ಇ-ಲೋಕ-13(8/3/2007) ---ಪರಿಸರ ಸ್ನೇಹಿ ಗಗನಚುಂಬಿ ಕಟ್ಟಡ----
ಪರಿಸರಸ್ನೇಹಿ ಗಗನಚುಂಬಿ ಕಟ್ಟಡ
ನ್ಯೂಯಾರ್ಕ್ ನಗರದ ಎಂಪೈರ್ ಬಿಲ್ಡಿಂಗ್ ಅತಿ ಎತ್ತರದ ಕಟ್ಟಡವಾಗಿ ತಲೆಯೆತ್ತಿ ನಿಂತಿದೆ. ಇದರ ಬಳಿಯೇ ಈಗ ನೂತನ ಗಗನಚುಂಬಿ ಕಟ್ಟಡ ತಲೆಯೆತ್ತುತ್ತಿದೆ.ಇದು ಪೂರ್ಣಗೊಂಡಾಗ ಎಂಪೈರ್ ಕಟ್ಟಡಕ್ಕಿಂತ ಕೆಲವೇ ಅಡಿ ಎತ್ತರ ಕಡಿಮೆಯಿರುತ್ತದೆ. ಇದರ ನಿರ್ಮಾಣದ ಸಮಯದಿಂದಲೂ ಕಟ್ಟಡವನ್ನು ಪರಿಸರಸ್ನೇಹಿಯಾಗಿಸುವ ಪ್ರಯತ್ನ ಸಾಗಿದೆ.ಸಿಮೆಂಟ್ಗೆ ಅಧಿಕ ಹಾರು ಬೂದಿ ಬಳಸಿ,ಸಿಮೆಂಟ್ ಬಳಕೆ ಮಿತಗೊಳಿಸಲಾಗಿದೆ. ವೆಲ್ಡಿಂಗ್,ಸೋಲ್ಡರಿಂಗ್ ಮುಂತಾದ ಪ್ರಕ್ರಿಯೆಗಳನ್ನು ನಡೆಸುವಾಗ ಮಾಲಿನ್ಯ ಮಿತಗೊಳಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ.ಕಟ್ಟಡವಾಸಿಗಳ ವಿದ್ಯುತ್ ಅಗತ್ಯವನ್ನು ಪೂರೈಸಲು ಇಂಧನಕೋಶಗಳನ್ನು ಬಳಸಲಾಗಿದೆ.ನೆಲದ ಮಟ್ಟದಿಂದಲೇ ಕಿಟಕಿಯನ್ನಿಟ್ಟು ಬೆಳಕು ಸಾಕಷ್ಟು ಪ್ರವೇಶಿಸಲು ಅನುಕೂಲವಿದೆ. ಗಾಜಿನ ಗೋಡೆಗಳ ಮೂಲಕ ಜನರಿಗೆ ಹೊರಗಿನ ಪರಿಸರದ ನೋಟವನ್ನು ಅನಿರ್ಬಂಧಿತವಾಗಿಸಲಾಗಿದೆ.ಪ್ರತಿ ಅಂತಸ್ತಿನ ಎತ್ತರವನ್ನು ಒಂಭತ್ತಡಿಯಿರಿಸಿ, ಒಳಗಿರುವವರಿಗೆ ವಿಶಾಲ ಸ್ಥಳಾವಕಾಶವನ್ನು ಲಭ್ಯವಾಗಿಸಲಾಗಿದೆ.ಕಟ್ಟಡಕ್ಕೆ ಪೂರೈಸುವ ಗಾಳಿಯನ್ನು ನೆಲದ ಮೂಲಕ ಬರುವ ಕೊಳವೆಗಳ ಮೂಲಕ ಪೂರೈಸಿ,ಸೆಕೆಗಾಲದಲ್ಲೂ ಕಟ್ಟಡವು ಸ್ವಾಭಾವಿಕವಾಗಿಯೇ ತಂಪಾಗಿರುವಂತೆ ಮಾಡಲಾಗಿದೆ. ಹವಾನಿಯಂತ್ರಕ ಬಳಕೆಯಾದರೂ,ಅದು ಬಳಸುವ ವಿದ್ಯುತ್ ಕಡಿಮೆಯೇ ಇರಲು ನೆಲದ ಮೂಲಕ ಬರುವ ಗಾಳಿಯ ಕೊಳವೆಗಳು ಸಹಕಾರಿ. ಅಂತಸ್ತಿನ ಮೂಲಕ ಬರುವ ಕೊಳವೆಗಳಲ್ಲಿನ ಗಾಳಿ ಅಧಿಕ ಬಿಸಿಯಿರುವುದು ಸಹಜ ತಾನೇ?
ಗಾಳಿಯನ್ನು ಸೋಸಿ,ಸಂಪೂರ್ಣ ಶುದ್ಧವಾಗಿಸಿ ಪೂರೈಸಿ,ಜನರ ಸ್ವಾಸ್ಥ್ಯ ಚೆನ್ನಾಗಿರಲು ಕ್ರಮಕೈಗೊಳ್ಳಲಾಗಿದೆ.ಇದಕ್ಕಿಂತಲೂ ಹೆಚ್ಚಾಗಿ ಮೇಲಂತಸ್ತಿನಲ್ಲಿ ಮಳೆ ನೀರು ಹಿಡಿದಿಡುವ ವ್ಯವಸ್ಥೆಯೂ ಇದೆ.ವಾಶಿಂಗ್ ಬೇಸಿನ್ ಮುಂತಾದೆಡೆ ಬಳಕೆಯಾದ ನೀರು ಟಾಯಿಲೆಟ್ ಫ್ಲಶ್ ಮಾಡಲು ಬಳಸುವ ವಿಶೇಷ ನೀರಿನ ಕೊಳವೆಯ ವ್ಯವಸ್ಥೆಯಿದೆ. ಈ ನೀರು ಕಟ್ಟಡದ ಶಾಖ ತಗ್ಗಿಸಲೂ ಬಳಕೆಯಾಗುತ್ತದೆ.
ಮಾಹಿತಿ ಸಾಗಾಟ: ಗೂಗಲ್ ಹೊಸ ಸೇವೆ
ಸಂಶೋಧಕರು ಅನೇಕ ಬಾರಿ ಮಾಹಿತಿಯ ಮಹಾಪೂರದೊಂದಿಗೆ ಗುದ್ದಾಡುತ್ತಿರುತ್ತಾರೆ. ಅಂತಹ ಮಾಹಿತಿಯ ಪರಸ್ಪರ ವಿನಿಮಯವನ್ನೂ ಮಾಡುತ್ತಿರಬೇಕಾಗುತ್ತದೆ. ಇದಕ್ಕಾಗಿ ಕಂಪ್ಯೂಟರ್ ಜಾಲವಾದ ಅಂತರ್ಜಾಲ ಉಪಯೋಗಿಸುವುದು ಕಾರ್ಯಸಾಧ್ಯವಲ್ಲ. ಅದಾಗಲೇ ಮಾಹಿತಿಯ ಮಹಾಪೂರಕ್ಕೀಡಾಗಿರುವ ಜಾಲವನ್ನು ಇಂತಹ ಬೃಹದ್ಗಾತ್ರಗಳ ಕಡತಗಳನ್ನು ಕಳುಹಿಸಲು ಉಪಯೋಗಿಸಿದರೆ, ಇತರರಿಗೆ ಸಿಗುವ ಬ್ಯಾಂಡ್ವಿಡ್ತ್ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನಿಸದಿರದು. ಜತೆಗೆ ವಿನಿಮಯ ಆಮೆಗತಿಯಲ್ಲಷ್ಟೇ ಸಾಧ್ಯವಾಗಬಹುದು.ವಿನೂತನ ಸೇವೆಗಳನ್ನು ನೀಡಿ ಜನಪ್ರಿಯವಾಗುತ್ತಿರುವ ಗೂಗಲ್ ಈಗ ಈ ನಿಟ್ಟಿನಲ್ಲೂ ತನ್ನ ದೃಷ್ಟಿ ಹರಿಸಿದೆ.120ಟೆರಾಬೈಟ್ ದತ್ತಾಂಶ ಹಿಡಿಸುವ ಹಾರ್ಡ್ಡ್ರೈವ್ಗಳನ್ನು ಬೃಹದ್ಗಾತ್ರದ ಮಾಹಿತಿ ವಿನಿಮಯ ಮಾಡಬೇಕಿರುವವರಿಗೆ ನೀಡಿ,ಅದನ್ನು ತನ್ನ ಸರ್ವರ್ಗಳಲ್ಲಿ ದಾಸ್ತಾನು ಮಾಡಿಟ್ಟುಕೊಂಡು,ಬಳಿಕ ಅದನ್ನು ತಲುಪಬೇಕಾದಲ್ಲಿಗೆ ತಲುಪಿಸುವ ಜವಾಬ್ದಾರಿಯನ್ನು ಗೂಗಲ್ ವಹಿಸುತ್ತಿದೆ.ಈ ಸೇವೆಯೀಗ ಖಾಸಗಿ ಮಟ್ಟದಲ್ಲೇ ಇದೆ. ಯಾರಿಂದಲಾದರೂ ವಿನಂತಿ ಬಂದಾಗ ಮಾತ್ರಾ ಅದು ಸೇವೆ ನೀಡುತ್ತದೆ. ಜತೆಗೆ ಬೃಹತ್ ಮಾಹಿತಿಯ ವಿನಿಮಯ ಮಾಡಿಕೊಳ್ಳುವವರ ಜತೆ ಕಂಪೆನಿ ಸಂಬಂಧ ಹೊಂದಿದೆ.
ನಾಯಿ-ಬೆಕ್ಕುಗಳ ಚಿತ್ರ ಬಳಸಿ ಖೋಟಾ ಖಾತೆಗಳಿಗೆ ತಡೆ!
ಅಂತರ್ಜಾಲದಲ್ಲಿ ಇ-ಮೇಲ್ ಖಾತೆಗಳನ್ನು ದುರುಪಯೋಗ ಪಡಿಸಿಕೊಳ್ಳುವವರ ಸಂಖ್ಯೆ ಕಡಿಮೆಯೇನಲ್ಲ.ಖೋಟಾ ಖಾತೆಗಳನ್ನು ಕಂಪ್ಯೂಟರ್ ತಂತ್ರಾಂಶಗಳೇ ನೋಂದಾಯಿಸುವಂತೆ ಮಾಡಿ,ಅಂತಹ ಖಾತೆಗಳ ಮೂಲಕ ಬಯಸದವರಿಗೂ ಇ-ಮೇಲ್ ಮೂಲಕ ಅನಗತ್ಯ ಮಾಹಿತಿ ಒದಗಿಸಿ, ತಮ್ಮ ವ್ಯವಹಾರ ಹೆಚ್ಚಿಸುವ ಹುನ್ನಾರ ಮಾಡುವವರಿದ್ದಾರೆ. ಯಾವುದೋ ಬ್ಯಾಂಕಿನ ಖಾತೆಯ ಹಣಕ್ಕೆ ವಾರಸುದಾರರಿಲ್ಲ, ಅದರ ವಾರಸುದಾರರೆಂದು ಬೇಡಿಕೆ ಸಲ್ಲಿಸಿ ನೀವು ಮಿಲಿಯಗಟ್ಟಲೆ ಡಾಲರು ಪಡೆಯಬಹುದು. ಸಿಕ್ಕಿದ ಹಣದ ಪಾಲು ನನಗೆ ಕೊಡಿ ಎಂದು ಗೋಗರೆಯುವ ಇ-ಮೇಲ್ಗಳು ಇಂತಹ ಖಾತೆಗಳಿಂದ ಕಳುಹಿಸಿದವಾಗಿರಬಹುದು.
ಈಗ ಅಂತರ್ಜಾಲದಲ್ಲಿ ಇ-ಮೇಲ್ ಸೇವೆ ನೀಡುವ ಕಂಪೆನಿಗಳು ಖಾತೆ ತೆರೆಯುವಾಗ, ತೆರೆಯಲ್ಲಿ ಪ್ರದರ್ಶಿತವಾಗುವ ಅಕ್ಷರಗಳನ್ನು ಟೈಪಿಸಲು ಹೇಳಿ ಖಾತೆ ತೆರೆಯುತ್ತಿರುವುದು ವ್ಯಕ್ತಿಯೆಂದು ಖಚಿತ ಪಡಿಸಿಕೊಳ್ಳುತ್ತವೆ. ತಂತ್ರಾಂಶಗಳಿಗೆ ಈ ಕೆಲಸ ಕಷ್ಟ ನೋಡಿ! ಈಗ ಇನ್ನೊಂದು ಸುಧಾರಿತ ವ್ಯವಸ್ಥೆಯಲ್ಲಿ ನಾಯಿ,ಬೆಕ್ಕುಗಳ ಚಿತ್ರಗಳನ್ನು ತೆರೆಯಲ್ಲಿ ತೋರಿಸಿ,ನಾಯಿಯ ಚಿತ್ರ ಯಾವುದು ಬೆಕ್ಕಿನದು ಯಾವುದು ಎಂದು ಗುರುತಿಸಿ, ವ್ಯಕ್ತಿಯ ಸಾಚಾತನವನ್ನು ಖಚಿತ ಪಡಿಸಿಕೊಳ್ಳುವ ಪ್ರಯೋಗ ನಡೆದಿದೆ. ವಾರಸುದಾರರಿಲ್ಲದ ನಾಯಿ-ಬೆಕ್ಕುಗಳ ಚಿತ್ರ ಈ ರೀತಿ ಪ್ರಯೋಜನಕ್ಕೆ ಬರುತ್ತದೆ.ನಮ್ಮ ಬೆಂಗಳೂರಿನ ಅಲೆಮಾರಿ ನಾಯಿಗಳ ಚಿತ್ರವನ್ನೂ ಈ ರೀತಿ ಬಳಸಬಹುದೇನೋ!
*ಅಶೋಕ್ಕುಮಾರ್ ಎ