದ್ದಾರೆ.
-------------------------------------------
ಉಪಗ್ರಹ ಬಿತ್ತೇ?
ಬಸ್ಸಿನ ಗಾತ್ರದ ನಾಸಾ ಉಪಗ್ರಹ ಈಗಾಗಲೇ ಭೂಮಿಯ ವಾತಾವರಣಕ್ಕೆ ಬಿದ್ದಿರುತ್ತದೆ.ಇದುವರೆಗೆ ಸಾವಿರಾರು ಉಪಗ್ರಹಗಳು ಹೀಗೆ ಭೂಮಿಗೆ ವಾಪಸಾದರೂ,ಯಾವತ್ತೂ ಯಾರಿಗೂ ಬಡಿದು ಹಾನಿ ಮಾಡಿದ ಉದಾಹರಣೆಗಳಿಲ್ಲ.ಇದು ದೊಡ್ದ ಉಪಗ್ರಹವಾದರೂ,ಬೀಳುವ ಮುನ್ನ ಸಾವಿರಾರು ಹೋಳಾಗಿ ಬೀಳುವುದು ಖಂಡಿತ.ಹಾಗಾಗಿ ಅದು ಹಾನಿ ಮಾಡದು ಎನ್ನುವ ನಿರೀಕ್ಷೆ ಹೇಗೂ ಇತ್ತು.ಆಪ್ರಿಕಾ,ಕೆನಡಾಗಳಲ್ಲಿ ಬೀಳಬಹುದು ಎನ್ನುವುದು ಲೆಕ್ಕಾಚಾರ.ಆದರೆ ಅದು ಬೀಳುವ ಸಮಯದ ಬಗ್ಗೆ ಲೆಕ್ಕಾಚಾರ ಸರಿಯಾಗೇನೂ ಹಾಕಲಾಗಲಿಲ್ಲ.ಇದನ್ನು ಬರೆಯುವ ವೇಳೆಗೇ ಉಪಗ್ರಹ ಭೂಮಿಗೆ ಬಿದ್ದಾಗಿರಬಹುದು ಎಂದು ನಾಸಾ ವರದಿಗಳು ತಿಳಿಸಿದ್ದರೂ,ಅದು ಎಲ್ಲಿ ಬಿದ್ದಿತ್ತು ಎನ್ನುವುದನ್ನೂ ಹೇಳಲು ಅಸಮರ್ಥವಾಗಿತ್ತು.ಆರುವರೆ ಟನ್ ಭಾರದ ಉಪಗ್ರಹವನ್ನು ಒಂಭೈನೂರತೊಂಭತ್ತೊಂದರಲ್ಲಿ ಕಕ್ಷೆಗೆ ಸೇರಿಸಲಾಗಿತ್ತು.ಆರು ವರ್ಷ ಹಿಂದೆಯೇ ಇದರ ಬಳಕೆಯನ್ನು ನಿಲ್ಲಿಸಲಾಗಿತ್ತು.
---------------------------------------
ಟಿವಿ ಇಲ್ಲದ ಠೀವಿ
ಮುಂದಿನ ದಿನಗಳಲ್ಲಿ ಟಿವಿ ಕಾರ್ಯಕ್ರಮ ವೀಕ್ಷಣೆಗೆ ಟಿವಿ ಬಳಸುವುದು ಕಡಿಮೆಯಾದೀತು.ಹಿಗೆಂದರೆ ಅಚ್ಚರಿ ಪಡಲೇನೂ ಇಲ್ಲ.ಈಗ ಟಿವಿ ಕಾರ್ಯಕ್ರಮಗಳು ಮೊಬೈಲಿನಲ್ಲಿ,ಕಂಪ್ಯೂಟರ್ ಮೂಲಕ ನೋಡಲು ಸಾಧ್ಯ.ಹಾಗಾಗಿ ಟಿವಿಯ ಮೂಲಕವೆ ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸುವವರು ಒಂದು ವರ್ಗದವರು ಮಾತ್ರಾ.ಸಂಚಾರದಲ್ಲಿರುವವರು ಸ್ಮಾರ್ಟ್‌ಪೋನುಗಳಲ್ಲಿ ಟಿವಿ ವಾರ್ತೆ,ಕಾರ್ಯಕ್ರಮಗಳನ್ನು ನೋಡಲು ಬಯಸುವುದು ಸಹಜ.ತ್ರೀಜಿ ಅಂತಹ ತಂತ್ರಜ್ಞಾನವು ಶರವೇಗದಲ್ಲಿ ಸಂಕೇತಗಳನ್ನು ಸ್ವೀಕರಿಸಬಲ್ಲದಾದ ಕಾರಣ,ವಿಡಿಯೋವನ್ನೂ ಬೇಗನೇ ಡೌನ್‌ಲೋಡ್ ಮಾಡಬಲ್ಲುದು.ಆಮೆಗತಿಯ ಹಿಂದಿನ ಜಾಲಗಳಲ್ಲಿ ವೀಡಿಯೋ ವೀಕ್ಷಣೆ ಕಷ್ಟಕರವಾಗಿತ್ತು.ಲೈವ್ ಕಾರ್ಯಕ್ರಮಗಳನ್ನೂ ಕೂಡಾ ಸ್ಮಾರ್ಟ್‌ಪೋನುಗಳಲ್ಲಿ ನೋಡುವುದು ಶರವೇಗದ ಜಾಲಗಳಲ್ಲಿ ಸಮಸ್ಯೆಯಲ್ಲ.
-------------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.
*ಮುಂದಿನ ಮಿನಿಡೆಬಿಯನ್ ಕಾನ್ಫರೆನ್ಸ್ ನಡೆಯುವ ಸ್ಥಳ ಯಾವುದು?ಯಾವಾಗ?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS49 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
**ಮಣಿಪಾಲ್ ಮಾರ್ಟ್ ಮಣಿಪಾಲದ ಸುತ್ತಮುತ್ತ ವ್ಯವಹಾರ ಬಗ್ಗೆ ಬಹುವಿಧದ ಮಾಹಿತಿ ನೀಡುವ ತಾಣವಾಗಿದೆ.ಬಹುಮಾನ ವಿಜೇತರು ನಿರ್ಮಲಾ ನಾಯಕ್,ಗಂಗೊಳ್ಳಿ.ಅಭಿನಂದನೆಗಳು.
ಉದಯವಾಣಿ
*ಅಶೋಕ್‌ಕುಮಾರ್ ಎ