ಶ್ವಾನ ಪುರಾಣಮ್ 4

ಶ್ವಾನ ಪುರಾಣಮ್ 4

 

 

ಶ್ವಾನ ಪುರಾಣಮ್   4

 


ಇನ್ನು ಬೇರೆ ಸೆಕ್ಷನಿನಲ್ಲಿದ್ದ ವೀಣಾ ರಾಣಿಯನ್ನು ಸಂಪರ್ಕಿಸಿದೆ. ಇವಳೂ ನಾನೂ ಮೊದಲೊಮ್ಮೆ ಒಟ್ಟಿಗೆ ಕೆಲಸ ಮಾಡಿದವರು,  ಹಿಂದಿನ ಒಂದು ವಾರದಿಂದ ಅವಳು ರಜೆಯಲ್ಲಿದ್ದಳು.ನನ್ನ ಸಂಸಾರದ ಹಾಗೇ ಅವಳದ್ದೂ ಸಣ್ಣ ಸಂಸಾರವೇ. ಲೂಯಿಯ ವಿಷಯ ನನ್ನಿಂದ ಕೇಳಿ, ಅದರ ವಿಡಿಯೋ ಚಿತ್ರವನ್ನು ನನ್ನ ಮೊಬಾಯಿಲ್ ನಲ್ಲಿ ನೋಡಿ, ಇವಳು ಆಸೆ ಪಟ್ಟಳು.ಅವಳ ಯಜಮಾನರು ಪ್ರೈವೇಟ್ ಕಂಪೆನಿಯಲ್ಲಿದ್ದಾರೆ. "ನಿಜ ಹೇಳಬೇಕೆಂದರೆ ನಮಗೂ ಇಂತಹಾ ಒಂದು ಒಳ್ಳೆಯ ಬುದ್ದಿವಂತ ನಾಯಿಯ ಅವಶ್ಯಕಥೆ ತುಂಬಾ ದಿವಸಗಳಿಂದ ಇತ್ತು, ದಿನದಲ್ಲಿಯಾದರೆ ನಮ್ಮ ಮನೆಯಲ್ಲಿ ನನ್ನ ಮುದಿ ಅತ್ತೆ ಮಾತ್ರ ಇರುತ್ತಾರೆ, ಕಾಂಪೌಂಡಿನ ಒಳಗೆ ನಾಯಿ ಇದ್ದರೆ ನಮಗೂ ಒಂದು ಧೈರ್ಯ. ನಾಳೆನೇ ನನ್ನ ಯಜಮಾನರೊಂದಿಗೆನಮ್ಮ ಹೊಸ ಸ್ಯಾಂಟ್ರೋ ಕಾರಲ್ಲಿ ಬಂದು ನಿಮ್ಮ ನಾಯಿಯನ್ನು ಕೊಂಡೊಯ್ಯುತ್ತೇವೆ" ಎಂದಳು. ನಾನು ಪರಶು ರಾಮನ ವಿಷಯ ಸೂಚ್ಯವಾಗಿ ತಿಳಿಸಿದೆ, ಅದಕ್ಕವಳು "ಹಾಗೆ ಎಲ್ಲರಿಗೂ ನಾಯಿ ಸಾಕಲು ಬರೋದಿಲ್ಲ ಇವರೇ, ನೋಡಿ, ನಾನು ನಿಮ್ಮ ನಾಯಿಯನ್ನು ಹೇಗೆ ಸಾಕ್ತೇನೆ, ನಿಮ್ಮ ನೆನಪೂ ಅದಕ್ಕೆ ಬರಲಿಕ್ಕಿಲ್ಲ" ಎನ್ನುತ್ತಾ ತನ್ನ ಜಂಬದ ಚೀಲ ತೆಗೆದುಕೊಂಡು ಒಂದು ರೀತಿಯಲ್ಲಿ ತಿರುವುತ್ತಾ ಹೊರಟು ಹೋದಳು ಮಹಾರಾಯಿತಿ. ನಾನು ನಿಜವಾಗಿಯೂ ಸಂತಸ ಪಟ್ಟೆ.

                    ಅಂತೂ ಸಂಡೇ ಹೇಳಿದಂತೆ ವೀಣಾ ರಾಣಿ ಮತ್ತು ಅವಳ ಯಜಮಾನರೂ ತಮ್ಮ ಸಾಂಟ್ರೋ ಕಾರಲ್ಲಿ ಬಂದರು ಸರಿ ಸುಮಾರು ಆರು ಘಂಟೆ ತಡವಾಗಿ, ನಾನು ಅವರಿಗಾಗಿ ಕಾದೂ ಕಾದೂ ಸುಸ್ತಾಗಿ ಮಾರ್ಕೇಟಿಗೆ ಹೋಗಿ ನಾಲ್ಕು ಘಂಟೆ ಶಾಪಿಂಗ್ ಮಾಡಿ ಮಧ್ಯಾಹ್ನ ಊಟ ಮುಗಿಸಿದರೂ ಅವರ ಸುಳಿವಿರದೇ ಬೇರೆ ಕೆಲಸಕ್ಕಾಗಿ ಹೋಗಿದ್ದೆ.ಎಂದಿನ ಹಾಗೆ ಕಾಫ಼ೀ ಲಘು ತಿಂಡಿ ಕೊಟ್ಟ ನನ್ನವಳು ಲೂಯಿಯನ್ನು ಅವರಿಗೆ ಪರಿಚಯಿಸಿಕೊಟ್ಟಳು.ನಿಜವಾದ ಬೀಳ್ಕೊಡುಗೆಯ ಸಮಯ ಬಂತು. ಈಸಾರಿ ನಾನೂ ಅವಳೂ ಒಂದು ಪ್ಲಾನ್ ಮಾಡಿದ್ದೆವು. ಅದರಂತೆ ಲೂಯಿಯನ್ನು ನನ್ನವಳು ಹೊರ ಕೆಳ ತಂದು ಅವನ ಪ್ರೀತಿಯ ತಿಂಡಿಯನ್ನು ಕೊಡುತ್ತಾ ತಾನು ಕಾರಲ್ಲಿ ಬಂದು ಕೂತಳು, ಅವಳ ಜತೆ ಲೂಯಿ ತಾನೂ ಹತ್ತಿ ಕುಳಿತಿತು, ಅಷ್ಟರಲ್ಲಿ ವೀಣಾ ರಾಣಿ ಯಜಮಾನರು ತಮ್ಮಲ್ಲಿದ್ದ ( ನಾವು ಮೊದಲೇ ಕೊಟ್ಟಿದ್ದ) ಲೂಯಿ ಬಿಸ್ಕಿಟ್ ಕೊಟ್ಟಾಗ ಆತ ಅದನ್ನು ಖುಷಿಯಲ್ಲಿ ಸವಿಯುತ್ತ ಕುಳಿತ, ನನ್ನವಳು ಪಕ್ಕದಿಂದ ಇಳಿದದ್ದೂ ಕಾರು ಹೊರಟಿದ್ದೂ ಅವನಿಗೆ ತಿಳಿಯಲೇ ಇಲ್ಲ.ನಾನು  ಮನೆಗೆ ಬಂದಾಗ ವಿಷಯವೆಲ್ಲ ತಿಳಿದದ್ದು. ಆದರೆ ಕೊನೆಯಲ್ಲಿ ಅವಳಂದ ಒಂದು ಮಾತು ನನ್ನನ್ನು ಅಲ್ಲಾಡಿಸಿಬಿಟ್ಟಿತು, ಕಾರು ತಿರುವಿನಲ್ಲಿ ಮರೆಯಾಗುವ ಮುನ್ನ ಲೂಯಿ ಘಾಬರಿಯಿಂದೆಂಬಂತೆ ತನ್ನ ಮುಂದಿನ ಕಾಲಲ್ಲಿ ಕಾರಿನ ಹಿಂದಿನ ಗ್ಲಾಸನ್ನು ಕೆರೆಯುತ್ತಲಿದ್ದನಂತೆ. ಖುಷಿಯಾದರೂ ಯಾಕೋ ಮನದಲ್ಲಿ ದುಗುಡ ಮನೆ ಮಾಡಿತ್ತು.

                    ಸೋಮವಾರ ಅಫ಼ೀಸಿಗೆ ತಲುಪಿದ ನಾನು ಎಲ್ಲಕ್ಕಿಂತ ಮೊದಲು ವೀಣಾ ರಾಣಿಯನ್ನು ಭೇಟಿಯಾದೆ. ಅವಳು ಅರ್ಧ ಘಂಟೆಯಲ್ಲಿ ತಾನೂ ತನ್ನ ಯಜಮಾನರೂ ಲೂಯಿಯನ್ನು ಹೇಗೆ ಮೋಸ ಮಾಡಿ ತಮ್ಮ ಮನೆಗೆ ಕರೆದುಕೊಂಡು ಹೋದೆವು, ಹೇಗೆ ಅದನ್ನು ಮನೆಯಲ್ಲಿ ಕಟ್ಟಿ ಹಾಕಿದೆವು,ರಾತ್ರೆ ಹೇಗೆ ಗಲಾಟೆ ಮಾಡಿ ನಮ್ಮ ನಿದ್ರೆಗೆಡಿಸಿದ,ಎಂಬುದನ್ನು ವಿವರಿಸುತ್ತ,ನಿಮಗಿಂತ ಒಳ್ಳೆಯದಾಗಿ ಸಾಕುತ್ತಿದ್ದೇವೆ, ಎಂಬುದನ್ನು ಹೇಳಲು ಮರೆಯಲಿಲ್ಲ. ಇದನ್ನು ಮನೆಯಲ್ಲಿ ತಿಳಿಸಿದಾಗ, ಸರಿ ಆತ ಅಲ್ಲಾದರೂ ಸುಖವಾಗಿರಲಿ ಎಂದಳು ನನ್ನ ಯಜಮಾನತಿ.
                      ಇದಾಗಿ ಎರಡು ದಿನ ಕಳೆದಿರಬಹುದು, ನಮ್ಮ ಬೆಳಗಿನ ತಿಂಡಿಯ ಸಮಯ, ಎಲ್ಲೋ ಕ್ಷೀಣವಾಗಿ ಗೆಜ್ಜೆಯ ಶಬ್ದ ಕೇಳಿಸಿತು. ಮುಚ್ಚಿದ ಬಾಗಿಲು ನೋಡಿ ಇದು ನನ್ನ ಭ್ರಮೆಯೇನೋ ಎಂದುಕೊಳ್ಳುವಷ್ಟರಲ್ಲಿ ಇನ್ನೊಮ್ಮೆ ಜೋರಾದ ಗೆಜ್ಜೆಯ ಸದ್ದೂ ಗಲಾಟೆಯೂ ಕೇಳಿಸಿತು,ನಾನು ತಡೆಯದೇ ಬಾಗಿಲು ಒಮ್ಮೆಲೇ ತೆರೆದೆ, ಏನಾಯಿತೆಂದು ಅರಿವಾಗುವಷ್ಟರಲ್ಲಿ ನನ್ನಮೈಮೇಲೆಯೇ ಆತ ಹಾರಿದ್ದ, ನಾನು ಕೆಳ ಬಗ್ಗಿದರೆ ಆತನನ್ನ ಮುಖವೆಲ್ಲಾ ತನ್ನ ನಾಲಿಗೆಯಿಂದ ಒದ್ದೆ ಮಾಡಿ ಬಿಟ್ಟ.ಎರಡು ಕೈಯಲ್ಲಿ ಆತನನ್ನೆತ್ತಿಕೊಂಡು ಸಂತೈಸಿದೆ, ಕಂಪಿಸುತ್ತಿದ್ದ ಆತ ತುಂಬಾ ದೂರದಿಂದ ಓಡಿ ಬಂದವರ ಹಾಗೆ ಉಸಿರು ಬಿಡುತ್ತಿದ್ದ, ಪಾದವೆಲ್ಲಾ ರಕ್ತಮಯ, ಅವನನ್ನು ಸುಶ್ರೂಷೆ ಮಾಡಿ ತಿಂಡಿ ತಿನ್ನಿಸಿ ನಾನು ಆಫ಼ೀಸಿಗೆ ನಡೆದೆ.
                    ವೀಣಾರಾಣಿ ನಿಮ್ಮ ನಾಯಿ ಹಾಗೆ ಹೀಗೆ ಎಂತೆಲ್ಲ ಲೂಯಿ ಮಾಡಿದ ಕಾರುಭಾರವನ್ನು ಸಾವಿರದೊಂದು ತಪ್ಪನ್ನಾಗಿ ಮಾಡಿ ಬೈದಳು.ಅದಕ್ಕೆ ತಾನು ಕಾರಲ್ಲೇ ತಂದು ಮನೆ ಬಾಗಿಲಿಗೆ ಬಿಟ್ಟೆ ಎಂದಳು, ಲೂಯಿಯ ಕಾಲಿನ ರಕ್ತ ಸತ್ಯ ಹೇಳುತ್ತಿತ್ತು. "ಸರಿ ಬಿಡಿ, ಎಲ್ಲಾ ಪ್ರಾಣಿಗಳೂ ಎಲ್ಲರ ಜತೆಯೂ ಹೊಂದಿಕೊಳ್ಳಲಾರವು" ಎಂದೆ."ಅದಕ್ಕೆ ನಿಮ್ಮ ನಾಯಿ ನಿಮ್ಮ ಜತೆಯೇ ಸರಿ, ಅಲೇ ಇರಲಿ ಬಿಡಿ" ಎಂದಳು.
                  ಅದೇ ದಿನ ಸಂಜೆ ತ್ರಿವೇಣಿ ಬಾಯಿ ಪುನಃ ನನ್ನ ಹತ್ತಿರ ಬಂದಳು." ಸಾರ್ ದಯವಿಟ್ಟು ನನ್ನ ಹತ್ತಿರ ಲೂಯಿಯನ್ನು ಬಿಡಿ,ನಾನೂ ನನ್ನ ಮಗನೂ ಅದನ್ನು ಚೆನ್ನಾಗಿ ನೋಡಿಕೊಳುತ್ತೇವೆ, ಅವನಿಗೂ ಪ್ರಾಣಿಯೆಂದರೆ ತುಂಬಾ ಇಷ್ಟ, ಈಗಲೇ ಲೂಯಿ ಮನೆಗೆ ಬಂದರೆ ಏನೆಲ್ಲಾ ತರಬೇಕು, ಮಾಡಬೇಕು ಎಂತ ಪಟ್ಟಿ ಮಾಡಿ ಇಟ್ಟಿದ್ದಾನೆ ಆತ" ಎಂದಳು. ನಾನೆಂದೆ" ಅಮ್ಮಾ ನನ್ನ ಲೂಯಿ ಒಂದು ಪ್ರಾಣಿ ಅಲ್ಲ, ಅದರ ಅರಿವಳಿಕೆ ಯಾವುದೇ ಮನುಷ್ಯರಿಗಿಂತ ಕಡಿಮೆ ಇಲ್ಲ,ಅದು ಈಗಾಗಲೇ ನನಗೆ ಮನವರಿಕೆಯಾಗಿದೆ, ನಿನಗೆ ಅಷ್ಟು ಇಷ್ಟ ಆದರೆ, ಸ್ವಲ್ಪ ದಿನ ಇಟ್ಟುಕೊಂಡು ನೋಡು ಆತ ಅಲ್ಲಿ ಇದ್ದರೆ ನನಗೇನೂ ಅಭ್ಯಂತರವಿಲ್ಲ" ಎಂದೆ."ಹಾಗಾದರೆ ಮಾರನೆಯ ದಿನವೇ ತಾನು ಬರುತ್ತೇನೆ" ಎಂದಳು ತ್ರಿವೇಣಿ ಬಾಯಿ‌ಎಲ್ಲಿಲ್ಲದ ಖುಶಿಯಿಂದ, ಅಲ್ಲಿ ಸಂತಸ ಜಿನುಗುತ್ತಿತ್ತು.
                  ಆ ದಿನ ಸಂಜೆ ಸಂಸಾರ ಸಮೇತ (ಅಂದರೆ ಲೂಯಿಯನ್ನೊಳಗೊಂಡು ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ?) ಹತ್ತಿರದ ಪಾರ್ಕ್ ನಲ್ಲಿ ತುಂಬಾನೇ ಸಂತಸದಿಂದ ಕಾಲ ಕಳೆದೆವು.ನಾನು ಲೂಯಿಯ ಮುಖವನ್ನು ಎರಡೂ ಕೈಯಲ್ಲಿ ಹಿಡಿದು ಮುದ್ದಿಸುತ್ತಾ ಹೇಳಿದೆ." ನೋಡಯ್ಯಾ ಲೂಯಿ,ನಮ್ಮ ನಿನ್ನ ಋಣ ಇನ್ನೆಷ್ಟು ದಿನವೋ ಗೊತ್ತಿಲ್ಲ,ನಾನೂ ಬೆಂಗಳೂರಿಗೆ ಹೋದರೆ ನಿನ್ನನ್ನು ಸುತ್ತಾಡಿಸಲು ಯಜಮಾನತಿಯಿಂದಂತೂ ಆಗಲಿಕ್ಕಿಲ್ಲ, ಮಕ್ಕಳು ಅವರ ಕೆಲ್ಸ ಮಾಡಲೂ ಜನ ಬೇಕೆನ್ನುತ್ತಾರೆ, ಆಚೀಚೆಯ ಮನೆಯವರನ್ನು ನೀನು ಹೆದರಿಸುತ್ತಾ ಇರುವೆ, ನಿನ್ನ ಮೊದಲಿನ ಯಜಮಾನರ ಪತ್ತೆಯೇ ಇಲ್ಲ, ಹೀಗಿರುವಾಗ ನಿನ್ನ ಭವಿಷ್ಯದ ಬಗ್ಗೆ ಚಿಂತೆಯಾಗುತ್ತಿದೆ, ನೋಡು ನಾಳೆ ನಿನ್ನನ್ನು ಕರೆದೊಯ್ಯಲು ಹೊಸ ಯಜಮಾನತಿಯೊಬ್ಬಳು ಬರುತ್ತಿದ್ದಾಳೆ, ಅವಳ ಹತ್ತಿರ ಹಣ ಬಂಗ್ಲೆ ಕಾರು ಇಲ್ಲ, ಅದಿದ್ದವರೊಟ್ಟಿಗೆ ನಿನಗೆ ಸರಿ ಬರಲ್ಲ, ನಿನ್ನನ್ನು ಅವಳು ಪೀತಿಯಿಂದ ನೋಡಿಕೊಂಡಾಳು ಎಂಬ ನಂಬಿಕೆ ನನಗಿದೆ, ಮತ್ತೆ ಇದೆಲ್ಲಾ ಕೆಲವೇ ತಿಂಗಳು ಮಾತ್ರ, ಇನ್ನು ನಿನ್ನ ಇಷ್ಟ" ಎಂದೆ. ನನ್ನ ಮಾತು ಅರ್ಥವಾಯಿತೋ ಎಂಬಂತೆ ಲೂಯಿ ನನ್ನ ಮುಖ ನೆಕ್ಕಿದ,ಅವನ ಮೈದದವಿ ಅಪ್ಪಿಕೊಂಡೆ, ನಮ್ಮೆಲ್ಲರ ಕಣ್ಣುಗಳೂ ತೇವಗೊಂಡವು

 

 

 

 


ಅಧ್ಯಾಯ ೨


ಪ್ರಾಯಶಃ ಮನುಷ್ಯನ ಭಾವನೆಗಳನ್ನು ಅವನ ನಂತರ ತನ್ನದೇ ರೀತಿಯಿಂದ ಸರಿಯಾಗಿ ಅರ್ಥ ಮಾಡಿಕೊಳ್ಳುವ ಸನಿಹದ  ಜೀವಿ ಎಂದರೆ ಶ್ವಾನವೇ ಅನ್ನಿಸುತ್ತೆ ನನಗೆ. ನಿರ್ಮಲ ಅಂತಕರಣದ ಈ ಜೀವಿ ಪ್ರೀತಿಯೊಂದನ್ನು ಮಾತ್ರ ನಮಗೆ ಕೊಡ ಬಲ್ಲುದು ಅದೂ ನಿರ್ವಾಜ್ಯವಾಗಿ. ನನಗೆ ಲೂಯಿ ಬಗೆಗೆ ಅತ್ಯಂತ ಅಕ್ಕರೆ ಕಾಳಜಿ ಬರಲು ಕಾರಣ ಬೇರೆಯೇ ಇದೆ.

ನಮ್ಮ ಮನೆಯವರೆಲ್ಲರನ್ನೂ ತನ್ನ ಪ್ರೀತಿಯಿಂದ ಮನೆಯ ಒಂದು ಮುಖ್ಯ ಸದಸ್ಯಳಾಗಿ ಇಡೀ ಮನೆಯನ್ನ ತನ್ನ ಆಳ್ವಿಕೆಗೆ ಒಳ ಪಡಿಸಿಕೊಂಡವಳಿದ್ದಾಳೆ. ನಮ್ಮೆಲ್ಲರನ್ನು ತನ್ನ ಚೇತೋ ಹಾರೀ ಚೇಷ್ಟೆಗಳಿಂದ ನಗಿಸಿ ಅಳಿಸಿದ ಮನೆ ಮಗಳು ಅವಳೇ "ಆಲಿವ್". ಚಿಕ್ಕವಳಿರುವಾಗ ನನ್ನ ತೊಡೆ ಮೇಲೆ ಮಲಗಿಸಿಕೊಂದು ಪೂಪ್ ಸೀ ಬಾಟಲಿಯಲ್ಲಿ ಹಾಲು ಕುಡಿದವಳು. ಎರಡು ವರ್ಷವಾದಾಗ ಕೂಡಾ ನಾನು ನೆಲದಲ್ಲಿ ಕುಳಿತರೆ ಮತ್ತೆ ನನ್ನ ತೊಡೆ ಮೇಲೆಯೇ ಕುಳಿತು ಕೊಳ್ಳಲು ಬರುವವಳು ಆದರೆ ಆಗ ಎಷ್ಟು ಬೆಳೆದಿದ್ದಳೆಂದರೆ ಅವಳ ಅರ್ಧ ಭಾಗ ಈ ಕಡೆಯಿಂದ, ಮುಖ ಈ ಕಡೆಯಿಂದ ಹೊರಗಿರುತ್ತದೆ . ಆದರೂ ಬೇರೆ ಯಾರನ್ನೂ ಅವಳೆದುರಿಗೆ ಪ್ರೀತಿ ಮಾಡಲು ಬಿಡಳು. ಮನೆಗೆ ಐಸ್ ಕ್ರೀಮ್ ಮತ್ತು ಕಶ್ಮೀರಿ ನಾನ್ ಯಾವುದೇ ರೀತಿಯಲ್ಲಿ ಅಡಗಿಸಿಕೊಂಡು ತಂದರೂ ಅವಳ ಪಾಲು ಮೊದಲು ತೆಗೆದಿಡಬೇಕಾದದ್ದೇ ಅವಳ ನ್ಯಾಯ. ಮಂಜು ಗಡ್ಡೆಯ ಚೂರು ಕೊಟ್ಟರೆ ಕರಕರನೆ ಒಂದೇ ಕ್ಷಣದಲ್ಲಿ ಮೂಗಿನಿಂದ ನೀರು ವಸರುತ್ತಿದ್ದರೂ ಬಿಡಳು. ನ್ಯೂಟ್ರಿಲಾ ದ ಸೋಯಾಬಿನ್ ಅವಳಿಗೆ ಪ್ರಾಣ.

 

 (ಮುಕ್ತಾಯವಲ್ಲ ಇದು ಆರಂಭ)  


ಆಲಿವಾಯಣ   1

 

 

 

 

 

ಶ್ವಾನ ಪುರಾಣಮ್   3



 

Comments