ಝೆನ್ ಕತೆ: ೧೮ ನಿಜದ ಹಾದಿ

ಝೆನ್ ಕತೆ: ೧೮ ನಿಜದ ಹಾದಿ

ಬರಹ
ನಿನ್‌ಕವಾ ಸಾಯುವ ಕೊಂಚ ಮೊದಲು ಝೆನ್ ಗುರು ಇಕ್ಕ್ಯೂ ಅವನನ್ನು ಭೇಟಿ ಮಾಡಿದ. “ನಿನಗೆ ದಾರಿ ತೋರಲೇ” ಎಂದು ಕೇಳಿದ ಗುರು. ನಿನ್‌ಕವಾ “ನಾನು ಒಬ್ಬನೇ ಬಂದೆ, ಒಬ್ಬನೇ ಹೋಗುತ್ತಿರುವೆ. ನೀನು ನನಗೇನು ಸಹಾಯ ಮಾಡಬಲ್ಲೆ?” ಎಂದ. “ನೀನು ಬಂದೆ, ನೀನು ಹೋಗುತ್ತಿರುವೆ ಎಂಬುದು ಭ್ರಮೆ. ಹೋಗುವುದು, ಬರುವುದು ಎರಡೂ ಇಲ್ಲದ ದಾರಿ ತೋರುತ್ತೇನೆ, ಅದರಲ್ಲಿ ಸಾಗು” ಎಂದ ಇಕ್ಕ್ಯೂ. ಈ ಮಾತು ಕೇಳುತ್ತಿದ್ದಂತೆ ನಿನ್‌ಕವಾನಿಗೆ ತನ್ನ ದಾರಿ ನಿಚ್ಚಳವೆನಿಸಿತು. ಮುಗುಳ್ನಗುತ್ತ ಸತ್ತು ಹೋದ. [ಬೆಳಗೆರೆ ಕೃಷ್ಣಶಾಸ್ತ್ರಿಗಳ “ಏಗದಾಗೆಲ್ಲ ಐತೆ” ಪುಸ್ತಕವನ್ನು ನೀವು ಓದಿದ್ದರೆ ಅದರಲ್ಲಿ ಮುಕುಂದೂರು ಸ್ವಾಮಿ ಹೇಳುವ ಮಾತು ಒಂದು ಹೀಗೆ ಇದೆ: “ಬಂದದ್ದು ಹೋಗುತ್ತದೆ, ಇದ್ದದ್ದು ಹೋಗುವುದಿಲ್ಲ.” ಈ ಕತೆಗೂ ಮುಕುಂದೂರು ಸ್ವಾಮಿಯ ಮಾತಿಗೂ ಎಷ್ಟೊಂದು ಸಾಮ್ಯ!]