ಇರುವುದೆಲ್ಲವ ಬಿಟ್ಟು.....

ಇರುವುದೆಲ್ಲವ ಬಿಟ್ಟು.....

 ಕೆಲವು ದಿನಗಳ ಹಿಂದೆ ಬೆಂಗಳೂರಿನಿಂದ ನನ್ನ ಮಿತ್ರರೊಬ್ಬರು ದೂರವಾಣಿಯಲ್ಲಿ ಮಾತಾಡಿ ಅವರ ಆಪ್ತರೊಬ್ಬರು ನಮ್ಮ ಮಲೆನಾಡು ಸೀಮೆಗೆ ಇನ್ನುಳಿದ ಬದುಕಿನ ಭಾಗವನ್ನು ಕಳೆಯಲು ಬರುತ್ತಿದ್ದಾರೆ, ಅವರಿಗೆ ನಿನ್ನ ಪರಿಚಯ ಹೇಳಿದ್ದೇನೆ, ಅಲ್ಲಿ ಅವರ ಪರಿಚಯ ಮಾಡಿಕೋ ಎಂದರು.  ಅಂತಹ ಉದ್ಯಾನ ನಗರಿಯನ್ನು ಬಿಟ್ಟು ಇಲ್ಲಿ ಬರುವರೆಂದರೆ ತುಂಗೆಯ ತಿಳಿ ನೀರು, ತಂಪಾದ ಹವೆ ಇವೆಲ್ಲಾ ಬೇಕಾಗಿ ಗಿಜಿಗಿಟ್ಟಿಯಿಂದ ದೂರವುಳಿಯೋಣವೆಂದುಕೊಂಡು ಈ ಕಡೆ ಬರುತ್ತಿರಬಹುದೆಂದು ಯೋಚಿಸುತ್ತಾ ನಾಲ್ಕು ದಿನ ಕಳೆಯುವಷ್ಟರಲ್ಲಿ ಆ ಬೆಂಗಳೂರಿನವರೇ ಬಂದರು. ಅವರ ಪರಿಚಯವಾಗಿ ಈ ಕಡೆ ಅವರು ಬರುತ್ತಿರುವ ಉದ್ದೇಶವನ್ನು ಕೇಳಿದಾಗ ಇಲ್ಲೇ ತುಂಗೆಯ ದಡದಲ್ಲಿ ಮನೆಕಟ್ಟಿಕೊಂಡಿರೋಣವೆಂಬ ಅವರ ತೀರ್ಮಾನವನ್ನು ಹೇಳಿದರು. ಈಗಾಗಲೇ ಇವರಂತೆ ಹಲವರು ಈ ಭಾಗಕ್ಕೆ ಬಂದು ವಾಸಿಸುತ್ತಿದ್ದಾರೆಂದು ನಾನು ತಿಳಿದಿದ್ದೆ.  ಅಂತಹವರಲ್ಲಿ ಕೆಲವರು ವಿದ್ಯಾವಂತರು, ಮೇದಾವಿಗಳು, ಅಮೇರಿಕೆಯಂತಹ ಮುಂದುವರಿದ ದೇಶಗಳಲ್ಲಿ ಇದ್ದು ದುಡಿಮೆ ಮಾಡಿ ಬಂದವರಾಗಿದ್ದಾರೆಂದು ಅವರಿವರಿಂದ ಕೇಳಿ ತಿಳಿದಿದ್ದೇನೆ. ಅಂತಹವರೆಲ್ಲಾ ಈ ಕುಗ್ರಾಮಗಳನ್ನೇಲ್ಲಾ ಹುಡುಕಿಕೊಂಡು ಬರುತ್ತಿದ್ದಾರೆಂದರೆ ಈ ಹಳ್ಳಿಗಳ ಅದೃಷ್ಟ ಕುಲಾಯಿಸಿತೋ ಹೇಗೆ ಎಂದು ಯೋಚಿಸುತ್ತಿದ್ದೆ.

 
 
ಮತ್ತೊಂದು ಕಡೆ ನಮ್ಮ ಮಲೆನಾಡೇ ಬೆಂಗಳೂರಿಗೆ ವಲಸೆ ಹೊರಟು ನಿಂತಿದೆ.  ಹಳ್ಳಿಗಳಲ್ಲಿ ಯುವಕರು ಇರಲೊಲ್ಲರು. ಪೇಟೆಯ ಜೀವನ, ದುಡಿಮೆ ಅವರಿಗೆ ಬೇಕಾಗಿದೆ.  ಕೂಲಿಯಾಳುಗಳ ಮಕ್ಕಳಂತು ಇಲ್ಲಿ ದುಡಿಯುವ ಬದಲು ಅಲ್ಲಿ ದುಡಿಮೆ ಮಾಡೋಣವೆಂದು ನಗರಗಳತ್ತು ಕಾಲಿಡುತ್ತಿದ್ದಾರೆ.  ಸ್ವಲ್ಪ ಅನುಕೂಲಸ್ಥರ ಮಕ್ಕಳು ಓದಿ ಒಳ್ಳೆಯ ಉದ್ಯೋಗಕ್ಕಾಗಿ ಪಟ್ಟಣ ಸೇರುತ್ತಿದ್ದಾರೆ.  ಕೃಷಿ ಕಾರ್ಮಿಕರ, ಕೂಲಿಯಾಳುಗಳ ಕೊರತೆ ದಿನೇದಿನೇ ಹಿಚ್ಚುತ್ತಿರುವ ಹಿನ್ನೆಲೆಯಲ್ಲಿ ಅದೆಷ್ಟೋ ಜಮೀನುದಾರರು ಈ ಬೇಸಾಯದ ಸಹವಾಸವೇ ಸಾಕೆಂದು ಸುಸ್ತಾಗಿದ್ದಾರೆ.  ಹೆಣ್ಣು ಮಕ್ಕಳು ಓದಿನಲ್ಲಿ ಜಾಣೆಯರಾಗಿ ನಗರ ಮುಖಿಯರಾಗಿದ್ದಾರೆ.  ಹೀಗಾಗಿ ನಮ್ಮ ಮಲೆನಾಡ ಹಳ್ಳಿಗಳು ಖಾಲಿಯಾಗುತ್ತಿವೆ ಎಂದು ನನಗನ್ನಿಸುತ್ತಿದೆ.  ಈ ಕಡೆಯಿಂದ ಬೆಂಗಳೂರಿಗೆ ಒಂದು ಬಸ್ ಜಾಸ್ತಿಯಾಯಿತೆಂದರೆ ಒಂದು ಗ್ರಾಮ ಖಾಲಿಯಾಯಿತೆಂದು ನನ್ನ ಲೆಕ್ಕಾಚಾರ !
 
ಈ ಪ್ರಕ್ಷುಬ್ದ ಪರಿಸ್ಠಿತಿಯಲ್ಲೂ ಬೆಂಗಳೂರಿನ ಐ.ಟಿ. ಉದ್ಯೋಗಿಯೊಬ್ಬರು ಕೃಷಿಯಲ್ಲಿ ಆಸಕ್ತರಾಗಿ ಇಲ್ಲಿ ಬಂದು ತೋಟ ಕೊಂಡು ಬೇಸಾಯದ ಬೆನ್ನು ಹತ್ತಿದ್ದಾರೆ.  ಮೌಸ್ ಹಿಡಿಯುವ ಕೈ ಗುದ್ದಲಿ ಹಿಡಿಯಬಲ್ಲದೆ, ಕೃಷಿಯ ಗಂಧಗಾಳಿಯೂ ಗೊತ್ತಿರದ ಅವರು ಇಲ್ಲಿ ಅದೆಂತು ತೋಟಗಾರಿಕೆ ಮಾಡಿಯಾರೆಂದು ನಾನೂ ಯೋಚಿಸುತ್ತಿರುವಾಗಲೆ ಅವರೇ ಬೆಟ್ಟಿಯಾಗಿ ಕೃಷಿ ಕೊಡುವ ಖುಷಿ ಬೇರಾವುದೇ ಉದ್ಯೋಗ ನೀಡಲಾರದೆಂದು ತಿಳಿಸಿದರು.  ಆದರೆ ಕೆಲಸಕ್ಕೆ ನಾಲ್ಕು ಜನ ಇವರ ತೋಟಕ್ಕೆ ಬರುವ ವರೇಗೆ ಇವರಿಗೆ ಎಲ್ಲಾ ಚಂದ, ಆಮೇಲೆ ಬೇಸಾಯದ ನಿಜವಾದ ಬಣ್ಣ ಇವರಿಗೇ ತಿಳಿಯುತ್ತದೆ ಎಂದು ನಾನೂ ಸುಮ್ಮನಾದೆ.  ತಲೆತಲಾಂತರದಿಂದ ರೈತಾಪಿಯನ್ನೇ ಮಾಡುತ್ತಿರುವವರನ್ನು ನೋಡಿದಾಗ ಅದು ಸುಲಭವೆನಿಸುತ್ತದೆ ವಿನಃ ಸ್ವತಃ ಕೃಷಿಯಲ್ಲಿ ತೊಡಗಿದಾಗ ಅದರ ಆಳ ಅಗಲ ಎಲ್ಲಾ ಗೊತ್ತಾಗುತ್ತದೆ.  ಆದರೂ ನಗರ ವಾಸಿಗಳು ಕೃಷಿಯಲ್ಲಿ ಆಸಕ್ತಿ ತೋರುತ್ತಿರುವುದು ಈ ವೃತ್ತಿಯ ಗೌರವವನ್ನು ಇನ್ನೂ ಹೆಚ್ಚಿಸೀತು.
 
ಮೊನ್ನೆ ದಸರೆಯಲ್ಲಿ ಇಲ್ಲೆ ಹತ್ತಿರದಲ್ಲಿರುವ ದೇವಸ್ಟಾನ, ಮಠ ಎಲ್ಲಾ ನೋಡಿ ಬರೋಣವೆಂದು ಹೋಗಿದ್ದಾಗ ಮತ್ತೊಂದು ಸೋಜಿಗದ ವಿಷಯ ತಿಳಿಯಿತು.  ವಿಶ್ರಾಂತ ಜೀವನ ನಡೆಸುವ ಸಲುವಾಗಿ ಆ ಊರಿಗೆ ಎಲ್ಲೆಲ್ಲಿಂದಲೋ ಜನ ಬಂದು ನೆಲೆಸುತ್ತಿದ್ದಾರೆಂದು ಕೇಳಿ ಆಶ್ಚರ್ಯವಾಯಿತು.  ದೇವರು ಎಲ್ಲಾ ಕಡೆ ಇದ್ದಾನೆ ಆದರೆ ಶಾಂತಿ ಎಲ್ಲಾ ಕಡೆ ಇಲ್ಲವೆಂಬುದು ಅವರೆಲ್ಲರ ಅನಿಸಿಕೆ ಇರಬಹುದೆಂದು ನನಗನ್ನಿಸಿತು.  ದೇವಾಲಯಗಳಿರುವ ಊರಿಗೆ ಶಾಂತಿ, ಸಮಾದಾನಗಳನ್ನು ಹುಡುಕಿಕೊಂಡು ಬರುವವರಿಂದಾಗಿ ಆ ಊರಿನಲ್ಲಿಯೂ ಮನೆ, ಜಾಗ ಎಲ್ಲಾ ತುಟ್ಟಿಯಾಗಿ ಬಿಟ್ಟಿದೆ !
 
ಈ ಊರಲ್ಲೇ ಸಣ್ಣ ಹುದ್ದೆಯಲ್ಲಿದ್ದುಕೊಂಡು ಸಂತೃಪ್ತ ಜೀವನ ನಡೆಸಿಕೊಂಡು ಆಗಾಗ ನನಗೂ ಸಿಗುತ್ತಿದ್ದ ನನ್ನ ಗೆಳೆಯನೊಬ್ಬನಿಗೆ ಈಗ್ಗೆ ಎರಡು ವರ್ಷಗಳ ಹಿಂದೆ ಒಂದು ಆಲೋಚನೆ ಬಂತು. ವೃತ್ತಿಯಲಿ ಪದೋನ್ನತಿ ಪಡೆದು ಇನ್ನೂ ಹೆಚ್ಚು ಸಾಮಾಜಿಕ ಮನ್ನಣೆ ಪಡೆಯಬೇಕೆನಿಸಿ, ಒಂದು ಮೆಟ್ಟಿಲು ಮೇಲೇರಿದ.  ಪದೋನ್ನತಿಯಾದ ಮೇಲೆ ಮೇಲಾಧಿಕಾರಿಗಳು ಅವನಿಗೆ ಹೆಚ್ಚಿನ ಜವಾಬ್ದಾರಿಗಳನ್ನು ಕೊರಳಿಗೆ ಕಟ್ಟಿ ದೂರದ ಮುಂಬಯಿಗೆ ವರ್ಗಾವಣೆ ಮಾಡಿದರು.  ಮತ್ತೀಗ ಮೊನ್ನೆ ದಸರೆಗೆ ಊರಿಗೆ ಬಂದವನು ನನಗೆ ಸಿಕ್ಕಿ ತನ್ನ ಪಾಡು,  ಪಟ್ಟ ಪರಿಪಾಟಲನ್ನು ಹೇಳಿಕೊಂಡ.  ಈಗ ಮಧುಮೇಹಿಯಾಗಿರುವುದರಿಂದ ಮೊದಲಿನ ಉತ್ಸಾಹ ಅವನಲ್ಲಿಲ್ಲದ್ದನ್ನು ಗಮನಿಸಿ ವೃತ್ತಿಯಲ್ಲಿ ಮೇಲೇರುವುದು ಪ್ರಗತಿಯ ಲಕ್ಷಣವೆಂದು ಅವನನ್ನು ಹುರಿದುಂಬಿಸಿ ಕಳುಹಿಸಿದ್ದೇನೆ.
 
 
ಹೀಗೆ ತಮ್ಮ ಬದುಕಿನಲ್ಲಿ ಬದಲಾವಣೆಗಳನ್ನು ಬಯಸಿದ ಅನೇಕರು ಹೊಸ ಹೊಸ ವಾತಾವರಣದಲ್ಲಿ ಸುಖದ ಅನ್ವೇಷಣೆಯಲ್ಲಿ ತೊಡಗುತ್ತಾರೆ.  ಈ ರೀತಿ ಪರಿವರ್ತನೆ ಬಯಸುವ ಮನುಷ್ಯನ ಮೂಲ ಪ್ರವೃತ್ತಿ ತನಗೆ ಸದ್ಯದಲ್ಲಿ ದೊರಕುತ್ತಿರುವುದಕ್ಕಿಂತ ಹೆಚ್ಚಿನದನ್ನು ಬಯಸುವುದಾಗಿದೆ.  ಮನುಷ್ಯ ಜೀವನ ನಿಂತ ನೀರಂತೆ  ಇರದೆ ಹರಿವ ನದಿಯಂತಿರಬೇಕೆನ್ನುವರು. ಬದಲಾವಣೆಗಳು - ಚರ್ವಿತ ಚರ್ವಣ - ದಂತಹ ಪರಿಸ್ಥಿತಿಯಿಂದ ಬದುಕಿನಲ್ಲಿ ನಿತ್ಯ ನೂತನವಾದ ಚೈತನ್ಯವನ್ನು ತಂದುಕೊಡುವಂತಿರಬೇಕೆನ್ನುವುದೂ ನಿಜ. ಆದರೂ ಸಹ ತಾನಿರುವ ನೆಲೆಯಲ್ಲೇ ಸುಖ, ಶಾಂತಿ, ನೆಮ್ಮದಿ, ಸಮಾದಾನ ಎಲ್ಲವನ್ನೂ ಕಾಣುವುದು ಒಳಿತಲ್ಲವೇ ಎಂದು ನಾನು ಯೋಚಿಸುತ್ತಿರುವಾಗಲೇ ಕವಿ ಗೋಪಾಲಕೃಷ್ಣ ಆಡಿಗರವರ ಕವನ - ಯಾವ ಮೋಹನ ಮುರಳಿ ಕರೆಯಿತು - ನೆನಪಾಯಿತು.  ಈ ಕವನದ ಒಂದೇ ಸಾಲಿನಲ್ಲಿ ಈ ಎಲ್ಲಾ ವಿಚಾರಗಳನ್ನೂ ಹೊಸೆದಿದ್ದಾರೆ.  ಆದೆಂದರೆ : ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ......
 
 
 
 
 

Comments