ಭ್ರಶ್ಟಾಚಾರ ಅನ್ನೋದು ಈವತ್ತು ನಿನ್ನೆ ಹುಟ್ಟಿದಂತಹ ವಿಚಾರ ಅಲ್ಲ: ಸಂತೋಶ್ ಹೆಗ್ಡೆ

ಭ್ರಶ್ಟಾಚಾರ ಅನ್ನೋದು ಈವತ್ತು ನಿನ್ನೆ ಹುಟ್ಟಿದಂತಹ ವಿಚಾರ ಅಲ್ಲ: ಸಂತೋಶ್ ಹೆಗ್ಡೆ

 (ಅಕ್ಟೋಬರ್ 13ರಂದು ಮಾಜಿ ಲೋಕಾಯುಕ್ತ ಜಸ್ಟಿಸ್ ಸಂತೋಶ್ ಹೆಗ್ಡೆಯವರು ಮೈಸೂರು ವಿಶ್ವವಿದ್ಯಾಲಯದ ಕೋರಿಕೆಗೆ ಮೇರೆಗೆ ಭಾರತದಲ್ಲಿ ಭ್ರಶ್ಟಾಚಾರಕುರಿತು ಉಪನ್ಯಾಸ ನೀಡಲು ಬಂದಿದ್ದರು. ಮೈಸೂರಿನ ಮಾನಸಗಂಗೋತ್ರಿಯ ಸೆನೆಟ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅವರು ನೀಡಿದ ಉಪನ್ಯಾಸವನ್ನು ದಾಖಲಿಸಿ ಅದರ ಪಾಠವನ್ನು ಸಂಪದಿಗರಿಗಾಗಿ ಕಂತುಗಳಲ್ಲಿ ಯಥಾವತ್ ಹಾಗೆಯೇ ನೀಡುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಕೆಲವೊಂದು ಕಡೆ ಮಾತ್ರ ಅರ್ಥ ತಪ್ಪದಿರುವಂತೆ ಮಾಡಲು ಬದಲಿಸಿದ್ದೇನೆ.)

ಇದರ ಬಗ್ಗೆ ಶುರು ಮಾಡ್ಬೇಕಾದ್ರೆ ಮಾತು: ಟ್ರಾನ್ಸ್ಪರೆನ್ಸಿ ಇಂಟರ್ ನ್ಯಾಶನಲ್ ಅನ್ನೋ ಒಂದು ಸಂಸ್ಥೆ, ಅಂತಾರಾಶ್ಟ್ರೀಯ ಮಟ್ಟದಲ್ಲಿ ಸುಮಾರು 147 ದೇಶಗಳಲ್ಲಿನ ಸಮೀಕ್ಷೆ - ಅವರವರ ದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ನಡೆಸಿ ಭಾರತಕ್ಕೆ 87ನೇ ಸ್ಥಾನ ನೀಡಿದೆ. ನಾನು ಲೋಕಾಯುಕ್ತನಾಗಿ ಬಂದಾಗ ಅದು 84ನೇ ಸ್ಥಾನದಲ್ಲಿತ್ತು, ಅದೇನೋ ನನ್ನ ಕೆಲಸಾನೋ ಏನೋ ಅದು 87ಕ್ಕೆ ಹೋಗಿದೆ(ನಗು).

ಭ್ರಶ್ಟಾಚಾರ ಅನ್ನೋದು ಈವತ್ತು ನಿನ್ನೆ ಹುಟ್ಟಿದಂತಹ ವಿಚಾರ ಅಲ್ಲ. ಅದು ಸಮಾಜ ಹುಟ್ಟಿದಾಗಲೇ ಇತ್ತು.  ನಿಮ್ಮ ಪುರಾಣವನ್ನಾಗಲಿ, ಇನ್ನಾವುದಾಗಲಿ ಓದಿನೋಡಿ ಅದರಲ್ಲಿ ಭ್ರಶ್ಟಾಚಾರದ ಬಗ್ಗೆ ಒಂದು ವಿಶಯ ಇದ್ದೇ ಇರ್ತದೆ. ಭ್ರಶ್ಟಾಚಾರ ಇರುವದ್ರಿಂದ ರಾಜ್ಯಕ್ಕಾಗಲಿ, ಸಮಾಜಕ್ಕಾಗಲಿ ಅಶ್ಟೊಂದು ದೊಡ್ಡ ಪ್ರಮಾದ ಆಗಲ್ಲ. ಆದರೆ, ಅದರ ಬೆಳವಣಿಗೆಯಲ್ಲಿ ಬಹಳಶ್ಟು ದೇಶಕ್ಕಾಗಲಿ, ಸಮಾಜಕ್ಕಾಗಲಿ ಕಶ್ಟ ಉಂಟಾಗ್ತದೆ. ಇದನ್ನ ನಾವು ಒಂದು ರೀತಿಯಲ್ಲಿ ನೋಡ್ಬೆಕಾಗಿದ್ರೆ ನಾನು ಒಬ್ಬ ಚಿಕ್ಕ ಹುಡುಗನಾಗಿದ್ದಾಗ ನನ್ನ ಜಿಲ್ಲೆಯಲ್ಲಿ ಜನ, ಹಿರಿಯರು ಹೇಳ್ತಿದ್ದರು: ನಮ್ಮ ಜಿಲ್ಲೆಯಲ್ಲಿ ಭ್ರಶ್ಟರನ್ನ ಹುಡುಕ್ಬೇಕಂದ್ರೆ ಐದು ಬೆರಳುಗಳು ಸಾಕು. ಸುಮಾರು ಅರವತ್ತು ವರುಶದ ಮೇಲೆ ನಾನು ಈವತ್ತು ಹೇಳ್ತಿದೀನಿ. (ಎಲ್ಲ ಕಡೆ ಇದನ್ನೇ ಹೇಳ್ತಿರ್ತೇನೆ). ಅದೇ ಐದು ಬೆರಳು ಸಾಕು. ಆದರೆ, ಪ್ರಾಮಾಣಿಕರನ್ನ ಹುಡುಕೋಕೆ. ಇದು ಭ್ರಶ್ಟಾಚಾರದ ಬೆಳವಣಿಗೆ. ಇದನ್ನ ಒಂದು ಅರಿತ್ ಮೆಟಿಕ್ ರೀತಿಯಲ್ಲಿ ಅಂದ್ರೆ ಲೆಕ್ಕಾಚಾರದ ರೀತಿಯಲ್ಲಿ ಹೇಳೋದಾದ್ರೆ. ನನ್ನ ಹತ್ತನೆಯ ವಯಸ್ಸಿನಲ್ಲಿ ಯಾರಾದ್ರೂ ಒಬ್ಬ ಅಧಿಕಾರಿ  ನೂರು ರೂಪಾಯಿ ಲಂಚ ಪಡೆದ್ರೆ (ದೊಡ್ಡ ಮಾತದು)ನೂರು ರೂಪಾಯಿ ಲಂಚ ಪಡೆದ್ರೆ  ಎರಡು ಸೊನ್ನೆಗಳಿರ್ತ ಇದ್ವು. ಈವತ್ತು ಈ ಹಗರಣಗಳೇ ಆಗಲಿ, ಭ್ರಷ್ಟಾಚಾರಗಳೇ ಆಗಲಿ ಅದರಲ್ಲಿ ಇರುವಂತಹ ಮೊತ್ತದಲ್ಲಿ ಎಶ್ಟು ಸೊನ್ನೆಗಳಿವೆ ಅಂತ ನೀವೇ ಲೆಕ್ಕ ಹಾಕಿ. 2G ಹಗರಣ ಅಂತ ಒಂದು ಇದೆ. 2010ರಲ್ಲಿ ಅದು ಬಯಲಿಗೆ ಬಂತು. ಸಿಎಜಿ ಪ್ರಕಾರ, 1ಲಕ್ಷ 76 ಸಾವಿರ ಕೋಟಿ ರೂಪಾಯಿ ಸರ್ಕಾರಕ್ಕೆ ವಂಚನೆ ಆಗಿದೆ. ಎಶ್ಟು ಸೊನ್ನೆಗಳಿವೆ ಅಂತ ಲೆಕ್ಕ ಹಾಕಿ. ಅದೇ ವರ್ಷದಲ್ಲಿ ಕಾಮನ್ ವೆಲ್ತ್ ಹಗರಣ ಆಯ್ತು. 70,000 ಕೋಟಿ ರೂಪಾಯಿ. ಇದರಲ್ಲಿ ಏನ್ ಕಾಣಿಸ್ತಿದೆ ಅಂದ್ರೆ ಭ್ರಷ್ಟಾಚಾರ, ಅದಕ್ಕೆ ಮಿತಿಯಿಲ್ಲ. ಒಂದು ರೀತಿಯಲ್ಲಿ ಈವತ್ತಿನ ದಿವಸ ನಾವು 50ನೇ ಇಸವಿಯ ಭ್ರಶ್ಟಾಚಾರವನ್ನು ಅಲ್ಲಿಯೇ ನಿಯಂತ್ರಿಸ್ತಾ ಇದ್ರೆ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಏನಾಗ್ತಿತ್ತು ಅಂತ ನಾವು ತಿಳ್ಕೋಬೋದು. 50ನೇ ಇಸವಿಯ ಎರಡು ಸೊನ್ನೆ ಭ್ರಶ್ಟಾಚಾರದಲ್ಲಿ ಸೇರ್ತಾ ಇದ್ರೆ,ಈವತ್ತು 16 ಸೊನ್ನೆ 17 ಸೊನ್ನೆ. ಇದು ಮುಂದುವರೀತಾನೇ ಇದೆ. ಈವಾಗ ಒಂದು ವಿಚಾರಣೆ ನಡೀತಾ ಇದೆ. ಕೃಶ್ಣಾ ಗೋದಾವರಿ (KG River basin oil scam) ತೈಲದ ಸ್ಕ್ಯಾಮ್. ಅದರಲ್ಲಿ 20ಕ್ಕೂ ಹೆಚ್ಚು ಸೊನ್ನೆಗಳಿರಬಹುದು ಅನ್ನೋದು ನನ್ನ ಅಂದಾಜು.

                                                                                                                                                  ಮುಂದುವರಿಯುತ್ತದೆ...

Rating
No votes yet