ವಿಶ್ವದ ೭೦೦ ನೇ ಕೋಟಿ ಮಗುವಿಗೆ ನೀವು ಬರೆಯಲಿರುವ ಸಂದೇಶವೇನು?

ವಿಶ್ವದ ೭೦೦ ನೇ ಕೋಟಿ ಮಗುವಿಗೆ ನೀವು ಬರೆಯಲಿರುವ ಸಂದೇಶವೇನು?

ನಾಳೆ ಸೋಮವಾರ ಹುಟ್ಟಲಿರುವ ಮಗು ಪ್ರಪಂಚದ ೭೦೦ ನೇ ಕೋಟಿಯದಂತೆ. ೧೨ ವರ್ಷಗಳ ಹಿಂದೆ ೬೦೦ ಕೋಟಿಯಿದ್ದದ್ದು ಈಗ ೭೦೦ ಕೋಟಿಗೆ ಭಡ್ತಿ. ಈ ವರ್ಷ ಹುಟ್ಟಲಿದ್ದ ಏಳು ಕೋಟಿ ಎಂಭತ್ತು ಲಕ್ಷ ಮಕ್ಕಳಲ್ಲಿ ಸೋಮವಾರದಂದು ಹುಟ್ಟಲಿರುವ ಮಗು ೭೦೦ ಕೋಟಿಯದು. ಭರ್ತಿ ಏಳು ಬಿಲ್ಲಿಯನ್. ವಿರಾಮ ಖುರ್ಚಿ ಪಂಡಿತರಿಗೆ ಈ ಸುದ್ದಿ ಒಂದು ಸುಗ್ಗಿ. ತಮಟೆ ಬಾರಿಸಲು ಆರಂಭಿಸುತ್ತಾರೆ ಜನಸಂಖ್ಯೆಯ ವಿಪರೀತ ವೃದ್ಧಿ ಮತ್ತು ಅದು ತರಬಹುದಾದ ಆಪತ್ತುಗಳ, ಅನಾಹುತಗಳ ವರ್ಣನೆಯೊಂದಿಗೆ.     



ಜನಸಂಖ್ಯೆ ತಡೆಯಲು ಇರುವ ನೂರ ಒಂದು ಅಥವಾ ಸಾವಿರದ ಒಂದು ಉಪಾಯಗಳ ಜೊತೆ ಮತ್ತೊಂದು ಉಪಾಯ ಈಗ ಸೇರಿಕೊಂಡಿದೆ. ಮಹಿಳೆಯರಿಗೆ ಸಂತಾನೋತ್ಪತ್ತಿ ಫ್ಯಾಕ್ಟರಿಯ ಉಸ್ತುವಾರಿ ವಹಿಸಿದರೆ ಜನಸಂಖ್ಯೆ ತಗ್ಗ ಬಹುದಂತೆ. ದೇವರೇ ಬಲ್ಲ. ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣಿನ ಧ್ವನಿ ಜೋರಾದಾಗ ಸಂತಾನೋತ್ಪತ್ತಿ ತಂತಾನೇ ನಿಧಾನ ಆಗಬಹುದು ಅನ್ನೋ ಆಶಯ. ಜನಸಂಖ್ಯೆ ಏರಿಕೆ ಈಗ ಇರುವ ಸಂಪನ್ಮೂಲಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಪಂಡಿತರ ಒಂದು ಗುಂಪು ಹೇಳುತ್ತಿದ್ದರೆ ಮತ್ತೊಂದು ಗುಂಪಿಗೆ ಈ ಥಿಯರಿ ನಥಿಂಗ್ ಬಟ್ ಟ್ರಾಶ್. ಯಾರನ್ನು ನಂಬುವುದು?



ಕ್ಷಿಪ್ರ ಗತಿಯಲ್ಲಿ ಮುಪ್ಪಾಗುತ್ತಿರುವ ಜಪಾನ್

ಒಂದು ಕಡೆ ಏರುತ್ತಿರುವ ಜನಸಂಖ್ಯೆ ವಿಶೇಷಜ್ಞರ ಆತಂಕವನ್ನು ಹೆಚ್ಚಿಸುತ್ತಿದ್ದರೆ ಮತ್ತೊಂದು ಕಡೆ ತಮ್ಮ ದೇಶದ ಜನಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಡಿಸ್ಕೌಂಟು, ಅದರ ಜೊತೆ ಟೈಮ್ ಆಫು ಮುಂತಾದುವುಗಳನ್ನು ಯುವಜನರ ಮುಂದೆ ಇಡುತ್ತಿರುವ ಬೆಳವಣಿಗೆ. ಈ ಬೆಳವಣಿಗೆ ಎರಡನೇ ವಿಶ್ವ ಮಹಾಯುದ್ಧದಲ್ಲಿ ಹೇಳಹೆಸರಿಲ್ಲದಂತೆ ನಿರ್ನಾಮವಾದರೂ ಪವಾಡಸದೃಶವಾಗಿ ಶ್ರೀಮಂತಿಕೆಯಿಂದ ಕಂಗೊಳಿಸಿದ ಜಪಾನ್ ದೇಶದ್ದು. time off ಏಕೆಂದರೆ ಮಕ್ಕಳನ್ನು ಹುಟ್ಟಿಸಲು, ದೊಡ್ಡ ಪರಿವಾರಕ್ಕಾಗಿ ಅಂಗಡಿ ಮುಂಗಟ್ಟು ಗಳು ರಿಯಾಯಿತಿಯನ್ನು ಘೋಷಿಸುತ್ತಿವೆ ಜಪಾನ್ ದೇಶದಲ್ಲಿ. ಹುಟ್ಟುವ ಪ್ರತೀ ಮಗುವಿನ ಮೇಲೂ ಹಣಕಾಸಿನ ಸಹಾಯ ಕೊಡ ಮಾಡುತ್ತಿದೆ ಅಲ್ಲಿನ ಸರಕಾರ. ಈ ಕ್ರಮಗಳ ಮೂಲಕ ಏನಾದರೂ ಮಾಡಿ, ಹೇಗಾದರೂ ಮಾಡಿ, ಜನಸಂಖ್ಯೆ ಹೆಚ್ಚಿಸಿರಯ್ಯ ಎಂದು ಅಲ್ಲಿನ ಸರಕಾರದ ವಿಜ್ಞಾಪನೆ. ನಮ್ಮ ದೇಶ one is fun ಎಂದು ಊಳಿಡುತ್ತಿದ್ದರೆ, ಜಪನೀಯರ ಆಕ್ರಂದನ more please ಎಂದು.  ಪ್ರಪಂಚ ವೈರುಧ್ಯಗಳ ಸಂತೆ, ಅಲ್ಲವೇ?



 ಬಹುಪಾಲು ಜಪನೀಯರಿಗೆ ಸಂತಾನ ವೃದ್ಧಿ ಅನ್ನೋದು ‘to do list’ ನ ಕಟ್ಟಕಡೆಯ ಎಂಟ್ರಿ. ಇದನ್ನು ಟಾಪ್ ಪ್ರಯಾರಿಟಿ ಮಾಡಲು ಸರಕಾರದ ಸರ್ಕಸ್ಸು. ಯುವಜನರ ಒತ್ತು ಪ್ರೋಗ್ರೆಸ್ ಕಡೆ, ಪ್ರೊಕ್ರಿಯೇಶನ್ ಕಡೆ ಅಲ್ಲ. ಏಕೆಂದರೆ ಅಲ್ಲಿ ವಿವಾಹ ದುಬಾರಿ. ಪ್ರತೀ ವಿವಾಹಕ್ಕೆ ಸುಮಾರು ೨೦ ಲಕ್ಷ ರೂಪಾಯಿ ಖರ್ಚು. ಮದುವೆಯಾದ ಮೇಲೆ ಮಗು ಹುಟ್ಟಿದರೆ ಮಗುವಿನ ತಾಯಿಗೆ ಒಳ್ಳೆಯ ವರಮಾನ ಕೊಡುವ ಕೆಲಸ ಸಿಗೋದು ಕಷ್ಟ. ಅಮೇರಿಕಾ ಅಥವಾ ಅಇರೋಪ್ಯ ದೇಶಗಳ ಹಾಗೆ ಮದುವೆಯಾಗದೆ ಸಂತಾನೋತ್ಪತ್ತಿ ಜಪಾನಿನಲ್ಲಿ ವಿರಳ. ಅಷ್ಟು ಮಾತ್ರವಲ್ಲ ಜಪಾನಿನಲ್ಲಿ ದೀರ್ಘಾಯುಷಿಗಳು ಹೆಚ್ಚು. ಮೇಲಿನ ಕಾರಣಗಳನ್ನು ಕೂಡಿಸಿ ನೋಡಿದಾಗ ಜಪಾನಿನಲ್ಲಿ ಹುಟ್ಟುವ ಮಕ್ಕಳ ಸಂಖ್ಯೆ ಅತಿ ಕಡಿಮೆ.     

ಜನಸಂಖ್ಯೆ ವೃದ್ಧಿಗೆ ಒತ್ತು ಕೊಡುತ್ತಿರುವ ಮತ್ತೊಂದು ದೇಶ ಸ್ಪೇನ್. ಸ್ಪೇನ್ ದೇಶದಲ್ಲಿ ಹುಟ್ಟುವ ಪ್ರತೀ ಮಗುವಿಗೆ ಸುಮಾರು ಒಂದೂವರೆ ಲಕ್ಷ ರೂಪಾಯಿಗಳನ್ನು ಸರಕಾರ ನೀಡುತ್ತದೆ.     



ಸ್ವರ್ಗವನ್ನು ಕಲ್ಪಿಸಿಕೊಳ್ಳದಿರು

ತಟ್ಟು ಚಪ್ಪಾಳೆ ಪುಟ್ಟ ಮಗು, ಇಕೋ ಕೈ, ತಕೋ ಕೈ, ತಟ್ಟು ಚಪ್ಪಾಳೆ ಪುಟ್ಟ ಮಗು... ಈ ಕವಿತೆಯನ್ನು ೭೦೦ ನೇ ಕೋಟಿ ಮಗುವಿಗೆ ಹಾಡಿ ಕೇಳಿಸಲು ಸಲ್ಮಾನ್ ರುಶ್ಡಿ ತಯಾರಲ್ಲ. ೭೦೦ ನೇ ಕೋಟಿ ಮಗುವಿಗೆ ನೀವು ಕೊಡುವ ಸಂದೇಶವೇನು ಎಂದು ಕೇಳಿದಾಗ ಬುಕರ್ ಪ್ರಶಸ್ತಿ ವಿಜೇತ, ವಿವಾದಾಸ್ಪದ ಲೇಖಕ ಹೇಳಿದ್ದು “(ಧರೆಯ ಮೇಲೆ) ಸ್ವರ್ಗವನ್ನು ಕಲ್ಪಿಸಿಕೊಳ್ಳದಿರು” ಎಂದು. imagine no heaven.



ಸಂಪನ್ಮೂಲಗಳನ್ನು ನುಂಗಲೆಂದೇ ಹುಟ್ಟುತ್ತವೆ ಮಕ್ಕಳು ಎಂದು ನಂಬುವವರು ಇದಕ್ಕಿಂತ ಒಳ್ಳೆಯ ಮಾತನ್ನು ಆಡಲಾರರು. ಸುಮಾರು ಐದು ದಶಕಗಳಿಂದಲೂ ನಾವು ಕೇಳುತ್ತಾ ಬಂದಿದ್ದು, ಜನಸಂಖ್ಯೆ ಏರುತ್ತಿದೆ, ವಾತಾವರಣ ಬದಲಾಗುತ್ತದೆ, ತಿನ್ನಲು ಏನೂ ಇರುವುದಿಲ್ಲ, ಹಸಿವಿನಿಂದ ಜನ ಸಾಯಲಿದ್ದಾರೆ, ಬರ ಬಂದೆರಗಲಿದೆ. ಏರುತ್ತಿರುವ ಜನಸಂಖ್ಯೆ ಕಾರಣ ನಮ್ಮ ಗ್ರಹ ಇಕ್ಕಟ್ಟಾಗುತ್ತಿದೆ, ಹಾಗೇ ಹೀಗೆ...ಆದರೆ ಅಂಥ ಎಚ್ಚರಿಕೆಗಳು, ‘caveat emptor’ ಗಳು  ಪ್ರಕಟವಾದ ಕಾಗದಗಳ ಜೊತೆ ರದ್ದಿ ಸೇರಿದವೆ ವಿನಃ ಯಾವುದೇ ಕೇಡುಗಾಲ ಬಂದೆರಗಲಿಲ್ಲ.   



ಈ ಲೇಖನದ ಕರ್ತೃವಿನ ಸಂದೇಶ

ಕಂದಾ ಸುಸ್ವಾಗತ, ನಮ್ಮ ಭವ್ಯ ಧರೆಗೆ. ಶತಮಾನಗಳಿಂದ ಪೂರ್ವದಿಂದ ಹುಟ್ಟುತ್ತಿರುವ ಸೂರ್ಯ ಮತ್ತು ಪಶ್ಚಿಮದಲ್ಲಿ ಮುಳುಗುವ ಸೂರ್ಯನ ನಡಿಗೆಯ ನಿಯಮವನ್ನು ನಾವು ಬದಲಿಸಲಿಲ್ಲ. ಉಸಿರಾಡುವ ಗಾಳಿ ಎಂದಿನ ಹಾಗೇ ಈಗಲೂ ತೆರಿಗೆಯಿಂದ ಮುಕ್ತ. ಹೌದು ನಿನ್ನಿಂದ ಎರವಲು ಪಡೆದಿದ್ದ ಭೂಮಿಯ ಮೇಲೆ ನಮ್ಮ ಅಹಂ ಮತ್ತು ಸ್ವಾರ್ಥದ ಕಾರಣ ಸಾಕಷ್ಟು ಅನಾಚಾರ ಎಸಗಿದ್ದೇವೆ. ನಮ್ಮ ಮಣ್ಣನ್ನು ಮೊನ್ಸಾಂಟೊ ಕಂಪೆನಿಗೆ ಗುತ್ತಿಗೆ ಕೊಟ್ಟು ಉಸಿರುಗಟ್ಟಿಸಿದ್ದೇವೆ. ಕಾಯಿ ಹಣ್ಣಾಗಲು ನಿಸರ್ಗ ನಿಯಮ ತೆಗೆದುಕೂಳ್ಳುವ ಸಮಯಕ್ಕೆ ಕಾಯುವ ವ್ಯವಧಾನ ನಮ್ಮಲ್ಲಿಲ್ಲ, ಅದಕ್ಕೆ. ಆದರೂ, ಇವೆಲ್ಲದರ ನಡುವೆಯೂ, ಕೆಲವೊಂದು ಒಳ್ಳೆಯ ಅವಿಷ್ಕಾರಗಳನ್ನೂ ನಿನಗಾಗಿ ತಯಾರಿಸಿ ಇಟ್ಟಿದ್ದೇವೆ. ನೀನು ಜನರೊಂದಿಗೆ ಬೇರೆಯದೇ, ಯಾವುದೇ ಸಭೆ ಸಮಾರಂಭ ಗಳಿಗೂ ಹೋಗುವ ತಾಪತ್ರಯವಿಲ್ಲದೆ ಮನೆಯಲ್ಲೇ ಕೂತು ಜೇಡನ ಬಲೆಯೊಳಕ್ಕೆ ಅವಿತುಕೊಂಡು ಮೊಬೈಲ್, ಫೇಸ್ ಬುಕ್, ಟ್ವಿಟ್ಟರ್, ಎಸ್ಸೆಮ್ಮೆಸ್, ಐ-ಪ್ಯಾಡ್, ಐ-ಪಾಡ್, ಇ-ಮೇಲ್ ಮುಂತಾದ ಸಾಮಾಜಿಕ ತಾಣ, ಅನುಕೂಲಗಳ ಮೂಲಕ ಜನರೊಂದಿಗೆ ನೇರವಾಗಿ ಬೆರೆಯದೆ ವ್ಯವಹರಿಸಲು ಅನುಕೂಲ ಮಾಡಿದ್ದೇವೆ. ಜನರೊಂದಿಗೆ ಬೆರೆತಾಗ ತಾನೇ ತಾಪತ್ರಯ? ಇಂಥ ಸುಂದರ ಪ್ರಪಂಚಕ್ಕೆ ನಿನಗಿದೋ ನನ್ನ ಸ್ವಾಗತ. ನೆನಪಿರಲಿ, ವಿಶ್ವ ಸಮಾನ ಅವಕಾಶ ನೀಡುವ fair ground ಅಂತೂ ಅಲ್ಲ, ಇದು ದಗಲಬಾಜಿಗಳ, ಸುಳ್ಳರ, ಕಪಟ ಜನರ, ಪ್ರತೀ ಕಾರ್ಯಕ್ಕೂ ಕಮಿಷನ್ ವಾಸನೆಯ ಬೆನ್ನು ಹತ್ತಿ ಹೋಗುವ ಅತಿ ದೊಡ್ಡ fair (ಜಾತ್ರೆ). ಲಂಚಗುಳಿತನದ ಒಂದು ಸುಂದರ eco system ಅನ್ನು  ಹುಟ್ಟುಹಾಕಿದ್ದೇವೆ.  ಲಕ್ಷಾಂತರ ವರ್ಷಗಳ ಕಾಲ ನಿರಂತರ ಪ್ರಯಾಣ ಮಾಡಿದ ವೀರ್ಯದ ಫಲ ನೀನಾಗಿರೋದರಿಂದ ಈ ಪ್ರಪಂಚದಲ್ಲಿ ಬಾಳಿಬದುಕಲು ನಿನಗೆ ಕಷ್ಟವೇನೂ ಆಗಲಿಕ್ಕಿಲ್ಲ, you will effortlessly adapt.     



ಬೀಳ್ಕೊಡುವ ಮೊದಲು ಒಂದು ಮಾತು ನೆನಪಿರಲಿ.....ಯಾರು ತಾವು ಕಾಣುವ ಸುಂದರ ಕನಸನ್ನು ನಂಬುವರೋ ಅವರಿಗೆ ಮಾತ್ರ ಭವಿಷ್ಯ ಸೇರಿದ್ದು; “ಸ್ವರ್ಗ ಕಲ್ಪಿಸಿಕೊಳ್ಳದಿರು” ಎಂದು ಹೇಳುವ ಮತಿಹೀನರಿಗಂತೂ ಖಂಡಿತಾ ಅಲ್ಲ. ಧುಮುಕು ಧರೆಗೆ ಧೈರ್ಯವಾಗಿ.   



ಚಿತ್ರ ಸೌಜನ್ಯ: ಇಂಗ್ಲೆಂಡಿನ “ಗಾರ್ಡಿಯನ್” ದಿನಪತ್ರಿಕೆ.