ಬೆ0ಬಿಡದ ಭೂತ ‍

ಬೆ0ಬಿಡದ ಭೂತ ‍

ರೀ ಹ್ಯಾಗು ನಾಳೆ ನಾಡಿದ್ದು ನಿಮಗೆ ರಜ ಇದೆ ಅಲ್ವ... ಹಾಗಾದ್ರೆ ಒಂದು ಕೆಲ್ಸ ಮಾಡ್ತೀರಾ..?



ಸರ್ಹೋಯ್ತು... ರಜ ಇದೆ ಸ್ವಲ್ಪ ರೆಸ್ಟ್ ತಗೊಳೋಣ ಅನ್ಕೊಂಡಿದ್ದೆ ಅದಕ್ಕೂ ಕಲ್ಲಾ..? ಏನಿವಾಗ ಪಿಚ್ಚರ್ಗೆ ಕರ್ಕೊಂಡು ಹೋಗ್ಬೇಕಾ ಇಲ್ಲ ನಿಮ್ಮಪ್ಪನ ಮನೆಗೆ ಹೋಗಿಬರ್ಬೇಕಾ...?



ಅದ್ಯಾವ್ದು ಅಲ್ಲ... ಆ ತುಳಸಿ ಗಿಡಕ್ಕೆ ಒಂದು ದಾರಿ ಮಾಡಿ. ಆವತ್ತು ತಂದಿದ್ದು ಹಾಗೆ ಸಣ್ಣ ಪ್ಲಾಸ್ಟಿಕ್ ಚೀಲದಲ್ಲೆ ಇದೆ, ಮಾಮೂಲಾಗಿ ಗಿಡ ಹಾಕ್ತಿವಲ್ಲ ಆ ತುಳಸಿ ಕಟ್ಟೆ ಅದರದ್ದು ಮಣ್ಣು ಹಳೆದಾಗಿದೆ, ಆ ಮಣ್ಣನ್ನು ತೆಗೆದು, ಅದಕ್ಕೆ ಸ್ವಲ್ಪ ಹೊಸ ಮಣ್ಣು ತಂದು ಹಾಕಿ, ತುಳಸಿ ಗಿಡನ ಅದರಲ್ಲಿ ನೆಟ್ಬೆಡಿ. ಇನ್ನು ತುಳಸಿ ಹಬ್ಬ ಬೇರೆ ಹತ್ರ ಬರ್ತಿದೆ.



ಅಷ್ಟೆ ತಾನೆ.... ಮಾಡೋಣ ಬಿಡು, ಹೇಗೂ ಎರಡು ದಿನ ರಜ ಇದೆ. ನಾಳೆನೊ ಇಲ್ಲ ನಾಡಿದ್ದೋ ಬೆಳಿಗ್ಗೇನೆ ಎದ್ದು ಆ ಕೆರೆ ಮುಂದಿನ ತೋಟದ ಸಾಲಿಗೆ ಹೋಗಿ ಹೊಸ ಮಣ್ಣು ತರ್ತಿನಿ, ಗಿಡನೂ ಚೆನ್ನಾಗಿ ಬರುತ್ತೆ ಹೊಸ ಮಣ್ಣಾದ್ರೆ.



ಅಂತು ನರಕ ಚತುರ್ದಸಿ, ಅಮಾವಾಸ್ಯೆ - ಬಲಿ ಪಾಡ್ಯಮಿ ಎರಡು - ಮೂರು ದಿನ ರಜಾಕ್ಕೆ ಸ್ವಲ್ಪ ಆರಾಮದ, ಕಾಸು ಖರ್ಚಿಲ್ಲದ ಕೆಲ್ಸ ಹೇಳಿದ್ದಾಳೆ, ಮನೆ ಯಜಮಾನ ಆಗಿ ಯಜಮಾನಿ ಮಾತನ್ನು ಅಷ್ಟೂ ಕೇಳ್ದಿದ್ರೆ ಹ್ಯಾಗೆ ಅನ್ಕೊಂಡು ರಜಾ ಮೂ(ಮೋ)ಡಿಗೆ ಸಿದ್ದಾನಾದೆ.



ಮೊದಲನೆ ದಿನ ನರಕ ಚತುರ್ದಸಿ, ರಜಾ ದಿನದ ಪ್ರಾರಂಭ ಅಲ್ಲವೆ....? ಎಚ್ಚರ ಆಗಿದ್ದೆ ನಿಧಾನ, ಆಗ್ಲೆ ಬೆಳಕಾಗಿದೆ....



ನನ್ನಾಕೆ ಕಾಫ಼ಿ ಲೋಟ ಕೈಗೆ ಕೊಟ್ಟು, ತದೇಕ ದೃಷ್ಟಿಯಿಂದ ನನ್ನನ್ನು ನೋಡುತ್ತಾ ನಿಂತಳು. ಅವಳು ಯಾವುದೆ ಪ್ರಶ್ನೆ ಕೇಳದ್ದಿದ್ದರೂ ಕೇವಲ ಅವಳ ನೋಟದಿಂದಲೆ ನನಗೆ ಪ್ರಶ್ನೆ ಅರ್ಥವಾಗಿತ್ತು ನಾನೆಂದೆ



.. ಇನ್ನು ಇಷ್ಟೊತ್ತಿನಲ್ಲಿ ಹೋಗಿ ಮಣ್ಣು ಹೊತ್ಕೊಂಬರ್ಲೆ...? ನೀನೇನು ಯೋಚ್ನೆ ಮಾಡ್ಬೇಡ ನಾಳೇನೂ ರಜಾ ಇದೆ ಅಲ್ವ, ನಾಳೆ ಗ್ಯಾರಂಟಿ ಬೆಳಿಗ್ಗೆ ಮುಂಚೆನೇ ಎದ್ದು ಮಣ್ ತಂದು......



ಇದನ್ನು ಕೇಳಿತ್ತಿದ್ದ ನನ್ನಾಕೆ ಕಣ್ಣನ್ನು ಕಿರುದಾಗಿಸಿ, ಮೂತಿಯನ್ನು ತಿರುಗಿಸಿ, ಕತ್ತನ್ನು ಅತ್ತಿತ್ತ ಅಲ್ಲಾಡಿಸುತ್ತಾ, ಕಾಫ಼ಿ ಲೋಟವನ್ನು ಕೈನಿಂದ ಕಸಿದು ಅಡುಗೆ ಮನೆ ಸೇರಿದ್ಲು.



ಅವಳ ನಟನೆ, ನಾಳೇನೂ ನೋಡೆ ಬಿಡೋಣ, ಅದೇನ್ಮಾಡ್ತಿರ ಅಂತ ಅನ್ನೊಹಾಗಿತ್ತು. ನನಗೆ ಒಂಥರ ಅನ್ನಿಸಿತು. ಛೆ... ಹಾಳು ನಿದ್ದೆ ಎಲ್ಲ ಕೆಲ್ಸ ಕೆಡಸಿಬಿಡ್ತು ಅನ್ಕೊಂಡೆ. ಇರ್ಲಿ ನಾಳೆ ಏನೇ ಆದ್ರೂ ಮಿಸ್ ಮಾಡ್ಕೋಬಾರ್ದು ಅನ್ಕೊಂಡು ಧೃಡ ಮನಸ್ಸು ಮಾಡಿ ನಿರ್ಧರಿಸಿದೆ.



ಮಾರನೆ ದಿನ ಬೆಳಿಗ್ಗೆ ೫ ಗಂಟೆಗೆ ಅಲಾರಾಂ ಇಟ್ಟು ಮಲಗಿದ್ದೆ, ಮನಸ್ಸಿನ ಧೃಡ ನಿಶ್ಚಯವೊ ಏನೋ ಕಡಕ್ ೪.೪೫ಕ್ಕೆ ಅಲಾರಾಂ ಹೊಡ್ಯೊಕ್ಕೆ ಮುಂಚೆನೆ ಎಚ್ರ ಆಯ್ತು. ಹಾಸಿಗೆಯಿಂದೆದ್ದು ಬೇಗ ಸಿದ್ದನಾಗಿ, ಹಿಂದೆ ಇಟ್ಟಿದ್ದ ಪ್ಲಾಸ್ಟಿಕ್ ಗೋಣಿ ಚೀಲ ತೆಗೆದು ಕೊಂಡು ಮನೆಯಿಂದ ಹೊರಬಿದ್ದೆ. ಹೆಚ್ಚು ಶಬ್ದ ಮಾಡದೆ ಮುಂಬಾಗಿಲಿಗೆ ಬೀಗ ಹಾಕಿ ಕಿಟಕಿಯಿಂದ ಬೀಗವನ್ನು ಒಳಗೆ ಹಾಕಿ, ಮಲಗಿರುವ ನನ್ನವಳಿಗಾಗಲಿ, ಮಗಳಿಗಾಗಲಿ ತಿಳಿಯದಂತೆ ಹೊರನಡೆದೆ. ಅವರಿಗೆ ಎಚ್ಚರ ಆಗುವುದರಲ್ಲಿ ತುಳಸಿಗಿಡ ನೆಟ್ಟು ಆಶ್ಚರ್ಯ ಉಂಟು ಮಾಡಿ ಬಿಡೋಣ ಅಂತ ಎಣಿಸಿ ಸಂಭ್ರಮಿಸಿತು ಮನಸ್ಸು.



ಅಂಗಡಿ ರಸ್ತೆ ಸೇರಿ ಬಲಕ್ಕೆ ತಿರುಗಿ, ಕೆರೆ ಏರಿಯಕಡೆಗೆ ನಡೆದು, ಊರಿನಿಂದ ಹೊರಕ್ಕೆ ತೋಟದ ರಸ್ತೆಯಕಡೆಗೆ ಸಾಗುವ ದಾರಿಯನ್ನು ಸವೆಸಿ ನಡೆದೆ. ಯಾರೂ ಇನ್ನೂ ಓಡಾಡುತ್ತಿಲ್ಲ. ಎಲ್ಲರಿಗೂ ರಜೆಯ ಮೂಡ್ ಬೇರೆ, ಜೊತೆಗೆ ಇನ್ನೂ ಹೊತ್ತುಮೂಡಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಹಾಲು ತೆಗೆದು ಕೊಂಡು ಹೋಗುವ ಮಂದಿ ಅಷ್ಟೆ.  ಊರಮುಂದಿನ ಆಂಜನೇಯ ಸ್ವಾಮಿಯ ದೇವಸ್ಥಾನವನ್ನು ದಾಟಿ ತೋಟದ ಸಾಲಿನೆಡೆಗೆ ಮುನ್ನಡೆದೆ. ಬೀದಿ ದೀಪದ ಬೆಳಕು ಹಿಂದೆ ದೂರವಾಗುತ್ತಾ......, ದೂರವಾಗುತ್ತಾ.... ಮುಂದೆ ಕತ್ತಲು ಹೆಚ್ಚಾಗುತ್ತಿತ್ತು. ಹುಶಾರಾಗಿ ಹೆಜ್ಜೆ ಇಡುತ್ತಾ ಎಚ್ಚರಕೆಯಿಂದ ನಡೆಯುತ್ತಿದ್ದೆ. ಮಲಗಿದ್ದ ಒಂದೆರಡು ಬೀದಿ ನಾಯಿಗಳು ತಮ್ಮ ನಿದ್ರಾಭಂಗವಾಗಿದ್ದಕ್ಕೆ ಸ್ವಲ್ಪ ಬೇಸರ ವ್ಯಕ್ತ ಪಡಿಸಿದರೂ ಹೆಚ್ಚೇನೂ ತೊಂದರೆ ಕೊಡಲಿಲ್ಲ, ಅದಕ್ಕೆ ಕಾರಣ ನನ್ನ ಗಾಂಭೀರ್ಯದ ನಡೆ ಕೂಡ.



ಕೆರೆ ಏರಿಯನ್ನು ದಾಟಿ ತಗ್ಗಿನ ರಸ್ತೆಯನ್ನು ಇಳಿದು, ತೋಟದ ಸಾಲಿನಲ್ಲಿ ನಡೆಯುತ್ತಿದ್ದೆ. ಬೆಳಗಿನ ತಣ್ಣನೆ ಹವ, ಹಿಂದಿನ ದಿನ ಮಳೆ ಬಂದಿರುವ ಕಾರಣ ಪಕ್ಕದ ಚರಂಡಿಯಲ್ಲಿ ಸ್ವಲ್ಪ ಹೆಚ್ಚಾಗೆ ಹರಿಯುತ್ತಿರುವ ಜುಳು ಜುಳು ನೀರಿನ ಶಬ್ದ, ನಿರ್ಜನವಾದ ಪ್ರದೇಶ. ಯಾವಗಲೂ ಗದ್ದಲಗಳ ಮದ್ಯೆ  ಇರುವ ಮನಸ್ಸಿಗೆ ಹಾಯೆನಿಸಿತು. ಇನ್ನುಮೇಲೆ ಈ ಕಡೆ ಆಗ್ಗಾಗೆ ಬೆಳೆಗ್ಗೆ ಮುಂಚೇನೆ ವಾಕ್ ಬಂದ್ರೆ ಚೆನ್ನಾಗಿರುತ್ತೆ, ಹಾಗೆ ಮಾಡೋಣ ಅನ್ಕೊಂಡು, ಅತ್ತ ಇತ್ತ ಕತ್ತಲಲ್ಲಿ ಮಣ್ಣನ್ನು ಅರಸಿ ನಡೆಯುತ್ತಿದ್ದೆ.



ಅರೆ ಇದೇನು ಇಲ್ಲಿ ಯಾವುದೋ ಹೊಸ ದಾರಿ ಮಾಡಿದ್ದಾರೆ ಈ ಕಡೆಗೆ ಇದು ಇರ್ಲಿಲ್ವೆ ಅಂತ ಎಣಿಸಿ ಆ ಕಡೆಗೆ ತಿರುಗಿದೆ. ದಾರಿ ಮಾಡಲಿಕ್ಕೆ ಹೊಸದಾಗಿ ಮಣ್ಣು ತಂದು ಹಾಕಿರುತ್ತಾರೆ, ಭಲೆ ಭಲೆ, ಕೆಲ್ಸ ಸಲೀಸಾಯ್ತು ಅಂತ, ಆ ದಾರಿಯನ್ನು ಹಿಡಿದು ಹೊರಟೆ.



ಸ್ವಲ್ಪ ದೂರ ಸಾಗಿದ ನನಗೆ ದೊಡ್ಡ ಮಣ್ಣಿನ ರಾಶಿ ನೋಡಿ ದೊಡ್ಡ ನಿಧಿ ಸಿಕ್ಕಷ್ಟು ಸಂತೋಷವಾಯ್ತು. ಹತ್ತಿರ ಹೋಗಿ ನೋಡಿದೆ.



ವೆರಿ ಗುಡ್, ಕೆಂಪು ಮಣ್ಣು, ಒಳ್ಳೆ ಫಲವತ್ತಾಗಿದೆ, ಪಾಟ್ಗೆ ತುಂಬಿ ಗಿಡ ನೆಟ್ರೆ ಸಖ್ಕತ್ತಾಗಿ ಬರುತ್ತೆ ಅನ್ಕೊಂಡು, ಕೆಳಗೆ ಕುಳಿತು, ಹತ್ತಿರ ಬಿದ್ದಿದ್ದ ಚೂಪು ಕಲ್ಲೊಂದನ್ನು ತೆಗೆದು ಕೊಂಡು ಮಣ್ಣಿನ ಗುಡ್ಡೆಯನ್ನು ಕೆತ್ತ ತೊಡಗಿದೆ.



``-- ಏ ರಾಜ... ಏನ್ಮಾಡ್ತಿದ್ಯೊ...--``



ಸ್ಪಷ್ಟವಾಗಿ ನನ್ನ ಹಿಂದೆ ಯಾರೊ ಕೇಳಿದ್ರು.....!!??!!??



ಮೈ ಎಲ್ಲ ಒಮ್ಮೆ ಜುಂ.. ಅಂತು.



ಇದು ಹೇಗೆ ಸಾದ್ಯ? ನನ್ನ ಹಿಂದೆ ಯಾರೂ ಬಂದ ಹಾಗೆ ನನ್ನ ಗಮನಕ್ಕೆ ಬಂದಿಲ್ಲ. ಯಾರಿದು...????. ಇಲ್ಲ ನನ್ನ ಭ್ರಮೆಯೊ....???? ಕಂಡಿತಾ ಸಾದ್ಯವಿಲ್ಲ ಅಷ್ಟು ಸ್ಪಷ್ಟವಾಗಿತ್ತು ಆ ಧ್ವನಿ. ಏನಾದರೂ ಸರಿ ಹೆದರಬಾರದು, ಹೊಡೆದಾಟಕ್ಕಾದರೂ ಸರಿ ಅಂತ ಕುಳಿತಲ್ಲೆ ದೈರ್ಯಮಾಡಿ , ಒಮ್ಮೆಗೆ  ಗರಕ್ಕನೆ ತಿರುಗಿ ದಡ್ಡನೆ ಎದ್ದು,- ರಜನಿಕಾಂತ್

ಸ್ಟೈಲ್ ನಲ್ಲಿ ಹಿಂದೆ ನೋಡಿದೆ. ಅರೆ ಯಾರೂ ಕಾಣುತ್ತಿಲ್ಲ.....



ಎದೇನಪ್ಪ ಇದು ಇಂಥಹ ಅನುಭವ....???!!?? ಛೆ ಛೆ ನನ್ನ ಭ್ರಮೆ ಅಷ್ಟೆ, ಜಾಸ್ತಿ ತಲೆ ಕೆಡಿಸಿ ಕೊಳ್ಳೋದು ಬೇಡ ಅನ್ನಿಸಿ, ಮತ್ತೊಮ್ಮೆ ಸುತ್ತಲೂ ಅವಲೋಖಿಸಿ, ಯಾರೂ ಇಲ್ಲದ್ದನ್ನು ಖಚಿತ ಪಡಿಸಿಕೊಂಡು, ಮನಸ್ಸಿಗೆ ದೈರ್ಯ ತುಂಬಿ ಕೊಳ್ಳುತ್ತಾ, ನಿಧಾನವಾಗಿ ಕೆಳಗೆ ಕುಳಿತು, ಮತ್ತೆ ಮಣ್ಣನ್ನು ಕೆತ್ತಿ ಕೆತ್ತಿ, ನಿಧಾನವಾಗಿ ನಾನು ತಂದಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬ ತೊಡಗಿದೆ. ನಾಲ್ಕು ಐದು ಸಾರಿ ಚೀಲಕ್ಕೆ ತುಂಬಿದ್ದೆ.



``--ಏ ರಾಜ... ಏನ್ಮಾಡ್ತಿದ್ಯೊ...--``



ಮತ್ತದೆ ಗೊಗ್ಗರು ದ್ವನಿ, ಒಳ್ಳೆ ಸಿನಿಮಾ ಆಕ್ಟರ್ ಜಗ್ಗೇಶ್ ಶೈಲಿಯಲ್ಲಿ. ನನ್ನಲ್ಲಿದ್ದ ದೈರ್ಯ ನಿಧಾನವಾಗಿ ಅಲುಗಾಡ ತೊಡಗಿತು. ಏನಿದು ಈ ವಿಚಿತ್ರ ಅನುಭವ....??!!??, `ಮಾರುತಿ` `ಜೈ ಬಡಬಾನಲ` ಪಾಹಿಮಾಂ ಪಾಹಿಮಾಂ, ಎಂದು ಮಾರುತಿಯನ್ನು ನೆನೆಯುತ್ತಾ, ಹಿಂತಿರುಗಿ ನೋಡಲಾ...? ಬೇಡವಾ....? ಎಂಬ ಗೊಂದಲದಲ್ಲಿದ್ದೆ.



ಹನುಮಾನ್ ಚಾಲೀಸ್ ಹೇಳಲು ಪ್ರಾರಂಭಿಸಿದೆ. ಇನ್ನು ಇಲ್ಲಿರುವುದು ಬೇಡ ಅನ್ನಿಸಿ, ಆಗಲೆ ಅರ್ಧ ಚೀಲದಷ್ಟು ತುಂಬಿದ್ದ ಮಣ್ಣಿನ ಚೀಲದ ಬಾಯನ್ನು ಸುತ್ತಿ, ಹೆಗಲಮೇಲೆ ಏರಿಸಿಕೊಂಡು, ಚಾಲೀಸ್ ಶ್ಲೋಕವನ್ನು ಹೇಳಿಕೊಳ್ಳುತ್ತಾ ದಾಪು ಹೆಜ್ಜೆಗಳೊಂದಿಗೆ ಮನೆಯ ಕಡೆಗೆ ಹೊರಟೆ.



ಇಳಿಜಾರಿನಲ್ಲಿ ನಡೆದು ಹೋಗುವಾಗ ಏನೂ ಅನ್ನಿಸಲ್ಲಿಲ್ಲ, ಆದರೆ ಈಗ ಮಣ್ಣಿನ ಭಾರ ಒಂದುಕಡೆ, ಎತ್ತರದ ರಸ್ತೆ, ಜೊತೆಗೆ ಇದ್ಯಾವುದೊ ವಿಚಿತ್ರ ಧ್ವನಿಯ ಅನುಭವದೊಂದಿಗೆ ಆಶ್ಚರ್ಯ ಮಿಶ್ರಿತ ಭಯ. ಏನೇ ಆದರೂ ಮನಸ್ಸಿಗೆ ಗಾಬರಿ ಮಾಡಿಕೊಳ್ಳಬಾರದು, ಏಕೆಂದರೆ ಭಯಗ್ರಸ್ತ ಮನಸ್ಸು ಇಲ್ಲದ ರಾಡಿ ಮಾಡಿಕೊಂಡುಬಿಡುತ್ತದೆ, ಎಂದು ಆಲೋಚಿಸುತ್ತಾ ದೈರ್ಯ ತುಂಬಿ ಕೊಂಡು ನಡೆಯುತ್ತಿದ್ದೆ. ಭಾರದೊಂದಿಗೆ ಎತ್ತರವನ್ನು ಹತ್ತುತ್ತಾ ಜೋರಾಗಿ ನಡೆಯುತ್ತಿರುವುದಕ್ಕೊ ಏನು ಬಹಳ ಬೇಗ ಆಯಾಸವೆನಿಸಿತು. ಸರಿ ಹೇಗೂ ಸಾಕಷ್ಟು ದೂರ ಸಾಗಿ ಬಂದಿದ್ದೇನೆ, ಇನ್ನೇನೂ ಭಯವಿಲ್ಲ ಎಂದೆಣಿಸಿ, ಚೀಲವನ್ನು ಕೆಳಗಿಟ್ಟು, ಸುಧಾರಿಸಿಕೊಳ್ಳೋಣವೆಂದು ನಿಂತೆ. ಸಾಕಷ್ಟು ಗಾಳಿ ಬೀಸುತ್ತಿದ್ದರೂ... ಸೃಷ್ಟಿಯಾಗಿದ್ದ ಸಂದರ್ಭದಿಂದ , ಹೆಚ್ಚು ಕಡಿಮೆ ಮೈ ಪೂರ್ತಿ ಬೆವತಿದ್ದೆ.



ಭಾರ ಇಳಿಸಿ ನಿಂತ ಮೇಲೆ ಸ್ವಲ್ಪ ಆರಾಮವೆನಿಸಿ, ಹೃದಯ ಬಡಿತ ಸ್ಥಿಮಿತಕ್ಕೆ ಬಂತು. ಅಷ್ಟರಲ್ಲಿ ಹನುಮಾನ್ ಚಾಲೀಸ್ ಶ್ಲೋಕವೂ ಪೂರ್ತಿಯಾಯ್ತು. ಸಧ್ಯ ಇನ್ನೇನೂ ಭಯವಿಲ್ಲ, ಇನ್ನೊಂದು ಸ್ವಲ್ಪ ಎತ್ತರದ ದಾರಿ ನಡೆದರೆ ಕೆರೆ ಏರಿ ಅದನ್ನು ದಾಟಿದರೆ ಊರಮುಂದಿನ ಮಾರುತಿ ದೇವಸ್ಥಾನ, ಅಷ್ಟೆ ಅಲ್ಲೆಲ್ಲ ಜನ ಸಂಚಾರವಿರುತ್ತದೆ, ಭಯ ಏಕೆ ಎಂಬ ಅಭಯವನ್ನು ಮನಸ್ಸಿಗೆ ಕೊಟ್ಟೆ.



ಹೋದ ಸರ್ತಿ ಅಮಾವಾಸ್ಯೆ ಟೈಂಗೆ ಮಂಜು ಅವ್ರು ಅವರಿಗಾದ ಅನುಭವ ಬರ್ದಿದ್ರು, ಆಮೇಲೆ ಪಾರ್ಥಸಾರಥಿಯವರು ಅದೆಂಥದೊ `ಬುರುಡೆ ನಾಟಿ` ಮತ್ತು `ಹೆಂಡ್ತಿಗೆ ಹೊಡಿಬೇಡ...`

ಅನ್ನೊ ದೆವ್ವದ ಕಥೆ, ಹಾಗೇನೆ ಜಯಂತ್ ಅವ್ರು ಬರ್ದಿದ್ದ ದೆವ್ವದ ಕಥೆ ಓದಿದ್ನಲ್ಲ, ಅದರ ಗುಂಗು ತಲೆನಲ್ಲಿ ನಿಂತಿತ್ತು ಅಂತ ಕಾಣುತ್ತೆ, ಹಾಗಾಗಿ ಏನೊ ಭ್ರಮೆ, ಈ ರೀತಿಯ ಅನುಭವವಾಗಿದೆ, ಆದರೂ ಆ ಸಮಯಕ್ಕೆ ಎಷ್ಟು ಹೆದರಿಕೆ ಅನ್ನಿಸುತ್ತದೆ, ನನ್ನ ಮಾರುತಿ ಯಾವತ್ತೂ ನನ್ನ ಕೈಬಿಡುವುದಿಲ್ಲ. ಆದರೂ ಹೋದ ಅಮಾವಾಸ್ಯೆಗೆ ಓದಿದ್ದು, ಮತ್ತೆ ಈ ಅಮಾವಾಸ್ಯೆ ಹೊತ್ತಿಗೆ ಈ ರೀತಿ ಎಫ಼್ಫ಼ೆಕ್ಟ್ ಆಗಲಿಕ್ಕೆ ಸಾಧ್ಯವಾ..? ಹೀಗೆ ಆಲೋಚಿಸುತ್ತಿದ್ದೆ ಆಗ ಇದ್ದಕ್ಕಿದ್ದಂತೆ ಹಿಂದಿನಿಂದ.



``--ಏ ರಾಜ... ಏನ್ಮಾಡ್ತಿದ್ಯೋ...--``



ಕಾಲಿನಿಂದ ತಲೆಯವರೆಗೂ ಮೈ ಜುಂ.... ಅಂತು...??!!??. ಇಲ್ಲಿದ್ದರೆ ಇನ್ನು ದೀಪಾವಳಿ ನೋಡೋಕ್ಕೂ ನಾನು ಇರ್ತಿನೋ ಇಲ್ವೊ ಅನ್ನಿಸಿ. ಹೊತ್ತು ತಂದಿದ್ದ ಮಣ್ಣಿನ ಚೀಲವನ್ನೂ ಅಲ್ಲೆ ಬಿಟ್ಟು, ಬೇರೆ ಯೋಚನೆಗೆ ಅವಕಾಶ ಕೊಡದೆ, ಒಂದೆ ಉಸುರಿಗೆ, ದೊಡ್ಡ ಹೆಜ್ಜೆಗಳನ್ನು ಹಾಕುತ್ತಾ ಅಲ್ಲಿಂದ ನಡೆದೆ ಅನ್ನುವುದಕ್ಕಿಂತ ಓಡಿದೆ.



ಓಡಿ ಬಂದಿದ್ದು ಸ್ವಲ್ಪ ದೂರವೆ ಆದರೂ ಒಂದು ಯೋಜನ ದೂರ ಬಂದಿರುವೆ ಅನ್ನಿಸಿ ಬಿಟ್ಟಿತು.

ಊರಮುಂದಿನ ಮಾರಿತಿ ದೇವಸ್ಥಾನ ತಲುಪಿದ ನನಗೆ ಗಜ ಬಲ ವಾಪಸ್ಸು ಬಂದಂತಾಯ್ತು. ದೇವಸ್ಥಾನದ ಮುಂದಿದ್ದ ಅರಳಿ ಕಟ್ಟೆಯ ಮೇಲೆ ಕುಳಿತು, ಆಂಜನೇಯನನ್ನು ನೆನೆಯುತ್ತಾ,



ಇದೇನಪ್ಪ ಮಾರುತಿ ನಿನ್ನಾಟ..? ಯಾವುದೀ ಭೂತ ಹೀಗೆ ನಾನ ಹಿಂದೆ ಬಿದ್ದಿದೆ....?!!?

ದೆವ್ವದ ಬಗ್ಗೆ ಮಂದಿ ಹೇಳುವ ಕಥೆ ಕೇಳಿದ್ದೆ ಆದರೆ ಇಂಥಹ ಅನುಭವ ಜನ್ಮದಲ್ಲೆ ಆಗಿದ್ದಿಲ್ಲ, ಏಕೆ ಹೀಗಾಯ್ತು...? ಏನಾದ್ರು ಸರಿ ಇನ್ಮೇಲೆ ಈ ಅಮಾವಾಸ್ಯೆ ಹತ್ರ ಬಂದಾಗ ಹುಶಾರಾಗಿರ್ಬೇಕು. ಈ ಕಡೆ ಬರೋದೆ ಬೇಡ ಹಾಗೇನೆ ಮನೇನಲ್ಲಿ ಈ ವಿಷ್ಯ ಹೇಳೋದು ಬೇಡಾ ಸುಮ್ನೆ ಗಾಬ್ರಿ ಆಗಿಬಿಡ್ತಾರೆ ಅಂತ ಮನಸ್ಸಿನಲ್ಲಿ ಯೋಚಿಸುತ್ತಿದ್ದೆ. ಅಷ್ಟರಲ್ಲಿ ಆಗಲೆ ಸುಮಾರು ಬೆಳಕಾಗಿತ್ತು, ಜನಸಂಚಾರ ಕೂಡ ಸ್ವಲ್ಪ ಜಾಗ್ರತವಾಗಿತ್ತು. ಸರಿ ನೋಡೋಣ ಅನ್ಕೊಂಡು ಮನೆಯ ಕಡೆ ಹೆಜ್ಜೆ ಹಾಕಿದೆ.



ಮನೆಯ ಬಳಿ ಆಗಲೆ ನನ್ನಾಕೆ ಮನೆ ಮುಂದೆ ರಂಗೋಲಿ ಚಿತ್ರ ಬಿಡಿಸುತ್ತಿದ್ದಳು. ಖಾಲಿ ಕೈನಲಿ ಬಂದ ನನ್ನನ್ನು ಆಶ್ಚರ್ಯ ಹಾಗು ಪ್ರಶ್ನಾರ್ತಕವಾಗಿ ನೋಡಿದಳು. ನಾನು ಯಾವದೆ ಮಾತನಾಡದೆ ಸೀದ ಮನೆಯ ಒಳಗೆ ನಡೆದು, ಧರಿಸಿದ್ದ ಪ್ಯಾಂಟ್ ಷರಟು ಬಿಚ್ಚಿ ಪಂಚೆ ತೊಟ್ಟು,  ಮತ್ತೊಮ್ಮೆ ಕೈ ಕಾಲು ಮುಖ ತೊಳೆದು ಕೊಂಡು, ದೇವರಮನೆಗೆ ಹೋಗಿ ಕೈ ಮುಗಿದು ಹೊರಬಂದು, ವಿಷ್ಯವನ್ನು ಮರೆಯಲಿಕ್ಕಾಗಿ, ಬಂದಿದ್ದ ದಿನ ಪತ್ರಿಕೆಯನ್ನು ಓದ ತೊಡಗಿದೆ. ಎರಡು ಮೂರು ಪುಟ ತಿರುವಿ ಹಾಕಿದ್ದೆ ಅಷ್ಟೆ.... ರೂಂ ನಿಂದ



``--ಏ ರಾಜ... ಏನ್ಮಾಡ್ತಿದ್ಯೊ...--``



ಮತ್ತದೆ ಸ್ವರ. ಇದೇನು ನನಗೆ ಮಾತ್ರ ಕೇಳುತ್ತಿದೆಯಾ...??,  ದೀವಾನ ಮೇಲೆ ಕುಳಿತು ತನ್ನ ಪಾಠ ಓದಿಕೊಳ್ಳುತ್ತಿದ್ದ ನನ್ನ ಮಗಳನ್ನು ಸೂಕ್ಷ್ಮವಾಗಿ ಗಮನಿಸಿದೆ,



ಕಣ್ಣು ಹುಬ್ಬನ್ನು ಮೇಲಕ್ಕೆ ಹಾರಿಸುತ್ತಾ ಏನು ಅನ್ನುವಂತೆ ಕೇಳಿದಳು.



ಪುಟ್ಟಿ ಈಗ ನಿಂಗೆ ಏನಾದ್ರೂ ಕೇಳಿಸ್ತಾ...?



ಹ್ಮು.... ಕೇಳಿಸ್ತು.... ಯಾಕೆ..?



ಏನು ಕೇಳಿಸ್ತು...?



ಅದೆ ``--ಏ ರಾಜ... ಏನ್ಮಾಡ್ತಿದ್ಯೊ...--`` ಅದೆ ಅನುಕರಣೆಯ ದ್ವನಿಯೊಂದಿಗೆ ಹೇಳಿದ್ಳು.



ಏನದು...?



ಅಯ್ಯೊ ನಿನ್ನ ಮೋಬೈಲ್ಗೆ ಯಾವ್ದೋ ಎಸ್ ಎಂ ಎಸ್ ಬಂದಿರ್ಬೇಕು ನೋಡು, ಹಬ್ಬಕ್ಕೆ ಯಾರಾದ್ರು ನಿನ್ನ ಫ಼್ರೆಂಡ್ಸ್ ವಿಶ್ ಮಾಡಿರ್ತಾರೆ.



ಅರೆ.. ನನ್ನ ಮೊಬೈಲ್ ಎಸ್ ಎಮ್ ಎಸ್ ಟೋನ್ ಇದಲ್ಲ ಬೀಪ್ ಅನ್ನತ್ತೆ..



ಏನಿಲ್ಲ, ನೆನ್ನೆ ಪಾಂಡು ಮಾವ ಬಂದಿತ್ತಲ್ಲ ಅವ್ರ ಮೊಬೈಲ್ನಲ್ಲಿ ಈ ಟೋನ್ ಇತ್ತು, ಚೆನ್ನಾಗಿದೆ

ಅಂತ ನಾನೆ ನಿನ್ನ ಮೊಬೈಲ್ಗೆ ಹಾಕಿ ಸೆಟ್ ಮಾಡಿ ಇಟ್ಟಿದ್ದೆ.... ಸಖ್ಖತ್ತಾಗಿದೆ ಅಲ್ವ..?



ಏ... ಥೂ ನಿನ್ನ, ಬೆಳಿಗ್ಗೆ ಬೆಳ್ಳಿಗ್ಗೆನೆ ನನ್ನ ಹೆದ್ರುಸ್ಬಿಟ್ಯಲಮ್ಮ.... ಇನ್ಮೇಲೆ ಹಾಗೇನಾದ್ರೂ ನನ್ನ ಮೊಬೈಲ್ನಲ್ಲಿ ಚೇಂಜಸ್ ಮಾಡಿದ್ರೆ ನಂಗೆ ಹೇಳಮ್ಮ.. ಗೊತ್ತಯ್ತಾ...?



ಯಾಕಪ್ಪ ಅಷ್ಟೊಂದು ಬಾಜಾರು ಮಾಡ್ಕೋತೀಯ ಏನಾಯ್ತು...?



ಬೆಳಿಗ್ಗೆ ನಾನು ಮಣ್ಣು ತರಲಿಕ್ಕೆ ಹೋಗಿದ್ದು, ಅಲ್ಲಿ ಮಣ್ಣು ಕೆತ್ತುವಾಗ ನನಗಾದ ಅನುಭವ, ಅದರಿಂದ ನಾನು ಹೆದರಿದ್ದು ಎಲ್ಲವನ್ನೂ ಚಾಚೂ ತಪ್ಪದೆ ಹೇಳಿದೆ.



ಅದನ್ನು ಕೇಳಿ ನನ್ನ ಮಗಳು, ನನ್ನ ಕಡೆ ಕೈ ತೋರಿಸುತ್ತಾ, - ಒಳ್ಳೆ ಪೆದ್ದಪ್ಪ ನೀನು ಪ್ಯಾಂಟ್ ಜೇಬಿನ ಮೊಬೈಲ್ ನಿಂದ ಶಬ್ದ ಬಂದ್ರೆ ಅಷ್ಟು ಗೊತ್ತಾಗಲ್ವ, ದೆವ್ವ ದೆವ್ವ ಅಂತ ಹೆದ್ರುಕೊಳ್ಳೋದಾ - ವಿಷಯವನ್ನು ಪುನಾರಾವರ್ತಿಸಿ ಮಗಳು ನಕ್ಕಿದ್ದೆ ನಕ್ಕಿದ್ದು.



ಒ....ಒ..... ನೀನೇನ್ಮಹ..?, ರಾತ್ರಿ ಹಿತ್ಲುಕಡೆ ಹೋಗೋಕ್ಕೆ ಇರೊ ಬರೊ ಲೈಟೆಲ್ಲ ಹಾಕ್ಕೊಳೋಲ್ವ..? ನಾನಾಗಿದುಕ್ಕೆ ಸರಿ ದೈರ್ಯವಾಗಿ ಬಂದಿದ್ದೀನಿ ಗೊತ್ತಾಯ್ತಾ...? ಹೋಗ್ಲಿ ಸಾಕು ಬಿಡು.. ಇನ್ನು ನಿಮ್ಮಮನಿಗೆ ಗೊತ್ತಾದ್ರೆ ದೊಡ್ಡ ಡಂಗೂರ ಸಾರ್ಬಿಡ್ತಾಳೆ...



ನಾನೇನು ಹೇಳೋದು ಅಲ್ಲಿ ಹಿಂದೆ ನೋಡು...



ಹಿಂತಿರುಗಿ ನೋಡ್ದೆ ಕೈಯಲ್ಲಿ ಪರಕೆ ಚೊಂಬು ಹಿಡಿದು ನನ್ನವಳು ದೆವ್ವ ಬಿಡಿಸುವವರ ತರದಿ ನಿಂತು ನನ್ನನ್ನು ನೋಡಿ ನಗುತ್ತಾ..



...ನಿಮ್ಮದು ಬಿಡಿ ಯವಾಗ್ಲೂ ಯಡವಟ್ಟೆ, ಆವಾಗೊಂಸರ್ತಿ ನಾನು ಕಥೆಗಾರ ಅಂತ ಕನಸುಕಂಡು ರೌಡಿಗಳ ಕೈಗೆ ಕನಸಿನಲ್ಲಿ ಸಿಕ್ಕಿ ಹಾಕಿಕೊಂಡು ಸುಸ್ತಾಗಿದ್ರ.. , ಇನ್ನು ಈಗ ಮೊಬೈಲ್ ಸೌಂಡ್ ಕೇಳಿ ದೆವ್ವ ಅಂತ ಬೇಸ್ತು ಬಿದ್ದು ಓಡಿ ಬಂದಿದ್ದೀರ... ನಾನು ಕಾಣೆನೆ ನಿಮ್ಮನ್ನ... ನಗುತ್ತಾ ಒಳ ನಡೆದಳು.



ನಗೆಯೊಂದಿಗೆ ಪ್ರಾರಂಭವಾದ ದೀಪಾವಳಿ ಸೊಗಸಾಗಿತ್ತು.....



ಅಂದಹಾಗೆ ನಿಮ್ಮ ದೀಪಾವಳಿ ಹೇಗಿತ್ತು.....?



ಮತ್ತೆ ಸಿಗೋಣ.....



- ಧನ್ಯವಾದಗಳು



- ನಿಮ್ಮವ, ರಾಮಮೋಹನ.....  







 

Rating
No votes yet

Comments