ಕೆಳದಿ ಕವಿಮನೆತನ: ಬೆಂಗಳೂರು ಸಮಾವೇಶದಲ್ಲಿಟ್ಟ ಗಟ್ಟಿ ಹೆಜ್ಜೆಗಳು

ಕೆಳದಿ ಕವಿಮನೆತನ: ಬೆಂಗಳೂರು ಸಮಾವೇಶದಲ್ಲಿಟ್ಟ ಗಟ್ಟಿ ಹೆಜ್ಜೆಗಳು

     ಕವಿಮನೆತನದ ಹಿಂದಿನವರ ಸಾಧನೆಗಳನ್ನು ನೆನೆಯುವ, ಅವರ ಹಿರಿಮೆ-ಗರಿಮೆ ಸಾರುವ, ಅವರ ಕೃತಿಗಳನ್ನು ಪರಿಚಯಿಸುವ, ಆ ಮೂಲಕ ಇಂದಿನ ಪೀಳಿಗೆಗೆ ಪ್ರೇರಣೆ ನೀಡುವ ಉದ್ದೇಶದಿಂದ ಪ್ರಾರಂಭಗೊಂಡ ಸಮಾವೇಶಕ್ಕೆ ಪೂರಕವಾಗಿ ಬೆಂಗಳೂರಿನ ಜೆ.ಪಿ.ನಗರದ ೨ನೆಯ ಹಂತದಲ್ಲಿರುವ ಮಾ ಆನಂದಮಯಿ ಆಶ್ರಮದ ಸಭಾಭವನದಲ್ಲಿ ದಿನಾಂಕ ೨೮-೧೨-೨೦೦೮ರಂದು ನಡೆದ ಕವಿಮನೆತನದ ಹಾಗೂ ಬಂಧು-ಬಳಗದವರ ಮೂರನೆಯ ಸಮಾವೇಶದಲ್ಲಿ ಈ ದಿಸೆಯಲ್ಲಿ ಕೆಲವು ಗಟ್ಟಿ ಹೆಜ್ಜೆಗಳನ್ನು ಇರಿಸಲಾಯಿತು. ವೇದಿಕೆಯಲ್ಲಿ ಡಾ. ಕೆಳದಿ ಕೃಷ್ಣಜೋಯಿಸ್, ಶ್ರೀಯುತರಾದ ಕವಿ ವೆಂಕಟಸುಬ್ಬರಾಯರು, ಸಾ.ಕ.ಕೃಷ್ಣಮೂರ್ತಿ, ಸಮಾವೇಶದ ಆಯೋಜಕರಾದ ಶ್ರೀಮತಿ ಮತ್ತು ಶ್ರೀ ಎಮ್.ಎಸ್.ನಾಗೇಂದ್ರ ಹಾಗೂ ಶ್ರೀಮತಿ ಪದ್ಮಾವತಮ್ಮ ಸುಬ್ಬರಾಯರು ಉಪಸ್ಥಿತರಿದ್ದರು. ಸಾಂಪ್ರದಾಯಿಕವಾಗಿ ಜ್ಯೋತಿ ಬೆಳಗುವುದು, ವೇದಘೋಷ, ಪ್ರಾರ್ಥನೆಗಳ ನಂತರ ಹಿಂದಿನ ವರ್ಷ ನಿಧನರಾದವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. 

'ಕವಿಕಿರಣ' ಮೂಡಿತು!

     ಶ್ರೀ ಕವಿನಾಗರಾಜರ ಸಂಪಾದಕತ್ವ ಮತ್ತು ಶ್ರೀ ಕವಿಸುರೇಶರ ಸಹಸಂಪಾದಕತ್ವದ ಕವಿಮನೆತನದ ಪತ್ರಿಕೆ ಕವಿಕಿರಣದ ಪ್ರಥಮ ಸಂಚಿಕೆಯನ್ನು ೯೪ ವರ್ಷದ ವಯೋವೃದ್ಧ, ಜ್ಞಾನವೃದ್ಧರಾದ ಶ್ರೀ ಹೆಬ್ಬೈಲು ಕೃಷ್ಣಮೂರ್ತಿಯವರು ಬಿಡುಗಡೆಗೊಳಿಸಿ ಶುಭ ಕೋರಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕವಿನಾಗರಾಜ್ 'ಕವಿಕಿರಣ' ಪತ್ರಿಕೆಯ ಧ್ಯೇಯೋದ್ದೇಶಗಳನ್ನು ವಿವರಿಸುತ್ತಾ ಪತ್ರಿಕೆಯು ಕೇವಲ ಕವಿಮನೆತನದವರಿಗಾಗಿ ಆಗಿರದೆ ಅಪೂರ್ವ ಮತ್ತು ಮಹತ್ವದ ವಿಷಯಗಳನ್ನು ಒಳಗೊಂಡಿರುವುದರಿಂದ ಎಲ್ಲಾ ಇತಿಹಾಸಾಸಕ್ತರು, ಅಭ್ಯಾಸಿಗಳಿಗೆ ಪ್ರಯೋಜನಕಾರಿಯಾಗಿರುವುದಲ್ಲದೆ, ಸಜ್ಜನಶಕ್ತಿಯ ಜಾಗರಣೆಯ ಉದ್ದೇಶ ಹೊಂದಿದೆಯೆಂದರು. ಹಿಂದಿನವರ ಕೃತಿಗಳು, ಸಾಧನೆಗಳನ್ನು ಪರಿಚಯಿಸುವುದರೊಂದಿಗೆ ಮನೆತನದವರಲ್ಲಿ ಹುದುಗಿರುವ ಪ್ರತಿಭೆಯನ್ನು ಪ್ರೇರಿಸಿ ಹೊರತರುವಲ್ಲಿ ಸಹಕಾರಿಯಾಗುವುದೆಂದರು. 



'ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ' ಪುಸ್ತಕದ ಬಿಡುಗಡೆ:

     ಕವಿಮನೆತನದ ಏಳನೆಯ ಪೀಳಿಗೆಗೆ ಸೇರಿದ ನನ್ನ ಅಜ್ಜ ಶ್ರೀ ಕವಿಸುಬ್ರಹ್ಮಣ್ಯಯ್ಯನವರ ಜೀವನ, ಸಾಧನೆಗಳ ಕುರಿತು ಬೆಳಕು ಚೆಲ್ಲುವ ಕೃತಿ ಕವಿ ಸುಬ್ರಹ್ಮಣ್ಯಯ್ಯ ಪುಸ್ತಕ ಬಿಡುಗಡೆಯಾಯಿತು. ವಿಶೇಷವೆಂದರೆ ಈ ಪುಸ್ತಕದ ಕರ್ತೃ ನಾನಾಗಿದ್ದರೆ, ಬಿಡುಗಡೆ ಮಾಡಿದವರು ನನ್ನ ತಂದೆ ಶ್ರೀ ಕವಿವೆಂಕಟಸುಬ್ಬರಾಯರು. ಈ ಪುಸ್ತಕದ ಪ್ರಕಟಣೆಯ ಪೂರ್ಣ ಖರ್ಚುವೆಚ್ಚಗಳನ್ನು ಭರಿಸಿದವರು ನನ್ನ ಮಕ್ಕಳು ಬಿಂದು ಮತ್ತು ವಿನಯರವರು. ಸಮಾವೇಶದಲ್ಲಿ ಬಂದಿದ್ದ ಎಲ್ಲರಿಗೆ ಮತ್ತು ಬಾರದಿದ್ದ ಎಲ್ಲಾ ಬಂಧುಗಳಿಗೆ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು. 

'ಕವಿ ಕುಟುಂಬಗಳವರ ಮತ್ತು ಬಂಧು-ಬಳಗದವರ ವಿಳಾಸ, ದೂರವಾಣಿ ವಿವರಗಳ ಕೈಪಿಡಿ' ಬಿಡುಗಡೆ:

     ಸಹೋದರ ಕವಿಸುರೇಶ ಶ್ರಮಪಟ್ಟು ವಿವರ ಸಂಗ್ರಹಿಸಿ ಸ್ವಂತ ವೆಚ್ಚದಲ್ಲಿ ಪ್ರಕಟಿಸಿದ ಕವಿ ಕುಟುಂಬಗಳವರ ಮತ್ತು ಬಂಧು-ಬಳಗದವರ ವಿಳಾಸ, ದೂರವಾಣಿ ವಿವರಗಳ ಕೈಪಿಡಿಯನ್ನು ಬಿಡುಗಡೆ ಮಾಡಿದ ಡಾ. ಕೆಳದಿ ಕೃಷ್ಣಜೋಯಿಸರು ಸುರೇಶರ ಈ ಕೆಲಸ ಅನುಕರಣೀಯವೆಂದರು. ಎಲ್ಲಾ ಬಂಧು-ಬಳಗದವರಿಗೆ ಈ ಕೈಪಿಡಿಯನ್ನು ಉಚಿತವಾಗಿ ಕೊಡಲಾಯಿತು. ಪರಸ್ಪರರ ಸಂವಹನೆಗೆ, ಬಾಂಧವ್ಯ ವೃದ್ಧಿಗೆ ಸಹಕಾರಿಯಾಗುವ ಈ ಕೈಪಿಡಿ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು. 

ಇನ್ನೊಂದು ಹೊಸ ಮೇಲ್ಪಂಕ್ತಿ:

     ಬೆಂಗಳೂರಿನ ಶ್ರೀ ಶ್ರೀಕಂಠ ಮತ್ತು ಕುಟುಂಬದವರು ಹಾಜರಿದ್ದ ಎಲ್ಲಾ ಮಹಿಳಾ ಸದಸ್ಯರುಗಳಿಗೆ ಅರಿಶಿನ-ಕುಂಕುಮ, ಬಳೆ, ರವಿಕೆಕಣಗಳನ್ನು ವಿತರಿಸಿದರು.

     ಎಂದಿನಂತೆ ಗಾಯನ, ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಉತ್ತಮವಾಗಿ ಸಮಾವೇಶ ನಡೆಸಲು ಸಹಕರಿಸಿ ಒಳ್ಳೆಯ ಊಟೋಪಚಾರದ ವ್ಯವಸ್ಥೆ ಮಾಡಿದ್ದ ಆಯೋಜಕರಿಗೆ ಅಭಿವಂದನೆ ಸಲ್ಲಿಸಿ, ಒಳ್ಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ತೆರಳುವುದರೊಂದಿಗೆ ಸಾರ್ಥಕ ಸಮಾವೇಶ ಸಂಪನ್ನಗೊಂಡಿತ್ತು. 

     ವಿಸ್ತೃತ ಮಾಹಿತಿ ಮತ್ತು ಹೆಚ್ಚಿನ ಚಿತ್ರಗಳನ್ನು ವೀಕ್ಷಿಸಲು: keladikavimanetana.blogspot.com/2011/04/28-12-2008.html

     ಹಿಂದಿನ ಲೇಖನ 'ಕೆಳದಿಯಲ್ಲಿ ಕಳೆಗಟ್ಟಿದ ಸಮಾವೇಶ'ಕ್ಕೆ ಲಿಂಕ್:

 

******

-ಕ.ವೆಂ.ನಾಗರಾಜ್.