ಪ್ರಣಯಾಂಕುರ
ಪ್ರಣತಿಗಳ ಬೆಳಕಲಿ ಮೊಗವ ಕಂಡಿರುವೆ
ಪ್ರಣಯವಂಕುರಿಸಿ ಪರಿತಪಿಸುತಿರುವೆ
ಪರಿಪರಿಯ ಕನಸುಗಳ ನೀ ಬಿತ್ತಿರುವೆ
ಪರಮ ಸುಖವ ನೀನೆನಗೆ ನೀಡಿರುವೆ
ಪ್ರಣತಿಗಳ ಬೆಳಕಲಿ ನಾ ಕಂಡ ನಿನ್ನ ಮೊಗದ ಕಾಂತಿ
ಪ್ರಣತಿಗಳ ಬೆಳಕ ನಾಚಿಸುವ ಆ ನಿನ್ನ ದಿವ್ಯ ಕಾಂತಿ
ಪ್ರಣತಿಗಳ ನಡುವೆ ಮೆರೆದು ತಾ ಮರೆಯಾದ ಕಾಂತಿ
ಪ್ರಣತಿಗಳ ಬೆಳಕಿನಲಿ ನಾ ಅರಸುತಿಹ ಆ ಕಾಂತಿ
ಇರುಳ ಕತ್ತಲ ಸೀಳಿ ಇಣುಕಿಣುಕಿ ನೀ ನನ್ನ ಕಾಡುತಿಹೆ
ಇಕ್ಷುಧರನ ಸುಮ ಬಾಣದಿಂದೆನ್ನಇರಿಯುತಿರುವೆ
ಇಹದೊಳಗೆ ಕಾಣದಾ ಲೋಕಗಳ ತೋರುತಿರುವೆ
ಇಂದಲ್ಲ ಎಂದಿಗೂ ನೀ ನನ್ನವಳೆ ಎನಿಸುತಿರುವೆ
ನಿನ್ನ ಧ್ಯಾನದಲಿ ನನ್ನ ನಾನೇ ಮರೆತಿರುವೆ ಬೇಗ ಬಾ
ನೀನಿಲ್ಲದಿನ್ನೊಂದುಕ್ಷಣ ನಾ ನಿರಲಾರೆ ನೀ ಬೇಗ ಬಾ
ನನ್ನ ಆಂತರ್ಯವ ನೀನರಿತು ನನಗನುವಾಗು ಬಾ
ನೀ ಬೇಡಿದುದೆಲ್ಲವಾ ನಿನಗೆ ನಾ ಕೊಡುವೆ ಬೇಗ ಬಾ
ಎಲ್ಲೆಲ್ಲೂ ದರ್ಶನವನೆನಗೆ ನೀಡು ಬಾ
ಎತ್ತೆತ್ತ ನೋಡಲತ್ತತ್ತ ನೀ ತೋರು ಬಾ
ಎಂದೆಂದೂ ಮನೆ ಮನವ ತುಂಬು ಬಾ
ಎಂದೋ ಎನದೆ ಇಂದೇ ಓಡೋಡು ಬಾ
ಪ್ರಭಾಕರನಂತೆ ನೀ ಪ್ರಭೆಯ ಬೀರಿ ಬಾ
ಪ್ರಣತಿಯಾಗಿ ನನ್ನ ಬಾಳ ಬೆಳಗು ಬಾ
ಪ್ರಣಯ ಭಿಕ್ಷೆಯ ನೀಡೆನ್ನ ತಣಿಸು ಬಾ
ಪ್ರಣಯಿನಿಯಾಗಿ ನನ್ನೊಡನೆ ಬಾಳು ಬಾ
***********
Comments
ಉ: ಪ್ರಣಯಾಂಕುರ
In reply to ಉ: ಪ್ರಣಯಾಂಕುರ by neela devi kn
ಉ: ಪ್ರಣಯಾಂಕುರ