ಕನ್ನಡ ತಾಯೆ
ನಮ್ಮಮ್ಮ ಕನ್ನಡತಿ ಅವಳಮ್ಮ ಭಾರತಿ
ಕೋಟಿ ನಮನಗಳು ನಿನ ಚರಣದಲಿ ತಾಯೆ
ಖನಿಜ ಸಂಪತ್ತಿನ ರಾಶಿ ನಿನ್ನ ಒಡಲಲಿ ತಾಯೆ
ಶ್ರೀಗಂಧ ಫಲ ಪುಷ್ಪ ನಿನ್ನ ಮಡಿಲಲಿ ತಾಯೆ
ಗಿರಿ ಶೃಂಗ ಪರ್ವತಗಳು ನಿನ ಮುಕುಟದಲಿ ತಾಯೆ
ಹಸಿರ ವನಸಿರಿ ನದಿಗಳು ನಿನಗೆ ಹೊದಿಕೆಯು ತಾಯೆ
ಕೋಟೆ ಕೊತ್ತಲಗಳು ನಿನ್ನ ಸಮ್ರಾಜ್ಯದಲಿ ತಾಯೆ
ಶಿಲ್ಪ ಕಲೆಗಳ ಮೆರುಗು ನಿನ್ನ ತವರಲಿ ತಾಯೆ
ಕವಿ ಶರಣ ದಾಸರು ನಿನ್ನ ನಾಡಲಿ ತಾಯೆ
ಹರಿಸಿಹರು ಕಾವ್ಯದೊಳೆ ನಿನ್ನ ಲೇಖನಿಯಲಿ ತಾಯೆ
ಬಣ್ಣಿಸಲು ಪದಗಳಿಲ್ಲ ನಿನ್ನ ಚೆಲುವನು ತಾಯೆ
ಸೆಳೆದಿಹೆ ನಮ್ಮೆಲ್ಲರ ಏನು ನಿನ್ನಯ ಮಾಯೆ
ಎಷ್ಟು ಸಲುಹಿ ಸಾಕಿರುವೆ ನಿನ್ನ ಮಕ್ಕಳನು ತಾಯೆ
ಅವರೆಲ್ಲ ಮರೆತಿಹರು ನಿನ್ನ ವಾತ್ಸಲ್ಯವ ತಾಯೆ
ಕೊಳ್ಳೆ ಹೊಡೆದಿಹರು ನಿನ್ನ ಮಡಿಲನು ತಾಯೆ
ಬಗೆದಿಹರು ನಿನ್ನೊಡಲ ಖನಿಜ ಸಂಪತ್ತನು ತಾಯೆ
ನಿನ್ನ ವನಸಿರಿ ನದಿಗಳು ಬತ್ತುತ್ತಲಿವೆ ತಾಯೆ
ಪ್ರಾಣಿ ಪಕ್ಷಿಗಳ ಸಂಕುಲ ಹಳಿವಿನಂಚಲಿ ತಾಯೆ
ಅನ್ನ ಬೆಳೆಯುವವರಿಗೆ ಬರ ನಿನ್ನ ನೆಲದಲಿ ತಾಯೆ
ನಲುಗಿಹುದಿಂದು ನಿನ ನಾಡು ನಗರೀಕರಣದಲಿ ತಾಯೆ
ನ್ಯಾಯ ನೀತಿ ಧರ್ಮಗಳಿಗೆ ಬೆಲೆ ಇಲ್ಲದಾಗಿದೆ ತಾಯೆ
ಮೋಸ ವಂಚನೆ ಕಪಟಗಳೆ ತುಂಬಿಹವು ನಾಡಲಿ ತಾಯೆ
ನಿನ ಮಕ್ಕಳಾಟವನು ಹೇಗೆ ಸಹಿಸುತಿಹೆ ತಾಯೆ
ಮಮತೆಯ ಪಾಶದಲಿ ಸಿಕ್ಕು ಸುಮ್ಮನಿರುವೆಯೆ ತಾಯೆ
ಮರೆತು ಬಿಡು ಮಮತೆಯನು, ಅಳಿಸಿಬಿಡು ಅಧರ್ಮವನು
ಕೊಚ್ಚಿ ಬಿಡು ಕಲ್ಮಶವನು, ನಾಶಪಡಿಸು ಅನ್ಯಾಯವನು
ಸದ್ಬುದ್ದಿ ಸಧರ್ಮವನು ನಿನ ಮಕ್ಕಳ ಮನದಲಿ ತುಂಬು
ದುರ್ನಡತೆ ದುರ್ಬುದ್ದಿಯನು ಅವರ ಮನದಲಿ ಅಳಿಸು
ಶಾಂತಿ ನೆಮ್ಮದಿಯನು ನಮ್ಮೆಲ್ಲರಿಗೆ ನೀ ಕರುಣಿಸು
ನಿನ ಕರುಣೆ ಮಮತೆಯಲಿ ಸಲುಹಿ ನಮ್ಮೆಲ್ಲರ ಮುನ್ನಡೆಸು
ಶಿರವನಿಡುವೆನು ನಿನ್ನ ಪಾದಾರವಿಂದದಲಿ ತಾಯೆ
ಮುನ್ನಡೆಸು ಕರುನಾಡ ನಿನ ವರದಲಿ ತಾಯೆ
Comments
ಉ: ಕನ್ನಡ ತಾಯೆ
In reply to ಉ: ಕನ್ನಡ ತಾಯೆ by makara
ಉ: ಕನ್ನಡ ತಾಯೆ
ಉ: ಕನ್ನಡ ತಾಯೆ
In reply to ಉ: ಕನ್ನಡ ತಾಯೆ by SRINIVAS.V
ಉ: ಕನ್ನಡ ತಾಯೆ
ಉ: ಕನ್ನಡ ತಾಯೆ