ಸರಸ್ವತಿ ಪೂಜೆ

ಸರಸ್ವತಿ ಪೂಜೆ

 
ಸರಸ್ವತಿ ಪೂಜೆ


          ನವರಾತ್ರಿ ಹಬ್ಬದ ಪ್ರಯಕ್ತ ಗೆಳೆಯನ ಮನೆಯಲ್ಲಿ ಸರಸ್ವತಿ ಪೂಜೆ ಆಯೋಜಿಸಿದ್ದರು, ಸರಸ್ವತಿ ಪೂಜೆಯ ಬಗ್ಗೆ ಮಾತಾಡಲು ನನ್ನನು ಆ ದಿನ ಬೆಳಿಗ್ಗೆ ಒಪ್ಪಿಸಿದ. ಒದಗಿದ ೨-೩ ಗಂಟೆಗಳಲ್ಲಿ ಅಂತರ್ಜಾಲದಲ್ಲಿ ಹುಡುಕಿ ಸಾಧ್ಯವಾದಷ್ಟು ಮಾಹಿತಿಯನ್ನು ಸಂಗ್ರಹಿಸಿ, ಶ್ರೀ ಬನ್ನಂಜೆಗೋವಿಂದಾಚಾರ್ಯರ ಪ್ರವಚನದಿಂದ ಆಯ್ದ ವಿಚಾರಗಳನ್ನು ನೆನೆಪಿಸಿಕೊಂಡು ಮಾತನಾಡಿದೆ, ಅದನ್ನೆ ಇಲ್ಲಿ ಬರೆಯುತಿದ್ದೇನೆ. ಮೊದಲಿಗೆ ಸರಸ್ವತಿಯ ವಿಗ್ರಹ/ಛಾಯಚಿತ್ರದ(ಫೋಟೊ) ಕುರಿತು. ಭಾರತೀಯರಲ್ಲಿ ತುಂಬಾ ವರ್ಷಗಳಿಂದ ಒಂದು ಟೀಕೆ ಇದೆ. ನಾವು ವಿಗ್ರಹ ಪೂಜೆ ಮಾಡುತೇವೆ, ಕಲ್ಲನೆ ಅಥವ ಫೋಟೊವನ್ನೆ ದೇವರೆಂದು ತಿಳಿಯುತ್ತೇವೆ ಎಂದು. ನಾವು ಕಲ್ಲಿನಲ್ಲಿ ಭಗವಂತನನ್ನು ಕಾಣುತೇವೆ ವಿನಃ ಕಲ್ಲನ್ನೆ ದೇವರು ಎಂದು ತಿಳಿಯುವದಿಲ್ಲ. ಚಂಚಲವಾದ ಮನ್ನಸ್ಸು, ಬುದ್ದಿಗಳನ್ನು ಒಂದೆಕಡೆ  ಕೆಂದ್ರಿಕರಿಸಿ ಆಧ್ಯಾತ್ಮಿಕ ಸಾಧನೆ ಮಾಡಲು ಪ್ರತಿಮೆ ತುಂಬಾ ಸಹಾಯ ಮಾಡುತ್ತದೆ. ಸರ್ವಗತನಾದ ಭಗವಂತ ಭಕ್ತನಿಗೋಸ್ಕರ ಪ್ರತಿಮೆಯಲ್ಲಿ ನೆಲೆಸಲು ಸಾಧ್ಯವಿಲ್ಲವೆ?. ಹಾಗೆಯೆ ಭಗವಂತನ ಗುಣಗಾನಗಳನ್ನು ಪ್ರತಿಮೆಗಳಲ್ಲಿ ಸಂಕೆತಗಳ ರೂಪದಲ್ಲಿ ಕಾಣುತೇವೆ.

ಈಗ ಸರಸ್ವತಿ ಪ್ರತಿಮೆಯ ಸಂಕೇತಗಳ ಬಗ್ಗೆ ನೋಡೋಣ. ಸರಸ್ವತಿ ಛಾಯಚಿತ್ರದಲ್ಲಿ ದೇವಿ ಬಿಳಿ ಶುಭ್ರವಾದ ವಸ್ತ್ರ ತೊಟ್ಟಿರುತ್ತಾಳೆ, ಕಮಲ, ಹಂಸಪಕ್ಷಿಯ ಬಣ್ಣ ಕೂಡ ಬಿಳಿ. ಬಿಳಿ ಸ್ವಚತೆ, ನಿಷ್ಕಳಂಕತೆಯ ಸಂಕೇತ. ನಮ್ಮ ಚರ್ಮಕ್ಕೆ ಇರುವ ಹಾಗೆ ಮನಸ್ಸಿಗೆ ಕೂಡ ಬಣ್ಣ ಇರುತ್ತದೆ. ಸಾತ್ವಿಕ ಮನಸ್ಸಿನ ಬಣ್ಣ ಬಿಳಿ. ಸಾತ್ವಿಕ, ನಿಷ್ಕಳಂಕ ಮನಸ್ಸು, ಬುದ್ದಿಗಳಿಂದ ತಾನೆ ಆದ್ಯಾತ್ಮಿಕ ಜ್ಞಾನ, ಭಗವಂತನ ಅನುಗ್ರಹ ಸಾಧ್ಯ?. ಕಮಲ ಜ್ಞಾನದ ಸಂಕೇತ, ಕುಂಡಲಿನಿ ಯೋಗದಲ್ಲಿ ಕಮಲ ಅತ್ಯುನ್ನತವಾದ ಸಹಸ್ರಾರ ಚಕ್ರವನ್ನು ಸೂಚಿಸತ್ತದೆ. ಸರಸ್ವತಿ ಕಮಲದ ಮೆಲೆ ಕುಳಿತು ಜ್ಞಾನದ ಪ್ರತೀಕವಾಗಿದ್ದಾಳೆ. ನಾಲ್ಕು ಕೈಗಳು ಮತ್ತು ಆ ಕೈಯಲ್ಲಿ ಹಿಡಿದಿರುವ ಸಂಕೇತಗಳ ಬಗ್ಗೆ, ಹಿಂದಿನ ಕೈಗಳು ಆಧ್ಯಾತ್ಮಿಕ ಪ್ರಪಂಚ, ಮುಂದಿನ ಕೈಗಳು ಭೌತಿಕ ಪ್ರಪಂಚಗಳನ್ನು ಸೂಚಿಸುತ್ತವೆ. ಹಾಗೆಯೆ ನಾಲ್ಕು ಅಂತಃಕರಣಗಳಾದ ಮನ್ನಸ್ಸು, ಬುದ್ದಿ, ಚಿತ್ತ(ಕಾನ್ಶಿಯಸನೆಸ್) ಮತ್ತು ಅಂಹಕಾರ(ಈಗೊ) ಸೂಚಿಸುತ್ತವೆ. ದೇವಿಯ ಎಡ ಕೈಗಳು ಮನ್ನಸ್ಸು ಸೂಚಿಸಿದರೆ, ಬಲ ಕೈಗಳು ಬುದ್ದಿ ಸೂಚಿಸುತ್ತವೆ. ಮುಂದಿನ ಎರಡು ಕೈಯಲ್ಲಿ ವೀಣೆ ನುಡಿಸುತ್ತಿರುವದರ ಸಂಕೇತ ನಾವು ಭೌತಿಕ ಪ್ರಪಂಚದಲ್ಲಿ ಬುದ್ದಿ ಮತ್ತು ಮನಸ್ಸು ಎರಡನ್ನು ಸಮತೋಲನವಾಗಿ ಉಪಯೋಗಿಸಬೇಕೆಂಬುದು. ಹೇಗೆ ಎರಡು ಕೈಗಳ ಸರಿಯಾದ ಹೊಂದಾಣಿಕೆ ಇಲ್ಲದೆ ಸುಮಧುರವಾದ ನಾದ ಹೊರಡುದಿಲ್ಲವೋ ಹಾಗೆಯೆ ಮನ್ನಸ್ಸು, ಬುದ್ದಿಗಳ ಸಾಮರಸ್ಯವಿಲ್ಲದೆ, ಬಾಳಿನ ಸಾರ್ಥ್ಕಕ್ಯ ಸಾಧ್ಯವಿಲ್ಲ. ಹಿಂದಿನ ಬಲ ಕೈ ಚಿತ್ತ ಹಾಗು ಎಡ ಕೈ ಅಹಂಕಾರ ಸೂಚಿಸಿತ್ತದೆ. ಇಲ್ಲಿ ಅಹಂಕಾರ ಅಂದರೆ ನಾವು ಹುಟ್ಟಿಂದಿನಿಂದ ನಮ್ಮ ಮನೆ, ಸುತ್ತಮುತ್ತಲಿನ ಜಗತ್ತನ್ನು ನೋಡಿ ಇದು ನನ್ನದು, ಇದು ನನ್ನದಲ್ಲ, ಅದು ನಾನು, ಅದು ನಾನ್ನಲ್ಲ, ಅದು ನನಗೆ ಇಷ್ಟ, ಅದು ನನಗೆ ಇಷ್ಟವಿಲ್ಲ ಎನ್ನುವ ಪಟ್ಟಿ. ಯಾವಗ ಈ ಅಹಂಕಾರ ಪೂರ್ಣವಾಗಿ ಇಲ್ಲವಾಗುತ್ತೋ ಅವಾಗ ಆತ್ಮದ ನಿಜ ಸ್ವರೂಪ ತಿಳಿಯುತ್ತದೆ. ಈ ಅಹಂಕಾರವನ್ನು ಪೂರ್ಣವಾಗಿ ನಿಗ್ರಹಿಸಲು ಶಾಸ್ತ್ರ ಜ್ಞಾನ ತುಂಬಾ ಮುಖ್ಯ ಅದನ್ನು ಸೂಚಿಸುವದಕ್ಕೆ ದೇವಿ ಹಿಂದಿನ ಎಡ ಕೈಯಲ್ಲಿ ಪುಸ್ತಕ ಅಂದರೆ ವೇದಗಳನ್ನು ಹಿಡಿದಿರುತ್ತಾಳೆ. ಇನ್ನು ಹಿಂದಿನ ಬಲಕೈಯಲ್ಲಿ ಜಪಮಾಲೆ ಇರುತ್ತದೆ, ಇದರ ಅರ್ಥ ಧ್ಯಾನದಿಂದ ಸಮಚಿತ್ತದಲ್ಲಿರಬೇಕೆಂಬುದು. ಮುಂದಿನ ಸಂಕೇತವಾದ ಹರಿಯುವ ನೀರು ಸ್ವಚತೆ, ಜ್ಞಾನದ ಸೂಚನೆ. ಕಮಲ ಕೆಸರಿನಲ್ಲಿ ಬೆಳೆದರೂ ತುಂಬಾ ಸುಂದರವಾಗಿರುತ್ತದೆ ಹಾಗೆಯೆ ನಾವು ಕೂಡ ಈ ಆಸೆ, ಆಕಾಂಕ್ಷೆ, ಸ್ವಾರ್ಥತೆ ತುಂಬಿರುವ ಜಗತ್ತಿನಿಂದ ಬೆಳೆದು, ಮೇಲೇರಿ ಪರತತ್ವವನ್ನು ಸೇರಬೇಕೆಂಬುದು. ಹೇಗೆ ಕಮಲದ ಎಲೆ ಎಷ್ಟೆ ನೀರು ಹಾಕಿದರೂ ಒದ್ದೆ ಆಗುವದಿಲ್ಲವೋ ನಾವು ಈ ಬಾಳಿನಲ್ಲಿ ಎಲ್ಲಾ ಅನುಭವಗಳನ್ನು ಪಡೆದರೂ ಯಾವದನ್ನೂ ಅಂಟಿಸಿಕೊಳ್ಳಬಾರದು ಎಂದು. ಹಂಸಪಕ್ಷಿಯ ಪುಕ್ಕ ಕೂಡ ನೀರಿನಲ್ಲಿ ಒದ್ದೆ ಆಗುವದಿಲ್ಲ, ಅದೂ ನಿರ್ಲಿಪ್ತತೆ(ಡಿಟ್ಯಾಚಮೆಂಟ್)ನ್ನು ಸೂಚಿಸುತ್ತದೆ.

ಸರಸ್ವತಿ ಬಳಿ ಎರಡು ವಾಹನಗಳಿವೆ ಹಂಸಪಕ್ಷಿ, ನವಿಲು. ನವಿಲು ಸೌಂದರ್ಯ, ಗರ್ವ ಮತ್ತು ಚಂಚಲತೆಯ ಸಂಕೇತ, ಅದರ ಮನಸ್ಸು ಋತುಗಳನ್ನು ಅವಲಂಬಿಸಿರುತ್ತದೆ, ಮಳೆ ಬರುವ ಮುನ್ನ ಮಾತ್ರ ಅದು ರೆಕ್ಕೆ ಬಿಚ್ಚಿ ಕುಣಿಯುತ್ತದೆ, ಬೇರೆ ಸಮಯದಲ್ಲಿ ಗಂಭೀರವಾಗಿರುತ್ತದೆ. ನವಿಲು ಯಾವಗಲೂ ಸರಸ್ವತಿ ವಾಹನವಾಗಲು ಸಿದ್ದವಾಗಿರುತ್ತದೆ, ಆದರೆ ಸರಸ್ವತಿ ಅದನ್ನು ಬಳಸುವದಿಲ್ಲ. ಹಂಸಪಕ್ಷಿಗೆ ಭಾರತೀಯ ಆಧ್ಯಾತ್ಮಿಕ ಸಾಧನೆಯಲ್ಲಿ ತುಂಬಾ ಮುಖ್ಯವಾದ ಸ್ಥಾನ ಇದೆ. ಆತ್ಮಸಾಕ್ಷಾತ್ಕಾರವಾದವರನ್ನು ಪರಮಹಂಸ ಎಂದು ಕರೆಯುತ್ತಾರೆ, ಉದಾಹರಣೆಗೆ ಶ್ರೀ ರಾಮಕೃಷ್ಣ ಪರಮಹಂಸ, ಶ್ರೀ ಪರಮಹಂಸ ಯೋಗನಂದ. ಹಂಸಪಕ್ಷಿಯ ಇನ್ನೊಂದು ವಿಶೇಷ ಅದು ತನ್ನ ಕೊಕ್ಕಿನ ಚಾಣಾಕ್ಷತೆಯಿಂದ ಹಾಲಿನ ಮತ್ತು ನೀರಿನ ಮಿಶ್ರಣದಲ್ಲಿ, ಹಾಲನ್ನು ಮಾತ್ರ ಕುಡಿದು ನೀರನ್ನು ಹಾಗೆಯೆ ಬಿಡುತ್ತದೆ. ಅದರ ಕೊಕ್ಕಿನಲ್ಲಿರುವ ಆಮ್ಲ(ಯ್ಯಾಸಿಡ್)ದ ಸಹಾಯದಿಂದ ಹಾಗೆ ಮಾಡುತ್ತದೆ. ನಾವು ಕೂಡ ಈ ಪ್ರಪಂಚದಲ್ಲಿ ಒಳ್ಳೆಯದನ್ನು ಕೆಟ್ಟದರಿಂದ ಬೇರ್ಪಡಿಸಿ, ಒಳ್ಳೇಯದನ್ನು ಮಾತ್ರ ಅಳವಡಿಸಿಕೊಳ್ಳಬೇಕು. ದೇವರ ಕಡೆಗೆ ಒಯ್ಯುವದೆ ಒಳ್ಳೆಯದು ದೇವರಿಂದ ದೂರ ತಳ್ಳುವದೆ ಕೆಟ್ಟದು. ಸರಸ್ವತಿ ಹಂಸಪಕ್ಷಿಯನ್ನು ವಾಹನವಾಗಿ ಬಳಸುತ್ತಾಳೆ.

ಸಂಸ್ಕ್ರತದಲ್ಲಿ ಹಂಸ ಅಂದರೆ ನಾನು ಯಾರು ಎಂದು, ಹಂಸ ಶಬ್ದವನ್ನು ವೇಗವಾಗಿ ಪಟಿಸಿದರೆ ಅದು ಸೋಹಂ ಆಗುತ್ತದೆ. ಸೋಹಂ ಅಂದರೆ ನಾನು ಅದು ಎಂದು ಅರ್ಥ. ಅದು ಅಂದರೆ ಎಲ್ಲದಕ್ಕಿಂತ ಭಿನ್ನವಾದ ಪರತತ್ವ ಎಂದು. ಸೋಹಂ ಶಬ್ದವನ್ನು ಮಂತ್ರವಾಗಿ ಬಳಸುತ್ತಾರೆ. ಹಂ ಎನ್ನುವಾಗ ನಿಚ್ವಾಸ (ಎಕ್ಸೇಲ್) ಮಾಡುತ್ತೇವೆ, ಬೇಕಾದರೆ ಪ್ರಯತ್ನಿಸಿ ಉಚ್ವಾಸ(ಇನ್ಹೇಲ್) ಮಾಡುತ್ತಾ ಹಂ ಹೇಳುವದು ಸಾಧ್ಯವಿಲ್ಲ. ಸೋ ಪಟಿಸುವಾಗ ಉಚ್ವಾಸ ವಾಗುತ್ತದೆ. ಸೋಹಂ ಒಟ್ಟಿಗೆ ಪಟಿಸುವಾಗ ಉಸಿರಿನ ಮೇಲೆ ಗಮನ ಕೇಂಧ್ರಿಕೃತವಾಗಿ ಧ್ಯಾನ ಮಾಡಲು ತುಂಬಾ ಅನುಕೂಲವಾಗುತ್ತದೆ.

ಸಂಸ್ಕೃತದಲ್ಲಿ ಸರಸ್ವತಿ ಶಬ್ದದ ಅರ್ಥ ಎರಡು ರೀತಿಯಲ್ಲಿ ಹೇಳುತ್ತಾರೆ. ಸರಸ್+ವತಿ, ಸರಸ್ ಎಂದರೆ ಹರಿಯುವದು, ವತಿ ಎಂದರೆ ಹೆಣ್ಣು ಎಂದು. ನಮ್ಮ ೠಷಿ ಮುನಿಗಳು ಸರಸ್ವತಿ ದೇವಿಯನ್ನು ಸರಸ್ವತಿ ನದಿಯಲ್ಲಿ ಸಂಕೇತಿಸಿದ್ದಾರೆ. ಸರಸ್ವತಿ ನದಿಯ ಬಗ್ಗೆ ಋಗ್ವೇದದಲ್ಲಿ ತುಂಬಾಸಾರಿ ಉಲೇಖವಿದೆ. ಋಷಿಮುನಿಗಳು ಸರಸ್ವತಿ ನದಿಯ ದಡದಲ್ಲಿ ತಪ್ಪಸ್ಸು ಮಾಡುವಾಗ ಭಗವಂತನ ಕೃಪೆಯಿಂದ ವೇದ, ಉಪನೀಷತ್ತುಗಳು ಹೊಳೆದಿರುತ್ತವೆ. ಸರಸ್ವತಿನದಿಯ ಬಗ್ಗೆ ಇತ್ತಿಚೆಗೆ ತುಂಬಾ ಸಂಶೋದನೆ ನಡೆದಿವೆ ಹಾಗು ನದಿಯ ದಡದಲ್ಲಿ ನಮ್ಮ ಪುರಾತನ ನಾಗರೀಕತೆಯ ಅನೇಕ ಪಳೆಯುಳಿಕೆ(ಫ಼ಾಸಿಲ್)ಗಳು ದೊರೆತಿವೆ. ಈಗ ಸರಸ್ವತಿ ನದಿ ಪೂರ್ಣವಾಗಿ ಉಳಿದಿಲ್ಲ, ಭೂಗರ್ಭದ ಬದಲಾವಣೆಯಿಂದ ಸರಸ್ವತಿ ನದಿ ಸಿಂದೂ ನದಿ ಹಾಗು ಗಂಗಾ, ಯಮುನಾಗಳಲ್ಲಿ ಹಂಚಿ ಹೋಗಿದೆ. ಈ ಬಗ್ಗೆ ಅಂತರ್ಜಾಲದಲ್ಲಿ ತುಂಬಾ ಮಾಹಿತಿ ಸಿಗುತ್ತದೆ. ಸರಸ್ವತಿ ಶಬ್ದದ ಇನ್ನೊಂದು ಅರ್ಥ, ಸರ ಅಂದರೆ ಸಾರ, ಸ್ವ ಅಂದರೆ ಆತ್ಮ(ಸೆಲ್ಫ಼್). ಆತ್ಮಜ್ಞಾನ ಎಂದು. ಆತ್ಮ ಬಿಟ್ಟರೆ ಸ್ವಂತದ್ದು ಅನ್ನುವದು ಏನೂ ಇಲ್ಲ ಅಲ್ಲವೆ?

ಸರಸ್ವತಿಯ ಆರಾಧನೆಯ ಬಗ್ಗೆ ಎರಡು ಶ್ಲೋಕಗಳು ತುಂಬಾ ಪ್ರಚಲಿತವಾಗಿವೆ.

ಸರಸ್ವತಿಂ ನಮಸ್ತುಭ್ಯ್ಂ ವರದೆ ಕಾಮರೂಪಿಣಿ,

ವಿಧ್ಯಾರಂಭಂ ಕರಿಶ್ಯಾಮಿ ಸಿಧಿರ್ ಭವತು ಮೇ ಸದಾ.

ಅಂದರೆ,

ಸರಸ್ವತಿ ದೇವಿಯೇ ನಿನಗೆ ನಮಸ್ಕಾರಗಳು, ನಮ್ಮ ಕೋರಿಕೆಗಳನ್ನು ಪೊರೈಸುವ ದೇವಿ ನೀನು.

ನನ್ನ ವಿಧ್ಯಾಭಾಸವನ್ನು ಆರಂಭಿಸುವ ಮುನ್ನ ನಿನ್ನನ್ನು ಬೇಡುತ್ತಿರುವೆ ನನ್ನ ಎಲ್ಲಾ ಕಾರ್ಯಗಳನ್ನು ಸದಾ ಕಾಲದಲ್ಲಿ ಶುಭವಾಗಿ ಪೊರೈಸಲು ಅನುಗ್ರಹ ಮಾಡು ಎಂದು.
 

ಯಾಕುಂದೇಂದು ತುಷಾರಹಾರದವಳ, ಯಾ ಶುಭ್ರ ವಸ್ತ್ರಾಂಗಿತಾ,

ಯಾ ವೀಣಾ ವರದಂಡಮಂಡಿತಕರಾ, ಯಾ ಶ್ವೇತ ಪದ್ಮಾಸನ,

ಯಾ ಬ್ರಹ್ಮಾಚ್ಯುತ ಶಂಕರ ಪ್ರಭ್ರಿತಿಭಿರ್ ದೇವೈ ಸದಾ ಪೂಜಿತ

ಸಾಮಾಂಪಾತು ಸರಸ್ವತೀ ಭಗವತೆ ನಿಷೇಶ ಜಾಡ್ಯಾಪಹ.
 

ಬೆಳೆದಿಂಗಳ ಚಂದಿರನ ಹಾಗೆ ಕಾಂತಿಯುತಳಾದ ದೇವಿಯೆ, ನಿನ್ನ ಕೊರಳಿನ ಹಾರ ಮಂಜುಗಟ್ಟಿದ ಇಬ್ಬನಿ ಹಾಗೆ ಇದೆ. ಶುಭ್ರವಾದ ವಸ್ತ್ರ ತೊಟ್ಟಿರುವೆ, ವೀಣೆಯನ್ನು ಕೈಯಲ್ಲಿ ಹಿಡಿದು ಬಿಳಿ ಕಮಲದ ಮೇಲೆ ಕುಳಿತಿರುವ ನಿನ್ನನು ಬ್ರಹ್ಮ, ವಿಷ್ಣು, ಶಂಕರ ಹಾಗು ಸಕಲ ದೇವ ದೇವತೆಗಳು ಪೊಜಿಸುತ್ತಿದ್ದಾರೆ. ಅಂತಹ ಭಗವತ್ ಸ್ವರೂಪಿಣಿಯಾದ ಸರಸ್ವತಿ ದೇವಿಯೆ ನನ್ನಲ್ಲಿರುವ ತಾಮಸ ಗುಣ, ಜಾಡ್ಯವನ್ನು ತೆಗೆ.
 

ಸರಸ್ವತಿಯನ್ನು ವಾಗ್ದೇವಿ ಎಂದು ಕರೆಯುತ್ತಾರೆ, ವಾಕ್ ಎಂದರೆ ಮಾತು, ನುಡಿ. ಭಾರತೀಯ ಸಂಸ್ಕೃತಿಯಲ್ಲಿ ನುಡಿಗೆ ತುಂಬಾನೆ ಪ್ರಾಮುಖ್ಯತೆ ಇದೆ. ಜಗತ್ತಿನ ಪ್ರಾಚೀನ ಸಂಸ್ಕೃತಿಗಳಾದ ಈಜಿಪ್ಟ್, ಬ್ಯಾಬಿಲೋನಿಯಾ, ಗ್ರೀಸ್ ನವರು ತಮ್ಮ ಅಸ್ಥಿತ್ವವನ್ನು ಕಟ್ಟಡಗಳಲ್ಲಿ ಸ್ಥಾಪಿಸಲು ಪ್ರಯತ್ನಿಸದರು, ಈಗ ಪಿರಾಮಿಡ್ ಗಳು ಹಾಗು ತೂಗು ಉಯ್ಯಾಲೆ (ಹ್ಯಾಂಗಿಂಗ್ ಗಾರ್ಡನ್) ಆರಾಧಕರಿಲ್ಲದೆ ನಾಶವಾಗುತ್ತಿವೆ. ಆದರೆ, ನಮ್ಮ ಪ್ರಾಚೀನರು ಈ ಭೌತಿಕ ಪ್ರಪಂಚ ಎಷ್ಟಾದರೂ ನಶ್ವರ ಎಂದು ಚೆನ್ನಾಗಿ ತಿಳಿದಿದ್ದು, ಆಧ್ಯಾತ್ಮಿಕ ತತ್ವವನ್ನು ನುಡಿಯಲ್ಲಿ ಅಂದರೆ ವೇದ, ಉಪನಿಷತ್ತಿನಲ್ಲಿ ಸಾರಿ ಅದನ್ನು ಗುರು ಶಿಷ್ಯ ಪರಂಪರೆಯಲ್ಲಿ ಮುಂದುವರಿಸಿದರು. ವೇದವ್ಯಾಸರು ವೇದ, ಮಹಾಭಾರತ, ಅಷ್ಟದಶ ಪುರಾಣವನ್ನು ಬರೆಯಲಿಲ್ಲ, ಅವನ್ನು ತಮ್ಮ ಮಸ್ತಿಷ್ಕದಲ್ಲಿ ರಚಿಸಿ ಶಿಷ್ಯರಿಗೆ ಭೋದಿಸಿದರು, ಅವರು ತಮ್ಮ ಶಿಷ್ಯರಿಗೆ ಅದನ್ನು ಮುಂದುವರಿಸಿದರು. ಈವಾಗ ಗುರುಶಿಷ್ಯ ಪರಂಪರೆ ಹೆಚ್ಚಾಗಿ ಕಾಣುವದಿಲ್ಲವಾದರೂ ವೇದ, ಉಪನಿಷ್ಯತ್ತಿನ ಆತ್ಮಜ್ಞಾನ ಮನ್ಯುಷ ಇರುವವರೆಗೂ ಶಾಶ್ವತವಲ್ಲವೆ? ಇಂತಹ ವಾಕ್ ಪ್ರತಿಪಾದ್ಯ ದೇವತೆ ಸರಸ್ವತಿ ದೇವಿ.

ಸರಸ್ವತಿ, ಶಾರದಾ ದೇವಿಯ ರೂಪದಲ್ಲಿ ಶೃಂಗೇರಿಯಲ್ಲಿ ನೆಲೆಸಿದ್ದಾಳೆ. ಸರಸ್ವತಿ ಉಭಯಭಾರತಿ ಅವತಾರದಲ್ಲಿ ಮಂಡನ ಮಿಶ್ರನ್ ಹೆಂಡತಿಯಾಗಿರುತ್ತಾಳೆ. ಶ್ರೀ ಶಂಕರಾಚಾರ್ಯರು ಮಂಡನಮಿಶ್ರನನ್ನು ವಾದದಲ್ಲಿ ಸೋಲಿಸಿದಾಗ ಷರತ್ತಿನ ಪ್ರಕಾರ ಮಂಡನ ಮಿಶ್ರ ಶಂಕರರ ಶಿಷ್ಯನಾಗಬೇಕಾಗುತ್ತದೆ. ಆವಾಗ ಉಭಯಭಾರತಿ ಶಂಕರರು ತನ್ನನ್ನೂ ಕೂಡ ಸೋಲಿಸಿದರೆ ಮಾತ್ರ ತನ್ನ ಪತಿಯನ್ನು ಅವರ ಶಿಷ್ಯನಾಗಲು ಅನುಮತಿ ಕೊಡುವದಾಗಿ ಹೇಳುತ್ತಾಳೆ. ನಂತರ ಶಂಕರರು ಮತ್ತು ಉಭಯಭಾರತಿಯ ವಾದ ತುಂಬಾ ದಿವಸಗಳ ಕಾಲ ನಡೆದು, ಉಭಯಭಾರತಿ ಕಾಮಶಾಸ್ತ್ರದ ಬಗ್ಗೆ ಪ್ರಶ್ನೆ ಮಾಡಿ ಶಂಕರರು ಸಂನ್ಯಾಸಿಯಾಗಿದ್ದರಿಂದ ಅದರ ಬಗ್ಗೆ ತಮಗೆ ಗೊತ್ತಿಲ್ಲವೆಂದು ಕೆಲದಿನಗಳ ಕಾಲಾವಕಾಶ ಕೊಡಬೇಕೆಂದು ಕೇಳಿ, ಒಬ್ಬ ರಾಜನ ಮೃತ ಶರೀರದಲ್ಲಿ ಪರಕಾಯ ಪ್ರವೇಶ ಮಾಡಿ ಕಾಮಶಾಸ್ತ್ರದ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ ಪುನಃ ತಮ್ಮ ಶರೀರ ಪ್ರವೇಶಿಸುತ್ತಾರೆ. ಆಗ ಉಭಯಭಾರತಿ ಸೋಲನ್ನು ಒಪ್ಪಿಕೊಳ್ಳುತ್ತಾಳೆ. ಊಭಭಾರತಿಯ ನಿಜ ಸ್ವರೂಪ ಸರಸ್ವತಿಯೆಂದು ತಿಳಿದ ಶಂಕರರು ಅವರನ್ನು ಶೃಂಗೇರಿಯಲ್ಲಿ ಬಂದು ನೆಲೆಸಲು ಕೋರುತ್ತಾರೆ. ಈ ರೀತಿ ಶಂಕರರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಶೃಂಗೇರಿ ಮೊದಲನೆಯದು. ಈಗಲೂ ಮಕ್ಕಳಿಗೆ ವಿಧ್ಯಾರಂಭ ಮಾಡುವ ಮೊದಲು ಶೃಂಗೇರಿಯಲ್ಲಿ ಶಾರದಾ ಸನ್ನಿಧಿಯಲ್ಲಿ ಅಕ್ಷರಾಭ್ಯಸ ಮಾಡಿಸುವದು ವಾಡಿಕೆ.

Comments